ವೇಮುಲ ಕೊಡುತ್ತಿರುವ ಹೊಸ ತಿರುವು -ಸುಗತ ಶ್ರೀನಿವಾಸರಾಜು

  rohith
    ರೋಹಿತ್ ವೇಮುಲನ ಸಾವು ಮತ್ತು ಆ ಸಾವಿನ ಸುತ್ತ ಬೆಳೆದ ವಾದ, ವಿವಾದ, ಪ್ರಶ್ನೆಗಳ ಸರಪಳಿ, ಇಡೀ ದೇಶದ ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆಯ ಮೇಲೆ ಗಾಢ ಪ್ರಭಾವ ಬೀರಿದೆ, ಎಂದು ಹೇಳುವ ಧೈರ್ಯವನ್ನು  ನಾನು ಈಗಲೇ ಮಾಡಲಾರೆ. ಆದರೆ, ರೋಹಿತ್ ತನ್ನ ಜೀವವನ್ನು ಶರಣಾಗಿಸುವುದರ ಮೂಲಕ ಒಂದು ದೊಡ್ಡ ಎಚ್ಚರವನ್ನೂ, ಸಂಚಲನವನ್ನೂ, ಅದರಲ್ಲೂ ಬಹುಸಂಖ್ಯಾತರಾದ ತಳವರ್ಗ, ಜಾತಿಗಳ ಯುವ ಸಮುದಾಯಗಳಲ್ಲಿ ಉಂಟುಮಾಡಿದ್ದಾನೆ ಎಂಬುದರ ಬಗ್ಗೆ ಯಾವುದೇ ಅನುಮಾನವಿಲ್ಲ. ಇನ್ನೂ ಹಸಿ-ಹಸಿಯಾಗಿ ಚರ್ಚಿಸಲ್ಪಡುತ್ತಿರುವ ವಿಚಾರ, ಮುಂಬರುವ ದಿನಗಳಲ್ಲಿ, ನಮ್ಮ ಸಮಷ್ಟಿ ಪ್ರಜ್ಞೆಯ ಯಾವ ಮೂಲೆಗಳನ್ನು, ಎಷ್ಟು ಉದ್ದೀಪಿಸುತ್ತದೆ ಎಂದು ನಾವು ಕಾದು ನೋಡಬೇಕು.
ಇಂತಹುದೇ ಒಂದು ದೊಡ್ಡ ಘಟನೆ ಅಮೆರಿಕದಲ್ಲೋ, ಯುರೋಪಿನಲ್ಲೋ ನಡೆದಾಗ ಏರ್ಪಡುವ ಚರ್ಚೆಗೂ, ನಮ್ಮಲ್ಲಿ ಸೃಷ್ಟಿಗೊಳ್ಳುವ ಚರ್ಚೆಯ ಸ್ವರೂಪಕ್ಕೂ, ಅಂದರೆ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ  ಆ ಚರ್ಚೆಗಳ ಅಗೋಚರ reference points ಬೇರೆಯೇ ಆಗಿರುತ್ತದೆ. ಅಮೆರಿಕದಲ್ಲಿ ಒಂದು ತರಹದ ಸಾಂವಿಧಾನಿಕ ಪಾಪಪ್ರಜ್ಞೆಯಿಂದ ಪ್ರತಿಕ್ರಿಯೆಗಳು ರೂಪುಗೊಂಡರೆ, ಯುರೋಪಿನಲ್ಲಿ ನಾಗರಿಕತೆ ಮತ್ತು ಚರಿತ್ರೆಯ ಪಾಪಪ್ರಜ್ಞೆ ಜಾಗರೂಕಗೊಳ್ಳುತ್ತದೆ. ಇದು ಆಧುನಿಕತೆ ಕಲ್ಪಿಸಿರುವ ಸಂವೇದನಾ ಸ್ವರೂಪ. ಆದರೆ ಭಾರತದ ಬೇರೆ ಬೇರೆ ಭಾಗಗಳು,  ಬೇರೆ ಬೇರೆ ವಾಸ್ತವ ಮತ್ತು ಕಾಲಮಾನದಲ್ಲಿ ಬದುಕುವುದರಿಂದ, ಈ ರೀತಿಯ ಆಧುನಿಕತೆಯ ಏಕಸೂತ್ರದ ಅಂತಃಪ್ರಜ್ಞೆ ನಮ್ಮಲ್ಲಿ ಪ್ರಕಟಗೊಳ್ಳುವುದಿಲ್ಲ. ಹಾಗೆ ನೋಡಿದರೆ, ನಮ್ಮ ದೇಶದ ತಳವರ್ಗ, ಜಾತಿಗಳ ಯುವ ಸಮುದಾಯಗಳು, ರೋಹಿತ್‌ನ ಸಾವಿನ ನಂತರ ಸಾಂವಿಧಾನಿಕ ಆಧುನಿಕತೆಯ ಚೌಕಟ್ಟಿನಲ್ಲಿ ಪ್ರಕ್ರಿಯೆಯನ್ನು ರೂಪಿಸಲು ಪ್ರಯತ್ನಿಸುತ್ತಿವೆ. ಸಾಮಾಜಿಕ ಜಾಗೃತಿ, ಸಾಮಾಜಿಕ ಪಾಪಪ್ರಜ್ಞೆಯನ್ನು ಆಧರಿಸಿರುವ ಬದಲು, ಈ ಸಂವಿಧಾನದ ಆಧುನಿಕತೆಯನ್ನು ಮುಂದು ಮಾಡಿ, ಭವಿಷ್ಯದಲ್ಲಿ ಅವರ ಎಲ್ಲ ಅಸಮತೋಲನ ಮತ್ತು ಅನ್ಯಾಯದ ಯುದ್ಧಗಳನ್ನು ಗೆಲ್ಲಬೇಕು ಎಂಬುದನ್ನು ನಿರ್ಧರಿಸಿದಂತಿದೆ. ಕಳೆದ ಅರವತ್ತೈದು ವರ್ಷಗಳಲ್ಲಿ ಇದು ಸಣ್ಣ, ಸುಪ್ತ ತೊರೆಯಾಗಿ ಹರಿಯುತ್ತಿದ್ದದ್ದು ಈಗ ಮುಖ್ಯವಾಹಿನಿಯ ರಭಸ ಪಡೆಯುತ್ತಿದೆ.
   ರೋಹಿತ್ ಅಧ್ಯಯನ  ನಡೆಸುತ್ತಿದ್ದ ಹೈದ್ರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಾನೂ ಎರಡು ದಶಕಗಳ ಹಿಂದೆ ಓದಿ ಹೊರಬಂದವನು. ತೆಲಂಗಾಣದ ಕಿಚ್ಚನ್ನು, ಸಮಾನತೆಯ ಕಾವನ್ನು ಇರಿಸಿಕೊಂಡೇ ರೂಪುಗೊಂಡ ಈ ವಿಶ್ವವಿದ್ಯಾಲಯ, ಈಗಲೂ ಅದನ್ನು ಉಳಿಸಿಕೊಂಡಿದೆ ಎಂಬುದು ಅಲ್ಲಿ ನಡೆಯುತ್ತಿರುವ ಆಂದೋಲನವನ್ನು ನೋಡಿದರೆ ಸ್ಪಷ್ಟವಾಗುತ್ತದೆ.
      ಸಾಹಿತ್ಯದ ಲೋಲುಪ ವಿದ್ಯಾರ್ಥಿಯಾಗಿ ನಾನು ಈ ವಿಶ್ವವಿದ್ಯಾಲಯವನ್ನು 1992ರಲ್ಲಿ ಪ್ರವೇಶಿಸಿದ್ದೆ. ಆದರೆ, ಬಹಳ ಬೇಗ ಈ ತಾಣ ಸಮಾಜದಲ್ಲಿರುವ ಅನ್ಯಾಯಗಳಿಗೆ, ಜಾತಿಗಳ ನಡುವಿನ ಸಂಘರ್ಷಗಳಿಗೆ, ರಾಜಕೀಯ ವಾಸ್ತವಗಳಿಗೆ ನನ್ನನ್ನು ಮುಖಾಮುಖಿಯಾಗಿಸಿತು. ಇದು ನನ್ನ ತಿಳಿವಳಿಕೆ ಮತ್ತು ಪ್ರಜ್ಞಾಸೀಮೆಗಳನ್ನು ಎಷ್ಟರಮಟ್ಟಿಗೆ ಹಿಗ್ಗಿಸಿತು ಎಂದರೆ ನನ್ನ ಸಾಹಿತ್ಯದ ಓದಿನ ಸ್ವರೂಪವನ್ನೇ ಬದಲು ಮಾಡಿತು. ಕೇವಲ ಸಾಹಿತ್ಯದ ವಿದ್ಯಾರ್ಥಿ ಎಂದು ಹೇಳಿಕೊಳ್ಳುವುದರ ಬಗ್ಗೆ ನನ್ನಲ್ಲಿ ಅಂಜಿಕೆಯನ್ನು ಉಂಟುಮಾಡಿತು.
    ನಾನು ವಿಶ್ವವಿದ್ಯಾಲಯ ಪ್ರವೇಶಿಸಿದಾಗ, ವಿದ್ಯಾರ್ಥಿ ಗೃಹಗಳಲ್ಲಿ ಕೊಠಡಿಗಳ ಕೊರತೆಯಿಂದಾಗಿ ಒಬ್ಬ ಹಿರಿಯ ವಿದ್ಯಾರ್ಥಿಯೊಂದಿಗೆ ವಾಸ್ತವ್ಯವನ್ನು ಹಂಚಿಕೊಂಡೆ. ದಲಿತ ಸಮುದಾಯಕ್ಕೆ ಸೇರಿದ ಈ ಸಹವಿದ್ಯಾರ್ಥಿಯ ಸಿಟ್ಟು, ಕಾಳಜಿಗಳು, ಅವನ ರಾಜಕೀಯ, ಓದಿನ ಆಯ್ಕೆ, ಅವನ ಸಂಗಡಿಗರು ಎಲ್ಲಕ್ಕೂ ಒಂದು ತೆರನಾದ ಮುಗ್ಧತೆಯಲ್ಲಿ ನಾನು ತೆರೆದುಕೊಳ್ಳಲು ಪ್ರಾರಂಭಿಸಿದೆ. ಆದರೆ, ಕೆಲವು ತಿಂಗಳು ಕಳೆದಂತೆ ನನ್ನ ರೂಮ್‌ಮೇಟ್ ಮತ್ತು ಆತನ ಸಂಗಡಿಗರು ನನ್ನನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತಿಲ್ಲ, ಅವರ ಎಲ್ಲ ಸಂಭಾಷಣೆಗಳಲ್ಲಿ ನಾನು ಭಾಗಿಯಲ್ಲ  ಎಂಬ ಅರಿವು ನನ್ನಲ್ಲಿ ಮೂಡತೊಡಗಿತು. ನನ್ನ ಭಾಷೆ , ನನ್ನ ತರ್ಕ, ನನ್ನ ಉಪಮೆ ಮತ್ತು ರೂಪಕಗಳು, ಅವರ ಸಣ್ಣ ಅಸಹನೆಗೆ ಕಾರಣವೇನೋ ಅನ್ನಿಸಿ, ನಾನು ಅವರೆಲ್ಲರಿಗೂ ಒಂದು ದೊಡ್ಡ ಪತ್ರ ಬರೆದು ದೂರವಾದೆ. ಆ ಪತ್ರದ ಪ್ರತಿಯನ್ನು ನಾನು ಇಂದಿಗೂ ಇರಿಸಿಕೊಂಡಿದ್ದೇನೆ. ಅದನ್ನು ಮತ್ತೆ ಓದಿದಾಗ ನಮ್ಮ ಕಲಿಯುವಿಕೆಯ, ಮಾಗುವಿಕೆಯ ಹಾದಿಗಳ ಬಗ್ಗೆ ಸಣ್ಣ ನಗು ಮೂಡಿತು: ‘‘ಸಾಮಾಜಿಕ ವಿಚಾರಗಳ ಬಗ್ಗೆ ನಿಮಗಿರುವ ಕಾಳಜಿ ನನ್ನನ್ನು ನಿಬ್ಬೆರಗಾಗಿಸಿದೆ. ನಿಮ್ಮ ಆ ಕಾಳಜಿಗಳನ್ನು ನಾನು ಯಾವುದೇ ಹಿಂಜರಿಕೆಯಿಲ್ಲದೆ ಅನುಮೋದಿಸುತ್ತೇನೆ. ಈಗಿನ ವ್ಯವಸ್ಥೆ ಮತ್ತು ಅದರಲ್ಲಿರುವ ಅಸಮಾನತೆಯ ಬಗ್ಗೆ ನೀವು ನನಗೆ ಅಪಾರ ಅರಿವನ್ನು ಮೂಡಿಸಿದಿರಿ. ಈ ವ್ಯವಸ್ಥೆಯನ್ನು ಬದಲಿಸಬೇಕು ಎಂದು ನೀವು ಬಲವಾಗಿ ನಂಬಿದ್ದೀರಿ. ಅದನ್ನು ನಾನೂ ಒಪ್ಪುತ್ತೇನೆ. ಆದರೆ ಆ ಬದಲಾವಣೆ ತರುವ ಮಾರ್ಗಗಳಾವುವು ಎಂಬುದರ ಬಗ್ಗೆ ನಮ್ಮ ಹಾದಿಗಳು ಬಹಳ ಬೇರೆ ಎಂದು ನನಗನ್ನಿಸುತ್ತಿದೆ. ಇದು ವಿಪರ್ಯಾಸವೇ ಸರಿ. ನಾನು ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಮಾತ್ರ ನಡೆದುಕೊಳ್ಳಬಹುದು. ನನ್ನ ನಿಮ್ಮ ನಡುವಿನ ಸ್ನೇಹ, ವಿಶ್ವಾಸ ಎಂದೆಂದಿಗೂ ಇರಲಿ ಎಂದು ನಾನು ಬಯಸುತ್ತೇನೆ. ಆದರೆ ನಾನು ನಿಮ್ಮ ಗೆಳೆಯರ ಗುಂಪಿನ ಸಕ್ರಿಯ ಕಾರ್ಯಕರ್ತನಾಗಿರಲು ಸಾಧ್ಯವಿಲ್ಲ,’’ ಎಂದು ಬರೆದಿದ್ದೆ. ನನ್ನ ಉದಾತ್ತ ಮಾನವತಾವಾದದ ನೆಲೆಯ ಸಾರ್ವತ್ರಿಕ ಪ್ರತಿಕ್ರಿಯೆಗಳು ಅವರ ವಾಸ್ತವ ಮತ್ತು ಸಂಘರ್ಷದ ಬದುಕಿನ ಹಿನ್ನೆಲೆಯಲ್ಲಿ ಎಷ್ಟೊಂದು ಬೋಳೆ ಎಂದು ತಿಳಿಯಲು ನನಗೆ ಮತ್ತಷ್ಟು ಸಮಯ ಬೇಕಾಯಿತು. ರೋಹಿತ್ ಮತ್ತು ಅವನ ಸಂಗಡಿಗರ ಭಾಷೆ  ಮತ್ತು ಇತರ ವಿದ್ಯಾರ್ಥಿಗಳ, ವ್ಯಕ್ತಿಗಳ ನಡುವಿನ ಕಂದರ ಈ ತರಹದ ಕ್ಲಿಷ್ಟತೆಯಲ್ಲಿ ಈಗಲೂ ಸಿಕ್ಕಿಹಾಕಿಕೊಂಡಂತೆ ಭಾಸವಾಗುತ್ತಿದೆ. ಸಿಕ್ಕು ಬಿಡಿಸಬೇಕಾದವರಲ್ಲಿ ತಾಳ್ಮೆ ಮತ್ತು ಅರಿವಿನ ಕೊರತೆ ಎದ್ದು ಕಾಣುತ್ತಿದೆ.
  ನಾವು ಇಷ್ಟೆಲ್ಲ ಸಾಮಾಜಿಕ ಸಂಘರ್ಷದ ವಿಚಾರ ಚರ್ಚಿಸುತ್ತಿರುವ ಸಂದರ್ಭದಲ್ಲೇ  ಕೋಲ್ಕತಾದಲ್ಲಿರುವ ರಾಷ್ಟ್ರೀಯ ಬಯೋಮೆಡಿಕಲ್ ಜಿನೋಮಿಕ್ಸ್ ಸಂಸ್ಥೆ ನಮ್ಮಲ್ಲಿ ತಳವೂರಿರುವ ಜಾತಿ ಪದ್ಧತಿಯ ಬಗ್ಗೆ ಮಹತ್ತರವಾದ ಒಂದು ವರದಿಯನ್ನು ಹೊರಹಾಕಿದೆ. ಈ ವರದಿಯ ಪ್ರಕಾರ ಭಾರತದಲ್ಲಿನ ಈಗಿನ ಜನಸಂಖ್ಯೆ ಬೆಳೆದದ್ದು ಐದು ಪೂರ್ವಜ ಸಮೂಹಗಳ ಕೂಡುವಿಕೆಯಿಂದ ಎಂಬುದು. ನಮ್ಮ ಇಲ್ಲಿಯವರೆಗಿನ ತಿಳಿವಳಿಕೆಯಲ್ಲಿ ಈ ಜನಸಂಖ್ಯೆ ಬೆಳೆದದ್ದು ಎರಡು ಪೂರ್ವಜರ ಗುಂಪುಗಳಿಂದ ಮಾತ್ರ ಎಂಬುದಿತ್ತು. ಆದರೆ, ಹೊಸ ವರದಿ ನಮ್ಮ ಹೆಚ್ಚಿನ ವೈವಿಧ್ಯತೆಯನ್ನು  ಒತ್ತಿ ಹೇಳುತ್ತದೆ.
ಕೋಲ್ಕತಾದ ಈ ಸಂಸ್ಥೆ ಬೇರೆ ಗುಂಪುಗಳಿಗೆ ಸೇರಿದ 367 ಜನರ ಅನುವಂಶೀಯ (genetic) ಮಾದರಿಗಳನ್ನು ವೈಜ್ಞಾನಿಕ ವಿಶ್ಲೇಷಣೆಗೆ ಒಡ್ಡುತ್ತ ಮತ್ತೊಂದು ಮುಖ್ಯ ವಿಚಾರವನ್ನು ನಮ್ಮ ಮುಂದಿರಿಸುತ್ತದೆ. ಇದೇನೆಂದರೆ, ನಮ್ಮಲ್ಲಿ ಜಾತಿಪದ್ಧತಿ ತಳವೂರಿದ್ದು ಕೇವಲ1575 ವರ್ಷಗಳ ಹಿಂದೆ, ಎಂದು. ಅಂದರೆ, ಭಾರತದ  ಅನುವಂಶೀಯ ಭೂಪಟದಲ್ಲಿ  ಜಾತಿ ಎಂಬುದಕ್ಕೆ ನಾವು ತಿಳಿದಷ್ಟು ದೊಡ್ಡ ಐತಿಹಾಸಿಕ ಪರವಾನಗಿ ಇಲ್ಲ. ಚರಿತ್ರೆಯಲ್ಲಿ, ಇದು ಗುಪ್ತರ ಕಾಲದಲ್ಲಿ (6ನೇ ಶತಮಾನ) ಆಗಿರಬಹುದು ಎಂಬುದು ಬಲವಾದ ನಂಬಿಕೆ. ಇದಕ್ಕೂ ಮುನ್ನ ನಮ್ಮ ಜನ ಜಾತಿಯ ಹಂಗಿಲ್ಲದೆ, ಒಬ್ಬರೊಂದಿಗೆ ಒಬ್ಬರು ಬೆರೆತು ಬಾಳುತ್ತಿದ್ದರು ಎಂಬುದನ್ನು ಈ ವರದಿ ಸಾರಿ ಹೇಳುತ್ತದೆ.
ಭಾರತದ ಜನಸಂಖ್ಯೆಯ ಅನುವಂಶೀಯ ಚರಿತ್ರೆಯನ್ನು (genetic make up) ಕಟ್ಟಿಕೊಡುವ ಪ್ರಯತ್ನ ಮಾಡುವ ಈ ಅಧ್ಯಯನ  ಕೇವಲ 7೦ ತಲೆಮಾರುಗಳ ಹಿಂದೆ ಮಾತ್ರ ಮೇಲ್ಜಾತಿ ಎನಿಸಿಕೊಂಡವರು ಕೆಳಜಾತಿ ಎಂದು ಗುರುತಿಸಲ್ಪಟ್ಟವರೊಂದಿಗೆ ಬೆರೆಯುವುದನ್ನು ನಿಲ್ಲಿಸಿದ್ದು, ಎಂದು ಹೇಳುತ್ತದೆ. ಅಂದರೆ, ಒಂದು ತಲೆಮಾರಿಗೆ ನಾವು ಸರಾಸರಿ 22 ವರ್ಷ ಎಂದು ನಿಗದಿಪಡಿಸಿದರೆ, ಜಾತಿಭೇದ ಅಥವಾ ಜಾತಿ ವೈಷಮ್ಯವೆಂಬುದು ಬಹಳ ಈಚಿನದು ಎಂದು ಖಾತ್ರಿಪಡಿಸುತ್ತದೆ. ಎರಡನೆಯ ಚಂದ್ರಗುಪ್ತ ಅಥವಾ ಮೊದಲನೆಯ ಕುಮಾರಗುಪ್ತರ ಕಾಲದಲ್ಲಿ ಆಡಳಿತ ವ್ಯವಸ್ಥೆಯನ್ನು ನಿರ್ದಿಷ್ಟ ರೀತಿಯಲ್ಲಿ ಬಳಸಿ ಜಾತಿಗಳ ನಡುವಿನ ಬೆರೆಯುವಿಕೆಯನ್ನು ನಿಲ್ಲಿಸಿರಲು ಸಾಧ್ಯ, ಎಂದು ಈ ವರದಿ ಹೇಳುತ್ತದೆ. ಈ ಮುಂಚೆ ಇದ್ದ ಕೇವಲ ವೃತ್ತಿ ನಿಯಮಿತ ಜಾತಿಪದ್ಧತಿಯನ್ನು ವೇದ ಕಾಲದಲ್ಲಿ (12೦೦ BC) ಎಂದು ಗುರ್ತಿಸಲಾಗಿದೆ.
   ಈ ವೈಜ್ಞಾನಿಕ ವರದಿ ಓದಿದರೆ ಜಾತಿಗಳ ತೆಳುವಾದ ಚರಿತ್ರೆ ಅರ್ಥವಾಗದೆ ಇರದು. ಹೀಗಿರುವಾಗ, ಅದರೊಂದಿಗೆ ಅಂಟಿರುವ ಅಹಂಕಾರಗಳೂ ಅಳಿಸಿ ಹೋಗಬೇಕು ಎಂಬುದು ಸಹಜ ಅಪೇಕ್ಷೆ. ಆದರೆ, ರೋಹಿತ್ ತೀರಿಕೊಂಡಾಗ ಅವನು ದಲಿತನಲ್ಲ ಎಂದು ಕೆಲವರು ಉದ್ಗಾರ ತೆಗೆದರು. ಹಾಗೆ ಉದ್ಗಾರ ತೆಗೆಯುವುದರ ಮೂಲಕ ಅವನನ್ನು ದುಪ್ಪಟ್ಟು  ಅವಮಾನಿಸಲಾಯಿತು. ಅವನ ತಂದೆಯೇನೂ ‘ಮೇಲು’ ಜಾತಿಗೆ ಸೇರಿದವರಾಗೇನಿರಲಿಲ್ಲ. ಈ ಅವಮಾನವೇ ಸಾಂವಿಧಾನಿಕ ಆಧುನಿಕತೆ ವಾದವನ್ನು ಹರಿತಗೊಳಿಸುತ್ತಿರುವುದು.