ಸುದೇಶ್ ದೊಡ್ಡಪಾಳ್ಯ ಅವರ ಪ್ರಜಾವಾಣಿ ಅಂಕಣ ಈಶಾನ್ಯ ದಿಕ್ಕಿನಿಂದ

ನನ್ನ ಪ್ರಾರ್ಥನೆ ನಿಮ್ಮದೂ ಆಗಲಿ

ಒಂದು ವೇಳೆ ಸಮಾಜ ಕಲ್ಯಾಣ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆಗಳ ವಿದ್ಯಾರ್ಥಿ ನಿಲಯಗಳು ಇಲ್ಲದೇ ಹೋಗಿದ್ದರೆ ಈ ವರ್ಗದ ಮಕ್ಕಳ ಶಿಕ್ಷಣದ ಕಥೆ ಖಂಡಿತ ದುಃಖಾಂತ್ಯವಾಗುತಿತ್ತು. ದೂರದೃಷ್ಟಿಯುಳ್ಳ ಮುತ್ಸದ್ದಿ ರಾಜಕಾರಣಿಗಳಿಗೆ ತುಂಬಾ ಹಿಂದೆಯೇ ಇವುಗಳ ಮಹತ್ವ ಅರಿವಿಗೆ ಬಂದಿರಬೇಕು. ಆದ್ದರಿಂದ ಸರ್ಕಾರ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಿದೆ.

ಸರ್ಕಾರದ ಬಹುತೇಕ ಯೋಜನೆಗಳು, ಕಾರ್ಯಕ್ರಮಗಳ ಉದ್ದೇಶ  ಉದಾತ್ತವಾಗಿಯೇ ಇರುತ್ತದೆ. ಆದರೆ ನಿಜವಾದ ಸವಾಲು ಇರುವುದು ಅನುಷ್ಠಾನದಲ್ಲಿ. ಮೇಲೆ ಪ್ರಸ್ತಾಪಿಸಿದ ಇಲಾಖೆಗಳ ವಿದ್ಯಾರ್ಥಿ ನಿಲಯಗಳ ಸ್ಥಿತಿಗತಿಯನ್ನು ನೋಡಿದರೆ ‘ಅಹಿಂದ’ ಮಕ್ಕಳು ಮತ್ತೊಮ್ಮೆ ‘ಸರ್ಕಾರಿ ವ್ಯವಸ್ಥೆ’ಯಿಂದ ಶೋಷಣೆ ಮತ್ತು ಅವಮಾನಕ್ಕೆ ಒಳಗಾಗುತ್ತಿವೆ ಎಂದು ಅನಿಸುತ್ತದೆ.

ಶಿಥಿಲಗೊಂಡಿರುವ ಕಟ್ಟಡಗಳು, ಮುರಿದ ಕಿಟಕಿ, ಬಾಗಿಲುಗಳು, ಮುಟ್ಟಿದರೆ ಶಾಕ್‌ ಕೊಡುವ ಗೋಡೆಗಳು, ಕಾಂಪೌಂಡ್‌ ಇಲ್ಲದ ಮುಕ್ತವಾದ ಆವರಣ ಕಾಣಸಿಗುತ್ತವೆ. ಕೊಠಡಿ ಒಳಗೆ ಮಳೆಗೆ ಒದ್ದೆಯಾಗುತ್ತಾ, ಚಳಿಗೆ ನಡುಗುತ್ತಾ, ಬಿಸಿಲಿಗೆ ಬೆವರುತ್ತಾ, ಸೊಳ್ಳೆಗಳಿಗೆ ಅಂಜುತ್ತಾ ಅನ್ಯ ಮಾರ್ಗವಿಲ್ಲದೆ ವಿದ್ಯಾರ್ಥಿಗಳು ಇರಬೇಕು. ಇಲ್ಲಿನ ಶೌಚಾಲಯ, ಸ್ನಾನಗೃಹಗಳು ನೆಟ್ಟಗೆ ಇರುವುದಿಲ್ಲ. ಕುಡಿಯುವ ನೀರು ಗಲೀಜು. ವಾಟರ್‌ ಫಿಲ್ಟರ್‌ಗಳು ಕೆಟ್ಟಿರುತ್ತವೆ. ಹಲವು ಕಡೆ ಮಂಚ, ಹಾಸಿಗೆ, ದಿಂಬು, ಹೊದಿಕೆ ಇರುವುದಿಲ್ಲ. ಕೆಲವೊಂದು ಕಡೆ ವಿದ್ಯಾರ್ಥಿಗಳು ಗೋದಾಮಿನಂಥ ಕಟ್ಟಡದಲ್ಲಿ ಸಾಲಾಗಿ ನೆಲದ ಮೇಲೆ ಮಲಗಬೇಕು. ಗ್ರಂಥಾಲಯ, ಕಂಪ್ಯೂಟರ್‌, ಆರೋಗ್ಯ ಸೇವೆ ಬಿಲ್‌ಕುಲ್‌ ಇಲ್ಲ.

ಇಲಾಖೆ ನೀಡುವ ‘ಮೆನು’ ರೀತಿಯಲ್ಲಿ ತಿಂಡಿ, ಊಟ ಮಾಡಿದ ನೆನಪು ಇಲ್ಲಿನ ವಿದ್ಯಾರ್ಥಿಗಳಿಗಿಲ್ಲ. ನೀರಿಗೆ ಕಾರಪುಡಿ, ಉಪ್ಪು, ಒಂದೆರಡು ಟೊಮೊಟೊ, ಈರುಳ್ಳಿ ಹಾಕಿ ಕುದಿಸಿದರೆ ಅದೇ ಸಾಂಬರ್‌. ಪಾತ್ರೆಗೆ ಪಾತಾಳ ಗರಡಿ ಹಾಕಿ ಹುಡುಕಿದರೂ ತರಕಾರಿ ಸಿಗುವುದು ಕಷ್ಟ. ಚಪಾತಿ ಚರ್ಮಕ್ಕೆ ಸಮ. ಮೊಟ್ಟೆ, ಬಾಳೆಹಣ್ಣು, ಸಿಹಿ ಸಿಕ್ಕರೆ ಅಂದೇ ಇವರಿಗೆ ಹಬ್ಬ. ವಿದ್ಯಾರ್ಥಿಗಳು ಪ್ರಶ್ನಿಸಿದರೆ ನಿಲಯಪಾಲಕರಿಂದ ‘ಬೆದರಿಕೆ’ ಗ್ಯಾರಂಟಿ. ಹೆಚ್ಚಿನ ನಿಲಯಪಾಲಕರು ‘ಅತಿಥಿ’ಗಳಂತೆ ಬಂದು ಹೋಗುವುದು  ‘ಬಹಿರಂಗ ಸತ್ಯ’.

ಬಾಲಕಿಯರ ನಿಲಯದಲ್ಲೂ ಶೌಚಾಲಯಗಳ ಕೊರತೆ. ಆದ್ದರಿಂದ ವಿದ್ಯಾರ್ಥಿನಿಯರು ಬೆಳಕು ಹರಿಯುವ ಮುನ್ನ ಇಲ್ಲವೇ ಕತ್ತಲಾದ ಮೇಲೆ ಬಯಲಿಗೆ ಹೋಗುವುದೂ ಇದೆ. ಶೌಚಾಲಯದ ಸಮಸ್ಯೆಯಿಂದಾಗಿಯೇ ಕೆಲವು ವಿದ್ಯಾರ್ಥಿನಿಯರು ಕಡಿಮೆ ಊಟ ಮಾಡುವುದು, ಹಗಲು ವೇಳೆ ಶೌಚಕ್ಕೆ ಹೋಗಲೂ ಆಗದೆ ಹೊಟ್ಟೆನೋವಿನಿಂದ ಪರಿತಪಿಸುವುದನ್ನು ಹೇಗೆ ತಾನೆ ಹೇಳಿಕೊಳ್ಳಬೇಕು?

ಕಲಬುರ್ಗಿ ಜಿಲ್ಲೆಯಲ್ಲಿರುವ ಬಾಲಕಿಯರ ನಿಲಯವೊಂದರಲ್ಲಿನ ಅವ್ಯವಸ್ಥೆ ವಿರುದ್ಧ ವಿದ್ಯಾರ್ಥಿನಿಯರು ಪ್ರತಿಭಟನೆ ಮಾಡಿದರು. ಆಗ ವಿದ್ಯಾರ್ಥಿ ಮುಖಂಡರೊಬ್ಬರು ಬಿಸಿಎಂ ಇಲಾಖೆಯ ಅಧಿಕಾರಿಗೆ ಕರೆ ಮಾಡಿ ವಿಷಯ ತಿಳಿಸಿದರು. ‘ಆ ಊರಲ್ಲಿ ನಮ್ಮ ಇಲಾಖೆಯ ಬಾಲಕಿಯರ ನಿಲಯ ಇದೆಯೇ?’ ಎಂದು ಆ ಅಧಿಕಾರಿ ಕೇಳಿದರು! ನಂತರ ನಿಲಯದ ಪಾಲಕಿಯನ್ನು ತರಾಟೆಗೆ ತೆಗೆದುಕೊಂಡರು. ಆಕೆ ‘ಸಾಹೇಬ್ರ, ಬಂದು ನಿಮ್ಮನ್ನು ಕಾಣುತ್ತೇನೆ’ ಎಂದರು. ಅಲ್ಲಿಗೆ ಎಲ್ಲವೂ ತಣ್ಣಗಾಯಿತು.

ಒಂದು ವೇಳೆ ಅಧಿಕಾರಿಗಳು ಖಡಕ್‌ ಇದ್ದರೆ ನಿಲಯಪಾಲಕರು ಸ್ಥಳೀಯ ರಾಜಕಾರಣಿಗಳನ್ನು ಬಳಸಿಕೊಂಡು ಎಲ್ಲವನ್ನೂ ‘ಸರಿ’ ಮಾಡಿಕೊಂಡು ಬಿಡುತ್ತಾರೆ. ‘ಮಾಮೂಲಿ’ ವ್ಯವಸ್ಥೆಯಿಂದಾಗಿಯೇ ವಿದ್ಯಾರ್ಥಿನಿಲಯಗಳು ದುಃಸ್ಥಿತಿಯಲ್ಲಿವೆ.

ಈ ರೀತಿ ವಿದ್ಯಾರ್ಥಿ ನಿಲಯಗಳ ವ್ಯವಸ್ಥೆ ಇಲ್ಲದೇ ಹೋಗಿದ್ದರೆ ರಾಜ್ಯದ ಬಹುತೇಕ ‘ಅಹಿಂದ’ ಮಕ್ಕಳು ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರಾಗುತ್ತಿದ್ದರು. ಆಮೇಲೆ ಸಮಾಜದ ಶ್ರೇಣೀಕೃತ ವ್ಯವಸ್ಥೆಯಲ್ಲಿ ಕುಲಕಸುಬುಗಳನ್ನು ನೆಚ್ಚಿಕೊಳ್ಳಬೇಕಿತ್ತು. ತಮ್ಮ ಹಕ್ಕುಗಳು ಏನು ಎನ್ನುವುದು ತಿಳಿಯದೆ ‘ಪ್ರಬಲರು’ ಹೇಳಿದ್ದನ್ನು ಕೇಳಿಕೊಂಡು ಇರಬೇಕಿತ್ತು. ಈಗ ‘ಅಹಿಂದ’ ವರ್ಗ ಧೈರ್ಯವಾಗಿ ಅನ್ಯಾಯದ ವಿರುದ್ಧ ಸಂಘಟಿತರಾಗಿ ಧ್ವನಿ ಎತ್ತುತ್ತಿದ್ದರೆ ಇದಕ್ಕೆ ಕಾರಣ ಶಿಕ್ಷಣ. ಈ ಶಿಕ್ಷಣ ಬಹುತೇಕರಿಗೆ ಸಿಕ್ಕಿದ್ದು ಇದೇ ವಿದ್ಯಾರ್ಥಿನಿಲಯಗಳಿಂದ ಅಲ್ಲವೆ?

ಶೋಷಿತರ ಬಗ್ಗೆ ಸಮಾಜ ಸಹಾನುಭೂತಿ ಹೊಂದಿರಬೇಕು. ಏಕೆಂದರೆ ಇವರು ಸಾವಿರಾರು ವರ್ಷಗಳಿಂದ ಅನ್ಯಾಯ ಮತ್ತು ತುಳಿತಕ್ಕೆ ಒಳಗಾದವರು. ಒಂದು ಹಂತ ತಲುಪುವ ತನಕ ಇವರ ಬಗ್ಗೆ ಸಮಾಜಕ್ಕೆ ಕಾಳಜಿ ಇರಬೇಕಾಗುತ್ತದೆ.

ಹಳ್ಳಿಯ ಜಮೀನ್ದಾರ ತನ್ನ ಮನೆಯಲ್ಲಿ ಜೀತಕ್ಕಿದ್ದ ವ್ಯಕ್ತಿಯ ಮಗನನ್ನೂ ಸಹ ಜೀತಕ್ಕೆ ಇರಿಸುವಂತೆ ಒತ್ತಾಯಿಸದೇ, ಅಂಥ ವಾತಾವರಣವನ್ನು ಸೃಷ್ಟಿಸದೇ, ತನ್ನ ಮಗನ ಜೊತೆ ಆತನ ಮಗನನ್ನೂ ಶಾಲೆಗೆ ಹೋಗುವಂತೆ ಮಾಡಿದ್ದರೆ ನಮ್ಮಲ್ಲಿ ಎಲ್ಲಿಯೋ ಸಮಸಮಾಜದ ಜೀವಸೆಲೆ ಇನ್ನೂ ಬತ್ತಿಲ್ಲ ಎಂದುಕೊಳ್ಳಬಹುದಿತ್ತು. ಆದರೆ ಅಸಮಾನತೆಯನ್ನು ಪೋಷಿಸಿಕೊಂಡು ಬಂದಿರುವ ಸಮಾಜದ ನಮ್ಮದು. ಇದರ ಹಿಂದಿರುವ ಮನಸ್ಥಿತಿಯಾದರೂ ಎಂಥದ್ದು!

‘ಅಹಿಂದ’ ವರ್ಗದವರ ಹಸಿವು, ಅವಮಾನ, ನೋವು, ಸಂಕಟಗಳು ಏನು ಎನ್ನುವುದು ಗೊತ್ತಿಲ್ಲದವರು ‘ಮೀಸಲಾತಿ’ ವಿರುದ್ಧ ಮಾತನಾಡುತ್ತಿರುತ್ತಾರೆ.

ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ತಮ್ಮ ಪ್ರವಾಸದ ವೇಳೆ ವಿದ್ಯಾರ್ಥಿನಿಲಯಕ್ಕೆ ದಿಢೀರ್‌ ಭೇಟಿ ಕೊಟ್ಟು ಪರಿಶೀಲಿಸಿ, ವಾಸ್ತವ್ಯ ಮಾಡಿದ್ದರು. ಆದರೂ ಪರಿಸ್ಥಿತಿ ಕೊಂಚವೂ ಸುಧಾರಣೆಯಾಗಿಲ್ಲ.

ಇನ್ನು ಆಯಾ ವ್ಯಾಪ್ತಿಯ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರು ವಿದ್ಯಾರ್ಥಿ ನಿಲಯಗಳಿಗೆ ಆಗಾಗ ಭೇಟಿ ಕೊಡುತ್ತಿದ್ದರೆ ನಿಲಯಪಾಲಕರಿಗೆ ಅಂಜಿಕೆಯಾದರೂ ಇರುತ್ತದೆ. ಆದರೆ ಅವರ ‘ರಕ್ಷಕ’ರೇ ಇವರು ಎನ್ನುವಂತಾದರೆ?

ಅಪರಾಧ ಮಾಡಿ ಜೈಲು ಸೇರಿರುವ ಕೈದಿಗಳ ದಿನದ ಆಹಾರ ಭತ್ಯೆ 73 ರೂಪಾಯಿಗಳು. ‘ಸಮಾಜದ ಭವಿಷ್ಯ’ದಂತಿರುವ ವಿದ್ಯಾರ್ಥಿಗಳ ಆಹಾರ ಭತ್ಯೆ 33 ರಿಂದ 36 ರೂಪಾಯಿಗಳು!  ಸರ್ಕಾರ ಕೂಡ ಈ ಕುರಿತು ಗಂಭಿರವಾಗಿ ಯೋಚಿಸಬೇಕು.

ಸುರೇಶ ದಲಿತರ ಹುಡುಗ. ಪ್ರಾಥಮಿಕ ಹಂತ ಮುಗಿದ ಬಳಿಕ ದೂರದ ಊರಿಗೆ ಕಳುಹಿಸಿ ಓದಿಸುವಷ್ಟು ಶಕ್ತಿ ಈತನ ಕುಟುಂಬಕ್ಕೆ ಇರಲಿಲ್ಲ. ಆಗ ಪರಿಚಿತರು ಅಂಬೇಡ್ಕರ್‌ ವಿದ್ಯಾರ್ಥಿ ನಿಲಯ ಕುರಿತು ತಿಳಿಸಿದರು. ಐದನೇ ತರಗತಿಗೆ ಈತ ವಿದ್ಯಾರ್ಥಿ ನಿಲಯಕ್ಕೆ ದಾಖಲಾದನು. ಅದೇ ಹುಡುಗ ಈಗ ಅಂತಿಮ ಪದವಿಯಲ್ಲಿದ್ದಾನೆ. ‘ಹಾಸ್ಟೆಲ್‌ ವ್ಯವಸ್ಥೆ ಇಲ್ಲದೇ ಹೋಗಿದ್ದರೆ ನಮ್ಮಂಥವರು ಕಾಲೇಜು ಮುಖ ನೋಡಲು ಸಾಧ್ಯವಾಗುತ್ತಲೇ ಇರಲಿಲ್ಲ’ ಎನ್ನುತ್ತಾನೆ ಸುರೇಶ.

ಇಲ್ಲಿ ಸಚಿವರಿಗೊಂದು ಸಲಹೆ. ಇಲಾಖೆಯು ಇದಕ್ಕಾಗಿ ಪ್ರತ್ಯೇಕವಾಗಿ ‘ವಾಟ್ಸ್‌ಆ್ಯಪ್‌ ಸಂಖ್ಯೆ’ಯನ್ನು ವಿದ್ಯಾರ್ಥಿಗಳಿಗೆ ಕೊಡಬೇಕು. ವಿದ್ಯಾರ್ಥಿನಿಲಯದಲ್ಲಿನ ಅವ್ಯವಸ್ಥೆ ಕುರಿತು ಈ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬೇಕು. ತತ್‌ಕ್ಷಣವೇ ಅವುಗಳನ್ನು ಸರಿಪಡಿಸಬೇಕು.

ಇಷ್ಟು ಮಾಡಿದರೆ ವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆ ಆಗುತ್ತದೆ. ಇವೆಲ್ಲ ‘ದಂಡ’ದ ಮೂಲಕ ಆಗುವಂತಹದ್ದು.
ಇದಕ್ಕಿಂತ ಮುಖ್ಯವಾಗಿ ಸಚಿವರು, ಅಧಿಕಾರಿಗಳು, ಸಿಬ್ಬಂದಿಗಳು, ರಾಜಕಾರಣಿಗಳು ವಿದ್ಯಾರ್ಥಿನಿಲಯಗಳಲ್ಲಿರುವ ಮಕ್ಕಳ ಜಾಗದಲ್ಲಿ ತಮ್ಮ ಮಕ್ಕಳನ್ನು ಕಲ್ಪಿಸಿಕೊಂಡರೂ ಸಾಕು; ಸಮಸ್ಯೆಗಳು ಸರಸರನೆ ಪರಿಹಾರವಾಗುತ್ತವೆ. ಇದು ನನ್ನ ಪ್ರಾರ್ಥನೆ.

10/07/2015