ನಾನು ಓದಿರಬಹುದಾದ ನಮ್ಮ ನೆರೆಹೊರೆಯ ಭಾಷೆಯ ಸಣ್ಣಪುಟ್ಟ ಕತೆಯೋ ಕಾದಂಬರಿಯೋ – ಉದಾ: ಮಲಯಾಳಂನ ವೈಕಂ ಮಹಮದ್ ಬಷೀರ್ ಅವರ ‘ಪಾತಮ್ಮನ ಆಡು’, ಹಿಂದಿ ಪ್ರೇಮಚಂದ್‌ರ ‘ಹೆಣದ ಬಟ್ಟೆ’, ಮರಾಠಿಯ ಬಾಬುರಾವ್ ಬಾಗುಲ್ ಅವರ ‘ಸಾವು ಸಸ್ತಾ ಆಗ್ತಾ ಇದೆ’, ಒರಿಯಾದ ಪಕೀರ ಮೋಹನ ಸೇನಾಪತಿ ಅವರ ‘ಆರು ಬಿಘೆ ಭೂಮಿ’ ಇಂಥವು ನನ್ನ ಒಳಗನ್ನು ವಿಸ್ತರಿಸಿವೆ. ಈಗ ಮರಾಠಿಯಲ್ಲಿ ಬಹು ಚರ್ಚಿತವಾದ ಭಾಲಚಂದ್ರ ನೇಮಾಡೆಯವರ ಬೃಹತ್ ಕಾದಂಬರಿ ‘ಹಿಂದೂ’ ಕನ್ನಡಕ್ಕೆ ಬಂದಿದೆ.
‘ಹಿಂದೂ’ ಕಾದಂಬರಿ ಸುಲಲಿತವಾಗಿಲ್ಲ – ಹಿಂದೂವಿನಂತೆಯೆ. ಹಿಂದೂ ಗೋಜಲನ್ನು ಲೇಖಕ ಅಗೆದು ತೆಗೆಯುವ ಪ್ರಯತ್ನ ಪಡುತ್ತಿರುವುದೇ ಆ ಶ್ರಮದ ನಡಿಗೆಯೇ ಕಾದಂಬರಿಯಾಗಿ ರೂಪುಗೊಳ್ಳತೊಡಗುತ್ತದೆ. ಮೊಹೆಂಜೋದಾರೊ – ಸಿಂಧೂ ನದಿಯ ಆಜೂಬಾಜೂವಿನಲ್ಲಿ ಉತ್ಖನನ ಮಾಡುತ್ತ ಅಲ್ಲಿ ಲೇಖಕ ಅಥವಾ ಕಥಾನಾಯಕ ಖಂಡೇರಾವ್ ಕನಸು ನಿದ್ರೆ ವಾಸ್ತವಗಳೊಡನೆ ಮುಳುಗುತ್ತ ಏಳುತ್ತ ಮುಂದುವರಿಯುತ್ತಾನೆ.
ಪುರಾತತ್ವದಲ್ಲಿ ಮುಂದುವರಿಯುವುದು ಅಂದರೆ ಹಿಂದಕ್ಕೆ ಹೋಗುವುದು, ನಿಜ. ಉತ್ಪನನದಲ್ಲಿ ಮೂರ್ಚಿತನಾದ ಖಂಡೇರಾವ್‌ನನ್ನ ನೋಡಿ ಕೆಲವು ಹುಡುಗಿಯರು – ‘ದೂರದಲ್ಲೇನೋ ಗಣಿ ಅಗೆಯುತ್ತಾನಂತೆ. ಹೆಣಾ ಹೊರಗೆ ತೆಗೆಯುತ್ತಾನಂತೆ’ ಎಂದು ಮಾತನಾಡಿಕೊಳ್ಳುವ ಕನಸು ಬೀಳುತ್ತದೆ. ಅದೇ ನಮಗೆ ನಿಜದಂತೆ ಗೋಚರಿಸುತ್ತದೆ. ಅಂದರೆ ಕಥಾನಾಯಕ ಖಂಡೇರಾವ್‌ಗೆ – ಉತ್ಖನನದಲ್ಲಿ ಸಿಗುವ ಅವಶೇಷಗಳು ವಾಸ್ತವದಂತೆಯೂ ಆತನು ಬದುಕುತ್ತಿರುವ ಇಂದಿನ ಬದುಕು ಅವಶೇಷದಂತೆಯೂ ಕಾಣುತ್ತದೆ. ಈ ತೀವ್ರತೆಯಲ್ಲಿ ಲೇಖಕ ಕಟ್ಟಿಕೊಡಲು ಪ್ರಯತ್ನಿಸುತ್ತಾನೆ.
ಮಹಾರಾಷ್ಟ್ರದ ಹಿನ್ನೆಲೆಯ ಮರಾಠ ರೈತ ಕುಟುಂಬದ ಆದರೆ ತಾನು ಕ್ಷತ್ರಿಯ ಎಂದು ಭಾವಿಸಿಕೊಂಡಿರುವ ಮನಸ್ಸೊಂದು ಖಂಡೇರಾವ್ ರೂಪದಲ್ಲಿ ಉತ್ಖನನ ಮಾಡಿ ತನ್ನ ಮೂಲವನ್ನು ಹುಡುಕುತ್ತದೆ. ಈಗ ನನ್ನ ಪ್ರಶ್ನೆ ಇಷ್ಟು: ಭಾರತದ ಯಾವುದೇ ಜನಸಮುದಾಯವು ಏಳುತ್ತ ಬೀಳುತ್ತ ಕ್ರಿಸ್ತಪೂರ್ವಕ್ಕೆ ಹೋದರೆ ಅವುಗಳಿಗೂ ಹೆಚ್ಚು ಕಮ್ಮಿ ಹೀಗೆಯೇ ಕಾಣಿಸಬಹುದಲ್ಲವೆ? ಹರಪ್ಪ ಮೊಹೆಂಜೋದಾರೊ ಕಾಲದ ಸಿಗಬಹುದಾದ ಅಸ್ಥಿಪಂಜರವೊಂದು, ಇಂದು ತಾವು ಬೇರೆ ಬೇರೆ ಎಂದು ಗುದ್ದಾಡುತ್ತಿರುವ ಎಷ್ಟೊ ಜಾತಿ ಸಮುದಾಯಗಳ ಮಾತೃಪಿತೃವೂ ಆಗಿರಲೂಬಹುದು!
‘ಹಿಂದೂ’ ಕಾದಂಬರಿಯು ಜಟಿಲವಾಗಿ ಆದರೆ ಸೋಪಜ್ಞವಾಗಿ ಇಂಥ ಕಾದಂಬರಿಯೊಂದಕ್ಕೆ ಹೀಗಲ್ಲದೆ ಬೇರೆ ರೀತಿ ಇಲ್ಲ ಎಂಬಂತೆ ಆರಂಭವಾಗುತ್ತದೆ. ಹಾಗೇ ಮುಂದುವರಿಯುತ್ತದೆ ಕೂಡ. ಇದು ಸಂಶೋಧನೆಯೊಂದರ ಅನುಭವಾತ್ಮಕ ಕಥನವೊ ಅಥವಾ ಕಲಾಕೃತಿಯೊ ಎಂಬುದು ಬಿಡಿಸಲಾಗದಂತೆ ಮಿಳಿತಗೊಂಡಿದೆ. ಲೇಖಕ, ಕಥಾನಾಯಕ ಹಟಕ್ಕೆ ಬಿದ್ದವರಂತೆ ಶ್ರೇಣಿ ಇಲ್ಲದ ಸೇಂದ್ರೀಯ ಹಿಂದೂವನ್ನು ಸ್ಥಾಪಿಸಲು ಸುಸ್ತಾಗುವಷ್ಟು ಹೆಣಗುತ್ತಾರೆ. ಇದಕ್ಕಾಗಿ ನಡೆಸುವ ಈ ಕಾದಂಬರಿಯೊಳಗಿನ ಸಂಶೋಧನಾತ್ಮಕ ಪ್ರತಿಷ್ಠಾಪನೆಯ ಪ್ರಖರತೆ ಎಷ್ಟಿದೆ ಅಂದರೆ – ಕಾದಂಬರಿಯಲ್ಲಿ ಅಲ್ಲಲ್ಲಿ ಒಡಮೂಡುವ ತನ್ನಷ್ಟಕ್ಕೆ ಜೀವನದ ದಾರುಣತೆಯ ದರ್ಶನ ಮಾಡಿಸುವ, ಉದಾ: ಚಿಂದು ಅತ್ತೆಯ ಮಾವನಾದ ರಾವ್‌ಬಹುದ್ದೂರ್ ದೇಶಮುಖನ ಕೋಟೆಯ ನಿಗೂಢತೆ ಏಳುಬೀಳುಗಳ ತಲ್ಲಣಗಳ ಅದ್ಭುತ ಚಿತ್ರಣವೂ ಮಸುಕಾಗುವಷ್ಟು.
ಜೊತೆಗೆ ಒಂದು ವಾದಕ್ಕೆ ಕಟ್ಟುಬಿದ್ದರೆ ವರ್ತಮಾನವೂ ಕಾಣದಂತಾಗಿ ಬಿಡಬಹುದೇನೋ. ಕಾದಂಬರಿಯಲ್ಲಿ ಬರುವ ಗ್ರಾಮೀಣ ಬದುಕಿನ ಚಿತ್ರಣವೊಂದು ಹೀಗಿದೆ – ‘ಈ ಕಷ್ಟ ಜೀವಿಗಳು (ರೈತರು) ತಮ್ಮ ಬಡ, ಕಿರಿದಾಗಿರುವ ತುಣುಕಿನ ಸಹಾಯದಿಂದಲೇ ಮೇಲಿನ ಹಣವುಳ್ಳವರ ವಿರುದ್ಧ ಯಶಸ್ವಿಯಾಗಿ ಹೋರಾಡುತ್ತ ಬಂದಿದ್ದಾರೆ. ಕುರುಬ, ಅಲೆಮಾರಿ, ಆದಿವಾಸಿ, ಮಹಾರ್, ಮಾಂಗ್, ಸಮಗಾರರು ಗ್ರಾಮ ವ್ಯವಸ್ಥೆಯಿಂದ ದೂರ ಸರಿದು ವಾಸ ಮಾಡುವುದರಿಂದಾಗಿ ಯಾರ ಹಂಗಿಗೂ ಒಳಗಾಗದೇ ಬದುಕುತ್ತಾರೆ’.
ಇಲ್ಲಿ ಪ್ರಶ್ನೆ ಏಳುತ್ತದೆ – ಊರಾಚೆಗೆ ಎಸೆಯಲ್ಪಟ್ಟ ತಳಸಮುದಾಯಗಳು ಯಾರ ಹಂಗಿಲ್ಲದೆ ಬದುಕುತ್ತಿವೆಯೇ? ಈ ದೃಷ್ಟಿಕೋನ ತನ್ನನ್ನು ತಾನೇ ವಂಚಿಸಿಕೊಳ್ಳುತ್ತದೆ. ಹಾಗೆಯೇ, ಅಸ್ಪೃಶ್ಯತೆಯ ಆಚರಣೆಯೂ 10–11ನೇ ಶತಮಾನದಲ್ಲಿ ಸಾಂಸ್ಥಿಕ ರೂಪ ಪಡೆಯಲು ಹನ್ನೆರಡು ವರ್ಷಗಳ ಭೀಕರ ಬರಗಾಲ ಕಾರಣ ಎಂದು ಪ್ರಸ್ತಾಪಿಸಿ, ಇನ್ನೊಂದು ಕಡೆ ‘ಆಂಗ್ಲರಿಗಿಂತಲೂ ಮೊದಲು ಅಸ್ಪೃಶ್ಯತೆ ಇತ್ತೆ?’ ಎಂಬ ಅಮಾಯಕ ಮಾತು ಬರುತ್ತದೆ! ಪೇಶ್ವೆಯ ಆಡಳಿತ ಕಂಡುಂಡ ನೆಲದಿಂದ ಈ ಮಾತು ಬರುವುದೆಂದರೆ?
1857ರ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಜಾಗೃತವಾದ ತಳಸಮುದಾಯದ ಫುಲೆಯಂತಹ ಚೇತನಗಳಿಗೆ ಆತಂಕವಾಗಿತ್ತು – ‘ಬ್ರಿಟಿಷರು ಸೋತು ಪೇಶ್ವೆಗಳು ಅಧಿಕಾರಕ್ಕೆ ಬಂದರೆ ತಳಸಮುದಾಯಗಳಿಗೆ ಸಿಗುತ್ತಿದ್ದ ಅಲ್ಪಸ್ವಲ್ಪ ವಿದ್ಯಾಭ್ಯಾಸ, ಸಣ್ಣಪುಟ್ಟ ಕೆಲಸವೂ ಕಣ್ಮರೆಯಾಗಿ ಬಿಡಬಹುದು’ ಎಂಬುದು ಅವರ ಆತಂಕಕ್ಕೆ ಕಾರಣವಾಗಿತ್ತು. ಬಹಿರಂಗ ವಸಾಹತುಶಾಹಿ ಹಾಗೂ ಹಿಂದೂ ವಶೀಕರಣದ ಸ್ವ–ಇಚ್ಛಾ ಒಳಗುಲಾಮಗಿರಿ ಈ ಎರಡನ್ನೂ ಒಟ್ಟಿಗಿಟ್ಟು ಅರ್ಥಮಾಡಿಕೊಳ್ಳಬೇಕಾಗಿದೆ. ಇದು ಅರ್ಥವಾದರೆ ಮಾತ್ರ ಭಾರತ ಅರ್ಥವಾಗುತ್ತದೆ.
ಹಾಗೇ ಇಲ್ಲಿ ನುಂಗಲಾರದ ತುತ್ತುಗಳೂ ಇವೆ: ಕಾದಂಬರಿಯ ಆದರ್ಶವಾದ ಹಿಂದೂವಿನ ಗ್ರಾಮದ ಸಾಮಾಜಿಕ ಸ್ವರೂಪವನ್ನು – ‘ಜನರ ನೆನಪು ಎಷ್ಟು ಯುಗ ಹಿಂದೆ ಹೋಗುತ್ತದೆಯೋ, ಅಂದಿನಿಂದ ಒಬ್ಬರ ಅಗತ್ಯ ಮತ್ತೊಬ್ಬರಿಗೆ ಬೇಕಾಗಿ ಬ್ರಾಹ್ಮಣ, ರೈತ, ವ್ಯಾಪಾರಿ, ಆಯಗಾರ, ಅಲೆಮಾರಿ, ಪರದೇಶಿ – ಎಲ್ಲರೂ ಒಂದೆ ಜೀವವಾಗಿದ್ದರು’ ಎಂದು ಹೇಳಿ, ‘ಊರಲ್ಲಿರುವ ಈ ಸಾವಿರ ಬಗೆಯ ಜನರು ಒಬ್ಬರು ಮತ್ತೊಬ್ಬರನ್ನು ಪ್ರೀತಿಸುತ್ತ, ದ್ವೇಷಿಸುತ್ತ ಇರುವೆ–ಹುತ್ತದಂತೆ ಒಗ್ಗಟ್ಟಿನಿಂದ ಬಾಳ್ವೆ ಮಾಡುತ್ತ ಇರುತ್ತಿದ್ದರು’ ಎಂಬ ವಿವರ ಕೊಟ್ಟು, ಮುಂದೆ ವರ್ತಮಾನದ ಸ್ಥಿತಿಯನ್ನು ಕಥಾನಾಯಕನ ಕಣ್ಣಲ್ಲಿ ಲೇಖಕ ಕಟ್ಟಿಕೊಡುತ್ತಾರೆ.
ಬಂಧುತ್ವದ ಭಾವನೆಯಿಂದ ಕಥಾನಾಯಕ ಖಂಡೇರಾವ್ ಸಮಗಾರ, ಮಹಾರ್ ಮತ್ತು ಮಾಂಗ್‌ಕೇರಿಯಲ್ಲಿ ನಡೆದಾಡುವ ಸಂದರ್ಭವು ಬಾಲ್ಯದ ನೆನಪನ್ನು ಕಲೆಸಿಕೊಂಡು ಮೂಡುತ್ತದೆ. ಕೆಲವರು ಮಾಂಗ್‌ರು, ಅನೇಕ ಮಹಾರರು ಗ್ರಾಮವನ್ನೇ ತ್ಯಜಿಸಿರುತ್ತಾರೆ. ಮಾಂಗ್ ಸಮುದಾಯದ ಅಂಬವ್ವನ ಹಾಲು ಕುಡಿದು ಬೆಳೆದ ಖಂಡೇರಾವ್ ಹಳೆಯ ನೆನಪುಗಳನ್ನು ಹಂಚಿಕೊಂಡು ಕೊನೆಗೆ ಮಹಾರ್ ಬೀದಿಯಲ್ಲಿ ಹೊಸದಾಗಿ ಕಟ್ಟಿದ್ದ ಸಿದ್ಧಾರ್ಥಮಂದಿರದ ಎದುರು ನಿಂತಾಗ ‘ಯಾರು ಯಾರನ್ನು ಮುಕ್ತಗೊಳಿಸಿದರು’ ಪೋಸ್ಟರ್ ಕಣ್ಣಿಗೆ ಬೀಳುತ್ತದೆ.
ಕಥಾನಾಯಕ ಆ ಸಂದರ್ಭದಲ್ಲಿ ‘ಮಹಾರ್ ಮಾಂಗ್‌ರನ್ನು ನಾವು ತುಳಿಯುತ್ತಲೇ ಇದ್ದೇವೆ… ಹಿಂದೂ ಸಮಾಜವನ್ನು ಬೇರ್ಪಡಿಸುವ ಅಂಬೇಡ್ಕರರೇ ಅಸ್ಪೃಶ್ಯರನ್ನು ಸ್ವತಂತ್ರಗೊಳಿಸುತ್ತಾರೆ. ವಂಚಿತರಿಗೆ ಆತ್ಮಪ್ರಜ್ಞೆ ತಂದುಕೊಡುತ್ತಾರೆ’ ಎಂದು ಅಂದುಕೊಳ್ಳುತ್ತಾನೆ. ಹಾಗಿದ್ದರೆ ಅಂಬೇಡ್ಕರ್ ಬೇರ್ಪಡಿಸುವವರು ಆಗುತ್ತಾರೆಯೆ? ಶ್ರೇಣಿಯನ್ನು ನೆಲಸಮ ಮಾಡಿ ಸಮಾನಾಂತರಗೊಳಿಸುವುದು ಬೇರ್ಪಡಿಸುವಿಕೆ ಆಗುತ್ತದೆಯೇ? ಇಲ್ಲಿ ‘ಬೇರ್ಪಡಿಸುವಿಕೆ’ಯ ಪದ ಬಳಕೆಯೇ ಅಂಬೇಡ್ಕರ್ ಪ್ರಭಾವದ ಬಗ್ಗೆ ಸೂಚ್ಯವಾಗಿ ಅಸಹನೆ ಸೂಚಿಸುತ್ತದೆ.
ಮಹಾರ್ ಬೀದಿಯಲ್ಲಿ ಖಂಡೇರಾವ್‌ಗೆ ನಾಟಕೀಯ ದೃಶ್ಯದಂತೆ ಹರಚಂದ ಎದುರಾಗುತ್ತಾನೆ. ಕಷ್ಟಪಟ್ಟು ಖಂಡೇರಾವ್, ಹರಚಂದನ ಗುರುತು ಹಿಡಿಯುತ್ತಾನೆ. ಈ ಹರಚಂದ ಈ ಹಿಂದೆ ಖಂಡೇರಾವ್‌ನ ಮನೆ ಬಾಗಿಲವನು – ಮಹಾರ. ಕೊಟ್ಟಿಗೆ ಕಸವನ್ನು ತಲೆತಲಾಂತರದ ಹಕ್ಕಿನಿಂದ ತೆಗೆಯುತ್ತಿದ್ದವನು. ಆಗ ಅಸಹನೆಯಿಂದ ಕೊಟ್ಟಿಗೆ ಕಸ ತೆಗೆಯುತಿದ್ದ ಆತನನ್ನು ಕೆಲಸದಿಂದ ತೆಗೆದುಹಾಕಿದಾಗ ಹರಚಂದನ ತಾಯಿ ‘… ನಿಮ್ಮ ಬಾಗಿಲಲ್ಲಿ ಬೆಳೆದ ಪ್ರಾಣಿಯನ್ನು ಹೊರಗೆ ಹಾಕಬೇಡಿರಿ ಧಣಿ’ ಎಂದು ಸೆರಗೊಡ್ಡಿ ಬೇಡುತ್ತಾಳೆ. ಈಗ, ವರ್ತಮಾನದಲ್ಲಿ ಆ ಮಾಲೀಕ ಪ್ರಾಣಿ ಸಂಬಂಧ ಕಿತ್ತುಹೋಗಿದೆ. ಅದೇ ಹರಚಂದ ಈಗ ಕೋಟು ಟೊಪ್ಪಿಗೆ ಗಡಿಯಾರ ಧರಿಸಿ ಜೋಪಡಿ ಬದಲು ಹೊಸಮನೆಯಲ್ಲಿ ಕೂತಿದ್ದಾನೆ.
ಹರಚಂದನಿಗೆ ವಿದಾಯ ಹೇಳಿ ಹೊರಬಿದ್ದಾಗ ಖಂಡೇರಾವರಿಗೆ ಅಗಸೆ ಬಾಗಿಲಲ್ಲಿ ನಿಂತಿದ್ದ ವಿರಾಟಪುರುಷ ಕಾಣಿಸುತ್ತಾನೆ. ಕಥಾನಾಯಕನಿಗೆ ಅದು ಹೀಗೆ ಕಾಣಿಸುತ್ತದೆ: ‘‘ಪುರುಷ ಸೂಕ್ತದಲ್ಲಿಯ ಬ್ರಾಹ್ಮಣರ ಮುಖ ಸಹ ನಗರದ ದಿಕ್ಕಿಗೆ ಓಡಿ ಹೋಯಿತು ಮತ್ತು ತೋಳು? ಅದನ್ನಂತು ಚಂದ್ರಗುಪ್ತ ಮೌರ್ಯನೇ ಎಂದೋ ಕಡಿದು ಹಾಕಿದ್ದಾನೆ. ಅಂದರೆ ಈ ಹಳ್ಳಿಗಳಲ್ಲಿ ಉಳಿದವರೆಂದರೆ ತೊಡೆ ಮುರಿಯುವ ವೈಶ್ಯರು ಮಾತ್ರವೇ? ಎಲ್ಲರೂ ಹಳ್ಳಿಯನ್ನು ತೊರೆದು ಹೊರಟಿದ್ದಾರೆ. ಖಂಡೇರಾವ, ಬರುವ ದೀಪಾವಳಿಗೆ ರೇನಿಯ ಕುರುಬರ ಕೇರಿಯಲ್ಲಿ ಡಪ್ಪಿನ ಜೊತೆಗೆ ಈ ಹಾಡು ಹೊರಬರಲಿ: ‘…ಮುಕ್ತರಾದಿರಿ ಅಂತಿದ್ದೀರಿ / ಬರೇ ರೈತ ಮಾತ್ರ ಸ್ವೀಕಾರ ಮಾಡ್ಯಾನೇನು / ನಿಮ್ಮ ಪುರುಷ ಸೂಕ್ತದ ಉಕ್ತಿ’’.
– ಈ ನುಡಿಗಟ್ಟು ತನ್ನ ಕಣ್ಣೆದುರೇ ಕಳೆದು ಹೋಗುತ್ತಿರುವ ತನ್ನ ದೇಹ ನೋಡುತ್ತ ತಲ್ಲಣಿಸಿ ಉದ್ಗಾರ ಮಾಡಿದ ಚೀತ್ಕಾರದಂತೆ ಧ್ವನಿಸುತ್ತದೆ. ಆದರೆ ಇದನ್ನು ಹೀಗೂ ನೋಡಬಹುದಿತ್ತಲ್ಲವೆ? ಚಾತುರ್ವರ್ಣದಿಂದಲೂ ಆಚೆ ಇಡಲ್ಪಟ್ಟ ಅಸ್ಪೃಶ್ಯ ಮಹಾರ್ ಸಮುದಾಯದ ಕೆಲವರಾದರೂ – ಈಗ ಕ್ಷತ್ರಿಯರಾಗಲು, ಬ್ರಾಹ್ಮಣರಾಗಲು, ವೈಶ್ಯರಾಗಲು, ಕೊನೆಪಕ್ಷ ಶೂದ್ರರಾಗಲಾದರೂ ಹೊರಟಿದ್ದಾರೆ ಎಂದು ಕಾಣಬಹುದಿತ್ತಲ್ಲವೆ? ಚಾತುರ್ವರ್ಣವನ್ನು ಹುಟ್ಟು ನಿರ್ಧರಿಸದೆ ಪ್ರತಿಭೆ ಮತ್ತು ಅವಕಾಶ ನಿರ್ಧರಿಸುವುದಾದರೆ ಆ ಚಲನಶೀಲ ಚಾತುರ್ವರ್ಣದಲ್ಲಿ ಹೀಗೂ ಕಾಣಬಹುದಲ್ಲವೇ? ಹಿಂದೆ ಚರಿತ್ರೆಯಲ್ಲಿ ಸೋತ ಆರ್ಯರು ಇಂದು ಚಪ್ಪಲಿ ಹೊಲೆಯುವ ಸಮಗಾರರು ಆಗಿರಬಹುದಲ್ಲ!
ಒಟ್ಟಿನಲ್ಲಿ ನೇಮಾಡೆಯವರು ‘ಹಿಂದೂ’ ಕಾದಂಬರಿಯಲ್ಲಿ ಉತ್ಖನನ ಮಾಡಿ ಹಾಲಿ ಇರುವ ಹಿಂದೂವನ್ನು ಅಗೆದು ತೆಗೆದು ಅದನ್ನು ಸಿಂಧೂ ಎಂದು ತೋರಿಸಲು ಶ್ರಮಿಸುತ್ತಾರೆ. ಇಂದು ಅಟ್ಟಹಾಸ ಮಾಡುತ್ತಿರುವ, ಐಕ್ಯೂ ಕಮ್ಮಿ ಇರುವ, ಮಧ್ಯಯುಗೀನ ಒರಟು ಪಾಳೇಗಾರಿ ಹಿಂದೂವನ್ನು ಭೂಮಿ ಒಳಕ್ಕೆ ಹೂತು, ಭೂಮಿ ಒಳಗೆ ಬಲಿಯಾಗಿದ್ದ ಸಿಂಧೂವನ್ನು ಬಿಡುಗಡೆಗೊಳಿಸಲು ಬೆವರು ಸುರಿಸುತ್ತಾರೆ. ಇಲ್ಲಿ ಲೇಖಕನ ಸೈದ್ಧಾಂತಿಕ ಪ್ರಹಾರವು ಕಾದಂಬರಿಕಾರನ ಮೇಲೆ ಬಲವಾದ ಹೊಡೆತ ಕೊಡುತ್ತಾ, ಕಲಾಕೃತಿಯ ಸ್ವಾಯತ್ತತೆಯು ಅರಳುವುದಕ್ಕೆ ಅಡಚಣೆಯೂ ಆಗಿದೆ ಎಂದೇ ಅನಿಸುತ್ತದೆ.
ಇದಕ್ಕೆ ಹಿನ್ನೆಲೆಯಾಗಿ, ನೇಮಾಡೆಯವರು ‘ಹಿಂದೂ’ ಕಾದಂಬರಿಯ ಅಸ್ಥಿಪಂಜರದಂತಿರುವ ವೈಚಾರಿಕತೆಯನ್ನು ತಮ್ಮ ಒಂದು ಸಂದರ್ಶನದಲ್ಲಿ ‘ನಾನು ಜಾತಿ ವ್ಯವಸ್ಥೆಯ ವಿರುದ್ಧವಿಲ್ಲ, ಆದರೆ ಜಾತೀಯತೆಯ ವಿರುದ್ಧವಿದ್ದೇನೆ’ ಎನ್ನುತ್ತಾರೆ. ಮುಂದುವರಿದು, ‘ಹಿಂದೂ ಜಾತಿಪದ್ಧತಿಯು ಮೂಲದಲ್ಲಿ ಸಮರೇಖೆ (Horizontal) ಮತ್ತು ಸಮಾನಾಂತರರೇಖೆಗಳಂತೆ (Parallel) ಇತ್ತು. ಜಾತಿಜಾತಿಗಳ ನಡುವೆ ವೃತ್ತಿಗಳಲ್ಲಿ ಮಾತ್ರ ಭಿನ್ನತೆ ಇತ್ತು. ಆದರೆ ಎಲ್ಲಾ ಜಾತಿಯವರು ಸಮಾನರಾಗಿದ್ದರು. ಇದನ್ನು ಕಾಲಾನುಕ್ರಮೇಣ ಬ್ರಾಹ್ಮಣರು ಲಂಬವಾಗಿಸಿದರು (Vertical) ಮತ್ತು ಶ್ರೇಣೀಕೃತ ಮಾಡಿ ಮೌಢ್ಯವನ್ನಾಗಿಸಿಬಿಟ್ಟರು’ ಎನ್ನುತ್ತಾರೆ.
ಈಗ ನಾವು ಈ ಪ್ರಶ್ನೆ ಎದುರಿಸಬೇಕಾಗುತ್ತದೆ: ಒಂದು ಜಾತಿಯಲ್ಲಿ ಹುಟ್ಟುವಿಕೆ ಆ ವ್ಯಕ್ತಿಯ ವೃತ್ತಿಯನ್ನು ನಿರ್ಧರಿಸಬೇಕೆ? ವೃತ್ತಿಗೂ ವಂಶಪಾರಂಪರ್ಯಕ್ಕೂ ಇರುವ ಸಂಬಂಧವನ್ನು ಎತ್ತಿ ಹಿಡಿಯಬೇಕೇ? ಭಾರತದಲ್ಲಿ ಜಾತಿಪದ್ಧತಿಯು ಅಂತರ್ಗತವಾಗಿಬಿಟ್ಟು ಸ್ವಭಾವವಾಗಿಬಿಟ್ಟಿದೆ. ಎಷ್ಟೆಂದರೆ, ಗಾಣದ ಎತ್ತಿನಂತೆ ಜೀವಿತಾವಧಿ ಒಂದೇ ಪರಿಧಿಯಲ್ಲಿ ಸುತ್ತುತ್ತಾ ಗಾಣದ ಕಟ್ಟು ಬಿಚ್ಚಿ ಬಿಡುಗಡೆಗೊಳಿಸಿದರೂ ಆ ಗಾಣದ ಪರಿಧಿಯಲ್ಲಿ ಸುತ್ತುವಂತೆ. ‘ಬೇರೆ ಜಾತಿಯವರನ್ನು ಸವರ್ಣೀಯರು ತಮ್ಮ ಮನೆಯೊಳಕ್ಕೆ ಕರೆದರೂ ಬೇರೆ ಜಾತಿಯವರು ಒಳಬರುವುದಿಲ್ಲ’ – ಇತ್ಯಾದಿ ಅಭಿಪ್ರಾಯಗಳು ಇರುವುದು ಈ ಕಾರಣದಿಂದಲೇ ಇರಬಹುದು. ಜಾತಿ ವ್ಯವಸ್ಥೆ ಸುಪ್ತ ಮನಸ್ಸಿನ ಆಳಕ್ಕಿಳಿದು ಮೇಲ್ನೋಟಕ್ಕೆ ವ್ಯವಸ್ಥೆ ಕಾಣುವುದೇ ಇಲ್ಲ, ತಂತಾನೇ ಜರುಗುತ್ತಿರುತ್ತದೆ. ಬೆಲ್ಜಿಯಂನ ಪ್ರೊ. ಎಸ್. ಬಾಲಗಂಗಾಧರ ಎಂಬಾತನಿಗೆ ‘ಭಾರತದಲ್ಲಿ ಜಾತಿಗಳಿವೆ, ಜಾತಿ ವ್ಯವಸ್ಥೆ ಇಲ್ಲ’ ಎಂಬಂತೆ ಕಂಡಿರುವುದಕ್ಕೆ ಹೀಗಿರುವುದೂ ಕಾರಣವಾಗಿರಬಹುದು. ಪ್ರೊ. ಎಸ್. ಬಾಲಗಂಗಾಧರ ರೀತಿಯ ಆಲೋಚಕರಿಗೆ ಹಾಗೂ ಭಾರತದ ಜಾತಿಗೆ ಮಾನಸಿಕ ಚಿಕಿತ್ಸೆ ಅಗತ್ಯವಿದೆ.
ಆಯ್ತು, ನೇಮಾಡೆಯವರ ‘ಹಿಂದೂ’ ಕಾದಂಬರಿಯ ಆಲೋಚನೆಗಳು ಹೆಚ್ಚೂಕಮ್ಮಿ 1920ರ ಆಜುಬಾಜಿನ ಗಾಂಧಿ ಒದ್ದಾಟದಂತೆಯೇ ಇವೆ. ಗಾಂಧಿ ಕೊನೆಕೊನೆಗೆ ಬಿಡುಗಡೆ ಪಡೆದುಕೊಂಡುಬಿಟ್ಟರು. ‘ಅಂತರ್ಜಾತಿ ವಿವಾಹದಲ್ಲಿ ಮಾತ್ರ ಭಾಗವಹಿಸುವೆ’ ಎಂಬುವವರೆಗೂ, ಅಷ್ಟೇಕೆ – ಅಹಿಂಸೆ ಮತ್ತು ಸಮಾನತೆ ಒಂದೇ ನಾಣ್ಯದ ಎರಡು ಮುಖಗಳು ಎಂಬುವವರೆಗೂ. ಅಂತರ್ಜಾತಿ ವಿವಾಹಗಳು ಜಾತಿಯನ್ನು ಸಡಿಲ ಮಾಡುತ್ತವೆ.
ಜೊತೆಗೆ ಅಂತರ್ಜಾತಿ ವಿವಾಹದಲ್ಲಿ ಎರಡು ಬದುಕಿನ ಹಿನ್ನೆಲೆ ಸೇರುವುದರಿಂದ ಅವರ ವೃತ್ತಿಗೂ ಹೊಸತನ ಬರಬಹುದು. ವೃತ್ತಿಗೂ ಜಾತಿಗೂ ಸಂಬಂಧವಿರುವ ವಂಶಪಾರಂಪರ್ಯದ ವೃತ್ತಿಯನ್ನು ಸಕಾರಾತ್ಮಕವಾಗಿ ನೋಡಿದರೂ ಅದು ಹೆಚ್ಚೆಂದರೆ ಕೌಶಲ್ಯವನ್ನು ಹೆಚ್ಚು ಮಾಡಬಹುದು. ಆದರೆ ಆ ಬದುಕು ಗಾಣದೆತ್ತಿನಂತೆ ಆಗುತ್ತದೆ. ಬದಲಾಗಿ, ಬ್ರಾಹ್ಮಣ, ಮರಾಠ ಮುಂತಾದ ಮೇಲ್ಜಾತಿ ಎಂದು ಅಂದುಕೊಂಡಿರುವ ಜಾತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಲಗಾರ (scavenging) ವೃತ್ತಿಯನ್ನು ಮಾಡುವ ಸಂದರ್ಭ ಉಂಟಾದರೆ – ಆ ಜಲಗಾರ ವೃತ್ತಿಯೂ ಕೂಡ ನಿರ್ಮಲೀಕರಣಗೊಂಡು, ಸ್ವಚ್ಛವಾಗುತ್ತದೆ.
ಆಗ ಮಾತ್ರವೇ ‘ಸ್ವಚ್ಛ ಭಾರತ’ ಹುಟ್ಟುವುದು. ಜಾತಿಯ ವೃತ್ತಿ ಬದಲಾವಣೆಯು – ಸವಾಲು, ಸಂಘರ್ಷ ತಂದೊಡ್ಡಿ ಆ ವೃತ್ತಿಯ ಸೃಷ್ಟ್ಯಾತ್ಮಕ ಬೆಳವಣಿಗೆಗೆ ಕಾರಣವಾಗುತ್ತದೆ. ಭಾರತ ರೂಢಿಗತ ಜಡತ್ವ ಕಳೆದುಕೊಂಡು ಸೃಷ್ಟ್ಯಾತ್ಮಕವಾಗಬೇಕಾಗಿದೆ. ಲೇಖಕನಾದವನು ತಾನು ಮೊದಲು ಬಿಡುಗಡೆ ಪಡೆದು ಸಂವೇದನಾಶೀಲನಾದಾಗ ಇದನ್ನು ಕಾಣುತ್ತಾನೇನೊ. ಇದಕ್ಕಾಗಿ ಭಾರತದ ಈ ಮಹತ್ವದ ಲೇಖಕನ ‘ಹಿಂದೂ’ವಿನ ಮುಂದಿನ ಭಾಗ ‘ಹಿಂದೂ ಉರುಫ್ ಸಿಂಧೂ’ವನ್ನು ಕಾಯುತ್ತಿರುವೆ.