ಲಂಕೇಶ್ ಜತೆ ಸಾಹಿತ್ಯ ಸಂವಾದ-ಸಂವಾದಿಸಿದವರು :ಎನ್.ಎಸ್.ಶಂಕರ್
[‘ಸುದ್ದಿ ಸಂಗಾತಿ’ 9 ನವೆಂಬರ್ 1986 ರ ಸಂಚಿಕೆಯಲ್ಲಿ ಎನ್.ಎಸ್.ಶಂಕರ್ ಅವರು ಲಂಕೇಶ್ ಅವರೊಂದಿಗೆ ಸಾಹಿತ್ಯ ಸಂವಾದ ನಡೆಸಿದ್ದು, ಅದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಎನ್.ಎಸ್.ಶಂಕರ್ ಅವರ ‘ಮೇಲೋಗರ’ ಎಂಬ ಬಿಡಿ ಲೇಖನಗಳ ಸಂಕಲನದಲ್ಲಿ ಪ್ರಕಟವಾಗಿದೆ. ಅದರಲ್ಲಿ ಮಹಾದೇವರನ್ನೂ ಒಳಗೊಂಡು ಆ ಕಾಲ ಘಟ್ಟದ ಮುಖ್ಯ ಬರಹಗಾರರ ಕುರಿತ ಚರ್ಚೆ ಇದೆ.]
ಒಂದೊಂದು ಕಾಲದಲ್ಲಿ ಇದ್ದಕ್ಕಿದ್ದಂತೆ ಒಂದೇ ಸಲ ಹಲವಾರು ಲೇಖಕರು ಒಟ್ಟೊಟ್ಟಿಗೇ ಬರೆಯೋಕೆ ಶುರು ಮಾಡ್ತಾರಲ್ಲ…?
ಅದಕ್ಕೆ ನಾನಾ ಕಾರಣಗಳಿವೆ. ನಮ್ಮಲ್ಲಿ ಸಾಧಾರಣವಾಗಿ ಸಾಹಿತ್ಯದ ಪುನರುಜ್ಜೀವನ ಆದಾಗಲೆಲ್ಲ ಒಬ್ಬ ವ್ಯಕ್ತಿಯ ಸುತ್ತ ಇದ್ದ ಜನರು ಸಾಹಿತ್ಯ ಸೃಷ್ಠಿ ಮಾಡ್ತಾ ಬಂದಿದ್ದಾರೆ. ಕುವೆಂಪು, ಮತ್ತವರ ಸುತ್ತಲ ಜನ, ಮಾಸ್ತಿ ಮತ್ತು ಅವರಿಗೆ ಸಮೀಪ ಇದ್ದವರು. ಹೀಗೆ. ಅನಕೃ, ತರಾಸು ತಾವು ಪ್ರಗತಿಶೀಲರು ಅಂತ ಕರ್ಕೊಂಡು ಬರೆಯೋಕೆ ಶುರು ಮಾಡಿದರು. ಆಮೇಲೆ ನವ್ಯರ ಕಾಲದಲ್ಲಿ, ತುಂಬಾ ರೊಮ್ಯಾಂಟಿಕ್ ಆಗಿ ಪರಂಪರಾಗತ ಮೌಲ್ಯಗಳನ್ನೇ ಬರೆಯುತ್ತಿದ್ದ ಪ್ರಗತಿಶೀಲರ ಒಂದು ರೀತಿಯ ವಿತಂಡವಾದ ಮತ್ತು ದ್ವಂದ್ವವನ್ನು ಅರ್ಥ ಮಾಡಿಕೊಂಡು ಸಾಹಿತ್ಯ ರಚನೆ ನಡೆಯಿತು. ಮೂಲದಲ್ಲಿ ಕೆಲವು ಲೇಖಕರ ಸಿದ್ಧಾಂತ ಎಷ್ಟು ಮುಖ್ಯವೋ, ಪ್ರತಿಭೆಯೂ ಅಷ್ಟೇ ಮುಖ್ಯ.
ನವ್ಯರಿಗೆ ಕೆಲವು ತೊಂದರೆಗಳು ಬಂದವು. ಕೆಲವರು ಸಿನಿಮಾಗೆ ಹೋದರು. ಕೆಲವರು ನಾಟಕಕ್ಕೆ, ಪತ್ರಿಕಾರಂಗಕ್ಕೆ, ಕೆಲವರು ನಟರಾದರು. ಹೀಗಾಗಿ ಸಾಹಿತ್ಯ ರಚನೆಗೆ ಸ್ವಲ್ಪ ತೊಂದರೆ ಆಯ್ತು. ಅಲ್ಲದೆ ಬರೆಯುವ ಬದುಕಿನ ತೃಪ್ತಿ. ಬಡತನವನ್ನು ಒಪ್ಪಿಕೊಳ್ಳದಂಥ ಜನ ಬಂದಿದ್ದರಿಂದಲೂ ಸಾಹಿತ್ಯ ಕಮ್ಮಿ ಆಯ್ತು. ಸಿನಿಮಾಕ್ಕೆ ಹೋದೋರು ಸಿನಿಮಾ ಕಥೆ, ಹಾಡು ಬರೆಯೋದು; ಆಲನಹಳ್ಳಿಯಂಥವರು ಹಾಳಾಗಿದ್ದು, (ಹಾಳಾಗಿದ್ದರೆ) ಸಿನಿಮಾಗಾಗಿ ಬರೆಯೋ ಥರ ಕಾದಂಬರಿ ಬರೆಯೋಕ್ಕೆ ಶುರು ಮಾಡಿದ್ರಿಂದ. ಅವರ ‘ಕಾಡು’ ಮತ್ತು ‘ಪರಸಂಗ’ದ ನಡುವೆ ಎಷ್ಟು ವ್ಯತ್ಯಾಸ ಇದೆ ಅಂತ ನೋಡಿದರೆ ಗೊತ್ತಾಗುತ್ತೆ.
ಆಮೇಲೆ ಅವರು ‘ಗೋಡೆ’ಯನ್ನೂ ಬರೆದರಲ್ಲ?
‘ಗೋಡೆ’ ಹ್ಯಾಗಿದೆಯೋ ಗೊತ್ತಿಲ್ಲ. ಆದರೆ ‘ಭುಜಂಗಯ್ಯ’ ಅಂತೂ ತುಂಬಾ ಸಿನಿಮೀಯವಾಗಿದೆ. ಕಾದಂಬರಿ ಸಿನಿಮಾಗೆ ಸ್ಫೂರ್ತಿ ಕೊಡುವ ಬದಲು, ಸಿನಿಮಾ ಕಾದಂಬರಿಗೆ ಸ್ಫೂರ್ತಿ ಕೊಡುವಂತಾಗಿದೆ. ಮುಂಚೆ ಕುವೆಂಪು ಕಾದಂಬರಿ ಬರೀವಾಗ, ನರಸಿಂಹಸ್ವಾಮಿ ಕಾವ್ಯ ರಚಿಸುವಾಗ ಸಿನಿಮಾ, ನಾಟಕ ಅಂತ ಯೋಚನೆ ಮಾಡ್ತಿರಲಿಲ್ಲ… ಈಗ ಮತ್ತೆ ಸಾಹಿತಿಗಳು ಹೆಚ್ಚು ಗಂಭೀರವಾಗ್ತಿದ್ದಾರೆ ಅಂತ ತಿಳ್ಕಂಡಿದ್ದೀನಿ. ಸಾಹಿತ್ಯದ ಮೌಲ್ಯಗಳು ಸಿನಿಮಾ, ಪತ್ರಿಕಾರಂಗಗಳ ಮೌಲ್ಯಕ್ಕಿಂತ ಭಿನ್ನ ಅನ್ನುವ ಗ್ರಹಿಕೆ ಬರ್ತಿದೆ, ಮತ್ತೆ ಹೊಸ ಚಳುವಳಿಯನ್ನ, ಹೊಸ ಸಾಹಿತ್ಯದ ಉತ್ಸಾಹವನ್ನ ನಿರೀಕ್ಷಿಸುತ್ತಿದ್ದೇನೆ…
ವೈಯಕ್ತಿಕವಾಗಿ ನನಗೂ ಈಗ ಕತೆಗಳನ್ನು ಬರೆಯಬೇಕು, ಪದ್ಯಗಳನ್ನು ಬರೆಯಬೇಕು ಅನ್ನಿಸ್ತಿದೆ.
ನವ್ಯೋತ್ತರ ಕಾಲದಲ್ಲಿ ಸಾಧನೆಗಿಂತ ಗದ್ದಲವೇ ಹೆಚ್ಚಾಯಿತು ಅನಿಸುವುದಿಲ್ಲವೆ?
ಇಲ್ಲ, ನಿಜವಾದ ಸಾಹಿತಿಗಳನ್ನು ನೋಡಿದರೆ, ಅಂಥ ತೊಂದರೆಯೇನೂ ಆಗಿಲ್ಲ. ನಮ್ಮ ಮಹಾದೇವ, ತೇಜಸ್ವಿ ಚೆನ್ನಾಗೇ ಬರೀತಿದ್ದಾರೆ. ಆಮೇಲೆ, ನವ್ಯರಿಗಿದ್ದಂಥ ದೃಷ್ಟಿ- ಅಂದರೆ ಸಂಕೀರ್ಣವಾಗಿರಬೇಕು, ಸಾಂಕೇತಿಕತೆ ಇರಬೇಕು, ಬಹಳಾ ಬೇಗ ಅರ್ಥವಾದರೆ ಒಳ್ಳೆಯ ಕೃತಿಯಲ್ಲ- ಅನ್ನೋದೆಲ್ಲ ಈಗ ಹೊರಟು ಹೋಗ್ತಿದೆ…
ಆದರೆ ತೇಜಸ್ವಿ, ಮಹಾದೇವ ಅವರು ನವ್ಯಕ್ಕೆ ವಿರುದ್ಧವಾಗಿ ಹುಟ್ಟಿ ಕೊಂಡವರಲ್ಲವಲ್ಲ? ಅವರು ನವ್ಯದಲ್ಲೇ ಶುರು ಮಾಡಿ, ಅದನ್ನು ಮೀರಿ ಬೆಳೆದು ಬರೆಯುತ್ತಿರುವವರು ತಾನೇ?
ಅದೂ ನವ್ಯವೇ ಇರಬಹುದು, ಯಾರಿಗೆ ಗೊತ್ತು? ಚೆನ್ನಾಗಿ ಬರೀತಿರೋರೆಲ್ಲ ‘ನವ್ಯ’ ಅನ್ನೋ ರೀತೀಲಿ ಅದರ ಅರ್ಥವೇ ಬದಲಾಗಬೇಕಿದೆ (ನಗು…..)
ಅವರ ನಂತರ ಯಾಕೆ ಹೊಸ ಲೇಖಕರು ಹೆಚ್ಚಾಗಿ ಬರುತ್ತಿಲ್ಲ?
ಈಗ ಬಹಳ ಚಿಕ್ಕವರಿದ್ದಾರೆ. ಅನೇಕರಿಗೆ ಸಾಹಿತ್ಯದ ಸ್ಫೂರ್ತಿಯಿಲ್ಲ; ಸಾಹಿತ್ಯದಲ್ಲಿ ತೃಪ್ತಿಯಿದೆ ಅನ್ನೋ ಅನುಭವ ಅನೇಕರಿಗೆ ಬಂದಿಲ್ಲ ಅಂತ ಕಾಣುತ್ತೆ. ಬಂದರೆ ಮತ್ತೆ ಶುರು ಮಾಡಬಹುದು. ಈಗ ನಮ್ಮ ಪತ್ರಿಕೆಗೆ ಬರ್ತಿರೋ ಕತೆ, ಪದ್ಯ ಲೇಖನಗಳನ್ನು ನೋಡಿದರೂ ಈ ಸಾಧ್ಯತೆ ಕಾಣ್ತಾ ಇದೆ.
ಕೆಲವು ಮಹಿಳೆಯರಂತೂ ಭಾಳಾ ಚೆನ್ನಾಗಿ ಬರೀತಿದ್ದಾರೆ. ಅವರು ಅನುಭವಗಳನ್ನು ಹತೋಟಿಗೆ ತಗೊಳ್ಳೋ ರೀತಿ, ರೂಪಿಸೋ ರೀತಿ- ಎಲ್ಲ ಭಾಳಾ ಚೆನ್ನಾಗಿದೆ. ಅದಕ್ಕೇ ಯಾವ ಗಳಿಗೇಲಿ ಯಾರು ಏನು ಮಾಡಿಬಿಡ್ತಾರೆ ಹೇಳಕ್ಕಾಗಲ್ಲ. ಈಗ ಸಾರಾ ಅಬೂಬಕರ್- ಅವರು 45 ವರ್ಷಕಾಲ ಏನೂ ಬರೆದೇ ಇರಲಿಲ್ಲ. ಈಗ ನಮ್ಮ ಅತ್ಯುತ್ತಮ ಲೇಖಕಿಯರಲ್ಲೊಬ್ಬರಾಗಿ ಬೆಳೀತಿದ್ದಾರೆ. ಬಾನು (ಮುಷ್ತಾಕ್) ಕೂಡಾ ಅಷ್ಟೇ. ಈಗ ನೋಡಿ- ಲಲಿತಾ ನಾಯಕರಂಥವರು ರಾಜಕೀಯಕ್ಕೆ ಹೋದರು. ರಾಜಕೀಯ ಅವರಿಗೆ ಒಳ್ಳೇದೂ ಮಾಡಬಹುದು. ಕೆಟ್ಟದ್ದೂ ಮಾಡಬಹುದು. ಹಾಗೇನೇ ಸಿನಿಮಾಕ್ಕೆ ಹೋದೋರು, ನಟರಾದವರು, ರಾಜಕೀಯ, ಪತ್ರಿಕಾರಂಗಕ್ಕೆ ಹೋದೋರು ಮತ್ತೆ ಸಾಹಿತ್ಯಕ್ಕೆ ಬಂದು ಬರೆಯೋಕೆ ಶುರು ಮಾಡಿದರೆ ಬಹಳ ಶ್ರೀಮಂತವಾದ ಸಾಹಿತ್ಯ ಬರೋಕೆ ಸಾಧ್ಯವಿದೆ. ಅದಕ್ಕೆ ನಾವು ಶೀರ್ಷಿಕೆಯನ್ನು ಈಗಲೇ ಸಿದ್ಧ ಮಾಡಿಟ್ಟುಕೊಂಡರೆ ಒಳ್ಳೆಯದು ಅಂತ ಕಾಣುತ್ತೆ (ನಗು).
ಸಾರ್, ಬಂಡಾಯ ಸಾಹಿತ್ಯದ ಒಟ್ಟು ಕೊಡುಗೆಯೇನು?
ಯಾವುದೇ ಬಂಡಾಯ, ಕೆಲವು ಒಳ್ಳೇ ಜನಗಳು ಸೇರ್ಕೊಂಡು ಮಾಡಿದಾಗ ಎಷ್ಟು ಬಂಡಾಯ ಇದ್ದರೂ ಭಾಳಾ ಒಳ್ಳೇದು. ಬಂಡಾಯ ಕೆಟ್ಟದ್ದು ಅನ್ನೋರು ಮೂರ್ಖರು ಅಷ್ಟೆ. ಯಾಕೇಂದ್ರೆ, ನಮ್ಮಲ್ಲೇ ಮಾಸ್ತಿ ಒಬ್ಬರನ್ನು ಬಿಟ್ಟು, ಬಾಕಿ ಎಲ್ಲಾ ಸಾಹಿತಿಗಳೂ ಒಂದು ರೀತಿ ಪ್ರತಿಭಟನೆಯಲ್ಲೇ ಬಂದವರು. ಕುವೆಂಪು, ಸಾಹಿತ್ಯ, ಕುವೆಂಪುರಂಥ ಬಂಡಾಯಗಾರ ಯಾರೂ ಇಲ್ಲ. ಆಮೇಲೆ ಅನಕೃ. ಬೇಂದ್ರೆ ಅಂಥ ಗಟ್ಟಿ ದನಿಯಲ್ಲಿ ಪ್ರತಿಭಟನೆ ಮಾಡ್ತಿರಲಿಲ್ಲ. ಆದ್ರೂ ಅವರಲ್ಲಿ ಒಂದು ಬಗೆಯ ನಿಷ್ಠುರತೆ ಇತ್ತು. ಅದನ್ನೂ ಬಂಡಾಯ ಅಂತಲೇ ಕರೀಬೇಕು…
ಒಟ್ಟಾರೆ ಬಂಡಾಯ ಚಳವಳಿಯಿಂದ ಯಾವ ಸಾಹಿತ್ಯ ಬಂದಿದೆ ಅಂತ ಕೇಳಿದರೆ ಹೇಳೋಕ್ಕಾಗಲ್ಲ. ಭಾಳಾ ಕಷ್ಟ. ಆದರೆ ಬಂಡಾಯ ಇರೋದ್ರಿಂದ ಈ ಕಂದಾಚಾರಿಗಳು, ಮೂರ್ಖರು ಬರೀವಾಗ ಸ್ವಲ್ಪ ಹಿಂಜರೀತಾರೆ. ತೀರಾ ಸಾಂಪ್ರದಾಯಿಕವಾದ ಅಥವಾ ಕಂದಾಚಾರದ ಮೌಲ್ಯಗಳು- ಅವನ್ನೇ ಬರೆಯೋಕ್ಕಾಗಲ್ಲ. ಭಾಳ ಕಷ್ಟ ಆಗುತ್ತೆ. ಪ್ರೋಗ್ರೆಸ್ಸೀವ್ ಆಗಿದ್ರೇನೇ, ಪುರೋಗಾಮಿ ಆಗಿದ್ರೇನೇ ಬರೆಯೋಕೆ ಪ್ರಯತ್ನ ಮಾಡೋದು ಒಳ್ಳೆಯದು. ಆದರೆ ಬರೀ ಪ್ರೋಗ್ರೆಸ್ಸೀವ್ ಆಗಿದ್ರೆ ಸಾಲದು. ಸಾಹಿತ್ಯಕ್ಕೆ ಒಂದು ರೀತಿಯ ಸ್ಥೀಮಿತ ಮತ್ತು ಗ್ರಹಿಕೆಯ ಪ್ರಶಾಂತ ಸ್ಥಿತಿ- ಇವು ಇಲ್ಲದಿದ್ರೆ ಯಾರೂ ಸಾಹಿತ್ಯ ರಚಿಸೋಕ್ಕಾಗಲ್ಲ.
ಅಷ್ಟಾದರೂ ದೀಪ ಉರೀಬೇಕಾದ್ರೆ ಎಣ್ಣೆ ಬೇಕು. ದ್ರವ್ಯ ಬೇಕು. ನಿಮ್ಮ ಪ್ರತಿಭಟನೆಯಿಂದ ಬಂದ ಗ್ರಹಿಕೆ ನಿಷ್ಠುರವಾಗಿ ಜೀವನವನ್ನು ನೋಡಿ ಅರ್ಥ ಮಾಡಿಕೊಳ್ಳುವ ದೃಷ್ಟಿ- ಇವು ಎಣ್ಣೆ ರೀತೀಲಿ ದೀಪವನ್ನ, ಪ್ರತಿಭೆಯನ್ನ ಉರಿಸುತ್ತೆ. ಬಂಡಾಯ ಆ ರೀತಿಯಲ್ಲಿ ಬರಬೇಕು. ಬರೀ ಬಂಡಾಯ ಸೇರ್ಕಂಡು ಭಾಳ ಒಳ್ಳೇ ಸಾಹಿತ್ಯ ರಚಿಸ್ತೀನಿ ಅನ್ನೋದು ಭಾಳಾ ತಪ್ಪಾಗುತ್ತೆ. ಪ್ರತಿಭೆ ಇಲ್ಲದಿದ್ರೆ ಬಂಡಾಯವೂ ಸಹಾಯ ಮಾಡೋಲ್ಲ. ಪುರಾತನವೂ ಸಹಾಯ ಮಾಡೋಲ್ಲ.
ಬಂಡಾಯ ಸಾಹಿತಿಗಳು ಎಂದು ಕರೆದುಕೊಂಡವರಲ್ಲಿ ಹೆಚ್ಚು ಜನ ಒಳ್ಳೆ ಸಾಹಿತಿಗಳು ಬರಲಿಲ್ಲ. ಅದರಲ್ಲೂ ಕತೆ, ಕಾವ್ಯದಂಥ ಸೃಜನಶೀಲ ಪ್ರಕಾರಗಳಿಗಿಂತ ಲೇಖನದಂಥ ಬೇರೆ ಪ್ರಕಾರಗಳಲ್ಲೇ ಹೆಚ್ಚು ಚೆನ್ನಾಗಿ ಬರೆದಿದ್ದಾರಲ್ಲ…?
ಹಾಗೆ ನೋಡಿದರೆ, ಬಂಡಾಯಗಾರರು ಶ್ರೇಷ್ಠ ಚಿಂತನೆ ಅನ್ನುವಂಥದ್ದೇನನ್ನೂ ಕೊಟ್ಟಿಲ್ಲ. ಹಾಗಂತ ಬಂಡಾಯಗಾರರು ಭಾಳಾ ಹೋಪ್‍ಲೆಸ್ ಅಂತ ಅಲ್ಲಗಳೆಯಬೇಕಿಲ್ಲ. ಒಳ್ಳೆಯವರು ತಮ್ಮ ಒಳ್ಳೆಯತನದಿಂದಲೇ ಸಾಹಿತ್ಯ ರಚಿಸಿಲ್ಲ ಅಂತ ನಾವು ಆಪಾದಿಸಬೇಕಿಲ್ಲ. ಬಂಡಾಯ, ಬಂಡಾಯಕ್ಕಾಗಿ ಆಗಬಾರದು. ಅದು ಜೀವನಕ್ಕಾಗಿ, ಕಂಡುಕೊಳ್ಳುವುದಕ್ಕಾಗಿ, ಕಂಡಿದ್ದನ್ನು ಎಲ್ಲರಿಗೂ ತಿಳಿಸುವುದಕ್ಕಾಗಿ. ಆಮೇಲೆ ನಮ್ಮಲ್ಲಿ ದುಷ್ಟ ಬಂಡಾಯಗಾರರು ಯಾರು ಇಲ್ಲ ಅಂತ ನಾನು ತಿಳ್ಕಂಡಿದ್ದೀನಿ.
ಈಗ ನಮ್ಮಲ್ಲಿ ಚೆನ್ನಾಗಿ ಬರೆಯುವ ಹೊಸಬರು ಕೆಲವರು ಬರ್ತಿದ್ದಾರೆ. ಅಬ್ದುಲ್ ರಶೀದ್‍ರಂಥವರು. ಅವರು ಹೆಚ್ಚಾಗಿ ಜಾನಪದ ಶೈಲಿಯ ಕಡೆ ಹೋಗ್ತಿದ್ದಾರೆ. ಈಗ ದೇವನೂರ ಮಹಾದೇವರ ಒಡಲಾಳಕ್ಕಿಂತ ಅವರ ಕುಸುಮಬಾಲೆ ತುಂಬಾ ಜಾನಪದವಾಗಿದೆ… ಇದು ಯಾವುದಾದರೂ ದಿಕ್ಕನ್ನು ಸೂಚಿಸುತ್ತಿದೆಯೇ?
ಇದು ಏನು ತೋರಿಸುತ್ತೆ ಅಂದ್ರೆ, ಅನೇಕ ಶೈಲಿ ಪ್ರಕಾರಗಳು ಸವಕಲಾಗಿವೆ ಅನಿಸಿದಾಗ ಹೊಸ ಹೊಸ ಪ್ರಕಾರ, ಶೈಲಿಯನ್ನು ಹುಡುಕುವ ಪ್ರವೃತ್ತಿಯಿಂದ. ಅದು ಜಾನಪದವೇ ಆಗಬೇಕು ಅನ್ನೋದು ತಪ್ಪು. ನಾಟಕಗಳಲ್ಲಿ ಆ ರೀತಿ ಆಯ್ತು. ಪೋಕ್ ಫಾರಂನಲ್ಲೇ ದೊಡ್ಡದೊಡ್ಡ ವಿಷ್ಯ ಹೇಳ್ತೀವಿ ಅಂತ ಹೋದ್ರೂ ಆಗಲಿಲ್ಲ. ಅದಕ್ಕೆ ಅದರದ್ದೇ ಮಿತಿಗಳಿವೆ. ಅದಕ್ಕೇ ಟಾಲ್‍ಸ್ಟಾಯ್‍ದೇ ಶ್ರೇಷ್ಠ ಕಾದಂಬರಿಯಾಗುತ್ತೇ ಹೊರತು ಒಂದು ಫೋಕ್ ಕಾದಂಬರಿ ಆಗಲ್ಲ. ಫೋಕ್ ಫಾರಂ ಮನುಷ್ಯನ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಿಬಿಡುತ್ತೆ ಅಂತ ತಿಳ್ಕಂಡಿದ್ದರೆ ಭಾಳಾ ತಪ್ಪು. ಆದರೆ ಪ್ರಯೋಗ ಮಾಡುವುದರಲ್ಲಿ ತಪ್ಪಿಲ್ಲ. ಅಂಥ ಪ್ರಯೋಗ ನಿಮಗೆ ಖುಷಿ ಕೊಟ್ಟರೆ, ಓದುಗನಿಗೂ ಖುಷಿ ಸಿಕ್ಕುತ್ತೆ.
ಭಾಷೆಯೇ ಒಂದು ಕಟ್ಟುಪಾಡು ಅಂತಾದಾಗ- ಈ ಥರದ ಪ್ರಯೋಗ, ಭಾಷೆಯಿಂದಲೇ ಒಂದು ಬಗೆಯ ಸ್ವಾತಂತ್ರ್ಯ ಪಡೆಯೋದು ಅಂತ ಆಗುವುದಿಲ್ಲವೇ? ಈಗ ಇಂಗ್ಲಿಷ್‍ನಲ್ಲಿ ಪ್ಲೀಸ್, ಕೈಂಡ್ಲಿ ಅನ್ನೋ ಪದಗಳಿವೆ. ನಮ್ಮ ಆಲೋಚನೆಯಲ್ಲಿ ಇಲ್ಲದಿದ್ದರೂ, ಆ ಪದಗಳನ್ನ ಭಾಷೆಗಾಗಿಯೇ ಬಳಸಬೇಕಾಗುತ್ತಲ್ಲ…?
ಇಲ್ಲ, ನಮ್ಮಲ್ಲಿ ಪದಗಳೇ ಇಲ್ಲ ಮಾರಾಯ. ಬೇಕಾದ್ರೆ ಪ್ಲೀಸ್ ಅಂತ ಹೇಳ್ದೆ ಇರಬಹುದು ಅಷ್ಟೇ… ಈಗ ಫೋಕ್ ಫಾರಂ ಪ್ರಯೋಗವಾಗಿ ಭಾಳಾ ಚೆನ್ನಾಗಿರಬಹುದು. ಆದ್ರೆ ಅದು ಎಷ್ಟರ ಮಟ್ಟಿಗೆ ಸಹಾಯ ಮಾಡಿದೆ ಅಥವಾ ಮಾಡಿಲ್ಲ ಅಂತ ನೋಡಬೇಕಷ್ಟೆ.
ಜೊತೆಗೆ ಅದು ವ್ಯಕ್ತಿಗತ ಪ್ರತಿಭೆಯನ್ನೂ ಅವಲಂಬಿಸಿರುತ್ತೆ.
ಅದೇ ಬರೆಯುವವನ ಸಾಮಥ್ರ್ಯದ ಮೇಲೆ. ಕಂಬಾರರ ‘ಜೋಕುಮಾರಸ್ವಾಮಿ’ ಒಳ್ಳೆ ಮನರಂಜನೆ ಆಗಬಹುದೇ ಹೊರತು ಒಳ್ಳೆ ನಾಟಕ ಆಗಲ್ಲ. ಅದಕ್ಕೇನೇ, ಕಥಾ ಸಾಹಿತ್ಯಕ್ಕೆ ಬಹಳಾ ಮಿತಿ ಇದೆ. ಒಂದು ರೀತೀಲಿ ಅದು ನಿಂತಿರೋದೇ ಜರ್ನಲಿಸಂ ಮೇಲೆ. ಇಟ್ ಈಸ್ ಡಾಕ್ಯುಮೆಂಟೇಟೀವ್. ಒಂದು ಹಂತದಲ್ಲಿ ಅದು ರಿಪೋರ್ಟಿಂಗ್ ಥರ. ಈ ವರದಿಗಾರಿಕೆಯ ಒಳ ಹೊಕ್ಕು, ಅದರಿಂದ ತಪ್ಪಿಸಿಕೊಳ್ಳುವ ಸಾಹಿತ್ಯವೇ ಯಾವಾಗಲೂ ಶ್ರೇಷ್ಠ ಫಿಕ್ಷನ್ ಆಗೋದು. ಕಥೆ, ಕಾದಂಬರಿಯನ್ನ, ಪದ್ಯದಲ್ಲಿ ನಾಟಕದಲ್ಲಿ ಬರೆಯೋಕ್ಕಾಗದಿದ್ರೆ ಅದು ಇದೆ ಕಾರಣಕ್ಕೆ. ಅದರಲ್ಲಿ ವರದಿಗಾರನ ಅಂಶವಿದೆ. ನೀವು ಜೀವನವನ್ನ ವರದಿ ಮಾಡ್ತಿರಬಹುದು. ಮನಸ್ಸಿನಲ್ಲಿ ಆಗೋದನ್ನ ವರದಿ ಮಾಡ್ತಿರಬಹುದು. ಅದೇನೇ ಆದರೂ ಜೀವನಕ್ಕೆ ಬಹಳ ಹತ್ತಿರವಾದ ಭಾಷೆಯಲ್ಲೇ ಇರಬೇಕು. ಅದೊಂದು ಕಟ್ಟುನಿಟ್ಟು. ಜಗತ್ತಿನ ಶ್ರೇಷ್ಠ ಕಾದಂಬರಿಕಾರರೆಲ್ಲ, ಟಾಲಾಸ್ಟಾಯ್, ಇ.ಎಂ.ಫಾಸ್ರ್ಟರ್, ಹೆಮಿಂಗ್ವೇ ಥರದೋರು ಅದಕ್ಕೇ ಒಂದು ಕಲಾತ್ಮಕ ರೂಪು ಕೊಟ್ಟಿದ್ದಾರೆ.
ಸಾರ್, ಭಾರತದ ಶ್ರೇಷ್ಠ ಕವಿ ಹೃದಯವಿತ್ತಲ್ಲಾ, ಅಂದರೆ ರಾಮಾಯಣ, ಮಹಾಭಾರತ ಬರೆದ ಮನಸ್ಸು, ಅದರಲ್ಲಿ ಚರಿತ್ರೆ, ಪುರಾಣ ಮತ್ತು ಕಾವ್ಯ- ಇವೆಲ್ಲ ಸೇರಿಕೊಂಡು ಶ್ರೇಷ್ಠ ಮಹಾಕಾವ್ಯ ಕೊಟ್ಟಿವೆಯಲ್ಲ?
ಅದಾಯ್ತು, ಈಗ ರಾಮಾಯಣ, ಮಹಾಭಾರತದ ಥರ ಇನ್ನೊಂದು ಬರಿಯಕ್ಕಾಗಲ್ಲ. ಅದನ್ನೇ ಹಿಡಿದುಕೊಂಡು ಜಗ್ಗಾಡ್ತಾ ಇರೋದೂ ತಪ್ಪು. ಈಗ ಹೊಸ ಅನುಭವಗಳಾಗಿವೆ. ಹೊಸ ಮುನುಷ್ಯರು, ಹೊಸ ಯಾತನೆ, ಎಲ್ಲ ಬೇರೆ ಬೇರೆ ಥರ ಇದೆ…ಕಾದಂಬರಿಯಲ್ಲಿ ನೀವು ಎಲ್ಲ ನಿಮ್ಮದೇ ರೀತೀಲಿ ಮಾಡಿ, ಆಮೇಲೆ ಅದು ರಾಮಾಯಣ, ಮಹಾಭಾರತಕ್ಕೆ ಹೋಲಿಸಿದರೆ, ಆಗ ಸರಿ. ಆದರೆ ಬರೆಯೋಕೆ ಮುಂಚೇನೆ, ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಮಾಡಿದರೆ…
ಅಲ್ಲ ಸಾರ್ ಮುಂಚೇನೇ ಮನಸ್ಸಿನಲ್ಲಿಟ್ಟುಕೊಂಡು ಅಂತ ಅಲ್ಲ…
ಅಲ್ಲ, ಹಾಗಲ್ಲ, ನಮ್ಮಲ್ಲಿ ಭಾಳಾ ಮಹತ್ವಾಕಾಂಕ್ಷೆ ಇಟ್ಕೊಂಡು ಏನೇನೋ ಮಾಡೋಕೆ ಹೋಗ್ತಾರೆ, ಅದು ಕಾದಂಬರಿ ಆಗಿರಲ್ಲ ! ಮೊದಲು ಅದು ಕಾದಂಬರಿ ಆಗ್ಬೇಕು (ನಗು).
ನವ್ಯ ಬಂತು, ಇದಿಷ್ಟೇ ಅಲ್ಲ ಅನಿಸಿ, ಮತ್ತೆ ಬಂಡಾಯ ಬಂತು. ಆಮೇಲೆ ಅದೂನೂ ಇದಿಷ್ಟೇ ಅಲ್ಲ… ಹೀಗೆ ಒಂದು ಥರದ ಮೆಚೂರಿಟಿ ಬರ್ತದೆಯಲ್ಲ. ಸಾಹಿತ್ಯ ಮುಂದಕ್ಕೆ ಯಾವ ಹಾದಿ ಹಿಡಿಯಬಹುದು?
ಇನ್ನು ಮೇಲೆ ಬಹಳಾ ಒಳ್ಳೆ ಕಾದಂಬರಿ, ನಾಟಕ, ಕಾವ್ಯ ಬರೋಕೆ ಸಾಧ್ಯ ಅಂತ ನನಗನ್ನಿಸ್ತಿದೆ. ಸಿನಿಮಾ ಇತ್ಯಾದಿಯೆಲ್ಲ ಈಗಷ್ಟು ಕುತೂಹಲ ಉಳಿಸಿಕೊಂಡಿಲ್ಲ. ಬರೆಯೋಕೆ ಸಿದ್ಧವಾಗಿರೋರು ಭಾಳಾ ಜನ ಇದ್ದಾರೆ. ವಿದ್ಯೆಯೂ ಸ್ವಲ್ಪ ಜಾಸ್ತಿ ಆಗ್ತಾ ಇದೆ. ವಿದ್ಯೆ ಜಾಸ್ತಿಯಾಗದೆ ಸಾಹಿತ್ಯ ದೊಡ್ಡದಾಗೋಲ್ಲ.
ಜನ ಜೀವನ್ಕೆ ತುಂಬಾ ಒದ್ದಾಡ್ತಿದ್ದಾಗ ಸಾಹಿತ್ಯ ರಚಿಸೋದು ಕಷ್ಟ. ಜೀವನದ ಹೋರಾಟವನ್ನೇ ಸಾಹಿತ್ಯ ಮಾಡೋಕ್ಕೂ ಒಂದು ಬಗೆಯ ವಿಚಿತ್ರ ಡಿಸ್ಟನ್ಸ್, ನಿರ್ಲಿಪ್ತತೆ ಬೇಕಾಗುತ್ತೆ. ಜಾತಿ-ಬಡತನ ಎಲ್ಲ ದೃಷ್ಟಿಯಿಂದಲೂ ಕಷ್ಟ…
ಬದಲಾಗುತ್ತಿರುವ ಸಾಮಾಜಿಕ ಹಿನ್ನೆಲೆಯಲ್ಲಿ ಸಾಹಿತ್ಯ ಮುಂದಕ್ಕೆ ಹೇಗೆ ಮಾರ್ಪಾಡಾಗಬಹುದು? ಮುಂಚೆಯೆಲ್ಲ ಕೇವಲ ಬ್ರಾಹ್ಮಣ ಅನುಭವವೇ ಸಾಹಿತ್ಯವಾಗುತ್ತಿತ್ತು…
ಅದೂ ರಾಜಕೀಯ ಅನುಭವದ ಹಾಗೆಯೇ. ಮುಂಚೆ ಕರ್ನಾಟಕದಲ್ಲಿ ದಿವಾನರಾಗಿದ್ದವರು ಬರೀ ಮದರಾಸಿ ಬ್ರಾಹ್ಮಣರು. ಅವರನ್ನು ಓಡಿಸಿ ಕರ್ನಾಟಕದ ಬ್ರಾಹ್ಮಣರು ಬಂದ್ರು. ಆಮೇಲೆ ಕರ್ನಾಟಕದ ಶೂದ್ರರು, ಆಗ ಬ್ರಾಹ್ಮಣ- ಶೂದ್ರರ ಸಂಘರ್ಷ, ಮತ್ತೆ ಶೂದ್ರರಲ್ಲೇ ಜಗಳ… ಅದೇ ಥರ ಸಾಹಿತ್ಯದಲ್ಲೂ ಆಗಿದೆ.
ಮುಂಚೆ ಕುವೆಂಪು ಒಬ್ಬರೇ ಗಟ್ಟಿಯಾಗಿ ನಿಂತು ಬರೀತಿದ್ರು. ಈಗ ಆ ಕಾಲ ಇಲ್ಲ. ಬ್ರಾಹ್ಮಣರೂ ಚೆನ್ನಾಗಿ ಬರೀತಿದ್ದಾರೆ. ಆದರೆ ಬೇರೆಯವರೂ ತುಂಬಾ ಚೆನ್ನಾಗಿ ಬರೀತಿದ್ದಾರೆ.
ನಾವು ಜಾತಿವಿನಾಶ ಸಮ್ಮೇಳನ ಮಾಡಿದಾಗ- ಬ್ರಾಹ್ಮಣೇತರ ಸಮ್ಮೇಳನ ಅದು. ಆದರೆ ಬ್ರಾಹ್ಮಣ ವಿರೋಧಿ ಅಂತ ತಿಳಕೊಂಡ್ರು- ಅದರಿಂದ ಭಾಳಾ ಎನರ್ಜಿ ರಿಲೀಸ್ ಆಯ್ತು. ನಮ್ಮ ಅನುಭವ ಕೂಡಾ ಸಾಹಿತ್ಯ ಆಗಬಹುದು ಅನ್ನೋ ಆತ್ಮವಿಶ್ವಾಸ ಬಂತು. ನಮ್ಮಲ್ಲೇನೋ ಮುಂಚಿನಿಂದ ಸಾಹಿತ್ಯದಲ್ಲಿ ಅಂಥ ಹೊಡೆದಾಟ, ಮನಸ್ತಾಪ ಇಲ್ಲ. ಆದ್ರೆ ನಿಮ್ಮ ಅನುಭವ ಕೂಡಾ ಸಾಹಿತ್ಯ ಆಗಬಹುದು ಅನ್ನೋ ಧೈರ್ಯ ಬರದಿದ್ರೆ ಬಹಳ ಕಷ್ಟ… ನಮ್ಮಲ್ಲೊಬ್ಬ ಹಕ್ಕಿಪಿಕ್ಕಿ ಹುಡುಗ ಮರಿಯಪ್ಪ ಅಂತ ಬರೀತಾನೆ. ಅವನ ಅನುಭವಗಳು ಯಾವುದೇ ಲಿಂಗಾಯತನಿಗೆ ಹರಿಜನನಿಗೆ ಆಗದಿರುವ ಅನುಭವಗಳು. ಇದುವರೆಗೆ ಸುಡುಗಾಡು ಸಿದ್ಧರು ಒಂದು ಕತೆ ಬರೆದಿಲ್ಲ. ದೊಂಬರು ಕತೆ ಬರೆದಿಲ್ಲ. ದೊಂಬರ ಮೇಲೆ ಬೇರೆಯವರು ಬರೆದರೆ ಪ್ರಯೋಜನವಿಲ್ಲ.
ಹಿಂದುಳಿದ ವರ್ಗಗಳ ಸಿದ್ಧಾಂತದ ಪರ ನಾನ್ಯಾಕೆ ವಾದ ಮಾಡ್ತೀನಿ ಅಂದ್ರೆ, ಅವರಲ್ಲಿ ಗಣೆ ಮೇಲೆ ದೊಂಬರಾಟ ಆಗಬಹುದು. ಆಡೋ ದೊಂಬನಿಗೆ ವಿದ್ಯೆ ಬುದ್ಧಿ ಸಿಕ್ತೂಂದ್ರೆ, ಆತ ಅಸಾಧಾರಣ ಬರಹಗಾರ ಆಗಬಹುದು. ಚಿಂತಕ ಜೊತೆಗೇ ಅಸಾಧಾರಣ ದೊಂಬನೂ ಆಗಬಹುದು… ಇವರಿಗೆ ಅರ್ಥವೇ ಆಗಲ್ಲ. ಒಬ್ಬ ದೊಂಬ ಒಂದು ಊರು ಹಿಡಿದು, ಸ್ಕೂಲ್ ಹಿಡಿದು ಮಗನ್ನ ಸ್ಕೂಲಿಗೆ ಕಳಿಸಿ… ಅವನು ವಿದ್ಯಾವಂತನಾಗಿ ಬಂದ ಮೇಲೆ ನಿನಗೇನನ್ನಿಸಿತು ಅಂತ ಕೇಳೋದಿದೆಯಲ್ಲ? ಅದೇ ಅದ್ಫುತ. ಇಟ್ ಈಸ್ ಎನ್ ಎಕ್ಸ್‍ಟಾರ್ಡಿನರಿ ಥಿಂಗ್. ಇನ್ನೊಂದು, ಅವನಿಗೆ ಹೇಳ್ಕೋಳೋಕೆ ಇಷ್ಟ ಇರಲ್ಲ. ಅವನಿಗೆ ಆತ್ಮವಿಶ್ವಾಸ ಕೊಡಬೇಕು. ತನ್ನ ಅನುಭವಗಳನ್ನು ಎದುರಿಸುವ ಧೈರ್ಯ ಇಲ್ಲದಿದ್ರೆ ಅವನೂ ಬಾಹ್ಮಣರ ಥರ ಬರೀತಾನೆ…
ಇದಕ್ಕೂ ಅಂದ್ರೆ ಸಾಹಿತ್ಯಕ್ಕೂ ಚಳವಳಿಗೂ ಜೀವಂತ ಸಂಬಂಧ ಇದೆ ಅಂತಾನಾ ಸಾರ್ ?
ನಮ್ಮಲ್ಲಿ ಏನಾಗಿರುತ್ತೆ ಅಂದ್ರೆ ಬಾಗಿಲು ತೆಗೆಯೋದೇ ಇಲ್ಲ ಮಾರಾಯ. ಮುಚ್ಚಿಬಿಟ್ಟಿರ್ತಾರೆ. ಬಾಗಿಲು ತೆಗೆದು ಒಳಗೂ ಬಿಡಲ್ಲ. ಹೊರಗೂ ಬಿಡಲ್ಲ. ಇಲ್ಲಿ ಯಾವ ಅನುಭವ ಆಗುತ್ತೆ? ಜಾತಿ ಪದ್ಧತಿ ಹೇಗೆ ಹೋಗುತ್ತೆ? ತುಂಬಾ ಕಷ್ಟ. ನೋಡಿ, ತನ್ನ ಜಾತಿ ಸಭೇಲಿ ಮಾತಾಡಕ್ಕೆ ಪ್ರತಿಯೊಬ್ಬ ನಾಗರಿಕ ಕೂಡಾ ನಾಚ್ಕೋಬೇಕು. ಶೇಮಲೆಸ್ ಫೆಲೋಸ್! ನಾಚ್ಕೆ ಅನ್ನೋದೇ ಇಲ್ವಲ್ಲ ಇಲ್ಲಿ? ತಮ್ಮ ಜಾತಿಯವರ ಪುಸ್ತಕ ಓದೋದು, ಜಾತಿಯವರ ಜೊತೆಯೇ ಓಡೋದು… ಜಾತಿಯ ನೀತಿ ಸಂಹಿತೆ ಅಂತ ಬರೆದಿದ್ದೆ- ಒಂದ್ಸಲ- ದಿನನಿತ್ಯದ ಬದುಕಿನಲ್ಲಿ ಈ ಜಾತಿಯ ಅಪರಾಧದಿಂದ ಪಾರಾಗಬೇಕಾದರೆ ಏನೇನು ಮಾಡಬೇಕು ಅಂತ…
ಆದರೆ ಜಾತಿ ಬರೀ ಆಚರಣೆ ಅಷ್ಟೇ ಆಗಿರಲ್ವಲ್ಲ? ಅದೊಂದು ಮಾನಸಿಕ ಸ್ಥಿತಿ ಅಲ್ವಾ ಸಾರ್?
ಯಾಕಂದ್ರೆ, ಮನೇಲೆಲ್ಲ ಹೇಳ್ಕೊಟ್ಟು ಹೇಳ್ಕೊಟ್ಟು ಹಾಗಾಗಿರುತ್ತೆ. ಪ್ರತಿಯೊಬ್ಬರೂ ಸಂಭೋಗದ ಮೂಲಕವೇ ಹುಟ್ಟಿರೋದು. ಅಪ್ಪ ಅಮ್ಮ ಕುಟುಂಬ ಮಾಡಿ ಕಷ್ಟ ಪಟ್ಟು, ದುಡಿದು, ತಿಂದು, ಎಲ್ಲ ಮನುಷ್ಯರೂ ಅದೇ ಥರ. ಆದರೆ ಬೆಳೆಯೋ ರೀತೀಲಿ ಅನುಭವಗಳು ಬೇರೆ ಬೇರೆ ಆಗುತ್ತೆ. ಅದನ್ನೇ ವಿನಿಮಯ ಮಾಡಿಕೊಳ್ಳೋಕ್ಕೆ ಶುರು ಮಾಡಿದ ಮೇಲೆ ಸಾಹಿತ್ಯದಲ್ಲಿ ಹೊಸ ಅನುಭವ ಬರುತ್ತೆ.
ಬಹುಶಃ ಅನುಭವದ ವಿನಿಮಯ ಕೂಡಾ ಸಂಭೋಗದ ಮೂಲಕವೇ ಆಗಬೇಕಲ್ಲವಾ ಸಾರ್? (ಜಾತಿ ಜಾತಿ ರಕ್ತ ಬೆರೆಯುವ ಅಂತರ್ಜಾತಿ ಮದುವೆ ಅನ್ನುವ ಅರ್ಥದಲ್ಲಿ)
ಅನುಭವ, ದೃಷ್ಟಿಕೋನದ ವಿನಿಮಯ ಅಂದ್ರೆ ಏನದು? ಅದು ರಕ್ತದ ವಿನಿಮಯ ಅಂತಾನೇ! ಆ ಥರದ ಸಾಧ್ಯತೆಗಳೇ ನಮ್ಮಲ್ಲಿಲ್ಲ. ನಮ್ಮಲ್ಲಿ ಲಿಂಗಾಯಿತರು, ಒಕ್ಕಲಿಗರು ಬೀದೀಲಿ ತಮ್ಮ ಹುಡುಗರನ್ನು ಕರೆದುಕೊಂಡು ಹೋಗ್ತಾರಲ್ಲ? (ವೆಂಕಟಸ್ವಾಮಿ ವರದಿ ವಿರುದ್ಧ ಚಳವಳಿಯ ಪ್ರಸ್ತಾಪ) ಅವರು ಒಂದು ಇಡೀ ಪೀಳಿಗೆಯನ್ನು ನಾಶ ಮಾಡ್ತಿದ್ದಾರೆ. ಒಂದು ತಲೆಮಾರಿನ ಹುಡುಗರು ಕೋಮುವಾದಿಗಳಾಗ್ತಾರೆ. ಇದೇನೋ ದೊಡ್ಡ ಕೆಲಸ ಮಾಡ್ತಿದ್ದೀವಿ ಅಂದುಕೊಂಡಿದ್ದಾರೆ, ಹಾಗಲ್ಲ ಅದು.
‘ಸುದ್ದಿ ಸಂಗಾತಿ’ 9 ನವೆಂಬರ್ 1986