ಸ್ವಂತ ಆಯ್ಕೆಯಿಂದ ನಮ್ಮ ಜೀವನಶೈಲಿ ಬದಲಿಸಿಕೊಳ್ಳಲಿಕ್ಕೆ ಈಗಲೂ ಕಾಲ ಮಿಂಚಿಲ್ಲ- ಪ್ರಸನ್ನ
ಪ್ರಸನ್ನ
‘ಬದನವಾಳು ಸತ್ಯಾಗ್ರಹ’ಕ್ಕೂ ಮುನ್ನ…
ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೊಂದು ದೌರ್ಬಲ್ಯವಿದೆ, ತುಂಬ ಗಂಭೀರವಾದ ದೌರ್ಬಲ್ಯ. ತತ್‌ಕ್ಷಣದ ವಾಸ್ತವಗಳಿಗೆ ಮಾತ್ರವೇ ಸ್ಪಂದಿಸಬಲ್ಲದು ಅದು. ಸಾರ್ವಕಾಲಿಕ ಸತ್ಯಗಳು ಹಾಗೂ ದೂರಗಾಮಿ ಕಾರ್ಯಕ್ರಮಗಳು ಈ ವ್ಯವಸ್ಥೆಗೆ ಕಾಣುವುದೇ ಇಲ್ಲ. ಒಂದೊಮ್ಮೆ ಕಂಡರೂ ಅವು ಸಾಂಕೇತಿಕಗೊಂಡು ನಿರರ್ಥಕವಾದ ಪೂಜ್ಯ ಸಂಗತಿಯಾಗಿ ಪರಿವರ್ತಿತವಾಗಿಬಿಡುತ್ತವೆ. ದೂರಗಾಮಿ ಕಾರ್ಯಕ್ರಮಗಳಿಗೆ ಪೂಜೆ ಸಲ್ಲಿಸಿ ತತ್‌ಕ್ಷಣದ ವಾಸ್ತವಗಳತ್ತ ಓಡುತ್ತಿರುತ್ತದೆ ಪ್ರಜಾಪ್ರಭುತ್ವ ವ್ಯವಸ್ಥೆ.
ವೋಟು ಕೊಟ್ಟವನು ಅಥವಾ ಕೊಡಬೇಕಾದವನು ರಸ್ತೆಗಳನ್ನು ಬಯಸುತ್ತಾನೆ, ವಾಹನಗಳನ್ನು ಬಯಸುತ್ತಾನೆ… ಕಟ್ಟಡಗಳು, ಕಾರ್ಖಾನೆಗಳು, ಅಣು ವಿದ್ಯುತ್ ಸ್ಥಾವರಗಳನ್ನು ಬಯಸುತ್ತಾನೆ. ಉಚಿತ ವಿದ್ಯುತ್, ಉಚಿತ ಸಿಹಿನೀರು, ಉಚಿತ ಗೊಬ್ಬರ, ಉಚಿತ ಪಯಣ… ಬಯಸುತ್ತಾನೆ. ಪ್ರಜಾಪ್ರತಿನಿಧಿಗಳು ಅವುಗಳನ್ನು ಒದಗಿಸುತ್ತಾರೆ.
ಆಧುನಿಕ ಪ್ರಜಾಪ್ರಭುತ್ವಗಳಿಗೆ ಲಾಭದಾಯಕತೆ ಬೇಕು, ಅತಿಹೆಚ್ಚಿನ (ಕನಿಷ್ಠಪಕ್ಷ ಶೇ 10) ಆರ್ಥಿಕ ಬೆಳವಣಿಗೆ ಬೇಕು. ಹಾಗಾಗಿ, ಹೇಗಾದರೂ ಮಾಡಿ ಲಾಭ ಮಾಡಬಲ್ಲ ಉದ್ದಿಮೆಪತಿಗಳು ಅವರಿಗೆ ಬೇಕು. ಪಕ್ಷ ನಡೆಸಲಿಕ್ಕೆ ಉದ್ದಿಮೆಪತಿಗಳ ಹಣ ಬೇಕು. ಹೀಗೇ ನಡೆದಿದೆ ಪ್ರಜಾಪ್ರಭುತ್ವ ವ್ಯವಸ್ಥೆ. ಬದುಕಿನ ಸುಸ್ಥಿರತೆ, ಭಾಷೆಯ ಸುಸ್ಥಿರತೆ, ಕೃಷಿ– ಪರಿಸರ– ಆರೋಗ್ಯ– ಶಿಕ್ಷಣ ಇತ್ಯಾದಿ ವ್ಯವಸ್ಥೆಗಳ ಸುಸ್ಥಿರತೆ ಸಾಂಕೇತಿಕವಾಗಿ ಉಳಿದುಬಿಡುತ್ತದೆ.
ಸುಸ್ಥಿರತೆಯ ಆಶಯವನ್ನು ಬಿಂಬಿಸಿ ಸಾಂಕೇತಿಕ ಉಪವಾಸ ಮಾಡುತ್ತೇವೆ, ಅಥವಾ ಓಡುತ್ತೇವೆ, ಅಥವಾ ಭಾಷಣ ಮಾಡುತ್ತೇವೆ. ಮಾತೃಭಾಷೆಯ ಸುಸ್ಥಿರತೆಯ ಆಶಯವನ್ನು ಬಿಂಬಿಸಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತೇವೆ. ಪರಿಸರದ ಸುಸ್ಥಿರತೆಯನ್ನು ಸಾಲುಮರದ ತಿಮ್ಮಕ್ಕ ಅವರಿಗೆ ಶಾಲು ಹೊದಿಸಿ ಮುಗಿಸುತ್ತೇವೆ. ಹಾಗಾಗಿಯೇ ಸ್ವಾತಂತ್ರ್ಯ ಚಳವಳಿಗೆ ಅತ್ಯಗತ್ಯವಾಗಿದ್ದ ಗಾಂಧೀಜಿ ಅಧಿಕಾರ ಚಲಾವಣೆಯ ಸಂದರ್ಭ ಬಂದಾಗ ಅಪ್ರಸ್ತುತರಾಗಿಬಿಡುತ್ತಾರೆ.
ಇತ್ತ ಹೊಗೆ ಕಾರುತ್ತಿರುವ ಬೆಂಗಳೂರು ನಗರವನ್ನು ಬೆಳೆಸುತ್ತಿದ್ದೇವೆ. ಶುದ್ಧ ಗಾಳಿ, ಶುದ್ಧ ನೀರು ಲಭ್ಯವಿರುವ ಗ್ರಾಮೀಣ ಪ್ರದೇಶಗಳನ್ನು ಕೊಳೆಸುತ್ತ ಹೋಗುತ್ತಿದ್ದೇವೆ. ಟಿ.ವಿ, ಫ್ರಿಜ್ಜು, ಕಾರು ತಯಾರಿಸುವ ಕಾರ್ಖಾನೆಗಳನ್ನು ಬೆಳೆಸುತ್ತಿದ್ದೇವೆ. ಹೊಟ್ಟೆಗೆ ಅನ್ನ ಹಾಕುವ ರೈತನನ್ನು ಕೊಳೆಸುತ್ತಿದ್ದೇವೆ. ಇದು ಇಂದಿನ ರಾಜಕಾರಣದ ಪರಿ. ಅನೇಕರು ತಪ್ಪಾಗಿ ತಿಳಿದಿರುವಂತೆ ಭ್ರಷ್ಟ ರಾಜಕಾರಣ ಪರಿ ಮಾತ್ರವಲ್ಲ ಇದು, ಶಿಷ್ಟ ರಾಜಕಾರಣದ ಪರಿಯೂ ಇದೇ ಹೌದು.
ಸಮತಾವಾದಿಗಳು, ಸಮಾಜವಾದಿಗಳು, ಹಿಂದುತ್ವವಾದಿಗಳು, ಸಂಪ್ರದಾಯವಾದಿಗಳು, ಅಲ್ಲಾವಾದಿಗಳು, ಕ್ರಿಸ್ತವಾದಿಗಳು ಎಲ್ಲರೂ ಮಾಡುತ್ತಿರುವುದು ಇದನ್ನೇ. ಬಂಡವಾಳಶಾಹಿ ಅಮೆರಿಕೆಯು ಮಾಡುತ್ತಿರುವುದೂ ಇದನ್ನೇ. ಸಮತಾವಾದಿ ಚೀನಾ ಮಾಡುತ್ತಿರುವುದೂ ಇದನ್ನೇ. ನಾವು ಮಾಡುತ್ತಿರುವುದೂ ಇದನ್ನೇ. ಚೀನಾ ದೇಶವು ಆಧುನಿಕ ಅಭಿವೃದ್ಧಿ ಎಂಬ ಸ್ಥಾವರವನ್ನು ಹೆಚ್ಚು ಸಮರ್ಥವಾಗಿ ಕಟ್ಟುತ್ತಿದೆ, ನಾವು ಕಡಿಮೆ ಸಮರ್ಥವಾಗಿ ಕಟ್ಟುತ್ತಿದ್ದೇವೆ. ಎರಡೂ ಸ್ಥಾವರಗಳು ಅಸ್ಥಿರ ಅಭಿವೃದ್ಧಿಯ ಸ್ಥಾವರಗಳೇ ಸರಿ.
ಆದರಿದು ಮುಂದುವರಿಯಲಾಗದು. ಹುಚ್ಚು ಮುಂಡೆ ಮದುವೆಯಲ್ಲಿ ಖಂಡಾಪಟ್ಟೆ ಉಂಡೆನೆಂದು ನಾನೇನೋ ಬೀಗುತ್ತಿದ್ದೇನೆ. ಆದರೆ, ನನ್ನ ಮಕ್ಕಳು, ಮೊಮ್ಮಕ್ಕಳು ಬೀಗಲಾರರು. ಅವರು ತೀವ್ರತರವಾದ ಅಪಾಯದಲ್ಲಿ ಸಿಲುಕಿದ್ದಾರೆ. ಬದಲಾಗಲೇಬೇಕಾದ ಬಲವಂತ ನಮ್ಮ ಮೇಲಿದೆ. ಪ್ರಕೃತಿ ಮಾತೆ ಹೇರುತ್ತಿರುವ ಬಲವಂತವದು. ಹುಚ್ಚು ಮುಂಡೆಯ ಮದುವೆ ನಡೆದಾದ್ದರೂ ಹೇಗೆ? ಆಧುನಿಕ ಅಭಿವೃದ್ಧಿಯ ಬೆನ್ನಿಗಿರುವುದು, ಅನಾಯಾಸವಾಗಿ ನಮಗೆ ಒದಗಿಬಂದ ಇಂಧನ ಮೂಲ ಅಥವಾ ಶಕ್ತಿಮೂಲವೇ ಸರಿ. ಅರ್ಥಾತ್ ತೈಲ ಹಾಗೂ ಕಲ್ಲುಗಳ ಪರಿಮಿತ ಸಂಗ್ರಹವನ್ನು ಬಳಸಿ ಬೆಳೆಸಿದ ಸಂಪತ್ತು ಇದು.
ಈಗ ಶಕ್ತಿಮೂಲಗಳು ಕರಗತೊಡಗಿವೆ. ತೈಲ ಸಂಗ್ರಹವು ಅರ್ಧಕ್ಕಿಂತ ಮಿಗಿಲಾಗಿ ಖರ್ಚಾಗಿದೆ ಎಂದು ವಿಜ್ಞಾನಿಗಳೇ ಹೇಳುತ್ತಿದ್ದಾರೆ. ಅರ್ಧಕ್ಕಿಂತ ಮಿಗಿಲು ಖರ್ಚಾದ ಮೇಲೆ, ತೈಲ ಮೇಲೆತ್ತುವ ಖರ್ಚು ದಿನೇ ದಿನೇ ಹೆಚ್ಚಾಗುತ್ತ ಹೋಗುತ್ತದೆ ಹಾಗೂ ಬೇಗ ಅದು ನಷ್ಟದಾಯಕ ಉದ್ದಿಮೆಯಾಗಿ ಪರಿವರ್ತಿತವಾಗುತ್ತದೆ ಎಂದು ವಿಜ್ಞಾನ ಹೇಳುತ್ತಿದೆ. ಅರ್ಥಾತ್ ತೈಲವು ಬರಿದಾಗುವುದಕ್ಕೆ ಬಹಳ ಮೊದಲೇ ತೈಲದ ಉದ್ದಿಮೆ ಬಂದಾಗುತ್ತದೆ ಎಂದು ವಿಜ್ಞಾನ ಹೇಳುತ್ತದೆ.
ಆಧುನಿಕ ಅಭಿವೃದ್ಧಿಯ ಕೇಂದ್ರದಲ್ಲಿ ತೈಲವಿದೆ. ಮಿಕ್ಕೆಲ್ಲ ಶಕ್ತಿಮೂಲಗಳೂ ಪರಿಮಿತ ಶಕ್ತಿಮೂಲಗಳು ಹಾಗೂ ಉತ್ಪಾದನಾ ವೆಚ್ಚ ದುಬಾರಿಯಾಗಿರುವ ಶಕ್ತಿಮೂಲಗಳು. ಹಾಗೆಂದೇ ಆಧುನಿಕ ನಾಗರಿಕತೆಯನ್ನು ತೈಲ ನಾಗರಿಕತೆಯೆಂದು ಹಲವರು ಕರೆದಿದ್ದಾರೆ. ತೈಲಬಾವಿಗಳು ತುಂಬಿ ತುಳುಕುತ್ತಿದ್ದಾಗ ಒಂದು ರೂಪಾಯಿ ಖರ್ಚು ಮಾಡಿದರೆ ನೂರು ರೂಪಾಯಿಯ ತೈಲ ಹೊರಬಂದು ಸಂಸ್ಕರಣೆಗೊಂಡು ಬಳಕೆಗೆ ಲಭ್ಯವಾಗುತ್ತಿತ್ತು. ಈಗದು ಹಲವಾರು ಪಟ್ಟು ಹೆಚ್ಚಿನ ಖರ್ಚಿಗೆ ಕಾರಣವಾಗತೊಡಗಿದೆ. ದಿನಗಳೆದಂತೆ, ತೈಲಬಾವಿಗಳು ತಳ ಕಾಣತೊಡಗಿದಂತೆ, ಖರ್ಚು ಗಗನಕ್ಕೇರುತ್ತದೆ ಎಂದು ವಿಜ್ಞಾನ ಹೇಳುತ್ತಿದೆ.
ಕಡಿಮೆ ಬೆಲೆ ಇಂಧನದಿಂದಾಗಿಯೇ ನಾವು ಪ್ಲಾಸ್ಟಿಕ್ ಬಳಸಿ ನೂರು ರೀತಿಯ ಪದಾರ್ಥಗಳನ್ನು ಬಳಕೆಗೆ ತಂದದ್ದು, ಪ್ರಪಂಚದ ತುಂಬ ಹಾರಾಡಿದ್ದು, ವಿಶ್ವವಿದ್ಯಾಲಯಗಳನ್ನು ಕಟ್ಟಿದ್ದು, ಪುಸ್ತಕಗಳು, ಇಂಟರ್‌ನೆಟ್ ಇತ್ಯಾದಿಗಳನ್ನು ಪೇರಿಸಿಟ್ಟಿದ್ದು, ಮಹಾನಗರಗಳು ಮಹಾಕೈಗಾರಿಕೆಗಳನ್ನು ಎತ್ತಿ ನಿಲ್ಲಿಸಿ ಸುಲಭ ಬದುಕಿನ ಪರಾಕಾಷ್ಠೆ ತಲುಪಿದ್ದು. ಈಗ ಇಂಧನಗಳ ಇಳಿತಾಯದ ಯುಗ ಆರಂಭವಾಗಿದೆ. 2008ರ ಆರ್ಥಿಕ ಹಿಂಜರಿತವು ಇಂಧನ ಇಳಿತಾಯ ಯುಗದ ಬಳುವಳಿಯೇ ಸರಿ.
ತತ್‌ಕ್ಷಣದ ವಾಸ್ತವಗಳಿಗೆ ಪ್ರತಿಕ್ರಿಯಿಸುವ ರಾಜಕಾರಣದ ಕೆಲವು ಸ್ಯಾಂಪಲ್ಲುಗಳು ಇಲ್ಲಿವೆ; ಪಶ್ಚಿಮ ಘಟ್ಟದ ಎತ್ತಿನಹೊಳೆಯನ್ನು ಪಶ್ಚಿಮ ದಿಕ್ಕಿನಿಂದ ಪೂರ್ವ ದಿಕ್ಕಿಗೆ ತಿರುಗಿಸಿ, ನೂರಾರು ಅಡಿಗಳಷ್ಟು ಏರಿಯನ್ನು ಹತ್ತಿಸಿ, ಹಲವಾರು ಹೈವೆಗಳನ್ನು ದಾಟಿಸಿ, ಚಿಕ್ಕಬಳ್ಳಾಪುರಕ್ಕೆ ನೀರು ಉಣಿಸುವ ಹೆಸರಿನಲ್ಲಿ, ಬೆಂಗಳೂರೆಂಬ ಮಹಾನಗರಕ್ಕೆ ಮತ್ತಷ್ಟು ನೀರುಣಿಸಲು ಹೊರಟಿದ್ದೇವೆ. ವಿದ್ಯುತ್ ಮಗ್ಗಗಳನ್ನು ಬಳಸಿ ನಕಲಿ ಇಳಕಲ್ಲು ಸೀರೆ, ನಕಲಿ ಮೊಳಕಾಲ್ಮೂರು ಸೀರೆ, ನಕಲಿ ಕೊಳ್ಳೇಗಾಲದ ಸೀರೆ, ನಕಲಿ ಮೇಲುಕೋಟೆ ಪಂಚೆಗಳನ್ನು ನೇಯಿಸಹೊರಟಿದ್ದೇವೆ ಹಾಗೂ ಈ ಯೋಜನೆಗೆ ನೇಕಾರ ನಿರುದ್ಯೋಗ ನಿವಾರಣೆಯ ಹೆಸರು ನೀಡಿದ್ದೇವೆ.
ಪಶ್ಚಿಮ ಘಟ್ಟಗಳಲ್ಲಿ ಕೈಗಾರಿಕೆಗಳು, ರೆಸಾರ್ಟುಗಳು, ಉಷ್ಣ ವಿದ್ಯುತ್ ಸ್ಥಾವರಗಳು, ಅಣು ವಿದ್ಯುತ್ ಸ್ಥಾವರಗಳು, ಮಹಾರಸ್ತೆಗಳು, ಮಹಾನ್ ರೈಲು ಮಾರ್ಗಗಳನ್ನು ನಿರ್ಮಿಸುವ ಸಲುವಾಗಿ ಕಾಡಿನ ನಾಶಕ್ಕೆ ಕೈ ಹಚ್ಚಿದ್ದೇವೆ. ಹಾಗೂ ಈ ಯೋಜನೆಯ ಸಲುವಾಗಿ ಮಲೆನಾಡಿನ ರೈತರನ್ನು ಪರಿಸರವಾದಿಗಳ ವಿರುದ್ಧ ಛೂ ಬಿಟ್ಟಿದ್ದೇವೆ… ಇತ್ಯಾದಿ. ಹೀಗೆ ಮಾಡುತ್ತಿರುವವರು ಕಳ್ಳರು, ಖದೀಮರೇನಲ್ಲ. ನಾವು ತುಂಬ ಗೌರವಿಸುವ ಹಲವಾರು ಜನಪರ ರಾಜಕಾರಣಿಗಳು ಈ ಕೆಲಸಕ್ಕಾಗಿ ಟೊಂಕ ಕಟ್ಟಿ ನಿಂತಿದ್ದಾರೆ. ಅವರಲ್ಲಿ ಕೆಲವರಂತೂ ಶುದ್ಧಹಸ್ತರು ಹಾಗೂ ಸಮಾಜವಾದಿ ಹಿನ್ನೆಲೆಯಿಂದ ಬಂದವರು. ಅದಕ್ಕೇ ನಾನಂದಿದ್ದು; ಸುಸ್ಥಿರತೆಗೆ ವಿರೋಧವು ಪ್ರಜಾಪ್ರಭುತ್ವದಿಂದಲೇ ಬಂದಿದೆ ಎಂದು.
ಆದರೆ, ಈಗ ಎಲ್ಲವೂ ಬದಲಾಗಬೇಕಿದೆ. ನಿಸರ್ಗವು ಮಾನವನ ಮೇಲೆ ನೈಸರ್ಗಿಕ ಬಲವಂತ ಹೇರುತ್ತಿದೆ. ಬದಲಾಗು ಇಲ್ಲವೇ ನಾಶವಾಗು ಎಂಬ ಸ್ಪಷ್ಟ ಸಂದೇಶವನ್ನದು ನೀಡುತ್ತಿದೆ. ದೇವರು ಹೇರುತ್ತಿರುವ ಬಲವಂತವಿದು ಎಂದು ಆಸ್ತಿಕರೂ, ನಿಸರ್ಗ ಹೇರುತ್ತಿರುವ ಬಲವಂತವೆಂದು ವಿಜ್ಞಾನಿಗಳೂ ಹೇಳಬಹುದಾದ ಒಂದೇ ಸತ್ಯವಿದು. ಅರ್ಥಾತ್ ಪರಸ್ಪರ ವಿರೋಧಿಗಳಾಗಿದ್ದ ದೇವರು ಹಾಗೂ ವಿಜ್ಞಾನವು ಈಗ ಒಂದೇ ಪಕ್ಕಕ್ಕೆ ಬಂದು ಸಂಯುಕ್ತ ವೇದಿಕೆ ಮಾಡಿಕೊಂಡಿವೆ. ಹಾಲಿ ಆಡಳಿತ ಪಕ್ಷದಲ್ಲಿ ಉಳಿದಿರುವುದು ಮಾರುಕಟ್ಟೆ ಮಾತ್ರ. ಜೊತೆಗೆ, ತಂತ್ರಜ್ಞಾನವೆಂಬ ಒಂದು ಸಣ್ಣ ಪಾರ್ಟಿ.
ನಾನು ವೈಜ್ಞಾನಿಕವಾಗಿ ಬದುಕುತ್ತೇನೆ, ಸುಲಭಜೀವಿಯೂ ಆಗಿರುತ್ತೇನೆ ಎಂದು ಇನ್ನು ಮುಂದೆ ಎನ್ನಲಿಕ್ಕಾಗದು. ನಾನು ಹಿಂದುತ್ವವಾದಿಯೂ ಆಗಿರುತ್ತೇನೆ, ಆಧುನಿಕ ಯಂತ್ರಗಳ ಮಾರಾಟಗಾರನೂ ಆಗಿರುತ್ತೇನೆ ಎನ್ನಲಿಕ್ಕಾಗದು. ಅಥವಾ ನಿಮ್ಮದು ಸಮಾನತೆಯ ಆಶಯವಾದರೆ, ನೀವು ಸಹಕಾರ ತತ್ವದಲ್ಲಿ ನಂಬಿಕೆ ಉಳ್ಳವರಾದರೆ ಅಥವಾ ನೀವು ಬೌದ್ಧ ಧರ್ಮದಲ್ಲಿ ನಂಬಿಕೆ ಉಳ್ಳವರಾಗಿ, ಪರಸ್ಪರಾವಲಂಬನೆಯ ತತ್ವ ಪ್ರತಿಪಾದಿಸುವವರಾದರೆ, ಮಾರುಕಟ್ಟೆ ಪ್ರಣೀತ ಬಂಡವಾಳಶಾಹಿ ವ್ಯವಸ್ಥೆಯನ್ನು ಧಿಕ್ಕರಿಸದೆ ನಿಮಗೆ ಬೇರೆ ದಾರಿಯಿಲ್ಲ. ನೀವು ಏನೇ ಆಗಿರಿ, ಮಾನವರಾಗಿ ಉಳಿಯಬೇಕೆಂದು ಬಯಸುವವರು ನೀವಾದರೆ, ಶ್ರಮಸಹಿತ ಸರಳ ಬದುಕಿಗೆ ಮಾರ್ಪಡದೆ ನಿಮಗೆ ಬೇರೆ ದಾರಿಯಿಲ್ಲ.
ಇಲ್ಲಿಯವರೆಗೆ ನಾವು ಗಾಂಧೀಜಿಯವರನ್ನು ಸಂಕೇತ ಮಾಡಿದೆವು. ಖಾದಿ, ಕೈಮಗ್ಗ, ಗ್ರಾಮೋದ್ಯೋಗ, ನಿಸರ್ಗ ಚಿಕಿತ್ಸೆ, ಮಾತೃಭಾಷೆ ಎಲ್ಲವನ್ನೂ ಪೂಜ್ಯ ಸಂಕೇತವಾಗಿಸಿದೆವು. ಜನಪದ ನೃತ್ಯಗಳನ್ನು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರದರ್ಶಿಸಿ ಖುಷಿಪಟ್ಟೆವು. ಗುಡ್ಡಗಾಡು ಜನರಂತೆ ವೇಷ ತೊಟ್ಟು ಪಂಚತಾರಾ ಹೋಟೆಲುಗಳ ಮುಂದೆ ಕುಣಿದು ಶ್ರೀಮಂತ ಗ್ರಾಹಕರ ಮನರಂಜಿಸಿದೆವು. ಇನ್ನು ಮುಂದೆ ಅದು ಸಾಧ್ಯವಾಗದು. ನಿಜದ ಜನಪದ, ನಿಜದ ಗುಡ್ಡಗಾಡು ಜನತೆ, ನಿಜದ ಶ್ರಮಜೀವಿಗಳು, ನಿಜದ ಕೈಮಗ್ಗಗಳ ಕಾಲ ಬರಲಿದೆ. ಇಲ್ಲವೇ ಸಾಮೂಹಿಕ ಸ್ಮಶಾನಗಳ ಕಾಲ ಬರಲಿದೆ.
ಆದರೆ, ಈಗಲೂ ಕಾಲ ಮಿಂಚಿಲ್ಲ. ಸಂತೋಷದಿಂದ ಹಾಗೂ ಸ್ವಂತ ಆಯ್ಕೆಯಿಂದ ನಮ್ಮ ನಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಲಿಕ್ಕೆ ಈಗಲೂ ಕಾಲ ಮಿಂಚಿಲ್ಲ. ಹಾಗೆಂದೇ ನಾವು ಕೆಲವರು ಒಂದು ಸಂತೋಷದಾಯಕ ಚಳವಳಿಗೆ ಕರೆ ನೀಡಿದ್ದೇವೆ. ಅದನ್ನು ‘ಬದನವಾಳು ಸತ್ಯಾಗ್ರಹ’ ಎಂದು ಕರೆದಿದ್ದೇವೆ. ಸುಸ್ಥಿರ ಬದುಕಿನಲ್ಲಿ ನಂಬಿಕೆ ಇಟ್ಟಿರುವ ಎಲ್ಲರೂ ಸೇರಿ ಸತ್ಯಾಗ್ರಹ ನಡೆಸುವವರಿದ್ದೇವೆ.
ನಂಜನಗೂಡು ತಾಲ್ಲೂಕಿನ ಬದನವಾಳಿನ ಖಾದಿ ಹಾಗೂ ಗ್ರಾಮೋದ್ಯೋಗ ಕೇಂದ್ರವೆಂಬುದು ಈಗ ಹರಪ್ಪ ಮೊಹೆಂಜೊದಾರೊ ಉತ್ಖನನದಂತೆ ಕಾಣುತ್ತದೆ. ಮುರಿದ ಕಟ್ಟಡಗಳು, ಜಾರುತ್ತಿರುವ ನಾಡ ಹಂಚುಗಳು, ಕುರುಚಲು ಪೊದೆ ಹಾಗೂ ಬಂಜರು ಭೂಮಿ. ಗಟ್ಟಿಯಿರುವ ಒಂದು ಶೆಡ್ಡಿನಲ್ಲಿ, ಹತ್ತಾರು ಮುದುಕಿಯರು ಖಾದಿ ನೂಲು ಸುತ್ತುತ್ತ ಕುಳಿತಿರುತ್ತಾರೆ. ಒಂದೆರಡು ಮಗ್ಗಗಳು ಲಟಾಪಟಾ ಸದ್ದು ಮಾಡುತ್ತಿರುತ್ತವೆ. ಎಣ್ಣೆಯ ಗಾಣ ಜಂಗು ತಿನ್ನುತ್ತಿದೆ, ಬಣ್ಣಗಾರಿಕೆಯ ತೊಟ್ಟಿ ಬಿರುಕು ಬಿಟ್ಟಿದೆ, ಪೇಪರ್ ಘಟಕ ಸ್ತಬ್ಧವಾಗಿದೆ, ಬೆಂಕಿಪೊಟ್ಟಣ, ಊದುಬತ್ತಿ ತಯಾರಿಕೆ ಎಲ್ಲವೂ ಸ್ತಬ್ಧವಾಗಿವೆ. ಒಂದು ಕಾಲದಲ್ಲಿ ನೂರಾರು ಜನರಿಗೆ ಉದ್ಯೋಗ ನೀಡುತ್ತಿದ್ದ ಕೇಂದ್ರವಿದು. ಇಂತಹ ಕೇಂದ್ರಗಳು ಈ ದೇಶದಲ್ಲಿ ಸಾವಿರಾರು ಇದ್ದುವಂತೆ. ಈಗ ಸಾಯಲಿಕ್ಕೆ ಬಂದಿರುವ ಇವುಗಳ ಕಡೆಗೆ ಭೂಕಳ್ಳರು ಹದ್ದುಗಳಂತೆ ಹೊಂಚುತ್ತಿದ್ದಾರೆ.
ನಮಗೆ ಅಧಿಕಾರವಿಲ್ಲ, ಕಾನೂನಿನ ಶಕ್ತಿಯಿಲ್ಲ. ಹಾಗಾಗಿ ಒಂದು ನಿರ್ಧಾರ ಮಾಡಿದ್ದೇವೆ. ಹೋಗಿ ಜಂಡಾ ಊರಿ ಬಿಡುವುದು. ಜನರ ಚಿತ್ತ ಅತ್ತ ತಿರುಗುವವರೆಗೆ ಅಲ್ಲಿಯೇ ವಿನಾಶದ ನಡುವೆ ಬದುಕುವುದು, ಶ್ರಮದಾನ ಮಾಡುವುದು. ತೀರ ಅನಿವಾರ್ಯವಾದರೆ ಭಿಕ್ಷೆ ಬೇಡುವುದು.
ಏಪ್ರಿಲ್ 19ರಂದು ಈ ಗ್ರಾಮೋದ್ಯೋಗ ಕೇಂದ್ರದ ಪವಿತ್ರ ಭೂಮಿಯಲ್ಲಿ ನಾವೆಲ್ಲರೂ ಸೇರಿ ಸುಸ್ಥಿರ ಬದುಕಿನ ಸಮಾವೇಶ ನಡೆಸುವವರಿದ್ದೇವೆ. ಕೆಲವು ಸ್ನೇಹಿತರು ಜಾಥಾ ತೆಗೆಯುತ್ತಿದ್ದಾರೆ. ಕೆಲವರು ಸೈಕಲ್ ಮೇಲೆ, ಕೆಲವರು ಖಾಸಗಿ ವಾಹನಗಳಲ್ಲಿ ಅಲ್ಲಿಗೆ ಬರಲಿದ್ದಾರೆ. ಅದಕ್ಕೂ ಮೊದಲು ಕರ್ನಾಟಕದಾದ್ಯಂತ ತಾವಿರುವಲ್ಲೆಲ್ಲ, ತಮಗೆ ತೋಚಿದ ರೀತಿಯಲ್ಲಿ, ಸುಸ್ಥಿರತೆಯ ಸಂಘಟನೆ ಮಾಡುವವರಿದ್ದೇವೆ.
ಗಾಂಧೀಜಿಯವರು ಈಗಿಲ್ಲ. ಆದರೆ ಅವರ ನಾಯಕತ್ವವು ಈಗಲೂ ಹಸಿರಾಗಿದೆ. ಶ್ರಮಸಹಿತ ಸರಳ ಬದುಕು, ಸುಂದರ ಬದುಕು ಎಂಬ ಅರಿವು ಅಲ್ಲಲ್ಲಿ ಮೂಡತೊಡಗಿದೆ. ನೀವೂ ಬನ್ನಿ, ಸುಸ್ಥಿರ ಬದುಕಿನ ನಿರ್ಮಾಣದಲ್ಲಿ ಕೈಜೋಡಿಸಿ.
[ಕೃಪೆ -ಪ್ರಜಾವಾಣಿ 28.3.2015]