‘ಹಿಂದಕ್ಕೆ’ ಹೋಗುವ ಪ್ರಯತ್ನ-ದೇವನೂರ ಮಹಾದೇವ
ಪ್ರಜಾವಾಣಿ ವಾರ್ತೆ 31.7.2019
[ ಟಿಪ್ಪು ಜಯಂತಿ ಆಚರಣೆಯನ್ನು ರದ್ದುಪಡಿಸಿರುವುದಕ್ಕೆ ಸಮಾಜದ ವಿವಿಧ ವರ್ಗದ ಜನರಿಂದ ಪರ–ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಡಿಯೂರಪ್ಪ ಅವರ ಮೊದಲ ಪ್ರಮುಖ ನಿರ್ಧಾರವೇ ಒಂದು ಕೋಮಿನ ವಿರುದ್ಧ ಆಗಿರುವುದಕ್ಕೆ ಸಹ ಆಕ್ಷೇಪ ಎದುರಾಗಿದೆ. ದೇವನೂರ ಮಹಾದೇವ ಅವರ ಅಭಿಪ್ರಾಯ ಹೀಗಿದೆ.]
ಯಾರದೇ ಯಾವುದೇ ದಿನಾಚರಣೆ ಆಗಲಿ, ಆ ನೆನಪಿಗೆ ರಜಾ ಕೊಡದೆ ಕನಿಷ್ಠ ಒಂದು ಗಂಟೆ ಹೆಚ್ಚಿಗೆ ಕೆಲಸ ನಡೆಸುವಂತಾಗಲಿ. ಅದು ಬೇರೆ ಮಾತು, ಈಗ ಟಿಪ್ಪು ಜಯಂತಿ ರದ್ದುಗೊಳಿಸಿದೆಯಂತೆ, ಇದು ಸೇಡು ಮಾತ್ರವಲ್ಲ, ಹಿಂದೂ ಅಂದರೆ ‘ಹಿಂದಕ್ಕೆ’ ಎಂದು ಗ್ರಹಿಸಿಕೊಂಡವರು ಎಸಗಿದ ಅಪಕ್ವ ಕೃತ್ಯ. ಇನ್ನೂ ಹಿಂದಕ್ಕೆ ಹೋದರೆ ಇದು ಆರ್ಯರಿಗೂ ಅನ್ವಯವಾಗಿಬಿಡುತ್ತದೆ. ಇದೆಲ್ಲ ಇಂದು ಬೇಕಾಗಿಲ್ಲ. ಇಂತಹ ಒಂದು ಆಲೋಚನೆಗೆ ಎಡೆಕೊಡಬಾರದು. ಯಾರು ಈ ನೆಲದ ಸಂಪತ್ತನ್ನು ತಮ್ಮ ದೇಶಕ್ಕೆ ಕೊಳ್ಳೆ ಹೊಡೆದು ರವಾನಿಸುತ್ತಿದ್ದರೋ, ಅವರ ವಿರುದ್ಧ ಹೋರಾಡಿದ ದೇಶಪ್ರೇಮಿ ಟಿಪ್ಪು. ಇದಕ್ಕಾಗಿ ಟಿಪ್ಪು ರಕ್ತ ಈ ನೆಲದಲ್ಲಿ ಚೆಲ್ಲಿದೆ. ಆಗಿನ ಕಾಲಕ್ಕೆ ಅಂತರರಾಷ್ಟ್ರೀಯ ಗಮನ ಸೆಳೆದಿದ್ದ ಅಪ್ರತಿಮ ದೇಶಪ್ರೇಮಿಗೆ ಅಗೌರವ ತೋರಬಾರದಿತ್ತು. ಇದು ಭಾರತ ಮಾತೆಯ ಪುತ್ರನೊಬ್ಬನಿಗೆ ಮಾಡಿದ ದ್ರೋಹ.
ದೇವನೂರ ಮಹಾದೇವ,
ಹಿರಿಯ ಸಾಹಿತಿ