ಯಾರ ಜಪ್ತಿಗೂ ಸಿಗದ ಸಾಕವ್ವ -ಎಂ.ಎಸ್. ಆಶಾದೇವಿ
ಕೊನೆಗೂ ದಮನಿತ ವರ್ಗದವರ ಸ್ಥಿತಿಗತಿಗಳು ಬದಲಾಗುವುದೆಂದರೆ ನಮ್ಮ ಸಂರಚನೆಯ ಮೂಲಾಂಶಗಳು ಬದಲಾಗುವುದೆಂದೇ ಅರ್ಥ. ವಿಶಾಲವಾದ ಅರ್ಥದಲ್ಲಿ ನಮ್ಮ ಮೌಲ್ಯವ್ಯವಸ್ಥೆ ಬದಲಾಗದೇ ಯಾವ ಪಲ್ಲಟಗಳೂ ಬೇರೂರುವುದಿಲ್ಲ. ಇಂಥ ಪಲ್ಲಟಗಳನ್ನು ಶಂಕೆಯಿಲ್ಲದ ನಂಬಿಕೆಯಲ್ಲಿ ಶೋಧಿಸುವ, ಕಟ್ಟಿಕೊಡುವ, ಪ್ರತಿನಿಧಿಸುವ ಪಾತ್ರಗಳು ಪಾತ್ರಗಳ ಪಾತಳಿಗಳನ್ನು ಮೀರಿ ಸಮುದಾಯದ ಮಾದರಿಗಳಾಗಿ ಬೆಳೆದು ಬಿಡುತ್ತವೆ. ಹೋರಾಟದ ದಿಕ್ಸೂಚಿಗಳಾಗಿ, ರೂಪಕಗಳಾಗಿ ಸಮುದಾಯದ ಅವಿಭಾಜ್ಯ ಅಂಗವೇ ಆಗಿಬಿಡುವ ಈ ವಿಸ್ಮಯವು ಕಲೆಯ ಶಕ್ತಿಯೆಷ್ಟೋ ಅಷ್ಟೇ ನಮ್ಮ ಸಾಮಾಜಿಕ ಮತ್ತು ರಾಜಕೀಯ ಅಗತ್ಯದ ತುರ್ತುಗಳ ಅದಮ್ಯ ಶಕ್ತಿಯೂ ಆಗಿರುತ್ತದೆ. ಈ ಬಗೆಯ ಮಾದರಿಗಳು ತಮ್ಮಷ್ಟಕ್ಕೆ ತಾವೇ ಸ್ವತಃ ದಾರಿಯನ್ನು ಹುಡುಕುವ ಮೂಲಕವೇ ಹೋರಾಟಕ್ಕೆ ಮತ್ತು ಬದಲಾವಣೆಗಳಿಗೆ ಅಗತ್ಯವಾದ ತಾತ್ವಿಕತೆಯನ್ನೂ, ಪ್ರಾಯೋಗಿಕತೆಯನ್ನೂ ಸಿದ್ಧಪಡಿಸುತ್ತಿರುತ್ತವೆ. ಎಂದರೆ ಇವು ದಾರಿಯನ್ನು ಕಟ್ಟುತ್ತಲೇ ಇತರರಿಗೆ ದಾರಿಯನ್ನು ತೋರಿಸುತ್ತಿರುತ್ತವೆ. ರಕ್ತ ಮಾಂಸಗಳ, ದೇಹಾತ್ಮಗಳ ವ್ಯಕ್ತಿಗತ ನೆಲೆಯ ಜೊತೆಯಲ್ಲಿಯೇ ಈ ಮಾದರಿಗಳು ಕನ್ನಡಿಯಾಗಿಯೂ ದೀಪವಾಗಿಯೂ ಕೆಲಸ ಮಾಡುತ್ತಿರುತ್ತವೆ. ತಮ್ಮ ಈ ಶಕ್ತಿಯಿಂದಾಗಿ ಈ ಮಾದರಿಗಳು, ಪಾತ್ರಗಳು ಕಾಲದೇಶಗಳನ್ನು ಮೀರಿ ಸಮುದಾಯದ ಪ್ರಜ್ಞೆಯ ವಿನ್ಯಾಸದಲ್ಲಿ ಸೇರಿಕೊಳ್ಳುತ್ತಾರೆ.
ಈ ಬಗೆಯ ಮಾದರಿಗಳ ಬಹುದೊಡ್ಡ ಕೊಡುಗೆಯೆಂದರೆ ಅಥವಾ ಅದನ್ನು ಈ ಬಗೆಯ ಮಾದರಿಗಳ ಶಕ್ತಿ ಸಾಧ್ಯತೆಯೆಂದು ಕರೆಯುವುದಾದರೆ, ಬದಲಾವಣೆಯ ಹೋರಾಟಕ್ಕೆ ಬೇಕಾದ ರಾಜಕೀಯ ಆಯಾಮವನ್ನು ನಿರ್ಧರಿಸುವಲ್ಲಿ, ಅದನ್ನು ರಾಜಕೀಯ ಪ್ರಶ್ನೆಯಾಗಿ ಬೆಳೆಸಿ ಸಮಕಾಲೀನ ಹೋರಾಟದ ಆದ್ಯತೆಗಳಾಗಿಸುವಲ್ಲಿಯೂ ಇವು ಪಾತ್ರ ವಹಿಸುತ್ತವೆ, ಎಂತಲೇ ಇವುಗಳ ಜೊತೆಗೆ ಕೇವಲ ಸಾಹಿತ್ಯದ ಓದುಗರಿಗೆ ಮಾತ್ರವಲ್ಲ ಜನಸಾಮಾನ್ಯರಿಗೂ ನಂಟೊಂದು ಅಂಟಿಬಿಟ್ಟಿರುತ್ತದೆ. ಕಾರಂತರ ಚೋಮನಾಗಲಿ, ಕೊರಡ್ಕಲ್ ಶ್ರೀನಿವಾಸರಾಯರ ಧನಿಯರ ಸತ್ಯನಾರಾಯಣನಾಗಲಿ, ಬೆಸಗರಹಳ್ಳಿ ರಾಮಣ್ಣನವರ ಗಾಂಧಿಯಾಗಲಿ ನಮ್ಮ ಬದುಕು ಮತ್ತು ಚಿಂತನೆಯ ದ್ರವ್ಯವೇ ಆಗಿರುವುದು ಈ ಕಾರಣಕ್ಕಾಗಿಯೇ. ಚೂರು ಉತ್ಪ್ರೇಕ್ಷೆಯಾಗಿ ಕಂಡರೂ ನಮ್ಮೊಳಗಿನ ಸಾಕ್ಷಿಪ್ರಜ್ಞೆಯನ್ನು ಕಾಪಿಡುವ ಶಕ್ತಿಯೂ ಈ ಮಾದರಿಗಳಿಗಿರುತ್ತದೆ.
ಈ ಇಡೀ ಸಂಗತಿಯನ್ನು ಇನ್ನೊಂದು ದೃಷ್ಟಿಯಿಂದ ನೋಡುವುದಾದರೆ, ಲೇಖಕನೊಬ್ಬ ತನ್ನ ತಾತ್ವಿಕ ನಿಲುವುಗಳ ಬಲದಿಂದ ಪಾತ್ರಗಳನ್ನು ಸೃಷ್ಟಿಸುತ್ತಾನೋ, ಪಾತ್ರಗಳ ಬಲವೇ ತತ್ವಗಳ ಬಲವನ್ನು ನಿರ್ಧರಿಸುತ್ತದೋ ಎನ್ನುವ ಪ್ರಶ್ನೆಗೆ ಸರಳವಾಗಿ ಉತ್ತರಿಸುವುದು ಕಷ್ಟ. ಪಾತ್ರದ ಸಹಜತೆಯೇ ಅದಕ್ಕೊಂದು ಅಧಿಕೃತತೆಯನ್ನು ತಂದುಕೊಡುತ್ತದೆಯಷ್ಟೇ.
ದೇವನೂರ ಮಹಾದೇವ ಸಮಕಾಲೀನ ಭಾರತದ ಸಂದರ್ಭದಲ್ಲಿ ವಿಭಿನ್ನ ನೇಯ್ಗೆಯ ಸಮೀಕರಣವೊಂದಕ್ಕೆ ಸತತವಾಗಿ ಪ್ರಯತ್ನಿಸುತ್ತಿರುವವರು. ಗಾಂಧಿಯೋ ಅಂಬೇಡ್ಕರೋ ಎನ್ನುವ ದ್ವಂದ್ವವನ್ನು ಮೀರಿಕೊಂಡು ಅವರಿಬ್ಬರ ಪರಿಪಾಕದಲ್ಲಿ ಈ ನಮ್ಮ ಕಾಲಕ್ಕೆ ಅಗತ್ಯವಾದ ಸೈದ್ಧಾಂತಿಕ ನಿಲುವನ್ನು ರೂಪಿಸಿಕೊಳ್ಳುವ ಅಗತ್ಯವನ್ನೂ ಮಹತ್ವವನ್ನೂ ಬದುಕು ಬರಹಗಳೆರಡರಲೂ ಶೋಧಿಸುತ್ತಿರುವ ಮಹತ್ವದ ಚಿಂತಕ ಮಾತ್ರವಲ್ಲ, ಸಾಮಾಜಿಕ–ರಾಜಕೀಯ ಬದ್ಧತೆಯನ್ನು, ಜವಾಬ್ದಾರಿಯನ್ನು ಉಳಿಸಿಕೊಂಡೂ ಅದು ಒಡ್ಡುವ ಅತುಲ ಆಮಿಷಗಳನ್ನು ಮೀರಿಕೊಂಡ ಅಪರೂಪದ ವ್ಯಕ್ತಿತ್ವ ದೇವನೂರರದು. ‘ಒಡಲಾಳ’ದ ಸಾಕವ್ವ ಮತ್ತು ‘ಕುಸುಮಬಾಲೆ’ಯ ಕುಸುಮಳ ಮೂಲಕ ಕನ್ನಡದ ಸ್ತ್ರೀಸಂಕಥನದ ಘನತೆಯನ್ನು ಹೆಚ್ಚಿಸಿದವರು. ಸಾಕವ್ವ ಹೆಣ್ಣಿನ ಮೂರ್ತ ಮನೋದೈಹಿಕ ಚಹರೆಯನ್ನು ರೂಪಿಸಲು ಪ್ರಯತ್ನಿಸುತ್ತಿರುವವಳಂತೆ, ಕುಸುಮ ಹೆಣ್ಣಿನ ಒಳಲೋಕದ ಚಹರೆಯನ್ನು ರಚಿಸುತ್ತಿರುವವಳಂತೆ ಕಾಣಿಸುತ್ತಾರೆ.
‘ಒಡಲಾಳ’ದ ಸಾಕವ್ವನನ್ನು ಏನೆಂದು ಕರೆಯುವುದು? ಅವಳಿಗೂ ನಮಗೂ ಇರುವ ಸಖ್ಯದ ವ್ಯಾಖ್ಯಾನ ಹೇಗೆ ಮಾಡುವುದು? ಅವಳು ಏನನ್ನು ಉದ್ದೇಶಿಸಿದ್ದಾಳೆ? ಅವಳು ಯಾವುದರ ಪ್ರತಿನಿಧಿ? ಅದು ಯಾಕೆ ‘ಒಡಲಾಳ’ ಓದುತ್ತಿದ್ದರೆ, ಸಾಕವ್ವನ ವ್ಯಕ್ತಿತ್ವದ ಸಮಸ್ತ ವಿವರಗಳೂ ಸಾವಯವಗೊಂಡು ಅವಳು ನಮ್ಮೆದುರು ಸಾಕಾರಗೊಳ್ಳುತ್ತಾಳೆ? ಅದು ಹೇಗೆ ಓದುಗರು ನಿರಾಕರಿಸಲಾಗದ ಖಾಚಿತ್ಯದಲ್ಲಿ, ಬುದ್ಧಿ ಭಾವಗಳ ಅಪೂರ್ವ ಸಾಮರಸ್ಯದಲ್ಲಿ ಅವಳನ್ನು ನಾವು ಒಪ್ಪುತ್ತಾ ಹೋಗುತ್ತೇವೆ? ಸಾಕವ್ವನ ಪಾತ್ರದ ವಿಶೇಷತೆಯೆಂದರೆ, ಅವಳು ‘ಒಡಲಾಳ’ದ ಆಚೆಗೂ ನಮ್ಮ ಒಡಲಾಳದಲ್ಲಿ ಬೆಳೆಯುತ್ತಲೇ ಹೋಗುತ್ತಾಳೆ ಎನ್ನುವುದು. ಅವಳ ಬಗ್ಗೆ ಯೋಚಿಸುತ್ತಾ ಹೋದ ಹಾಗೆಲ್ಲ ಅವಳು ನಮ್ಮ ಮನೋವಿನ್ಯಾಸದಲ್ಲಿ ಮತ್ತೂ ಮತ್ತೂ ದಾಖಲಾಗುತ್ತಲೇ ಹೋಗುತ್ತಾಳೆಯೇ ಹೊರತು ಕಣ್ಮರೆಯಾಗುವುದಿಲ್ಲ ಎನ್ನುವ ಸಂಗತಿ ಏನನ್ನು ಹೇಳುತ್ತದೆ? ಈ ಕೃತಿ ಬಂದು ದಶಕಗಳು ಕಳೆದಿವೆ. ಈ ಕೃತಿ ಮತ್ತು ಸಾಕವ್ವನೊಂದಿಗಿನ ನಮ್ಮ ಕರುಳುಬಳ್ಳಿಯ ಸಂಬಂಧ ಹೆಚ್ಚುತ್ತಲೇ ಹೋಗುತ್ತಿರುವುದಕ್ಕೆ ಕಾರಣಗಳನ್ನು ‘ಒಡಲಾಳ’ ಎನ್ನುವ ಕಲಾಕೃತಿಯಲ್ಲಿ ಹುಡುಕೋಣವೆ? ನಮ್ಮ ಸಾಮಾಜಿಕ ಸಂದರ್ಭಗಳಲ್ಲಿ ಹುಡುಕೋಣವೆ?
ನೇರಾನೇರ ಸಂಬಂಧವಿಲ್ಲದಿದ್ದರೂ ‘ಒಡಲಾಳ’ದ ಸಾಕವ್ವ ತನ್ನ ಧೀಶಕ್ತಿ ಮತ್ತು ಜೀವನ ಬದ್ಧತೆಗಾಗಿ ಗಾರ್ಕಿಯ ‘ತಾಯಿ’ಯನ್ನು ನೆನಪಿಸುತ್ತಾಳೆ. ಒಂದು ಮುಖ್ಯ ವ್ಯತ್ಯಾಸವೆಂದರೆ, ಗಾರ್ಕಿಯ ತಾಯಿ ಮೂರ್ತ, ನೇರ ರಾಜಕೀಯ ಕ್ರಾಂತಿಯೊಂದರ ಪಾಲುದಾರಳಾದರೆ, ಸಾಕವ್ವ ಮೂರ್ತ ಹೋರಾಟದ ಅಮೂರ್ತ ನೆಲೆಗಳನ್ನು ಹುಡುಕುತ್ತಾ ಹೋರಾಟದ ದಾರಿ ಮತ್ತು ಗುರಿಗಳೆರಡನ್ನೂ ಕಟ್ಟಿ ಬೆಳೆಸುವವಳು.
ಬಡತನದ ಅನಿವಾರ್ಯತೆಗಳಲ್ಲಿ, ಅಪರಿಹಾರ್ಯತೆಯಲ್ಲಿ, ದುರ್ದಮ್ಯ ಸೃಷ್ಟಿಯಂತೆ ಕಾಣಿಸುವ ಸಾಕವ್ವ ಯಾಕಾಗಿ ನಮ್ಮ ಬೆನ್ನು ಹತ್ತುತ್ತಾಳೆ?
ದೇವನೂರ ಮಹಾದೇವರ ‘ಒಡಲಾಳ’ ನಮ್ಮ ಕಾಲದ ಬದಲಾಗಬೇಕಾದ ನೈತಿಕ ಮತ್ತು ರಾಜಕೀಯ ನೆಲೆಗಳನ್ನು ಅಪ್ಪಟ ಸಾಮಾಜಿಕ ಮತ್ತು ಮಾನವೀಯ ಎಳೆಗಳಿಂದ ಕಟ್ಟಿದ ಅಪೂರ್ವ ಕೃತಿ. ಸಾಹಿತ್ಯವೂ ಸೇರಿದಂತೆ ಕಲಾಪ್ರಕಾರಗಳು ಆ ಯುಗದ ಅವಶ್ಯಕತೆಯ ಧ್ವನಿ ಎನ್ನುವ ಕಲಾಮೀಮಾಂಸೆಗೆ ಅತ್ಯುತ್ತಮ ಉದಾಹರಣೆಯಂತೆ ಕಾಣಿಸುವ ಈ ಕೃತಿಯಲ್ಲಿ ಸಾಮಾಜಿಕ ಮತ್ತು ರಾಜಕೀಯ ಮೀಮಾಂಸೆಗಳೂ ತಮ್ಮೆಲ್ಲ ಸ್ಪಷ್ಟತೆಯಲ್ಲಿ ಮೈತಳೆಯುತ್ತವೆ.
ಬೇಂದ್ರೆಯವರು ‘ಬಡತನವು ಸಾಹಿತ್ಯದ ವಸ್ತುವೇಕಾಗಿದೆ’ ಎನ್ನುವ ತಮ್ಮ ಮಹತ್ವದ ಲೇಖನದಲ್ಲಿ, ಕೃತಿಯ ವಸ್ತುವಿನ ಆಯ್ಕೆಯನ್ನು ನಿರ್ಧರಿಸುವ ಅಂಶಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸುತ್ತಾರೆ. ಅದೊಂದು ಮನಕರಗಿಸುವ, ಓದುಗರನ್ನು ತನ್ನೆಡೆಗೆ ಅನಾಯಾಸವಾಗಿ ಸೆಳೆಯಬಲ್ಲ ಸಂಗತಿ ಎನ್ನುವ ಜನಜನಿತ ನಿಲುವಿನಾಚೆಗೆ ಇದನ್ನು ಮನುಕುಲದ ಸಾರ್ವಕಾಲಿಕ ಸಾರ್ವತ್ರಿಕ ಸತ್ಯ ಎನ್ನುವ ವಿಶಾಲ ಭಿತ್ತಿಯಲ್ಲಿಟ್ಟು ನೋಡುತ್ತಾ ಬೇಂದ್ರೆ, ಬಡತನದ ವಸ್ತುವಿನ ಆಯ್ಕೆಯು ಕಲಾಕಾರನ ಅನಿವಾರ್ಯ ಆಯ್ಕೆಯಾಗುವಂತೆಯೇ, ಓದುಗರ ಮತ್ತು ಆ ಮೂಲಕ ಸಮುದಾಯದ ಆದ್ಯತೆಯೂ ಆಗಬೇಕು ಎನ್ನುವ ನಿಲುವನ್ನು ಪ್ರತಿಪಾದಿಸುತ್ತಾರೆ. ಸಾಹಿತ್ಯದ ಒಟ್ಟೂ ಪ್ರಕ್ರಿಯೆ, ಎಂದರೆ ಲೇಖಕ/ಲೇಖಕಿ ಮತ್ತು ಓದುಗರನ್ನು ಒಳಗೊಳ್ಳುವ ಪ್ರಕ್ರಿಯೆಯ ಉತ್ತರದಾಯಿತ್ವವನ್ನು ಬೇಂದ್ರೆ ಈ ಲೇಖನದಲ್ಲಿ ಬಲವಾಗಿ ಪ್ರತಿಪಾದಿಸುತ್ತಾರೆ. ನನ್ನ ಮಟ್ಟಿಗೆ ಸಾಹಿತ್ಯದ ಉತ್ತರದಾಯಿತ್ವವನ್ನು ಬಡತನದ ವಸ್ತುವಿನ ಆಯ್ಕೆಯ ಮೂಲಕ ಎತ್ತಿ ಹಿಡಿಯುವ ಏಕೈಕ ಪ್ರಯತ್ನ ಬೇಂದ್ರೆಯವರದ್ದು. ಇದನ್ನೊಂದು ಅಗತ್ಯವಾಗಿ, ಮಹತ್ವದ ಸಾಮಾಜಿಕ ನಡೆಯಾಗಿ ಬೇಂದ್ರೆ ಗುರುತಿಸುತ್ತಾರೆ.
ದೇವನೂರರ ‘ಒಡಲಾಳ’ ಇನ್ನೂ ಮುಂದುವರಿದು, ನಮ್ಮ ಮೌಲ್ಯ ಮತ್ತು ನೈತಿಕ ವ್ಯವಸ್ಥೆಗಳನ್ನೇ ತೀವ್ರವಾದ ಪರೀಕ್ಷೆಗೆ ಒಡ್ಡುತ್ತದೆ. ಸಾಕವ್ವ ಇದರ ಮೂಲಸ್ತ್ರೀಯಂತೆ ಕಾಣಿಸುತ್ತಾಳೆ. ಕಳೆದುಹೋದ ತನ್ನ ಪ್ರೀತಿಯ ಹುಂಜವನ್ನು ಸಾಕವ್ವ ಹುಡುಕಲು ಯತ್ನಿಸುವುದರೊಂದಿಗೆ ಈ ಕೃತಿ ಆರಂಭವಾಗುತ್ತದೆ. ನೆರೆಹೊರೆಯವರ ಮನೆಯ ತಿಪ್ಪೆಯಲ್ಲಿ, ಅವರ ಮನೆಯ ಅಡಿಗೆಯ ಪರಿಮಳದಲ್ಲಿ, ಅಪಾರ ಜಾಣ್ಮೆಯಲ್ಲಿ ಅವಳು ತನ್ನ ಹುಂಜವನ್ನು ಹುಡುಕಲು ನಡೆಸುವ ಪ್ರಯತ್ನವೇ ಪರಿಸ್ಥಿತಿಯ ವಿಪರ್ಯಾಸಗಳನ್ನು ಧುತ್ತೆಂದು ನಮ್ಮ ಮುಂದೆ ನಿಲ್ಲಿಸುತ್ತದೆ. ಕದ್ದಿರುವವರು ಯಾರು? ಯಾಕೆ ಕದ್ದಿದ್ದಾರೆ? ಕದಿಯುವ ಸಂದರ್ಭ ಸೃಷ್ಟಿಯಾಗುವುದು ಅನಿವಾರ್ಯತೆಯಿಂದಲೋ, ದುರಾಸೆಯಿಂದಲೋ ಎನ್ನುವ ಪ್ರಶ್ನೆಗಳ ಜೊತೆಗೇ, ತನಗೇ ಗೊತ್ತಿಲ್ಲದಂತೆ ಸಾಕವ್ವ ಇನ್ನೂ ಹಲವು ಅಮೂರ್ತ ಪ್ರಶ್ನೆಗಳನ್ನು ಧ್ವನಿಸುತ್ತಾ ಹೋಗುತ್ತಾಳೆ. ತನ್ನದೇ ಕೇರಿಯಲ್ಲಿ, ತನ್ನವರು ಎಂದುಕೊಂಡವರೇ ಹುಂಜವನ್ನು ಕದ್ದಿರುವುದು ಅವರೆಲ್ಲರೂ ಬದುಕುತ್ತಿರುವ ಸ್ಥಿತಿಯಲ್ಲಿ ತೀರಾ ಸಹಜ ಎನ್ನುವ ಅರಿವೊಂದು ಸಾಕವ್ವನಿಗೂ ಇದೆ ಮತ್ತು ಅದು ನಮ್ಮ ಅನುಭವಕ್ಕೂ ಬರುವಷ್ಟು ಮಾಂಸಲವಾಗಿಯೂ ಇದೆ.
ಸಾಕವ್ವ ತಾಯಿಯ ವಿಶ್ವಾತ್ಮಕ ಮಾದರಿ ಎಂದು ಗುರುತಿಸಬಹುದು ನಿಜ. ಬದುಕಿನ ಎಂಥ ಸಂದರ್ಭಗಳಲ್ಲಿಯೂ ತನ್ನ ಪೊರೆಯುವ ಶಕ್ತಿಯನ್ನು ಕಾಪಾಡಿಕೊಳ್ಳುವ ತಾಯ್ತನವನ್ನೇ ಇವಳೂ ಎತ್ತಿಹಿಡಿಯುತ್ತಾಳೆ. ಆದರೆ ಅದಷ್ಟೇ ಅಲ್ಲ, ಅದನ್ನೂ ದಾಟಿ ಇವಳು ಮುಂದುವರಿಯುತ್ತಾಳೆ ಎನ್ನುವುದೇ ಸಾಕವ್ವನ ವಿಶಿಷ್ಟತೆ. ತನ್ನ ಕುಟುಂಬವನ್ನು ಇವಳು ಅದರೆಲ್ಲ ಜಗಳಗಳು, ಒಡಕುಗಳ ಜೊತೆಯಲ್ಲಿಯೂ ಛಿದ್ರವಾಗದಂತೆ ಕಾಯುತ್ತಾಳೆ. ಇದು ಅದರ ತುರೀಯಾವಸ್ಥೆಯನ್ನು ಮುಟ್ಟುವ ಸಂದರ್ಭವೊಂದು ಎದುರಾಗುತ್ತದೆ.
ಹಲವು ದಿನಗಳ ಉಪವಾಸ ಸಾಕವ್ವನ ಮಗ ಕಾಳಣ್ಣನನ್ನು ಹೊಲವೊಂದರಿಂದ ಅರ್ಧ ಮೂಟೆ ಕಡಲೆಕಾಯನ್ನು ಕದಿಯುವಂತೆ ಒತ್ತಾಯಿಸುತ್ತದೆ. ತನ್ನ ಹೊಲದಲ್ಲಿ ಕಡಲೇಕಾಯನ್ನು ಕದಿಯುವವರಿಂದ ಪಾರಾಗಲು ಆ ಹೊಲದ ಜಮೀನ್ದಾರ ಪೊಲೀಸರಿಗೆ ದೂರು ಕೊಟ್ಟಿರುತ್ತಾನೆ. ಕಳ್ಳರನ್ನು ಹಿಡಿಯಲೆಂದು ನಿಯಮಿತನಾದ ಪೊಲೀಸ್ ಇವನನ್ನೇ ಹಿಂಬಾಲಿಸಿ, ಇವನು ಮೂಟೆಯನ್ನು ಮನೆಯೊಳಗೆ ಸಾಗಿಸಿದ ಕೂಡಲೇ ಹೊರಗಿನಿಂದ ಚಿಲಕ ಹಾಕಿ ಕಳ್ಳನನ್ನು ಹಿಡಿದೆ ಎಂದು ಸಂಭ್ರಮಿಸುತ್ತಾನೆ. ಮರುದಿನ ಬೆಳಗ್ಗೆ ಇನ್ಸ್ಪೆಕ್ಟರ್ ದಫೇದಾರನೊಂದಿಗೆ ಮನೆ ಒಳಗೆ ಬಂದು ನೋಡಿದರೆ ಜಪ್ತಿ ಮಾಡಲು ಕಡಲೇಕಾಯಿ ಸಿಕ್ಕುವುದೇ ಇಲ್ಲ. ಹಲವು ದಿನಗಳ ಹಸಿವಿನಿಂದ ಕಂಗೆಟ್ಟಿದ್ದ ಮನೆ ಮಂದಿ ಅಷ್ಟನ್ನೂ ತಿಂದು ಮುಗಿಸಿರುತ್ತಾರೆ.
ಈ ಇಡೀ ಸನ್ನಿವೇಶವನ್ನು ಸಾಕವ್ವ ನಿಭಾಯಿಸುವ ರೀತಿಯೇ ಅದಕ್ಕೊಂದು ಸಮಾಜೋನೈತಿಕ ಆವರಣವನ್ನು ಸೃಷ್ಟಿಸುತ್ತದೆ. ಯಾವುದನ್ನು ನೈತಿಕತೆ ಎಂದು ತಿಳಿಯಲಾಗಿದೆಯೋ, ಯಾವ ಕಳ್ಳತನ ತಪ್ಪು ಎನ್ನುವುದನ್ನು ಎಂಥ ಬಡವರಿಗೂ ಕಂಠಪಾಠ ಮಾಡಿಸಲಾಗಿದೆಯೋ, ಕಳ್ಳತನಕ್ಕಿಂತ ಸಾವು ವಾಸಿ, ಕದ್ದು ಸಿಕ್ಕಿಬೀಳುವುದಕ್ಕಿಂತ ಸ್ವಾಭಿಮಾನದಲ್ಲಿ ಹಸಿದು ಸಾಯುವುದೇ ಶ್ರೇಷ್ಠ ಎನ್ನುವುದನ್ನು ಬದುಕಿನ ದಾರಿಯಾಗಿ ತೋರಿಸಲಾಗಿದೆಯೋ ಆ ಎಲ್ಲ ನಿಲುವುಗಳೂ ಇಲ್ಲಿ ಸಾಕವ್ವನ ನೇತೃತ್ವದಲ್ಲಿ ಇತರ ಪಾತ್ರಗಳು ಓದುಗರೆದುರಿಗೆ ನಿಂತು ಪ್ರಶ್ನಿಸುತ್ತವೆ. ಅವು ಪ್ರಶ್ನಿಸುತ್ತಿರುವುದು ಮೌಲ್ಯಗಳನ್ನಲ್ಲ, ಆ ಮೌಲ್ಯಗಳನ್ನು ಪಾಲಿಸಲಾಗದ ವಾಸ್ತವಗಳನ್ನು. ತಮ್ಮೆದುರಿಗಿರುವ ವಾಸ್ತವವನ್ನು ಮತ್ತೆ ಹೇಗೂ ಎದುರಿಸಲಾಗದ ತಮ್ಮ ಸ್ಥಿತಿಯನ್ನು ಅಸಹಾಯಕತೆ ಮತ್ತು ನೈತಿಕತೆ ಎರಡೂ ಬೆರೆತ ದೃಷ್ಟಿಕೋನದಲ್ಲಿ ಪ್ರಕಟಪಡಿಸುತ್ತವೆ. ಸಾಕವ್ವ ತನ್ನ ತೀವ್ರತೆಯಲ್ಲೇ ಇದು ನಮ್ಮ ಹಕ್ಕೂ ಹೌದಲ್ಲವೇ ಎನ್ನುವುದನ್ನು ಅನುಕ್ತವಾಗಿಯೇ ಕೇಳುತ್ತಿರುವಂತೆಯೂ ಭಾಸವಾಗುತ್ತದೆ.
ಎಂದರೆ, ತನಗೆ ಎದುರಾಗಿರುವ ಬದುಕಿನ ಕ್ರಮವನ್ನು ಲೋಕ ಒಪ್ಪದ ರೀತಿಯಲ್ಲಿ ನಿಭಾಯಿಸುತ್ತಿರುವ ತನ್ನ ಮತ್ತು ತನ್ನ ಕುಟುಂಬದ ನಡೆಗಳು ಯಾಕೆ ಪ್ರಶ್ನಾರ್ಹವಾಗಬೇಕು ಎನ್ನುವ ಪ್ರಶ್ನೆಯನ್ನು ಅದೆಂಥ ಧೀರತೆಯಲ್ಲಿ ಇವಳು ಎಸೆಯುತ್ತಾಳೆಂದರೆ, ಆ ಧೀರತೆಯೇ ನಮ್ಮ ನೈತಿಕತೆಯ ಪರಿಕಲ್ಪನೆಗಳನ್ನು ಪಲ್ಲಟಗೊಳಿಸುವಷ್ಟು. ಸಾಕವ್ವ ಮತ್ತು ಅವಳ ಕುಟುಂಬದ ನಡೆಯೇ ನೈತಿಕವಾಗಿ, ಪೊಲೀಸ್ ಮತ್ತು ಇತರರ ದೃಷ್ಟಿಕೋನಗಳೇ ಅನೈತಿಕವಾಗಿ ಕಾಣುವಷ್ಟು ಇದು ಶಕ್ತವಾಗಿದೆ. ಸಾಕ್ಷಿಗಳು ಸಿಗದೇ ಪೊಲೀಸರು ನಿರುತ್ತರರಾಗಿ ಬಿಡುವುದು ವ್ಯವಸ್ಥೆಯ ನಿರುತ್ತರ ಅವಸ್ಥೆ ಮಾತ್ರವಲ್ಲ, ಅದನ್ನೊಂದು ಮೌಲ್ಯವ್ಯವಸ್ಥೆಯೆಂದು ಗುರುತಿಸುವುದೇ, ಒಪ್ಪುವುದೇ ವಿಪರ್ಯಾಸ ಅಲ್ಲವೆ ಎನ್ನುವ ವಿಲಕ್ಷಣ ದ್ವಂದ್ವಕ್ಕೆ ನಮ್ಮನ್ನು ದೂಡುತ್ತದೆ.
ಮೌಲ್ಯವ್ಯವಸ್ಥೆ ಅಪೇಕ್ಷಿಸುವ ‘ಪಾಪ ಪ್ರಜ್ಞೆ’ಯಿಂದ ಸಾಕವ್ವ ಪಾರಾಗುವುದೇ ಅವಳಲ್ಲಿ ಸ್ಪಷ್ಟವಾಗಿರುವ ಅಥವಾ ಜಾಗೃತವಾಗಿರುವ ನೈತಿಕ ಪ್ರಜ್ಞೆಯ ಸೂಚನೆ. ಈ ಸೂಚನೆಯ ಮಹತ್ವವಿರುವುದು ಅವಳ ಬದಲಾದ ದೃಷ್ಟಿಕೋನದಲ್ಲಿ ಮಾತ್ರವಲ್ಲ, ಅದು ವ್ಯವಸ್ಥೆಯ ನಿರ್ಣಾಯಕ ಶಕ್ತಿಗಳಿಗೆ ಕೊಡುತ್ತಿರುವ ಸೂಚನೆಯಲ್ಲಿ. ಹಸಿವನ್ನು ಎದುರಿಸುವುದು, ವ್ಯಕ್ತಿಗತವಾದುದೆಷ್ಟೋ , ಅಷ್ಟೇ ಸಾಮುದಾಯಿಕವಾದುದೂ ಅಲ್ಲವೇ ಎನ್ನುವ ‘ಅರಿವು’ ಸಾಕವ್ವನಿಗೆ ಕೊಡುವ ನೈತಿಕ ಬಲ ಅಪಾರವಾದುದು. ಎಂಥ ನರರನ್ನೂ ಕೊಂದು ಕೂಗಿಬಿಡುವಷ್ಟು ಶಕ್ತವಾದ ಅಧಿಕಾರ ಕೇಂದ್ರಗಳಾದ ಜಮೀನ್ದಾರಿಕೆ ಮತ್ತು ಪೊಲೀಸ್ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಬೇಕಾದ ಆತ್ಮಬಲ ಮತ್ತು ನೈತಿಕ ಬಲಗಳನ್ನು ಸಾಕವ್ವ ತನ್ನೊಳಗಿನಿಂದಲೇ ಉದ್ದೀಪಿಸಿಕೊಳ್ಳುತ್ತಾಳೆ.
‘ದುಪ್ಟಿ ಕಮೀಷನರ್’ ಆಗಬಹುದಾದ ಶಿವನಿಗೂ, ಸುಂದರವಾದ ನವಿಲುಗಳನ್ನು ಬರೆಯುವ ಪುಟ್ಟಗೌರಿಗೂ, ನಾಟಕದ ಉಮೇದಿನಲ್ಲಿ ಬದುಕಿನ ವಾಸ್ತವಗಳನ್ನು ಗೆಲ್ಲಲು ಬಯಸುವ ಗುರುಸಿದ್ಧನಿಗೂ, ಬದುಕಿನ ಹೋರಾಟದಲ್ಲಿ ಸೋತು ಸುಣ್ಣವಾದವನಂತೆ ಕಾಣಿಸುವ ತನ್ನ ದೊಡ್ಡ ಮಗನಿಗೂ, ಕ್ಷುದ್ರ ಜಗಳಗಳಲ್ಲಿ ಮುಳುಗಿಹೋಗಿರುವ ತನ್ನ ಸೊಸೆಯರಿಗೂ ಸಾಕವ್ವ ದಾರಿ ತೋರಿಸುವುದು ಅವರ ವರ್ತಮಾನವನ್ನು ಹೀಗೆ ಪೊರೆಯುವ ಮೂಲಕ ಮಾತ್ರವಲ್ಲ, ಅವರ ಭವಿಷ್ಯದ ದಾರಿಯನ್ನು ಅವರಿಗೆ ತೋರಿಸುವ ಮೂಲಕವೂ ಎನ್ನುವುದು ಸಾಕವ್ವನ ವ್ಯಕ್ತಿತ್ವದ ಒಂದು ಭಾಗ ಮಾತ್ರ. ಇನ್ನೊಂದು ಬಹು ಮುಖ್ಯವಾದ ಭಾಗ, ಸಮುದಾಯದ ಸಂರಚನೆಯ ದಿಕ್ಕುದೆಸೆಗಳು ಬದಲಾಗಬೇಕಾದ ಸೂಚನೆಯನ್ನು ಅದರ ಮನೋಮಯ ಮತ್ತು ಬೌದ್ಧಿಕ ನೆಲೆಗಳೆರಡರಲ್ಲೂ ಅತ್ಯಂತ ಸಹಜವಾಗಿ ನೀಡುತ್ತಾ, ನಮ್ಮನ್ನು ಇಡಿಯಾಗಿ ಆವರಿಸುವ ಅವಳ ವ್ಯಕ್ತಿತ್ವದ ಶಕ್ತಿಯಲ್ಲಿ. ತನ್ನ ಆಸ್ತಿ ಸ್ವಯಾರ್ಜಿತ, ಅದನ್ನು ಯಾರಿಗೆ ಬೇಕಾದರೂ ತಾನು ನೀಡಬಹುದು ಎನ್ನುವ ಕಾನೂನಿನ ತಿಳಿವಳಿಕೆಯ ಜೊತೆಗೇ ಸದಾ ಜಿನುಗುವ ಅಂತಃಕರಣವನ್ನು, ಚರುಮಕ್ಕೂ ಮೂಳೆಗೂ ಸಂಬಂಧ ತಪ್ಪಿ ಅವು ಸ್ವತಂತ್ರವಾಗಿ ಅಲ್ಲಾಡುತ್ತಿದ್ದಾಗಲೂ ತನ್ನ ಛಲ ಜವಾಬ್ದಾರಿಗಳನ್ನು ಬಿಡದ ಬದ್ಧತೆಯನ್ನು ತನ್ನ ಅಸ್ತಿತ್ವದ ಪ್ರತಿ ಗಳಿಗೆಯೂ ಮೆರೆಸುವ ಸಾಕವ್ವ, ‘ಒಡಲಾಳ’ ಕೃತಿಯ ಮೂಲ ರೂಪಕವಾದ ಯಾರ ಜಪ್ತಿಗೂ ಸಿಗದ ನವಿಲಿನಂತೆಯೇ ಕಾಣುತ್ತಾಳೆ.