ಹೆಗ್ಗಡೆಹಳ್ಳಿ ಸರ್ಕಾರಿ ಶಾಲೆಯ ಮಕ್ಕಳ ಪತ್ರಿಕೆ ಅಳ್ಳಿಮರ…
ಪತ್ರಿಕೆಯ ಪೂರ್ಣವಿವರಕ್ಕಾಗಿ ಮುಖಪುಟದ ಮೇಲೆ ಕ್ಲಿಕ್ಕಿಸಿ | ||||||
ಅಳ್ಳೀಮರ ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳ ಪತ್ರಿಕೆ. ಮಕ್ಕಳ ಒಳಗಿನ ಬರವಣಿಗೆ ಮತ್ತು ಓದುವ ಅಭಿರುಚಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಆರಂಭವಾಗಿದ್ದು ಈ ಪುಟ್ಟ ವೇದಿಕೆ ಅಳ್ಳೀಮರ. ಶಾಲೆಯ ಆವರಣದೊಳಗೆ ಇರುವ ಹಿರಿದಾದ ಬೃಹತ್ ಅರಳಿಮರವನ್ನು ಸ್ಫೂರ್ತಿಯನ್ನಾಗಿಸಿಕೊಳ್ಳಲು ಕಾರಣವೇನೆಂದರೆ ಆ ಮರ ಹಲವಾರು ಹಕ್ಕಿಗಳಿಗೆ ಆಶ್ರಯ ನೀಡುತ್ತದೆ. ಹಕ್ಕಿಗಳು ಬಂದು ಒಂದಷ್ಟು ಕಾಲವಿದ್ದು ಹೊಸ ಬದುಕು ಕಟ್ಟಿಕೊಂಡು ಹೊರಟು ಹೋಗುತ್ತವೆ. ಮಕ್ಕಳು ಹಾಗೆ ಹಕ್ಕಿಗಳಂತೆ ಸದಾ ಚಲನಶೀಲ, ಚಟುವಟಿಕೆಯಿಂದಿರುವವರು. ಅದೇ ಆಶಯ ಪತ್ರಿಕೆಯದ್ದು. ಅರಳಿಮರ ಮಕ್ಕಳ ಬಾಯೊಳಗೆ ಅಳ್ಳೀಮರ. ಆ ಆಡು ಸೊಗಡಿನ ನುಡಿಯೇ ಪತ್ರಿಕೆಯ ಹೆಸರಾಯಿತು ಎನ್ನುತ್ತಾರೆ ಪತ್ರಿಕೆಯ ಜೀವನಾಡಿ ಸಂತೋಷ್ ಗುಡ್ಡಿಯಂಗಡಿ.
ಪತ್ರಿಕೆಯು ಮಕ್ಕಳೊಳಗೆ ಹೊಸ ಹುಮ್ಮಸನ್ನು ಹುರುಪನ್ನು ತಂದುಕೊಟ್ಟಿದೆ. ಅವರ ಶಾಲೆಯ ಓದಿನ ಆಚೆಗೆ ಒಂಚೂರು ತೊಡಗಿಕೊಳ್ಳುವುದು ಸಾಧ್ಯವಾಗಿದೆ. ಬರವಣಿಗೆ, ಓದುಗಳಲ್ಲಿ ಅವರು ತೊಡಗಿಕೊಂಡಿರುವುದು ಪತ್ರಿಕೆಯ ಸಂಚಿಕೆಗಳು ಲವಲವಿಕೆಯಿಂದ ಹೊರಬರುವುದು ಸಾಧ್ಯವಾಗಿದೆ. ಅಳ್ಳೀಮರವನ್ನು ಓದಿ ನಾಡಿನ ಸಾಹಿತ್ಯ ವಲಯದ ಹಿರಿಯರು ಪ್ರತಿಕ್ರಿಯಿಸಿದ್ದು, ಅವರೂ ಮಕ್ಕಳ ಪತ್ರಿಕೆಗಾಗಿ ಬರೆದದ್ದು. ಹಿರಿಯರ ಜೊತೆ ಬರೆವ ಪುಳಕ ಮಕ್ಕಳನ್ನು ಇನ್ನಷ್ಟು ಬರವಣಿಗೆಗೆ ಹಚ್ಚಿದ್ದು. ಇವೆಲ್ಲ ಅಳ್ಳೀಮರದಲ್ಲಿ ಸಾಧ್ಯವಾಗಿದ್ದು. ಅವರು ನೋಡಿದ, ಅನುಭವಿಸಿದ, ಕಲ್ಪಿಸಿದ ಕತೆಗಳು ಬರಹಗಳಾಗಿ ರೂಪುಗೊಂಡವು.
ನಾಡಿನ ಪ್ರಸಿದ್ಧ ಪತ್ರಿಕೆಗಳು, ಈ ಪುಟ್ಟ ಪತ್ರಿಕೆಯ ಹೆಚ್ಚುಗಾರಿಕೆಯನ್ನು ಕುರಿತು ಬರೆದವು. ಅಳ್ಳೀಮರಕ್ಕಾಗಿ ಮಕ್ಕಳು ಬರೆದ ಕತೆಗಳು ಪ್ರಜಾವಾಣಿಯಂತಹ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವುದು ಮಕ್ಕಳಿಗೆ ಹೊಸ ಚೈತನ್ಯವನ್ನು ತಂದು ಕೊಟ್ಟವು. ಪ್ರತಿ ತಿಂಗಳು ಮಕ್ಕಳು ಪತ್ರಿಕೆಗಾಗಿ ಕಾಯುವುದು, ತಮ್ಮ ತಮ್ಮ ಬರಹಗಳಿಗೆ ಕಾಯುವುದು ಶಾಲೆಯ ಓದಿನ ಸೀಮಿತ ಚೌಕಟ್ಟಿನೊಳಗೆ ಹೊಸ ಗಾಳಿ ಬೀಸಿ ಮಕ್ಕಳು ಚಟುವಟಿಕೆಯಿಂದ ಇರುವುದು ಸಾಧ್ಯವಾಗಿದೆ.
ಒಂದು ಪುಟ್ಟ ಪತ್ರಿಕೆ ಶಾಲೆಯನ್ನು ಹೀಗೂ ಸೃಜನಶೀಲವಾಗಿಡಬಲ್ಲದು ಎಂಬುದು ಅಳ್ಳೀಮರದಿಂದ ಸಾಬೀತಾಗಿದೆ. ಅಳ್ಳೀಮರದಲ್ಲಿ ಹೆಗ್ಗಡಹಳ್ಳಿಯ ಮಕ್ಕಳಲ್ಲದೆ ಬೇರೆ ಮಕ್ಕಳೂ ಬರೆಯುತ್ತಿದ್ದಾರೆ, ಬೇರೆ ಬೇರೆ ಶಾಲೆಗಳು ಈ ಪತ್ರಿಕೆಯನ್ನು ನೋಡಿ ತಾವೂ ಹೊಸ ಪತ್ರಿಕೆಗಳನ್ನು ಆರಂಭಿಸಿವೆ.ಅಳ್ಳೀಮರದ ಮುಂದುವರಿದ ಭಾಗವಾಗಿ ಇದರದೇ ಒಂದು ಬ್ಲಾಗ್ ಆರಂಭಗೊಂಡು ಅಂತರ್ಜಾಲದ ಮೂಲಕ ಅನೇಕರು ಪತ್ರಿಕೆಯನ್ನು ನೋಡುತ್ತಿದ್ದಾರೆ. ತಮ್ಮ ಗೆಳೆಯರಿಗೆ ಹಂಚುತ್ತಿದ್ದಾರೆ. ಈ ಜೀವಂತ ಸೃಜನಶೀಲ ಪ್ರಯತ್ನಕ್ಕೆ, ಮಕ್ಕಳ ಮಿಡಿತಗಳಿಗೆ ನಮ್ಮ ಸಲಾಂ. ಜೊತೆಗೆ ನಾವಿದ್ದೇವೆ ಎಂಬ ಸಾಥ್….
ಬನವಾಸಿಗರು