ಸಹಕಾರೀ ರಂಗದ ಕೀಲು ಮುರಿದ ಮೋದಿ- ಕೆ.ಪಿ.ಸುರೇಶ

cooperative

ಪ್ರಧಾನಿ ಮೋದಿಯವರು ನೋಟುಗಳ ರದ್ಧತಿ ಜೊತೆಗೆ, ಅದರ ವಿನಿಮಯ, ಠೇವಣಿ, ಹಿಂಪಡೆಯುವ ಬಗ್ಗೆ ಕೈಗೊಂಡ ಕಠಿಣ ನಿರ್ಬಂಧಗಳು ಮೇಲ್ನೋಟಕ್ಕೆ ಕಪ್ಪುಹಣದ ಉಸಿರು ಗಟ್ಟಿಸುವಂತೆ ಭಾಸವಾದರೂ ಅದು ನಮ್ಮ ಅನೌಪಚಾರಿಕ  ಆರ್ಥಿಕತೆಯನ್ನು ಸಂಕಷ್ಟಕ್ಕೆ ಈಡು ಮಾಡಿರುವ ಪುರಾವೆ ದಿನೇ ದಿನೇ ಗೋಚರಿಸುತ್ತಿದೆ.
ಈ ಅನೌಪಚಾರಿಕ ಆರ್ಥಿಕತೆ ನಮ್ಮ ಕೃಷಿ ಲೋಕವನ್ನು ನಡೆಸುತ್ತಾ ಬಂದಿದೆ. ಕಪ್ಪುಹಣದ ಆಸೆಯಿಂದ ಈ ಆರ್ಥಿಕ ವಹಿವಾಟು ನಡೆಯುತ್ತಿರುವುದಲ್ಲ.!! ಇದಕ್ಕೆ ಸಾಂಸ್ಥಿಕ ಆರ್ಥಿಕ ವ್ಯವಸ್ಥೆಯ ಬೆಂಬಲವೇ ಇಲ್ಲ! ಕೃಷಿ ಬದುಕಿನ ಬಂಡವಾಳದಿಂದ ಹಿಡಿದು ಮಾರುಕಟ್ಟೆವರೆಗೆ ನಮ್ಮ ಗ್ರಾಮೀಣ ಮಂದಿ ಖಾಸಗಿಯವರ ಮೇಲೆಯೇ ಅವಲಂಬಿತರಾಗಿದ್ದಾರೆ. ಸಾಲವೂ ಮೀಟರ್ ಬಡ್ಡಿಗೆ. ಕೈಗೆ ಬಂದ ಮಾಲೂ ಮೂರು ಕಾಸಿಗೆ.. ಈ ಕಟು ಸತ್ಯ ಸರ್ಕಾರಕ್ಕೆ ಗೊತ್ತಾಗಿ ದಶಕಗಳೇ ಉರುಳಿವೆ. ಸಹಕಾರೀ ಬಂಡವಾಳ ಪೂರೈಕೆ ಮತ್ತು ಮಾರುಕಟ್ಟೆಯನ್ನು ಬಲಪಡಿಸಿದರೆ ಕೃಷಿ ಲೋಕದ ಬಹುಪಾಲು ಪಡಿಪಾಟಲು ಕಡಿಮೆ ಆದೀತು. ಜೊತೆಗೆ ಈ ವ್ಯವಹಾರವೂ ಒಂದು ಔಪಚಾರಿಕ ಆರ್ಥಿಕ ಪರಿಶೀಲನೆ ಮತ್ತು ನಿಗಾಕ್ಕೆ ಒಳಪಡುತ್ತದೆ. ಕಾಲಕಾಲದ ಪರಿಹಾರ ದಾರಿಗಳಿಗೆ ಈ ದಾಖಲೆಗಳ ಸೂಚಿಯೇ ಕೈಮರವಾದೀತು. ಆದರೆ ಸರ್ಕಾರ ಈ ಬಗ್ಗೆ ಗಂಭೀರವಾದ ಪ್ರಯತ್ನ ಮಾಡಿಯೇಇಲ್ಲ. ಸಾದರಪಡಿಸಿದ ಮಾದರಿಗಳೂ ನಾಲ್ಕು ದಿನ ಮಿಂಚಿ ಮರೆಯಾಗಿವೆ.
ಈ ಹಿನ್ನೆಲೆಯಲ್ಲಿ ಮೊನ್ನೆಯ ನೋಟು ರದ್ಧತಿಯ ವಜ್ರಾಯುಧದ ಪ್ರಯೋಗ ಈ ಗ್ರಾಮೀಣ ಆರ್ಥಿಕ ವ್ಯವಹಾರದ ಊರುಗೋಲಾಗಿರುವ; ರೈತರ ಜೀವಧಾತುವಾಗಿರುವ ಸಹಕಾರೀ ರಂಗದ ಮೇಲೆ ಆಗಿರುವ ಪರಿಣಾಮ ನೋಡೋಣ.
ಇತ್ತೀಚೆಗೆ ದಕ್ಷಿಣ ಕನ್ನಡದ ಸಹಕಾರೀ ಬ್ಯಾಂಕುಗಳಲ್ಲಿ 500 ಕೋಟಿ ರೂ.ಗಳ ಕಾಳಧನ ಪತ್ತೆ, ಐಟಿ ಇಲಾಖೆಯಿಂದ ಪರಿಶೀಲನೆ ಎಂಬ ವರದಿಯೂ ಪತ್ರಿಕೆಗಳಲ್ಲಿ ಬಂತು. ಏನಿದು ವಿಚಿತ್ರ ಎಂದು ಬೆನ್ನು ಹತ್ತಿದರೆ, ಮೋದಿ ಸರ್ಕಾರ  ಗಧಾ ಪ್ರಹಾರದ ಏಟಿನ ಪರಿ ಬೆಳಕಿಗೆ ಬಂತು. ನೋಟು ಬದಲಿ ಮಾಡುವುದರಿಂದ ಹಿಡಿದು ಎಲ್ಲಾ ನಿರ್ಬಂಧಗಳಲ್ಲೂ ಕೇಂದ್ರ ಸರ್ಕಾರ  ಈ ಸಹಕಾರೀ ರಂಗವನ್ನು ಖಾಸಗಿ ವ್ಯಕ್ತಿಯಂತೆ ಪರಿಗಣಿಸಿದೆ. ನಿತ್ಯದಂತೆ ವ್ಯವಹಾರ ಮಾಡುತ್ತಿದ್ದ ಈ ಸಂಘಗಳಲ್ಲಿ ಜಮೆಯಾದ (ಹಳೆಯ) ನೋಟುಗಳನ್ನು ಸ್ಥಳೀಯ ಬ್ಯಾಂಕು ಮೂಲಕ ಜಿಲ್ಲಾ ಸಹಕಾರೀ ಬ್ಯಾಂಕಿನ ನಮೂದಿತ ಖಾತೆಯಲ್ಲಿ ಸ್ಥಳೀಯ ಸಹಕಾರೀ ಬ್ಯಾಂಕುಗಳು ಜಮೆ ಮಾಡುತ್ತಿದ್ದವು. ಮೊನ್ನೆಯ ನಿರ್ಧಾರದಿಂದ ಎಂಥಾ ಫಜೀತಿ ನಿರ್ಮಾಣವಾಯಿತೆಂದರೆ, ದ.ಕ. ಮತ್ತು ಉಡುಪಿ ಜಿಲ್ಲೆಗಳ ಎಲ್ಲಾ ಸಹಕಾರಿ ಬ್ಯಾಂಕುಗಳೂ ತಮ್ಮಲ್ಲಿದ್ದ ಹಳೇ ನೋಟನ್ನು ಸ್ಥಳೀಯ ರಾಷ್ಟ್ರೀಕೃತ ಬ್ಯಾಂಕು ಶಾಖೆಯಲ್ಲಿ ಜಮೆ ಮಾಡಲಾಗದೇ ಮಂಗಳೂರಿನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿಗೆ ತಲುಪಿಸುವಾಗ ತಾರೀಕು 11 ನವಂಬರ್. ಆಗಲೇ ಇವನ್ನು ಸ್ವೀಕರಿಸಲು ರಾಷ್ಟ್ರೀಕೃತ ಬ್ಯಾಂಕುಗಳು ನಿರಾಕರಿಸಿದ್ದವು. ಸಹಕಾರೀ ಸಂಘಗಳಲ್ಲಿ ನಡೆದ ವಹಿವಾಟಿನಲ್ಲಿ ಸಂಗ್ರಹವಾದ ಮೊತ್ತ ಸುಮಾರು ಐನೂರು ಕೋಟಿ. ಆ ನೋಟುಗಳೆಲ್ಲಾ ಹಾಗೇ ದಾರ ಕಟ್ಟಿಸಿಕೊಂಡು ಕೂತಿವೆ..!!
ಈ ಸಹಕಾರೀ ಬ್ಯಾಂಕುಗಳು ತಮ್ಮ ಠೇವಣಿ ಮತ್ತಿತರ ಸ್ವಂತ ನಿಧಿ ಹೊಂದಿರುತ್ತವೆ. ಹೆಚ್ಚಿನ ಲಾಭಾಂಶ ಸಂಘಗಳಿಗೆ ಬರುವುದು ಈ ಸ್ವಂತ ನಿಧಿಯ ಸಣ್ಣ ಸಾಲ ನೀಡುವಿಕೆಯಲ್ಲಿ. ಈ ನಿಧಿಯನ್ನು ಸ್ಥಳೀಯ ಸಹಕಾರೀ ಬ್ಯಾಂಕು ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಖಾತೆ ತೆರೆದು ನಿರ್ವಹಿಸುತ್ತದೆ. ಪ್ರತಿದಿನದ ವಹಿವಾಟಿಗೆ ಬೇಕಾದ ಅಂದಾಜು ದೊಡ್ಡ ಮೊತ್ತವನ್ನು ಪ್ರತಿದಿನ ತಂದು ಚಿಲ್ಲರೆ ಬಟವಾಡೆ ಮಾಡುವುದು ನಡೆದುಕೊಂಡು ಬಂದ ಕ್ರಮ. ಈಗ ಕೇಂದ್ರ ಸರ್ಕಾರದ ಸೂಚನೆ ಪ್ರಕಾರ ಇದನ್ನೂ ಖಾಸಗೀ ಕರೆಂಟ್ ಅಕೌಂಟ್ ತರ ಪರಿಗಣಿಸುವ ಕಾರಣ ಪುಡಿಗಾಸು ತೆಗೆಯಬಹುದಷ್ಟೇ..!! ಇನ್ನು ಸದಸ್ಯನೊಬ್ಬ ಸಹಕಾರೀ ಬ್ಯಾಂಕಲ್ಲಿ ಇಟ್ಟ ಉಳಿತಾಯದ ಹಣ ತೆಗೆಯಬೇಕೆಂದರೆ, ಆತ ಕೊಟ್ಟ ಚೆಕ್ಕನ್ನು   ಈ ಸ್ಥಳೀಯ ಬ್ಯಾಂಕ್, ಜಿಲ್ಲಾ ಕೇಂದ್ರಕ್ಕೆ ಕಳಿಸಬೇಕು. ಜಿಲ್ಲಾ ಬ್ಯಾಂಕು ಸ್ವಾಮೀ ಬಿಡುಗಡೆ ಮಾಡಿ..! ಎಂಬ ಶರಾದೊಂದಿಗೆ ಈ ಚೆಕ್ಕನ್ನು   ಆ ಸಹಕಾರೀ ಸಂಘ ಖಾತೆ ಹೊಂದಿರುವ ರಾಷ್ಟ್ರೀಕೃತ ಬ್ಯಾಂಕಿಗೆ ಕಳಿಸಬೇಕು. ಆಮೇಲೆ ಆ ಹಣವನ್ನು ರಾಷ್ಟ್ರೀಕೃತ ಬ್ಯಾಂಕು ಸಹಕಾರೀ ಬ್ಯಾಂಕಿಗೆ ಜಮಾ ಮಾಡಿ…. ಅದೂ ಎಷ್ಟು? ಒಮ್ಮೆಗೆ 4500, ವಾರಕ್ಕೆ 24 ಸಾವಿರ.
ಈ ದ್ರಾವಿಡ ಪ್ರಾಣಾಯಾಮದ ಮೂಲಕ ಒಂದು ಚೆಕ್ಕು ವಿಲಾವಾರಿಯಾಗಲು ಮುರು ದಿನದಿಂದ ವಾರ ಹಿಡಿದರೂ ಹಿಡಿಯಿತೇ..!
ಅಂದರೆ ಏನಾಗುತ್ತಿದೆ. ಸಹಕಾರೀ ರಂಗದಲ್ಲಿ ದುಡಿಯುತ್ತಿರುವ ಧುರೀಣರು ಹೇಳುವ ಹಾಗೆ ಹಿಂದಿನಿಂದಲೂ ರಾಷ್ಟ್ರೀಕೃತ ಬ್ಯಾಂಕುಗಳ ಲಾಬಿ ಸಹಕಾರಿ ರಂಗದ ವಿರುದ್ಧ ಕೆಲಸ ಮಾಡುತ್ತಲೇ ಬಂದಿದೆ. ಸಹಕಾರೀ ರಂಗ ಸದೃಢವಾಗಿರುವ ದಕ, ಉಡುಪಿ, ಕೊಡಗು, ಉಕ, ಶಿವಮೊಗ್ಗ ಹಾಸನದಂಥಾ ಜಿಲ್ಲೆಗಳಲ್ಲಿ ರೈತರು ಸಹಕಾರೀ ಸಂಘಗಳಲ್ಲೇ ಹೆಚ್ಚು ವ್ಯವಹಾರ ಮಾಡುತ್ತಿರುತ್ತಾರೆ. ನೆರೆಯ ಕೇರಳದಲ್ಲಿ ಸಹಕಾರೀ ಸೂತ್ರದಲ್ಲಿ ಆಸ್ಪತ್ರೆಗಳೂ ಕಾರ್ಯ ನಿರ್ವಹಿಸುತ್ತಿವೆ.!!
ಮೊನ್ನೆಯ ನೋಟು ಹಿಂತೆಗೆವ ಬ್ರಹ್ಮಾಸ್ತ್ರ ಎಸೆವಾಗ ಕೇಂದ್ರ ಸರ್ಕಾರ  ಮತ್ತು ರಿಸರ್ವ್  ಬ್ಯಾಂಕು ಸಹಕಾರೀ ಬ್ಯಾಂಕುಗಳನ್ನು ಈ ಪ್ರಕ್ರಿಯೆಯಿಂದ ಹೊರಗಿಟ್ಟಿದೆ. ಇವು ತನ್ನಲ್ಲಿ ನೋಂದಣಿಯಾಗಿಲ್ಲ ಎಂಬುದು ರಿಸರ್ವ್  ಬ್ಯಾಂಕ್ ನೀಡುವ ಸಬೂಬು. ಶೇ. 50ರಷ್ಟು ಜನಸಂಖ್ಯೆ ಇರುವ ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕಿಂಗ್ ಸೌಲಭ್ಯ ಇಲ್ಲ, ಇರುವ ಅಷ್ಟಿಷ್ಟು ಅಧಿಕೃತ ವಹಿವಾಟು ಸಹಕಾರೀ ಬ್ಯಾಂಕುಗಳ ಮೂಲಕವೇ ಎಂದು ಕೇಂದ್ರ ಸರ್ಕಾರಕ್ಕೆ ಗೊತ್ತು. ಪರಿಸ್ಥಿತಿ ನಿಭಾಯಿಸುವ ಹೆಜ್ಜೆಯಾಗಿ ಈ ಸಹಕಾರೀ ಬ್ಯಾಂಕುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಬದಲು ಕೇಂದ್ರ ಸರ್ಕಾರ ಈ ರಂಗವನ್ನೇ ಮತ್ತೊಬ್ಬ ಕಪ್ಪುಹಣದ ತಲೆಹಿಡುಕ ಏಜೆಂಟ್ ಅನ್ನುವ ರೀತಿ ಗುರುತಿಸಿ ದೂರವಿಟ್ಟಿದೆ.
ಸುಳ್ಯದ ನಿಂತಿಕಲ್ಲು ಎಂಬಲ್ಲಿ ಒಂದು ರಾಷ್ಟ್ರೀಕೃತ ಬ್ಯಾಂಕ್ ಶಾಖೆ ಇದೆ. ಇದು ಸುಮಾರು 100 ಚ.ಮೈಲಿಯ ಐದು ಪಂಚಾಯತುಗಳ ರೈತರ ಸೇವಾ ಕ್ಷೇತ್ರ ಹೊಂದಿದೆ. ಇಲ್ಲಿನ ಎಟಿಎಂ ಯಂತ್ರ ಸರಿ ಇರುವುದಕ್ಕಿಂತ ಕೆಟ್ಟಿರುವ ದಿನಗಳೇ ಜಾಸ್ತಿ ಎಂದು ಸ್ಥಳೀಯರು ನಿಟ್ಟುಸಿರು ಬಿಡುತ್ತಿದ್ದರು. ಈಗ ಅದು ಉಸಿರಾಟ ನಿಲ್ಲಿಸಿ ಹದಿನೈದು ದಿನಗಳಾದವಂತೆ.!! ಬ್ಯಾಂಕುಗಳ ತವರುಮನೆಯಾದ ದ.ಕ.ದಲ್ಲೇ ಇಂಥಾ ಗ್ರಹಣ ಗ್ರಸ್ತ ಗ್ರಾಮಗಳಿದ್ದರೆ ರಾಜ್ಯದ/ ದೇಶದ ಉಳಿದ ಪ್ರದೇಶಗಳ ಪಾಡೇನು?
ಮೊನ್ನೆ ಮೊನ್ನೆ ಸಹಕಾರೀ ರಂಗದ ಧುರೀಣರು ಈ ಮಲತಾಯೀ ಧೊರಣೆ ಬಗ್ಗೆ ಕೇಂದ್ರ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಮುಖ್ಯತಃ ಅವರು ಕೋರಿದ್ದು ಸ್ವಂತ ನಿಧಿಯ ಬಳಕೆಗಿರುವ ಅಸಂಬದ್ಧ ನಿರ್ಬಂಧಗಳ ಸಡಿಲಿಕೆ. ಇವರೇನು ಹೇಳಿದರೋ ಅವರೇನು ಕೇಳಿಸಿಕೊಂಡರೋ… ಈಗ ರಿಸರ್ವ ಬ್ಯಾಂಕು ಹಿಂಗಾರು ಬೆಳೆೆ ಸಾಲದ ನಿಧಿ ಮರುಪೂರಣಕ್ಕೆ 21 ಸಾವಿರ ಕೋಟಿ ಒದಗಿಸಲಾಗುವುದು ಎಂದಿದೆ.!! ಮಲೆನಾಡಿನಲ್ಲಿ ರೈತರು ಅಡಿಕೆ ಕೋಕೋದಂಥಾದ್ದನ್ನು ಸಹಕಾರಿ ಬ್ಯಾಂಕುಗಳ ಮೂಲಕವೇ ಮಾರುತ್ತಾರೆ. ಈಗ ಬೇಕಾಗಿರುವುದು ನಿಧಿ ಉಪಯೋಗದ ಸಡಿಲಿಕೆ; ಹೊಸ ಸಾಲವಲ್ಲ. ಅಷ್ಟಕ್ಕೂ ಹಿಂಗಾರಿನಲ್ಲಿ ಸಾಲ ಪಡೆವ ರೈತರ ಸಂಖ್ಯೆ 15% ಇರುವುದಿಲ್ಲ. ಈಗಾಗಲೇ ಕೆಕ್ಕರಗಣ್ಣು ಬಿಡುತ್ತಿರುವ ಬರದ ಹಿನ್ನೆಲೆಯಲ್ಲಿ ಬುದ್ಧಿ ನೆಟ್ಟಗಿರುವ ಯಾವ ರೈತನೂ ಸಾಲ ಪಡೆವ ಧೈರ್ಯ ಮಾಡಲಾರ. ಅದಕ್ಕೂ ಹೆಚ್ಚಾಗಿ ಈ ಹಿಂದೆ ಮಾಡಿದ ಸಾಲವೇ ಹೆಗಲು ಹತ್ತಿ ಕೂತಿದೆಯಲ್ಲಾ?
ಕೇಂದ್ರ ಸರ್ಕಾರದ ಮುಂದಿರುವ ಆದರ್ಶದ ಚಿತ್ರವೆಂದರೆ ಸಿಸಿಟಿವಿ ಮೂಲಕ ಸೂಪರ ಸ್ಟೋರ್ ನಿಭಾಯಿಸುವ ಬಗೆ. ಎಲ್ಲಾ ವಹಿವಾಟು ದಾಖಲಾಗುವಂಥಾ ವ್ಯವಸ್ಥೆ ರೂಪಿಸಲು ಹೊರಟಿದೆ. ಸರಿ ಆದರೆ ಅದಕ್ಕೆ ಗ್ರಾಮೀಣ ಭಾರತವನ್ನು ಜೋಡಿಸುವ ಬಗೆ ಹೇಗೆ? ಅಲ್ಲೂ ಪೇಟಿಮ್  ನಂಥಾ ವ್ಯವಸ್ಥೆಯ ಮೋಹಕ್ಕೆ ಸರ್ಕಾರ   ಬಿದ್ದಿರುವಂತಿದೆ. ಸಾಂಪ್ರದಾಯಿಕ ಜನ ಸ್ನೇಹೀ ಸಹಕಾರಿರಂಗವನ್ನು ಬಲಪಡಿಸುವ ಬದಲು ಅದನ್ನು ಮುರಿದೇ ಗ್ರಾಮೀಣ ಭಾರತವನ್ನು ಆಧುನಿಕ ಬ್ಯಾಂಕಿಂಗ್ ಮತ್ತು ಆರ್ಥಿಕ  ವ್ಯವಹಾರದ ಜಾಲಕ್ಕೆ ಸೇರಿಸಲು ಕೇಂದ್ರ ಸರ್ಕಾರ ಹಠ ತೊಟ್ಟಂತಿದೆ.
ಸಹಕಾರಿ ರಂಗಕ್ಕಿರುವ ರೋಗಬಾಧೆಗಳು ಎಲ್ಲರಿಗೂ ಗೊತ್ತು. ಮಹಾರಾಷ್ಟ್ರದ ಸಹಕಾರೀ ವ್ಯವಸ್ಥೆಯನ್ನು ರಾಜಕಾರಣಗಳು ಹಿಡಿತದಲ್ಲಿಟ್ಟುಕೊಂಡಿರುವ ಪರಿ ನೊಡಿದರೆ ಈ ವ್ಯವಸ್ಥೆ ಬಗ್ಗೆ ಸಿನಿಕರಾಗುವುದು ಸಹಜ. ನಮ್ಮದೇ ರಾಜ್ಯದ ಕೋಲಾರ ಮುಂತಾದ ಕಡೆಯೂ ಈ ವ್ಯವಸ್ಥೆಯನ್ನು ಕೆಡಿಸಲು ಪಕ್ಷಾತೀತವಾಗಿ ಎಲ್ಲ ಧುರೀಣರೂ ದುಡಿದಿದ್ದಾರೆ. ಆದರೆ ಮಾದರಿಯನ್ನು ಧಿಕ್ಕರಿಸುವ ಬದಲು ಬಲಗೊಳಿಸುವುದೊಂದೇ ಗ್ರಾಮೀಣ ಭಾರತದ ಸುಸ್ಥಿರತೆಗೆ ದಾರಿ. ಉಳಿದೆಲ್ಲಾ ಕ್ಷೇತ್ರಗಳಲ್ಲಿ ಅಪರೂಪದ ಯಶೋಗಾಥೆಯನ್ನೂ ಮಾದರಿಯಾಗಿ ಮುಂದಿಡುವಾಗ ಸಹಕಾರಿ ರಂಗದಲ್ಲಿ ಈ ಸುಧಾರಣೆಗೆ ಬೇಕಾದ ಮಾದರಿಗಳಿವೆಯಷ್ಟೇ.
ಬೇರೆ ಇಲಾಖೆಗಳಲ್ಲಿ ವ್ಯವಹಾರದ ಮೇಲೆ ನಿಗಾ ಇಡಲು, ದಾಖಲೆಗಳನ್ನು ಪಾರದರ್ಶಕವಾಗಿಸಲು (ಆಧುನಿಕ ತಂತ್ರಜ್ಞಾನ ಬಳಕೆ ಸಹಿತ) ಸರ್ಕಾರ ಮಧ್ಯಪ್ರವೇಶಿಸಿದೆ. ಇಲ್ಲಿ ಮಾತ್ರಾ ಕಷ್ಟವೇ? ಸಹಕಾರೀ ಬ್ಯಾಂಕುಗಳನ್ನು ಸಾಲನೀಡಿಕೆಯ ಏಕ ಅಂಶ ಕಾಯಕದಿಂದ ಹೊರತಂದು ಹೆಚ್ಚು ಸ್ಪರ್ಧಾತ್ಮಕ ವೃತ್ತಿಪರತೆಗೆ ಸಜ್ಜುಗೊಳಿಸುವುದು ಕಷ್ಟವಲ್ಲ. ಈಗಾಗಲೇ ಮಹಿಳಾ ಸ್ವಸಹಾಯ ಸಂಘಗಳು ಸ್ವಾಯತ್ತವಾಗಿ ವ್ಯವಹಾರ ಮಾಡುವ ಪ್ರೌಢಿಮೆ ಪಡೆದುಕೊಂಡ ಉದಾಹರಣೆ ಇರುವಾಗ ಶತಮಾನದ ಇತಿಹಾಸ ಇರುವ ಈ ಕ್ಷೇತ್ರಕ್ಕೆ ಸಮುದಾಯ ಪ್ರಜ್ಞೆ ಮತ್ತು ವೃತ್ತಿಪರತೆ ರೂಢಿಸುವುದು ಕಷ್ಟವಾಗಬಾರದು.
ಗ್ರಾಮೀಣ ಭಾರತದ ಅಭಿವೃದ್ಧಿಗೆ ಶೌಚಾಲಯ, ಕುಡಿಯುವ ನೀರು, ಪಂಚಾಯತ್ ಸಂಸ್ಥೆಗಳ ಬಲವರ್ಧನೆ ಬಗ್ಗೆ ಮೋದಿ ಸರ್ಕಾರಕ್ಕೆ ಅಪಾರ ಕಾಳಜಿ ಇದೆ. ಆದರೆ ಕೃಷಿ ಆರ್ಥಿಕತೆಯ ಮೂಲ ಧಾತುವಾಗಿರುವ ಸಹಕಾರಿ ರಂಗದ ಬಗ್ಗೆ ಮಾತ್ರಾ ಅಸಡ್ಡೆ ಯಾಕೆ? ಇದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಲ್ಲ. ಉಳಿದೆಲ್ಲಾ ಕ್ಷೇತ್ರಗಳಿಗೆ ಆಧುನಿಕ ಕಾರ್ಪೋರೇಟ್ ಪರ್ಯಾಯಗಳಿಲ್ಲ. ಆದರೆ ಆರ್ಥಿಕ ವ್ಯವಹಾರಕ್ಕೆ ಬ್ಯಾಂಕುಗಳೇ ಹೆಚ್ಚು ಲಾಭದಾಯಕ..!
ಈಗಿನ ಸಂಕಷ್ಟ ಸಹಕಾರೀ ರಂಗಕ್ಕೆ ಹೊಡೆದಿರುವ ಕೊನೆಯ ಮೊಳೆ ಎಂದುಕೊಳ್ಳಬಹುದು. ಈಗಾಗಲೇ ಸಹಕಾರೀ ಬ್ಯಾಂಕುಗಳು ಮಾಮೂಲಿ ಖಾಸಗಿ ಸಂಸ್ಥೆಗಳ ಹಾಗೆ ವ್ಯವಹಾರ ತೆರಿಗೆ ಸುಮಾರು 17% ಕಟ್ಟಬೇಕು.. ಈ ಗಾಯಕ್ಕೇ ಉಪ್ಪು ಸವರಿದ ಹಾಗೆ ‘ತನ್ನಲ್ಲಿ ನೋಂದಣಿ ಮಾಡಿಸಿಕೊಂಡಿಲ್ಲ’ ಎನ್ನುವ ಕಾರಣಕ್ಕೆ ರಿಜರ್ವ ಬ್ಯಾಂಕ್ ಈ ರಂಗವನ್ನೂ ಈ ನೋಟು ರದ್ಧತಿ ಮತ್ತು ಪರ್ಯಾಯ  ಪ್ರಕ್ರಿಯೆಗಳಿಂದ ಹೊರಗಿಟ್ಟಿದೆ. ಈ ನೋಟು ರದ್ದತಿಯ ಉದ್ದಿಶ್ಯ ಕಪ್ಪುಹಣವನ್ನು ಬಲಿ ಹಾಕುವುದೇ ಆದರೆ ಸಹಕಾರೀ ರಂಗದ ವ್ಯವಹಾರಗಳ ವಿವರಗಳನ್ನು ಪಡೆಯುವುದು ಕಷ್ಟವೇ.? ಒಂದು ಸದುದ್ದಿಷ್ಯದ ಕ್ರಮಕ್ಕೆ ಯಾರನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂಬ ವಿವೇಚನೆ  ಸರ್ಕಾರಕ್ಕಿಲ್ಲದಿದ್ದರೆ ಅದು ಕೊನೆಗೆ ಅತ್ಯಂತ ದುರ್ಬಲರಿಗಷ್ಟೇ ಏಟುಕೊಡುತ್ತದೆ. ಹಳೆಯ ನೋಟು ತರುವ ಪ್ರತಿಯೊಬ್ಬನೂ ಕಳ್ಳ ಎಂಬಂಥಾ ಮಾನಸಿಕ ಧೋರಣೆಯಿಂದ ಹೊರಟಿರುವ ಈ ಹೆಜ್ಜೆ ಸಹಕಾರೀ ಬ್ಯಾಂಕಿನಂಥಾ ಸಾಂಸ್ಥಿಕ ರಚನೆಯನ್ನೂ ಇದೇ ಪಟ್ಟಿಗೆ ಸೇರಿಸಿದೆ.
ಈಗಲೂ ಗ್ರಾಮೀಣ ಭಾರತದ ಅಭಿವೃದ್ಧಿಗೆ ಏನೆಲ್ಲಾ ಬೇಕು ಎಂಬ ಕನಸು ಹಾರಿಬಿಟ್ಟರೂ ಅದು ನಿಂತಿರುವುದೇ ಪಂಚಾಯತ್ ಮತ್ತು ಸಹಕಾರೀ ಬ್ಯಾಂಕು ಎಂಬ ಜೋಡೆತ್ತುಗಳಲ್ಲಿ. ಇವನ್ನು ಪಟ್ಟಭದ್ರ ಹಿತಾಸಕ್ತಿಗಳ ಕೈಲಿ ಮೇಯಿಸಲು ಬಿಟ್ಟು; ಅತ್ತ ಆರ್ಥಿಕ  ನೀತಿ ಸುಧಾರಣೆಗಳಲ್ಲೂ ಕೈಬಿಟ್ಟರೆ ಏನಾದೀತು?
ಮೊನ್ನೆಯ ಉಪಕ್ರಮಗಳಲ್ಲಿ ರೈತರ ಉತ್ಪನ್ನವನ್ನು ಕೊಳ್ಳುವ ಕ್ರಮವನ್ನೂ, ಸಹಕಾರೀ ಸಂಘಗಳ ಮೂಲಕ ಹಣಕಾಸಿನ ಪೂರೈಕೆಯನ್ನೂ ಮಾಡಿದ್ದರೆ ಸಂಸ್ಥೆಗಳು ಬಲಗೊಳ್ಳುತ್ತಿದ್ದವು; ಜನರೂ ಸಂಕಷ್ಟಕ್ಕೀಡಾಗುವುದನ್ನು ತಡೆಯಬಹುದಿತ್ತು. ಅದರ ಬದಲು ಅದರ ಕೀಲು ಮುರಿವ ಏಟು ಕೊಟ್ಟರೆ? ಶೇ. 90 ಬೆಂಬಲ ಇದೆ ಎಂದು ಹೇಳಿಕೊಳ್ಳುವ ಪ್ರಧಾನಿಗೆ ಈ ವಾಸ್ತವವನ್ನು ಹೇಳುವುದು ಯಾರು?