ಸಂಬಂಧಗಳಿಲ್ಲದ ಅರ್ಥಶಾಸ್ತ್ರ, ಮೂಳೆಗಳಿಲ್ಲದ ಅಸ್ಥಿಪಂಜರ-ಕೆ.ಸಿ.ರಘು
[ಅರ್ಥಶಾಸ್ತ್ರವು – ಸಾಮಾಜಿಕ ಆಯಾಮ ಮತ್ತು ಪರಿಸರ ಸಂಬಂಧ ಹೊರಗಿಟ್ಟು ಬೆಳೆದರೆ ರಕ್ತ, ಮಾಂಸವಿಲ್ಲದ ಅಸ್ಥಿಪಂಜರವಾಗಬಹುದು ಎಂಬುದನ್ನು ‘ಸಂಬಂಧಗಳಿಲ್ಲದ ಅರ್ಥಶಾಸ್ತ್ರ ಮೂಳೆಗಳಿಲ್ಲದ ಅಸ್ಥಿಪಂಜರ’ಎಂಬ ಲೇಖನದಲ್ಲಿ ಆಹಾರ ತಜ್ಞ ಕೆ.ಸಿ.ರಘು 28.2.2016ರ ಕನ್ನಡಪ್ರಭದಲ್ಲಿ ವಿವರಿಸಿದ್ದಾರೆ.]
ಚಿಕ್ಕ ವಯಸ್ಸಿನಲ್ಲಿ ಅಜ್ಜಿ ಕಥೆ ಕೇಳಿದ ಮಕ್ಕಳು ಮುಂದೆ ಗಣಿತದಲ್ಲಿ ಯಶಸ್ಸುಗಳಿಸುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನವೊಂದು ತಿಳಿಸುತ್ತದೆ. ಇದೆಂತಹ ಸಂಬಂಧ ಎನಿಸದಿರದು. ಐನ್‍ಸ್ಟೈನ್ ‘ಜ್ಞಾನಕ್ಕಿಂತ ಕಲ್ಪನಾ ಶಕ್ತಿ ಬಹು ಮುಖ್ಯ’ ಎನ್ನುವುದು ಇದೇ ಸಂಬಂಧವನ್ನು ಸೂಚಿಸುವಂತದ್ದು. ಕಥೆಗೂ ಗಣಿತಕ್ಕೂ ಸಂಬಂಧವಿದ್ದಂತೆ, ಆರ್ಥಿಕ ಅಭಿವೃದ್ಧಿ ಮತ್ತು ಜನರ ನಡುವೆ ಇರುವ ವಿಶ್ವಾಸಾರ್ಹತೆ, ನಂಬಿಕೆಗೂ ಪರಸ್ಪರ ಸಂಬಂಧದ ಬಗ್ಗೆ ವಿಶ್ವ ಬ್ಯಾಂಕ್ ಹಾಗು ಇತರೇ ಸಂಸ್ಥೆಗಳು ದೃಷ್ಟಿ ಹರಿಸಿವೆ. ಇದುವರೆಗೂ ಆರ್ಥಿಕ ಲೆಕ್ಕಾಚಾರಕ್ಕೆ ಮಾನವೀಯ ವಿಚಾರಗಳು, ಮೌಲ್ಯಗಳು, ಸಂಸ್ಕೃತಿಗೂ ಸಂಬಂಧವಿಲ್ಲದಂತೆ ನೋಡಲಾಗುತ್ತಿತ್ತು. ಆರ್ಥಿಕತೆಯೆಂದರೆ ಜಿಡಿಪಿ(Gross domestic product), ಹಣ, ಹಣದುಬ್ಬರ, ಅಸಲು, ಬಡ್ಡಿ, ಚಕ್ರಬಡ್ಡಿ, ಖರ್ಚು-ವೆಚ್ಚ, ಉಳಿತಾಯ, ಬಂಡವಾಳ ಹೂಡಿಕೆ, ಉತ್ಪಾದನೆ, ಉತ್ಪಾದಕತೆ, ಷೇರು, ಏರು, ಪೇರು.. ಇಷ್ಟರ ಚೌಕಟ್ಟಿನಲ್ಲಿ ವ್ಯವಹರಿಸುವಂತದ್ದಾಗಿದೆ. ತಾಮಾಷೆಯಾಗಿ, ಆಡಿಟರ್ ಕೆಲಸ ಅಂದರೆ ಯುದ್ಧ ಮುಗಿಯುವವರೆಗೆ ಬೆಟ್ಟದ ಹಿಂದೆ ಅವಿತು, ಯುದ್ಧ ಮುಗಿದ ಮೇಲೆ ಸತ್ತ ಹೆಣ ಲೆಕ್ಕ ಹಾಕುವವರು ಎನ್ನುವ ಮಾತಿದೆ.
ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಲೆಕ್ಕಕ್ಕೆ ತೆಗೆದುಕೊಳ್ಳದ, ಅನೇಕ ವಿಷಯಗಳು ಆರ್ಥಿಕತೆ ಮತ್ತು ಅಭಿವೃದ್ಧಿಗೆ ಭದ್ರ ಬುನಾದಿಗಳಾವೆ ಎನ್ನಲಾಗುತ್ತಿದೆ. ಸಾಮಾಜಿಕ ಬಂಡವಾಳ, ಸಾಂಸ್ಕೃತಿಕ ಬಂಡವಾಳ ಕೂಡ ಆರ್ಥಿಕ ಬಂಡವಾಳದಷ್ಟೇ ಮುಖ್ಯ ಎಂದು ಪರಿಗಣಿಸಬೇಕಾಗಿದೆ. ಯಾವ ದೇಶದಲ್ಲಿ ಸಾಮಾಜಿಕ ಬಂಡವಾಳ, ಅಂದರೆ ಜನರ ನಡುವಿನ ಪರಸ್ಪರ ನಂಬಿಕೆ, ವಿಶ್ವಾಸ, ಕಾಳಜಿ ಹೆಚ್ಚಿರುತ್ತದೆಯೋ ಅಂತಹ ದೇಶದಲ್ಲಿ ಆರ್ಥಿಕತೆ ಮತ್ತು ಅಭಿವೃದ್ಧಿ ಕೂಡಾ ಚೆನ್ನಾಗಿರುತ್ತದೆ. ಆರ್ಥಿಕ ತಜ್ಞರಿಗೆ ಇದು ಮನವರಿಕೆಯಾಗಿ ‘ನಂಬಿಕೆಯೆಂದರೆ 2% ಜಿಡಿಪಿ ಎಂದರೆ ಕಷ್ಟ! ನಂಬಿಕೆಗೆ ರೇಟ್ ಎಷ್ಟು ಎಂದು ಕೇಳಿದರೆ ಕಷ್ಟ. ನಂಬಿಕೆಯಿಲ್ಲದ ದೇಶದಲ್ಲಿ ಸಾಲ, ವ್ಯವಹಾರ, ಕೊಡು ಕೊಳ್ಳುವಿಕೆ ಸುಲಭವಲ್ಲ. ಎಲ್ಲದಕ್ಕೂ ಹೆಚ್ಚಾಗಿ ನಂಬಿಕೆ ಇರುವ ದೇಶದಲ್ಲಿ ನೆಮ್ಮದಿ, ಸಂತೋಷ ಹೆಚ್ಚಿರುವ ಸಾಧ್ಯತೆ ಉಂಟು. ನಂಬಿಕೆಯಿಲ್ಲದಿದ್ದರೆ ರಾತ್ರಿ ನಿದ್ರೆ ಕಮ್ಮಿಯಾಗಬಹುದು. ಇದಕ್ಕೆ ನಿದ್ದೆ ಮಾತ್ರೆ ತಿಂದು ಜಿಡಿಪಿ ಬೆಳಸಬಹುದು! ವಿಶ್ವಾಸ, ನಂಬಿಕೆ ದೇಶ ಕಟ್ಟುವಲ್ಲಿ ಆಧಾರವಾಗಿರುವ ಉದಾಹರಣೆ ಅನೇಕ. ನಾರ್ವೆ ಮತ್ತು ಇತರೆ ಸ್ಕಾಂಡಿನೇವಿಯ ದೇಶಗಳು ನಂಬಿಕೆ ಮತ್ತು ವಿಶ್ವಾಸಾರ್ಹತೆಯಲ್ಲಿ ಉನ್ನತ ಸ್ಥಾನದಲ್ಲಿವೆ. ಹಾಗೆಯೇ ಆರ್ಥಿಕತೆಯಲ್ಲಿ ಕೂಡ ಮುಂದುವರಿದ ರಾಷ್ಟ್ರಗಳಾಗಿವೆ. ಜರ್ಮನಿಯ ಹಣ್ಣಿನ ಮತ್ತು ಹೂದೋಟಗಳಲ್ಲಿ ಯಾರು ಬೇಕಾದರೂ ತೋಟಕ್ಕೆ ಹೋಗಿ ತಮಗೆ ಬೇಕಾದಷ್ಟು ಹೂ, ಹಣ್ಣು ತೆಗೆದುಕೊಂಡು ತೋಟದ ಗೇಟಿನ ಬಳಿ ಇಟ್ಟಿರುವ ಗಲ್ಲಾ ಪೆಟ್ಟಿಗೆಗೆ ಅಲ್ಲಿ ನಮೂದಿಸಿರುವ ಹಣ ಹಾಕಿ ಬರುತ್ತಾರೆ. ಯಾರು ಕಾಯುವರಿರುವುದಿಲ್ಲ! ಅದೆಂತಹ ನಂಬಿಕೆ. ಸಿಸಿ ಟಿವಿ ಕೂಡ ಇರುವುದಿಲ್ಲ. ಇದಕ್ಕೆ ವಿರುದ್ಧವಾಗಿ ಮಾತನಾಡುವವರು ಹೀಗಾಗಿ ಅಲ್ಲಿ ಹಿಟ್ಲರ್ ಹುಟ್ಟಿದ್ದು ಎನ್ನುತ್ತಾರೆ!
ಸ್ವಲ್ಪ ವರ್ಷ ಹಿಂದೆ ಚನ್ನೈ ನಗರದಲ್ಲಿ ಸ್ವಾಮಿ ಶಿವಾನಂದರ ಅನುಯಾಯಿಗಳು ‘ಅನ್ನಲಕ್ಷಿ’ ಎಂಬ ಹೋಟೆಲ್ ಪ್ರಾರಂಭಿಸಿದ್ದರು. ಅಲ್ಲಿಯ ವಿಶೇಷವೆಂದರೆ ರಸವತ್ತಾದ ಭೂರಿ ಭೋಜನಕ್ಕೆ ಇಷ್ಟು ಹಣ ಎಂದು ನಿಗದಿಸಿರಲಿಲ್ಲ. ಊಟವಾದ ಮೇಲೆ ತಮ್ಮಿಚ್ಛೆಗನುಗುಣವಾಗಿ ಪೆಟ್ಟಿಗೆಗೆ ಹಣ ಹಾಕುವುದಾಗಿತ್ತು. ಅನೇಕರು ಹಣ ಹಾಕದೇ ಪಟ್ಟಿಗೆ ಖಾಲಿ ಇರುತ್ತಿತ್ತು. ನಂತರ ಇಷ್ಟು ಹಣ ಎಂದು ನಿಗದಿಸಲಾಯಿತು. ಇದು ನಮ್ಮ ಕಥೆ. ಜಪಾನಿನಲ್ಲಿ ಮಧ್ಯ ರಾತ್ರಿಯಲ್ಲಿ ಯಾರೂ ಇಲ್ಲದ ಜಾಗದ ಟ್ರಾಫಿಕ್ ಸಿಗ್ನಲ್‍ನಲ್ಲಿ ಕೂಡ ಸಿಗ್ನಲ್ ಬರುವವರೆಗೂ ಕಾದು ಗಾಡಿ ಚಲಾಯಿಸುತ್ತಾರೆ. ನಮ್ಮಲ್ಲಿ ಸಿಗ್ನಲ್ ನೋಡುವುದಕ್ಕಿಂತ ಟ್ರಾಫಿಕ್ ಪೊಲೀಸ್ ಇದ್ದಾರೆಯೇ ಎಂದು ಅತ್ತಿತ್ತ ಕಣ್ಣಾಡಿಸಿ ರಭಸದಲ್ಲಿ ನುಗ್ಗಿ ಹಾರುತ್ತಾರೆ. ಮೊನ್ನೆ ಟ್ಯಾಕ್ಸಿ ಪೋಲಿಸ್ ಇಲ್ಲದಿದ್ದರೂ ನಿಲ್ಲಿಸಿದ್ದು ಗಮನಿಸಿ ವಿಚಾರಿಸಿದಾಗ ‘ಇಲ್ಲಿ ಸಿಸಿ ಟಿ.ವಿ ಇದೇ ಸಾರ್!’ ಎಂದರು. ಸದ್ಯದಲ್ಲೇ ಮನೆ ಮನೆಗೂ ಸಿಸಿಟಿವಿ ಬಂದರೂ ಬರಬಹುದು!
‘ರೆಸರ್‍ಜನ್ಸ್’ ಪತ್ರಿಕೆಯ ಸಂಪಾದಕ ಸತೀಶ್ ಕುಮಾರ್ ಕಾಲ್ನಡಿಗೆಯಲ್ಲಿ ಜಗತ್ತು ಸುತ್ತಲು ಹೊರಟಾಗ ವಿನೋಬಾ ಭಾವೆ ‘ಕೈಯಲ್ಲಿ ಕಾಸಿಲ್ಲದೆ ಜಗತ್ತು ಸುತ್ತಿ ಬಾ’ ಅದು ಸಮಾಜದ ಮೇಲಿಟ್ಟಿರುವ ನಿನ್ನ ನಂಬಿಕೆಯನ್ನು ಸೂಚಿಸುತ್ತದೆ ಎಂದು ಸಲಹೆ ಕೊಡುತ್ತಾರೆ. ಅವರು ಹಾಗೆಯೇ ನಡೆದುಕೊಳ್ಳುತ್ತಾರೆ. ಅವರನ್ನು ಕಾಲ್ನಡಿಗೆಯಲ್ಲಿ ಭೂಮಿ ಸುತ್ತಿದವರು-earth walker-ಎಂದು ಗುರುತಿಸುತ್ತಾರೆ. ಹಳೆಯ ಕಥೆಯೊಂದರ ಸಾರಾಂಶ ಹೀಗಿದೆ: ಕುದುರೆ ಸವಾರನಿಗೆ ಕುಂಟಿಕೊಂಡು ಅಂಗವಿಕಲನಂತೆ ಎದುರಿಗೆ ಸಿಕ್ಕವನನ್ನು ಕಂಡು ಮರುಕ ಗೊಂಡು ‘ನೀನು ಕುದುರೆ ಮೇಲೆ ಕುಳಿತುಕೋ, ನಾನು ನಡೆಯುತ್ತೇನೆ’ ಎಂದು ಅಂಗವಿಕಲನನ್ನು ಕುದುರೆ ಮೇಲೆ ಕೂರಿಸುತ್ತಾನೆ. ಆದರೆ ಆತ ಕುದುರೆ ಕದ್ದು ಹಾರಿಸಲು ಮುಂದಾದಾಗ ಅವನಿಗೆ ಕೂಗಿ ಹೇಳುತ್ತಾನೆ ‘ಇದನ್ನು ಯಾರಿಗೂ ಹೇಳಬೇಡ’ ಮುಂದೆ ಅಂಗವಿಕಲರನ್ನು ನಂಬದಂತಾದೀತು’ ಎನ್ನುತಾನೆ!
ಇದಕ್ಕೂ ಹೆಚ್ಚಾಗಿ ಇತ್ತೀಚಿಗೆ ಆ್ಯಕ್ಸಿಡೆಂಟ್ ಆದ ಕ್ಷಣಾರ್ಧದಲ್ಲಿ ದೇಹದ ಭಾಗಗಳನ್ನೇ ಕತ್ತರಿಸಿ ವಡವೆ ಕದಿಯುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಎತ್ತರಕ್ಕೆ ಹಾರಿದ ರಣಹದ್ದು ಹುಡುಕುವುದು ಹೆಣ ಎನ್ನುವಂತಾಯಿತ ನಮ್ಮ ಸಂಸ್ಕೃತಿ? ‘ಅಪರಾಧವನ್ನು ದ್ವೇಷಿಸಬೇಕೆ ವಿನಾಃ ಅಪರಾಧಿಯನ್ನಲ್ಲ’ ಎನ್ನುವ ಗಾಂಧೀವಾದದಂತೆ ನಮ್ಮ ಅವ್ಯವಸ್ಥೆಯ ಬೇರು ಬಡಕಲು ಸಾಮಾಜಿಕ ಸಂಬಂಧಗಳಲ್ಲುಂಟೋ ತಿಳಿಯದು.
ಬ್ರೌನ್ ವಿಶ್ವವಿದ್ಯಾಲಯದ ಅಶುತೊಶ್ ವಾಶ್ರ್ನಿ ಸಮಾಜದಲ್ಲಿ ಎರಡು ರೀತಿಯ ಅವಶ್ಯಕ ಸಂಬಂಧಗಳನ್ನು ಉಲ್ಲೇಕಿಸುತ್ತಾರೆ. He calls them bonding and bridging. ಬಾನ್ಡಿಂಗ್ ಎನ್ನುವ ಬೆಸುಗೆ ತಮ್ಮ ಕುಟುಂಬ, ನೆಂಟರು, ಬಂಧು ಬಳಗದ ಜೊತೆ ಇರುವುದಾದರೆ, ಇದನ್ನು ಮೀರಿ ಸಮಾಜದ ವೈವಿಧ್ಯತೆಯೊಂದಿಗೆ ಬೆಸೆಯುವ ಸಂಬಂಧಗಳನ್ನು ಸೇತುವೆ ಕಟ್ಟುವ ಪ್ರಕ್ರಿಯೆ ಎನ್ನುತ್ತಾರೆ. ಎರಡೂ ಸಾಮಾಜಿಕ ಭದ್ರತೆಗೆ, ಆರ್ಥಿಕ ಅಭಿವೃದ್ಧಿಗೆ ಅವಶ್ಯಕ ಎನ್ನುತ್ತಾರೆ. ನಮ್ಮಲ್ಲಿ ಹತ್ತಿರದ ಬಂಧು ಬಳಗದ ಜೊತೆ ಬೆಸುಗೆ ಚನ್ನಾಗಿರಬಹುದು. ಆದರೆ ಜಾತಿ, ಧರ್ಮ ಮೀರಿ ಸೇತುವೆ ಕಟ್ಟುವ ಕೆಲಸ ಕಮ್ಮಿ ಎನ್ನಬಹುದು. ಸುನಾಮಿ ಹೊಡೆತಕ್ಕೆ ಸಿಕ್ಕಿ ನಿರಾಶ್ರಿತರಾದವರಿಗೆ ತಾತ್ಕಾಲಿಕ ಟೆನ್ಟ್ ಹಾಕಿಕೊಟ್ಟಾಗ ‘ಪಕ್ಕದಲ್ಲಿ ನಮ್ಮ ಜಾತಿಯವರಿರಬೇಕು’ ಎಂದು ಬೇಡಿಕೆ ಇಟ್ಟ ಪ್ರಸಂಗಗಳಿವೆ! ಧಾರ್ಮಿಕ ಸಂಘ ಸಂಸ್ಥೆ, ಮಠ ಮಾನ್ಯಗಳು ಇಂತವರಿಗೇ ಓಟು ಹಾಕಬೇಕು ಎಂದು ಜನರನ್ನು ಕುರಿ ಮಂದೆಯಂತೆ ನಡೆಸಿಕೊಳ್ಳುವುದುಂಟು. ಇಂಗ್ಲೆಂಡ್‍ನಲ್ಲಿ ಚರ್ಚ್ ಈ ರೀತಿ ಆಜ್ಞೆ ಹೊರಡಿಸಿ ವಿವಾದಕ್ಕೀಡಾದ ಪ್ರಸಂಗಗಳಿವೆ.
ಸಮಾಜದಲ್ಲಿ ಸಂಬಂಧಗಳ ಸಡಿಲಿಕೆಯಾಗಿ ವ್ಯಕ್ತಿ ‘ಸ್ವತಂತ್ರನಾದರೆ’ ಒಂಟಿಯಾಗುವ ಸಾಧ್ಯತೆ ಹೆಚ್ಚು ಎಂದು ಮನಶಾಸ್ತ್ರಜ್ಞರ ಅಭಿಪ್ರಾಯ ಕೂಡ. ಶ್ರೇಷ್ಠ ಕಾದಂಬರಿಕಾರ ಕಮು ತನ್ನ ‘ಸ್ಟ್ರೇನ್ಜರ್’ ಎಂಬ ಕಾದಂಬರಿಯಲ್ಲಿ ನಾಯಕ ಮರ್ಸೊನ ಬಾಯಿಯಲ್ಲಿ ಪ್ರಾರಂಭದಲ್ಲಿ ಈ ಮಾತನಾಡಿಸುತ್ತಾನೆ: ‘ಅಮ್ಮ ಇಂದು ಸತ್ತಳು, ಅಥವಾ ನೆನ್ನೆ ಇರಬೇಕು, ಸರಿಯಾಗಿ ತಿಳಿಯದು’. ಮೈ ನಡುಗಿಸದೇ ಇರದು ಈ ಮಾತು. ಸಂಬಂಧ ಶೂನ್ಯನಾದವನ ಬಾಯಿಯಿಂದ ಮಾತ್ರ ಈ ಮಾತು ಬರಬಹುದು. ಅನಾದರ ಭಾವನೆ ಹೆಚ್ಚಾಗುತ್ತಿದೆ ಅದರಲ್ಲಿಯೂ ಯುವಕರಲ್ಲಿ ಎಂದು ಹಲವರು ಹೇಳುವುದುಂಟು. ಸಾಮಾಜಿಕ ಜಾಲತಾಣ ನೈಜ ಬೆಸುಗೆಯೋ ಅಥವಾ ಪಲಾಯನವೋ ಇನ್ನು ತಿಳಿಯದ ವಿಷಯ.
ನಮ್ಮಲ್ಲಿ ಲಾಭಕ್ಕೆ, ಲೋಭಕ್ಕೆ ಬಾಂಡಿಂಗ್ ಚೆನ್ನಾಗಿದೆ. ಅದು ಈರುಳ್ಳಿ ವ್ಯಾಪಾರಿಗಳು, ದಲ್ಲಾಳಿಗಳು ‘ಬೆಲೆ’ ‘ಒಟ್ಟಾಗಿ’ ನಿಗದಿಪಡಿಸುವುದಿರಬಹುದು ಅಥವಾ ಖಾಸಗಿ ವಿಮಾನ ಕಂಪನಿಗಳು ‘ಕೈಜೊಡಿಸಿ’ ಗ್ರಾಹಕರ ಸುಲಿಗೆ ಮಾಡುವುದಿರಬಹುದು. ಹೀಗಾಗಿ ಶ್ರೀಮಂತರ ಹಣ ಬಡವರಿಗೆ ಹನಿ ಹನಿಯಾಗಿ ಬಂದು ಸೇರುತ್ತದೆ ಎನ್ನುವ ಅರ್ಥಶಾಸ್ತ್ರದ ಅರ್ಥೈಸಿಕೆ ವಾಸ್ತವದಲ್ಲಿ ಕಂಡುಬರುವುದು ಕಮ್ಮಿ. Rather trickle down, it trickles up. ಬೆಳಗ್ಗೆ ನೂರು ನೂರು ರೂಪಾಯಿ ಬಡವರಿಗೆ ಹಂಚಿದರೆ ಸಾಯಂಕಾಲದೊಳಗೆ ಶ್ರೀಮಂತರ ಕೈ ಸೇರಿರುತ್ತೆ ಎನ್ನುತ್ತಾರೆ.
ವ್ಯಾಪಾರದಲ್ಲೂ ಮಾನವೀಯ ಮೌಲ್ಯ ಇಟ್ಟುಕೊಂಡವರಿಲ್ಲ ಎನ್ನುವಂತಿಲ್ಲ. ಆತ್ಮೀಯರಾದ ಪ್ರೊ.ಶ್ರೀಧರ ಮೂರ್ತಿ ಅವರು ಅನುಭವ ಹಂಚಿಕೊಂಡಿದ್ದರು. ಹೆಂಡತಿ ಗರ್ಭಿಣಿಯಾಗಿದ್ದಾಗ ಚಾಮರಾಜಪೇಟೆ ಬೀದಿ ಬದಿಯಲ್ಲಿ ನುಗ್ಗೇಕಾಯಿ ಮಾರಿದ ಮಹಿಳೆ “ಇಲ್ಲ ನಿಮಗೆ ಅಷ್ಟು ಬೇಡ, ಅರ್ಧ ವಾಪಸು ಕೊಡಿ, ಗರ್ಭಿಣಿಯರು ಹೆಚ್ಚು ತಿನ್ನಬಾರದು ಇದನ್ನ’ ಎಂದು ಹೇಳಿ ನುಗ್ಗೆ ಕಾಯಿ ವಾಪಸ್ಸು ಪಡೆದು ಹಣ ಹಿಂತಿರುಗಿಸುತ್ತಾಳಂತೆ!
ನಕಾರಾತ್ಮಕ ಕೆಲಸಗಳಲ್ಲಿ ಸಹಕಾರ ಸಂಬಂಧ, ನಂಬಿಕೆ ಗಟ್ಟಿ ಇರಲಿಕ್ಕೂ ಸಾಧ್ಯ. ಅಶೀಸ್ ನಂದಿ ಹೇಳುವಂತೆ ನಿಜವಾದ ‘ಜ್ಯಾತ್ಯಾತೀತತೆ’ ಕಾಣುವುದು ದರೋಡೆಕೋರರಲ್ಲಿ. ‘ಕೆಲಸಕ್ಕೆ’ ಬರುವನಾದರೆ ‘ಜಾತಿ, ಧರ್ಮ ಮೀರಿ ಒಟ್ಟಾಗಿ’ ಕೆಲಸ ಮಾಡುತ್ತಾರೆ. ‘ಒಟ್ಟಿಗೆ ಬಿರ್ಯಾನಿ ತಿಂದು ಕೋಮುಗಲಭೆ ಎಬ್ಬಿಸಲೂಬಹುದು’ಎನ್ನುತ್ತಾರೆ. ಮೇಲ್ಜಾತಿಯವರೂ ‘ಒಟ್ಟಾಗಿ’ ದಲಿತರನ್ನು ಊರಿನಿಂದ ಬಹಿಸ್ಕರಿಸಬಹುದು. ದೇವಾಲಯದಿಂದ ಹೊರದಬ್ಬಬಹುದು. ಒಟ್ಟು ಆರ್ಥಿಕ ವ್ಯವಸ್ಥೆ ಸಮುದಾಯವನ್ನೆ ಹೊರಗಿಟ್ಟು ಅಭಿವೃದ್ಧಿ ಹೊಂದಬಹುದು!
ಇಡೀ ಜಾಟ್ ಮತ್ತು ಪಟೇಲ್ ಸಮುದಾಯ ತಮ್ಮ ಮೀಸಲಾತಿ ಬೇಡಿಕೆಗೆ ಅರ್ಧ ದೇಶವನ್ನೇ ಸ್ಥಗಿತಗೊಳಿಸಬಹುದು. ಜಾಟ್ ಸಮುದಾಯ ಸಂಪ್ರದಾಯ ಕೃಷಿ ಭೂ ಒಡೆತನವಿದ್ದರೂ ಆಧುನಿಕ ಆರ್ಥಿಕ ವ್ಯವಸ್ಥೆಯಿಂದ ವಂಚಿತರಾದರೆ ಎನ್ನುವ ವಿಚಾರ ಕೂಡ ಗಮನಿಸಬೇಕಾದುದ್ದೇ. ಒಂದು ಸೈನಿಕ ಹುದ್ದೆಗೆ ಹತ್ತೊಂಬತ್ತು ಸಾವಿರ ಯುವಕರು ಅರ್ಜಿ ಹಾಕುವುದೆಂದರೆ ಜಿಡಿಪಿ ಲೆಕ್ಕಚಾರದ ದೋಷ ಎತ್ತಿ ತೋರಿಸುತ್ತದೆ. ಸುಮಾರು ಶೇ.40 ಯುವಕರು ಶಾಲೆಯಲ್ಲಿ ಇಲ್ಲ, ಕೆಲಸದಲ್ಲೂ ಇಲ್ಲ, ತರಬೇತಿಯಲ್ಲೂ ಇಲ್ಲ ಎನ್ನುತ್ತದೆ ವರದಿಯೊಂದು. ಇದನ್ನು NEET- not in education, employment or training ಎನ್ನುತ್ತಾರೆ. ಒಟ್ಟಿನಲ್ಲಿ ಅರ್ಥಶಾಸ್ತ್ರ ಸಾಮಾಜಿಕ ಆಯಾಮ ಮತ್ತು ಪರಿಸರ ಸಂಬಂಧ ಹೊರಗಿಟ್ಟು ಬೆಳೆದರೆ ರಕ್ತ, ಮಾಂಸವಿಲ್ಲದ ಅಸ್ಥಿಪಂಜರವಾಗಬಹುದು.