ಮುಟ್ಟಿಸಿದ ಪೆರಿಯಾರ್ ಮತ್ತು ಮುಟ್ಟಿಸಿಕೊಂಡ ಮಹಾದೇವ -ಡಾ.ಮೊಗಳ್ಳಿ ಗಣೇಶ್
(15.12.2024ರ ಆಂದೋಲನ ಪತ್ರಿಕೆಯ ‘ಹಾಡುಪಾಡು’ ಸಾಪ್ತಾಹಿಕ ಪುರವಣಿಯಲ್ಲಿ ಡಾ.ಮೊಗಳ್ಳಿ ಗಣೇಶ್ ಅವರ ಬರಹ)
ಇದೊಂದು ಐತಿಹಾಸಿಕ ಪ್ರಶಸ್ತಿ. ಆಗ ಬ್ರಿಟಿಷರ ಕಾಲದಲ್ಲಿ ಅಸ್ಪೃಶ್ಯರನ್ನು ಕೇರಳದ ಬೀದಿಗಳಲ್ಲಿ ನಡೆಯಲು ಬಿಡುತ್ತಿರಲಿಲ್ಲ. ಯಾರೂ ಕಾಣದಂತೆ ಮರೆಯಲ್ಲಿ ಬೆದರುತ್ತ ನಡೆಯಬೇಕಿತ್ತು. ಹೆಂಗಸರು ಮೇಲುಡುಪು ಧರಿಸುವಂತಿರಲಿಲ್ಲ. ಬ್ರಿಟಿಷರೂ ಅಸಹಾಯಕರಾಗಿದ್ದರು.
ಇವತ್ತಿನ ಮಾರ್ಕ್ಸ್‌ವಾದಿ ಕೇರಳ ಅವತ್ತು ಮಲಬಾರ್ ಪ್ರದೇಶವಾಗಿ ತಿರುವಾಂಕೂರು ರಾಜರ ಕ್ರೂರ ಆಡಳಿತಕ್ಕೆ ಒಳಪಟ್ಟಿತ್ತು. ಸ್ತನಗಂದಾಯವನ್ನೂ ವಿಧಿಸಿತ್ತು. ಇದಿರಲಿ; ಆಗ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಪೆರಿಯಾರ್ ರಾಮಸ್ವಾಮಿ ದ್ರಾವಿಡ ದೇಶದ ಹುಲಿಯಾಗಿದ್ದರು. ರಾಜರ ಎದುರು ನಿಂತರು. ತಿರುವಾಂಕೂರಿನ ಯಾವ ದೇವಾಲಯಗಳಿಗೂ ಅಸ್ಪೃಶ್ಯರಿಗೆ ಪ್ರವೇಶ ಇರಲಿಲ್ಲ. ಪೆರಿಯಾರ್ ದಲಿತರ ಪರ ನಿಂತರು. ದಲಿತರು ನಗರದ ಮುಖ್ಯ ರಸ್ತೆಗಳಲ್ಲಿ ತಿರುಗಾಡಲು, ಪ್ರಧಾನ ಸಮಾಜದ ಜೊತೆ ಬೆರೆಯಲು, ದೇವಾಲಯಗಳಲ್ಲಿ ಪ್ರವೇಶಿಸಲು ಸಂಪೂರ್ಣ ಅರ್ಹರು.
ಅವರು ನಮ್ಮಂತೆಯೇ ಮನುಷ್ಯರು ಎಂದು ಕೇರಳದ ತಿರುವಾಂಕೂರಿನ ವೈಕಂ ಮಹಾದೇವ ದೇಗುಲದ ಮುಂದೆ ಮೌನ ಸತ್ಯಾಗ್ರಹ ನಡೆಸಿದರು. ಇದಕ್ಕೆ ಉತ್ತರದಿಂದ ಗಾಂಧೀಜಿಯ ಬೆಂಬಲವೂ ಇತ್ತು. ನಿರಂತರ ಶಾಂತ ಚಳವಳಿ ಸಾಗಿತು. ಬ್ರಿಟಿಷರ ಹಿಡಿತ ರಾಜರ ಮೇಲೂ ಇತ್ತು. ಪಂಚಾಯ್ತಿ ನಡೆಯಿತು. ಅಂತಿಮವಾಗಿ ದಲಿತರಿಗೆ ಮುಕ್ತ ಪ್ರವೇಶ ಸಾಧ್ಯವಾಯಿತು. ಈ ಘಟನೆ ನಡೆದು ಭಾರತ ಇಂದು ಏನೇನೋ ಆಗಿದೆ. ಹೊಸ ಬಗೆಯ ಅಸ್ಪೃಶ್ಯತೆಗಳು ಬೆಳೆಯುತ್ತಲೇ ಇವೆ. ಇಲ್ಲಿ ಮುಖ್ಯ ಏನು ಎಂದರೆ ಪೆರಿಯಾರ್ ಅವರ ವೈಕಂ ಸತ್ಯಾಗ್ರಹ ಘಟಿಸಿ ಇಂದಿಗೆ ನೂರು ವರ್ಷಗಳು ಆಗಿವೆ.
ಅಂಬೇಡ್ಕರ್ ಇಂತಹ ಹೋರಾಟದ ಸಾಗರದಲ್ಲಿ ಅದೆಷ್ಟು ಸಲ ಮುಳುಗಿ ಎದ್ದಿದ್ದರೋ. ಪೆರಿಯಾರ್ ಅವರ ಶಿಷ್ಯರಾಗಿದ್ದ ಎಂ.ಕರುಣಾನಿಧಿಯವರ ಮಗ ಮತ್ತು ತಮಿಳುನಾಡಿನ ಈಗಿನ ಮುಖ್ಯಮಂತ್ರಿ ಸ್ಟಾಲಿನ್ ದ್ರಾವಿಡ ಭಾರತದಲ್ಲಿ ಅಸ್ಪೃಶ್ಯತೆ ನಾಶ ಆಗಬೇಕು ಎಂಬ ಆಶಯದಲ್ಲಿ ಐದು ಲಕ್ಷ ರೂಪಾಯಿಗಳ ‘ವೈಕಂ ಪ್ರಶಸ್ತಿ’ಯನ್ನು ಮೊದಲ ಬಾರಿಗೆ ನಮ್ಮ ದೇವನೂರ ಮಹಾದೇವ ಅವರಿಗೆ ಕೊಟ್ಟಿರುವುದು ಬಹಳ ಹೆಮ್ಮೆಯ ಸಂಗತಿ. ದೇವನೂರ ಮಹಾದೇವ ಸರ್ವಜನಾಂಗದ ತೋಟದ ಒಂದು ಹಣ್ಣಾದ ಹಣ್ಣು. ಅದನ್ನು ಅಷ್ಟು ಸುಲಭವಾಗಿ ಕಿತ್ತು ತಿನ್ನಲು ಸಾಧ್ಯವಿಲ್ಲ.
ಆ ಹಣ್ಣನ್ನು ತಿಂದು ಅರಗಿಸಿಕೊಳ್ಳಬೇಕಾದರೆ ಬಹಳ ದೊಡ್ಡ ಶಕ್ತಿ ಬೇಕು. ಸರಿಸುಮಾರು ಅರವತ್ತು ವರ್ಷಗಳಿಂದಲೂ ದೇವನೂರ ಮಹಾದೇವ ದಮನಿತರೆಲ್ಲರ ಪರ ಹೋರಾಟ ಮಾಡುತ್ತಲೇ ಬಂದವರು. ಸುಮ್ಮನೆ ಅವರನ್ನು ಕಿಡಿಗೇಡಿಗಳು ದಲಿತರ ನಾಯಕ, ಸಾಹಿತಿ, ಹೋರಾಟಗಾರ ಎನ್ನುತ್ತಾರೆ. ಪಂಪ ಹೇಳಿದ
‘ಮನುಷ್ಯ ಜಾತಿ ತಾನೊಂದೇ ವಲಂ’ ಎಂಬ ಮಾತಿಗೆ ಸಾರ್ಥಕ ಹೆಸರು ದೇವನೂರ ಮಹಾದೇವ. ನಿಜವಾದ ಸಾಹಿತಿಗೆ ಯಾವ ಜಾತಿಯೂ ಇಲ್ಲ. ದ್ವೇಷವೂ ಇಲ್ಲ. ಆದ್ದರಿಂದಲೇ ಅವರ ಒಂದು ಕಣ್ಣು ಗಾಂಧಿ, ಇನ್ನೊಂದು ಕಣ್ಣು ಅಂಬೇಡ್ಕರ್.
ಇವೆರಡು ಸೇರಿ ಆದದ್ದು ಅವರ ಸಾಹಿತ್ಯದ ಅಂತಃಕರಣದ ಕಣ್ಣು. ನಾನು ಬಿ.ಎ. ಓದುವಾಗ ಅವರು ಒಂದು ಚಳವಳಿ ಮಾಡಿದ್ದರು. ಚೌವಾರ್ ಕೆರೆಯ ನೀರಿನ ಹೋರಾಟವ ನೆನಪಿಸುತ್ತ, ‘ನಮ್ಮ ಸವರ್ಣೀಯರೇ, ನಮ್ಮ ಕೇರಿಗೂ ಬಂದು ಮಾರಿಗುಡಿಯಲ್ಲಿ ಹೊಸ ಮಡಕೆಯಲ್ಲಿ ಇಟ್ಟಿರುವ ನಮ್ಮ ನೀರು ಕುಡಿಯಿರಿ’ ಎಂದು ಕರೆ ಕೊಟ್ಟಿದ್ದರು. ಭಾಗಶಃ ನಲವತ್ತು ವರ್ಷಗಳ ಹಿಂದಿನ ಘಟನೆ ಇದು. ಯಾರೂ ಬಂದು ನೀರು ಕುಡಿಯಲಿಲ್ಲ. ಆದರೆ ದೇವನೂರ ಮಹಾದೇವ ಸಾಹಿತ್ಯದ ನೀರನ್ನು ಮುಟ್ಟದೆ, ಗುಟುಕರಿಸದೆ, ಗಟಗಟನೆ ಕುಡಿಯದೇ ಯಾರೂ ಮುಟ್ಟಿಸಿಕೊಳ್ಳದೆ ಹೋಗಲು ಸಾಧ್ಯವಿಲ್ಲ. ದೇವನೂರ ಮಹಾದೇವ ಸಾಹಿತ್ಯದ ಹಾದಿಯಲ್ಲಿ ನಡೆಯದವರು ಏನಾಗುವರೊ ಏನೋ. ದೇವನೂರ ಅವರನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ.
ಅವರಿಗೆ ಇಡೀ ನಾಡಿನ ತುಂಬಾ ವಿನಾಕಾರಣ ಕ್ಷುದ್ರ ಶತ್ರುಗಳಿದ್ದಾರೆ. ಅಂತಹವರನ್ನೂ ದೇವನೂರ ಮಹಾದೇವ ನಗುನಗುತ್ತ ಅಪ್ಪಿಕೊಂಡಿದ್ದಾರೆ. ಪೆರಿಯಾರ್ ಗರ್ಜಿಸಿದವರು. ದೇವನೂರ ಮಹಾದೇವ ಗರ್ಜಿಸಲೇ ಇಲ್ಲ. ಕೇಳಿಸದೇ ಇರುವ ಗರ್ಜನೆ ಮಹಾದೇವ ಎಂಬ ಈ ಮಾಯಾವಿಯದು. ಆ ಗರ್ಜನೆ ಹೆದರಿಸುವುದಿಲ್ಲ. ದಾಳಿ ಮಾಡುವುದಿಲ್ಲ. ಅಂತರಾಳವ ಕರಗಿಸಿಬಿಡುತ್ತದೆ. ಬಾಬಾಸಾಹೇಬರ ಗರ್ಜನೆ ಈಗಲೂ ಜಗತ್ತಿನಲ್ಲಿ ಮೊಳಗುತ್ತಲೇ ಇದೆ. ಕೇಳಿಸಬೇಕಾದವರಿಗೆ ಕೇಳಿಸುತ್ತಲೇ ಇದೆ. ಬದಲಾಗಬೇಕಾದವರು ಪರಿವರ್ತನೆ ಆಗುತ್ತಲೇ ಇದ್ದಾರೆ. ಜಾತ್ಯತೀತ ಪ್ರಶಸ್ತಿಯ ಈ ಎಚ್ಚರ ನಮ್ಮ ಕಾಲದ ರಾಜಕಾರಣದ, ಧರ್ಮದ ಎಚ್ಚರವೂ ಆಗಬೇಕು. ಮತೀಯ ಭಾರತ ಮದಗರೆಯುತ್ತಲೇ ಇರುವಾಗ ತಮಿಳುನಾಡಿನ ಸರ್ಕಾರ ಇಂತಹ ಒಂದು ಉನ್ನತ ಜಾತ್ಯತೀತ ವೈಕಂ ಪ್ರಶಸ್ತಿಯನ್ನು ಯಾವತ್ತೂ ಯೋಗ್ಯರಿಗೇ ಕೊಡಲಿ. ತಮಿಳುನಾಡು ಕಾವೇರಿ ವಿಷಯದಲ್ಲಿ ಎಷ್ಟೇ ರಾಜಕೀಯ ಮಾಡಲಿ. ಮಳೆಯ ನೀರು ಆಕಾಶದ ಮೋಡದಿಂದ ಬರುತ್ತದೆ. ಅದು ಸರ್ವರ ಜೀವಜಲ. ದೇವನೂರ ಮಹಾದೇವ ಕೂಡ ಮುಟ್ಟಿಸಿಕೊಳ್ಳುವ ಹೊಳೆ. ಅದಕ್ಕೆ ವಿಶ್ವದ ಸಂಬಂಧವಿದೆ. ದೇವನೂರ ಮಹಾದೇವ ಅವರಿಗೆ ಇನ್ನೂ ಉನ್ನತವಾದ ನೊಬೆಲ್ ಪ್ರಶಸ್ತಿ ಸಿಗಲಿ ಎನ್ನುವುದು ನನ್ನ ಆಸೆ.