”ಹೊಸ ಮನುಷ್ಯ” ಪತ್ರಿಕೆಯ ಪ್ರಶ್ನೆಗಳಿಗೆ ದೇವನೂರ ಮಹಾದೇವ ಅವರ ಉತ್ತರಗಳು….
[”ಹೊಸ ಮನುಷ್ಯ” ಪತ್ರಿಕೆ ಜುಲೈ 2015ರ ಸಂಚಿಕೆಯ ‘ಸಮಕಾಲೀನ’ ವಿಶೇಷಕ್ಕಾಗಿ ರೂಪಿಸಿದ ಸ್ವರಾಜ್ ಅಭಿಯಾನ ಕುರಿತ ಚರ್ಚೆಗಾಗಿ ಅದರ ಸಂಪಾದಕರಾದ ಡಿ.ಎಸ್. ನಾಗಭೂಷಣ ಅವರು ಕೇಳಿರುವ ಪ್ರಶ್ನೆಗಳಿಗೆ ದೇವನೂರ ಮಹಾದೇವ ಅವರ ಉತ್ತರಗಳು….]
ದೆಹಲಿಯ‘ಸ್ವರಾಜ್ ಸಂವಾದ’ಕ್ಕೆ ಹೋಗಿ ಮಾತನಾಡಿದ್ದರ ಸ್ಪೂರ್ತಿ ಮತ್ತು ಉದ್ದೇಶಗಳಾದರೂ ಏನು? ಆಮ್‍ಆದ್ಮಿ ಪಕ್ಷದ ಒಡಕು ಹುಟ್ಟಿಸಿದ ನಿರಾಸೆಯನ್ನು ಈ ಸ್ವರಾಜ್ ಸಂವಾದ ನಿವಾರಿಸಿ ಪರ್ಯಾಯ ರಾಜಕಾರಣದ ಬಗ್ಗೆ ಹೊಸ ಹುರುಪನ್ನು ಹುಟ್ಟಿಸಬಲ್ಲುದೆ? ಹೇಗೆ?
ಭಾರತದ ರಾಜಕಾರಣಕ್ಕೆ ಇನ್ನು ದಿಕ್ಕಿಲ್ಲವೇನೋ ಎನ್ನುವಂತಾ ಸಂದರ್ಭ ಇದ್ದಾಗ ಆಮ್ ಆದ್ಮಿ ಪಕ್ಷ ಒಂದು ಸ್ಪೋಟದಂತೆ ಸಂಭವಿಸಿತು. ಆಗ ಸಧ್ಯಪ್ಪ! ಎಂದು ಉಸಿರಾಡುವಂತಾಯ್ತು. ಇದಾಗಲು, ಆಮ್ ಆದ್ಮಿ ಪಕ್ಷಕ್ಕೆ ಮಾಮೂಲಿ ರಾಜಕಾರಣಕ್ಕೆ ಹೊರತಾದ ಹೊಸ ನಡೆ ನುಡಿಗೆ ರೂಪ ನೀಡುವಲ್ಲ್ಲಿ, ನಾನು ಬಲ್ಲಂತೆ ಈಗ ಆಮ್ ಆದ್ಮಿಯಿಂದ ಹೊರಗೆ ಹಾಕಿಸಿಕೊಂಡ ಯೋಗೇಂದ್ರ ಯಾದವ್ ಮತ್ತು ಗೆಳೆಯರು ಬಹುತೇಕ ಕಾರಣರು. ಆಮ್ ಆದ್ಮಿ ಪಕ್ಷ ಒಂದಾಗಿದ್ದ್ದಾಗ ಈ ಹೊರ ಹಾಕಿಸಿಕೊಂಡ ಗೆಳೆಯರ ಕನಸಿನ ಸ್ವರೂಪಕ್ಕೆ ಅರವಿಂದ ಕೇಜ್ರೀವಾಲ್ ಅವರ ನಡಾವಳಿ[ಬಿಹೇವಿಯರಲ್] ರಾಜಕಾರಣ ಭಾಷೆಯೂ ಸೇರಿಕೊಂಡು ಅದೊಂದು ಅಂತಃಶಕ್ತಿಯಾಗಿ ಅಭಿವ್ಯಕ್ತಿಯಾಗುತ್ತಿತ್ತು. ನತದೃಷ್ಟ ಭಾರತ ಈ ಅವಕಾಶ ಕಳೆದುಕೊಂಡುಬಿಟ್ಟಿತು.
ಈಗ ಆಪ್‍ನಿಂದ ಹೊರಹಾಕಿಸಿಕೊಂಡಿರುವ ಸೃಷ್ಟ್ಯಾತ್ಮಕ ರಾಜಕಾರಣದ ವಿವೇಕಶಾಲಿಗಳಾದ ಯೋಗೇಂದ್ರ ಯಾದವ್ ಮತ್ತು ಗೆಳೆಯರು ಸ್ವರಾಜ್ ಅಭಿಯಾನ ಆರಂಭಿಸಿದ್ದಾರೆ. ಇದು ಆಪ್‍ನಂತೆ ಸ್ಪೋಟಕವಲ್ಲ, ನಿಜ. ಆದರೆ ಭಾರತದ ಜನಾಂದೋಲನಗಳನ್ನು ಕೂಡಿಸಿಕೊಂಡು ಸಮುದಾಯದ ಆಶೋತ್ತರಗಳನ್ನು ಇಟ್ಟುಕೊಂಡು ಸಮುದಾಯದ ರಾಜಕಾರಣದತ್ತ ಇದು ಹೆಜ್ಜೆ ಇಟ್ಟಿದೆ. ಇಂದಿನ ಬಹಿರಂಗದ ಅಧಿಕಾರದ ರಾಜಕಾರಣವು, ಅಂತರಂಗದ ಸಮುದಾಯದ ಜನಾಂದೋಲನಗಳ ರಾಜಕಾರಣವನ್ನು ತುಳಿದು ಕುಣಿಯುತ್ತಿರುವ ಈ ಸಂದರ್ಭದಲ್ಲಿ ಸ್ವರಾಜ್ ಅಭಿಯಾನದ ಹುಟ್ಟು ಸ್ಪೋಟಕ ಅಲ್ಲದಿದ್ದರೂ ಅತ್ಯಂತ ನಿಧಾನಗತಿಯದಾದರೂ ಅರ್ಥಪೂರ್ಣವಾದುದು. ನನಗನಿಸುವಂತೆ ಇದೇ ನಿಜವಾದ ಪರ್ಯಾಯ ರಾಜಕಾರಣ.
ಬೆಂಗಳೂರಿನಲ್ಲಿ ನಡೆದ ಸ್ವರಾಜ್ ಸಂವಾದ ರಾಜ್ಯದ ಮಟ್ಟಿಗೆ ಒಳ್ಳೆಯ ಆರಂಭ ಎನಿಸಿದೆಯೇ? ಹೇಗೆ?
ಎಲ್ಲಿ? ಹೇಗೆ? ಯಾರು? ಎಂಬುದನ್ನು ಬಿಟ್ಟು ಇಂತಹ ಯಾವುದೇ ಆರಂಭವನ್ನು ನಾನು ಆಸೆಗಣ್ಣಿಂದ ನೋಡುವೆ.
ಗಾಂಧಿಯ ಸ್ವರಾಜ್ಯದ ಸತ್ವ ಈ ಸ್ವರಾಜ್ ಸಂವಾದದಲ್ಲಿ ನೀವು ಕಂಡಿರಾ? ಎಲ್ಲಿ? ಹೇಗೆ?
ಸಾಮಾನ್ಯವಾಗಿ ನಾನು ಪಳಯುಳಿಕೆಗಳನ್ನು ನೋಡುವುದಿಲ್ಲ. ಸ್ವರಾಜ್ ಪರಿಕಲ್ಪನೆಯನ್ನು ನಾನು ‘ಗಾಂಧಿ ಲಿಮಿಟೆಡ್’ಗೆ ಮಿತಿಗೊಳಿಸಿ ನೋಡುವುದೂ ಇಲ್ಲ. ಪಳಯುಳಿಕೆ ಬದಲು ಚೈತನ್ಯ ಕಾಣಲು ಪ್ರಯತ್ನಿಸುತ್ತೇನೆ. ಇಂದಿನ ಪರಿಸ್ಥಿತಿಯಲ್ಲಿ ಸ್ಥೂಲವಾಗಿ ವಿಕೇಂದ್ರಿಕರಣ ಹಾಗೂ ಕಟ್ಟಕಡೆಯವನ/ಳ ಭಾಗವಹಿಸುವಿಕೆ-ಇದಿಷ್ಟು ಸಾಕು.
ನಿಮ್ಮ ಸರ್ವೋದಯ ಕರ್ನಾಟಕ ಈ ‘ಸ್ವರಾಜ್ ಸಂವಾದ’ ಪ್ರಯತ್ನಗಳಿಗೆ ಏನಾದರೂ ಕೊಡಬಲ್ಲುದೇ? ಮತ್ತು ಅದರಿಂದ ಏನಾದರೂ ಪಡೆಯಬಹುದೇ?
ಸರ್ವೋದಯ ಕರ್ನಾಟಕ ಕೊಡಬಲ್ಲುದೇ?… ಏನೋ ಗೊತ್ತಿಲ್ಲ. ಸ್ವರಾಜ್ ಅಭಿಯಾನದಿಂದ ಏನಾದರೂ ಪಡೆಯಬಹುದೇ ಎಂದು ಕಾತರಿಸುತ್ತಿರುವೆ.