ಹೋರಾಟಕ್ಕೊಂದು ಸ್ಫೂರ್ತಿ ಗೌರಿ ಲಂಕೇಶ್ -ಬಸು ಮೇಗಲಕೇರಿ
ಅಭದ್ರತೆಯಲ್ಲಿರುವ ಅಲ್ಪಸಂಖ್ಯಾತರ ಪರವಾಗಿ ಹೋರಾಟ ಮಾಡುತ್ತಿದ್ದ; ಧರ್ಮದ ಹೆಸರಲ್ಲಿ ದಾಂಧಲೆ ಎಬ್ಬಿಸುತ್ತಿರುವ ಕೋಮುವಾದಿಗಳ ವಿರುದ್ಧ ಪತ್ರಿಕೆಯ ಮೂಲಕ ಬಹಿರಂಗವಾಗಿ ಸಮರ ಸಾರಿದ್ದ, ಗೌರಿ ಲಂಕೇಶ್‍ರನ್ನು ಹತ್ಯೆ ಮಾಡಲಾಗಿದೆ. ಈ ಹತ್ಯೆ ವೈಯಕ್ತಿಕವೇ, ವೈಷಮ್ಯದಿಂದಾಗಿದ್ದೇ ಅಥವಾ ಸೈದ್ಧಾಂತಿಕ ಸಂಘರ್ಷಕ್ಕೆ ಒಳಪಟ್ಟಿದ್ದೇ ಎನ್ನುವುದು ತನಿಖೆಯಿಂದ ಹೊರಬರಬೇಕಾಗಿದೆ. ಸದ್ಯದ ಸ್ಥಿತಿ ಮತ್ತು ಈ ಹಿಂದಿನ ಈ ರೀತಿಯ ಕೊಲೆಗಳ ತನಿಖೆ ತುಳಿದ ಹಾದಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸತ್ಯ ಹೊರಬರಬೇಕೆಂಬುದು ಬರಿ ಆಶಯವಾಗಿ ಉಳಿಯಬಹುದೇನೋ ಎಂಬ ಅನುಮಾನ ಕಾಡುತ್ತಿದೆ.
ಗೌರಿ, ಲಂಕೇಶರ ಹಿರಿಯ ಮಗಳು. 55ರ ಹರೆಯ. ಲಂಕೇಶರಂತೆಯೇ ಉದ್ದ ಮೂಗು, ತೀಕ್ಷ್ಣ ಕಣ್ಣು, ಭಿನ್ನ ಆಲೋಚನೆ. ಮೊದಲ ನೋಟಕ್ಕೇ ರೆಬೆಲ್ ಎನ್ನುವುದನ್ನು ದಾಖಲಿಸುತ್ತಿದ್ದರು. ಬಾಬ್ ಕಟ್‍ನ ಮಾಡರ್ನ್ ಲುಕ್, ನೇರ ಮಾತು, ನಡವಳಿಕೆ, ನೋಟ ಎಲ್ಲವೂ ವಿಭಿನ್ನವಾಗಿದ್ದವು. ಅವರದೇ ಲೋಕದಲ್ಲಿ ಸ್ವತಂತ್ರ ಹಕ್ಕಿಯಂತೆ ವಿಹರಿಸುತ್ತಿದ್ದರು. ಚಡಪಡಿಕೆ, ಧಾವಂತವೇ ಅವರ ದಿನನಿತ್ಯದ ಬದುಕಿನ ಭಾಗವಾಗಿತ್ತು. ಅವರ ಜೀವನಶೈಲಿ, ಹವ್ಯಾಸ ನನ್ನಂತಹ ಹಳ್ಳಿಗಾಡಿನಿಂದ ಬಂದವರಿಗೆ ಬೆಚ್ಚಿ ಬೀಳಿಸುತ್ತಿದ್ದವು.
ಗೌರಿ, ಆ ಕಾಲಕ್ಕೇ ಎಂ.ಜೆ.ಅಕ್ಬರ್ ಸಂಪಾದಿಸುತ್ತಿದ್ದ `ಸಂಡೇ’ ಇಂಗ್ಲಿಷ್ ವಾರಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ `ಸಂಡೇ’ ಪ್ರತಿಷ್ಠಿತ ಮತ್ತು ಪ್ರಭಾವಿ ಪತ್ರಿಕೆಯಾಗಿತ್ತು. ಆ ಪತ್ರಿಕೆಯ ವರದಿಗಾರ್ತಿಯಾದ ಗೌರಿಯವರಿಗೆ ಅದು ಪ್ರತಿಷ್ಠೆಯ ವಿಚಾರವಾಗಿತ್ತು. `ಸಂಡೇ’ ಪತ್ರಿಕೆಯ ನಂತರ `ಈ ಟಿವಿ’ ಸೇರಿ, ಮುಂಬೈ-ಹೈದರಾಬಾದ್-ಕೋಲ್ಕತ್ತಾ-ದೆಹಲಿಯಂತಹ ನಗರಗಳಲ್ಲಿ ಓಡಾಡುತ್ತಾ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ಪತ್ರಕರ್ತರೊಂದಿಗೆ ಸಂಪರ್ಕ ಸಾಧಿಸಿದ್ದರು. ರಾಜಕಾರಣಿಗಳ, ಉನ್ನತ ಅಧಿಕಾರಿಗಳ, ಗಣ್ಯರ ಪ್ರಭಾವಲಯದಲ್ಲಿ ಗುರುತಿಸಿಕೊಂಡಿದ್ದರು.
ನಾನು, ಲಂಕೇಶರ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ 90ರ ದಶಕದಲ್ಲಿ, ಗೌರಿಯವರು ಅಪರೂಪಕ್ಕೆ ಅಪ್ಪನ ಪತ್ರಿಕೆಯ ಕಚೇರಿಗೆ ಬರುತ್ತಿದ್ದರು. ಎಲ್ಲರೊಂದಿಗೂ ಆತ್ಮೀಯವಾಗಿ ಒಡನಾಡುತ್ತಿದ್ದರು. ಪತ್ರಿಕೆಯ ವರದಿಗಾರರೊಂದಿಗೆ ಸ್ನೇಹ ಸಲುಗೆಯಿಂದಿದ್ದು, `ಎಲ್ಲೋ ಜರ್ನಲಿಸ್ಟ್ಸ್’ ಎಂದು ನಗುನಗುತ್ತಲೇ ನಮ್ಮನ್ನು ಛೇಡಿಸುತ್ತಿದ್ದರು. ಕುತೂಹಲಕರ ವಿಷಯವೆಂದರೆ, ಯಾರೂ ಇಲ್ಲದಾಗ ಪತ್ರಿಕೆಯಲ್ಲಿ ಬರುತ್ತಿದ್ದ ಸುದ್ದಿ ಮತ್ತು ಚಿತ್ರವನ್ನು ನನ್ನಿಂದ ಕೇಳಿ ಪಡೆಯುತ್ತಿದ್ದರು. ಅಪ್ಪನ ಸಾಹಸಗಳ ಬಗ್ಗೆ ಹೆಮ್ಮೆ ಇತ್ತು, ಅವರ ಸಿನೆಮಾ-ಸಾಹಿತ್ಯದ ಬಗ್ಗೆ ಪ್ರೀತಿ ಇತ್ತು. ಆದರೆ ಪತ್ರಿಕೆಯ ನಿಲುವು, ಧೋರಣೆ ಮತ್ತು ಧಾಟಿಯ ಬಗ್ಗೆ ವಿರೋಧವಿತ್ತು.
ಹಾಗೆಯೇ ಲಂಕೇಶರು ಕೂಡ, ಪತ್ರಿಕೆಯ ಅಂಗಳಕ್ಕೆ ತಮ್ಮ ಮನೆಯವರು ತಲೆಹಾಕದಂತೆ ಎಚ್ಚರ ವಹಿಸಿದ್ದರು, ಅದನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದ್ದರು. ಆಗೊಮ್ಮೆ ಈಗೊಮ್ಮೆ ಗೌರಿಯವರು ಪತ್ರಿಕೆಯ ಕಚೇರಿಯಲ್ಲಿ ಕಾಣಿಸಿಕೊಂಡರೆ, `ಲೇ, ಇವಳ್ಯಾಕ್ ಇಲ್ಲಿ ಬಂದ್ಲೋ..’ ಎಂದು ತಮಾಷೆಯಾಗಿ, ವ್ಯಂಗ್ಯವಾಗಿ ಮತ್ತು ಅಷ್ಟೇ ಕಟುವಾಗಿ ಕಿಚಾಯಿಸುತ್ತಿದ್ದರು. ಗೌರಿ ಕೂಡ ಅದೇ ಧಾಟಿಯಲ್ಲಿ ತಟ್ಟಂತ ಉತ್ತರಿಸಿ ಹೋಗಿಬಿಡುತ್ತಿದ್ದರು.
ಇಂತಹ ಗೌರಿ, ಲಂಕೇಶರ ಪತ್ರಿಕೆಗೆ ಸಂಪಾದಕಿಯಾಗಿ ಬರುತ್ತಾರೆಂದು ಸ್ವತಃ ಲಂಕೇಶರೂ ಯೋಚಿಸಿರಲಿಲ್ಲ. ಕಾಲದ ಮಹಿಮೆ. ಲಂಕೇಶರ ನಿಧನಾನಂತರ, ಪ್ರೊ.ರಾಮದಾಸ್‍ರ ತೀರ್ಮಾನದಂತೆ, ನಮ್ಮೆಲ್ಲರ ಒಮ್ಮತದ ಅಭಿಪ್ರಾಯದಂತೆ ಗೌರಿಯವರು ಪತ್ರಿಕೆಯ ಸಂಪಾದಕಿಯಾದರು. ಅಪ್ಪನನ್ನು ಅತಿಯಾಗಿ ಪ್ರೀತಿಸುತ್ತಿದ್ದ ಮತ್ತು ಅಷ್ಟೇ ಉಗ್ರವಾಗಿ ವಿರೋಧಿಸುತ್ತಿದ್ದ ಗೌರಿ, ಅಪ್ಪನಿಲ್ಲದ ಪತ್ರಿಕೆಯ ಕಚೇರಿಯಲ್ಲಿ ಕೂತು, ಕಣ್ಣೀರಿನಲ್ಲಿಯೇ ಇಂಗ್ಲಿಷ್ಗನ್ನಡದ ಸಂಪಾದಕೀಯ ಬರೆದಿದ್ದರು. ನಾವೆಲ್ಲರೂ ಸೇರಿ ಲಂಕೇಶರಿಲ್ಲದ ಮೊದಲ ಸಂಚಿಕೆಯನ್ನು ರೂಪಿಸಿ ಹೊರತಂದಾಗ, ಓದುಗ ವಲಯದಿಂದ ವ್ಯಕ್ತವಾದ ಪ್ರೀತಿಗೆ, ಬೆಂಬಲಕ್ಕೆ ಬೆರಗಾಗಿಹೋದೆವು. ಪತ್ರಿಕೆಯನ್ನು ಸಮರ್ಥವಾಗಿ ಮುನ್ನಡೆಸಬಹುದು ಎಂಬ ಆತ್ಮವಿಶ್ವಾಸ ನಮ್ಮೆಲ್ಲರಲ್ಲಿ ಗಟ್ಟಿಗೊಳ್ಳತೊಡಗಿತು.
ಆದರೆ ಕನ್ನಡಕ್ಕೆ ವಲಸಿಗರಾದ, ಈ ನೆಲದ ಸಮಸ್ಯೆಗಳಿಗೆ ಇಂಗ್ಲಿಷ್ ಮೂಲಕ ಯೋಚಿಸುತ್ತಿದ್ದ ಗೌರಿಯವರು ಸಂಪಾದಿಸುತ್ತಿದ್ದ ಪತ್ರಿಕೆಯಲ್ಲಿ ಲಂಕೇಶರು ಇಪ್ಪತ್ತು ವರ್ಷಗಳ ಕಾಲ ಕಾಪಿಟ್ಟುಕೊಂಡು ಬಂದಿದ್ದ ಆತ್ಮವೇ ಮಾಯವಾಗಿತ್ತು. ಪತ್ರಿಕೆಯ ನಿಲುವು-ಧೋರಣೆ ಬದಲಾಗಿತ್ತು. ಇಂಗ್ಲಿಷಿನ `ಬ್ಲಿಟ್ಸ್’ ಮಾದರಿಯ ಎರಾಟಿಕ್ ಎದ್ದು ಕಾಣತೊಡಗಿತ್ತು. ನಮಗದು ಅರಗಿಸಿಕೊಳ್ಳಲಾಗದೆ, `ಇದಲ್ಲ ಪತ್ರಿಕೆ’ ಎನ್ನುವುದನ್ನೂ ಹೇಳಲಾಗದೆ ತೊಳಲಾಡುತ್ತಿದ್ದರೆ; ಬದಲಾವಣೆ ಜಗದ ನಿಯಮ ಎನ್ನುವುದು ಅವರ ವಾದವಾಗಿತ್ತು. ಈ ತಾತ್ವಿಕ ಸಂಘರ್ಷ ವಾರದಿಂದ ವಾರಕ್ಕೆ ಬಲಗೊಳ್ಳುತ್ತಾಹೋಯಿತು.
ಮುಂದುವರೆದು, ಕೇವಲ ಒಂಭತ್ತು ತಿಂಗಳ ಅಂತರದಲ್ಲಿ ನಟರಾಜ್ ಹುಳಿಯಾರ್, ಎನ್.ಎಸ್.ಶಂಕರ್, ದ್ವಾರಕಾನಾಥ್, ಟಿ.ಕೆ.ತ್ಯಾಗರಾಜ್, ಕಲಾವಿದ ಹಾದಿಮನಿ, ಮೋಹನ ನಾಗಮ್ಮನವರ್, ಸ್ವಾಮಿ ಆನಂದ್, ನಾನು, ಈ.ಚಂದ್ರ ತಾಳಿಕಟ್ಟೆ- ಅವರಾಗಿಯೇ ಪತ್ರಿಕೆ ಬಿಟ್ಟುಹೋಗುವಂತಹ ವಾತಾವರಣ ಸೃಷ್ಟಿಸಲಾಯಿತು. ಕೊನೆಗುಳಿದವರು, ರವೀಂದ್ರ ರೇಷ್ಮೆ, ಗಂಗಾಧರ ಕುಷ್ಟಗಿ ಮತ್ತು ಹೊರಗಿನಿಂದ ಬರೆಯುತ್ತಿದ್ದ ಮಹದೇವ ಪ್ರಕಾಶ್. ಕಾಕತಾಳೀಯವೋ ಏನೋ, ಇವರೆಲ್ಲ ಲಿಂಗಾಯತರೇ ಆಗಿದ್ದರು. ಕಾಲಾನಂತರ ಅಕ್ಕ-ತಮ್ಮನ ನಡುವೆ ಭಿನ್ನಾಭಿಪ್ರಾಯವುಂಟಾಗಿ, ಪತ್ರಿಕೆ ಎರಡಾಗಿ, ರವೀಂದ್ರ ರೇಷ್ಮೆಯವರೂ ಬಿಟ್ಟರು.
ಪತ್ರಿಕೆಯನ್ನು ಬಿಟ್ಟಾಗ- ನಾವು ಆಸೆಪಟ್ಟಿದ್ದು ಲಂಕೇಶರೊಂದಿಗೆ ಕೆಲಸ ಮಾಡಲು, ಅವರ ಪತ್ರಿಕೆಯೊಂದಿಗೆ ಗುರುತಿಸಿಕೊಳ್ಳಲು. ಅವರಿಲ್ಲದ ಮೇಲೆ ನಾವು ಅಲ್ಲಿರುವುದು ಸೂಕ್ತವಲ್ಲ ಎಂಬ ನಿರ್ಧಾರಕ್ಕೆ ಬಂದೆವು. ಹೊರಬಂದ ಮೇಲೆ ಗೌರಿಯ ಬಗೆಗಿನ ನಮ್ಮ ಅಸಮಾಧಾನವನ್ನು ನುಂಗಿಕೊಂಡು ಸುಮ್ಮನಾಗಬೇಕೆಂದು ತೀರ್ಮಾನಿಸಿದೆವು. ಈ ಹದಿನಾರು ವರ್ಷಗಳಲ್ಲಿ ನಾವೆಲ್ಲರೂ ಅದನ್ನು ಪಾಲಿಸಿಕೊಂಡು ಬಂದೆವು. ಆಶ್ಚರ್ಯವೆಂದರೆ, ಪತ್ರಿಕೆಯಲ್ಲಿದ್ದಾಗ ಗೌರಿಯವರು ನಮ್ಮೊಂದಿಗೆ ಯಾವ ರೀತಿ ಆತ್ಮೀಯತೆಯಿಂದ ಇದ್ದರೋ, ಇವತ್ತಿನವರೆಗೂ ಅದು ಹಾಗೆಯೇ ಇತ್ತು. ನಾವು ಎಲ್ಲೇ ಎದುರಾದರೂ, ನಮ್ಮ-ಅವರ ನಡುವೆ ಏನೂ ನಡೆದೇ ಇಲ್ಲ, ಆಗಿದ್ದೆಲ್ಲ ಆ ಕಾಲಕ್ಕೆ ಎನ್ನುವಂತೆ ಅದೇ ಆಪ್ತತೆಯಿಂದ ವರ್ತಿಸುತ್ತಿದ್ದರು.
ಕನ್ನಡ ಪತ್ರಿಕೆಯ ಸಂಪಾದಕರ ಮಗಳು ಗೌರಿ ಇಂಗ್ಲಿಷ್ ಪತ್ರಕರ್ತೆಯಾಗಿ, ಇಂಗ್ಲಿಷ್‍ನಿಂದ ಕನ್ನಡಕ್ಕೆ ಮತ್ತೆ ಬಂದಾಗ- ಕಡಲಿನಿಂದ ಕೆರೆಗೆ ಕಾಲಿಟ್ಟಂತಾಗಿತ್ತು. ನೋಟ, ನಿಲುವು, ಬದ್ಧತೆಗಳ ಗೊಂದಲಕ್ಕೆ ಬಿದ್ದರು. ಅಪ್ಪ ಕಟ್ಟಿದ ಕೋಟೆಯಲ್ಲಿದ್ದುಕೊಂಡೇ, ಅವರ ದಟ್ಟವಾದ ನೆರಳಿನಿಂದ ಹೊರಬರಬೇಕೆಂದು ಬಯಸಿದರು. ತನ್ನತನವನ್ನು ಛಾಪಿಸಬೇಕೆಂದು ಶಕ್ತಿಮೀರಿ ಶ್ರಮಿಸಿದರು. ಆದರೆ ಲಂಕೇಶರನ್ನು ಬಿಟ್ಟರೆ ಅವರಿಗೆ ಅಸ್ತಿತ್ವವೇ ಇರಲಿಲ್ಲ. ಲಂಕೇಶ್ ಎನ್ನುವುದು ಗೌರಿ ಪಾಲಿಗೆ ವರವಾಗಿ, ಶಾಪವಾಗಿ ಪರಿಣಮಿಸಿತು.
80ರ ದಶಕ ಕರ್ನಾಟಕ ಲಂಕೇಶರಂತಹ ಹೊರಳುನೋಟದ ವ್ಯಕ್ತಿಗಳಿಗಾಗಿ ಕಾತರಿಸುತ್ತಿತ್ತು. ಹದವಾಗಿದ್ದ ನೆಲದಲ್ಲಿ ಪತ್ರಿಕೆ ಎಂಬ ಬೆಳೆ ಹುಲುಸಾಗಿ ಬೆಳೆಯಿತು. ಎರಡು ದಶಕಗಳ ಕಾಲ ಕರ್ನಾಟಕ ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಸಮೃದ್ಧತೆಯನ್ನು ಕಂಡಿತು. ಅಲ್ಲಿಗೆ ಲಂಕೇಶರ ಜವಾಬ್ದಾರಿಯೂ ಮುಗಿದಿತ್ತು. ಟ್ಯಾಬ್ಲ್ಯಾಡ್ ಪತ್ರಿಕೆಗಳ ಕಾಲವೂ ಕೊನೆಗೊಂಡಿತ್ತು. ಲಂಕೇಶರ ನಿರ್ಗಮನದ ನಂತರ ಹೊಸ ಚಾಲೆಂಜ್‍ಗಳ ಮೂಲಕ ಹೊಸ ಓದುಗ ವಲಯವನ್ನೇ ಸೃಷ್ಟಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಗೌರಿಯವರಿಗೆ ಎದುರಾಗಿತ್ತು. ಆ ಸಂದರ್ಭದಲ್ಲಿ ದೇಶ ಬಲಪಂಥೀಯ ಉಗ್ರ ಹಿಂದೂತ್ವದೆಡೆಗೆ ಜಾರತೊಡಗಿತ್ತು. ನ್ಯಾಯಾಂಗ, ಪತ್ರಿಕೋದ್ಯಮದಲ್ಲೂ ಅವರದೇ ಕೈ ಬಾಯಿ ಜೋರಾಗಿತ್ತು.
ಕಾಲವೇ ಗೌರಿಯವರನ್ನು ಸೃಷ್ಟಿಸಿತೋ ಏನೋ, 2002-03ರ ಚಿಕ್ಕಮಗಳೂರಿನ ದತ್ತಪೀಠ ವಿವಾದದ ಸ್ವರೂಪ ಪಡೆಯಿತು. ಅಲ್ಲಿಂದ ಗೌರಿಯವರು ಸಾಮಾಜಿಕವಾಗಿ ತೆರೆದುಕೊಳ್ಳತೊಡಗಿದರು. ಕೋಮು ಸೌಹಾರ್ದ ವೇದಿಕೆ ಹುಟ್ಟುಹಾಕಿ, ಜನರೊಂದಿಗೆ ಬೆರೆತು ಬದುಕನ್ನು ಬೆರಗಿನಿಂದ ನೋಡತೊಡಗಿದರು. ಅಷ್ಟರಲ್ಲಿ ಅಪ್ಪನ ಅಷ್ಟೂ ಬರೆಹಗಳನ್ನು ಓದಿ ಅರಗಿಸಿಕೊಂಡಿದ್ದರು. ಅವೇ ಅವರಿಗೆ ದಾರಿದೀಪವಾಗಿದ್ದವು.
ನಕ್ಸಲರ ಕ್ರಾತಿಯಿಂದ ಬದಲಾವಣೆ ಸಾಧ್ಯವಿಲ್ಲ ಎನ್ನುವುದು ಲಂಕೇಶರ ವಾದವಾಗಿತ್ತು. ಹಾಗೆಯೇ ನಮ್ಮ ಹೋರಾಟ ಬರೆಹದ ಮೂಲಕ, ಹೋರಾಟದ ಮೂಲಕ ಮತ್ತು ಉತ್ತಮ ಅಭ್ಯರ್ಥಿಗಳನ್ನು ಜನಪ್ರತಿನಿಧಿಗಳನ್ನಾಗಿ ಆರಿಸಿಕೊಳ್ಳುವ ಮೂಲಕ- ಪ್ರಜಾಸತ್ತಾತ್ಮಕ ರೀತಿಯಲ್ಲಿರಬೇಕೆಂದು ಲಂಕೇಶರ ನಿಲುವಾಗಿತ್ತು. ಆದರೆ ನಕ್ಸಲರ ಬಗ್ಗೆ ಗೌರಿಯವರ ನಿಲುವು ಮಾನವ ಹಕ್ಕುಗಳ ಹೋರಾಟವಾಗಿತ್ತು. 2005 ರಲ್ಲಿ ಸಾಕೇತ್ ರಾಜನ್‍ರನ್ನು ಕಾಡಿನಲ್ಲಿ ಭೇಟಿಯಾದ ನಂತರ ಅವರ ನಿಲುವು ಬದಲಾಯಿತು. ಅದರಲ್ಲೂ ಸಾಕೇತ್‍ರ ಸಾವು ಅವರನ್ನು ಕಂಗೆಡಿಸಿತು. ಕಂದಮ್ಮನನ್ನು ಕಳೆದುಕೊಂಡ ಅಮ್ಮನಂತೆ ಅತ್ತು ಗೋಳಾಡುವಂತೆ ಮಾಡಿತ್ತು.
ಆ ನಂತರವೇ ಅವರಲ್ಲಿ ಭಾರೀ ಬದಲಾವಣೆಗಳು ಕಾಣತೊಡಗಿದವು. ದಲಿತರು, ಹಿಂದುಳಿದವರು, ಮಹಿಳೆಯರಿಗೆ ಮೊದಲ ಆದ್ಯತೆ ನೀಡಿದರು. ಅವರ ದನಿಗೆ ಪತ್ರಿಕೆ ವೇದಿಕೆಯಾಗುವಂತೆ ನೋಡಿಕೊಂಡರು. ಜೊತೆ ಜೊತೆಗೆ ಕೋಮು ಸೌಹಾರ್ದತೆಗೆ, ಜಾತ್ಯತೀತ ನಿಲುವಿಗೆ ಬದ್ಧರಾಗಿ, ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳತೊಡಗಿದರು. ನಾಡು ತೊರೆದು ಕಾಡು ಸೇರಿದ್ದ ನಕ್ಸಲರನ್ನು ಮತ್ತೆ ನಾಡಿಗೆ ಕರೆತರುವ ಮೂಲಕ ಹೊಸ ಬದುಕಿಗೆ, ಪ್ರಜಾಸತ್ತಾತ್ಮಕ ಹೋರಾಟಕ್ಕೆ ಮತ್ತೆ ಚಾಲನೆ ಕೊಟ್ಟರು.
ಹೋರಾಟ, ಪ್ರತಿಭಟನೆ, ರ್ಯಾಲಿ, ಚಳವಳಿಗಳಿಗಾಗಿ ಇಡೀ ಕರ್ನಾಟಕವನ್ನು ಗಾಳಿಯಂತೆ ಸುತ್ತಾಡಿದರು. ಅನ್ಯಾಯದ ವಿರುದ್ಧ ಸಿಡಿದೆದ್ದು ಧೈರ್ಯದಿಂದ ಪ್ರಶ್ನಿಸುವ ಮೂಲಕ ಹೊಸ ತಲೆಮಾರಿನ ಯುವಕ-ಯುವತಿಯರಲ್ಲಿ ಭರವಸೆ ಹುಟ್ಟಿಸಿದರು. ಹೋರಾಟದ ಬದುಕಿಗೆ ತಮ್ಮನ್ನು ತಾವು ಅರ್ಪಿಸಿಕೊಂಡರು. ಪ್ರತಿರೋಧದ ದನಿಯಾಗಿ ಹೊರಹೊಮ್ಮತೊಡಗಿದರು. ಇದೆಲ್ಲಕ್ಕಿಂತಲೂ ಮುಖ್ಯವಾಗಿ, ಮೋದಿ ಮತ್ತು ಸಂಘಪರಿವಾರದ ವಿರುದ್ಧ ಬಹಿರಂಗ ಸಮರ ಸಾರಿದರು. ಕೊಂಚ ಅತಿ ಅನ್ನಿಸುವಷ್ಟು ಕಾಂಗ್ರೆಸ್ ಪರವಾಗಿದ್ದು ಬಲಪಂಥೀಯರ ಕಟು ಟೀಕೆಗೂ ಒಳಗಾದರು. ಉಗ್ರ ಹಿಂದೂತ್ವವಾದಿಗಳ ಕೆಂಗಣ್ಣಿಗೆ ಗುರಿಯಾದರು.
ಹಾಗೆ ನೋಡಿದರೆ, ಗೌರಿಗೆ ಗಂಡ, ಮನೆ, ಮಕ್ಕಳೆಂಬ ವೈಯಕ್ತಿಕ ಬದುಕೇ ಇರಲಿಲ್ಲ. ಅಲ್ಲಿನ ಶೂನ್ಯವನ್ನು ಗೌರಿ ಇಲ್ಲಿ, ಸಾಮಾಜಿಕವಾಗಿ ತೊಡಗಿಸಿಕೊಳ್ಳುವ ಮೂಲಕ ತುಂಬಿಕೊಳ್ಳತೊಡಗಿದ್ದರು. ಹೋರಾಟದಲ್ಲಿ ಭಾಗಿಯಾಗುತ್ತಿದ್ದ ಯುವಕ-ಯುವತಿಯರನ್ನೇ ತಮ್ಮ ಮಕ್ಕಳೆಂದು ಭಾವಿಸಿದ್ದರು. ಜನರೊಂದಿಗೆ ಬೆರೆತು ಮಾಗಿದ ಮಹಿಳೆಯಾಗಿದ್ದರು. ಸ್ತ್ರೀವಾದಿ ಹೋರಾಟಕ್ಕೆ ಸ್ಫೂರ್ತಿಯ ಚಿಲುಮೆಯಾಗಿದ್ದರು. ಆದರೆ ಒಂಟಿ ಮನೆಯಲ್ಲಿ ಏಕಾಂಗಿಯಾಗಿದ್ದು, ತಮ್ಮ ಭದ್ರತೆ ಮತ್ತು ಬದುಕಿನ ಬಗ್ಗೆ ಉದಾಸೀನ ತಳೆದರು. ಭಂಡಧೈರ್ಯವನ್ನು ಬೆನ್ನಿಗಿಟ್ಟುಕೊಂಡರು. ಕೊಲೆಗಡುಕರ ಗುಂಡಿಗೆ ಬಲಿಯಾದರು.