ಸಮಾನತೆಯ ಸಮಾಜಕ್ಕಾಗಿ ಮುನ್ನಡೆಯುವುದು ಸ್ತ್ರೀವಾದ- ರಂಜನಾ ಪಾಡಿ

ಮಹಿಳಾ ದಿನಾಚರಣೆ ಕೊಪ್ಪಳದ ಉದ್ಘಾಟನಾ ಭಾಷಣ.

dsc_8540

dsc_8540dsc_8563

 

 

 

 

 

 

ಕೊಪ್ಪಳ : ಇಲ್ಲಿ ಬಂದಿರುವುದು ತುಂಬಾ ಖುಷಿಯಾಗುತ್ತಿದೆ. ಆದರೆ ನಾನು ಮಾತನಾಡುವ ವಿಷಯ ಖುಷಿಯ ವಿಷಯವಲ್ಲ. ನಾನು ಅತ್ಯಾಚಾರದ ಬಗ್ಗೆ, ರೈತರ ಆತ್ಮಹತ್ಯೆಯ ಬಗ್ಗೆ ಮಾತನಾಡುತ್ತೇನೆ. ನಾನು ಮಹಿಳಾ ಚಳವಳಿಯ ಭಾಗವಾಗಿ ಅದರ ತಪ್ಪುಗಳನ್ನು ಇಲ್ಲಿ ಮಾತನಾಡುತ್ತೇನೆ. ಯಾಕೆಂದರೆ ಈ ರೀತಿ ನಮ್ಮ ತಪ್ಪುಗಳನ್ನು ಎಲ್ಲರ ಮುಂದಿಡುವುದು ಮಹಿಳಾ ಚಳವಳಿಗೆ ಮಾತ್ರ ಸಾಧ್ಯ. ನಾವು ಇಲ್ಲಿ ಸೇರಿರುವವರು ಯಾವುದಾದರೂ ಒಂದು ಹೋರಾಟದ ಭಾಗವಾಗಿ ಇಲ್ಲಿ ಸೇರಿದ್ದೇವೆ. ಒಂದು ಆಶಯಕ್ಕಾಗಿ ಬಂದಿದ್ದೇವೆ. ನಮ್ಮ ಉದ್ದೇಶ ಅತ್ಯಂತ ಕಟ್ಟಕಡೆಯ ಪೌರಕಾರ್ಮಿಕ ಮಹಿಳೆ ಕೂಡ ನೆಮ್ಮದಿಯಾಗಿ ಮಲಗಿದಾಗ ಮಾತ್ರ ನಮ್ಮ ಆಶಯ ಈಡೇರಿದಂತೆ.

ಈ ಮಹಿಳಾ ದಿನಾಚರಣೆಯನ್ನು ಎಲ್ಲರೂ ಅವರವರಿಗೆ ಬಂದಂತೆ ಆಚರಿಸುತ್ತಾರೆ. ಗೋದ್ರೇಜ್ ಕಂಪನಿಯೂ ಜಾಹೀರಾತು ನೀಡುತ್ತದೆ. ಹಾಗೆಯೇ ಏರ್‍ಲೈನ್ಸ್ ಕಂಪನಿ ಕೂಡ ಈ ಮಹಿಳಾ ದಿನಾಚರಣೆಯನ್ನು ಕೋ ಆಪ್ ಮಾಡಿಕೊಂಡುಬಿಟ್ಟಿದೆ. ಕಾಸ್ಮೆಟಿಕ್ ಕಂಪನಿಗಳು ತಮ್ಮ ಜಾಹೀರಾತಿಗೆ ಈ ದಿನವನ್ನು ಬಳಸಿಕೊಳ್ಳುತ್ತಾರೆ. ಜುವೆಲ್ಲರ್ಸ್‍ಗಳು ಮೇಕಿಂಗ್ ಚಾರ್ಜ್ ಡಿಸ್ಕೌಂಟ್ ಕೊಡ್ತೀವಿ ಎಂದು ಅನೌನ್ಸ್ ಮಾಡುತ್ತಾರೆ. ಒಟ್ಟಾರೆ ಬಂಡವಾಳಶಾಹಿಯ ಈ ಶನಿಸಂತಾನಗಳು ಹೇಳುತ್ತಿರುವುದು ನಿಜವಾದ ಮಹಿಳಾ ದಿನಾಚರಣೆಯ ಅರ್ಥವಲ್ಲ. ನಿಜವಾದ ಮಹಿಳಾ ದಿನ ಹುಟ್ಟಿಕೊಂಡಿದ್ದು ಹೋರಾಟದ ಭಾಗವಾಗಿ. ಆ ರೀತಿಯ ಹೋರಾಟದ ಒಡನಾಡಿಗಳೊಂದಿಗೆ ಎಲ್ಲರು ಸೇರಿ ಈ ರೀತಿ ಆಚರಿಸುವುದು ಖುಷಿ ಕೊಡುತ್ತದೆ.

ನಮ್ಮೆಲರ ಹೋರಾಟಗಳು ಸೋಲರಿಯದೇ ನಡೆಯಬೇಕು, ನಾವು ದುಡಿಯುವ ಜನ ಚರಿತ್ರೆಯ ನಿರ್ಮಾಣ ಮಾಡುವವರು ಎಂಬ ಗುರಿಯನ್ನು ಇಟ್ಟುಕೊಂಡು ಸೇರಿದ್ದೇವೆ. ಜಾತಿವ್ಯವಸ್ಥೆಯ, ಪಿತೃಪ್ರಧಾನ ಸಂಸ್ಕೃತಿಯ ಮತ್ತು ಬಂಡವಾಳಶಾಹಿ ಲೂಟಿಯ ವಿರುದ್ಧ ನಾವು ಹೋರಾಟಕ್ಕಿಳಿಯಬೇಕಿದೆ. ಇದರೊಟ್ಟಿಗೆ ನಮ್ಮನ್ನು ನಾವು ಅವಲೋಕಿಸಿಕೊಳ್ಳಬೇಕು, ಆಗ ಮಾತ್ರ ಗುರಿ ತಲುಪುವುದು ಸುಲಭ.

1975ರಲ್ಲಿ ವಿಶ್ವಸಂಸ್ಥೆ ಮಾರ್ಚ್ 8 ಅನ್ನು ಅಂತರಾಷ್ಟ್ರೀಯ ದಿನಾಚರಣೆಯನ್ನು ಘೋಷಿಸಿದಾಗಿನಿಂದ ನಾವು ಈ ದಿನವನ್ನು ನೆನೆಯುತ್ತಿರುವುದು ಅಲ್ಲ. ಬದಲಿಗೆ ಎಷ್ಟೋ ವರ್ಷಗಳ ಹಿಂದೆ ಅಮೇರಿಕ ನ್ಯೂಯಾರ್ಕ್‍ನಲ್ಲಿ ಲಕ್ಷಾಂತರ ಮಹಿಳೆಯರು ಹತ್ತಿ ಗಿರಣಿಗಳಲ್ಲಿ, ಕಾರ್ಖಾನೆಗಳಲ್ಲಿ ತಮ್ಮ ಘನೆತೆಯ ಬದುಕಿಗಾಗಿ, ಕೆಲಸದ ಅವಧಿಯನ್ನು ಕಡಿಮೆ ಮಾಡುವುದು ಸೇರಿದಂತೆ ಹತ್ತಾರು ಹಕ್ಕೊತ್ತಾಯಗಳಿಗೆ ಒತ್ತಾಯಿಸಿ ನಡೆಸಿದ ಸಮರಶೀಲ ಹೋರಾಟದ ಭಾಗವಾಗಿ ಈ ದಿನವನ್ನು ನಾವು ನೆನೆಯುತ್ತೇವೆ. ಕ್ಲಾರಾ ಜಟ್ಕಿನ್‍ರವರು ನಡೆಸಿರುವ ಹೋರಾಟ, ಕೇರಳದ ಮುನ್ನಾರ್‍ನಲ್ಲಿ ಟೀ ಎಷ್ಟೇಟ್‍ನ ಮಹಿಳೆಯರು ನಡೆಸಿರುವ ಹೋರಾಟ, ಇತ್ತೀಚೆಗೆ ಬೆಂಗಳೂರು ಗಾರ್ಮೆಂಟ್ಸ್  ಮಹಿಳೆಯರು ನಡೆಸಿದ ದೊಡ್ಡ ಹೋರಾಟ, ಮೈಸೂರು ಮತ್ತು ಬೆಂಗಳೂರು ನಡುವಿನ ಮದ್ದೂರು ಹೆದ್ದಾರಿಯಲ್ಲಿ ಮಹಿಳೆಯರು ದೀರ್ಘಕಾಲ ರಸ್ತೆ ತಡೆ ಮಾಡಿ ನಡೆಸಿದ ಹೋರಾಟ, ಪಿ.ಎಫ್ ಹಣ ತಿದ್ದುಪಡಿ ವಿರೋಧಿಸಿ ದೇಶಾದ್ಯಂತ ನಡೆದಿರುವ ಹೋರಾಟಗಳನ್ನು ನೆನಯುತ್ತೇವೆ. ಜೊತೆಗೆ ಈಗ ಕೂಡುಕುಳಂ ಹೋರಾಟವನ್ನು ನೆನಪು ಮಾಡಿಕೊಳ್ಳುತ್ತೇವೆ. ಮಹಿಳಾ ದಿನಾಚರಣೆ ಆರಂಭವಾಗುವುದಕ್ಕಿಂತ ಮುಂಚೆಯೇ ದಲಿತರಿಗೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಲು ಶ್ರಮಿಸಿದ ಕ್ರಾಂತಿಜ್ಯೋತಿ ಸಾವಿತ್ರಿ ಬಾಯಿ ಫುಲೆರವರನ್ನು ನಾವು ನೆನಪು ಮಾಡಿಕೊಳ್ಳುತ್ತೇವೆ.

ಇಂದಿನ ಆರ್ಥಿಕ ಬಿಕ್ಕಟ್ಟು ಹೆಚ್ಚು ಬಿಗಡಾಯಿಸುತ್ತಿದೆ. ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಬಂಡವಾಳಶಾಹಿಯ ಆರ್ಥಿಕ ನೀತಿಯೂ ಇಂದು ದೇಶದ ಗಣಿಗಳನ್ನು ಆಕ್ರಮಿಸಿಕೊಳ್ಳುತ್ತಿದೆ. ಬಡಜನರ ಭೂಮಿ, ಅರಣ್ಯವನ್ನು ಕಿತ್ತುಕೊಳ್ಳುತ್ತಿದೆ. ಆದಿವಾಸಿಗಳನ್ನು ಕಿತ್ತು ಬೀದಿಗೆ ಹಾಕುತ್ತಿದ್ದಾರೆ. ಯಾವುದೇ ಕೃಷಿಕ ಸಮಾಜದಲ್ಲಿ ಇಡಿ ಹಳ್ಳಿಯೇ ಇದರ ಭಾಗವಾಗಿರುತ್ತದೆ. ಹಸಿರು ಕ್ರಾಂತಿಯು ಇಂತಹ ಹಲವಾರು ಹಳ್ಳಿಗಳನ್ನು ನುಂಗಿಹಾಕಿದೆ. ನೂರಾರು ದುಷ್ಪರಿಣಾಮವನ್ನು ಉಂಟುಮಾಡಿದೆ. ಬಂಡವಾಳಶಾಹಿಗಳು ಮತ್ತು ಭೂಮಾಲೀಕರು ಹುಟ್ಟು ಹಾಕಿದ ಈ ಹಸಿರುಕ್ರಾಂತಿ ಇಂದಿನ ಕೃಷಿ ಬಿಕ್ಕಟ್ಟಿಗೂ ಕಾರಣವಾಗಿದೆ. ಹಸಿರು ಕ್ರಾಂತಿ ರೈತರ ಆತ್ಮಹತ್ಯೆಗಳ ಜೊತೆಗೆ ದೊಡ್ಡ ಧಾರುಣತೆಯನ್ನು ನಮ್ಮ ಮುಂದಿಟ್ಟಿದೆ.

ಇಂದು ನಮ್ಮ ಮಹಿಳಾ ಹೋರಾಟ ಎಲ್ಲಿದೆ? ಏನು ಫಲವನ್ನು ಕೊಟ್ಟಿದೆ? ಅದು ಯಾರಿಗೆ ಸಿಕ್ಕಿದೆ? ನಾನು ಇದನ್ನು ಪಂಜಾಬಿನ ರೈತರ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ನೋಡುತ್ತೇನೆ. ಅಲ್ಲಿ ರೈತರ ಆತ್ಮಹತ್ಯೆಯ ನಂತರ ಅವರ ಕುಟುಂಬದ ಬದುಕುಳಿದವರ ಬಗ್ಗೆ ಅಧ್ಯಯನ ಮಾಡಿ ಸೇಜ್ ಅವರು ವರದಿಯೊಂದನ್ನು ಪ್ರಕಟಿಸಿದ್ದಾರೆ. ಅದರ ಪ್ರಕಾರ, ಅಲ್ಲಿ ರೈತ ಸಂಘಟನೆಗಳು ಮಹಿಳೆಯರ ಸಮಸ್ಯೆಯನ್ನು ಎಷ್ಟು ಮಟ್ಟಿಗೆ  ಅಡ್ರೆಸ್ ಮಾಡಿದ್ದಾರೆ? ದಲಿತ ಚಳವಳಿಯೂ ಸಹ ಮಹಿಳೆಯರ ನೋವುಗಳನ್ನು ಎಷ್ಟು ಮಟ್ಟಿಗೆ ಅರ್ಥ ಮಾಡಿಕೊಂಡಿದ್ದಾರೆ ಎಂದರೆ ಉತ್ತರ ನಿರಾಶದಾಯಕವಾಗಿದೆ. ಪಂಜಾಬಿನಲ್ಲಿ ಲಾಭ ದೊಡ್ಡ ರೈತರಿಗೆ ಮಾತ್ರ. ಖಾಸಗಿ ನರ್ಸಿಂಗ್ ಹೋಮ್‍ಗಳು ಕೂಡ ಲಾಭ ಮಾಡಿಕೊಂಡಿವೆ. ಇವರ ಅದ್ದೂರಿ ಮದುವೆಗಳು ಇಂದು ಎಲ್ಲರಿಗೂ ಆವರಿಸಿ ಸಾಲ ಮಾಡುವ ಪರಿಸ್ಥಿತಿ ಬಂದೊದಗಿದೆ. ವರದಕ್ಷಿಣೆ ಅನ್ನೋದನ್ನು ಖಾಸಗೀ ಆಸ್ತಿ, ಬಂಡವಾಳಶಾಹಿ ಮತ್ತು ಪಿತೃಪ್ರಧಾನ ವ್ಯವಸ್ಥೆಯೊಂದಿಗೆ ಸಮೀಕರಿಸಿ ನೋಡಬೇಕು.
ರೈತರ ಸಾವಿಗೆ ವರದಕ್ಷಿಣೆಯೂ ಕಾರಣವಾಗಿದೆ. ಈ ಮಹಿಳೆಯರಿಗೆ ಇನ್ನು ಮುಂದೆ ನೀವು ಯಾರನ್ನು ಆಧರಿಸುತ್ತಿರಿ ಎಂದರೆ ಅವರು ರೈತರ ಸಂಘಟನೆಗಳ ಕಡೆಗೆ ಕೈತೋರಿಸುತ್ತಾರೆ. ಸದ್ಯಕ್ಕೆ ಅವರ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗ ಸಿಕ್ಕಿದರೆ ಸಾಕು ಅನ್ನುತ್ತಿದ್ದಾರೆ. ಕೆಲವರಂತೂ ನಮಗೆ ಎಮ್ಮೆ ಕಟ್ಟಲು ಒಂದು ಜಾಗ ಸಿಕ್ಕರೆ ಸಾಕು, ನಮ್ಮ ಬದುಕು ನೋಡಿಕೋಳ್ಳುತ್ತೇವೆ ಎಂದು ಹೇಳುತ್ತಾರೆ.

ಪಂಜಾಬಿನಲ್ಲಿ ಮಹಿಳೆಯರು ಹೊರಗೆ ಹೋಗಿ ದುಡಿಯುವುದು ಅಪಮಾನಕರ. ಅವರ ಮೇಲೆ ನಿರ್ಬಂಧ ಹೇರಿ ಮಹಿಳೆಯರು  ದುಡಿಯುವುದಕ್ಕೂ ಬಿಡುವುದಿಲ್ಲ. ಅವರ ಲೈಂಗಿಕತೆಯ ಮೇಲೆ ನಿರ್ಬಂಧ ಹಾಕಲಾಗಿದೆ. ಇದು ದುರಂತಮಯವಾಗಿದೆ. 136 ಕುಟುಂಬಗಳನ್ನು ಸೇಜ್‍ನವರು ಸಂದರ್ಶಿಸಿದ್ದು ಅದರಲ್ಲಿ ದಲಿತರ ಮನೆಗಳನ್ನು ಸಹ ಸಂದರ್ಶಿಸಿದ್ದಾರೆ. ಮೇಲ್ಜಾತಿಯವರಲ್ಲಿ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ.. ಎಂಬ ಭಾವನೆಯಿದೆ. ವರದಕ್ಷಿಣೆಯ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಮನೆಯ ಮಹಿಳೆಯರು ಖಿನ್ನತೆ ಮತ್ತು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ನೀನು ನಿನ್ನ ತಂದೆಯಂತೆ ಸಾಯುತ್ತೀಯ ಎಂದು ಎಲ್ಲರೂ ಹೇಳುವ ಹಾಗಿದೆ. ಹಾಗಾಗಿ ನಾವು ಮಹಿಳೆಯರ ಮಾನಸಿಕ ಸಮಸ್ಯೆಯನ್ನು ಆದ್ಯತೆಯನ್ನಾಗಿ ನೊಡಬೇಕಿದೆ.

ವಿವಾಹವೂ ಕುಟುಂಬದ ಆಸ್ತಿ ವಾರಸುದಾರಿಕೆಯ ವಿಷಯವಾಗಿ ಮುಖ್ಯವಾಗಿದೆ. ನಿಮ್ಮ ಮಗಳನ್ನು ಹೊರಗೆ ದಾಟಿಸಿ, ನಿಮ್ಮ ಆಸ್ತಿಯನ್ನು ಉಳಿಸಿಕೊಳ್ಳಿ ಎನ್ನುವ ದುಷ್ಟ ಪದ್ಧತಿ ಜಾರಿಗೆ ಬಂದಿದೆ. ಈ ವರದಕ್ಷಿಣೆಯ ಮೂಲ ವೈದಿಕಶಾಹಿ ಮತ್ತು ಭೂಮಾಲೀಕರಾಗಿದ್ದಾರೆ. ಇಂದು ಇದನ್ನು ಎಲ್ಲ ವರ್ಗಗಳಿಗೂ ಎಲ್ಲಾ ಜಾತಿಗಳಿಗೂ ಇಳಿಸಿದ್ದಾರೆ. ಇವೆಲ್ಲವುಗಳ ಜೊತೆ ವರದಕ್ಷಿಣೆ ಸಂಬಂಧ ಬಂದಿದೆ. ಈ ವರದಕ್ಷಿಣೆಯ ಪಿಡುಗಿನಿಂದ ಪಂಜಾಬ್‍ನಲ್ಲಿ ಸಾವಿರಾರು ಕೃಷಿ ಕೂಲಿಗಳು ಸಾಯುತ್ತಿದ್ದಾರೆ. ವರದಕ್ಷಿಣೆಯು ಇದೊಂದು ಕೇವಲ ಸಾಮಾಜಿಕ ಸಮಸ್ಯೆಯಲ್ಲ. ಇದು ವಿವಾಹ ಮತ್ತು ಖಾಸಗೀ ಆಸ್ತಿಯ ಜೊತೆ ತಳುಕು ಹಾಕಿಕೊಂಡಿದೆ. ಇದರ ಕುರಿತು 150 ವರ್ಷಗಳ ಹಿಂದೆ ಏಂಗೆಲ್ಸ್ ಮಹಿಳೆ, ಕುಟುಂಬ ಮತ್ತು ಖಾಸಗೀ ಆಸ್ತಿಯ ಕುರಿತು ಬರೆದಿದ್ದಾರೆ. ಎಲ್ಲರೂ ಮಹಿಳೆಯರ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಾರೆ. ಮದುವೆ, ಕೌಟುಂಬಿಕ ರಚನೆ ಮುಂತಾದವುಗಳ ಕುರಿತು ಈ ಹೊತ್ತಿನಲ್ಲಿ ಉಳ್ಳವರು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಹೋರಾಟಗಾರರು ಕೂಡ ಆತ್ಮಾವಲೋಕನ ಮಾಡಿಕೊಳ್ಳೋಣ.
ಪಂಜಾಬ್‍ನಲ್ಲಿ ವಯಸ್ಸಾದ ಹಿರಿಯ ನಾಗರೀಕರಿಗೆ ಅತ್ಯಲ್ಪ ಪಿಂಚಣಿ ದೊರಕುತ್ತಿದೆ. ಅವನು ಸತ್ತರೆ ಅವನ ಹೆಂಡತಿಗೆ ಇನ್ನೂ ಕಡಿಮೆ. ಹಸಿರು ಕ್ರಾಂತಿಯ ಪ್ರಭಾವ, ಬಂಡವಾಳಶಾಹಿ ಕೀಟನಾಶಕ ಕಂಪನಿಗಳಿಂದ ಇಂದು ಅನಾರೋಗ್ಯ ಹೆಚ್ಚಾಗುತ್ತಿದೆ. ಬಿಕನೇರ್ ಎಕ್ಸ್ ಪ್ರೆಸ್ ಇಂದು ಕ್ಯಾನ್ಸರ್ ಎಕ್ಸ್ ಪ್ರೆಸ್ಸ್ ಎಂದು ಕರೆಯುವ ಮಟ್ಟಿಗೆ ಬಂದು ತಲುಪಿದೆ. ದುರಂತವೆಂದರೆ ಎಷ್ಟೆಲ್ಲಾ ಲೂಟಿ ಹೊಡೆದಿರುವ ಖಾಸಗಿ ಆಸ್ಪತ್ರೆಗಳು ಅಲ್ಲಿಯೇ ಒಂದು ಕ್ಯಾನ್ಸ್ ರ್ ಆಸ್ಪತ್ರೆ ಕಟ್ಟಿಲ್ಲ.
ರೈತ ಚಳವಳಿಯಲ್ಲಿ ಮಹಿಳೆಯರು ಇದ್ದಾರೆ. ಆದರೆ ವೇದಿಕೆ ಮತ್ತು ನಾಯಕತ್ವದಲ್ಲಿ ಇಲ್ಲ. ಅವರ ಸಮಸ್ಯೆಗಳು ಬೇರೆಯವರಿಗೆ ಅರ್ಥವಾಗುವುದಿಲ್ಲ. ಇಡೀ ದೇಶದ ರೊಟ್ಟಿಯ ಬುಟ್ಟಿ ಮಾಡಿದ ಇಲ್ಲಿನ ಹಿರಿಯರು ಬೀದಿಗಿಳಿದು ಅವರ ಹಕ್ಕುಗಳನ್ನು ಪಡೆದುಕೊಂಡಾಗ ಮಾತ್ರ ಸಮಾನತೆ ಸಾಧ್ಯ.

“ಸ್ತ್ರೀವಾದ ಎಂದರೆ ಕೇವಲ ಮಹಿಳೆಯರಿಗೆ ಸಂಬಂಧಿಸಿದ್ದು ಎಂದು ಹಲವರು ಭಾವಿಸಿದ್ದಾರೆ. ವಾಸ್ತವದಲ್ಲಿ ಸ್ತ್ರೀವಾದ ಎಂಬುದು, ಹಸಿವಿನ ವಿರುದ್ಧ, ಯುದ್ಧದ ವಿರುದ್ಧ, ಅಸಮಾನತೆಯ ವಿರುದ್ಧ, ಎಲ್ಲಾ ರೀತಿಯ ಶೋಷಣೆಯ ವಿರುದ್ಧ ದನಿಯೆತ್ತುವುದು; ಸಮಾನತೆಯ ಸಮಾಜಕ್ಕಾಗಿ ಮುನ್ನಡೆಯುವುದು ಸ್ತ್ರೀವಾದ!”
ಮಹಿಳೆಯರ ಶೋಷಣೆ ಕೂಡ ಇದು ಕೂಡ ರಾಜಕೀಯ ಆರ್ಥಿಕ ಹೋರಾಟದ ಒಂದು ಭಾಗವೆ. ಹೀಗೆ ಭಾವಿಸಿದಾಗ ಮಾತ್ರ ನಿಜವಾದ ಹೋರಟವನ್ನು ನಾವು ಆರಂಭಿಸಿದ್ದೀವಿ ಅಂತ ಅರ್ಥ. ಮಹಿಳೆಯರ ಇತಿಹಾಸ ಎಂದರೆ ಮಹಿಳೆಯರ ಹೋರಾಟದ ಇತಿಹಾಸವೇ ಆಗಿದೆ. ಉಳಿದವುಗಳು ಅಲ್ಲ ಎಂದು ಭಾವಿಸುತ್ತೇನೆ. ನಿಜವಾದ ಇತಿಹಾಸ ದುಡಿಯುವ ಮಹಿಳೆಯ ಹೋರಾಟವೇ ಆಗಿರುತ್ತದೆ ಎಂದು ಹೇಳಿ ನನ್ನ ಮಾತುಗಳನ್ನು ಮುಗಿಸುತ್ತೇನೆ. ಇಲ್ಲಿಗೆ ಬಂದಿದ್ದಕ್ಕೆ ಖುಷಿಯಾಗಿದೆ. ಧನ್ಯವಾದಗಳು.
– ರಂಜನಾ ಪಾಡಿ, ಮಹಿಳಾ ಹೋರಾಟಗಾರ್ತಿ,
ಕೊಪ್ಪಳದ ಮಹಿಳಾ ಒಕ್ಕೂಟದ ಅಂತರಾಷ್ಟ್ರೀಯ ಮಹಿಳಾ ದಿನದ ಉದ್ಘಾಟನೆಯಲ್ಲಿ.