ಮೆಟ್ಟಿಲುಗಳಿಲ್ಲದ ಮಹಡಿ ಹತ್ತಿದ ಮಹಾದೇವ-ಎನ್.ವೆಂಕಟೇಶ್

[‘ಗಾಂಧಿ’ ಚಿತ್ರದ ಬಗ್ಗೆ ದೇವನೂರ ಮಹಾದೇವ ಅವರು ಬರೆದ ಲೇಖನಕ್ಕೆ ಆ ಸಂದರ್ಭದಲ್ಲಿ ಅನೇಕರು ಪತ್ರ ರೂಪದಲ್ಲಿ ಪ್ರತಿಕ್ರಿಯಿಸಿದ್ದು ದಲಿತ ಸಂಘರ್ಷ ಸಮಿತಿಯ ಮುಖಂಡರಲ್ಲೊಬ್ಬರಾದ ಎನ್.ವೆಂಕಟೇಶ್ ಅವರು ಬರೆದ ಈ ಪ್ರತಿಕ್ರಿಯೆಯು “ಪಂಚಮ”ಪತ್ರಿಕೆಯ ದಲಿತ-ರೈತ ಚಳವಳಿ ವಿಶೇಷಾಂಕದಲ್ಲಿ ಪ್ರಕಟವಾಗಿದ್ದು, ನಮ್ಮ ಮರು ಓದಿಗಾಗಿ ಇಲ್ಲಿದೆ. ಇದನ್ನು ಹುಡುಕಿ ನಮ್ಮ ಬನವಾಸಿಗೆ ನೀಡಿದ ಯುವ ಚಿಂತಕರೂ, ಉಪನ್ಯಾಸಕರೂ ಆದ ವಿ.ಎಲ್.ನರಸಿಂಹಮೂರ್ತಿಯವರಿಗೆ ಧನ್ಯವಾದಗಳು]

 

[• ‘ಗಾಂಧಿ’ ಚಿತ್ರದ ಬಗ್ಗೆ ದೇವನೂರ ಮಹಾದೇವ, ಬರೆದ ಲೇಖನ ಈಗಾಗಲೇ ಪ್ರಕಟವಾಗಿ ದಲಿತ ಸಂಘರ್ಷ ಸಮಿತಿಯ ಗೆಳೆಯರ ಸಿಟ್ಟಿಗೆ ಮತ್ತು ಚಿಂತನೆಗೆ ಕಾರಣವಾಗಿದೆ. ಈ ಸಂಬಂಧವಾಗಿ ಬರುತ್ತಿರುವ ನೂರಾರು ಪ್ರತಿಕ್ರಿಯೆಗಳಲ್ಲಿ ಆಯ್ದು ಮುಂದಿನ “ಪಂಚಮ” ಸಂಚಿಕೆಗಳಲ್ಲಿ ಪ್ರಕಟಿಸಬೇಕೆಂದಿದ್ದೇವೆ. ಇಲ್ಲಿ ಪ್ರಕಟಿಸಿರುವ ಪ್ರತಿಕ್ರಿಯೆ ದಲಿತ ಸಂಘರ್ಷ ಸಮಿತಿಯ ಅಡಿಕಲ್ಲಿನಂತಿರುವ ವೆಂಕಟೇಶ್, ಅಪರೂಪಕ್ಕೆ ಬರೆದದ್ದು.- ಸಂಪಾದಕ]

 

ದೇವನೂರ ಮಹಾದೇವ ಅವರು ಬರೆದಿರುವ ಲೇಖನ, ದಲಿತ ಸಂಘಟನೆಯಲ್ಲಿ ಬಹಳ ಗೊಂದಲ ತಂದಿಟ್ಟು, ಎಂದೂ ಬರೆಯದ ನನ್ನನ್ನು ಬರೆಯುವಂತೆ ಮಾಡಿದೆ. ಮಹಾದೇವ ಪ್ರಧಾನವಾಗಿ ಗಾಂಧಿ ಚಿತ್ರ ಮತ್ತು ದಲಿತ ಸಂಘಟನೆಯ ಹತ್ತು ಹಲವಾರು ವಿಷಯಗಳನ್ನು ಬರೆದಿರುತ್ತಾರೆ. ಇವರು ಸಂಘಟನೆಗೆ ಸ್ಪಷ್ಟವಾದ ಸೈದ್ಧಾಂತಿಕ ನಿಲುವು ನೀಡಬೇಕಾದವರೇ ಬಹಿರಂಗ ಚರ್ಚೆಯನ್ನು ಗಮನದಲ್ಲಿಟ್ಟುಕೊಂಡು ಬರೆದಿರುವರೆಂದೆನಿಸುತ್ತದೆ. “ದ್ಯಾವನೂರು” ಪುಸ್ತಕ ಮಹಾದೇವ ಬರೆದಾಗ ಇದ್ದ ಸಿಟ್ಟು, ರೋಷ ನಿಖರವಾದ ತನ್ನ ಅನಿಸಿಕೆಯನ್ನು ನೇರವಾಗಿ ಹೇಳಿರುತ್ತಾರೆ. ತದನಂತರ ಬರೆದ “ಒಡಲಾಳ”ದಲ್ಲಿ ತನ್ನೆಲ್ಲಾ ಗೊಂದಲನಗಳನ್ನು ತಂದಿಟ್ಟಿರುತ್ತಾರೆ. ಈಗ ಬರೆದಿರುವ ಈ ಲೇಖನದಲ್ಲಿ ಮಹಾದೇವ ದುರ್ಬಲ ಮನಸ್ಸಿನವರಾಗಿದ್ದಾರೆ. ಸಮಾಜದ ವೈಜ್ಞಾನಿಕ ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳಲು ವಿಫಲರಾಗಿ ಪ್ಲಾನೇ ಇಲ್ಲದವರಂತೆ ಕಾಣುತ್ತಾರೆ.

ದಲಿತ ಸಂಘಟನೆಯಲ್ಲಿ ಮಹಾದೇವ ವ್ಯಕ್ತಿಗತವಾಗಿದ್ದು, ಸಂಘಟನೆಗೆ ಬದ್ಧವಾಗಿಲ್ಲ ಎಂದು ಲೇಖನದ ಪ್ರಾರಂಭದಲ್ಲೇ ವ್ಯಕ್ತವಾಗುತ್ತದೆ, ಗೋವಿಂದಯ್ಯನ ಪ್ರಸ್ತಾಪ ಇಲ್ಲಿ ಅನಿವಾರ್ಯವಾಗಿರಲಿಲ್ಲ. ಸಂಘಟನೆಯ ಕಾರ್ಯಕರ್ತರಾದ ಸ್ವಾಮಿ ಮತ್ತು ಬೆಟ್ಟಯ್ಯನವರ ಗುಣ ವಿಶ್ಲೇಷಣೆಯನ್ನು ಇವರು ಬೇಕೆಂದು ಪ್ರಸ್ತಾಪ ಮಾಡಿದಂತಿದೆ. ಈ ಲೇಖನವು ಸಂಘಟನೆಗೆ ನುಂಗಲಾರದ ತುತ್ತೇನಲ್ಲಾ. ಆದರೆ ದಲಿತ ಸಂಘಟನೆಯು ಇಂತಹದನ್ನೆಲ್ಲಾ ಅರಗಿಸಿಕೊಂಡು ತನ್ನ ರೂಪ ದಿಕ್ಕನ್ನು ಸ್ಪಷ್ಟ ಮಾಡಿಕೊಳ್ಳಬೇಕಾಗಿದೆ.

ಇನ್ನು ಗಾಂಧಿ ಚಿತ್ರ ನೋಡಿರುವ ಮಹಾದೇವ. ಅಂಬೇಡ್ಕರ್‍ರವರನ್ನು ಗಮನದಲ್ಲಿಟ್ಟುಕೊಂಡು ಹೇಳಿರುವ ಅಂಶಗಳು ಸ್ಪಷ್ಟವಾಗಿವೆ. ಸಾಮಾಜಿಕವಾಗಿ ಕೆಳಸ್ತರದತ್ತ ಗಾಂಧಿ ಚಲಿಸುವಂತಾಗಲು ಅಂಬೇಡ್ಕರರ ಅದಮ್ಯ ಚೇತನ ಕಾರಣ ಎಂಬುದರಲ್ಲಿ ಏನೂ ಅನಮಾನವಿಲ್ಲ ಎಂದಿರುವುದು ಚಾರಿತ್ರಿಕವಾದ ಸತ್ಯವನ್ನು ಗಮನದಲ್ಲಿಟ್ಟುಕೊಂಡು ಹೇಳಿದಂತಿದೆ. ಮುಂದುವರಿದು ಗಾಂಧಿಯದು ಭೂಮಿಯಂತೆ ಒಂದು ಕ್ಷಣವೂ ನಿಲ್ಲದೇ ಚಲಿಸುವ ಚೇತನ ಎನ್ನುವುದು ನಂಬಲು ಅಸಾಧ್ಯವಾಗಿದೆ. ನೇರವಾಗಿ ಗಾಂಧಿ ಸಿದ್ಧಾಂತ ಹಲವಾರು ಪ್ರಶ್ನೆಗಳಿಗೆ ಎಡೆಮಾಡಿಕೊಡುತ್ತದೆ. ಮೊದಲನೆಯದಾಗಿ ಪ್ರಪಂಚದಾದ್ಯಂತ ಗಾಂಧಿ ಸಿದ್ಧಾಂತ ತುಳಿತಕ್ಕೊಳಪಟ್ಟವರ ದನಿ ಆಗುತ್ತಿಲ್ಲ ಯಾಕೆ? ದಲಿತರು ಕೂಡ ಗಾಂಧಿಯನ್ನು ವೈಜ್ಞಾನಿಕವಾಗಿ ನಿರಾಕರಿಸುತ್ತಾರಲ್ಲವೆ? ದಲಿತರ ದೃಷ್ಟಿಯಿಂದ ಗಾಂಧಿಯದು “ಚಲಿಸುವ ಚೇತನವಲ್ಲ. ಇದು ನಿಂತ ನೀರು.” ಇದರಲ್ಲಿ, ವಿಷಕ್ರಿಮಿಗಳು ತುಂಬಾ ಇದ್ದು ಕುಡಿಯಲು ಯೋಗ್ಯವಾಗಿಲ್ಲ. ಎಷ್ಟು ಸಾಧ್ಯವೋ ಅಷ್ಟು ಈ ನೀರನ್ನು ಕುದಿಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ.

ದಲಿತರ ದನಿಯಾದ ಅಂಬೇಡ್ಕರ್‍ರವರು ದಲಿತರಲ್ಲಿ ಸ್ವಾಭಿಮಾನ ತಂದರು, ದಲಿತರು ಪ್ರಜ್ಞಾವಂತರಾಗುತ್ತಿರುವುದು ಸವರ್ಣೀಯರಿಗೆ ನುಂಗಲಾರದ ತುತ್ತಾಗುತ್ತಿದೆ, ಅಂಬೇಡ್ಕರ್‍ರವರ ಸತತ ಪ್ರಯತ್ನದಿಂದ ಹಿಂದೂಗಳ ಮನಸ್ಸು ಬದಲಾವಣೆ ಮಾಡಲಾಗಲಿಲ್ಲ. ಆದರೆ ದಲಿತ ಸಂಘ ಒಂದು ಕ್ರಾಂತಿಕಾರಕ ಸಂಘಟನೆಯಾಗಿ ರೂಪಗೊಳ್ಳುವುದು ಅನಿವಾರ್ಯವಾಗಿದೆ, ಇಲ್ಲಿ ಜಾತಿ ನಾಶವಾಗುತ್ತದೆ, ಯಾಕೆಂದರೆ ಸವರ್ಣೀಯರನ್ನೊಳಗೊಂಡು ತುಳಿತಕ್ಕೆ ಒಳಪಟ್ಟ ಎಲ್ಲಾ ಜನರೂ ಹೋರಾಟದ ಮಾಧ್ಯಮದಿಂದ ಬಂದಿರುತ್ತಾರೆ.

ಮಹಾದೇವ ಗುರುತಿಸುವ ಗಾಂಧಿಯವರ ಎರಡೂ ಕೊರತೆಯಿಂದಾಗಿ, ನಮ್ಮ ಯುಗದ ಎತ್ತರದ ಮನುಷ್ಯ ಗಾಂಧಿಯು ಎತ್ತರದ ಆಕಾಶ ಮುಟ್ಟಲು ಎರಡು ಗೇಣು ಕಮ್ಮಿಯಾಗುತ್ತದೆ, ಎಂದಿರುವುದು ಸರಿಯಲ್ಲ. ಗಾಂಧಿಯವರಿಗೆ ಸಾವಿರಾರು ಕೊರತೆಗಳು ಇದ್ದವು ಎಂಬುದನ್ನು ಅರ್ಥಮಾಡಿಕೊಳ್ಳಲು ಅಂಬೇಡ್ಕರ್ ದೃಷ್ಟಿಕೋನದಿಂದ ನೋಡಲು ಮಹಾದೇವರವರಿಗೆ ಸಾಧ್ಯವಿದೆ. ತಾವೇ ಹೇಳುವಂತೆ ಅಂಬೇಡ್ಕರ್‍ರವರ ಕಠೋರತೆಯನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದಿರುವುದು ಸ್ಪಷ್ಟತೆ ಕೊಡುತ್ತದೆ. ಬೇಕೆಂದು ಗಾಂಧಿಯವರನ್ನು ಆಕಾಶದೆತ್ತರಕ್ಕೆ ತೆಗೆದುಕೊಂಡು ಹೋಗಿರುವುದು ಮೆಟ್ಟಿಲುಗಳಿಲ್ಲದ ಮಹಡಿ ಹತ್ತಿದಂತಿದೆ.

ಮಹಾದೇವ, ‘ವಸ್ತುಸ್ಥಿತಿಯನ್ನು ಗಮನಕ್ಕೆ ತಂದು ಅಹಿಂಸೆಯನ್ನು ಹೇಳುತ್ತಿದ್ದೆ. ಗೆಳೆಯರು ಕೇಳುತ್ತಿರಲಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಂಬೇಡ್ಕರ್‍ರವರು ಕೂಡ ಬೌದ್ಧರಾದುದು ಅಹಿಂಸೆಯ ದೃಷ್ಟಿಯಿಂದ ಎಂದು ಹೇಳುತ್ತಾರೆ. ಆದರೆ ಸಾಮಾಜಿಕವಾಗಿ ಅಂಬೇಡ್ಕರ್‍ರವರು ತುಂಬಾ ವೈಜ್ಞಾನಿಕವಾಗಿ ಸ್ಪಂದಿಸಿರುತ್ತಾರೆ. ಇಲ್ಲಿ ಅಂಬೇಡ್ಕರ್ ಮತ್ತು ಗಾಂಧಿ ನಂಬಿದ್ದ ಅಹಿಂಸಾ ಸಿದ್ಧಾಂತಕ್ಕೆ ಅಜಗಜಾಂತರ ಅಂತರವಿದೆ: ಉದಾ: 1930ರಲ್ಲಿ ಗಾಯಕ್‍ವಾಡ್ ನಾಯಕತ್ವದಲ್ಲಿ, ಕಲಾರಂ ದೇವಸ್ಥಾನದ ಪ್ರವೇಶಕ್ಕಾಗಿ ಅಹಿಂಸಾತ್ಮಕವಾದ ಚಳವಳಿ ಪ್ರಾರಂಭವಾಗುತ್ತದೆ, ಇದಕ್ಕೆ ಅಂಬೇಡ್ಕರ್‍ರವರ ಪೂರ್ಣ ಬೆಂಬಲವಿರುತ್ತದೆ. ಆಗ ಈ ಪ್ರಾಂತ್ಯದಲ್ಲಿಯೇ ಗಾಂಧಿಯವರು ದಂಡಿ ಪ್ರಯಾಣ ಮಾಡುತ್ತಿದ್ದರು. ಹದಿನೈದು ಸಾವಿರಕ್ಕೂ ಮೇಲ್ಪಟ್ಟು ದಲಿತರು ಈ ಚಳವಳಿಯಲ್ಲಿ ಭಾಗವಹಿಸಿ ತೀವ್ರಸ್ಥಾಯಿ ಮುಟ್ಟಿಸಿದ್ದರು, ಇದರಿಂದ ಕುಪಿತಗೊಂಡ ಸವರ್ಣಿಯರು ಒಂದು ವರ್ಷದ ಕಾಲ ದೇವಸ್ಥಾನ ತೆಗೆಯಲಿಲ್ಲ, ಸಂಘಟಿತರಾಗಿ, ದಬ್ಬಾಳಿಕೆಯನ್ನು ಮುಂದುವರೆಸಿದರು. ಇದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಸತ್ಯಾಗ್ರಹಿಗಳನ್ನು ಎರಡು ವರ್ಷಗಳ ಕಾಲ ಬಂಧನದಲ್ಲಿ ಇರಿಸಿದರು. ಆಗ ಇದರಿಂದ ಕುಪಿತಗೊಂಡ ಅಂಬೇಡ್ಕರ್‍ರವರು ದೇವಸ್ಥಾನ ಚಳವಳಿಯನ್ನು ಕೈಬಿಟ್ಟರು, ತದನಂತರ ಗಾಂಧೀಜಿ ದಲಿತರ ದೇವಸ್ಥಾನ ಪ್ರವೇಶಕ್ಕೆ ತುಂಬಾ ಪ್ರಯತ್ನಪಟ್ಟರು, ಗಾಂಧಿಯವರು ತರಲು ಪ್ರಯತ್ನಿಸಿದ ದೇವಸ್ಥಾನದ ಕಾನೂನು ಮಸೂದೆಯನ್ನು ಅಬೇಡ್ಕರ್‍ರವರು ವಿರೋಧಿಸಿದರು. ಇದರಿಂದ ಅಂಬೇಡ್ಕರ್‍ರವರು ತೆಗೆದುಕೊಳ್ಳುತ್ತಿದ್ದ ತೀರ್ಮಾನಗಳು ಬಹಳ ವೈಜ್ಞಾನಿಕವಾಗಿರುತ್ತಿದ್ದವು. ಆದ್ದರಿಂದ ಸಾಮಾಜಿಕವಾಗಿ ಅಂಬೇಡ್ಕರ್‍ರವರು ಗಾಂಧಿಗಿಂತ ತೀವ್ರವಾದಿಯಾಗಿದ್ದರೆಂದು ತಿಳಿಯಬೇಕಾಗುತ್ತದೆ.

ಈ ದೇಶದ ಹತ್ತಾರು ಸಂಘಟನೆಗಳು ಎದುರಿಸಿದ ಸಮಸ್ಯೆಯನ್ನೇ ಈಗ ದಲಿತ ಸಂಘರ್ಷ ಸಮಿತಿ ಎದುರಿಸುತ್ತಿದೆ, ಪ್ರತಿ ಸಂಘಟನೆ ಅಥವಾ ರಾಜಕೀಯ ವಿಷಯಗಳಲ್ಲಿ ತೀವ್ರಗಾಮಿಗಳು ಮಂದಗಾಮಿಗಳು ಇದ್ದೇ ಇರುತ್ತಾರೆ, ಇವೆರಡರ ಮಧ್ಯೆ ಸಾಮಾಜಿಕ ಸಂಘರ್ಷ ಇರುತ್ತದೆ. ಬ್ರಿಟಿಷರಿಂದ ಗಾಂಧಿಜಿ ಸ್ವತಂತ್ರ ಪಡೆದದ್ದು ಒಂದು ರೀತಿ ಸುಲಭದ್ದು ಎಂದು ವ್ಯಕ್ತಪಡಿಸಿದ ಮಹಾದೇವರವರು ಚಳವಳಿಯ ಬೆಳವಣಿಗೆಯನ್ನು ಅರ್ಥ ಮಾಡಿಕೊಂಡಿಲ್ಲ.

1939ರಲ್ಲಿ ತ್ರಿಪುರಾದಲ್ಲಿ ನಡೆದ ಕಾಂಗ್ರೆಸ್ ಮಹಾಸಭೆಯಲ್ಲಿ ಮುಂದಾಳುಗಳ ಪರವಾಗಿ ಪಟ್ಟಾಭಿಯನ್ನು ಗಾಂಧೀಜಿ ಪ್ರತಿಪಾದಿಸುತ್ತಾರೆ. ಆಗ ಸುಭಾಸ್ ಚಂದ್ರಬೋಸ್ ತೀವ್ರಗಾಮಿಯಾಗಿದ್ದು ಪೈಪೋಟಿಗೆ ನಿಲ್ಲುತ್ತಾರೆ. ಇದರಿಂದ ಸುಭಾಸ್ ಚಂದ್ರಬೋಸ್‍ಗೆ 1575 ಓಟುಗಳು, ಪಟ್ಟಾಭಿಗೆ 1375 ಓಟುಗಳು ಬಂದು ಬೋಸ್ ಗೆಲ್ಲುತ್ತಾರೆ. ಇದರಿಂದ ಗಾಂಧೀಜಿಗೆ ತಾನು ನಂಬಿದ್ದ ಅಹಿಂಸಾ ಸಿದ್ಧಾಂತ ಕಾರ್ಯಕ್ರಮದಲ್ಲಿ ಬಹುಸಂಖ್ಯಾತರಿಗೆ ನಂಬಿಕೆ ಇಲ್ಲ ಎಂದು ಕುಪಿತಗೊಂಡು ಸಹಚರರೊಂದಿಗೆ ರಾಜೀನಾಮೆ ನೀಡುತ್ತಾರೆ. ನಮಗೆ ಗಾಂಧೀಜಿ ಕೂಡ ಸಂಘಟನಾತ್ಮಕ ತೀರ್ಮಾನಕ್ಕೆ ಬದ್ಧನಾಗಿರುತ್ತಿರಲಿಲ್ಲ. ವ್ಯಕ್ತಿಗತವಾದ ತೀರ್ಮಾನಗಳನ್ನು ಬಲವಂತವಾಗಿ ಜನರ ಮೇಲೆ ಹೇರುತ್ತಿದ್ದನಲ್ಲದೆ ಸರ್ವಾಧಿಕಾರಿ ಕೂಡ ಆಗಿದ್ದ ಎಂದೆನಿಸುತ್ತದೆ. ಮಹಾದೇವರವರಲ್ಲಿ ಗಾಂಧೀಜಿಯವರ ಮೇಲಿನ ನಡತೆ ಇದೆಯೆಂದು ಈ ಲೇಖನದಿಂದ ಅನಿಸುತ್ತದೆ.

ಸಂಘಟನೆಯ ಕಾರ್ಯಕರ್ತರ ಗುಣ ವಿಶ್ಲೇಷಣೆ ಮತ್ತು ದೇವಲಾಪುರದ ಭೂ ಹೋರಾಟವನ್ನು ತಂದಿರುವುದು ಅನಾವಶ್ಯಕವಾಗಿದೆ. ಬಹಳ ದಿವಸದಿಂದ ತನ್ನ ಮನಸ್ಸಿನಾಳದಲ್ಲಿನ ಆತಂಕ ವ್ಯಕ್ತಪಡಿಸಲು ಈ ಗಾಂಧಿ ಚಿತ್ರ ಉಪಯೋಗಿಸಿಕೊಂಡಿರುತ್ತಾರೆ ಎಂದು ಅನುಮಾನಬರುತ್ತದೆ. ದೇವಲಾಪುರ ಭೂ ಹೊರಾಟ ಎರಡು ತಿಂಗಳು ಸತತವಾಗಿ ನಡೆದು ಕಾದು ಕತ್ತರಿಸಿ ಬೆಳೆ ಬೆಳೆದು ಸಹಜವಾಗಿ ಬೇಗ ಇತ್ಯರ್ಥ ಮಾಡಿಕೊಳ್ಳುವ ಕಾತರದಿಂದ ಧರಣಿ ಮಾಡಿದ್ದರು. ಸಹಜವಾಗಿ ಅಧಿಕಾರಿಗಳ ನಿರ್ಲಕ್ಷತೆಯ ಬಗ್ಗೆ ಪ್ರಸ್ತಾಪ ಬಂದಿರುತ್ತದೆ. ಆದರೆ ಮಹಾದೇವರವರು ಅದನ್ನೇ ದೊಡ್ಡದು ಮಾಡಿ, ಅಧಿಕಾರಿಯ ಪರ ವಹಿಸುವುದು ಸರಿಯಲ್ಲ, ಇದುವರೆವಿಗೂ ದೇವಲಾಪುರಕ್ಕೆ ಹೋಗದ ಮಹಾದೇವರಿಗೆ ಎಷ್ಟರಮಟ್ಟಿಗೆ ಆತಂಕವಿದೆ ಎಂದು ತಿಳಿದುಕೊಳ್ಳುವುದು ಕಷ್ಟವೇನಲ್ಲ. ತನಗಿದ್ದ ಆತಂಕ ಗಾಂಧಿ ಚಿತ್ರದಿಂದ ದೃಢೀಕರಿಸಿಕೊಂಡು ಅಹಿಂಸೆ ಒಂದು ಬದುಕು ಎಂದುಕೊಂಡಿದ್ದಾರೆ, ದೇವಲಾಪುರದ ಚಳವಳಿಯಿಂದ ಅಧಿಕಾರಿಗಳು, ಸರ್ಕಾರ, ಏನು, ಎತ್ತ ಎಂದು ನಮ್ಮ ಜನರಲ್ಲಿ ಪ್ರಜ್ಞೆ ಬೆಳಸಬೇಕಾದ ಮಹಾದೇವರವರು ಸರ್ಕಾರದ ಪರ ವಹಿಸಿರುವುದು ವಿಷಾದಕರ ಸಂಗತಿ.

ದಲಿತ ಸಂಘರ್ಷ ಸಮಿತಿಗೆ ತನ್ನದೇ ರೂಪಿಲ್ಲದೇ, ತನ್ನದೇ ದಾರಿಗಳಿಲ್ಲದೆ ದಿಕ್ಕೆಡುತ್ತಿದೆ ಎಂದು ಹೇಳುವ ಮಹಾದೇವ ಎಷ್ಟರಮಟ್ಟಿಗೆ ಅಶಿಸ್ತಿನವ ಎಂದರೆ ಎಂದೂ ಸಂಘಟನಾತ್ಮಕ ದೃಷ್ಟಿಯಿಂದ ಸಂಘಟನೆಯಲ್ಲಿ ಬಾಯಿಬಿಟ್ಟವನಲ್ಲ, ಇದ್ದಕ್ಕಿದ್ದ ಹಾಗೆ ಬಹಿರಂಗವಾಗಿ ಚರ್ಚಿಸುವುದರಿಂದ ಸಂಘಟನೆಗೆ ಬೇಗ ರೂಪ ಮತ್ತು ದಾರಿ ಸಿಗುವುದಾದರೆ ಶ್ಲಾಘನೀಯ. ಹೀಗಿದ್ದು ಕೂಡ ಸಂಘಟನೆಯಲ್ಲಿ ವಸ್ತುಸ್ಥಿತಿ ಅರ್ಥೈಸುವುದರಲ್ಲಿ ಮಹಾದೇವರವರ ಪಾತ್ರ ಬಹಳ ದೊಡ್ಡದು. ದಲಿತರಿಗೆ ತೀವ್ರವಾದ ನೋವಿರುವುದರಿಂದ ತೀವ್ರವಾದಿಯಾಗಲು ನಿರಂತರವಾದ ಪ್ರಯತ್ನ ಇರಬೇಕಾಗುತ್ತದೆ. ನಮ್ಮನ್ನು ಆಳುತ್ತಿರುವ ಸರ್ಕಾರ ಮತ್ತು ನಮ್ಮ ಪರಿಸರ ಹಿಂಸೆಯಿಂದಿರುತ್ತದೆ. ‘ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬುದು’ ಒಂದು ಸಾಮಾನ್ಯ ಸಾಮಾಜಿಕ ನಿಯಮ. ಇದನ್ನು ಸಂಘಟನೆಯ ನಮ್ಮ ಅನುಭವಗಳು ಸ್ಪಷ್ಟಪಡಿಸಿವೆ. ಮಹಾದೇವರವರ ಈ ಲೇಖನ ನಿರ್ದಿಷ್ಟವಾದ ಸೈದ್ಧಾಂತಿಕ ನೆಲಗಟ್ಟನ್ನು ಬೇಗ ಕಂಡುಕೊಳ್ಳುವ ಸಾಧ್ಯತೆಯನ್ನು ಹೆಚ್ಚು ಮಾಡಿದೆ ಎಂದೆನಿಸುತ್ತದೆ.