ಸಣ್ಣ ಮಾದರಿಗಳಲ್ಲಿ ದೊಡ್ಡ ಪಾಠ-ಶಿವಾನಂದ ಕಳವೆ

ರಾಜ್ಯದ ಬಹುತೇಕ ಕಡೆ ಈ ವರ್ಷ ಮಳೆ ಸುರಿದಿಲ್ಲ, ಮಲೆನಾಡಿನಲ್ಲಿ ಒರತೆ ಜಲ ಉದಯಿಸುವಷ್ಟರಲ್ಲಿ ಮಳೆಗಾಲ ಮುಗಿದಿದೆ. ಘಟ್ಟದ ಸೀಮೆಯ ನದಿ, ಹಳ್ಳಗಳಲ್ಲಿ ಬೇಸಿಗೆಯ ಕಟ್ಟಕಡೆಯ ಏಪ್ರಿಲ್-ಮೇದಲ್ಲಿರುವಷ್ಟು ನೀರು ಕಳೆದ ಡಿಸೆಂಬರ್‌ನಲ್ಲಿ ಹರಿಯುತ್ತಿತ್ತು, ಈಗ ಬಹುತೇಕ ಬತ್ತಿ ಹೋಗಿದೆ. ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಲಿದೆ. ಅಣೆಕಟ್ಟುಗಳು ಒಣಗುತ್ತಿರುವುದರಿಂದ ವಿದ್ಯುತ್ ಕ್ಷಾಮ ಹೆಚ್ಚಲಿದೆ. ಕೊಳವೆ ಬಾವಿಯ ಸಾವಿರ ಅಡಿ ಆಳದಲ್ಲಿ ನೀರಿರಬಹುದು, ಆದರೆ ಬಿಂದಿಗೆಯಿಂದ ಎತ್ತಲಾಗುವುದಿಲ್ಲ! ನಿಸರ್ಗದ ಸವಾಲಿನೆದುರು ನಾವು ಸೋತಿದ್ದೇವೆ.

ಕೇಂದ್ರೀಕೃತ ವ್ಯವಸ್ಥೆಯ ಮೂಲಕ ಕುಡಿಯುವ ನೀರು ಪೂರೈಸುವ ಯೋಜನೆಗಳನ್ನು ಸರ್ಕಾರ ರೂಪಿಸಿದೆ. ಮನೆ ಮನೆಯಲ್ಲಿ ಬಾವಿಯಿರುವ ಕರಾವಳಿ, ಮಲೆನಾಡಿನಲ್ಲಿಯೂ ‘ಸರ್ಕಾರಿ ನೀರು’ ಬಂದು ಪಾರಂಪರಿಕ ನೀರಿನ ಜ್ಞಾನ ನಶಿಸಿದೆ. ಮೂರು ದಶಕಗಳ ಹಿಂದೆ ತೋಟದ ಕಾಲುವೆಯಲ್ಲಿ ಬೇಸಿಗೆಯ ಕೊನೆಯಲ್ಲಿಯೂ ನೀರು ಹರಿಯುತ್ತಿದ್ದ ನೆನಪಿನ ಚಿತ್ರಗಳು ತುಮಕೂರಿನಲ್ಲಿ ಸಿಗುತ್ತವೆ. ತೆರೆದ ಬಾವಿಯಿಂದ ಕೃಷಿ ಸಮೃದ್ಧಿಯನ್ನು ಬೀದರ್ ಕಂಡಿದೆ. ಚಿತ್ರದುರ್ಗದ ಚಳ್ಳಕೆರೆಯ ವಿಡಪನಕುಂಟೆ ಹಳ್ಳಿಗರಿಗೆ 40 ವರ್ಷಗಳ ಹಿಂದೆ ಹಳ್ಳದಲ್ಲಿ ನೀರು ಹರಿಯುತ್ತಿದ್ದ ನೆನಪುಗಳಿವೆ. ಇಂದು ಈ ಎಲ್ಲ ಪ್ರದೇಶಗಳಲ್ಲಿ ಕೊಳವೆಬಾವಿಯ ಆಳ ಸಾವಿರ ಅಡಿ ದಾಟಿದೆ. ಗುಡ್ಡದ ತಗ್ಗಿನ ನೆಲೆಯಲ್ಲಿ ನೀರಿನ ನೆಮ್ಮದಿಯಿರುವುದನ್ನು ರಾಮನಗರ, ಬೆಳಗಾವಿಯ ಸೊಗಲ್, ಬಾದಾಮಿಯ ಬನಶಂಕರಿ, ಗದಗದ ಕಪ್ಪತಗುಡ್ಡದ ನೆಲೆಗಳಲ್ಲಿ ನೋಡಬಹುದಿತ್ತು. ಕೋಲಾರದಲ್ಲಿ ಕೊಳವೆ ಬಾವಿಯ ಆಳ 1900  ಅಡಿಗೆ ಹೋಗಿದೆ. ಆದರೆ ಅಲ್ಲಿನ ಅಂತರಗಂಗೆ ಬೆಟ್ಟದಲ್ಲಿ ತೆರೆದ ಬಾವಿಗಳಲ್ಲಿ 20  ಅಡಿಗೆ ಇಂದಿಗೂ ನೀರಿದೆ. ರಾಜ್ಯದ ಗುಡ್ಡ ಬೆಟ್ಟ ಸುತ್ತಿದರೆ ಕಾಡು ನೀರಿನ ಸಂಬಂಧ ಸೂಕ್ಷ್ಮಗಳು ಅರ್ಥವಾಗುತ್ತವೆ.

ನಗರಗಳ ಕಾಂಕ್ರೀಟ್ ಅಭಿವೃದ್ಧಿಗೆ ಹೊರಟು ನೈಸರ್ಗಿಕ ಸಂಪತ್ತನ್ನು  ವಿವೇಚನೆಯಿಲ್ಲದೇ ದೋಚಿದ್ದೇವೆ. ಇಂದು ಎಲ್ಲ ನದಿ ನೆಲೆಗಳಲ್ಲಿ ಮರಳು ಬಾಚುವವರು ನಿಂತಿದ್ದಾರೆ. ಬೀದರ್ ಜಿಲ್ಲೆಯ ಹುಲಸೂರಿನ ಸನಿಹದ ಮಾಂಜ್ರಾ ನದಿಯಲ್ಲಿ ಮರಳೆತ್ತುವುದೇ ಮುಖ್ಯ ಕಾಯಕವಾಗಿ 50 ಟ್ರ್ಯಾಕ್ಟರ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಒಂದು ಟ್ರ್ಯಾಕ್ಟರ್ ಜೊತೆ ಮೂರು ನಾಲ್ಕು ಜನ ದುಡಿಯುತ್ತಾರೆ. ಕೃಷಿ ದುಡಿಮೆಗಿಂತ ಮರಳು ಸಾಗಣೆ ಗ್ರಾಮೀಣ ಜನಕ್ಕೆ ಲಾಭದಾಯಕ ಕಾಯಕವಾಗಿದೆ. ಇದೇ ಸ್ಥಿತಿ ಕೋಲಾರ, ಶಿವಮೊಗ್ಗ, ಹರಿಹರ ಸೇರಿದಂತೆ ರಾಜ್ಯದ  ಎಲ್ಲೆಡೆಯಿದೆ. ಇಟ್ಟಿಗೆ ತಯಾರಿಗಾಗಿ ಕೆರೆ, ನದಿಗಳ ಆಕ್ರಮಣ ನಡೆದಿದೆ. ಗ್ರಾಮೀಣ ನೀರಿನ ಮೂಲಗಳನ್ನು ಬಲಿ ಕೊಡುತ್ತಿದ್ದೇವೆ. ನಾಳಿನ ದಿನಗಳಲ್ಲಿ ನೀರು ಚಿನ್ನವಾಗುವುದು ಖಾತ್ರಿಯಾಗಿದೆ.

ಮನೆ ನಿರ್ಮಿಸುವಾಗ ಹಿಂದೆ ಬಾವಿ ತೆಗೆಯುತ್ತಿದ್ದರು, ತೆರೆದ ಬಾವಿಯನ್ನು ನೋಡಿ ನೀರಿನ ಸ್ಥಿತಿ ಗಮನಿಸಬಹುದಿತ್ತು. ಅಂತರ್ಜಲ ಏರಿದ್ದು, ಕುಸಿದದ್ದು ಎಲ್ಲರ ಕಣ್ಣಿಗೆ ಕಾಣಿಸುತ್ತಿತ್ತು. ಪುರಸಭೆ, ಗ್ರಾಮ ಪಂಚಾಯಿತಿ ನೀರು ಸರಬರಾಜು ವ್ಯವಸ್ಥೆಗೆ ಅಂಟಿಕೊಂಡ ನಮಗೆ ಬಾವಿಯಿಲ್ಲದೇ ಬದುಕುವುದು ಅಭ್ಯಾಸವಾಗಿದೆ. ಆರೋಗ್ಯದ ಕಾಳಜಿಯಿಂದ ಶುದ್ಧ ನೀರು ಕುಡಿಯಲು ಹಂಬಲಿಸುವ ವಿದ್ಯಾವಂತ(?)ರಿಗೆ ಸುತ್ತಲಿನ ನೀರಿನ ಮೂಲಗಳನ್ನು ಸರಿಯಾಗಿಡುವ ಬುದ್ಧಿಯಿಲ್ಲದಂತಾಗಿದೆ. ಗಟಾರಕ್ಕೆ ಕುಡಿಯುವ ನೀರು ಹರಿದು ಪೋಲಾಗುತ್ತಿದ್ದರೂ ಸಂರಕ್ಷಿಸುವ ಪ್ರಜ್ಞೆಯಿಲ್ಲ. ಕೆರೆಗಳಿಗೆ ರಾಸಾಯನಿಕ ತ್ಯಾಜ್ಯಗಳು ಸೇರಿ ನೀರಿಗೆ ಬೆಂಕಿ ಬೀಳುವ ಸ್ಥಿತಿ ಬಂದಿದೆ.

ಬೃಹತ್ ನೀರಾವರಿ ಯೋಜನೆಗಳಲ್ಲಿ ನೀರಿನ ಸಮರ್ಥ ಬಳಕೆಗೆ ರೈತರನ್ನು ಜಾಗೃತಗೊಳಿಸಬೇಕು.  ನೀರಿನ ಅತಿ ಬಳಕೆಯಿಂದ ಕೃಷಿ, ಮಣ್ಣಿನ ಮೇಲೆ ಪರಿಣಾಮವಾಗಿದೆ. ವರ್ಷದ ನಾಲ್ಕು ತಿಂಗಳು ಆಹಾರ ಧಾನ್ಯ ಬೆಳೆಗೆ ಬಳಸುವ ನೀರನ್ನು ಅಡಿಕೆ, ಬಾಳೆ, ತಾಳೆಗೆ ಬಳಸುತ್ತ ಹೋಗಿದ್ದೇವೆ, ನೀರು ಬಳಕೆ ನಿಯಂತ್ರಿಸುವ ಶಕ್ತಿ  ಯಾರಿಗೂ ಇಲ್ಲ. ಆಳುವ ಸರ್ಕಾರ ನೀರು ನಿಯಂತ್ರಣಕ್ಕೆ ಯೋಜನೆ ರೂಪಿಸಿದರೆ ವಿರೋಧ ಪಕ್ಷ ಹೋರಾಟಕ್ಕೆ ನಿಲ್ಲುತ್ತದೆ. ನೀರಿನ ವಸ್ತುಸ್ಥಿತಿ ಅರ್ಥ ಮಾಡಿಕೊಂಡು ಜನರನ್ನು ಎಚ್ಚರಿಸಬೇಕಾದ ರಾಜಕೀಯ ವ್ಯವಸ್ಥೆ ಅಧಿಕಾರ ಚಿಂತನೆಯಲ್ಲಿ ಮುಳುಗಿದೆ. ಭೂಮಿಯಲ್ಲಿ ಸವುಳು-ಜವುಳು ಸಮಸ್ಯೆ ಹೆಚ್ಚುತ್ತಿದೆ. ಮಣ್ಣಿನ ನೀರು ಹಿಡಿದುಕೊಳ್ಳುವ ಸಾಮರ್ಥ್ಯಕ್ಕೂ, ನೀರಿನ ಬಳಕೆಗೂ ಸಂಬಂಧವಿಲ್ಲದಾಗಿದೆ.

ನೀರಾವರಿ ಕಾಲುವೆ, ಭೂಮಿಗಳಲ್ಲಿ ಹೆಚ್ಚು ಹೆಚ್ಚು ಮರ ಬೆಳೆಸಲು ಉತ್ತೇಜನ ನೀಡಬೇಕು. ನೀರಾವರಿ ನೆಲೆಗಳಲ್ಲಿ ಕೆರೆಗಳಿಗೆ ಮರುಜೀವ ನೀಡಿ ಅವಕ್ಕೆ ನೀರು ತುಂಬಿಸುವುದಕ್ಕೆ ಪ್ರಥಮ ಆದ್ಯತೆ ನೀಡಬೇಕಿದೆ.  ಉದಾಹರಣೆಗೆ ಹೊಸಪೇಟೆ ಡ್ಯಾಂನಿಂದ ಹೆಚ್ಚುವರಿಯಾಗಿ  ಮಳೆಗಾಲದಲ್ಲಿ ನದಿಗೆ ಬಿಡುವ ನೀರನ್ನು ಬರದ ಚಿತ್ರದುರ್ಗದ ಮೊಳಕಾಲ್ಮುರು ಪ್ರದೇಶದ ಕೆರೆಗಳಿಗೆ ತುಂಬಿಸುವ ಯೋಜನೆ ರೂಪಿಸಬಹುದು. ಸವಣೂರಿನ ಮೋತಿ ತಲಾಬ್‌ಗೆ ಮಳೆಗಾಲದಲ್ಲಿ ವರದಾ ನದಿ ನೀರು ತುಂಬಿಸಿದ ಕಾರ್ಯವನ್ನು ಇನ್ನುಳಿದ ಕೆರೆಗಳಿಗೂ ವಿಸ್ತರಿಸಬಹುದು. ಭೂಮಿಗೆ ನೇರವಾಗಿ ನೀರು ನೀಡುವುದಕ್ಕಿಂತ ಮಳೆ ಸುರಿಯದ ಸಂದರ್ಭಗಳಲ್ಲಿ ಕೆರೆಗಳಿಗೆ ತುಂಬಿಸುವುದು ಅಗತ್ಯವೆಂಬುದು ಹಾಸನ, ತುಮಕೂರು ರೈತರ ಅನುಭವ. ಅಕಾಲಿಕ ಮಳೆ ಇನ್ನು ಮಾಮೂಲಿ. ಸುರಿದ ಮಳೆ ನೀರು ಹಿಡಿದಿಡುವ ತಂತ್ರ ರೂಪಿಸುವ ಯೋಜನೆಗಳ ಅಗತ್ಯವಿದೆ.  ಮಹಾರಾಷ್ಟ್ರ ಸರ್ಕಾರ ವಿವಿಧ ಬೃಹತ್ ಕಂಪೆನಿಗಳ ನೆರವಿನಿಂದ ತನ್ನ ರೈತರಿಗೆ ಸರಣಿ ಒಡ್ಡು ನಿರ್ಮಿಸಲು ನೆರವಾಗುತ್ತಿದೆ. ಖಾಸಗಿ ಕಂಪೆನಿಗಳು ಲಾಭಾಂಶದ ಶೇ  2ರಷ್ಟು ಹಣವನ್ನು ಈ ಕಾರ್ಯಕ್ಕೆ ನೀಡುತ್ತಿವೆ. ಇದೇ ರೀತಿ ನಮ್ಮ ರಾಜ್ಯದ ಬರ ಪೀಡಿತ ಪ್ರದೇಶಗಳಲ್ಲಿ  ನೆಲ ಜಲ ಸಂರಕ್ಷಣೆಯ ಕಾರ್ಯವನ್ನು ನಡೆಸಬಹುದು.

ವಾಣಿಜ್ಯ ಕೃಷಿಯ ಆವೇಗದಲ್ಲಿ ಕೆರೆಗಳು ಹಾಳಾಗಿವೆ, ಕಾಲುವೆಗಳು ಮುಚ್ಚಿವೆ. ವಿಶೇಷವಾಗಿ 1983ರ ನಂತರದಲ್ಲಿ ಜಲಕ್ಷಾಮ ಶುರುವಾಗಿ ಇಂದು ಹಲವು ಜಿಲ್ಲೆಗಳಲ್ಲಿ ಸಮಸ್ಯೆ ಭೀಕರವಾಗಿದೆ. ಮಳೆ ಸುರಿಯುವ ಪ್ರಮಾಣದಲ್ಲಿ ಬಹಳ ವ್ಯತ್ಯಾಸ ಕಂಡುಬರುವುದಿಲ್ಲ. ಆದರೆ ಕೆರೆಗಳು ಹಾಳಾದಂತೆ ಕೊಳವೆ ಬಾವಿಯ ನೀರಿನ ಬಳಕೆ, ವಿದ್ಯುತ್ ಬಳಕೆ ಜಾಸ್ತಿಯಾಗಿದೆ.

ಕೃಷಿಕರೂ ಸೇರಿದಂತೆ ರಾಜ್ಯದ ಎಲ್ಲರಲ್ಲಿ ಜಲ ಸಾಕ್ಷರತೆ ಹೆಚ್ಚಿಸಲು ಮುಂದಾಗಬೇಕಿದೆ. ‘ಜಲ ಅಕಾಡೆಮಿ’ ಆರಂಭಿಸಬೇಕು. ಈಗಿರುವ ವಿಕೇಂದ್ರೀಕೃತ ಸಣ್ಣ ಸಣ್ಣ ಸಂರಕ್ಷಣಾ ಯಶೋಗಾಥೆಗಳ ಮೂಲಕವೇ ಸಮುದಾಯ ಜಾಗೃತಿ ಮೂಡಿಸಬೇಕಿದೆ. ಮಳೆ ನೀರನ್ನು ಸುರಕ್ಷಿತವಾಗಿ ಸಂಗ್ರಹಿಸಿ ಕುಡಿಯಲು ಬಳಸುವ ಉತ್ತಮ ನಿದರ್ಶನಗಳು ತುಮಕೂರು ಗ್ರಾಮೀಣ ಪ್ರದೇಶದಲ್ಲಿವೆ. ಒಂದು ಕುಟುಂಬ ಕುಡಿಯುವ ನೀರಿನ ವಿಚಾರದಲ್ಲಿ ಸ್ವಾವಲಂಬಿಯಾದರೆ ಆರೋಗ್ಯ, ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತವೆ. ಜಲ ಸಂರಕ್ಷಣೆಯ ವಿವಿಧ ರಚನೆ, ಚಾವಣಿ ನೀರಿನ ಜಲ ಸಂರಕ್ಷಣಾ ಸಲಕರಣೆಗಳ ಪ್ರದರ್ಶನಾಲಯವನ್ನು ಪ್ರತಿ ಜಿಲ್ಲೆ ಒಳಗೊಂಡಿರಬೇಕು. ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಚಾವಣಿ ನೀರು ಸಂಗ್ರಹದ ಸರಳ ಮಾದರಿಯನ್ನು ಪರಿಚಯಿಸಬೇಕು.

ಕರ್ನಾಟಕದ ನೀರಾವರಿ ಪರಂಪರೆ ಶ್ರೀಮಂತವಾಗಿದೆ. ಕದಂಬರು ‘ಗುಡ್ಡತಟಾಕ’ವನ್ನು ನಾಲ್ಕನೇ ಶತಮಾನದಿಂದಲೇ ಆರಂಭಿಸಿದ್ದಾರೆ. ಚಾರಿತ್ರಿಕ ಮಾದರಿಗಳು ಇಂದಿಗೂ ನಿಶ್ಚಿತ ಜಲನಿಧಿಗಳಾಗಿವೆ. ಇಂದು ಭೀಕರ ಬರದಿಂದ ತತ್ತರಿಸಿದ ನೆಲೆಯಲ್ಲಿ ಲಕ್ಷ ಲಕ್ಷ ಸೈನಿಕರಿದ್ದರು, ರಾಜಧಾನಿಯಿತ್ತು. ಕೋಟೆಕೆರೆಗಳ ಮೂಲಕ ಸೈನ್ಯಕ್ಕೆ ನೀರಿನ ಸೌಲಭ್ಯವಿತ್ತು. ಗುಡ್ಡದ ತುತ್ತ ತುದಿಯ ಗಿರಿದುರ್ಗ, ವನದುರ್ಗಗಳಲ್ಲಿ ಇಂದಿಗೂ ನೀರಿದೆ. ಸಂರಕ್ಷಣೆಯ ಐತಿಹಾಸಿಕ ಮಾದರಿ ಅರಿಯಬೇಕಿದೆ.

ಗ್ರಾಮೀಣ ಕುಡಿಯುವ ನೀರಿನ ಯೋಜನೆ ರೂಪಿಸುವಾಗ ಜಲಮೂಲ ಸಂರಕ್ಷಣೆಗೆ ಗಮನ ನೀಡಬೇಕು. ಮಹಾರಾಷ್ಟ್ರದಲ್ಲಿ ನದಿ, ಹಳ್ಳಗಳ ಪಕ್ಕ ಬಾವಿಗಳನ್ನು ರೂಪಿಸುವ ವಿಧಾನವಿದೆ. ಅಲ್ಲಿನ ಹಳ್ಳಕ್ಕೆ ಸರಣಿ ಒಡ್ಡುಗಳನ್ನು ರೂಪಿಸಿ ನೀರುಳಿಸುವ ತಂತ್ರ ಅನುಸರಿಸಲಾಗಿದೆ.
ತೀವ್ರ ಜಲಕ್ಷಾಮ ಅನುಭವಿಸುತ್ತಿರುವ ಈ ದಿನಗಳಲ್ಲಿ ಸರ್ಕಾರದ ಕ್ರಮಗಳೇನು? ಗಮನಿಸಿದರೆ ಬೇಜಾರಾಗುತ್ತದೆ. ಜಲಸಂರಕ್ಷಣೆಯ ಯಶೋಗಾಥೆಗಳು ತೀವ್ರ ಬರದ ಕೋಲಾರ, ತುಮಕೂರು, ಕೊಪ್ಪಳ, ಧಾರವಾಡ, ವಿಜಯಪುರ, ತಿಪಟೂರು ಸೇರಿದಂತೆ ಹಲವೆಡೆಯಿವೆ.

ಆದರೆ ನೆಲದ ಮಾದರಿಯನ್ನು ಕಣ್ಣೆತ್ತಿ ನೋಡಲು ಬಿಡುವಿಲ್ಲ. ಮೋಡ ಬಿತ್ತನೆ, ನದಿ ಜೋಡಣೆ ಮಾತಾಡುವವರಿಗೆ ನೆಲದಲ್ಲಿ ಯಶಸ್ಸು ಕಂಡ ಸಣ್ಣ ಸಣ್ಣ ವಿಧಾನಗಳ ಬಗ್ಗೆ  ಕನಿಷ್ಠ ಆಸಕ್ತಿಯಿಲ್ಲ. ಪತ್ರಕರ್ತ ಪಿ.ಸಾಯಿನಾಥ್  ‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಎಂದಿದ್ದಾರೆ. ಸರ್ಕಾರ ಹೀಗೇ ವರ್ತಿಸುತ್ತಿದೆ. ಅಣೆಕಟ್ಟು, ದೊಡ್ಡ ಪೈಪ್‌ಗಳ ಸಾವಿರ ಸಾವಿರ ಕೋಟಿ ಯೋಜನೆಗಳಲ್ಲಿಯೇ ಎಲ್ಲ ಮುಳುಗಿದ್ದಾರೆ. ಅಂತರ್ಜಲ ಇಲಾಖೆಯ ಜಲತಜ್ಞರಂತೂ ನೀರು ಮಂಜುಗಡ್ಡೆ ರೂಪದಲ್ಲಿ ಎಷ್ಟಿದೆ, ಸಾಗರದಲ್ಲಿ ಎಷ್ಟಿದೆ ಎಂಬ 40 ವರ್ಷಗಳ ಹಳಸಲು ಮಾಹಿತಿ ಹೇಳುತ್ತ ಜಲಜಾಗೃತಿಗೆ ಹಣ ಖರ್ಚು ಮಾಡುತ್ತಿದ್ದಾರೆ. ರಾಜ್ಯದ ನೀರ ನೆಮ್ಮದಿಗೆ ಕೆರೆಯ ಹೂಳು ತೆಗೆಯುವುದಕ್ಕಿಂತ ಮುಂಚೆ ಸಚಿವರ, ಅಧಿಕಾರಿಗಳ ತಲೆಯ ಹೂಳು ತೆಗೆಯುವ ಕಾರ್ಯಕ್ರಮ ಮೊದಲು ನಡೆಯಬೇಕಿದೆ.

ಬೆಲೆ ಅರಿಯದವರು…
ಜಲ ಸಂರಕ್ಷಣೆ ಜಾಗೃತಿಯ ಸ್ಟಿಕರ್‌ಗಳನ್ನು ಹೋಟೆಲ್, ಶಾಲೆಗಳಿಗೆ ಹೋದಾಗ ನೀಡುತ್ತಿದ್ದೇನೆ. ಇತ್ತೀಚೆಗೆ ಸ್ಟಿಕರ್ ಪಡೆದ ಗದಗದ ಖಾನಾವಳಿ ಯಜಮಾನರು ಅರೆಕ್ಷಣದಲ್ಲಿ ನಾಪತ್ತೆಯಾದರು, ಮರಳಿ ಬಂದವರಲ್ಲಿ ಸಿಟ್ಟು ಕುದಿಯುತ್ತಿತ್ತು.

‘ನೀವು ಹೊರಗಡೆ ಕೈ ತೊಳೆಯಲು ನೀರು ಖರ್ಚಾಗುವುದಷ್ಟನ್ನೇ ನೋಡಿ ವ್ಯಥೆಪಟ್ಟಿದ್ದೀರಿ, ಒಳಗಡೆ ಜಲಪಾತದಂತೆ ಇಡೀ ದಿನ ನಲ್ಲಿ ಸುರಿಯುತ್ತದೆ. ತೊಟ್ಟಿಯ ನೀರು ಖಾಲಿಯಾದರೆ ತಲೆ ಕೆಟ್ಟು ಹೋಗುತ್ತದೆ. ದುಡಿದ ಹಣವೆಲ್ಲ ಟ್ಯಾಂಕರ್ ನೀರಿಗೆ ಖರ್ಚಾಗುತ್ತಿದೆ’ ಎಂದರು. ನೀರಿಲ್ಲದೇ ಖಾನಾವಳಿ ನಡೆಯುವುದಿಲ್ಲ. ಕೆಲಸಗಾರರಿಗೆ ಪಾಠ ಹೇಳಲು ಅಡುಗೆ ಮನೆಗೆ ಹೋದದ್ದಾಗಿ ವಿವರಿಸಿದರು.

ಅದು ಹುಬ್ಬಳ್ಳಿ ಬಸ್ ನಿಲ್ದಾಣದ ಹೋಟೆಲ್, ನಿತ್ಯ ಸಾವಿರಾರು ಜನ ಬರುತ್ತಾರೆ. ಅದರಲ್ಲಿಯೂ ಕಾಲೇಜು ಮಕ್ಕಳು ಉರಿಬಿಸಿಲಲ್ಲಿ ಬಂದು ಕುಡಿಯಲು ನೀರು ಕೇಳುತ್ತಾರೆ. ನೀರು ಕುಡಿಯಲು ಬಂದವರು ಕೈ ತೊಳೆಯಲು ನಲ್ಲಿಯ ಸನಿಹ ನಿಂತರೆ ಸಣ್ಣ ಸ್ನಾನ ಮಾಡುವಷ್ಟು ನೀರನ್ನು ಮುಖ ತೊಳೆಯಲು ಖರ್ಚು ಮಾಡುತ್ತಾರೆ. ‘ಇವರೆಲ್ಲ ನೀರಿನ ಬೆಲೆ ತಿಳಿಯುವುದು ಯಾವಾಗ’ ಎಂದು ಹೋಟೆಲ್‌ನವರು ಪ್ರಶ್ನಿಸುತ್ತಾರೆ.

ಸ್ನಾನಕ್ಕೆ ನಿಂತರೆ ಮೂರು ಬಕೆಟ್ ತಣ್ಣೀರು ಚೆಲ್ಲಿದ ಬಳಿಕ ಹೋಟೆಲ್ ನಳದಲ್ಲಿ ಬಿಸಿ ನೀರು ಬರುತ್ತದೆ. ಇಂದು ಅಣೆಕಟ್ಟೆಗಳು ಬರಿದಾಗುತ್ತಿದ್ದರೂ ನೀರಿನ ಕಷ್ಟ ನಾಗರಿಕ ಸಮುದಾಯಕ್ಕೆ ಅರ್ಥವಾದಂತೆ ಕಾಣಿಸುತ್ತಿಲ್ಲ. ಕುಡಿಯುವ ನೀರನ್ನು ವಾಹನ ತೊಳೆಯಲು ಬಳಸುವವರು, ನೀರಿಗೆ ಬಿಲ್ ಕೊಡುತ್ತೇವೆಂದು ಕಣ್ಮುಚ್ಚಿ ಕೈತೋಟಕ್ಕೆ ಹನಿಸುವವರು ಬೆಂಗಳೂರು ಸೇರಿದಂತೆ ಎಲ್ಲೆಡೆ ಸಿಗುತ್ತಾರೆ.