ಹೌದು ಇದು ಸಾಹಸ, ಚಾರಿತ್ರಿಕ – ದೇವನೂರ ಮಹಾದೇವ
( 6.12.2022ರಂದು ಬೆಂಗಳೂರಿನಲ್ಲಿ ನಡೆದ ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ ಕುರಿತು 5.12.2022ರ ಪ್ರಜಾವಾಣಿಯಲ್ಲಿ ದೇಮ ಹೇಳಿಕೆ….)
ದಸಂಸ ಮೈತಳೆದು ಅರ್ಧ ಶತಮಾನ ಆಗುತ್ತ ಬಂತು. ಈ ಕಾಲಾವಧಿಯಲ್ಲಿ ಅದು ಸಮಾಜದ ಕಲ್ಲುಮುಳ್ಳಿನ ಹಾದಿಯಲ್ಲಿ ನಡೆದಿದೆ. ವಿಜೃಂಭಿಸಿದೆ. ನೊಂದಿದೆ. ಬೆಂದಿದೆ. ಕೊನೆಗೆ ಚೂರು-ಚೂರಾಗಿ ಒಂಟೊಂಟಿಯಾಗಿ ನಗಣ್ಯವಾಗಿ ಬಿಟ್ಟಿತು.
ದಸಂಸ ಹುಟ್ಟಿದ ಗಳಿಗೆಯಿಂದಲೂ ಒಂದಿಷ್ಟು ಕಂಡುಂಡಿದ್ದೇನೆ. ದಸಂಸ ಆಗ, ಹುಟ್ಟಿದ ಕೂಸೊಂದು ತಾಯಿ ಹಾಲಿಗೆ ಅಳುವಂತೆ ಎಲ್ಲರದೂ ಒಕ್ಕೊರಲ ದನಿಯಾಗಿತ್ತು. ಅದು ಹಾಡಾಯ್ತು. ಘೋಷಣೆಗಳಾದವು. ಗೋಡೆ ಬರಹಗಳಾದವು. ಹೋರಾಟಗಳಾದವು. ಆ ಹೋರಾಟಗಳಿಂದಾಗಿ ಸರ್ಕಾರಗಳು ಜನಪರ ಕಾಯ್ದೆಗಳನ್ನು ಜಾರಿಗೆ ತಂದವು ಕೂಡ.
ಹೌದು. ಹೀಗಿತ್ತು. ನೆನಪಿರಲಿ, ಆ ಕಾಲದಲ್ಲಿ ತನ್ನೆಲ್ಲಾ ಮಿತಿಗಳೊಡನೆ ಸಮಾಜದಲ್ಲಿ ವಂಚಿತರಿಗೆ ಸ್ವಲ್ಪವಾದರೂ ದಕ್ಕಬೇಕು ಎಂಬ ಮನಃಸ್ಥಿತಿ ಸ್ವಲ್ಪವಾದರೂ ಇತ್ತು. ಈ ಕಾಲದಲ್ಲಿ ಇದು ಉಲ್ಟಾ ಹೊಡೆದಿದೆ. ಹೆಚ್ಚು ದಕ್ಕಿದವರಿಗೆ ಇನ್ನೂ ಹೆಚ್ಚು ದಕ್ಕಬೇಕು ಎಂಬ ದುಃಸ್ವಪ್ನ ಆಳ್ವಿಕೆ ನಡೆಸುತ್ತಿದೆ. ಇಲ್ಲದಿದ್ದರೆ EWS ಮೀಸಲಾತಿ ಹೇಗೆ ಬಂತು? ಈ ಕಾಯ್ದೆಯನ್ನು ಸರ್ವೋಚ್ಚ ನ್ಯಾಯಾಲಯ ಬಹುಮತದಿಂದ ಎತ್ತಿ ಹಿಡಿದಿದೆಯಲ್ಲಾ? ನಾವು ಅಳಬೇಕೋ ನಗಬೇಕೋ? ತಳಸಮುದಾಯಗಳ ಮಕ್ಕಳ ಸ್ಕಾಲರ್ಶಿಪ್ಗಳಿಗೂ ಕನ್ನ ಹಾಕುತ್ತಿದೆ ಈ ಸರ್ಕಾರ. ಒಟ್ಟಿನಲ್ಲಿ ಆಳ್ವಿಕೆ ನಡೆಸಲು ಅರ್ಹತೆ ಇಲ್ಲದವರು ಆಳ್ವಿಕೆ ನಡೆಸುತ್ತಿದ್ದಾರೆ. ಭಾರತ ಮಾತೆ ಅಳುತ್ತಿದ್ದಾಳೋ ನಗುತ್ತಿದ್ದಾಳೊ? ಕಡುಕಷ್ಟ. ಆಳ್ವಿಕೆ ನಡೆಸುತ್ತಿರುವವರು ವಾಸ್ತವಕ್ಕೆ ಮುಖಾಮುಖಿಯಾಗದೆ ತಮ್ಮ ಅಪರಾಧಗಳನ್ನು ಮಸುಕು ಮಾಡಲು ದೇವರು ದೇವಸ್ಥಾನಗಳ ಮೊರೆ ಹೋಗುತ್ತಿದ್ದಾರೆ. ಮಾಡಬಾರದನ್ನೆಲ್ಲಾ ಮಾಡಿ ಶಂಖ ಊದುತ್ತಿದ್ದಾರೆ. ಇಂದು ಮನುಷ್ಯರು ಆಳ್ವಿಕೆ ಮಾಡುತ್ತಿದ್ದಾರೊ ಅಥವಾ ಸುಳ್ಳು ಭ್ರಮೆ ವಂಚನೆಗಳೇ ಮನುಷ್ಯ ರೂಪ ತಳೆದು ಆಳ್ವಿಕೆ ನಡೆಸುತ್ತಿವೆಯೋ ಗೊತ್ತಾಗುತ್ತಿಲ್ಲ!
ಇಂಥಹ ಕಡುಕಷ್ಟದ ಕಾಲದಲ್ಲಿ ತಾನೇ ಕಡುಕಷ್ಟದಲ್ಲಿರುವ ದಸಂಸ- ಮತ್ತೆ ಒಗ್ಗಟ್ಟಿಗೆ ಪ್ರಯತ್ನಿಸುತ್ತಿದೆ. ಇದು ಖಂಡಿತ ಚಾರಿತ್ರಿಕ. ಈ ಗೆಳೆಯರ ಎದೆಗಾರಿಕೆಗೆ ಅಭಿನಂದಿಸುವೆ. ಕೃತಜ್ಞತೆ ಸಲ್ಲಿಸುವೆ. ಮುಂದಿನ ಯಶಸ್ಸು -ಸಂಘಟನೆಯ ಹಳೆಬೇರುಗಳು ಭೂಮಿ ಒಳಗೆ ಇದ್ದು ಆಲಿಸುತ್ತಾ ಹೊಸ ಚಿಗರು ಭೂಮಿ ಮೇಲೆ ನಳನಳಿಸುತ್ತಾ ಫಸಲು ನೀಡುವ ವಾತಾವರಣ ಸೃಷ್ಟಿಸುವುದರಲ್ಲಿದೆ. ಸ್ವಾಯತ್ತ ಕಲಾ ಮಾಧ್ಯಮ, ಮಹಿಳಾ ಸಂಘಟನೆ, ವಿದ್ಯಾರ್ಥಿ – ಯುವ ಸಂಘಟನೆಗಳಿಗೆ ತಾನು ವೇಗವರ್ಧಕವಾಗಿ ಮಾತ್ರವಾಗುವ ವಿವೇಕದಲ್ಲಿದೆ. ಇದನ್ನು ಆಶಿಸುವೆ. ನಂಬುವೆ.