[ಮಾರ್ಚ್ ತಿಂಗಳ ಮಯೂರ ಮಾಸಪತ್ರಿಕೆಯಲ್ಲಿ ದೇವನೂರ ಮಹಾದೇವ ಅವರೊಂದಿಗಿನ ಒಡನಾಟದ ಅನುಭವಗಳ ಕುರಿತು ಶ್ರೀನಿವಾಸ ಶೆಟ್ಟಿ ಅವರ ಬರಹ…]
[ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಶ್ರೀನಿವಾಸ ಶೆಟ್ಟಿ ಸಾಹಿತ್ಯದ ನಿತ್ಯ ವಿದ್ಯಾರ್ಥಿ. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಪದವಿ ಪಡೆದವರು. ಕಥೆ, ಕಾದಂಬರಿ, ವೈಚಾರಿಕ ಲೇಖನಗಳ ಜೊತೆಗೆ, ಅಂಬೇಡ್ಕರ್ ಬರಹಗಳನ್ನು ಹೆಚ್ಚು ಪ್ರೀತಿಸುವವರು. ದೇವನೂರು ಮಹಾದೇವ ಅವರ ಗನ್ ಮ್ಯಾನ್ ಆಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಹುಣಸೂರು ಬಳಿಯ ವೀರನ ಹೊಸಹಳ್ಳಿ ಅವರ ಹುಟ್ಟೂರು. ವೀವೆಂಶ್ರೀ. ಎಂಬ ಕಾವ್ಯನಾಮದಲ್ಲಿ ಕವಿತೆ ಬರೆಯುತ್ತಾರೆ-ಸಂಪಾದಕ]
ಸಾಹಿತ್ಯ ಓದಿ ಆರಕ್ಷಕನಾಗೋದಿದ್ಯಲ್ಲ ಆ ಹತ್ತಲಾರದ ಅಥವಾ ಇಳಿಯಲಾರದ ಅಂತರವನ್ನ ಬಲ್ಲವರಿಗೂ, ಬದುಕಿದವರಿಗೂ ಗೊತ್ತು. ಭಾವನಾ ಪ್ರಪಂಚದಿಂದ ಬದುಕಿನ ವಾಸ್ತವಕ್ಕೆ ಬಂದಾಗ ಎಲ್ಲಿಯ ರೂಪಕಗಳು ಎಲ್ಲಿಯ ಕೂಪಗಳು, ಉಭಯ ಸಂಕಟಗಳ ನಡುವೆ ನಲುಗುವ ಮನ್ನಸ್ಸು ಸಾಹಿತ್ಯ-ಸಾಹಿತಿಗಳ ಸಹವಾಸಕ್ಕೆ ಹೆಚ್ಚು ಹತೋರೆಯುತಿತ್ತು, ಆದರೆ ಎಲ್ಲವೂ ಗೌಪ್ಯವಾಗಿಯೇ ಉಳಿದು ಗುಂಡಿ ತೋಡಿಕೊಂಡಿದ್ದವು.
ಸಾಹಿತಿಗಳಿಗೆ ಜೀವ ಬೆದರಿಕೆಯೊಡ್ದುವ, ಮನಸ್ಸನ್ನೇ ಆವರಿಸಿದ ದೇಹದ ರಕ್ತಹರಿಸುವ ಬೆಳವಣಿಗೆ ಯಾವಾಗಿನಿಂದಾದ್ದೋ ತಿಳಿಯದು. ಆದರೆ ಅವರನ್ನು ರಕ್ಷಿಸಲು ಮುಂದಾಗುವುದನ್ನು ನೋಡಿದರೆ ಈ ಸಮಾಜಕ್ಕೆ ಔಷಧಿ ಅವರ ಬಳಿ ಇದೆ ಅನ್ನುವುದು ಮಾತ್ರ ಬಲ್ಲೆ.
ಇಂಥ ಸನ್ನಿವೇಶದಲ್ಲಿ ದೇವನೂರು ಮಹಾದೇವ ಸರ್ ರವನ್ನು ರಕ್ಷಿಸುವ ದೌರ್ಭಾಗ್ಯವೊಂದು ರಕ್ಷಣೆಯ ಹೊಣೆಹೊತ್ತ ಸೌಭಾಗ್ಯದಲ್ಲಿ ನನ್ನ ಬಳಿ ಬಂತು. ನನ್ನ ಆಸೆಯನ್ನ ನನ್ನ ವೃತ್ತಿ ಪೂರೈಸಿದ್ದಕ್ಕೆ ಮೊದಲ ಬಾರಿ ಮನಃಪೂರ್ವಕ ಆನಂದಿಸಿದೆ ಅಪಾಯದ ಇಟ್ಟಿಗೆ ಮೇಲೆ.
ಶುರುವಿನಲ್ಲಿ ದೇ ಮ ಅವರನ್ನ ರಕ್ಷಣಾರಂಗಕ್ಕೆ ಒಪ್ಪಿಸಲು ಆಗಲೇ ಇಲ್ಲ, ಮೊದಲಿಗೆ ಪೊಲೀಸರೆಂದರೆ ಅವರಿಗೆ ಇಷ್ಟವೇ ಇಲ್ಲ. ಕೆಲವು ಸಲ ಸಾರ್ವಜನಿಕ ಸ್ಥಳದಲ್ಲೇ ನಮ್ಮನ್ನೇ ಅನುಮಾನಿಸುವಂತೆ ದೂರ ನಿಲ್ಲಿಸಿದ್ದೂ ಉಂಟು. ಕಾಲಕ್ರಮೇಣ ನಾನು ಸಾಹಿತ್ಯ ವಿದ್ಯಾರ್ಥಿ ಎಂದೂ ಇವ ಅಂಥ ಅನುಮಾನಸ್ಥನಲ್ಲವೆಂದೂ ಅವರ ಸಾಮಿಪ್ಯ ನನಗೆ ದೊರಕಿತು.
ಸುಮಿತ್ರಾ ಮೇಡಂ “ಸದ್ಯ ನೀವು ಕನ್ನಡ ಎಂ.ಎ ಮಾಡಿ ನನ್ನ ಅರ್ಧ ಕೆಲಸ ಇಳಿಸಿದ್ದೀರಾ ಶ್ರೀನಿವಾಸ್. ಯಾವುದು ಮಹಾಪ್ರಾಣ, ಯಾವುದು ಅಲ್ಪಪ್ರಾಣ, ಯಾವುದಕ್ಕೆ ಹೊಕ್ಕಳ ಸೀಳಬೇಕು ಎಲ್ಲವನ್ನೂ ಹೇಳಿ ಹೇಳಿ ಸಾಕಾಗಿತ್ತು ಇನ್ನ ನೀವುಂಟು ಇವ್ರುಂಟು” ಅನ್ನೋ ಮೊದಲ ಜವಾಬ್ದಾರಿ ಸಿಕ್ಕಿತು. – ದೇ ಮ ಅವರಿಗೆ ಕನ್ನಡ ಕಾಗುಣಿತ ಸ್ವರ ವ್ಯಂಜನ ನೆನಪಿಸುವ ಹೊಣೆ.
“ರೀ ಒಮ್ಮೆ ನಾನು ಸಿಐಎಲ್ ಗೆ ಇಂಟರ್ ವ್ಯೂಗೆ ಹೋಗಿದ್ದೆ. ಅಲ್ಲಿ ಓವೆಲ್ಸ್ ಬಗ್ಗೆ ಕೇಳಿದ್ರು. ನಂಗ್ ಹೇಳಕ್ ಬರ್ಲಿಲ್ಲ, ಅದು ಹೊರಗೆ ಗೊತ್ತಾಗಿ ಪಿ.ಲಂಕೇಶ್ ಹತ್ರ ಯಾರೋ ‘ಮಾದೇವಂಗೆ ಓವೆಲ್ಸ್ ಬರಲ್ವಂತೆ’ ಅಂತ ಹೇಳಿದ್ರಂತೆ. ಅದಕ್ಕೆ ಅವ್ರು ‘ಹೂ ನಿಮ್ಗ್ ಅದೊಂದೇ ಬರೋದು’ ಅಂತ ಅಂದ್ರಂತೆ,”
“ನಾನ್ ಕಲ್ತಿದ್ದೆಲ್ಲ ಹೊರಗೆ ಕಣ್ರೀ. ಕ್ಯಾಂಟೀನ್ ಲಿ ಚಳವಳಿ ಹೋರಾಟ ಅಂತ ಕ್ಲಾಸ್ಗೆ ಹೋಗ್ತಿರ್ಲಿಲ್ಲ. ಆದ್ರೆ ಒಳ್ಳೇ ಮೇಸ್ಟ್ರುಗಳು ಸಿಕ್ಕಿದ್ರು. ನಾನ್ ಕ್ಲಾಸ್ಗೆ ಹೋದ್ರೆ ನನ್ನನ್ನೇ ಪ್ರೊಫೆಸರ್ ಅಂದ್ಕಂಡು ಪಾಠ ಮಾಡೋರು. ಪರೀಕ್ಷೆ ಸಮಯದಲ್ಲಿ ಎಲ್.ಬಸವರಾಜು ಸರ್ ಹೆಲ್ಪ್ ಮಾಡಿದ್ರು. ಎಲ್ಲಿ ಫೇಲ್ ಆಗಿಬಿಟ್ಟಾನು ಅಂತ ಪರೀಕ್ಷೆಗೆ ಏನೇನ್ ಬರುತ್ತೆ ಅನ್ನೋದನ್ನ ನೇರವಾಗಿ ಹೇಳ್ದೆನೆ- ‘ಶೂನ್ಯ ಸಂಪಾದನೆ, ಇದ್ರಲ್ಲಿ ಏನಿದೆ ಮಾದೇವ ನಿನಗ್ ಗೊತ್ತಿಲ್ದೆ ಇರೋದು ಈ ಭಾಗದ ಸಾರಾಂಶ ಮತ್ತೆ ಈ ಚಾಪ್ಟರ್ ಲಿ ಸ್ವಲ್ಪ ನೋಡ್ಕೊಂಡ್ರೆ ಆಯ್ತು’ -ಹಿಂಗ್ ಹೇಳ್ಕೊಡ್ತಾ ಇದ್ರು. ಅದನ್ನ ನನ್ನಲ್ಲೇ ಇಟ್ಕೊತಾ ಇರ್ಲಿಲ್ಲ ಎಲ್ರುಗೂ ಅದನ್ನ ಹೇಳುವೆ.” ಅವರ ಕಾಲೇಜ್ ದಿನಗಳನ್ನ ಹೀಗೆ ಹೇಳ್ತಾ ಇರ್ತಾರೆ. ಯಾರಿಗ್ ಇಷ್ಟ ಇಲ್ಲ ಹೇಳಿ ಕಾಲೇಜು ದಿನಗಳ ನೆನಪನ್ನ ಮೆಲುಕಾಕೋಕೆ, ಮಹಾರಾಜ ಕಾಲೇಜಿನ ಬೇವಿನಮರದ ಕೆಳಗೆ ಪಂಚಮ ಪತ್ರಿಕೆ ಬಿಡುಗಡೆಗೊಂಡದ್ದನ್ನ ಸಾಕ್ಷಿಸಮೇತ ಹೇಳ್ತಾರೆ. “ನನಗೂ ನನ್ನ ಹೈಸ್ಕೂಲ್ ಗುರುಗಳು ಅಂದ್ರೆ ಪೂಜ್ಯ ಭಾವ ಸರ್. ಎಸ್ ಎಸ್ ಎಲ್ ಸಿ ಮುಗ್ದು, ಹದಿನೈದು ವರ್ಷ ಆದ್ರೂ ನನ್ ಬಗ್ಗೆ ತುಂಬಾ ವಿಚಾರಿಸಿಕೊಳ್ತಾರೆ” ಅಂತ ನಾನ್ ಹೇಳಿದ್ರೆ “ನೀವು ಇನ್ನೂ ಚಿಕ್ ಮಕ್ಳ ರೀತಿ ಆಡ್ತೀರಲ್ರಿ ಅದ್ಕೆ, ಹೆಂಗಪ್ಪಾ ಏನೋ ಅಂತ…”
ಕೆಲವು ವಿಚಾರಕ್ಕೆ ನಾನು ಕೋಪಿಸಿಕೊಳ್ಳುವೆ. ನಂಗ್ ಸ್ವಲ್ಪ ಮುಂಗೋಪ ಸ್ವಲ್ಪ ಏನು ಜಾಸ್ತಿನೆ. ಬೇಗ ರಿಯಾಕ್ಟ್ ಮಾಡ್ತಿದ್ದೆ ಇದನ್ನ ಅವಾಗವಾಗ ಗಮನಿಸಿದ್ದ ದೇ ಮ “ಏನೋ ಯಾರೋ ತಪ್ಪು ಮಾಡಿದಾಗ ಅವರನ್ನ ಬೆರ್ಪಡಿಸಿ ನೀವು ಅಟ್ಯಾಕ್ ಮಾಡೋಕಿಂತ, ಅದು ನನ್ನದೊಂದು ಭಾಗ ಅಂದ್ಕಬುಟ್ರೆ ಅದ್ನ ಅರ್ಥ ಮಾಡ್ಕೊಂಡು ತಿದ್ದೋಕೆ ನೋಡ್ತಿವಿ, ಅಲ್ವಾ?” ನಾನು ಹೂ ಅನ್ನುವೆ ಏನಾದ್ರು ಕೋಪ ಬಂದಾಗ ಕೋಪ ಬರ್ಸಿದೋರ ಬೇರೆನೆ ಮಾಡಿ, ಮತ್ತೆ ರೇಗುವೆ. ಆದ್ರೂ ಅವರ ಮಾತು ಕೆಲವು ಸಲ ಕಾಡಿ ಈಗ ಸುಮ್ಮನಾಗುವೆ.
ಸಾಹಿತ್ಯದ ಬಗ್ಗೆ ಯಾವಾಗಲೂ ಕನೆಕ್ಟ್ ಮಾಡಿ ಮಾತಾಡ್ತಾರೆ. ಕೆಲವು ದೊಡ್ಡ ಪದಗಳ ಬಳಕೆ ಮಾಡಿದ್ರೆ- “ರೀ ನೀವು ಪದಗಳಲ್ಲೇ ತೇಲ್ತಿರಿ. ಪದಾರ್ಥ ಬಿಟ್ಬಿಡ್ತೀರಾ. ಈ ಸ್ಪಿರಿಟ್ ಇದೆಯಲ್ಲಾ ಹಾss, ಸಾರಾಯ್ ಮಾಡಕೆ ಕಾಯಿಸ್ತಾರಲ್ಲ, ಅಲ್ಲಿ ಕಚಡಾ ಎಲ್ಲಾ ಬಿದ್ದಿರುತ್ತೆ… ಎಕ್ಕಡದ ಚೂರು ಆಕ್ತಾರ್ರಿ, ಏನ್ ಬೆಚ್ತಾ ಇದ್ದೀರಲ್ಲ,? ಕಾಯ್ಸಿದ್ದನ್ನ ಭಟ್ಟಿ ಇಳ್ಸಿ ಆವಿಯಾಗಿ ಒಂದ್ ಒಂದ್ ಹನಿಯಾಗಿ ಬೀಳುತ್ತಲ್ಲಾ ಅದು ಸ್ಪಿರಿಟ್. ಇದನ್ನ ಅರಿವು ಬರಿಸ್ಕೊಳೋದೆ ಮೊದಲನೇ ಸ್ಟೆಪ್, ಆಮೇಲೆ ಹುಡುಕಾಟ”- ಹೀಗೆ ಒಂದೊಂದು ದಿನ ನನಗೆ ರಾಷ್ಟ್ರಿಯ ಮಟ್ಟದ ವಿಚಾರಸಂಕಿರಣ ದಲ್ಲಿದ್ದೆನೇನೋ ಅನ್ನಿಸುವಷ್ಟು ವಿಚಾರಗಳು ಹರಿದುಬರುತ್ತವೆ, ಈಗಲೂ.
ಒಂದ್ ಬೆಳಿಗ್ಗೆ ಮಲ್ಲೇಪುರಂ ವೆಂಕಟೇಶ್ ಸರ್, ದೇಮ ಅವರ ಕುಶಲೋಪರಿ ವಿಚಾರಿಸೋಕೆ ಬಂದಿದ್ರು. ಪ್ರತಿಯೊಬ್ಬರಿಗೂ ಪರಿಚಯಿಸುವಂತೆ ಇವರಿಗೂ ನನ್ನ ಪರಿಚಯ ಮಾಡಿದ್ರು. ಮಾತುಕತೆ ಎಲ್ಲಾ ಮುಗ್ದು ಹೊರಗೆ ಬಂದವರೇ “ಅವಧೂತನೊಂದಿಗೆ ಮುಂಜಾವು” ಎಂದು ಆ ಮುಂಜಾವಿಗೆ ಹೆಸರಿಟ್ಟು ಮಲ್ಲೇಪುರಂ ಹೊರಟು, ‘ಏನ್ ಸರ್ ಏನೋ ದರ್ಶನ ಕೊಟ್ಟಿದ್ದೀರಾ… ಆ ಅವತಾರನ ನಂಗೂ ದರ್ಶನ ಮಾಡ್ಸಿ ಸರ್ ಅಂದೆ’ “ರೀ ಅವ್ರು ಅಂದ್ರು ಅಂತ ನಾವ್ ಅಂದ್ಕಳಕ್ ಆಗುತ್ತಾ ಯಾರ್ಯಾರ ಭಾವಕ್ಕೆ, ಸ್ಪಂದನೆಗೆ ಸಿಕ್ಕಂತೆ ನಾವು ಅಂದ್ಕಬುಟ್ರೆ, ನಾವು ಅದೇ ರೀತಿ ಪ್ರಾಜೆಕ್ಟ್ ಮಾಡಿಕೊಳ್ಳೋಕೆ ನೋಡಿದ್ರೆ ದಿಕ್ ತಪ್ಸುತ್ತೆ… ಇಷ್ಟ್ ವರ್ಷ ನಾನು ಲೇಖಕ ಅಂತ ಬರ್ದಿದ್ರೆ ಉಳಿತಿತ್ತೇನ್ರೀ, ನಾನೇನೋ ಸಪರೇಟ್ ಅನ್ನೋತರ, ನಾನೇನೋ ಜೀನಿಯಸ್ ಅನ್ನೋತರ ಆದ್ರೆ ಅದು ಪಾಪ.”
ಮನ್ಸಲ್ಲೇ ಏನಪಾ ಇದು ಅಂತ ನಂಗೂ ಅನ್ನಿಸ್ತು.
ಇವ್ರನ್ನ ಇಂಟರ್ವ್ಯೂ ಮಾಡ್ತಾರಲ್ಲ, ಹಾಗೇ ನಾನು ಏನಾದ್ರು ಒಂದ್ ಕೇಳ್ಬೇಕಲ್ಲ… ಇವ್ನು ಪರವಾಗಿಲ್ಲ ತಿಳ್ಕಂಡವ್ನೆ ಅಂತ ಅನ್ನಿಸ್ಕೊಬೇಕು ಅನ್ನೋ ಹಪಾಹಪಿಯಲ್ಲಿ ಬುದ್ಧಿ ಬಳ್ಸಿ ಒಂದ್ ಪ್ರಶ್ನೆ ಕೇಳ್ದೆ “ಸರ್ ಗಾಂಧಿಯನ್ನೇ ಗಾಂಧಿಯ ತತ್ವಗಳ ಮೂಲಕ ಎದುರಾದರೆ ಅವರಲ್ಲಿ ಯಾವ ರಿಯಾಕ್ಷನ್ ಇರುತ್ತೆ ಸರ್” ಅಂದೆ. “ಗಾಂಧಿ ಒಟ್ಟಿಗೆ ಬಾಳಿ, ಕ್ಲೋಸ್ ಇರ್ತಾರಲ್ಲಾ ಅವ್ರನ್ನ ಕೇಳ್ಬೇಕು, ಇಲ್ಲ ಗಾಂಧಿನೇ ಕೇಳ್ಬೇಕು ಈ ಪ್ರಶ್ನೆ. ನಿಮ್ಗೆ ಗಾಂಧಿ, ತತ್ವ ಅಂತ ಪದಗಳಲ್ಲೇ ಡಿಕ್ಕಿ ಹೊಡಿತಿದ್ದೀರಲ್ಲಾ ಗಾಂಧಿ ತತ್ವ ಅಂದ್ರೆ ಏನೋ ಅಂದ್ಕಂಬುಟ್ಟಿದ್ದೀರಾ… ಗಾಂಧಿ ನಡೆ ಮೂಲಕ, ಸ್ಪಂದನದ ಮುಖಾಂತರ ಬಿಹೇವಿಯರ್ ಮುಖಾಂತರ ಅದೆಲ್ಲವನ್ನೂ ಕ್ರೋಢೀಕರಿಸಿ ನೀತಿಗಳನ್ನ ಹೇಳೋದು… ಅಷ್ಟೇ ನಂಗೂ ಗೊತ್ತಿರೋದು ಅಂದ್ರು. ಏನೂ ಗೊತ್ತಿಲ್ಲ ಅನ್ನೋ ರೀತಿ.
“ಸರ್ ತೇಜಸ್ವಿ ಅವ್ರುದು ಪ್ರಜಾವಾಣಿಲಿ ಇವತ್ ಒಂದ್ ಕೋಟೇಷನ್ ಬಂದಿತ್ತು ‘ನಮ್ಮ ಮಾತುಗಳಿಗೆ ಬೆಲೆ ಬರ್ಬೇಕು ಅಂದ್ರೆ, ನಮ್ ನಡವಳಿಕೆಯೂ ಹಾಗೇ ಇರಬೇಕು” ಆ ಬೇಸ್ ಮೇಲೆ ಕೇಳ್ದೆ ಸರ್” ಅಂದೆ. ನನ್ನನ್ನ ಶತದಡ್ಡ ಅಂತನೋ ಇಲ್ಲ ಅತೀ ಬುದ್ದಿವಂತ ಅಂತನೋ ಸ್ವಲ್ಪ ಹೊತ್ತು ಹಂಗೇ ಇದ್ದು, “ಈಗ ಮಾರ್ಕ್ಸ್ ವಾದ, ಅವ್ರು ಆ ರೀತಿ ಬದ್ಕುದ್ರೋ ಇಲ್ವೋ ಗೊತ್ತಿಲ್ಲ. ಆದ್ರೆ ಆ ವಾದ ಜಗತ್ತು ಆಳ್ತಲ್ರಿ, ಯಾವುದು ಬೇಕು ಬೇಡ ಅನ್ನೋದು ಸ್ವಭಾವ, ಆದರೆ ಎಲ್ಲರದ್ದೂ ಒಂದೊಂದ್ ರೀತಿ ಕಾಂಟ್ರಿಬ್ಯುಷನ್ ಇರುತ್ತೆ ಅಲ್ವಾ?” ಕೆಲವು ಸಿದ್ಧಾಂತಗಳ ತಳವನ್ನು ದೇಮ ದರ್ಶಿಸುವುದು ಹೀಗೆ.
ಈಗ್ಲೂ ಸಾಹಿತ್ಯವಲ್ಲದೇ ಧರ್ಮ, ರಾಜಕೀಯ, ಕೃಷಿಯ ಸೂಕ್ಷ್ಮ ವಿಚಾರಗಳ ಬಗೆಗೆ ಹೇಳ್ಕೊಡ್ತಾರೆ. “ನಿಮ್ ಧರ್ಮ ಯಾವ್ದು ಅಂತ ಒಂದ್ಸಲ ‘ಸುಧಾ’ದಲ್ಲಿ ಕೇಳಿದ್ರು. ಅದ್ಕೆ ನಾನೇನ್ ಹೇಳಿರ್ಬೋದು ರೀ” ಎಂದು ನನ್ನನ್ನ ಕೇಳಿದ್ರು. ನಾನ್ ಸುಮ್ನಿದ್ದದ ನೋಡಿ ಅವ್ರೆ ಹೇಳಿದ್ರು- “ಬೌದ್ಧ ಮತ್ತೆ ಲಿಂಗಾಯತ ಮದುವೆಯಾಗಿ ಹುಟ್ಟಿದ ಶಿಶು ಧರ್ಮವೇ ನನ್ ಧರ್ಮ ಅಂದಿದ್ದೆ, ಎರಡು ಮದ್ವೆ ಆದವೇ, ಮಗು ಹುಟ್ಟಿತೇ ಅನ್ನೋ ಪ್ರಶ್ನೆನೂ ಬರುತ್ತೆ ಆದರೆ ಸ್ಪಿರಿಟ್ ತಗೊಂಡ್ರೆ ಎರಡರಲ್ಲೂ ಸಾಮ್ಯ ಮತ್ತು ಶೂನ್ಯವಿದೆ. ಇಲ್ಲಿ ಜಾನಪದ ಅಂಶವಿದೆ. ಸಾಮಾನ್ಯನೂ ಲಿಂಗ ಹಿಡಿಯಬಹುದು. ಬೌದ್ಧರಲ್ಲಿ ಆಲೋಚನೆ, ಧ್ಯಾನ ಇದೆ. ಜಾನಪದ ಆಲೋಚನೆ ಒಟ್ಟುಗೂಡಬೇಕು” ನಮ್ಮ ಭವಿಷ್ಯ ಧರ್ಮದ ರೂಪರೇಷೆಗಳ ನೀಲನಕ್ಷೆಯ ಬಗ್ಗೆ ಹೇಳುವುದು ನೋಡಿ ಬೆರಗಾಗುತ್ತೇನೆ.
ಅವರು ಯೂಟ್ಯೂಬ್ ಫೇಸ್ಬುಕ್ನಲ್ಲಿ ಒಳ್ಳೆಯ ಸಂಗೀತವನ್ನ, ಕೆಲವು ವಿಚಾರಗಳನ್ನು, ಧಾರಾವಾಹಿ ಸಮೇತ ನೋಡ್ತಾರೆ. ಅದರಲ್ಲಿ “ಓಶೋ” ಅವರ ಒಂದು ವಿಡಿಯೋ ಅದೆಷ್ಟು ಸಲ ನೋಡಿದ್ದಾರೆ ಹಾಗೂ ಅದೆಷ್ಟು ಜನಕ್ಕೆ ಹಂಚಿದ್ದಾರೆ ಅಂದ್ರೆ ಅಷ್ಟಿಷ್ಟಲ್ಲ. ಒಂದ್ಸಲ ಆ ವಿಡಿಯೋ ಲೈನ್ ಟು ಲೈನ್ ಸುಮಿತ್ರಾ ಮೇಡಂ ಜೊತೆ ವಿವರಿಸ್ತಾ ಹೇಳಿದ್ರು ಆ ವಿಡಿಯೋ ಟೈಟಲ್ ಹೀಗಿದೆ- OSHO learn to Uncode the language of Silence. ಆ ಸಾಲುಗಳ ಅದ್ಬುತವನ್ನ ವಿವರಿಸಿ, ಸಾಹಿತ್ಯವೂ ಹೀಗೆ ತಲೆಯೊಳಗೆ ಓಡೋದನ್ನೇ ತೆಗೆಯುತ್ತೇವೆ. ಆದರೆ ಒಬ್ಬ ಕ್ರಿಯೇಟಿವ್ ಆದವನು ಸೈಲೆನ್ಸ್ ಒಳಗಿಂದ ತೆಗೆಯಲು ಪ್ರಯತ್ನ ಪಡ್ತಾನೆ. ಇದನ್ನೇ ಕೋಡ್ ಆಫ್ ಲ್ಯಾಂಗ್ವೇಜ್ ಅಂತೇವೆ ಗೊತ್ತಾಯ್ತಾ. ಮನೋಚೇಷ್ಟೆ ಬಿಡಬೇಕು ನಾನು-ನೀವು.” ಈ ಮಾತಿಗೆ “ನೋಡಿದ್ರ ಸಾಹಿತ್ಯಿಕವಾಗಿ ನಿಮಗೋಸ್ಕರ ಹೇಳಿದ್ರು” ಅಂತ ಸುಮಿತ್ರ ಮೇಡಂ ಹೇಳಿದ್ರೆ, “ಸುಮಿತ್ರು ಈಗ್ಲೂ ಅವ್ರು ಅರ್ಥ ಆಗಿದೆ ಅಂತ ಸುಮ್ನಿದ್ದಾರೆ ಹ್ಹ ಹ್ಹ ಹಾ ಹಾ!” ಹೀಗೆ ಛೇಡಿಸೋದು ನಂಗೇನು ಹೊಸದಾಗಿ ಉಳಿದಿಲ್ಲ.
ಜಾನಪದ ಮಟ್ಟು ತಾಳ ರಾಗಬದ್ಧವಾದ ಹಾಡುಗಾರಿಕೆ ಅಂದ್ರೆ ಅವರಿಗೆ ತುಂಬಾ ಇಷ್ಟ, ಈಗಲೂ ಮನೆ ಮುಂದೆ ಬರೋ ಗುಡ್ಡರು, ನೀಲಗಾರರು ಹಾಡು ಹೇಳಿಯೇ ಮುಂದಕ್ಕೆ ಹೋಗಬೇಕು ಒಳಗೆ ನಮ್ ಮಾಯ್ಕರ ಕೂತ್ಕಂಡು ತಲೆ ಆಡುಸ್ತಾ ಮನಸ್ಸಲ್ಲೇ ಕುಣಿತಾರೆ,
ಒಮ್ಮೆ ಅರ್ಜುನ ಜೋಗಿ ಹಾಡ್ ಕೇಳ್ತಾ ನನ್ನಾ ಹತ್ರಕ್ಕೆ ಕರದ್ರು. “ಮುಸ್ಲಿಂರ ಸತ್ಕಾರಕ್ಕೆ ಮನಸೋತು ಎಷ್ಟೇ ಬಡವರಾದ್ರು ಅನ್ನ ತುಪ್ಪ ಉಣ್ಣಿ ಅಂತ ಆಶೀರ್ವಾದ ಮಾಡ್ತಾನಂತೆ ಅರ್ಜುನ’ ಅಂದ್ರು. ನಾನಿದ್ದವ್ನು “ಸರ್ ಮಹಾಭಾರತದ ಕಾಲದಲ್ಲಿ ಮುಸ್ಲಿಂರು ಇದ್ರಾ ಸರ್” ಅಂದೆ. “ಅರ್ಜುನ ಜೋಗಿ ಹಾಡು ಯಾವ್ದೋ ಕಾಲದಲ್ಲಿ ಕೆತ್ತಿರೋದು. ಹಾಗೆ ನೋಡೋಕ್ ಹೋದ್ರೆ, ಭಗವದ್ಗೀತೆ ಮಹಾಭಾರತದಲ್ಲಿ ಬರೋ ಒಂದು ಸಾಲು ಯುದ್ಧ ಮಾಡೋಕೆ ಬೇಜಾರಾಗಿ ನಿಂತಿದ್ದಾಗ ಅವನನ್ನ ಕನ್ವಿನ್ಸ್ ಮಾಡ್ದ ಅನ್ನೋ ಭಾಗಾನ ಶಂಕರಾಚಾರ್ಯ ಚಾತುರ್ವರ್ಣ ಸಿಸ್ಟಮ್ ಹಾಕಿ, ಅದುವರೆಗೂ ಇತ್ತಲ್ಲ ಬೇರೆ ಬೇರೆ ಸಿಸ್ಟಮ್ – ಬುದ್ಧ ಜೈನ ಶಾಕ್ಯ ಥಿಂಕಿಂಗ್ ಪ್ಯಾಟರ್ನ ಎಲ್ಲ ಬಳಸ್ಕೊಂಡು ಭಗವದ್ಗೀತೆ ಬರದು ಮಹಾಭಾರತಕ್ಕೆ ಸೇರಿಸ್ಬಿಟ್ರು. ಇದು ಜನಪದ ಅರ್ಜುನ ಜೋಗಿ ಹಾಡು, ಇವತ್ ಯಾರ್ ಯಾರ್ ಇರ್ತಾರೋ ಎಲ್ರೂ ಇರ್ತಾರೆ.” ಒಮ್ಮೆಗೆ ಚಳಿ ಜ್ವರ ಬಂದವನಂಗೆ ‘ಸರಿ ಸರ್’ ಅಂತೇಳಿ ಎಷ್ಟೋ ಮುಚ್ಚಿಟ್ಟ ಕಟು ಸತ್ಯಗಳ ಬಿಸಿಗೆ ಬೆವತೋದೆ.
ಸದ್ಯಕ್ಕೆ ರಾಮುಕಾಕಾ ಬರೆದ ಮಹಾಭಾರತದೊಳಗೆ ದೇಮ ಅವರು ಸ್ವಲ್ಪ ಕರ್ತವ್ಯನಿರತರು. ಅವರೇ ಹೇಳುವಂತೆ ‘ಕುಸುಮಬಾಲೆ’ಗೆ ಹಾಕಿದ ಶ್ರಮದಷ್ಟೇ ಈ ಕೃತಿಗೂ ಸಮಯ ಕೊಟ್ಟಿದ್ದಾರೆ. ಬೆಳಿಗ್ಗೆ ಎಂದರೆ ಬೆಳಿಗ್ಗೆ, ತಡರಾತ್ರಿ ಎಂದರೆ ತಡರಾತ್ರಿಯವರೆಗೂ ಯಾವುದೋ ಪರೀಕ್ಷೆಗೆ ಸಿದ್ಧವಾಗುವ ವಿದ್ಯಾರ್ಥಿಯ ಹಾಗೆ ಶ್ರಮ ಪಡುತ್ತಿದ್ದಾರೆ.
ದೇಮ ಅವರು ನನ್ನ ಭಾವಕ್ಕೆ ಹುಡುಕಿದಷ್ಟು ಸಂಪೂರ್ಣ ಹಿಡಿದಿಡಲು ಸಿಗುವುದಿಲ್ಲ. ಆದರೆ ಸಿಕ್ಕಷ್ಟು ಪ್ರಮಾಣದಲ್ಲಿ ಒಟ್ಟಾರೆಯಾಗಿರುತ್ತಾರೆ- “ನಿಮ್ಮನ್ನು ಸಂತ ಎನ್ನುತ್ತಾರಲ್ಲ” ಎನ್ನುವ ಪ್ರಶ್ನೆಗೆ “ದಿನಕ್ಕೆ ಅರ್ಧಗಂಟೆ” ಎನ್ನುವಂತೆ.