ಹೊಸ ಹಳ್ಳಿಯನ್ನು ಕಟ್ಟುವ ಕನಸು-ಪ್ರಸನ್ನ
ಹೊಸ ಹಳ್ಳಿಯನ್ನು ಕಟ್ಟುವ ಕನಸು
ನಗರ-ಗ್ರಾಮ, ನಗರಾಭಿವೃದ್ಧಿ-ಗ್ರಾಮಾಭಿವೃದ್ಧಿ, ಯಂತ್ರನಾಗರಿಕತೆ-ಗ್ರಾಮಸಂಸ್ಕೃತಿ ಪರಸ್ಪರ ವಿರೋಧದ ನೆಲೆಗಳಾಗಿವೆ. ನಗರ ಗೆಲ್ಲುತ್ತಿದೆ, ಗ್ರಾಮ ಸೋಲುತ್ತಿದೆ. ಎರಡನ್ನೂ ಪೂರಕವಾಗಿ ನಿಭಾಯಿಸುತ್ತೇನೆಂದು ಹೊರಟ ರಾಜಕೀಯ ಪ್ರಯತ್ನಗಳು ವಿಫಲವಾಗಿವೆ. ಗ್ರಾಮ, ಗ್ರಾಮಾಭಿವೃದ್ಧಿ, ಗ್ರಾಮಸಂಸ್ಕೃತಿ ನಾಮಾವಶೇಷವಾಗತೊಡಗಿವೆ. ಗ್ರಾಮಗಳ ಸೋಲು ಕೇವಲ ಗ್ರಾಮಗಳ ಸೋಲಲ್ಲ, ಅದು ಸಮಗ್ರ ಮಾನವೀಯತೆಯ ಸೋಲಾಗಿದೆ.
ಮಹಾತ್ಮ ಗಾಂಧಿ ಅವರಿಗೆ ಹೀಗಾಗಬಹುದೆಂಬ ಅರಿವಿತ್ತು. ಹಾಗೆಂದೇ, ನಗರ ಆರ್ಥಿಕತೆಯನ್ನು ಹಿಂದೊತ್ತಿ ಗ್ರಾಮಸ್ವರಾಜ್ಯ ಕಾರ್ಯಕ್ರಮವನ್ನು ಮುಂದೊತ್ತಬೇಕೆಂದು ಅವರು ಬಯಸಿದ್ದರು. ಆದರೆ ಅವರ ಶಿಷ್ಯರು ಹೆದರಿದರು. ಆಗ ಇಡೀ ವಿಶ್ವವೇ ಯಂತ್ರನಾಗರಿಕತೆಯತ್ತ ಧಾವಿಸುತ್ತಿತ್ತು. ಅತ್ತ ಸಾಮ್ರಾಜ್ಯವಾದಿ ದೇಶಗಳು ಇತ್ತ ಸಮತಾವಾದಿ ರಷ್ಯಾ ಎರಡೂ ಯಂತ್ರಸ್ಥಾವರಗಳ ನಿರ್ಮಾಣದಲ್ಲಿ ಪೈಪೋಟಿ ನಡೆಸಿದ್ದವು. ಹಾಗಾಗಿ ಕಾಂಗ್ರೆಸ್ ಪಕ್ಷವು ನಗರಾಭಿವೃದ್ಧಿ ಹಾಗೂ ಗ್ರಾಮಾಭಿವೃದ್ಧಿ ಎರಡನ್ನೂ ಸಮಸಮನಾಗಿ ಕೊಂಡೊಯ್ಯುತ್ತೇನೆಂದು ಹೊರಟಿತು. ಸಮನಾಗಿ ಕೊಂಡೊಯ್ಯುವುದು ಕೇವಲ ಮಾತಾಯಿತು. ನಗರ ಗೆದ್ದಿತು. ಗ್ರಾಮ ಸೋತಿತು. ಮಾತ್ರವಲ್ಲ, ನಂತರದ ಬೆಳವಣಿಗೆಯಲ್ಲಿ ನಗರ ಸಂಸ್ಕೃತಿಯು ಕಾಂಗ್ರೆಸ್ ಪಕ್ಷವನ್ನೇ ನುಂಗಿ ನೀರು ಕುಡಿಯಿತು.
ಇತ್ತ ಕಾಂಗ್ರೆಸ್ ನಿಶ್ಶಕ್ತವಾದಂತೆ ಅತ್ತ ಬಲಪಂಥೀಯರು ಬಲವಾದರು. ಅವರು ಸ್ವದೇಶಿ ಉತ್ಪಾದನೆಯ ಬಗ್ಗೆ, ರಾಷ್ಟ್ರೀಯ ಪರಂಪರೆಗಳನ್ನು ಇಡಿಯಾಗಿ ಉಳಿಸುವ ಬಗ್ಗೆ ಮೇಜು ಕುಟ್ಟಿ ಮಾತನಾಡಿದರು. ಜನರು ಬಲಪಂಥೀಯರಿಗೆ ಬೆಂಬಲ ಕೊಟ್ಟರು. ಈಗ ಅವರೂ ಸೋಲುತ್ತಿದ್ದಾರೆ. ಅಥವಾ ಗ್ರಾಮಗಳನ್ನು ಸೋಲಿಸತೊಡಗಿದ್ದಾರೆ. ಬಿಜೆಪಿ, ಸಂಪೂರ್ಣವಾಗಿ ನಗರಾಭಿವೃದ್ಧಿ ಹಾಗೂ ಯಂತ್ರನಾಗರಿಕತೆಯತ್ತ ತೊನೆಯುತ್ತಿದೆ. ಅವರ ರಾಷ್ಟ್ರೀಯತೆ ಕಲ್ಪಿತವಾದದ್ದಾಗಿದೆ, ಪರಂಪರೆ ಪೌರಾಣಿಕ ಪರಿಕಲ್ಪನೆ ಮಾತ್ರವೇ ಆಗಿದೆ. ಸ್ವದೇಶಿ ಎಂಬುದು ದೇಶೀಯ ಬಂಡವಾಳಶಾಹಿಗಳಿಗೆ ನೀಡುವ ಬೆಂಬಲ ಮಾತ್ರವೇ ಆಗಿದೆ. ಇದು ಈಗ ಜನರಿಗೆ ಅರಿವಾಗತೊಡಗಿದೆ.
ವಾಸ್ತವಿಕ ನೆಲೆಯಲ್ಲಿ ದೇಸೀಯತೆಯನ್ನು ಜಾರಿಗೊಳಿಸುವುದು, ಅರ್ಥಾತ್ ಶ್ರಮಸಂಸ್ಕೃತಿಯನ್ನು ಎತ್ತಿಹಿಡಿಯುವುದು ಅವರ ಉದ್ದೇಶವಾಗಲೇ ಇಲ್ಲ. ಇತ್ತ, ಶ್ರಮ ಸಂಸ್ಕೃತಿಯಲ್ಲಿ ನಂಬಿಕೆಯಿದ್ದೂ, ಭಾರತೀಯ ಎಡಪಂಥೀಯರದ್ದು ಸಂದಿಗ್ಧಮಯ ನಿಲುವಾಗಿದೆ. ಯಂತ್ರಗಳನ್ನು ಬಿಡಲೂ ಆಗದೆ ಹಿಡಿಯಲೂ ಬಾರದೆ, ಹ್ಯಾಮ್ಲೆಟ್ ರೀತಿ ‘ಇರಲೆ ಇಲ್ಲದಿರಲೆ’ ಎಂದು ಜಿಜ್ಞಾಸೆ ಮಾಡುತ್ತ ಕ್ಷೀಣಿಸುತ್ತಿವೆ ಎಡಪಂಥೀಯ ಪಕ್ಷಗಳು. ಜನರೂ ಇಂತಹದ್ದೇ ತೊಳಲಾಟದಲ್ಲಿ ಒದ್ದಾಡುತ್ತಿದ್ದಾರೆ.
ಹೀಗೆ ಕಾಂಗ್ರೆಸ್, ಬಿಜೆಪಿ, ಎಡಪಕ್ಷಗಳು, ವಿವಿಧ ಮಾದರಿಯ ಸ್ಥಳೀಯ ಪಕ್ಷಗಳು, ಎಲ್ಲವೂ ತಮ್ಮ ಭಿನ್ನತೆಯ ನಡುವೆಯೇ ಸಮಾನತೆಯನ್ನು ಪ್ರದರ್ಶಿಸಿವೆ. ಇಷ್ಟವಿದ್ದೋ ಇಲ್ಲದೆಯೋ ಯಂತ್ರನಾಗರಿಕತೆಯನ್ನು ಬೆಂಬಲಿಸಿವೆ. ಈಗ ಯಂತ್ರನಾಗರಿಕತೆಯೇ ಬಿಕ್ಕಟ್ಟಿನಲ್ಲಿ ಸಿಲುಕಿದೆ. 2008ರಿಂದ ತೀವ್ರತರವಾದ ಆರ್ಥಿಕ ಬಿಕ್ಕಟ್ಟು ಅದನ್ನು ಬಾಧಿಸಿದೆ. ಜೊತೆಜೊತೆಗೆ, ಪರಿಸರದ ಬಿಕ್ಕಟ್ಟು, ರಾಜಕೀಯ, ಸಾಮಾಜಿಕ ಹಾಗೂ ನೈತಿಕ ಬಿಕ್ಕಟ್ಟು, ಯಂತ್ರನಾಗರಿಕತೆಯನ್ನು ಕಾಡಿದೆ. ಪ್ರಮುಖ ಶಕ್ತಿಮೂಲವಾದ ತೈಲವು ಬರಿದಾಗತೊಡಗಿದಂತೆ ಬಿಕ್ಕಟ್ಟೇ ವಾಸ್ತವವಾಗುವ ಹಾಗೂ ಸ್ಥಾಯಿಯಾಗುವ ಎಲ್ಲ ಸೂಚನೆಗಳೂ ಕಾಣತೊಡಗಿವೆ.
ಬಿಕ್ಕಟ್ಟುಗಳನ್ನು ನಿರ್ವಹಿಸಲಿಕ್ಕೆ ಯಂತ್ರನಾಗರಿಕತೆಗೆ ಗೊತ್ತಿರುವ ಪರಿಹಾರಮಾರ್ಗ ಒಂದೇ, ಉತ್ಪಾದನೆ ಹೆಚ್ಚಿಸುವುದು. ಈಗಲೂ ಅದು ಇದನ್ನೇ ಮಾಡುತ್ತಿದೆ. ತಿಣುಕಿ ತಿಣುಕಿ ಉತ್ಪಾದನೆ ಹೆಚ್ಚಿಸುತ್ತಿದೆ. ಆದರೆ ಹೆಚ್ಚು ಉತ್ಪಾದನೆಯೇ ರೋಗವಾಗಿರುವಾಗ ಹೆಚ್ಚು ಉತ್ಪಾದಿಸುವುದೆಂದರೇನೇ ದುರಂತ. ಮುಂಬರುವ ದಿನಗಳಲ್ಲಿನ ಬಿಕ್ಕಟ್ಟು ಇದು.
ಬಿಕ್ಕಟ್ಟಿಗೆ ಉತ್ತರ ಸರಳವಿದೆ. ಸಣ್ಣ ಮಗುವಿಗೂ ತಿಳಿಯುವಂತಹ ಉತ್ತರವದು. ಉತ್ಪಾದನೆ ಕಡಿಮೆ ಮಾಡಬೇಕು. ಯಂತ್ರಗಳಿಗೆ ಬಿಡುವು ನೀಡಬೇಕು. ಬೇಡಿಕೆಗಳು ಕಡಿಮೆಯಾಗುತ್ತ, ಬದುಕು ಸಹಜವಾಗುತ್ತ ಹೋಗಬೇಕು. ಮನುಷ್ಯರು ಶ್ರಮಸಹಿತ ಸರಳ ಬದುಕಿಗೆ ಹಿಂದಿರುಗಬೇಕು. ಕ್ರಮಕ್ರಮವಾಗಿ ಹಿಂದಿರುಗಬೇಕು. ಗ್ರಾಮೀಣ ಕ್ಷೇತ್ರಗಳಿಗೆ ಹಿಂದಿರುಗಬೇಕು. ಅಧಿಕ ಲಾಭದಾಯಕತೆ, ಅಧಿಕ ಸುಲಭತೆ, ಅಧಿಕ ಸಂಕೀರ್ಣತೆಯ ಆಸೆಯನ್ನು ನಿಗ್ರಹಿಸಬೇಕು. ಶ್ರೀಮಂತರು ಹಾಗೂ ಶ್ರೀಮಂತ ರಾಷ್ಟ್ರಗಳು ನಿಗ್ರಹಿಸಬೇಕು. ಅರ್ಥಾತ್ ನಿರ್ದಿಷ್ಟವಾಗಿ, ಅನುಮಾನಾತೀತವಾಗಿ, ಅಸಂದಿಗ್ಧವಾಗಿ, ಗ್ರಾಮೀಣ ಅಭಿವೃದ್ಧಿಯ ಕಡೆಗೆ ಇಡೀ ಜಗತ್ತು ಮನಸ್ಸು ನೀಡಬೇಕು.
ದುರಂತವೆಂದರೆ, ಎಷ್ಟೋ ರಾಷ್ಟ್ರಗಳಲ್ಲಿ ಗ್ರಾಮೀಣ ಕ್ಷೇತ್ರಗಳೇ ಉಳಿದಿಲ್ಲ. ಆಗಾಗ ಹಿಂದಿರುಗಲೆಂದು ನಗರನಾಗರಿಕರು ನಗರಗಳಾಚೆ ಉಳಿಸಿಕೊಂಡಿರುವ ಪಿಕ್‌ನಿಕ್ ಸ್ಪಾಟುಗಳಷ್ಟೆ ಅವು. ಅನೇಕ ದೇಶಗಳಲ್ಲಿ ಕೃಷಿಯನ್ನೂ ಮಾನವ ರಹಿತವಾಗಿಸಿ, ಯಂತ್ರಗಳ ಸುಪರ್ದಿಗೆ ಒಪ್ಪಿಸಿಯಾಗಿದೆ. ಅದೃಷ್ಟವಶಾತ್ ನಮ್ಮಲ್ಲಿನ್ನೂ ಗ್ರಾಮಗಳು ಉಳಿದಿವೆ. ಹಾಳಾಗಿವೆ, ಆದರೆ ಉಳಿದಿವೆ. ಎತ್ತಿನಬಂಡಿ, ಮರದ ನೇಗಿಲು, ಮಗ್ಗಗಳು ಸಹ ಕೆಲವೆಡೆ ಈಗಲೂ ಕಾಣಲಿಕ್ಕೆ ಸಿಗುತ್ತವೆ. ಅವುಗಳನ್ನು ಆಯ್ದು ಮುಂದೆ ಮಾಡಲಿಕ್ಕೆ ಸಮಯ ಬಂದಿದೆ ಈಗ.
ಆದರೆ ಅನುಮಾನ ನಮಗೆ; ಗ್ರಾಮೀಣ ಕ್ಷೇತ್ರಗಳು ಸೋಲುವ ಕ್ಷೇತ್ರಗಳೆಂಬ ಅನುಮಾನ. ಬ್ರಿಟಿಷ್ ವಸಾಹತುಶಾಹಿ ಆಡಳಿತವು ಬಿಟ್ಟುಹೋದ ಅನುಮಾನವಿದು. ಅವರು ವ್ಯಾಪಾರಿಗಳಾಗಿದ್ದರು. ಭಾರತ ದೇಶವು ಅವರಿಗೆ ಮಾರುಕಟ್ಟೆಯಾಗಿತ್ತು. ಉತ್ಪಾದಕ ಕ್ಷೇತ್ರವಾಗಿರಲಿಲ್ಲ. ಅವರ ಉತ್ಪಾದಕ ಕ್ಷೇತ್ರವು ಅವರ ತವರುಮನೆಯ ಕಾರ್ಖಾನೆಗಳಾಗಿದ್ದವು. ಭಾರತದ ಹಿತ್ತಲುಗಳಿಂದ ಅವರಿಗೆ ಹೆಚ್ಚೆಂದರೆ ಕಚ್ಚಾಮಾಲು ಬೇಕಿತ್ತು. ಹತ್ತಿ, ಸಾಂಬಾರ ಪದಾರ್ಥ ಇತ್ಯಾದಿಗಳು ಅಷ್ಟೆ. ಅವು ಎಷ್ಟು ಅಗ್ಗದಲ್ಲಿ ದೊರಕಬಲ್ಲುದೋ ಅಷ್ಟು ಒಳ್ಳೆಯದಿತ್ತು ಅವರಿಗೆ. ಭಾರತದ ಗ್ರಾಮೀಣ ಕ್ಷೇತ್ರವನ್ನು ಅಗ್ಗವಾಗಿಸಿದರು ಬ್ರಿಟಿಷರು. ತನ್ನ ದೇಶದ ರೈತ ಹಾಗೂ ಕುಶಲಕರ್ಮಿಯನ್ನು ನಿಗ್ರಹಿಸಿ ಬಂದಿದ್ದರು ಅವರು. ಹಾಗಿರುವಾಗ ತನ್ನದಲ್ಲದ ದೇಶದ ರೈತ ಸುಖವಾಗಿದ್ದಾನೆಯೇ, ನೇಕಾರನಿಗೆ ಕೈತುಂಬ ಕೆಲಸವಿದೆಯೇ ಎಂದೆಲ್ಲ ಏಕೆ ಚಿಂತಿಸಿಯಾರು? ಆಡಳಿತ ನಡೆಸುವಾಗ, ಸಂಬಂಧಪಟ್ಟ ಇಲಾಖೆಗಳ ರಿಪೋರ್ಟು ಬರೆಯುವಾಗ, ಅಂಕಿಅಂಶಗಳಾಗಿ ಗ್ರಾಮೀಣ ಬಡತನವು ಮೇಲೆದ್ದು ಬರುತ್ತಿತ್ತು. ಮತ್ತೆ ಮರೆಯಾಗುತ್ತಿತ್ತು. ಅಷ್ಟೆ.
ನಮಗೂ ಅಷ್ಟೆ. ನಮ್ಮದೂ ಉತ್ಪಾದಕ ಕ್ಷೇತ್ರ, ನಗರ ಕಾರ್ಖಾನೆಗಳೇ ಸರಿ. ನಮ್ಮನ್ನು ಕೂಡ ಸಲಹುತ್ತಿರುವುದು ಕಾರ್ಖಾನೆಗಳ ಮಾಲೀಕರೇ ಸರಿ. ನಮ್ಮ ಪಾರ್ಟಿಯ ಫಂಡು, ನನ್ನ ಮಗನ ಉದ್ಯೋಗ, ನನ್ನ ಜೀವನಶೈಲಿ, ಒಡನಾಟ ವ್ಯವಹಾರ ಎಲ್ಲವೂ ನಗರಗಳಲ್ಲಿ ನಡೆದಿದೆ. ಇಂಗ್ಲಿಷಿನಲ್ಲಿ ನಡೆದಿದೆ. ಎಲ್ಲ ರಾಜಕಾರಣಿಗಳು, ಬುದ್ಧಿಜೀವಿಗಳು, ಸಮಾಜ ಸೇವಕರು ನಗರಗಳಲ್ಲಿ ಬದುಕುತ್ತಿದ್ದಾರೆ. ನಮಗೂ ಗ್ರಾಮಗಳು ಮಾರುಕಟ್ಟೆಗಳೇ ಸರಿ. ಅಥವಾ ಕಚ್ಚಾಮಾಲು ಉತ್ಪಾದಿಸುವ ಹಿತ್ತಲು. ಈಗ ಬದಲಾಗಬೇಕಿದೆ ನಾವು, ಪ್ರಕೃತಿಯ ಬಲವಂತದಿಂದಾಗಿ ಬದಲಾಗಬೇಕಿದೆ.
ಗ್ರಾಮೀಣ ಅಭಿವೃದ್ಧಿಯೆಂದರೆ ಉದ್ಯಮಶೀಲತೆಯ ಅಭಿವೃದ್ಧಿ. ಗ್ರಾಮಗಳ ಸಮಗ್ರ ಹಾಗೂ ಸ್ವಾಯತ್ತ ಅಭಿವೃದ್ಧಿ. ಗ್ರಾಮದ ಆರ್ಥಿಕತೆ, ಗ್ರಾಮದ ಸಾಮಾಜಿಕತೆ ಹಾಗೂ ಗ್ರಾಮ ಸಂಸ್ಕೃತಿಗಳನ್ನು ಸ್ವಾಯತ್ತವಾಗಿ ಬಲಪಡಿಸುವುದು ಎಂದರ್ಥ. ಗ್ರಾಮಾಭಿವೃದ್ಧಿಯೆಂದರೆ ನಗರ ನಾಗರಿಕರು ಈ ಸ್ವಾಯತ್ತ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಆಗಮಾತ್ರ ಆಶಾವಾದ ಸಾಧ್ಯವಾದೀತು. ಸಂಪೂರ್ಣ ನಂಬಿಕೆಯಿಂದ ಭಾಗವಹಿಸಬೇಕು. ಯಂತ್ರ ನಾಗರಿಕತೆಯೆಂಬ ಭವ್ಯ ಬಂಗಲೆಯೂ ಇರಲಿ ಗ್ರಾಮಸಂಸ್ಕೃತಿಯೆಂಬ ಪುಟ್ಟ ಹಿತ್ತಲೂ ಅದರೊಟ್ಟಿಗಿರಲಿ ಎಂಬ ಎಡಬಿಡಂಗಿತನ ವಿನಾಶದ ಹಾದಿಯೇ ಸರಿ.
ಈವರೆಗಿನ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮವನ್ನು ತೆಗೆದುಕೊಳ್ಳಿ. ಕೆಲಸ ನಡೆದೇ ಇಲ್ಲ ಎಂದಲ್ಲ. ನಡೆದಿದೆ, ವಿಪರೀತ ಹಣ ಖರ್ಚಾಗಿದೆ. ಆದರೆ ಕೆಲಸ ಅರೆಮನಸ್ಸಿನಿಂದ ನಡೆದಿದೆ, ಪಾಪಪ್ರಜ್ಞೆಯಿಂದ ನಡೆದಿದೆ. ಮಾರಣಾಂತಿಕ ಕಾಯಿಲೆ ಅನುಭವಿಸುತ್ತಿರುವ ಹಿರಿಯ ಸಂಬಂಧಿಯೊಬ್ಬರ ಆರೈಕೆ ಮಾಡುವಾಗ ತೋರಿಸುವ ಅನುಕಂಪವನ್ನೇ ಗ್ರಾಮೀಣ ಕ್ಷೇತ್ರಕ್ಕೂ ನಾವು ಈವರೆಗೆ ತೋರಿಸಿದ್ದೇವೆ. ಹಳ್ಳಿ ನಮ್ಮ ನೆನಪುಗಳಲ್ಲಿ ಉಳಿದಿದೆ. ಹಿಂದಕ್ಕೆ ಹೋಗಲಾರದ ಕ್ಷೇತ್ರ ಅದು ಎಂದು ನಮಗನ್ನಿಸಿದೆ.
ಕಾಲಕಾಲಕ್ಕೆ ಸಾಲ ಮನ್ನಾ ಮಾಡಿದ್ದೇವೆ. ಕಾಲಕಾಲಕ್ಕೆ ಉಚಿತ ಟೀವಿ, ಉಚಿತ ಬೈಸಿಕಲ್ಲು, ಉಚಿತ ಅಕ್ಕಿ, ಉಚಿತ ವಿದ್ಯುತ್ ಹಂಚಿದ್ದೇವೆ. ಗ್ರಾಮೀಣ ಕೃಪಾಂಕ ನೀಡಿದ್ದೇವೆ, ಮೀಸಲಾತಿ ನೀಡಿದ್ದೇವೆ. ಕೊಟ್ಟಿರುವುದಕ್ಕಿಂತ ಮಿಗಿಲಾಗಿ ಕೊಟ್ಟಿದ್ದೇವೆ ಎಂದು ಗೋಳಾಡಿದ್ದೇವೆ. ನಮ್ಮನ್ನು ನಾವು ಕೊಡದೆ ಉಳಿಸಿಕೊಂಡಿದ್ದೇವೆ.
ಮತ್ತೊಂದು ಕೆಲಸ ಮಾಡಿದ್ದೇವೆ. ಹೆಚ್ಚು ಸಮರ್ಪಕವಾಗಿ ಮಾಡಿದ್ದೇವೆ. ಗ್ರಾಮೀಣ ಕ್ಷೇತ್ರಕ್ಕೆ ಸಹಾಯಧನ ನೀಡುವ ಹೆಸರಿನಲ್ಲಿ ನಗರ ಕೈಗಾರಿಕೆಗಳಿಗೆ ಧನಸಹಾಯ ನೀಡಿದ್ದೇವೆ. ಟ್ರ್ಯಾಕ್ಟರ್ ಖರೀದಿಸಲೆಂದು ರೈತನಿಗೆ ಸಹಾಯಧನ ನೀಡಿ, ಆ ಮೂಲಕ ಟ್ರ್ಯಾಕ್ಟರುಗಳ ವ್ಯಾಪಾರ ಹೆಚ್ಚಿಸಿದ್ದೇವೆ. ಎಲ್ಲವಕ್ಕೂ ಇದೇ ರೀತಿ. ರಸಗೊಬ್ಬರ, ಕ್ರಿಮಿನಾಶಕ, ಪಂಪು– ಪೈಪು ಇತ್ಯಾದಿ ವ್ಯಾಪಾರ ಹೆಚ್ಚಿಸಿದ್ದೇವೆ. ಇತ್ತೀಚೆಗೆ ಮಾನ್ಸಾಂಟೊ, ಕಾರ್ಗಿಲ್ ಮೊದಲಾದ ಅಂತರರಾಷ್ಟ್ರೀಯ ಬಂಡವಾಳಶಾಹಿಗಳಿಗೂ ಸಹ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಾರ ಹೆಚ್ಚಿಸಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿ ಯಂತ್ರಗಳನ್ನು ತಂದು ಹುಗಿಸುವುದು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ ಖಂಡಿತಾ ಅಲ್ಲ.
ವಿಶ್ವಮಾರುಕಟ್ಟೆ, ಬೃಹತ್ ರಾಜಕೀಯ ವ್ಯವಸ್ಥೆ, ಸಂಕೀರ್ಣ ಆರ್ಥಿಕ ವ್ಯವಸ್ಥೆ ಹಾಗೂ ಬೃಹತ್ ಸೈನ್ಯಗಳನ್ನು ತಿರಸ್ಕರಿಸುವ ಆತ್ಮಬಲವಿದೆಯೇ ನಮಗೆ? ಐದು ವರ್ಷಗಳ ಅವಧಿಗೆ, ಅಪಾರ ಹಣ ಖರ್ಚು ಮಾಡಿ ಆಯ್ಕೆಯಾಗಿ ಬರುವ ಅವಸರದ ಮುಖ್ಯಮಂತ್ರಿಗಳಿಗೆ, ಅದು ಸಿದ್ದರಾಮಯ್ಯನವರೇ ಇರಲಿ, ಯಡಿಯೂರಪ್ಪನವರೇ ಇರಲಿ, ಕುಮಾರಸ್ವಾಮಿಯವರಿರಲಿ, ಮೂಲಭೂತ ವ್ಯತ್ಯಾಸತರುವುದು ಸಾಧ್ಯವಿದೆಯೆ? ಅವಸರವಸರದಲ್ಲಿ ಹೊಸ ಹಳ್ಳಿಗಳನ್ನು ಕಟ್ಟುವುದು ಸಾಧ್ಯವಿದೆಯೆ?
ಗಾಂಧಿ ಅವರಿಗೆ ಮೂವತ್ತೆರಡು ವರ್ಷಗಳ (1915–1947) ಸಮಯ ಲಭಿಸಿತ್ತು. ನಂಬಿಕೆಯೂ ಇತ್ತು. ಆದರೂ ಸಮಯ ಸಾಲದೆಂಬ ಆತಂಕ ಅವರನ್ನು ಕಾಡಿತ್ತು. ಪದೇ ಪದೇ ರಾಜಕೀಯ ಚಳವಳಿಗಳನ್ನು ಕೈದು ಮಾಡಿ, ರಚನಾತ್ಮಕ ಕಾರ್ಯಕ್ರಮಗಳತ್ತ ಹೊರಳುತ್ತಿದ್ದರು ಗಾಂಧೀಜಿ. ಮತ್ತೆ ಮತ್ತೆ ಜನಗಳ ಮಧ್ಯೆ ತೆರಳಿ, ಅಲ್ಲಿಯೇ ಉಳಿದು, ದೀರ್ಘ ಕಾಲದವರೆಗೆ ಉಳಿದು, ಅವರಂತೆಯೇ ಬದುಕಿ, ಗ್ರಾಮೀಣ ನಾಯಕತ್ವವನ್ನು ರೂಪಿಸುವ ಯತ್ನ ನಡೆಸಿದ್ದರು ಅವರು. ಆದರೂ ಸ್ವಾತಂತ್ರ್ಯ ಬರುವ ವೇಳೆಗೆ ಗ್ರಾಮೀಣ ಬಡವರ ನಾಯಕತ್ವ ಸಿದ್ಧವಾಗಿರಲಿಲ್ಲ. ಹಿಂದ್ ಸ್ವರಾಜ್ಯದ ಕನಸು ಕನಸಾಗಿಯೇ ಉಳಿದಿತ್ತು. ನಾವೂ ಸಹ ಗಾಂಧಿ ಅವರಂತೆ, ಅಥವಾ ಗಾಂಧಿ ಅವರಿಗಿಂತ ಮಿಗಿಲಾದ ತಾಳ್ಮೆಯಿಂದ, ಹೊಸಹಳ್ಳಿಗಳ ನಿರ್ಮಾಣ ಮಾಡಬೇಕಿದೆ.
ಗ್ರಾಮೀಣ ಜನರ ನಾಯಕತ್ವವೆಂದರೆ ಕೆಳಜಾತಿಗಳ ಮೇಲ್ವರ್ಗಗಳ ನಾಯಕತ್ವವಲ್ಲ. ಕೆಳಜಾತಿಗಳ ಕೆಳವರ್ಗಗಳ ನಾಯಕತ್ವ. ಅಂದು, ಮೇಲ್ವರ್ಗಗಳ ಲಾಯರಿಗಳ ಪಕ್ಷವಾಗಿದ್ದ ಕಾಂಗ್ರೆಸ್ಸನ್ನು ಕೆಳಗೆಳೆಯಲು ಯತ್ನಿಸಿದ್ದರು ಗಾಂಧೀಜಿ. ಸಂಪೂರ್ಣ ಸಾಧ್ಯವಾಗಿರಲಿಲ್ಲ. ನಲವತ್ತೇಳರ ನಂತರವಂತೂ ನಿಂತೇ ಹೋಗಿತ್ತು, ಮೇಲ್ವರ್ಗಗಳನ್ನು ಕೆಳಗೆಳೆಯುವ ಪ್ರಯತ್ನ. ಬದಲಿಗೆ ಜಾತಿರಾಜಕೀಯ ಬಂದಿತ್ತು.
ಜಾತಿರಾಜಕೀಯವೆಂಬುದು ಕೆಳಗಿರುವವರನ್ನು ಕೆಳಗೇ ಉಳಿಸುವ ಅಸ್ತ್ರ. ವರ್ಗ ವ್ಯವಸ್ಥೆಗೆ ಜಾತಿ ನಾಯಕತ್ವವೆಂಬ ಹೊಸದೊಂದು ಗುರಾಣಿ ಸಿಕ್ಕಿತು. ನಾಯಕತ್ವವೆಂದರೆ ರಾಜಕೀಯ ದಿಂಡುರುಳಿಕೆ ಉರುಳಿಸುವ ಕಲೆಯೆಂದು ತಿಳಿಯಲಾಯಿತು. ಹಾಗಲ್ಲ. ನಾಯಕತ್ವವೆಂದರೆ ದುಡಿಯುವ ವಾತಾವರಣ ನಿರ್ಮಿಸುವ ಶಕ್ತಿ. ಸಮಾಜವಾದ, ಧರ್ಮ, ದೇವರು, ಸಂಸ್ಕೃತಿ ಎಲ್ಲವೂ ದುಡಿಮೆಯಲ್ಲಿಯೇ ಅಡಗಿದೆ ಎನ್ನುವ ಅಖಂಡ ನಂಬಿಕೆ. ರಚನಾತ್ಮಕ ಜನಚಳವಳಿಯ ಮೂಲಕ ಮಾತ್ರವೇ ಸಾಧ್ಯವಾಗಬಲ್ಲ ಸ್ಥಿತಿ ಇದು.
ಕಳೆದ ಅರ್ಧಶತಮಾನವಿಡೀ ಕಾನೂನುಗಳನ್ನು ರಚಿಸಿದೆವು. ಕಾನೂನುಗಳನ್ನು ಮಾತ್ರವೇ ರಚಿಸಿದೆವು. ಮಂತ್ರಿಗಳ ಮೂಲಕ ದೇಶ ಆಳಿದೆವು. ಕಾರ್ಯಕರ್ತರನ್ನು ಹೊಸಕಿ ಹಾಕಿದೆವು. ಲಾರಿಗಳಲ್ಲಿ ಜಾತಿಬಾಂಧವರನ್ನು ತುಂಬಿ ತುಂಬಿ ತಂದು ಭಾಷಣ ಬಿಗಿದು ಅವರ ಇದ್ದಬದ್ದ ಧೈರ್ಯವನ್ನೆಲ್ಲಾ ಹಾಳು ಮಾಡಿದೆವು. ಹಳ್ಳಿಗರನ್ನು ಹೇಡಿಗಳನ್ನಾಗಿ ಮಾಡಿದೆವು.
ಗ್ರಾಮೀಣ ಜನರು ಸ್ವಯಂ ಉದ್ಯೋಗಿಗಳು. ಇದನ್ನು ಒಪ್ಪಿಕೊಳ್ಳಲಿಕ್ಕೆ ನಾವು ಸಿದ್ಧರಿಲ್ಲ, ನಗರ ವ್ಯವಸ್ಥೆ ಸಿದ್ಧವಿಲ್ಲ. ಕಾರ್ಖಾನೆಗಳಿಗೆ ಹಾಗೂ ಸೇವಾ ಕೇಂದ್ರಗಳಿಗೆ ತರುಬಲೆಂದೇ ಗ್ರಾಮಸ್ಥರನ್ನು ನಿರುದ್ಯೋಗಿಗಳನ್ನಾಗಿ ಮಾಡಲಾಯಿತು. ಗ್ರಾಮೀಣ ಜನರು ಸರ್ವಗುಣ ಸಂಪನ್ನರೆಂದು ನನ್ನ ಮಾತಿನ ಅರ್ಥವಲ್ಲ. ಅವರಲ್ಲಿ ಗಂಭೀರವಾದ ಊನಗಳಿವೆ. ಊನಗಳಿಲ್ಲದಿರುತ್ತಿದ್ದರೆ ಅವರು ಸೋಲುತ್ತಲೇ ಇರಲಿಲ್ಲ. ಆದರೆ ಅವರ ಊನ ಶ್ರಮವಲ್ಲ.
ಗ್ರಾಮೀಣ ಪ್ರದೇಶಕ್ಕೆ ತಗುಲಿರುವ ರೋಗ ಎರಡು ಬಗೆಯದ್ದು. ಒಂದು ಪರಿಚಿತ ರೋಗ, ಮತ್ತೊಂದು ಹೊಸ ರೋಗ. ಪಾಳೆಯಗಾರಿ ಮನೋವೃತ್ತಿ ಎಂದು ಪರಿಚಿತ ರೋಗವನ್ನು ಕರೆಯಲಾಗುತ್ತದೆ. ಜಾತಿಪದ್ಧತಿ, ಲಿಂಗತಾರತಮ್ಯ, ಮೇಲುಕೀಳಿನ ಭಾವನೆ, ಕೀಳರಿಮೆ, ಮೂಢನಂಬಿಕೆ ಇತ್ಯಾದಿ ಲಕ್ಷಣಗಳಲ್ಲಿ ಕಾಣಿಸುವ ರೋಗವಿದು. ಅರಿವಿನ ಕೊರತೆಯಿಂದ ಬರುವ ರೋಗವಿದು. ಹೊಸ ರೋಗವು ತೀರ ಹೊಸದೇನಲ್ಲ. ಬ್ರಿಟಿಷರು ಭಾರತಕ್ಕೆ ಬಂದಾಗ ತಗುಲಿಸಿದ ರೋಗವಿದು. ರೋಗಗ್ರಸ್ತ ಗ್ರಾಮೀಣ ಆರ್ಥಿಕತೆ. ಇದು ಮೂಲತಃ ನಿಶ್ಶಕ್ತಿಯ ರೋಗ.
ನಗರಗಳಲ್ಲಿ ವೈಚಾರಿಕತೆಯಿದೆ. ದುರಂತವೆಂದರೆ ಅದು ಸುಲಭಜೀವಿಗಳ ತಲೆಯಲ್ಲಿ ಅಡಗಿ ಕುಳಿತಿದೆ. ಹಳ್ಳಿಗಳಲ್ಲಿ ಶ್ರಮಸಹಿತ ಸರಳ ಬದುಕಿದೆ, ದುರಂತವೆಂದರೆ ಹಳ್ಳಿಗಳ ಹಿತ್ತಲುಗಳಲ್ಲಿ ಕೊಳೆಯುತ್ತಿದೆ ಅದು. ಇವೆರಡೂ ದಿವ್ಯ ಔಷಧಿಗಳು. ಇವೆರಡನ್ನೂ ಬೆರಸಿ ಕಷಾಯ ಮಾಡಿ ಕುಡಿಸಿದರೆ ಮಾನವತೆ ಎದುರಿಸುತ್ತಿರುವ ಬಿಕ್ಕಟ್ಟಿನ ಕಾಯಿಲೆ ವಾಸಿಯಾಗುತ್ತದೆ. ಆದರೆ, ಎಲ್ಲ ದೇಸಿ ಔಷಧಿಗಳಂತೆ ಇದೂ ನಿಧಾನ ಪರಿಣಾಮ ಬೀರುವ, ಆದರೆ ಸಮಗ್ರ ಪರಿಣಾಮ ಬೀರುವ ಔಷಧವಾಗಿದೆ. ಗ್ರಾಮೀಣ ಉದ್ಯಮದಲ್ಲಿ ನಂಬಿಕೆ, ವೈಚಾರಿಕತೆಯಲ್ಲಿ ನಂಬಿಕೆ, ಶ್ರಮಸಹಿತ ಸರಳಬದುಕಿನಲ್ಲಿ ನಂಬಿಕೆ. ಈ ಮೂರು ಸಂಗತಿಗಳು ಸೇರಿ ಕೆಲಸ ಮಾಡಿದರೆ ಔಷಧ ಪರಿಣಾಮ ಬೀರೀತು.