ಲಂಕೇಶರ ಲೋಕದೃಷ್ಟಿ, ಹಾರೈಕೆ, ಒಂಟಿತನ ಇತ್ಯಾದಿ-ಸುಗತ ಶ್ರೀನಿವಾಸರಾಜು

lankesh download

ಕಳೆದ ವಾರ ಮೈಸೂರಿನ ಗೆಳೆಯರು ನನ್ನನ್ನು ಪಿ. ಲಂಕೇಶರನ್ನು ಕುರಿತಂತೆ ಮಾತನಾಡಲು ಕರೆದಿದ್ದರು. ಆ ಸಭೆ¨ಯಲ್ಲಿ ಭಾಗವಹಿಸಿದ್ದ ಇತರರು, ಲಂಕೇಶರ ಸಹಾನುಭೂತಿ ಸಮಕಾಲೀನರಾಗಿದ್ದರು ಅಥವಾ ಅವರ ದೀರ್ಘಕಾಲದ ಒಡನಾಡಿಗಳಾಗಿದ್ದರು ಅಥವಾ ಅವರ ಸುತ್ತ ನಿತ್ಯ ನೆರೆದಾಡುತ್ತಿದ್ದ ಶಿಷ್ಯರಾಗಿದ್ದರು. ನಾನು ಮಾತ್ರ ಅವರ ಓದುಗ ವರ್ಗಕ್ಕೆ ಸೇರಿದ ಹೊರಗಿನವನು. ಅವರೆಲ್ಲರಿಗೂ ಲಂಕೇಶರ ಸಣ್ಣತನ, ದೊಡ್ಡತನ, ವಿಸ್ತಾರ, ವಿವೇಕ, ದೈರ್ಯ, ದಿಗ್ದರ್ಶನ, ತೆವಲು, ತಿಕ್ಕಲುತನಗಳ ಬಗ್ಗೆ ಅನೇಕ ಕತೆಗಳು ತಿಳಿದಿದ್ದವು. ಆದರೆ ನಾನು ದೂರದಲ್ಲಿ ನಿಂತು, ಅವರ ಅಕ್ಷರ ಮತ್ತು ಅಪರೂಪದ ಮಾತುಗಳ ಮೂಲಕ ಮಾತ್ರ ಅವರನ್ನು ಪರಿಗ್ರಹಿಸಿದವನು. ಹೀಗೆ ಪರಿಗ್ರಹಿಸುತ್ತ, ಪರಿಭಾವಿಸುತ್ತಾ ನನ್ನೊಳಗೆ ಅಚ್ಚರಿ ಉಂಟು ಮಾಡುವ ರೀತಿಯಲ್ಲಿ ಬೆಳೆದು ಪ್ರಭಾವಿಸಿದ ಲಂಕೇಶರ ಬಗ್ಗೆ ಆಡಿದ ಮಾತುಗಳ ಪುಟ್ಟ ತುಣುಕನ್ನು, ವಿಶೇಷವಾಗಿ ಪತ್ರಿಕೋದ್ಯಮಕ್ಕೆ ಕುರಿತಂತೆ, ಇಲ್ಲಿ ಹಂಚಿಕೊಳ್ಳುತ್ತೇನೆ.

ಒಮ್ಮೆ ನಮ್ಮ ತಂದೆಯವರು ನನ್ನನ್ನು ಲಂಕೇಶರಿಗೆ ಪರಿಚಯಿಸಿದಾಗ ಅವರು ಹರಸಿದ್ದು ಹೀಗೆ: ‘‘ನೀನು ಜೊಹಾನಸ್‌ಬರ್ಗ್‌ನಿಂದ ‘ದಿ ಹಿಂದು’ಗೆ ವರದಿ ಮಾಡುತ್ತಿರುವ ಎಂ ಎಸ್ ಪ್ರಭಾಕರ ತರಹದ ಪತ್ರಕರ್ತನಾಗಬೇಕು (If you become a journalist, you should become like M.S. Prabhakara, reporting for the Hindu from Johannesburg).’’ ಆಗ ಇಂಗ್ಲೆಂಡಿಗೆ ಹೊರಟು ನಿಂತಿದ್ದ ನನಗೆ ಇದು ವಿಚಿತ್ರ ಹಾರೈಕೆ ಅನ್ನಿಸಲಿಲ್ಲ. ಆದರೆ ಕಾಲಕಳೆದಂತೆ ಅದರಲ್ಲಿದ್ದ ವೈರುಧ್ಯವನ್ನು ಮನಗಂಡೆ. ಲಂಕೇಶ್ ಮತ್ತು ಪ್ರಭಾಕರ (ಕಾಮರೂಪಿ) ಅವರ ಪತ್ರಿಕೋದ್ಯೋಗದ ಅಭಿವ್ಯಕ್ತಿಯ ಮಾದರಿಗಳು ವಿರುದ್ಧ ದಿಕ್ಕಿನಲ್ಲಿದ್ದವು. ಲಂಕೇಶರು, ತಮ್ಮ ಪತ್ರಿಕೆಯ ಮೂಲಕ, ಅತ್ಯಂತ ಆಪ್ತ, ಉತ್ಕಟ, ರಾಚುವ ಬುದ್ಧಿವಂತಿಕೆಯ, ನಿಚ್ಚಳ ಸ್ವ-ಅಭಿಪ್ರಾಯದ, ಸಾಮಾನ್ಯ ಜ್ಞಾನದ ಜಾತ್ರೆ ನಡೆಸುತ್ತ, ಎಲ್ಲಕ್ಕೂ ಒಂದು ಅನೌಪಚಾರಿಕ ಹೊದಿಕೆ ಹೊದಿಸಿ, ಸರಿ-ತಪ್ಪುಗಳ ಬಗ್ಗೆ ಕೊಂಚ ಅಹಂಭಾವದಿಂದಲೇ ಜಗತ್ತನ್ನು ನಿರ್ದೇಶಿಸುವ ಪತ್ರಿಕೋ–ದ್ಯೋಗದ ಮಾದರಿಯನ್ನು ಅನುಸರಿಸುತ್ತಿದ್ದರು. ಆದರೆ ಚರಿತ್ರೆಯ ಭಾರ  ಹೊತ್ತ, ನೂರು ವರ್ಷಕ್ಕೂ ಹಳೆಯ ‘ದಿ ಹಿಂದು’ ಮತ್ತು ಅದಕ್ಕೂ ಮೊದಲು ‘ಎಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ’ಯಲ್ಲಿ ಪ್ರಭಾಕರ ಅವರ ಅಭಿವ್ಯಕ್ತಿಯು, ಅಧ್ಯಯನದ ಗಾಂಭೀರ್ಯ ಒಳಗೊಂಡ; ಸ್ವಂತ ಅಭಿಪ್ರಾಯವನ್ನು ಢಾಳಾಗಿ ಮುಂದು ಮಾಡದೆ, ಆದರೆ ಅದನ್ನು ತಮ್ಮ ವಿಷಯ ಆಯ್ಕೆ, ವಿಚಾರ ಜೋಡಣೆಯ ಮೂಲಕ ಮಾತ್ರ ಸೂಕ್ಷ್ಮವಾಗಿ, ತಣ್ಣಗೆ ಮಂಡಿಸುತ್ತ; ಭಾವನೆಗಳಿಗೆ ಕಿಂಚಿತ್ತೂ ಜಾಗ ಕೊಡದೆ, ತಾನು ನಿರ್ದೇಶಿಸುವ ಬದಲು, ಓದುಗ ತನ್ನ ನಿಲುವನ್ನು ತಾನೇ ಕಂಡುಕೊಳ್ಳಲಿ ಎಂಬ ಬೌದ್ಧಿಕ ಐಷಾರಾಮಿತನದ, ತುರ್ತಿಲ್ಲದ ಮಾದರಿ.

ಈ ಇಬ್ಬರು ಮಹನೀಯರ ಅಭಿವ್ಯಕ್ತಿ ಮಾದರಿಗಳಲ್ಲಿ ವೈರುಧ್ಯವಿದ್ದರೂ, ಯೋಚಿಸುತ್ತಾ ಹೋದಂತೆ, ಅವರ ಲೋಕದೃಷ್ಟಿಯಲ್ಲಿ ಸಾಮ್ಯತೆ ಕಾಣತೊಡಗಿತು. ಲಂಕೇಶರು ಜಗತ್ತನ್ನು ಅತ್ಯಂತ ಮಾನವೀಯವಾಗಿ, ವಿಶಾಲವಾಗಿ ಯಾವುದೇ ದೇಶ, ಭಾಷೆ , ಜಾತಿ, ‘ಧರ್ಮದ ಸಂಕೋಲೆಗಳನ್ನು ಧರಿಸದೆ, ಎಲ್ಲರನ್ನೂ ಒಳಗೊಳ್ಳುವಂತೆ ಗ್ರಹಿಸುತ್ತಿದ್ದರು. ಆಧುನಿಕತೆ, ಅಂತಾರಾಷ್ಟ್ರೀಯತೆ ಮತ್ತು ಪ್ರಜಾಪ್ರಭುತ್ವಕ್ಕೆ ಅವರ ಚಿಂತನಾ ಲಹರಿಯಲ್ಲಿ ವಿಶೇಷ ಒತ್ತಿತ್ತು. ಗಾಂಧಿ, ಬುದ್ಧನ ವ್ಯಕ್ತಿತ್ವವನ್ನು ಅವರು ಬೆರಗುಗಣ್ಣುಗಳಿಂದ ನೋಡುತ್ತಲೇ, ಆಂತರ್ಯದಲ್ಲಿ ಒಂದು ತರಹದ ಸೃಜನಶೀಲ ಅನುಮಾನ ಮತ್ತು ಅರಾಜಕತೆಯನ್ನು ಪೋಷಿಸಿಕೊಂಡಿದ್ದರು. ಪ್ರಭಾಕರ ಅವರಲ್ಲಿ ಈ ಅರಾಜಕತೆ ಮತ್ತು ಅನುಮಾನದ ಅಂಶ ಹೆಚ್ಚೇ ಇದೆ. ರಾಜಕೀಯವಾಗಿ ಅವರಲ್ಲಿ ಎಡಪಂಥೀಯ ತುಡಿತ ನಿಚ್ಚಳವಾಗಿಯೇ ಕಾಣುತ್ತದೆ. ಗಾಂಧಿ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಅವರು ಹತ್ತಿರದಿಂದ ಕಂಡ ಮಂಡೇಲಾ ತರಹದವರನ್ನೂ, ಅವರ ಮಾನವೀಯತೆಯನ್ನೂ, ಇವರು ಅತ್ಯಂತ ವಿಮರ್ಶಾತ್ಮಕವಾಗಿ, ಕಟುವಾಗಿ ನೋಡಬಲ್ಲವರು. ಲಂಕೇಶರಿಗಿಂತಲೂ ಇವರಲ್ಲಿ ಮೂರ್ತಿಭಂಜಕ ಸಾಮರ್ಥ್ಯ ಒಂದು ತೂಕ ಹೆಚ್ಚು. ಆದರೆ, ಇಬ್ಬರೂ ಎಲ್ಲ ಬೌದ್ಧಿಕತೆಯ ನಡುವೆ ಹುಚ್ಚು, ಅಪ್ರಬುದ್ಧ ಭಾವನಾತ್ಮಕತೆಯನ್ನು  ಪ್ರದರ್ಶಿಸಬಲ್ಲ ಅಗೋಚರ ಅಂಶವನ್ನು ತಮ್ಮೊಳಗೆ ಇರಿಸಿಕೊಂಡವರು. ಇಬ್ಬರಲ್ಲೂ ಜಗತ್ತಿನ ದೈನಂದಿನ ಆಚರಣೆಗಳ ಬಗ್ಗೆ ಒಂದು ಅನೂಹ್ಯ ಒಳನೋಟವನ್ನು ಬಿತ್ತರಿಸುವ ಶಕ್ತಿ ಇದೆ. ಇಬ್ಬರೂ ನೇರ, ನಿಷ್ಠುರವಾದಿಗಳು.

ಹೀಗಾಗಿ ಲಂಕೇಶರ ಆ ದಿನದ ಹಾರೈಕೆ ಹಾರಿಕೆಯದ್ದಾಗಿರಲಿಲ್ಲ, ಅತ್ಯಂತ ತೀವ್ರವಾದದ್ದು ಮತ್ತು ನನ್ನಂಥ ಎಳೆಯನನ್ನು ಎದುರುಗೊಂಡಾಗ ಉಸಿರಲೆಂದೇ ಅವರ ಆಳದಲ್ಲಿ ಪೋಷಿಸಿಕೊಂಡು ಬಂದದ್ದು, ಎಂಬ ಅತಾರ್ಕಿಕ ವಿಧಿಯ ಲೆಕ್ಕಾಚಾರವನ್ನು ಪೋಣಿಸಿಕೊಳ್ಳುತ್ತ ನಾನು ಪತ್ರಕರ್ತನಾಗಿ ಬೆಳೆದೆ. ನಾನು ಇಬ್ಬರ ಮಾದರಿಗಳನ್ನು ಗಮನಿಸುತ್ತ, ಮೇಳೈಸುತ್ತಾ ಬೆಳೆಯಲು, ನನಗೆ ವಿನೋದ್ ಮೆಹ್ತಾ ತರಹದ ಪ್ರಾಮಾಣಿಕ, ಅಪ್ರತಿಮ ಮಾನವತಾವಾದಿ ಮತ್ತು ಅಧಿಕಾರ, ಜ್ಞಾನ, ಬೌದ್ಧಿಕತೆಯ ಆಳದಲ್ಲಿನ ಅಹಂಕಾರವನ್ನು ಸ್ಫೋಟಿಸುವ ಸಿಡಿಮದ್ದನ್ನು ಸದಾ ತಯಾರಿಸುತ್ತಲೇ ಇದ್ದ ಗುರುವಿನ ಗರಡಿ ಸಿಕ್ಕಿತು. ವಿನೋದ್ ಮೆಹ್ತಾರನ್ನು ನಾನು ಒಪ್ಪಲು, ಆ ಮನಸ್ಥಿತಿಯನ್ನು ಮೆಚ್ಚಲು ಲಂಕೇಶ್‌ರ ನನ್ನ ಓದು ಕಾರಣವಾಗಿತ್ತು. ನನಗೇ ಅರಿಯದೆ ನನ್ನ ಜೀವನದ ಒಲವು, ನಿಲುವು, ಆಯ್ಕೆಗಳಿಗೆ ಲಂಕೇಶರ ಬರವಣಿಗೆ ಪ್ರಭಾವಿ ಶಕ್ತಿಯಾಗಿ ಕೆಲಸ ಮಾಡಿತ್ತು. ನಾನು ಒಮ್ಮೆ ಮೆಹ್ತಾರಿಗೆ, ‘‘ನಿಮ್ಮಲ್ಲಿ ಲಂಕೇಶರ ಎಲ್ಲ ತಿಕ್ಕಲುತನ ಇದೆ ಅಥವಾ ಲಂಕೇಶರಲ್ಲಿ ನಿಮ್ಮೆಲ್ಲ ತಿಕ್ಕಲುತನವಿತ್ತು,’’ ಎಂದು ಹೇಳಿದೆ. ಅದಕ್ಕೆ ಅವರು, ‘‘ಹ್ಞಾ, ನಾನು ಅವರನ್ನು ಒಮ್ಮೆ ಭೇಟಿಯಾಗಿದ್ದೆ ’ ಎಂದು ನೀರಸವಾಗಿ ಪ್ರತಿಕ್ರಿಯಿಸಿದ್ದರು. ಲಂಕೇಶರು ತೀರಿಕೊಂಡಾಗ ನಾನು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಅವರ ಪತ್ರಿಕೋದ್ಯೋಗದ ಅರಾಜಕತೆಯನ್ನು ‘ತತ್ವಬದ್ಧ, ನೀತಿಬದ್ಧ ಅರಾಜಕತೆ’ (principled anarchism) ಎಂದು ಕರೆದಿದ್ದೆ. ಈ ಸಾಲನ್ನು ನಾನು ಅಮೆರಿಕದ ಪ್ರತಿರೋಧಿ ಚಿಂತಕ ಚಾಮ್‌ಸ್ಕಿಗೆ ಬೇರೊಬ್ಬರು ಬಳಸಿದ್ದಲ್ಲಿಂದ ಎರವಲು ಪಡೆದಿದ್ದೆ. ಈ ರೀತಿಯ ‘ತತ್ವಬದ್ಧ ಅರಾಜಕತೆ’ ಪತ್ರಿಕೋದ್ಯೋಗದ ಆಚರಣೆಗೆ ಮುಖ್ಯ ಎಂದು ನಾನು ನಂಬಲು ಲಂಕೇಶ್, ಪ್ರಭಾಕರ, ವಿನೋದ್ ಮೆಹ್ತಾ ತರಹದ ಮಹನೀಯರು ಕಾರಣ. ಲಂಕೇಶ್ ತಮ್ಮ ಪತ್ರಿಕೆಯನ್ನು ‘ಕಾಯಂ ವಿರೋಧಪಕ್ಷ’ವಾಗಿ ಕಂಡರು. ವಿನೋದ್ ಮೆಹ್ತಾ, ‘‘ಯಾವೋನೇ ಅಧಿಕಾರಸ್ಥ ನಮಗೆ ಗೆಳೆಯನಾಗಲು   { friend} ಸಾಧ್ಯವಿಲ್ಲ. ಅವನು ಪರಿಚಯಸ್ಥ (acquaintance) ಮಾತ್ರ ಆಗಿರಬೇಕು,’’ ಎಂದು ಹೇಳುತ್ತಿದ್ದರು. ಈ ಇಬ್ಬರೂ ಅಧಿಕಾರಸ್ಥರಿಂದ ಅಂತರ ಕಾಯ್ದುಕೊಳ್ಳುತ್ತಿದ್ದ ರೀತಿ ಅನನ್ಯವಾಗಿತ್ತು. ಲಂಕೇಶರು ಸತ್ತಾಗ ಅವರಿಗೆ ಎಸ್ ಎಂ ಕೃಷ್ಣ ಸರ್ಕಾರ ‘ಸಕಲ ಸರ್ಕಾರಿ ಗೌರವಗಳೊಂದಿಗೆ’ ಬೀಳ್ಕೊಡಲಿಲ್ಲ. ಅದು ಅಧಿಕಾರಸ್ಥರು ಅವರಿಗೆ ಸಲ್ಲಿಸಿದ ಅತ್ಯಂತ ದೊಡ್ಡ ನಮನ, ಎಂದು ನಾನು ವ್ಯಂಗ್ಯವಾಗಿ ನನ್ನ ಹೆರಾಲ್ಡ್  ಲೇಖನದಲ್ಲಿ ಬರೆದಿದ್ದೆ.

ಲಂಕೇಶರ ಎಲ್ಲ ಆರ್ಭಟದ ನಡುವೆ ಅವರಿಗೆ ಏಕಾಂಗಿತನವಿತ್ತು. ಮೌನದ ಪ್ರತಿಧ್ವನಿಯನ್ನು ಅತ್ಯಂತ ಸೂಕ್ಷ್ಮವಾಗಿ ಆಲಿಸುವ ಶಕ್ತಿ ಇದ್ದಿದ್ದರಿಂದಲೇ ಅವರು ದೊಡ್ಡ ಬರಹಗಾರರೂ ಆಗಿದ್ದರು. ಲಂಕೇಶರ ಪತ್ರಿಕಾ ಬರವಣಿಗೆಗೆ ಒಂದು ಆತ್ಮಚರಿತ್ರಾತ್ಮಕ ಆಯಾಮವಿರುತ್ತಿತ್ತು. ಅವರು ಸೆಪ್ಟೆಂಬರ್ 1985ರಲ್ಲಿ ಯುರೋಪಿನ ಅತ್ಯಂತ ದೊಡ್ಡ ಸಂಪಾದಕ ಹೆರಲ್ಡ್ ಈವಾನ್ಸ್ ತಾನು ಸಂಪಾದಿಸುತ್ತಿದ್ದ ‘ಸಂಡೇ ಟೈಮ್ಸ್’ ಮತ್ತು ‘ಟೈಮ್ಸ್’ ಪತ್ರಿಕೆಗಳಿಂದ ನಿರ್ಗಮಿಸುತ್ತಿದ್ದ ಹೊತ್ತಿಗೆ ಹೀಗೆ ಬರೆಯುತ್ತಾರೆ: ‘‘ತನ್ನ ಕಚೇರಿಯನ್ನು ಕೊನೆಯ ಬಾರಿಗೆ ಬಿಟ್ಟು ಹೊರಟ ಹೆರಲ್ಡ್ ಈವಾನ್ಸ್‌ನಲ್ಲಿದ್ದ ಏಕಾಂಗಿತನ ಮತ್ತು ತಬ್ಬಲಿತನ ಎಲ್ಲ ಪತ್ರಕರ್ತರ ಆಳದ ಭಾವನೆ  ಆಗಿದೆ. ಕೋಟ್ಯಂತರ ಪೌಂಡುಗಳನ್ನು ಹೂಡಿ ಕಟ್ಟಿದ ಪತ್ರಿಕೆಯೊಂದಕ್ಕೆ ರಾಜಕೀಯ, ಸಾಂಸ್ಕೃತಿಕ ಅಧಿಕಾರ ಇರುವಂತೆಯೇ ಆರ್ಥಿಕ, ಸಾಮಾಜಿಕ ಕಾಳಜಿ, ಹೊಣೆಗಳಿರುತ್ತವೆ; ಅಲ್ಲಿರುವ ಸಾವಿರಾರು ಜನರಲ್ಲಿ ಅನೇಕರು ಅಶಿಸ್ತಿನ, ಮರ್ಜಿಗಳ, ಸರ್ಕಾರದ ಸವಲತ್ತು, ಎಂಜಲಿಗಾಗಿ ಬಾಯಿ ಬಿಡುವವರು ಇದ್ದೇ ಇರುತ್ತಾರೆ. ಆದರೆ ಪತ್ರಿಕೆಯೊಂದಕ್ಕೆ ಜೀವ ಇರಬೇಕಾದರೆ ಆ ಪತ್ರಿಕೆಯ ನಾಯಕನಿಗೆ ತೀವ್ರ ನ್ಯಾಯವಂತಿಕೆ, ನಿಷ್ಠುರತೆ, ಬಂಡಾಯದ ಗುಣ ಇರಬೇಕಾಗುತ್ತದೆ. ನೀಚತನ ಕಂಡಲ್ಲಿ ಭೂತ  ಬಿಡಿಸುವ, ಧಿಕ್ಕರಿಸುವ ಗುಣವಿಲ್ಲದ ಪತ್ರಿಕೆ ನೀಚತನದ ಪಾಲುದಾರ ಆಗುತ್ತದೆ. ಆದ್ದರಿಂದಲೇ ನಿಶ್ಚಯ, ಪ್ರಾಮಾಣಿಕತೆ ಮತ್ತು ಉಗ್ರ ನಿಷ್ಠುರತೆಯ ವ್ಯಕ್ತಿ ಏಕಾಂಗಿತನ ಮತ್ತು ತಬ್ಬಲಿತನವನ್ನು ಕಟ್ಟಿಕೊಂಡೇ ಬದುಕುತ್ತಾನೆ.’’ ಈವಾನ್ಸ್‌ನ ನಿಷ್ಠುರತೆ, ಬಂಡಾಯ, ಏಕಾಂಗಿತನದ ಬಗ್ಗೆ ಬರೆಯುತ್ತ ಲಂಕೇಶ್ ತಮ್ಮದೇ ಸ್ಥಿತಿ-ಗತಿಯ ಬಗ್ಗೆ, ದಾರಿಯ ಬಗ್ಗೆ ಚಿಂತಿಸುತ್ತಿದ್ದಾರೆ ಎಂಬುದು ಇಲ್ಲಿ ಸ್ಪಷ್ಟ. 2005 ಸೆಪ್ಟೆಂಬರ್‌ನಲ್ಲಿ ನನಗೆ ಈವಾನ್ಸ್‌ರನ್ನು ವಿನೋದ್ ಮೆಹ್ತಾರವರ ‘ಔಟ್‌ಲುಕ್’ ಪತ್ರಿಕೆಗಾಗಿ ಸಂದರ್ಶಿಸುವ ಅವಕಾಶ ಸಿಕ್ಕಿತು. ಲಂಕೇಶರ ಈ ಸಾಲುಗಳನ್ನು ಅವರ ಗಮನಕ್ಕೆ ತಂದೆ, ಅವರ ದನಿಯಲ್ಲಿ ಅಚ್ಚರಿಯ, ಸಂತೋಷದ ಉದ್ಗಾರವಿತ್ತು. ಇಸವಿ 2000ದಲ್ಲಿ ಈವಾನ್ಸ್‌ರನ್ನು ಸಂಪಾದಕರ ಒಕ್ಕೂಟ ‘ಶತಮಾನದ ಸಂಪಾದಕ’ ಎಂದು ಆಯ್ಕೆ ಮಾಡಿತು.

ಲಂಕೇಶರು ಕರ್ನಾಟಕದಲ್ಲಿ ತಮ್ಮ ಪತ್ರಿಕೆಯ ಮೂಲಕ ಎರಡು ದಶಕಗಳ ಕಾಲ ಅತ್ಯಂತ ತೀಕ್ಷ್ಣ ರಾಜಕೀಯ ಮತ್ತು ಸಾಂಸ್ಕೃತಿಕ ಸಂಭಾಷಣೆಯನ್ನು ಮಾತ್ರ ಬೆಳೆಸಲಿಲ್ಲ, ಒಂದು ಅಮೂರ್ತ ಹಾಗೂ ವಿಶಾಲ ನೈತಿಕ ಜಗತ್ತನ್ನೂ (moral universe) ಜೊತೆಜೊತೆಗೇ ಕಟ್ಟುತ್ತ ಹೋದರು. ಜೀವನೋಲ್ಲಾಸ ತುಂಬಿಕೊಂಡಿದ್ದ ಈ ಜಗತ್ತು, ನನ್ನನ್ನೂ ಒಳಗೊಂಡಂತೆ ಕರ್ನಾಟಕದ ಅನೇಕ ಯುವಕರಿಗೆ ಸುಪ್ತವಾದ ಹೆಮ್ಮೆಯನ್ನು, ‘ವಿಷ್ಯದ ಬಗ್ಗೆ ಆಶಾಭಾವನೆಯನ್ನು, ಸಮಾಜದ ಕ್ರೌರ್ಯವನ್ನು ಎದುರಿಸುವ ಬೌದ್ಧಿಕ ಅಸ್ತ್ರಗಳನ್ನು ವಾರದಿಂದ ವಾರಕ್ಕೆ ಸರಬರಾಜು ಮಾಡುತ್ತಾ ಹೋಯಿತು. ಲಂಕೇಶರು ಕನ್ನಡದಲ್ಲಿ ಬರೆಯುತ್ತಿದ್ದರೂ ಇಡೀ ವಿಶ್ವ ಅವರ ಆಡಂಬೊಲವಾಗಿರುತ್ತಿತ್ತು. ದೇಸಿಯ ಸೊಕ್ಕು, ಪ್ರಾದೇಶಿಕ ಸಂಕುಚಿತತೆ, ಭಾಷೆಯ ದುರಭಿಮಾನ ಅವರಲ್ಲಿ ಎಂದೂ ತಲೆ ಎತ್ತಲಿಲ್ಲ. ನಾನು ಕರ್ನಾಟಕ ಬಿಟ್ಟು ಓದಲು, ಕೆಲಸ ಮಾಡಲು ಬೇರೆ ಪ್ರದೇಶಗಳಿಗೆ, ವಿದೇಶಕ್ಕೆ ಹೋದಾಗ ಅಲ್ಲಿನ ನನ್ನ ಗೆಳೆಯರೊಂದಿಗಿನ ಸಂಭಾಷಣೆಯಲ್ಲಿ ಯಾವುದೇ ವಿಚಾರದ ಬಗ್ಗೆಯಾಗಲೀ [ಫ್ರೆಂಚ್  ರಾಜಕಾರಣ, ಅಮೆರಿಕದ ದುರ್ನಡತೆ, ಪೂರ್ವ ಯುರೋಪಿನ ಕಮ್ಯುನಿಸಂನ ಅವಾಂತರಗಳು, ವಿಂಬಲ್ಡೆನ್‌ನ ಹಸಿರು ಹಾಸಿನ ಟೆನಿಸ್ ಅಥವಾ ಬ್ರಿಟನ್‌ನ ಬ್ಯಾಂಕಿಂಗ್ ವ್ಯವಸ್ಥೆ, ಇತ್ಯಾದಿ) ಒಂದು ಖಚಿತತೆ, ಆತ್ಮವಿಶ್ವಾಸದ ಅಭಿಪ್ರಾಯ ಮಂಡನೆ ಸಾಧ್ಯವಾಗುತ್ತಿತ್ತು ಎಂದು ತಿಳಿದಾಗಲೆಲ್ಲ ಅದರ ಹಿಂದೆ ಲಂಕೇಶರು ಬಸವನಗುಡಿಯ ಒಂದು ಸಣ್ಣ ಕೋಣೆ–ಯಲ್ಲಿ ಕೂತು ವಿಶ್ವಪರ್ಯಟನೆ ಮಾಡಿದ ಫಲವಿದು ಎಂಬ ಕೃತಜ್ಞತೆಯ ಭಾವ ಮೂಡುತ್ತಿತ್ತು. ಕನ್ನಡ, ಕರ್ನಾಟಕದ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ನನ್ನಂಥ ಅನೇಕರಿಗೆ ಲಂಕೇಶರು ತಮ್ಮ ಬರವಣಿಗೆಯ ಮೂಲಕ ಜಗತ್ತನ್ನು ಎದುರಿಸುವ, ಹಂಗಿಸುವ, ಓಲೈಸುವ, ಪ್ರೀತಿಸುವ, ಸವಾಲೆಸೆಯುವ ಶಕ್ತಿ ಕಟ್ಟಿಕೊಟ್ಟರು. ನನ್ನ ತಲೆಮಾರಿನವರು ಕೆ ವಿ ಪುಟ್ಟಪ್ಪನವರ ಸೃಜನಶೀಲತೆ ಮತ್ತು ಸಮಾನತೆಯ ಧ್ಯಾನ , ಕಾರಂತರ ವೈಚಾರಿಕತೆ ಮತ್ತು ರಾಕ್ಷಸ ಶಕ್ತಿ, ಬೇಂದ್ರೆಯ ಮಾಯಾ ವಿಹಾರ ಮತ್ತು ಹೆಂಗರುಳು [feminity) ಎಲ್ಲವನ್ನೂ ಲಂಕೇಶರಲ್ಲಿ ಕಂಡರು ಎಂದರೆ ತಪ್ಪಾಗಲಾರದು. ಒಬ್ಬ ದೊಡ್ಡ ಬರಹಗಾರ ತನ್ನ ಸಾಂಸ್ಕೃತಿಕ ಪೂರ್ವಜರ ಒಳಿತನ್ನು ಮೈಗೂಡಿಸಿಕೊಂಡಿರುತ್ತಾನೆ ಎಂಬುದಕ್ಕೆ ಲಂಕೇಶ್ ಸಾಕ್ಷಿ ಆಗಿದ್ದರು. ಲಂಕೇಶರ ನಂತರದ ಕರ್ನಾಟಕದಲ್ಲಿ ಒಂದು ರೀತಿಯ ಖಿನ್ನತೆ ಮನೆ ಮಾಡಿದೆ ಎಂಬುದು ನನ್ನ ಅಭಿಪ್ರಾಯ. ಅದರಿಂದ ನಾವು ಹೊರಬರಬೇಕಿದೆ.