ಮೂಕ ಪ್ರಾಣಿಗಳ ಧಾರುಣ ಸಾವು ಮತ್ತು ಸಮಾಜದ ಜಾಣಮೌನ-ಜಗದೀಶ್ ಕೊಪ್ಪ,
ಭೂಮಿಗೀತ
ಇತ್ತೀಚೆಗಿನ ದಿನಗಳಲ್ಲಿ ಅರಣ್ಯದಲ್ಲಿರಬೇಕಾದ ಪ್ರಾಣಿಗಳೆಲ್ಲವೂ ನಾಡಿನತ್ತ ಮುಖ ಮಾಡುತ್ತಿವೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ ಆವರಿಸಿಕೊಂಡ ಬರದ ಛಾಯೆಯ ಪರಿಣಾಮ ಆಹಾರ ಮತ್ತು ನೀರು ಇಲ್ಲದೆ ದಿಕ್ಕೆಟ್ಟು ಅಲೆಯುತ್ತಿರುವ ವನ್ಯ ಮೃಗಗಳು, ನಾಡಿಗೆ ಬಂದು ಸಾವಿನ ಮೂಲಕ ದಿನ ನಿತ್ಯ ಸುದ್ಧಿಯಾಗುತ್ತಿವೆ. ಇದೇ ಜನವರಿ 13 ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಕರಡಿಯೊಂದು ಗ್ರಾಮಸ್ಥರ ಕೊಡಲಿ ಮತ್ತು ದೊಣ್ಣೆ ಏಟುಗಳಿಗೆ ಬಲಿಯಾಯಿತು. ಅತ್ತ ಬಂಡಿಪುರ ಅರಣ್ಯದಂಚಿನ ಗ್ರಾಮಕ್ಕೆ ನುಸುಳಿದ್ದ ಕಾಡಾನೆಗಳಲ್ಲಿ 22 ವರ್ಷದ ಗಂಡಾನೆಯೊಂದು ಗ್ರಾಮಸ್ಥರ ಆರ್ಭಟಕ್ಕೆ ಬೆಚ್ಚಿ ಅರಣ್ಯದತ್ತ ತೆರಳುವ ರಭಸದಲ್ಲಿ ಕೆರೆಗೆ ಬಿದ್ದು ಅಸು ನೀಗಿತು. 2015 ರ ಒಂದು ವರ್ಷದ ಅವಧಿಯಲ್ಲಿ ಕರ್ನಾಟಕದಲ್ಲಿ ಬಂಡಿಪುರ ಅರಣ್ಯಪ್ರದೇಶದ ವ್ಯಾಪ್ತಿಯಲ್ಲಿ ಆರು ಆನೆಗಳು ರೈತರು ಹೊಲಕ್ಕೆ ಹಾಕಿರುವ ವಿದ್ಯುತ್ ಬೇಲಿಗೆ ಸಿಕ್ಕಿ ಅಸುನೀಗಿವೆ. ಕೊಪ್ಪಳ ಮತ್ತು ಹೊಸಪೇಟೆ ಪ್ರದೇಶದಲ್ಲಿ ಆರು ಕರಡಿಗಳನ್ನು ಹೊಡೆದು ಸಾಯಿಸಲಾಗಿದೆ. ಜೊತೆಗೆ ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಹೊಲಗಳಿಗೆ ಲಗ್ಗೆ ಇಡುವ ಕೃಷ್ಣ ಮೃಗಗಳನ್ನು ವಿಷ ಉಣಿಸಿ ಸಾಮೂಹಿಕವಾಗಿ ಕೊಂದು ಹೂತು ಹಾಕಿರುವ ಘಟನೆಗಳು ಬೆಳಕಿಗೆ ಬಂದಿಲ್ಲ. ಅದೇ ರೀತಿ ಬೆಳಗಾವಿಯ ಖಾನಾಪುರ ವಿಭಾಗದ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ವಾಹನಗಳಿಗೆ ಮತ್ತು ರೈಲುಗಳಿಗೆ ಸಿಕ್ಕಿ ಸಾವನ್ನಪ್ಪಿದ ಚಿರತೆ, ಮಂಗ, ಕಡವೆ, ಪಕ್ಷಿಗ ಳ ಸಂಖ್ಯೆಯನ್ನು ಲೆಕ್ಕವಿಟ್ಟವವರಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿನ ಹೊರವಲಯದಲ್ಲಿ ಕಾಣಿಸಿಕೊಂಡ ಕಾಡಾನೆಗಳ ಗುಂಪು ಸೃಷ್ಟಿಸಿದ ಆತಂಕ ಜನಸಾಮಾನ್ಯರನ್ನು ಬೆಚ್ಚಿಬೀಳಿಸಿದೆ. ಇದೊಂದು ರೋಚಕ ಸುದ್ಧಿಯೆಂಬಂತೆ ನಮ್ಮ ದೃಶ್ಯ ಮಾಧ್ಯಮಗಳು ಒಂದೇ ಸಮನೆ ಗಂಟಲು ಹರಿದುಕೊಂಡಿದ್ದು ಇನ್ನೂ ಜನಮಾನಸದಿಂದ ದೂರವಾಗಿಲ್ಲ. ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಲು ಹೊರಡುವ ನಮ್ಮ ಅರಣ್ಯ ಇಲಾಖೆ ಮತ್ತು ಸರ್ಕಾರಗಳು ಅಕ್ಷರಶಃ ಕಂಗೆಟ್ಟು ಕುಳಿತಿವೆ. ಮನುಷ್ಯ ಮತ್ತು ಪ್ರಾಣಿಗಳ ಈ ಸಂಘರ್ಷದ ಹಿಂದಿರುವ ಕಟುವಾಸ್ತವವನ್ನು ಗ್ರಹಿಸಲಾರದ ನಮ್ಮ ಜನಸಾಮಾನ್ಯರು ಆನೆಗಳಿಗೆ ಪಟಾಕಿ, ಸಿಡಿಮದ್ದು ಗಳ ಮೂಲಕ ಬೆದರಿಕೆ ಹಾಕಿ ಮೋಜಿನ ಮೂಲಕ ಮನರಂಜನೆ ಪಡೆಯುತ್ತಿದ್ದಾರೆ.
ಕಳೆದ ಒಂದು ದಶಕದಲ್ಲಿ ಭಾರತದ ಆನೆ, ಹುಲಿ ಮತ್ತು ಚಿರತೆಗಳ ಸಂತತಿ ಗಣನೀಯವಾಗಿ ಕುಸಿಯುತ್ತಿದೆ. ಇವುಗಳಿಗೆ ಮೀಸಲಿಟ್ಟಿದ್ದ ಅಭಯಾರಣ್ಯಗಳು ಉಳ್ಳವರ ಪಾಲಿನ ಮೋಜಿನ ತಾಣಗಳಾಗಿ ಪರಿವರ್ತನೆಗೊಂಡಿವೆ. ಪ್ರವಾಸಿಗರಾಗಿ, ಬೇಟೆಗಾರರಾಗಿ, ನಿಸರ್ಗ ಪ್ರೇಮಿಗಳಾಗಿ ಹೀಗೆ ಹಲವು ರೂಪದಲ್ಲಿ ಅರಣ್ಯ ಪ್ರಪಂಚಕ್ಕೆ ಕಾಲಿಡುತ್ತಿರುವ ಮಾನವ ಪ್ರಾಣಿಗಳ ಹಸ್ತಕ್ಷೇಪದಿಂದಾಗಿ ವನ್ಯ ಮೃಗಗಳು ತಮ್ಮ ನಿಸರ್ಗ ಸಹಜ ಬದುಕನ್ನು ಕಳೆದುಕೊಂಡಿವೆ. ಭಾರತದಲ್ಲಿ ನಿಸರ್ಗದ ಸಮತೋಲನ ತಪ್ಪಿ ದಶಕಗಳೇ ಉರುಳಿಹೋಗಿವೆ. ಆಧುನಿಕತೆ ಮತ್ತು ಅಭಿವೃದ್ಧಿ ನಮಗೆ ಎಲ್ಲವನ್ನು ವಾಣಿಜ್ಯ ಮತ್ತು ಮನರಂಜನೆಯ ದೃಷ್ಟಿಯಿಂದ ನೋಡುವುದನ್ನು ಕಲಿಸಿದೆ.
ಏಷ್ಯಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಆನೆಗಳನ್ನು ಪಡೆದ ಕೀರ್ತಿ ಒಂದು ಕಾಲದಲ್ಲಿ ಕರ್ನಾಟಕಕ್ಕೆ ಇತ್ತು. ( 28 ಸಾವಿರ ಆನೆಗಳು) 2010 ರ ಗಣತಿಯ ಪ್ರಕಾರ 5350 ರಿಂದ 6230 ಆನೆಗಳು ಇರಬಹುದೆಂದು ಅಂದಾಜಿಸಲಾಗಿದೆ. ಒಂದು ಸಮಾಧಾನಕರ ಸಂಗತಿಯೆಂದರೆ, 1983ರಲ್ಲಿ 3579 ಸಂಖ್ಯೆಯಲ್ಲಿದ್ದ ಆನೆಗಳ ಸಂತತಿ ವೃದ್ಧಿಸಿದೆ. 10 ನೇ ಶತಮಾನದಿಂದ ಕರ್ನಾಟಕದ ಹೊಯ್ಸಳರು, ಚಾಲಿಕ್ಯರು, ವಿಜಯನಗರದ ಅರಸರು ಮತ್ತು ಟಿಪ್ಪುಸುಲ್ತಾನ್ ನಂತರ ಮೈಸೂರು ಅರಸರು ಇವರುಗಳ ಪ್ರೀತಿಯಿಂದಾಗಿ ರಾಜ್ಯದಲ್ಲಿ ಆನೆಗಳ ಸಂತತಿ ಈವರೆಗೆ ಉಳಿದುಕೊಂಡು ಬಂದಿದೆ.
ಕಳೆದ ಐದು ವರ್ಷಗಳಲ್ಲಿ ಆನೆಗಳು ತಮ್ಮ ವ್ಯಾಪ್ತಿ ಪ್ರದೇಶವನ್ನು ಬಿಟ್ಟು ನಾಡಿನತ್ತ ಮುಖ ಮಾಡಿರುವುದು ನಿಜಕ್ಕೂ ಆತಂಕಕಾರಿಯಾದ ವಿಷಯ. ಆದರೆ, ಈ ಕುರಿತಂತೆ ನಮ್ಮ ಅರಣ್ಯ ಇಲಾಖೆ ತಲೆಕೆಡಿಸಿಕೊಂಡ ಉದಾಹರಣೆಗಳಿಲ್ಲ. ಹೋಗಲಿ ರಾಜ್ಯ ಹೈಕೋರ್ಟ್ ಸೂಚನೆ ಮೇರೆಗೆ 2012 ಸೆಪ್ತಂಬರ್ ತಿಂಗಳಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯ ಹಿರಿಯ ವಿಜ್ಙಾನಿ ಪ್ರೋ.ರಮಣ್ ಸುಕುಮಾರ್ ನೇತೃತ್ವದ ಹದಿಮೂರು ತಜ್ಙ ಸದಸ್ಯರುಗಳನ್ನು ಒಳಗೊಂಡ ಆನೆ ಕಾರ್ಯಪಡೆಯ (Elephant task force ) ತಂಡವೊಂದು 141 ಪುಟಗಳ ವರದಿಯನ್ನು ಸಲ್ಲಿಸಿದೆ. ಈ ವರದಿಯಲ್ಲಿ ಕೂಲಂಕುಶವಾಗಿ ಕರ್ನಾಟಕದ 19 ಅರಣ್ಯವಲಯಗಳಲ್ಲಿ ಹಂಚಿಹೋಗಿರುವ ಆನೆಗಳ ಸಂತತಿ, ಮತ್ತು ಬಂಡಿಪುರ, ಮಳವಳ್ಳಿ, ಸಾವನ್ ದುರ್ಗ, ಅರಕಲಗೂಡು, ಆಲೂರು, ಸಕೇಲೇಶ್ವರ ಈ ಪ್ರದೇಶಗಳಲ್ಲಿ ಆನೆಗಳ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳು, ರೈತರ ವಿದ್ಯತ್ ಬೇಲಿಗೆ ಮತ್ತು ದಂತಕ್ಕಾಗಿ ಬಲಿಯಾಗುತ್ತಿರುವ ಆನೆಗಳ ಸ್ಥಿತಿ ಮತ್ತು ಅಭಯಾರಣ್ಯಗಳಲ್ಲಿ ತಲೆಯೆತ್ತುತ್ತಿರುವ ರೆಸಾರ್ಟ್ ಗಳು, ಆನೆಗಳ ಸಹಜ ವಲಸೆಗೆ ಇದ್ದ ಕಾರಿಡಾರ್ ಗಳು ( ಆನೆಗಳು ಸಂಚರಿಸುವ ಹಾದಿ) ಮುಚ್ಚಿ ಹೋಗಿರುವ ಸಂಗತಿ ಎಲ್ಲವನ್ನೂ ಅಂಕಿ ಅಂಶಗಳ ಸಹಿತ ವಿವರಿಸಿ, ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಸೂಚಿಸಲಾಗಿದೆ. ಅಲ್ಲದೆ ಸಕಲೇಶ್ವರ ಮತ್ತು ಹಾಸನದ ಆಲೂರು ಬಳಿ ರೈತರ ಜಮೀನಿಗೆ ನುಗ್ಗಿ ಹಾನಿಯುಂಟು ಮಾಡುತ್ತಿರುವ ಓರ್ವ ಸಲಗ ಸೇರಿದಂತೆ 26 ಆನೆಗಳನ್ನು ಸ್ಥಳಾಂತರಿಸಲು ವರದಿಯಲ್ಲಿ ಸೂಚಿಸಲಾಗಿದೆ. ಆದರೆ ಇದನ್ನು ಓದಲಾರದಷ್ಟು ಸೂಕ್ಷ್ಮತೆಯನ್ನು ನಮ್ಮ ಅರಣ್ಯಾಧಿಕಾರಿಗಳು ಕಳೆದುಕೊಂಡಿದ್ದಾರೆ. ವಿದ್ಯುತ್ ತಂತಿ ಬೇಲಿಗೆ ಸಿಲುಕಿ ಆನೆಗಳು ಸಾಯುತ್ತಿರುವುದನ್ನು ಗಮನಿಸಿದ ರಾಜ್ಯ ಉಚ್ಛ ನ್ಯಾಯಾಲಯ ಸ್ವಯಂಪ್ರೇರಿತವಾಗಿ ಅರ್ಜಿಯೊಂದನ್ನು ದಾಖಲಿಸಿಕೊಂಡು ಅರಣ್ಯ ಇಲಾಖೆಗೆ ನೋಟೀಸ್ ಜಾರಿ ಮಾಡಿತ್ತು.. ಈಗಲಾದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳದಿದ್ದರೆ, ಭವಿಷ್ಯದಲ್ಲಿ ದುರಂತದ ಅಧ್ಯಾಯವೊಂದು ನಮಗಾಗಿ ಕಾದಿದೆ ಎಂಬುದನ್ನು ನಾವು ಮರೆಯಬಾರದು. ಈ ನಿಟ್ಟಿನಲ್ಲಿ ನಮ್ಮ ಮಾಧ್ಯಮಗಳು ವಿಶೇಷವಾಗಿ ದೃಶ್ಯ ಮಾಧ್ಯಮಗಳು ಆನೆಗಳು ನಾಡಿಗೆ ಬಂದ ಸಂದರ್ಭದಲ್ಲಿ ದಿನವಿಡಿ ಕಿಟಾರನೆ ಕಿರುಚಿಕೊಳ್ಳುವುದನ್ನು ಬಿಟ್ಟು ಸಮಸ್ಯೆಯ ಪರಿಹಾರಕ್ಕೆ ತಜ್ಙರ ಜೊತೆ ಕುಳಿತು ಚರ್ಚಿಸಿ ಪರಿಹಾರ ಹುಡುಕಬೇಕಿದೆ. ಕಳೆದ 2012 ರ ಜನವರಿಯಿಂದ ಡಿಸಂಬರ್ ವರೆಗೆ ಕರ್ನಾಟಕದಲ್ಲಿ 183 ಆನೆಗಳು ಮೃತಪಟ್ಟಿವೆ. ಕ್ರಮವಾಗಿ ಜನವರಿ-9, ಪೆಬ್ರವರಿ-12, ಮಾರ್ಚಿ-12, ಏಪ್ರಿಲ್-18, ಮೇ-30, ಜೂನ್-25, ಜುಲೈ-19, ಆಗಸ್ಟ್-15, ಸೆಪ್ಟಂಬರ್-16, ಅಕ್ಟೋಬರ್-12, ನವಂಬರ್-9, ಡಿಸಂಬರ್-6 ಹೀಗೆ ಸಾವನ್ನಪ್ಪಿವೆ. ಇದರಲ್ಲಿ, ದಂತಕ್ಕಾಗಿ ಬೇಟೆ, ಅಪಘಾತ, ವಿದ್ಯುತ್ ಸ್ಪರ್ಶ ಮುಂತಾದ ಅನಾಹುತಗಳಿಗಿಂತ ಬೇಸಿಗೆಯ ದಿನಗಳಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟ ಸಂಖ್ಯೆ ಮತ್ತು ಆಹಾರ, ನೀರಿಲ್ಲದೆ ಸತ್ತ ಆನೆಗಳ ಸಂಖ್ಯೆ ಹೆಚ್ಚಿನದಾಗಿದೆ. ಪ್ರತಿದಿನ ಒಂದು ಆನೆಗೆ 200 ರಿಂದ 250 ಕೆ.ಜಿ.ಯಷ್ಟು ಹಸಿರು ಹುಲ್ಲು, ಬಿದಿರು ಮತ್ತು 150 ಲೀಟರ್ ನೀರು ಬೇಕಾಗಿದೆ. ಈ ಸಂಗತಿಯನ್ನು ನಾವು ಅರ್ಥೈಸಿಕೊಂಡರೆ, ಈ ಮೂಕ ಪ್ರಾಣಿಗಳು ನಾಡಿಗೇಕೆ ನುಗ್ಗಿ ಬರುತ್ತಿವೆ ಎಂಬುದು ಮನದಟ್ಟಾಗುತ್ತದೆ. ದಕ್ಷಿಣ ಭಾರದಲ್ಲಿ ಆನೆಗಳ ದುರಂತ ಒಂದು ಬಗೆಯದಾದರೆ, ಪೂರ್ವ ಭಾರತದ ರಾಜ್ಯಗಳ ಆನೆಗಳ ದುರಂತ ಇನ್ನೊಂದು ಬಗೆಯದು.
ಒರಿಸ್ಸಾ ರಾಜ್ಯದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ 310 ಆನೆಗಳು ಮೃತಪಟ್ಟಿವೆ. ಇವುಗಳಲ್ಲಿ ಶಿಕಾರಿ, ಸಹಜ ಸಾವು, ಇವುಗಳಿಗಿಂತ, ರೈಲಿಗೆ ಸಿಕ್ಕಿ ಸಾವನ್ನಪ್ಪಿದ ಆನೆಗಳ ಸಂಖ್ಯೆ ಹೆಚ್ಚಿನದಾಗಿದೆ. 2012ರ ಡಿಸಂಬರ್ 29 ರಂದು ಹೌರ-ಚೆನ್ನೈ ನಡುವೆ ಸಂಚರಿಸುವ ಕೋರಮಂಡಲ್ ಎಕ್ಸ್ ಪ್ರಸ್ ರೈಲಿಗೆ ಸಿಲುಕಿ ಗಂಜಾಂ ಜಿಲ್ಲೆಯ ಅರಣ್ಯದಲ್ಲಿ 8 ಆನೆಗಳು ಮೃತಪಟ್ಟವು. ಒರಿಸ್ಸಾದಲ್ಲಿ 14 ಆನೆಗಳ ಕಾರಿಡಾರ್ ಗಳು ಇದ್ದು, ಅಲ್ಲಿರುವ ಆನೆಗಳ ಸಂಖ್ಯೆ ಕೇವಲ 1930 ಮಾತ್ರ. ಪಶ್ಚಿಮ ಬಂಗಾಳದಲ್ಲಿ ವಿಶೇಷವಾಗಿ ಸಿಲಿಗುರಿ- ಅಲಿಪುರ್ದರ್ ನಡುವಿನ 168 ಕಿ.ಮಿ. ರೈಲು ಮಾರ್ಗದಲ್ಲಿ 8 ವರ್ಷಗಳ ಅವಧಿಯಲ್ಲಿ ರೈಲಿಗೆ ಸಿಲುಕಿ 43 ಆನೆಗಳು ಮೃತಪಟ್ಟಿವೆ. ಅರಣ್ಯ ಪ್ರದೇಶದಲ್ಲಿ ಸಂಚರಿಸುವಾಗ ರೈಲಿನ ವೇಗ 40 ಕಿ.ಮಿ. ಇರಬೇಕು ಎಂಬ ನಿಯಮವನ್ನು ಭಾರತೀಯ ರೈಲ್ವೆ ಇಲಾಖೆ ಗಾಳಿಗೆ ತೂರಿದೆ. ಭಾರತದ ಅರಣ್ಯಗಳಲ್ಲಿ ಒಟ್ಟು 88 ಆನೆಗಳ ಕಾರಿಡಾರ್ ಗಳು ಇದ್ದು ಇವುಗಳ ಸುರಕ್ಷತೆಗೆ ಅರಣ್ಯ ಇಲಾಖೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಕನಿಷ್ಟ ಅರಣ್ಯ ಪ್ರಧೇಶಗಳಲ್ಲಿ ರೈಲು ಮಾರ್ಗ ಇರುವ ಇಕ್ಕೆಲಗಳಲ್ಲಿ ತಂತಿ ಬೇಲಿ ನಿರ್ಮಾಣ ಮಾಡಿ, ಪ್ರತಿ ಒಂದು ಕಿಲೋಮೀಟರ್ ದೂರದಲ್ಲಿ ಹಳಿಗಳ ಕೆಳಗೆ 10 ಅಡಿ ಅಗಲ ಮತ್ತು 10 ಅಡಿ ಆಳದ ಸುರಂಗ ರಸ್ತೆ ನಿರ್ಮಾಣವಾದರೆ ಪ್ರಾಣಿಗಳ ಚಲನಕ್ಕೆ ಧಕ್ಕೆ ಬರುವುದಿಲ್ಲ, ಜೊತೆಗೆ ಅವುಗಳು ಅಪಘಾತಕ್ಕೆ ಬಲಿಯಾಗುವುದನ್ನು ತಪ್ಪಿಸಬಹುದು. ಆದರೆ, ಉಳ್ಳವರು ಕುಡಿದ ನೀರು ಹೊಟ್ಟೆಯಲ್ಲಿ ಅಲುಗಾಡದ ಹಾಗೆ ಕಾರಿನಲ್ಲಿ ಚಲಿಸಲು ಪ್ರತಿ ಕಿಲೋಮೀಟರ್ ಗೆ ನಾಲ್ಕರಿಂದ ಆರು ಕೋಟಿ ರೂಪಾಯಿ ವೆಚ್ಚದಲ್ಲಿ ಹೆದ್ದಾರಿ ನಿರ್ಮಿಸಲು ಆಸಕ್ತಿ ತೋರುವ ನಮ್ಮ ಸರ್ಕಾರಗಳಿಗೆ ಮೂಕ ಪ್ರಾಣಿಗಳ ಪ್ರಾಣದ ಬಗ್ಗೆ ಯಾವ ಕಾಳಜಿಯೂ ಇಲ್ಲವಾಗಿದೆ. ಏಕೆಂದರೆ, ಹೆದ್ದಾರಿಯ ಶುಲ್ಕದ ನೆಪದಲ್ಲಿ ಜನರ ಮೈ ಚರ್ಮ ಸುಲಿಯುವ ಹಾಗೆ ಪ್ರಾಣಿಗಳ ಚರ್ಮವನ್ನು ಸುಲಿಯಲಾಗದು ಎಂಬ ಸತ್ಯವನ್ನು ನಮ್ಮ ಸರ್ಕಾರಗಳು ಕಂಡುಕೊಂಡಿವೆ.
ಡೆಹರಾಡೂನ್ ಗಿರಿಧಾಮದಲ್ಲಿರುವ ವೈಲ್ಡ್ ಲೈಪ್ ಇನ್ಸ್ ಟ್ಯೂಟ್ ಆಫ್ ಇಂಡಿಯಾದ ಹಿರಿಯ ಅಧಿಕಾರಿಗಳ ಪ್ರಕಾರ ಭಾರತದಲ್ಲಿರುವ ಹುಲಿಗಳ ಸಂಖ್ಯೆಯ ಶೇಕಡ 29ರಷ್ಟು ಹುಲಿಗಳು ರಕ್ಷಿತ ಅರಣ್ಯ ಪ್ರದೇಶದಿಂದ ಹೊರಗಿದ್ದಾವೆ. ( 2015 ರ ಜನವರಿ ಸಮೀಕ್ಷೆಯಂತೆ ಭಾರತದಲ್ಲಿರುವ ಹುಲಿಗಳ ಸಂಖ್ಯೆ 2226) . ಗುಜರಾತಿನ ರಕ್ಷಿತ ಅರಣ್ಯವಲಯದಲ್ಲಿದ್ದ ಕೃಷ್ಣಮೃಗಗಳ ಪೈಕಿ ಶೇಕಡ 58 ರಷ್ಟು ಸುರಕ್ಷಿತ ವಲಯದ ಹೊರಗೆ ವಾಸಿಸುತ್ತಿವೆ ಎಂಬುವುದು 2010 ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ದೃಢಪಟ್ಟಿದೆ. ಇನ್ನೂ ಒರಿಸ್ಸಾದ ಕಡಲ ತೀರ ಮತ್ತು ಕಡಲು ಸೇರುವ ನದಿಗಳ ತೀರದಲ್ಲಿ ವಾಸಿಸುವ ಆಲಿವ್ ರಿಡ್ಲ್ ಎಂಬ ಕಡಲಾಮೆಗಳ ಸ್ಥಿತಿ ಚಿಂತಾಜನಕವಾಗಿದೆ. ಅಲ್ಲಿನ ಋಷಿಕುಲ್ಯ ಎಂಬ ನದಿತೀರವನ್ನು ಕಡಲಾಮೆಗಳ ಸಂತತಿ ಅಭಿವೃದ್ಧಿಗಾಗಿ ಸುರಕ್ಷಿತ ವಲಯ ಎಂದು ಘೋಷಿಸಲಾಗಿತ್ತು. ಆದರೆ, ಸುಮಾರು ಎರಡು ಲಕ್ಷದಷ್ಟು ಕಡಲಾಮೆಗಳು ಈ ವಲಯದಿಂದ ದೂರವಿದ್ದು ಬೇಟೆಗಾರರಿಗೆ ಬಲಿಯಾಗುತ್ತಿವೆ. 2015 ರ ಅಕ್ಟೋಬರ್ ತಿಂಗಳ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಒಟ್ಟು 726 ಪ್ರದೇಶಗಳನ್ನು ವನ್ಯ ಮೃಗಗಳ ಸುರಕ್ಷಿತ ತಾಣಗಳೆಂದು ಘೋಷಿಸಲಾಗಿದೆ. ಇವುಗಳಲ್ಲಿ 130 ರಾಷ್ಟ್ರೀಯ ಉದ್ಯಾನವನಗಳು ಮತ್ತು 530 ವನ್ಯ ಮೃಗಗಳ ತಾಣಗಳು ಸೇರಿವೆ. ಆದರೆ, ಬಹುತೇಕ ಪ್ರಾಣಿಗಳಿಗೆ ಅಂದರೆ, ವಿಶೇಷವಾಗಿ ಹುಲಿ, ಚಿರತೆ ಮತ್ತು ಆನೆಗಳಿಗೆ ಘೋಷಿಸಿರುವ ಅರಣ್ಯ ಪ್ರದೇಶದ ವ್ಯಾಪ್ತಿ ಚಿಕ್ಕದಾಗಿದೆ. ಗಂಡು ಹುಲಿಯೊಂದಕ್ಕೆ ತನ್ನ ಸಹಜ ತಿರುಗಾಟಕ್ಕೆ 60 ರಿಂದ 100 ಚದುರ ಕಿಲೊಮೀಟರ್ ವ್ಯಾಪ್ತಿ ಪ್ರದೇಶ ಬೇಕಾಗಿದೆ. ಅದೇ ರೀತಿ ಆನೆಗಳು ಪ್ರತಿ ದಿನ 10 ರಿಂದ 20 ಚದುರ ಕಿಲೊಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ತಿರುಗಾಡುತ್ತವೆ. ಜೊತೆಗೆ ನೀರು ಮತ್ತು ಆಹಾರ ಹುಡುಕಿಕೊಂಡು ನೂರು ಚದುರ ಕಿಲೋಮಿಟರ್ ವ್ಯಾಪ್ತಿ ಪ್ರದೇಶದಲ್ಲಿ ಸಂಚರಿಸುತ್ತವೆ. ಭಾರತದ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಿದ ಮನುಷ್ಯರ ಚಟುವಟಿಕೆಯ ಫಲವಾಗಿ ವನ್ಯಮೃಗಗಳಿಗೆ ದೊರಕುತ್ತಿದ್ದ ಹಸಿರು ಮೇವು ಮತ್ತು ನೀರಿನ ಕೊರತೆ ಉಂಟಾಗಿದೆ. ಕರ್ನಾಟಕದ ವೈಲ್ಡ್ ಲೈಪ್ ಕನ್ಸರ್ ವೇಟಿವ್ ಸೊಸೈಟಿ ಸಂಸ್ಥೆಯಲ್ಲಿ ಸಹಾಯಕ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಎನ್. ಕೀರ್ತಿ ಕಾರಂತ ಇವರ ಅಧ್ಯಯನದ ಪ್ರಕಾರ 2013 ರಲ್ಲಿ ಕರ್ನಾಟಕದ ಅರಣ್ಯದಂಚಿನ ಗ್ರಾಮಗಳ 1972 ರ ಕುಟುಂಬಗಳು ಬೆಳೆದ ಬೆಳೆಯಲ್ಲಿ ಶೇಕಡ 91 ರಷ್ಟು ಫಸಲು ವನ್ಯಮೃಗಗಳ ಪಾಲಾಗಿತ್ತು. ಭಾರತದಲ್ಲಿ ಶೇಕಡ 29 ರಷ್ಟು ಹುಲಿಗಳು, ಶೇಕಡ 67 ರಷ್ಟು ಆನೆಗಳು, ಶೇಕಡ 100 ರಷ್ಟು ತೋಳಗಳು ಮತ್ತು ಗಂಗಾನದಿಯ ಡಾಲ್ಪಿನ್ ಗಳು ಹಾಗೂ ಶೇಕಡ 50 ರಷ್ಟು ಕೃಷ್ಣಮೃಗಗಳು ತಮ್ಮ ಸಹಜ ವಾಸ ಸ್ಥಳಗಳಿಂದ ದೂರವಿದ್ದು, ಅನೇಕ ಅವಘಡಗಳಿಗೆ ಬಲಿಯಾಗುತ್ತಿವೆ. ಮನುಷ್ಯ ಯಾವ ಪ್ರಾಣಿಯ ಮಾಂಸವನ್ನು ತಿನ್ನಬೇಕು ಅಥವಾ ತಿನ್ನಬಾರದು ಎಂದು ಸರ್ಕಾರಗಳು ಮತ್ತು ವಿವಿಧ ಸಮುದಾಯಗಳು ಸಂಘರ್ಷಕ್ಕೆ ಇಳಿದು ಗಾಳಿಯಲ್ಲಿ ಕತ್ತಿ ತಿರುವುತ್ತಾ ಕೈ ನೋಯಿಸಿಕೊಳ್ಳುತ್ತಿವೆ, ಇತ್ತ ಮೂಕ ಪ್ರಾಣಿಗಳು ಸದ್ದಿಲ್ಲದೆ ಸುದ್ದಿಯಾಗದೆ ಸಾಯುತ್ತಿವೆ.