ಮುಳುಗುತ್ತಿರುವ ಭಾರತ ಮತ್ತು ಅದರೊಳಗಿರುವ ನಾವು -ದೇವನೂರ ಮಹಾದೇವ

[2019 ಸೆಪ್ಟೆಂಬರ್ 22ರಂದು ಗೌರಿ ನೆನಪಿನ ಕಾರ್ಯಕ್ರಮದಲ್ಲಿ ಬಿಡುಗಡೆಯಾದ ‘ನ್ಯಾಯಪಥ’ ವಿಶೇಷ ಸಂಚಿಕೆಗಾಗಿ ದೇವನೂರ ಮಹಾದೇವ ಅವರು ಬರೆದ ಲೇಖನ…]

 

                                                                             

 

ಇದು ಇತ್ತೀಚಿನ ಒಂದು ಸುದ್ದಿ: ಪ್ರಜಾವಾಣಿ 19 ಸೆಪ್ಟೆಂಬರ್ 2019ರ ಸಂಚಿಕೆಯಲ್ಲಿ `ಮೋದಿಗಾಗಿ ಜನರ ಮುಳುಗಡೆ’ ಎಂಬ ತಲೆಬರಹದಲ್ಲಿ ನರ್ಮದಾ ಬಚಾವೋ ಆಂದೋಲನದ ಮೇಧಾ ಪಾಟ್ಕರ್ ಅವರ ಟ್ವೀಟ್‍ನ್ನು ಉಲ್ಲೇಖಿಸಲಾಗಿದೆ.

ಮೇಧಾ ಪಾಟ್ಕರ್ ಅವರ ಟ್ವೀಟ್ ಹೀಗಿದೆ: `ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ಸಲುವಾಗಿ ಸರ್ದಾರ್ ಸರೋವರವನ್ನು ಭರ್ತಿ ಮಾಡಲಾಗಿದೆ. ಹೀಗೆ ಭರ್ತಿ ಮಾಡಿರುವುದರಿಂದ ಸರೋವರದ ಹಿನ್ನೀರು 250 ಕಿ.ಮೀ. ನಷ್ಟು ಹಿಂದಕ್ಕೆ ಬಂದಿದೆ. ನೂರಾರು ಗ್ರಾಮಗಳು ಮುಳುಗಡೆಯಾಗಿವೆ. ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ನಿರಾಶ್ರಿತರ ಗೋಳು ಮೋದಿ ಜನ್ಮ ದಿನಾಚರಣೆ ಸಂಭ್ರಮದಲ್ಲಿ ಮೂಲೆಗುಂಪಾಗಿದೆ’

ಇದನ್ನು ಓದಿದ ಮೇಲೆ ಮುಳುಗಡೆ, ನಿರಾಶ್ರಿತರು ಹಾಗೂ ಮೋದಿ ಜನ್ಮ ದಿನಾಚರಣೆ ಜೊತೆಗೂಡಿ ನನ್ನ ಮನಸ್ಸಲ್ಲಿ ಉಳಿದು ಬಿಟ್ಟಿತು. ನಿಧಾನಕ್ಕೆ ಈ ಮುಳುಗಡೆ, ಭಾರತದ ಇಂದಿನ ಸ್ಥಿತಿಗತಿಗೆ ಕನ್ನಡಿ ಹಿಡಿದಂತೆ ಕಾಣಿಸತೊಡಗಿತು.

ಹೌದು, ಭಾರತದ ಆರ್ಥಿಕತೆ, ಕೈಗಾರಿಕೆ, ಬ್ಯಾಂಕ್, ಉದ್ಯೋಗ ಮುಳುಗಡೆಯಾಗುತ್ತಿವೆ. ಜಿಡಿಪಿಯೂ ಮುಳುಗಡೆಯಾಗುತ್ತಿದೆ. ಅಷ್ಟೇ ಅಲ್ಲ, ಭಾರತದ ಹಿರಿಮೆಯನ್ನು ಎತ್ತಿ ಹಿಡಿಯುತ್ತಿರುವ ಒಕ್ಕೂಟ ವ್ಯವಸ್ಥೆ, ಬಹುತ್ವ ಹಾಗೂ ಸ್ವಾಯತ್ತ ಸಂಸ್ಥೆಗಳಾದ ಚುನಾವಣಾ ಆಯೋಗ, ನ್ಯಾಯಾಂಗ, ಸಿಬಿಐ, ನಾಲ್ಕನೆಯ ಅಂಗ ಮಾಧ್ಯಮ, ಇಂಥವುಗಳೂ ಸರ್ಕಾರದ ಹಸ್ತಕ್ಷೇಪದಿಂದ ಮುಳುಗುತ್ತ ಉಸಿರಾಡಲು ಕಷ್ಟ ಪಡುತ್ತಿವೆ. ಇನ್ನೊಂದು ಕಡೆ ಗುಂಪು ಹತ್ಯೆಗಳಾಗುತ್ತಿದ್ದರೂ ಕಾನೂನು ಸುವ್ಯವಸ್ಥೆ ಪಾಲನೆಯಾಗುತ್ತಿಲ್ಲ. ಇದೆಲ್ಲಾ ಏನನ್ನು ಹೇಳುತ್ತಿದೆ? ಆಳ್ವಿಕೆ ನಡೆಸುತ್ತಿರುವವರು ಅಸಮರ್ಥರು ಎಂದು ತಾನೆ? ಇಷ್ಟು ಸಾಲದು ಎಂಬಂತೆ so called ಅಭಿವೃದ್ಧಿ ಹೆಸರಿನಲ್ಲಿ ನಡೆದ ಅರಣ್ಯ ನಾಶ, ಗಣಿಗಾರಿಕೆ, ಪ್ರಕೃತಿ ಧ್ವಂಸದಿಂದ ಹುಚ್ಚು ಹೊಳೆ, ಭೂ ಕುಸಿತ, ಸಾವು-ನೋವು ಆಕ್ರಂದನ ಹೆಚ್ಚುತ್ತಿದೆ. ಸರ್ಕಾರಗಳು ಕಣ್ಣೆತ್ತಿಯೂ ನೋಡುತ್ತಿಲ್ಲ.

ಇದನ್ನೆಲ್ಲಾ ನೋಡಿದಾಗ ಭಾರತ ಮುಳುಗುತ್ತಿರುವ ಹಡಗು ಎನ್ನದೆ ಬೇರೆನು ಹೇಳಬೇಕು? ಹಡಗನ್ನು ಮುಳುಗಿಸುತ್ತಿರುವ ತೂತುಗಳ ಕಡೆಗೆ ಜನಸ್ತೋಮದ ಗಮನ ಹೋಗದಂತಿರಲು ಹಡಗಿನ ಕ್ಯಾಪ್ಟನ್‍ಗಳಿಂದ, ಮಹಾಭಾರತದ ವಿರಾಟ ಪರ್ವದ ಉತ್ತರನ ಪೌರುಷ ನಾಟಕ ನಡೆಯುತ್ತಿದೆ. ಈ ನಾಟಕದ ಭಾಗವಾಗಿಯೇ ಕಾಶ್ಮೀರದ ಸಮಸ್ಯೆಯನ್ನು ನೋಡಬೇಕು ಅನ್ನಿಸುತ್ತದೆ. ನೆನಪಿಸಿಕೊಳ್ಳೋಣ- ಶೇಖ್ ಅಬ್ದುಲ್ಲಾ ಇಲ್ಲದಿದ್ದರೆ ಕಾಶ್ಮೀರ ಭಾರತದ್ದು ಆಗುತ್ತಿರಲಿಲ್ಲ. ಸುಗತ ಶ್ರೀನಿವಾಸರಾಜು ಅವರು ಶೇಖ್ ಅಬ್ದುಲ್ಲಾ ಅವರ ವ್ಯಕ್ತಿತ್ವವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ- ಶೇಖ್ ಅಬ್ದುಲ್ಲಾರನ್ನು ನೆಹರೂ ಸರ್ಕಾರ ಅನೇಕ ವರ್ಷಗಳ ಕಾಲ ಗೃಹಬಂಧನದಲ್ಲಿರಿಸಿ ಬಿಡುಗಡೆಗೊಳಿಸಿದ ನಂತರ ಅವರು ಪಾಕಿಸ್ತಾನಕ್ಕೂ ಒಮ್ಮೆ ಭೇಟಿ ನೀಡುತ್ತಾರೆ. ಆಗ ಪಾಕಿಸ್ತಾನದ ವಿದೇಶಾಂಗ ಸಚಿವರಾಗಿದ್ದ ಭುಟ್ಟೋ ಅವರು ಸ್ವತಃ ತಾವೇ ವಿಮಾನ ನಿಲ್ದಾಣಕ್ಕೆ ಬಂದು ಶೇಖ್‍ರನ್ನು ಸ್ವಾಗತಿಸುತ್ತಾರೆ. ಪಾಕಿಸ್ತಾನದಲ್ಲಿ ಅವರಿಗೆ ಭವ್ಯ ಸ್ವಾಗತ ಸಿಗುತ್ತದೆ. ಪಾಕಿಸ್ತಾನದ ಡಾನ್ ಪತ್ರಿಕೆ ‘ಶೇಖ್ ಅಬ್ದುಲ್ಲಾರಿಗೆ ನೆಹರೂ ಆಡಳಿತದ ಇಂಡಿಯಾ ಸಾಕಾಗಿ ಬೇಸತ್ತು ಹೋಗಿರಬೇಕು, ಕಾಶ್ಮೀರ ಪಾಕಿಸ್ತಾನಕ್ಕೆ ಸೇರಲು ಇದು ಸಕಾಲ’ ಎಂದೆಲ್ಲಾ ಬರೆಯುತ್ತದೆ. ಒಂದು ಬೃಹತ್ ಸಾರ್ವಜನಿಕ ಸಭೆಯಲ್ಲಿ ಪತ್ರಿಕಾಕರ್ತರು ಅದೇ ಪ್ರಶ್ನೆ ಕೇಳಿದಾಗ ಶೇಖ್ ಅವರ ಉತ್ತರ- ‘ನೆಹರೂ ಒತ್ತಡಕ್ಕೆ ಸಿಲುಕಿ ನನ್ನನ್ನು ಬಂಧನದಲ್ಲಿ ಇರಿಸಿದ್ದಿರಬಹುದು. ಆದರೂ ಆತ ನನ್ನ ಸ್ನೇಹಿತನೆ. ಭಾರತ ಜಾತ್ಯಾತೀತ ದೇಶ. ಕಷ್ಟವೋ ಸುಖವೋ ಕಾಶ್ಮೀರ ಜಾತ್ಯಾತೀತ ಭಾರತದಲ್ಲಿ ಇರಲು ಬಯಸುತ್ತದೆ. ಇಸ್ಲಾಮಿಕ್ ರಿಪಬ್ಲಿಕ್ ಎನಿಸಿಕೊಂಡಿರುವ ಪಾಕಿಸ್ತಾನಕ್ಕಂತೂ ಸೇರುವುದಿಲ್ಲ’ ಎಂದು ನೇರವಾಗಿ ಸ್ಪಷ್ಟವಾಗಿ ಉತ್ತರಿಸುತ್ತಾರೆ.

ಶೇಖ್ ಅಬ್ದುಲ್ಲಾ ಅವರು ಭಾರತಕ್ಕೆ ಹಿಂತಿರುಗುವಾಗ ಅವರನ್ನು ಬೀಳ್ಕೊಡುವುದಕ್ಕೆ ಒಬ್ಬರೂ ಇರುವುದಿಲ್ಲ! ಇದು ಕಾಶ್ಮೀರದ ಹೃದಯ. ಇದರ ಅರಿವಿಲ್ಲದ ಮೋದಿಶಾದ್ವಯರು ಕಾಶ್ಮೀರದ ನೆಲಕ್ಕೆ ಲಗ್ಗೆ ಇಟ್ಟರು. ಕಾಶ್ಮೀರಿ ಹೃದಯಕ್ಕೆ ಆಘಾತ ಮಾಡಿಬಿಟ್ಟರು. ಮೋದಿಶಾದ್ವಯರು ಚಕ್ರವರ್ತಿಯಂತೆ ನಡೆದುಕೊಳ್ಳಲಿಲ್ಲ, ಪಾಳೆಗಾರರಂತೆ ವರ್ತಿಸಿಬಿಟ್ಟರು.

ಕಾಶ್ಮೀರವನ್ನು ಛಿದ್ರಗೊಳಿಸಿದ್ದೂ ಕೂಡ ಭಾರತವೆಂಬ ಮುಳುಗುತ್ತಿರುವ ಹಡಗಿನ ಕಡೆ ಗಮನ ಹರಿಸದಿರಲಿ ಎಂಬುದಕ್ಕೇನೊ ಅನ್ನಿಸುತ್ತಿದೆ. ಹಾಗೇನೆ ಉತ್ತರನ ಪೌರುಷದಲ್ಲಿ ಉಪ ಪ್ರಸಂಗಗಳೂ ಆಗಾಗ ಬರುತ್ತದೆ. ‘ಒಂದೇ ಭಾಷೆ’ ಅನ್ನುವುದು ಆಗ ಯಾರೂ ಮುಳುಗಡೆ ಕಡೆ ನೋಡುವುದಿಲ್ಲ. ‘ಒಂದೇ ಸಲ ಚುನಾವಣೆ’ ಅನ್ನುವುದು ಆಗ ಯಾರೂ ಮುಳಗಡೆ ಕಡೆ ನೋಡುವುದಿಲ್ಲ. ಆರ್‍ಬಿಐ ಗೌರ್ನರ್ ಜಿಡಿಪಿ ಐದಕ್ಕಿಂತ ಕೆಳಗಿಳಿಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದಾಗ ಮಾರನೆ ದಿನವೇ `ಎರಡು ಪಾರ್ಟಿ ವ್ಯವಸ್ಥೆ’ ಅನ್ನುವುದು. ಆಗ ಯಾರು ಮುಳುಗಡೆ ಕಡೆ ನೋಡುವುದಿಲ್ಲ. ಏನೂ ಇಲ್ಲದಿದ್ದರೆ ‘ಮೈಸೂರ್ ಪಾಕ್ ನಮ್ಮದು’ ಅಂದು ಬಿಡುವುದು! ಹೀಗೆ ಸರ್ಕಾರ ನಡೆಯುತ್ತಿದೆ. ಭಾರತ ಎಂಬ ಹಡಗು ದಿನೇ ದಿನೇ ಮುಳುಗುತ್ತಿದೆ.

ಈ ಮುಳುಗಡೆ ಸಂದರ್ಭದಲ್ಲಿ ನಾವು ಮಾಡಬಹುದಾದರೂ ಏನು? ಉದ್ಯೋಗದ ಕುಸಿತ, ಜಿಡಿಪಿ ಕುಸಿತ, ಸಾರ್ವಜನಿಕ ಸಂಪತ್ತಿನ ಧ್ವಂಸ ಇವುಗಳನ್ನು ಸರ್ಕಾರದ `ಅಚ್ಚೇ ದಿನ್’, `ವೈಬ್ರೆಂಟ್ ಇಂಡಿಯಾ’ ಇತ್ಯಾದಿ, ಇತ್ಯಾದಿ ಬಾಣ ಬಿರುಸು ಬಿಟ್ಟು ಬೇರೆ ಕಡೆ ಗಮನ ಸೆಳೆದಷ್ಟೂ ಅದನ್ನು ಮೀರಿಸುವಂತೆ ಉದ್ಯೋಗದ ಕುಸಿತ, ಜಿಡಿಪಿ ಕುಸಿತ, ಸಾರ್ವಜನಿಕ ಸಂಪತ್ತಿನ ಧ್ವಂಸ ಇಂಥವುಗಳನ್ನು ಸಾರ್ವಜನಿಕ ಮಾತುಕತೆಯಾಗಿಸಬೇಕು. ಶ್ರೀಪಾದ ಭಟ್ ಒಂದು ಲೇಖನದಲ್ಲಿ ಹೇಳಿರುವಂತೆ `ಜನರ ನಿರೀಕ್ಷೆಗಳು ಮತ್ತು ಹತಾಶೆಗಳ ಆಳ ಮತ್ತು ಪ್ರಮಾಣವನ್ನು ಅರಿಯಬೇಕಾಗಿದೆ. ಬೌದ್ಧಿಕ ವಾಕ್ಚಾತುರ್ಯಕ್ಕಿಂತ ಪಿಸುಮಾತಿನ ಕನವರಿಕೆಗಳು ಜನ ಸಂಪರ್ಕಕ್ಕೆ ಅಗತ್ಯವಾಗಿದೆ. ಇವನ್ನು ಸಾಂಸ್ಕೃತಿಕ, ರಾಜಕೀಯ, ಆರ್ಥಿಕ ನೆಲೆಯಲ್ಲಿ ಅರಿತುಕೊಳ್ಳಬೇಕು.’