ಹಿಂದೆ ಸರಿದ ‘ಅಂಬೇಡ್ಕರ ರಥ’

[ರಾಷ್ಟ್ರೀಯ ಕಾನೂನು ಶಾಲೆಯ ಅಂಬೇಡ್ಕರ್‌ ಅಧ್ಯಯನ ಕೇಂದ್ರ 9/09/2015 ಮಂಗಳವಾರ ಆಯೋಜಿಸಿದ್ದ ‘ಯುವಜನತೆ ಮತ್ತು ಪ್ರಜಾತಂತ್ರಕ್ಕಾಗಿ ಅಂಬೇಡ್ಕರ್’ ಅಭಿಯಾನ ಉದ್ಘಾಟಿಸಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಪ್ರಜಾವಾಣಿ ವರದಿ ]

ಬೆಂಗಳೂರು: ‘ನಾನು ಹೋರಾಟದ ರಥವನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದ್ದೇನೆ.  ಇದನ್ನು ಮುಂದಕ್ಕೆ ಎಳೆಯಲು ಆಗದಿದ್ದರೆ ಬಿಡಿ. ಹಿಂದಕ್ಕೆ ಮಾತ್ರ ಎಳೆಯಬೇಡಿ ಎಂದು ಅಂಬೇಡ್ಕರ್‌ ಕೊನೆಯ ದಿನಗಳಲ್ಲಿ ಹೇಳಿದ್ದರು. ಆದರೆ, ಈಗ ಅಂಬೇಡ್ಕರ್‌ ಅವರನ್ನೇ ರಥ ಮಾಡಿಕೊಂಡು ನಾಲ್ಕೂ ದಿಕ್ಕುಗಳಿಂದ ಹಿಗ್ಗಾಮುಗ್ಗಾ ಎಳೆದಾಡುತ್ತಿದ್ದಾರೆ’ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ವಿಷಾದ ವ್ಯಕ್ತಪಡಿಸಿದರು.

ರಾಷ್ಟ್ರೀಯ ಕಾನೂನು ಶಾಲೆಯ ಅಂಬೇಡ್ಕರ್‌ ಅಧ್ಯಯನ ಕೇಂದ್ರ ಮಂಗಳವಾರ ಆಯೋಜಿಸಿದ್ದ ‘ಯುವಜನತೆ ಮತ್ತು ಪ್ರಜಾತಂತ್ರಕ್ಕಾಗಿ ಅಂಬೇಡ್ಕರ್’ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್‌ ಮೂಕರಿಗೆ ಮಾತಾದವರು. ಪ್ರೀತಿ, ಸಮಾನತೆಗಾಗಿ ತಾಯಿಯಂತೆ ಬದುಕು ಸವೆಸಿದವರು. ಆದರೆ, ಅವರು ಕಾಲವಾದ ನಂತರ ಅವರ ರಥ ಹಿಂದಕ್ಕೆ ಸರಿದಿದೆ ಎಂದರು.

‘ಅಂಬೇಡ್ಕರ್‌ ವೈಚಾರಿಕ ಎಚ್ಚರವಾಗಿ ಮತ್ತು ಪ್ರತಿಮೆಯಾಗಿ ಜನರನ್ನು ಮುಟ್ಟಿದ್ದಾರೆ. ಅನೇಕರಿಗೆ ಅಂಬೇಡ್ಕರ್‌ ಬರೆದ ಪುಸ್ತಕ ಓದಿದ ನಂತರ ಅಸ್ಪೃಶ್ಯತೆ, ತಾರತಮ್ಯದ  ಅರಿವಾಗಿದೆ’ ಎಂದು ವಿವರಿಸಿದರು.

‘ಅಂಬೇಡ್ಕರ್‌ ಪುಸ್ತಕಗಳ ಅಧ್ಯಯನ ನಡೆಸುವುದು ಭಾರತದ ಸಮಾಜದ ಪೊರೆ ಕಳಚಿದಂತೆ. ಹೊಸ ಮನುಷ್ಯರಾದಂತೆ. ಆದರೆ, ಇಲ್ಲಿ ನಾವು ಎಚ್ಚರ ತಪ್ಪಬಾರದು. ಅದಕ್ಕೆ ಕಾಲಜ್ಞಾನ ಬೇಕು. ಇಲ್ಲದಿದ್ದರೆ ಅಂಬೇಡ್ಕರ್‌ ಅವರನ್ನು ದ್ವಂಸ ಮಾಡುವವರಿಗೆ ಸಹಕರಿಸಿದಂತಾಗುತ್ತದೆ. ನಾವು ಬಿಟ್ಟ ಬಾಣ ನಮ್ಮ ವಿರೋಧಿಗಳಿಗೆ ಹೂವಾಗುವ ಅಪಾಯವಿದೆ’ ಎಂದರು.

ಮೈಸೂರಿನ ಮಾನವ ಹಕ್ಕು ಹೋರಾಟಗಾರ ಡಾ. ಲಕ್ಷ್ಮೀನಾರಾಯಣ ಮಾತನಾಡಿ, ‘ದಲಿತರನ್ನು ಮೇಲೆತ್ತುವ ಪ್ರಯತ್ನ ನಡೆಯುತ್ತಿದೆ. ಆದರೆ, ಜಾತಿ ವಿನಾಶಕ್ಕೆ ಪ್ರಯತ್ನಿಸುತ್ತಿಲ್ಲ. ಬಂಡವಾಳಶಾಹಿ ಮತ್ತು ಜಾತಿ ವ್ಯವಸ್ಥೆ ಸಹಬಾಳ್ವೆ ನಡೆಸುತ್ತಿವೆ’ ಎಂದು ವ್ಯಾಖ್ಯಾನಿಸಿದರು.

[ಸಮಾರಂಭದಲ್ಲಿ ಡಾ. ಲಕ್ಷ್ಮೀ ನಾರಾಯಣ, ಸಾಹಿತಿ ದೇವನೂರ ಮಹಾದೇವ, ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ವೆಂಕಟಸ್ವಾಮಿರೆಡ್ಡಿ ಮತ್ತು ರಾಷ್ಟ್ರೀಯ ಕಾನೂನು ಶಾಲೆಯ ನಿರ್ದೇಶಕ ಡಾ.ಎಸ್‌. ಜಾಫೆಟ್‌ ಉಪಸ್ಥಿತರಿದ್ದರು ]