ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ನಾಡಿನ ವಿವಿಧ ಕ್ಷೇತ್ರದ ಗಣ್ಯರಿಂದ ಕನ್ನಡಪ್ರಭದಲ್ಲಿ ಪತ್ರ

cm

[ನಾಡಿನ ವಿವಿಧ ಕ್ಷೇತ್ರದ ಗಣ್ಯರಿಂದ  ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಕನ್ನಡಪ್ರಭ  ಪತ್ರ ಬರೆಸಿ  24 & 25 ಮಾರ್ಚ್ 2016ರಂದು ಪ್ರಕಟಿಸಿದೆ. ಅದರ ವಿಸ್ತೃತ ಬರಹ ರೂಪ ಇಲ್ಲಿದೆ.-ಸಂಕಲನ -ಪಿ. ಓಂಕಾರ್ ]


*ಪತ್ರ- 1
ಮಾನ್ಯ ಸಿದ್ದರಾಮಯ್ಯನವರೇ,
ನಿಮಗೆ ನೆನಪಿರಲಿಕ್ಕೆ ಸಾಕು.ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಬೆಂಗಳೂರಿನಿಂದ ಬಳ್ಳಾರಿವರೆಗೆ ನೀವು ದೊಡ್ಡ ದಂಡಿನೊಂದಿಗೆ ಪಾದಯಾತ್ರೆ ಮಾಡಿದಿರಿ. ಲೋಕಾಯುಕ್ತ ನೀಡಿದ ಗಣಿ ವರದಿಯನ್ನು ಸರಕಾರ ಒಪ್ಪಬೇಕು;‘ ಬಳ್ಳಾರಿ ರಿಪಬ್ಲಿಕ್’ ಅನ್ನು ಮುರಿಯಬೇಕು ಎನ್ನುವುದು ನಿಮ್ಮ ಒತ್ತಾಯ ಮತ್ತು ಒತ್ತಾಸೆಯಾಗಿತ್ತು. ಈಗ ನೀವು ಅಧಿಕಾರಕ್ಕೆ ಬಂದ ಮೂರು ವರ್ಷ ಮುಗಿಯುತ್ತಾ ಬಂದಿತಲ್ಲ, ಲೋಕಾಯುಕ್ತ ನೀಡಿದ ಗಣಿ ವರದಿಯ ಮೇಲೆ ಕ್ರಮ ಕೈಗೊಳ್ಳಲು ನಿಮಗಿರುವ ಕಷ್ಟವಾದರೂ ಏನು?
ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದ ನೀವು ಈಗ ಮಾಡುತ್ತಿರುವುದೇನು? ನೀವು ಅಧಿಕಾರಕ್ಕೆ ಬಂದಾಗ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸಿ,ಲೋಕಾಯುಕ್ತರಿಗೆ ಪರಮಾಧಿಕಾರ ನೀಡುತ್ತೀರಿ, ಆ ಮೂಲಕ ಭ್ರಷ್ಟಾಚಾರದ ವಿರುದ್ಧದ ನಿಮ್ಮ ಹೋರಾಟ ಮುಂದುವರಿಯುತ್ತದೆ ಎಂದು ನಾಡು ನಿರೀಕ್ಷಿಸಿತ್ತು. ಆದರೆ, ಎರಡು ವರ್ಷದ ಹಿಂದೊಮ್ಮೆ, ಜನರ ಕಷ್ಟಕ್ಕೆ ಸ್ಪಂದಿಸುವ ಲೋಕಾಯುಕ್ತದ ಅಧಿಕಾರವನ್ನು ಮೊಟಕುಗೊಳಿಸಲು ಪ್ರಯತ್ನಿಸಿದಿರಿ. ಅದೃಷ್ಟವಶಾತ್ ಅದು ಶಾಸನ ಸಭೆಯ ಮುಂದೆ ಬರಲಿಲ್ಲ. ಈಗ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಅಧಿಕಾರವನ್ನು ಕಿತ್ತು ,ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ಕೊಡಲು ಮುಂದಾಗಿದ್ದೀರಿ. ಎಸಿಬಿ ಚರಿತ್ರೆ ಏನೆನ್ನುವುದು ನಿಮಗೆ ಗೊತ್ತಿಲ್ಲದ ಸಂಗತಿಯಲ್ಲ. ಎಂಬತ್ತರ ದಶಕದಲ್ಲಿ ಅದು ತನ್ನ ಹತ್ತು ವರ್ಷದ ಕಾರ್ಯ ನಿರ್ವಹಣೆಯಲ್ಲಿ 47 ಪ್ರಕರಣಗಳನ್ನಷ್ಟೆ ದಾಖಲಿಸಿತ್ತು. ಅದೆ,ಲೋಕಾಯುಕ್ತ 2006ರಿಂದ 2011ರ ವರೆಗೆ 750 ಪ್ರಕರಣಗಳಲ್ಲಿ ದಾಳಿ ನಡೆಸಿ, ದೊಡ್ಡ ದೊಡ್ಡ ಕುಳಗಳೂ ಸೇರಿ ಭ್ರಷ್ಟರನ್ನು ಬಲೆಗೆ ಕೆಡವಿದೆ.
ಇಂಥ ಸಂಸ್ಥೆಯನ್ನು ದುರ್ಬಲಗೊಳಿಸುವುದು ಸುತರಾಂ ಸರಿಯಲ್ಲ. ಕರ್ನಾಟಕದ ಲೋಕಾಯುಕ್ತ ಕಾಯಿದೆ ಸದನದ ಮೂಲಕ ಒಪ್ಪಿತ ಕಾಯಿದೆ, ಅದನ್ನು ಆಡಳಿತಾತ್ಮಕ ಆದೇಶದ ಮೂಲಕ ಬದಲಾಯಿಸುವ ಪ್ರಯತ್ನ ಒಳ್ಳೆಯದಲ್ಲ. ಮುಂದಿನ ಎರಡು ವರ್ಷದಲ್ಲಾದರೂ, ಈ ಸಂಸ್ಥೆಯನ್ನು ಬಲಗೊಳಿಸುವ ಪ್ರಯತ್ನ ಮಾಡಿ.
-ಸಂತೋಷ ಹೆಗ್ಡೆ, ನಿವೃತ್ತ ಲೋಕಾಯುಕ್ತರು
—-
*ಪತ್ರ-2
ನಿಮ್ಮ ಸರಕಾರ ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ಸಾಕಷ್ಟು ಮಾತನಾಡಿದೆ. ಆದರೆ, ಇವತ್ತಿಗೂ ಗ್ರಾಮಪಂಚಾಯಿತಿಗಳಲ್ಲಿ ಆತ್ಮಶಕ್ತಿ ಮೂಡಿಲ್ಲ. ಸರ್ಕಾರದ ಕೃಪಾಪೋಷಿತ ನಾಟಕ ಮಂಡಳಿಗಳಂತೆಯೇ ಕೆಲಸ ಮಾಡ್ತಿವೆ. ಕೇಂದ್ರ.ರಾಜ್ಯ ಸರಕಾರಗಳ ಹಲವು ಪರಿಣಾಮಕಾರಿ ಯೋಜನೆಗಳು ಜಾರಿಯಾಗಿದ್ದರೂ ಕೂಡ  ಅವುಗಳು ಜನರಿಗೆ ಮುಟ್ಟುತ್ತಿಲ್ಲ, ಪಂಚಾಯತ್ ರಾಜ್‌ನ ಮೂಲೋದ್ದೇಶವೇ ನೆರವೇರುತ್ತಿಲ್ಲ. ಸರ್ಕಾರದಿಂದ ಬಿಡುಗಡೆಯಾಗುವ ಹಣದಲ್ಲಿ ಹೆಚ್ಚುಪಾಲು ಮಧ್ಯವರ್ತಿಗಳ ಪಾಲೇ ಆಗುತ್ತಿದೆ. ಆಡಳಿತಶಾಹಿ ಎನ್ನುವುದು ನಿಜಕ್ಕೂ ಯಾಂತ್ರಿಕವಾಗಿದೆ. ಜನರೊಂದಿಗೆ ಆತ್ಮೀಯತೆ ಇಲ್ಲವಾಗಿದೆ.
ಗ್ರಾಮ ಪಂಚಾಯಿತಿ ಮೂಲಕ ಜನಶಕ್ತಿಯ ಆವಿರ್ಭಾವ ಆಗುತ್ತದೆಂದು ನಿರೀಕ್ಷಿಸಿದ್ದೆವು.  ಆದರೆ,ಅದೇ ಶುಷ್ಕವಾದ ಜೀವನ ಕ್ರಮ ಇದೆ. ಚುನಾವಣೆ,ಭ್ರಷ್ಟಾಚಾರ ಮುಂತಾದ ಸಂಗತಿಗಳು ನಿಮ್ಮ ಕಾಲದಲ್ಲೂ ಮುಂದುವರಿದಿವೆ.  ಶಕ್ತಿ ರಾಜಕಾರಣದಲ್ಲಿ ಇಂಥದನ್ನೆಲ್ಲ ಸುಲಭಕ್ಕೆ ನಿಯಂತ್ರಿಸಲಾಗದು ಎನ್ನುವುದೂ ಗೊತ್ತು. ಆದರೆ, ನೀವು ಅದನ್ನು ನಿಯಂತ್ರಿಸಲು ಪ್ರಯತ್ನವನ್ನೇ ಮಾಡಲಿಲ್ಲ. ನಿಮ್ಮ ಸುತ್ತಲಿದ್ದವರ ಮೇಲೆ ಭ್ರಷ್ಟಾಚಾರದ ಗಂಭೀರ ಆರೋಪಗಳು ಬಂದಾಗ ನೀವು ಮುಗುಮ್ಮಾಗಿ ಉಳಿದಿರಿ.. ನಿಮ್ಮ ಮೇಲೆ ಆರೋಪಗಳು ಬಂದಾಗಲೂ ನಿಮ್ಮ ಸಮರ್ಥನೆಗಳು ನ್ಯಾಯ ಸಮ್ಮತವಾಗಿರಲಿಲ್ಲ.
ನಿಮ್ಮ ಸುದ್ದಿ ಎತ್ತಿದರೆ ಜತೆಗೇ ಅಹಿಂದ ಪ್ರಸ್ತಾಪವಾಗುತ್ತದೆ. ಇಷ್ಟು ದೀರ್ಘ ಕಾಲ ಕರ್ನಾಟಕದಲ್ಲಿ ರಾಜಕಾರಣ ಮಾಡಿದ ನಿಮಗೆ ಇಂಥ ಆಸರೆಗಳು ಅನಿವಾರ್ಯವಾಗಿದ್ದು ದುರಂತ. ನೀವು ಇಡೀ ಕರ್ನಾಟಕದ ಮುಖ್ಯಮಂತ್ರಿ. ಯಾವುದೇ ಚೌಕಟ್ಟಿಗೆ ಸೀಮಿತವಾಗದೆ, ಬ್ರಾಂಡ್ ಆಗದೆ, ಸಮಗ್ರ ಕರ್ನಾಟಕದ ಬಡವರು,ದುರ್ಬಲರೆಲ್ಲರ ಕಲ್ಯಾಣ ಮತ್ತು ಕ್ಷೇಮದ ದೃಷ್ಟಿಯಿಂದ ಕಾರ್ಯಕ್ರಮಗಳನ್ನು ಹಾಕಿಕೊಂಡು ಮುನ್ನಡೆಯಿರಿ.
-ಸುರೇಂದ್ರ ಕೌಲಗಿ,ಹಿರಿಯ ಗಾಂಧಿವಾದಿ,ಮೇಲುಕೋಟೆ
—-
* ಪತ್ರ-3
ಪ್ರಿಯ ಸಿದ್ದರಾಮಯ್ಯನವರೇ,
ನಿಮ್ಮ ಸರ್ಕಾರ  ಈ ಮೂರು ವರ್ಷದಲ್ಲಿ  ಅಕ್ಕಿಭಾಗ್ಯ,ರಸ್ತೆಭಾಗ್ಯ ಸೇರಿದಂತೆ ಒಂದಷ್ಟು ಲೋಕೋಪಯೋಗಿ ಕೆಲಸಗಳನ್ನು ಮಾಡಿರಬಹುದು. ಅದಕ್ಕೆಲ್ಲ ಮುಖ್ಯಮಂತ್ರಿ,ಮಂತ್ರಿಗಳೇ ಬೇಕಿಲ್ಲ. ಅಧಿಕಾರಶಾಹಿಯೇ  ಮಾಡಿಕೊಂಡು ಹಾಗುತ್ತಿದೆ. ಈ ಮೂರು ವರ್ಷ ಸಾಕಷ್ಟು ಗದ್ದಲ,ಗಲಾಟೆಯಲ್ಲೇ ಮುಗಿದು ಹೋಯಿತು ಎಂದು ನಿಮಗೂ ಅನ್ನಿಸಿದೆ. ಉಳಿದ ಎರಡು ವರ್ಷದಲ್ಲಿ ಏನನ್ನಾದರೂ ಉಳಿಯುವಂತ ಒಳಿತನ್ನು ಮಾಡಬೇಕೆಂದು ಆಪ್ತರ ಬಳಿ ಹೇಳಿಕೊಂಡಿದ್ದೀರಿ. ನಿಮ್ಮ ಈ ಕಾಳಜಿ ಕಾರ್ಯಗತವಾಗಲಿ. ಸುತ್ತ ಮುತ್ತಲಿದ್ದವರು ಅದಕ್ಕೆಲ್ಲ ಆಸ್ಪದ ನೀಡಲಿ ಅಥವ ನೀವೇ ಅಂಥವರನ್ನೆಲ್ಲ ಆಚೆಗಟ್ಟಿ, ಜನೋಪಯೋಗಿ ಕೆಲಸ ಮಾಡಿ.
ಈಚೆಗಿನ ದಶಕಗಳಲ್ಲಿ ವಿಧಾನಸಭೆ ನಡೆಯುತ್ತಿರುವ ರೀತಿ ನಿಜಕ್ಕೂ ಬೇಸರ ಹುಟ್ಟಿಸುವಂತದ್ದು. ಮಸೂದೆಗಳು ಯಾವುದೇ ಚರ್ಚೆ ಇಲ್ಲದೆ ಅಂಗೀಕಾರಗೊಳ್ಳುತ್ತವೆ. ಹಿಂದೆ ನೀವು ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತಿದ್ದಾಗ ಅದನ್ನೇ ಮಾಡಿದ್ದಿರಿ. ಈಗ ಪ್ರತಿಪಕ್ಷದಲ್ಲಿ ಕುಳಿತವರು ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಆಡಳಿತ-ವಿರೋಧ ಪಕ್ಷಗಳ ಇಂಥ ಮೇಲಾಟದಲ್ಲಿ ಪ್ರಜೆಗಳಿಗೆ ಅನ್ಯಾಯವಾಗುತ್ತಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ.  ಆಡಳಿತ -ಪ್ರತಿಪಕ್ಷಗಳು ಸೇರಿ ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡಬೇಕು. ಹೇಗೊ ,ಮೂರು ವರ್ಷ ಕಳೆದುಹೋಗಿದೆ. ಉಳಿದ ಎರಡು ವರ್ಷದಲ್ಲಾದರೂ ಉತ್ತಮ ಕೆಲಸ ಮಾಡಿ.
ದೇವರಾಜ ಅರಸು ಅವರು ತುಳಿತಕ್ಕೊಳಗಾದ ಸಮುದಾಯಗಳಿಗೆ ತಾಯಿಯಾದರು. ಜಮೀನ್ದಾರರ ಸರ್ವಾಧಿಕಾರವನ್ನು ಬಗ್ಗುಬಡಿದು,ಗೇಣಿ ಮಾಡುತ್ತಿದ್ದವರೇ ಭೂಮಿ ಒಡೆಯರಾಗುವಂತೆ ಮಾಡಿದರು.  ಇನ್ನೊಂದು ಬಾಕಿ ಉಳಿದಿದೆ. ಭೂ ಮಿತಿ ಶಾಸನವನ್ನು ಕಡ್ಡಾಯವಾಗಿ ಜಾರಿಗೆ ತಂದು, ಮಿತಿಗಿಂತ ಹೆಚ್ಚು ಭೂಮಿ ಇರುವವರಿಂದ ಅದನ್ನು ವಾಪಸ್ ಪಡೆದು ಒಂದೆರಡು ಎಕರೆ ಇರುವವರಿಗೆ, ಭೂಮಿಯೇ ಇಲ್ಲದವರಿಗೆ ಹಂಚಬೇಕು. ಅರಸು ಶತಮಾನೋತ್ಸವ  ಆಚರಣೆ ಸಂದರ್ಭದಲ್ಲಿ ನಿಮ್ಮ ಸರ್ಕಾರ ಇಂಥ ಜನಕಲ್ಯಾಣದ ಕೆಲಸಕ್ಕೆ ಮುಂದಾಗಲಿ. ನಿಮಗೆ ಗೊತ್ತಿರಲಿ. ಒಂದೆರಡು ಎಕರೆ ಭೂಮಿ ಇರುವ ಕುಟುಂಬಗಳು ಆ ಭೂಮಿಯಲ್ಲಿ ಹೊಟ್ಟೆ ಹೊರೆದುಕೊಳ್ಳಲಾಗದೆ, ವರ್ಷದ ಐದಾರು ತಿಂಗಳು ಕಾಫಿ ತೋಟಗಳಿಗೆ ವಲಸೆ ಹೋಗುತ್ತವೆ. ಅಂಥವರಿಗೆ ತಮ್ಮದೆ ಭೂಮಿಯಲ್ಲಿ ದುಡಿದು ಬದುಕು ಕಟ್ಟಿಕೊಳ್ಳುವ ಚೈತನ್ಯ ತುಂಬಬೇಕಾದುದು ಸರ್ಕಾರದ ಜವಾಬ್ದಾರಿ. ಅದೇನು ಕಷ್ಟವಲ್ಲ. ನಿಮ್ಮ ಸರ್ಕಾರ 50 ಎಕರೆ ಭೂಮಿ ಮಿತಿ ನಿಗದಿ ಪಡಿಸಿದರೆ, 100 ಎಕರೆ ಇರುವವನಿಂದ 50 ಎಕರೆ ವಾಪಸ್ ಪಡೆಯಬಹುದು. 60 ಎಕರೆ ಇದ್ದರೆ 10, 54 ಎಕರೆ ಇದ್ದರೆ 4 ಎಕರೆ ವಾಪಸ್ ಬರುತ್ತದೆ. ನಮ್ಮಲ್ಲಿ ಬಡವರು ಶೇ.60ಕ್ಕಿಂತ ಹೆಚ್ಚಿದ್ದಾರೆ. ಶ್ರೀಮಂತರಿರುವುದು ಶೇ.10.ಹದಿನೈದು ಇಪ್ಪತ್ತು ಎಕರೆ ಇರುವ ಮಧ್ಯಮವರ್ಗದವರಿರುವುದು ಶೇ.30. ಬಡವರಾದವರಿಗೆ ಕನಿಷ್ಠ 5 ಎಕರೆ ಭೂಮಿ ಹಂಚಿಕೆಯಾಗುವಂತಾದರೆ; ಏನೂ ಇಲ್ಲದ ಕೃಷಿ ಕಾರ್ಮಿಕರಿಗೆ ಒಂದಷ್ಟು ಭೂಮಿ ಸಿಗುವಂತಾದರೆ ನಿಜಕ್ಕೂ ಅದೊಂದು ಕ್ರಾಂತಿಕಾರಕ ಕೆಲಸ ಆಗುತ್ತದೆ;ಬಡತನವೂ ನೀಗುತ್ತದೆ.
ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು ಎಂದು ದಶಕಗಳಿಂದಲೂ ಎಲ್ಲರೂ ಹೇಳುತ್ತಿದ್ದೇವೆ. ಆದರೆ, ಬೀಡಿ ಕಟ್ಟಿ ಮಾರುವವನು ಎಲೆ, ಹೊಗೆಸೊಪ್ಪು, ದಾರ,ಶ್ರಮ ಎಲ್ಲವನ್ನೂ ಆಧರಿಸಿ ಬೀಡಿಯ ಬೆಲೆ ನಿಗದಿ ಮಾಡುತ್ತಾನೆ. ಆದರೆ, ರೈತ ತಾನು ಬೆಳೆದ ಬೆಳೆ ಮತ್ತು ಆದ ಖರ್ಚಿನ ಅನ್ವಯ ಬೆಲೆ ನಿಗಿದಿಪಡಿಸಿಕೊಳ್ಳುವ ಹಕ್ಕು ಹೊಂದಿಲ್ಲ. ಯಾರೋ ದಲ್ಲಾಳಿ  ದರ ನಿಗದಿ  ಮಾಡಿ ತಾನು ಕುಳಿತಲ್ಲೇ ಲಾಭ ಮಾಡಿಕೊಳ್ಳುತ್ತಾನೆ. ಈ ಎರಡು ವರ್ಷದಲ್ಲಾದರೂ ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಿ.
ಹಳ್ಳಿಯಲ್ಲೇ ಹುಟ್ಟಿದ ನಿಮಗೆ ಹಳ್ಳಿಗಳ ವಿಷಯವನ್ನು ಹೇಳಬೇಕಿಲ್ಲ. ಆದರೂ, ಹಳ್ಳಿಗಳ ಉದ್ಧಾರಕ್ಕೆ ಅರ್ಥಪೂರ್ಣವಾದುದನ್ನು ಮಾಡಿದ್ದು ಕಾಣುವುದಿಲ್ಲ. ವ್ಯವಸಾಯದಿಂದಷ್ಟೆ ಹಳ್ಳಿಗಳಲ್ಲಿ ಬದುಕು ಕಟ್ಟಿಕೊಳ್ಳುವುದು ಅಸಾಧ್ಯವೆನಿಸುವ ಸ್ಥಿತಿ ಇದೆ. ಆದ್ದರಿಂದ ಮೂರು- ನಾಲ್ಕು ಹಳ್ಳಿಗೆ ಒಂದೊಂದು , ಸೂಕ್ತ ಎನ್ನಿಸುವ ಉದ್ಯಮವನ್ನು; ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಿ. ಅವು  ಕೃಷಿಗೆ ಪೂರಕ, ಉತ್ಪನ್ನಗಳ ಮೌಲ್ಯ ವರ್ಧಿಸುವ ಉದ್ಯಮಗಳಾಗಿದ್ದರೆ ಸೂಕ್ತ.  ಹಳ್ಳಿಗಳ ಜನರಿಗೆ ಉದ್ಯೋಗವೂ ಸಿಗುತ್ತದೆ. ಬೆಳೆಯ ಮೌಲ್ಯವರ್ಧನೆ ಆಗುವುದರಿಂದ ಉತ್ತಮ ಬೆಲೆಯೂ ಸಿಗುತ್ತದೆ. ಹಳ್ಳಿಗಳ ಆರ್ಥಿಕತೆಯೂ ಹೆಚ್ಚುತ್ತದೆ.
ರಾಜ್ಯದೆಲ್ಲೆಡೆ ಅಂತರ್ಜಲ ಪಾತಳಕ್ಕಿಳಿದಿದೆ. ಅವೈಜ್ಞಾನಿಕವಾಗಿ ಕೊಳವೆ ಬಾವಿ ತೋಡಿಸುವುದಕ್ಕೆ ಕಡಿವಾಣ ಹಾಕಿ ಮತ್ತು ಜಲ ಮರುಪೂರಣ, ಕೆರೆ ಹೂಳೆತ್ತುವುದೇ ಮುಂತಾದ ಕ್ರಮಗಳ ಮೂಲಕ ಅಂತರ್ಜಲ ವೃದ್ಧಿಗೆ ಆದ್ಯ ಗಮನ ಹರಿಸಿ.   ಸರಕಾರಿ ಕಚೇರಿ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು, ಸೌರ ವಿದ್ಯುತ್ ಯೋಜನೆಗಳನ್ನು ಕಡ್ಡಾಯ ಅನುಷ್ಟಾನಕ್ಕೆ ತಂದು ಜನಪ್ರಿಯ ಗೊಳಿಸಿ.
ಸರ್ಕಾರಿ ಪ್ರಾಥಮಿಕ,ಮಾಧ್ಯಮಿಕ ಶಾಲೆಗಳನ್ನು  ಮತ್ತಷ್ಟು ಆಕರ್ಷಕ ಗೊಳಿಸುವ ಪ್ರಯತ್ನ ಸರ್ಕಾರಿ ಶಾಲೆಯಲ್ಲಿಯೇ ಓದಿದ ನಿಮ್ಮಿಂದಲ್ಲದೆ ಯಾರಿಂದ ನಿರೀಕ್ಷಿಸಲು ಸಾಧ್ಯ?  ಸಾಕಷ್ಟು ಒಳಿತನ್ನು ಮಾಡಿದ್ದೀರಿ. ಆದರೆ, ಅದು ಸಾಲುವುದಿಲ್ಲ. ಅತ್ಯುತ್ತಮ ಉಪಾಧ್ಯಯರನ್ನು ನೇಮಿಸಿ. ಪ್ರಾಥಮಿಕ ಶಿಕ್ಷಣದಲ್ಲಿ ಬಡವ-ಬಲ್ಲಿದ ಭೇದವನ್ನು;ಶೈಕ್ಷಣಿಕ ಅಸಮಾನತೆಯನ್ನು  ಹೋಗಲಾಡಿಸಲು ಕ್ರಮ ಕೈಗೊಳ್ಳಿ . ನಿಮ್ಮ ಕಾಲದಲ್ಲೇ ಗಿರಿಜನರು -ಹರಿಜನರು ಆರ್ಥಿಕವಾಗಿ ಸದೃಢರಾಗಬೇಕು. ಇವತ್ತಿನ ಕಾಲದಲ್ಲಿ ದುಡ್ಡಿಗೇ ಬೆಲೆ. ಅವರ ಉದ್ಧಾರಕ್ಕೆ ಏನೇನೊ ಯೋಜನೆ ಮಾಡಿರಬಹುದು. ಅವೆಲ್ಲ ಅವರನ್ನು ತಲುಪಿದ್ದರೆ ಸ್ಥಿತಿ ಇನ್ನೂ ಹೀಗೆ ಇರುತ್ತಿರಲಿಲ್ಲ. ದುರ್ಬಲರ ಹೆಸರಿನಲ್ಲಿ ಮಾಡಿದ ಯೋಜನೆಗಳು ಅಗತ್ಯ ಇರುವ ಫಲಾನುಭವಿಗಳನ್ನು ತಲುಪುತ್ತಿವೆಯೇ ಅಂತ ಒಮ್ಮೆ ಚಿತ್ತವಿಟ್ಟು ನೋಡಿ. ಯಾರದೋ ಹೆಸರಿನಲ್ಲಿ ಇನ್ನ್ಯಾರೋ ಉದ್ಧಾರವಾಗುತ್ತಿರುವುದನ್ನು ತಪ್ಪಿಸಿ.  ನೀವು ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಸಾರ್ವಜನಿಕವಾಗಿ ಬೇರೆಯದೇ ಅಭಿಪ್ರಾಯ ಮೂಡಲು ಇದೂ ಕಾರಣ ಎನ್ನುವುದು ನಿಮ್ಮ ಅರಿವಿನಲ್ಲಿರಲಿ.
-ಎಚ್.ಎಸ್.ದೊರೆಸ್ವಾಮಿ, ಹಿರಿಯ ಸ್ವಾತಂತ್ರ್ಯಹೋರಾಟಗಾರರು,ಬೆಂಗಳೂರು
——–
*ಪತ್ರ-4
ನಿಮ್ಮ ಸರಕಾರದ ರಾಜಕೀಯ ಹಾಗೂ ಆರ್ಥಿಕ ಕಾರ್ಯಕ್ರಮಗಳು ನಿಮ್ಮ ರಾಜಕೀಯ ವಿರೋಧಿಗಳ ಕಾರ್ಯಕ್ರಮದ ಹೋಲಿಕೆಯಲ್ಲಿ ಹೆಚ್ಚು ಜನಪರವಾಗಿಯೇ ಇವೆ. ಹಾಗಿದ್ದೂ ನಿಮ್ಮ ಜನಪ್ರಿಯತೆ ಕುಂಠಿತವಾಗಿರುವ ಅಪಾಯವಿದೆ. ಕಾರಣವೆಂದರೆ, ಸರಿಯಾದ ಆರ್ಥಿಕ ಹಾಗೂ ರಾಜಕೀಯ ಕಾರ್ಯಕ್ರಮಗಳನ್ನು ರೂಪಿಸುವುದು ಮಾತ್ರವೇ ಸರ್ವಸ್ವವೂ ಅಲ್ಲ. ಕಾರ್ಯಕ್ರಮಗಳು ಯಶಸ್ವಿಯಾಗಿ ಜಾರಿಗೆ ಬರುವಂತೆ ಮಾಡುವುದು, ಹಾಗೂ ಸರಕಾರವೂ ಜನರ ಕಣ್ಣಿನಲ್ಲಿ ನಂಬಿಕಾರ್ಹವಾಗುವುದು ಅಷ್ಟೇ ಮುಖ್ಯ. ಈ ಎರಡೂ ಸಂಗತಿಗಳಲ್ಲಿ ನಿಮ್ಮ ಸರಕಾರವು ಹಿಂದೆ ಬಿದ್ದಿದೆ. ಖಂಡಿತಕ್ಕೂ ಆಡಳಿತ ಯಂತ್ರವನ್ನು ಚುರುಕುಗೊಳಿಸಬೇಕಿದೆ ಹಾಗೂ ಜನಪರಗೊಳಿಸಬೇಕಿದೆ.ಇದು ಮುಖ್ಯಮಂತ್ರಿಯಾಗಿ ನಿಮ್ಮಿಂದಲೆ ಆರಂಭವಾಗಬೇಕು. ಚುರುಕುತನ ಹಾಗೂ ಪ್ರಾಮಾಣಿಕತೆಗಳು ನಿಮ್ಮ ಇತರೆ ಮಂತ್ರಿಗಳ ಮಟ್ಟಕ್ಕೆ ಇಳಿಯಬೇಕು. ಅಲ್ಲಿಂದ ಅದು ಅಧಿಕಾರಿಗಳ ಮಟ್ಟಕ್ಕೆ ಇಳಿಯಬೇಕು. ಪ್ರತಿಯೊಂದು ಪಂಚಾಯಿತಿಯ ಮಟ್ಟಕ್ಕೆ ಇಳಿಯಬೇಕು.
ರಾಜಕಾರಣದಲ್ಲಿಯೂ ಸಹ ಇತರೆ ರಂಗಗಳಂತೆಯೇ ನೈತಿಕ ಪ್ರಜ್ಞೆ ಮುಖ್ಯವಾದದ್ದು. ಒಬ್ಬ ರಾಜಕಾರಣಿ ಬಡವರ ಪರವಾಗಿ ಮಾತನಾಡಿದರೆ ಸಾಲದು ಬಡವರಂತೆಯೇ ಸರಳ ಬದುಕು ಬದುಕಬೇಕು. ನಿಮ್ಮ ಸರಕಾರವು ನಿಮ್ಮ ವಿರೋಧಿಗಳ ಸರಕಾರಗಳ ಹೋಲಿಕೆಯಲ್ಲಿ ಮೇಲೆದ್ದು ನಿಲ್ಲಬೇಕೆಂದರೆ ನೀವೂ ಸೇರಿದಂತೆ ನಿಮ್ಮ ಸರಕಾರದ ಎಲ್ಲರೂ ಶುದ್ಧವೂ,ಸರಳವೂ,ಶಾಂತವೂ ಹಾಗೂ ಔಚಿತ್ಯಪೂರ್ಣವಾದ ನಡತೆಯನ್ನು ತೋರಬೇಕು.  ಈ ನಿಟ್ಟಿನಲ್ಲಿ ವಾಚಿನ ಹಗರಣ ನಿಮಗೊಂದು ಕರೆಗಂಟೆ. ಇಷ್ಟೇ ಡೌಲಿನಿಂದ ಅಥವಾ ಇದಕ್ಕಿಂತ ಹೆಚ್ಚಿನ ಡೌಲಿನಿಂದ ನಿಮ್ಮ ವಿರೋಧಿಗಳು ಬದುಕುತ್ತಿದ್ದಾರೆ ನಿಜ. ಆದರೆ, ಜನರು ತಮ್ಮ ನಾಯಕನಲ್ಲಿ ಡೌಲನ್ನು ನಿರೀಕ್ಷಿಸುವುದಿಲ್ಲ. ತನ್ನ ನಾಯಕನು ತನ್ನಂತೆಯೇ ಬದುಕಲಿ ಎಂದು ಜನರು ಬಯಸುತ್ತಾರೆ. ಜನರು ಸಂಕಷ್ಟದಲ್ಲಿದ್ದರೆ ನಾಯಕರೂ ಸಂಕಷ್ಟದಲ್ಲಿ ಉಳಿಯಬೇಕು. ಜನರಿಗೆ ನೀರು ನೆರಳು ಇಲ್ಲದಿದ್ದರೆ ನಾಯಕರಿಗೂ ನೀರು ನೆರಳು ಇರಬಾರದು. ಜನರಿಗೆ ಬರಗಾಲದ ಬವಣೆ ಕಾಡುತ್ತಿದ್ದರೆ ನಾಯಕರನ್ನೂ ಅದೇ ಬವಣೆಗಳು ಕಾಡಬೇಕು.
– ಪ್ರಸನ್ನ, ಹಿರಿಯ ರಂಗಕರ್ಮಿ, ಸುಸ್ಥಿರ ಬದುಕಿನ ಹೋರಾಟಗಾರ
———-
*ಪತ್ರ-5
ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾದಾಗ ಸಂತೋಷ-ಸಂಭ್ರಮಪಟ್ಟವರಲ್ಲಿ ನಾನೂ ಒಬ್ಬ. ಬಹಳ ವರ್ಷಗಳ ಪರಿಚಯದ ಅವರು ನನಗೆ ನೇರ, ಪ್ರಾಮಾಣಿಕ ಮತ್ತು ಸಾಮಾಜಿಕ ನ್ಯಾಯದ ಅರಿವು ಮತ್ತು ಬದ್ಧತೆಯುಳ್ಳ ಮನುಷ್ಯರಾಗಿ ಕಂಡಿದ್ದರು. ಆದರೆ ನನಗೆ ಈಗ ನಿರಾಶೆಯಾಗಿದೆ. ಅವರು ನನ್ನಂತಹ ಅವರ ಅನೇಕ ಸಮಾಜವಾದಿ ಗೆಳೆಯರ ನಿರೀಕ್ಷೆಗಳನ್ನು ಹುಸಿ ಮಾಡಿದ್ದಾರೆ. ವಿಶೇಷವಾಗಿ, ಇತ್ತೀಚೆಗೆ ಅವರ ಸಮಾಜವಾದಿ ಹಿನ್ನೆಲೆಯ ಪ್ರಸ್ತಾಪದೊಂದಿಗೆ ಅವರ ವಿರುದ್ಧ ಭ್ರಷ್ಟಾಚಾರ ಮತ್ತು ದುರಾಡಳಿತದ ಆರೋಪಗಳು ಕೇಳಿಬರುತ್ತಿರುವ ಹೊತ್ತಿನಲ್ಲಿ ಈ ನಿರಾಶೆ ಹತಾಶೆಯಾಗಿ ಪರಿವರ್ತಿತವಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಅವರ ಆಡಳಿತಾವಧಿಯಲ್ಲಿ ಕರ್ನಾಟಕ ಏನಾಗಿದೆ ಎಂದು ನೋಡಿದರೆ, ಎದ್ದು ಕಾಣುವ ಎರಡು ಮುಖ್ಯ ಅಂಶಗಳೆಂದರೆ, ಅದು ಹೆಚ್ಚು ಭ್ರ್ರಷ್ಟವಾಗಿದೆ; ಜಾತಿವಾದಿಯಾಗಿದೆ. ಇಂದು ರಾಜ್ಯ ಸರ್ಕಾರದ ಯಾವುದೇ ಹಂತದ ಯಾವುದೇ ಕಛೇರಿಗೆ ಹೋದರೂ ಈ ಎರಡು ಸಂಗತಿಗಳು ಕಣ್ಣಿಗೆ ಹೊಡೆದು ಜಿಗುಪ್ಸೆ ಹುಟ್ಟಿಸುತ್ತವೆ. ಸಿದ್ಧರಾಮಯ್ಯ ಸಮಾಜವಾದಿ ಕಾರ್ಯಕ್ರಮಗಳೆಂದು ಬಗೆದು ಜಾರಿಗೆ ತಂದ ಹಲವು ಭಾಗ್ಯಗಳ ನಡುವೆಯೇ ಈ ಅವನತಿ ಆಗಿದೆ ಅಂದರೆ, ಸಿದ್ಧರಾಮಯ್ಯನವರ ಸಮಾಜವಾದದ ಕಲ್ಪನೆ ಎಷ್ಟು ಮೇಲ್ಮೈ ಸ್ತರದ್ದು ಎಂಬುದು ಗೊತ್ತಾಗುತ್ತದೆ.
ಸಿದ್ದರಾಮಯ್ಯ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಸೇರುವ ಮುನ್ನ ನಡೆಸಿದ ಒಂದು ಅಹಿಂದ ಸಮಾವೇಶದಲ್ಲಿ ನಾನು ಅವರಿಗೆ ಅಹಿಂದವಾದವೇ ಸಮಾಜವಾದವಲ್ಲ; ಅದೇನಿದ್ದರೂ ನಿಜಫಲ ಕೊಡುವಂತಾಗುವುದು, ಅದು ಇಡೀ ಸಮಾಜದ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡಿರುವ ಸಮಾಜವಾದಿ ರಾಜಕಾರಣದ ಭಾಗವಾಗಿ ಕ್ರಿಯಾಶೀಲವಾದಾಗ ಮಾತ್ರ. ಇಲ್ಲದೆ ಹೋದರೆ ಅದು ದುಷ್ಟ ಮತ್ತು ಭ್ರಷ್ಟ ರಾಜಕಾರಣಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದ್ದೆ. ನನ್ನ ಆ ಮಾತು ಅಂದಿನ ಸಭಿಕರನ್ನೂ, ಬಹುಶಃ ಸಿದ್ದರಾಮಯ್ಯನವರನ್ನೂ ರೇಗಿಸಿತ್ತು.
ಸಮಾಜವಾದಿಗಳೆಂದು ಕರೆದುಕೊಂಡ/ಕೊಳ್ಳುವ ನಮ್ಮ ಬಹಳಷ್ಟು ರಾಜಕಾರಣಿಗಳಂತೆಯೇ ಸಿದ್ಧರಾಮಯ್ಯ ಕೂಡ ಸಮಾಜವಾದವೆಂದರೆ ಅದೊಂದು ದರ್ಶನ ಎಂಬುದರ ಅರಿವೇ ಇಲ್ಲದವರಂತೆ, ಅದನ್ನು ದುರ್ಬಲರಿಗೆ ಕಾಣಿಕೆ ನೀಡುವ ಕಾರ್ಯಕ್ರಮವೆೆಂದಷ್ಟೇ ಭಾವಿಸಿ ನಡೆದಿದ್ದಾರೆ. ರಾಜಕಾರಣದ ಈ ಸರಳೀಕರಣ ಅವರನ್ನು ಅವರ ರಾಜಕಾರಣದ ಎಲ್ಲ ನೆಲೆಗಳಲ್ಲೂ ದಾರಿ ತಪ್ಪಿಸಿ ಅವರನ್ನಿಂದು ಕಷ್ಟಕ್ಕೆ ಸಿಲುಕಿಸಿದೆ. ಅವರ ನೇರ ನಡೆ ನುಡಿಗಳ ವ್ಯಕ್ತಿತ್ವ ಈಗ ಅನುಮಾನಾಸ್ಪದವೆನ್ನಿಸಿದೆ. ಇದರಿಂದಾಗಿ ಮುಂದಿನ ಚುನಾವಣೆಗಳ ಹೊತ್ತಿಗೆ ಕರ್ನಾಟಕದ ರಾಜಕಾರಣ ಇನ್ನಷ್ಟು ಅನುಮಾನಾಸ್ಪದ ನಡೆ ನುಡಿಗಳ ವ್ಯಕ್ತಿತ್ವಗಳ ಕೈಗೆ ಸಿಲುಕುವ ಅಪಾಯವನ್ನು ಎದುರಿಸುತ್ತಿದೆ. ಆ ಅಪಾಯವೇನಾದರೂ ಸಂಭವಿಸಿದರೆ ಅದಕ್ಕೆ ಸಿದ್ಧರಾಮಯ್ಯನವರೇ ಹೊಣೆಗಾರರಾಗಬೇಕಾಗುತ್ತದೆ. ಆದುದರಿಂದ ಅವರು ಈಗಲಾದರೂ ಅಹಿಂದವಾದದ ಹಳ್ಳದಿಂದೆದ್ದು ಬಂದು ನಿಜ ಸಮಾಜವಾದಿ ದರ್ಶನದ ಕಡೆ ಮುಖ ಮಾಡಬೇಕಿದೆ. ಈ ಬಾರಿ ಅವರ ಮುಂಗಡ ಪತ್ರ ನೋಡಿದರೆ, ಅವರಲ್ಲೊಂದಿಷ್ಟು ಬದಲಾವಣೆ ಕಾಣುತ್ತದೆ. ಕಾದು ನೋಡಬೇಕಷ್ಟೆ.
– ಡಿ.ಎಸ್.ನಾಗಭೂಷಣ, ಹಿರಿಯ ಸಮಾಜವಾದಿ, ಶಿವಮೊಗ್ಗ
———————
*ಪತ್ರ-6
ಕೇಂದ್ರದಲ್ಲಿ ಬೇರೆ ಪಕ್ಷದ ಸರ್ಕಾರ ಇರುವುದರಿಂದಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಂದುಕೊಂಡದ್ದನ್ನೆಲ್ಲಾ ಅಥವಾ ಜನ ಅವರಿಂದ ನಿರೀಕ್ಷಿಸಿದ್ದನ್ನೆಲ್ಲಾ ಮಾಡಲು ಆಗದೇ ಇರಬಹುದು. ಈ ಎಚ್ಚರವನ್ನೂ ಇಟ್ಟುಕೊಂಡೇ ನಾವು ಸಿದ್ದರಾಮಯ್ಯ ಅವರ ಮುಂದಿನ ಕಾರ್ಯಗಳು ಮತ್ತು ಹಿಂದಿನ ಸಾಧನೆಯನ್ನು ನೋಡಬೇಕು.
ನಮಗೆಲ್ಲಾ ಅವರ ಬಗ್ಗೆ ನಿರೀಕ್ಷೆಗಳಿದ್ದವು ನಿಜ. ಅವುಗಳಲ್ಲಿ ಬಹಳ ಮುಖ್ಯವಾದದ್ದು ಎಂದರೆ; ನಮ್ಮ ರೈತರ ಬವಣೆ ನೀಗಲು ಕೃಷಿ ಉತ್ನನ್ನಗಳಿಗೆ ಉತ್ಪಾದನಾ ವೆಚ್ಚಕ್ಕೆ ಅನುಗುಣವಾದ ಬೆಲೆ ನೀತಿ ಜಾರಿಗೆ ಬರಬೇಕು. ಅದೂ ರೈತರು ಹೇಳಿದ ಬೆಲೆ ಕೊಡುವುದೂ ಬೇಡ. ಸರ್ಕಾರದ ಕೃಷಿ ವಿವಿಗಳೇ ಇಂಥ ಬೆಳೆಗೆ ಇಂತಿಷ್ಟು ವೆಚ್ಚ ಎಂದು ಉತ್ಪಾದನಾ ವೆಚ್ಚ ನಿಗದಿ ಮಾಡಲಿ. ಆ ವೆಚ್ಚವನ್ನೇ ನಮಗೆ ನೀಡಬೇಕು. ಸಿದ್ದರಾಮಯ್ಯ ಅವರು ಬಜೆಟ್ ಪೂರ್ವದಲ್ಲಿ ರೈತ ಮುಖಂಡರ ಸಭೆಯಲ್ಲಿ ನಮ್ಮ ಈ ಪ್ರಸ್ತಾಪವನ್ನು ಒಪ್ಪಿಕೊಂಡು ಬಜೆಟ್‌ನಲ್ಲೇ ಪ್ರಕಟಿಸುವುದಾಗಿ ಹೇಳಿದ್ದರು. ಆದರೆ, ಅದ್ಯಾಕೋ ಮರೆತಿದ್ದಾರೆ. ಮುಂದಿನ ಬಜೆಟ್‌ನಲ್ಲಾದರೂ ಇದಾಗಲೇಬೇಕು.
ಇನ್ನೊಂದು; ಜಪಾನ್ ಮಾದರಿಯಲ್ಲಿ ನಮ್ಮ ಸಹಕಾರ ಸಂಘಗಳನ್ನು ಬಳಸಿಕೊಂಡು ಗ್ರಾಮಮಟ್ಟದಲ್ಲಿ ಒಂದೇ ಸೂರಿನಡಿ ಸಂಪೂರ್ಣ ಕೃಷಿ ಉತ್ಪನ್ನಗಳ ಸಂಗ್ರಹಣೆ, ಮಾರಾಟ ವ್ಯವಸ್ಥೆಯ ಸಹಕಾರ ಸಂಕೀರ್ಣ ಸ್ಥಾಪಿಸುವುದು. ಆಯಾ ಗ್ರಾಮ ವ್ಯಾಪ್ತಿಯ ಕೃಷಿ ಉತ್ಪನ್ನಗಳನ್ನು ಉತ್ಪಾದನಾ ವೆಚ್ಚಕ್ಕೆ ಅನುಗುಣವಾದ ಬೆಲೆಯಲ್ಲಿ ಖರೀದಿಸುವುದು ಮತ್ತು ಅಗತ್ಯವಿದ್ದಲ್ಲಿ ರೈತ ಉತ್ಪನ್ನಗಳಿಗೆ ಶೈತ್ಯಾಗಾರ ವ್ಯವಸ್ಥೆಯಲ್ಲಿ ಸಂಗ್ರಹ ಸೌಲಭ್ಯ ನೀಡುವುದರಿಂದ ದೊಡ್ಡ ಮಟ್ಟದಲ್ಲಿ ರೈತ ಸಮುದಾಯಕ್ಕೆ ಬಲ ತರಲಿದೆ. ಹಾಗೇ ಕುರಿಗಾಹಿಗಳಿಗೂ ನಂದಿನಿ ಹಾಲು ಒಕ್ಕೂಟದ ಮಾದರಿಯ ಪ್ರತ್ಯೇಕ ಸಹಕಾರ ಒಕ್ಕೂಟ ರಚಿಸಿ, ಕುರಿ ಉತ್ಪನ್ನ ಖರೀದಿ, ಸಂಸ್ಕರಣೆ ಮತ್ತು ಮಾರಾಟ ವ್ಯವಸ್ಥೆ ಮಾಡಬೇಕು.
ಇದಿಷ್ಟು ಮಾಡಿದರೆ, ರೈತರು ಇವರ ಯಾವ ಬಡ್ಡಿಮನ್ನಾವನ್ನಾಗಲೀ, ಸಾಲ ಮನ್ನಾವನ್ನಾಗಲೀ ಕೇಳುವುದೇ ಇಲ್ಲ.
   -ಕಡಿದಾಳು ಶಾಮಣ್ಣ, ಹಿರಿಯ ರೈತ ನಾಯಕ
——————–
*ಪತ್ರ-7
ಸಿಎಂ ಸಿದ್ದರಾಮಯ್ಯ ಅವರಿಂದ ಜನತೆ ಸಾಕಷ್ಟು ನಿರೀಕ್ಷಿಸಿದ್ದರು ಎಂಬುದು ನಿಜ. ಆದರೆ, ಅವರಿಗೆ ಕಾಳಜಿ ಇದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಒಮ್ಮೆ ಸಿಎಂ ಸ್ಥಾನಕ್ಕೆ ಏರಿದ ಮೇಲೆ ಅವರು ಒಂದು ಬಗೆಯ ನಿರಾಳತೆಗೆ ಜಾರಿಬಿಟ್ಟರು ಎನಿಸುತ್ತದೆ. ಹಾಗಾಗಿ ನಿರೀಕ್ಷಿತ ಮಟ್ಟದಲ್ಲಿ ಅವರಿಂದ ಏನೂ ಆಗಿಲ್ಲ. ಕನಿಷ್ಟ ಮುಂದಿನ ಎರಡು ವರ್ಷದ ಅವಧಿಯಲ್ಲಾದರೂ ಅವರು ಮಾಡಲೇಬೇಕಾದ ಕೆಲಸಗಳನ್ನು ಪಟ್ಟಿಮಾಡುವುದಾದರೆ ನಾನು ನಾಲ್ಕನ್ನು ಸೂಚಿಸುತ್ತೇನೆ.
ಮೊದಲನೆಯದು; ಅಲೆಮಾರಿ ಸಮುದಾಯದ ನೋವು ಮುಕ್ತ ರಾಜ್ಯ. ಅದಕ್ಕಾಗಿ ಅವರು ಶಾಶ್ವತವಾಗಿ ಅಲೆಮಾರಿ ಸಮುದಾಯವನ್ನು ನೋವಿನಿಂದ, ಯಾತನೆಯಿಂದ ಪಾರು ಮಾಡುವ ನಿಟ್ಟಿನಲ್ಲಿ ಒಂದು ನಿವೇಶನ, ಮನೆ ನೀಡುವ ಕಾರ್ಯ ಮಾಡಲಿ. 70-80 ಅಲೆಮಾರಿ ಸಮುದಾಯಗಳಿದ್ದು, ಕೆಲವು ಸಮುದಾಯಗಳು ಕೇವಲ ಒಂದೆರಡು ಸಾವಿರದಷ್ಟು ಜನಸಂಖ್ಯೆ ಹೊಂದಿವೆ. ಅವರಿಗೆ ಶಾಶ್ವತ ಸೂರು ಕಲ್ಪಿಸುವ ಮೂಲಕ ಟೆಂಟ್ ಮುಕ್ತ ಕರ್ನಾಟಕ ಮಾಡಬಹುದು.
ಎರಡನೆಯದು; ರೈತರ ಅಳಲುಮುಕ್ತ ಕರ್ನಾಟಕ. ಕಬ್ಬು ಬೆಳೆಗಾರರು ಸೇರಿದಂತೆ ರಾಜ್ಯದ ಎಲ್ಲಾ ರೈತರು ಕಳೆದ ಮೂರು ವರ್ಷಗಳಿಂದ ಒಂದು ರೀತಿಯಲ್ಲಿ ತಬ್ಬಲಿಗಳಂತಾಗಿದ್ದಾರೆ. ರೈತರ ಕಷ್ಟಗಳನ್ನು ಪರಿಹರಿಸುವ ದಿಕ್ಕಿನಲ್ಲಿ ಸರ್ಕಾರ ಯಾವುದೇ ಬದ್ಧತೆ ತೋರುತ್ತಿಲ್ಲ. ಜೊತೆಗೆ ಲಾಠಿ ಪ್ರಹಾರದಂತಹ ಘಟನೆಗಳು ನಡೆಯಬಾರದಿತ್ತು. ಹಾಗಾಗಿ, ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ಬದ್ಧತೆ ತೋರಲೇಬೇಕು.
ಮೂರನೆಯದು; ಕೋಮುವಾದ ಮುಕ್ತ ಕರ್ನಾಟಕ. ಕರಾವಳಿ, ಮಡಿಕೇರಿ ಮುಂತಾದ ಕಡೆ ಮರುಕಳಿಸುತ್ತಿರುವ ಕೋಮುವಾದ ಮತ್ತು ಮೂಲಭೂತವಾದವನ್ನು ಕಾನೂನಾತ್ಮಕವಾಗಿ ನಿಗ್ರಹಿಸುವ ನಿಟ್ಟಿನಲ್ಲಿ ಈ ಸರ್ಕಾರ ಯಾವುದೇ ನೀತಿ ಹೊಂದಿಲ್ಲ. ಮುಸ್ಲಿಂ ಮೂಲಭೂತವಾದವೂ ಸೇರಿದಂತೆ ಎಲ್ಲ ಬಗೆಯ ಮೂಲಭೂತವಾದ ಮುಕ್ತ ರಾಜ್ಯ ನಮಗೆ ಬೇಕಿದೆ. ಅದನ್ನು ಈಡೇರಿಸುವುದು ಸಿದ್ದರಾಮಯ್ಯ ಸರ್ಕಾರದ ಬದ್ಧತೆಯಾಗಬೇಕು.
ನಾಲ್ಕನೆಯದು; ತಾರತಮ್ಯಮುಕ್ತ ಶಿಕ್ಷಣದ ಕರ್ನಾಟಕ. ನಮ್ಮ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ಸರಿಸಮಾನವಾಗಿ ಸಬಲೀಕರಣಗೊಳಿಸಬೇಕು. ಗ್ರಾಮೀಣ, ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತ ಮಗು ಕೂಡ ಯಾವುದೇ ರೀತಿಯಲ್ಲೂ ಹೈಟೆಕ್ ಶಾಲೆಯ ಮಕ್ಕಳಿಗಿಂತ ಕಡಿಮೆ ಇಲ್ಲ ಎಂಬ ವಾತಾವರಣ ಮೂಡಿಸುವ ದಿಕ್ಕಿನಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಮತ್ತು ಶೈಕ್ಷಣಿಕ ವ್ಯವಸ್ಥೆ ಕಲ್ಪಿಸಬೇಕು.
-ಡಾ ರಹಮತ್ ತರೀಕೆರೆ, ಕನ್ನಡ ವಿದ್ವಾಂಸರು, ಹಂಪಿ ವಿವಿ

*ಪತ್ರ-8
ಎರಡೂವರೆ ವರ್ಷಗಳ ಸಿದ್ದರಾಮಯ್ಯ ಸರ್ಕಾರದ ಅಕೌಂಟಿನಲ್ಲಿ ಸಾಕಷ್ಟು ಭ್ರಷ್ಟಾಚಾರಗಳು ಕಾಣಿಸುತ್ತಿವೆ. ದಿನ ಕಳೆದಂತೆ ಈ ಆಪಾದನೆಗಳ ಪಟ್ಟಿ ಬೆಳೆಯುತ್ತಲೇ ಇದೆ. ಇದರಿಂದಾಗಿ ಜನರಿಗೆ ಈ ಸರ್ಕಾರದ ಬಗ್ಗೆ ಭ್ರಮನಿರಸನ ಉಂಟಾಗಿದೆ. ವಿಶೇಷವಾಗಿ ಅವರ ಬಗ್ಗೆ ಭರವಸೆ ಹೊಂದಿದ್ದ ನಮ್ಮಂಥವರಿಗೆ ಬೇಸರವಾಗಿದೆ. ದಯವಿಟ್ಟು ಅವರು ಇನ್ನುಳಿದ ಅವಧಿಯಲ್ಲಾದರೂ ಪಾರದರ್ಶಕ ಮತ್ತು ಮುಕ್ತ ಆಡಳಿತ ನೀಡಬೇಕಿದೆ. ಭ್ರಷ್ಟಾಚಾರಮುಕ್ತ ಆಡಳಿತ ನೀಡಬೇಕಿದೆ. ಅವರು ಇದನ್ನು ಗಮನಿಸಿ ಹಳಿ ತಪ್ಪಿಹೋಗುತ್ತಿರುವ ತಮ್ಮ ಸರ್ಕಾರದ ರೈಲನ್ನು ಸರಿದಾರಿಗೆ ತಂದು ನಿಲ್ಲಿಸಲೇಬೇಕಿದೆ. ಆರೋಪಮುಕ್ತ, ಭ್ರಷ್ಟಾಚಾರಮುಕ್ತ ಆಡಳಿತ ಮತ್ತು ಸರಿದಾರಿಯಲ್ಲಿ ಸಾಗುತ್ತಿರುವ ಸರ್ಕಾರ ನಮ್ಮ ನಿರೀಕ್ಷೆ. ಅದನ್ನು ಅರ್ಥಮಾಡಿಕೊಂಡು ಸಿದ್ದರಾಮಯ್ಯ ಮುಂದಿನ ದಿನಗಳಲ್ಲಿ ತಿದ್ದಿಕೊಂಡು ನಡೆಯಲಿ.
-ನಾ.ಡಿಸೋಜಾ,ಹಿರಿಯ ಸಾಹಿತಿ, ಸಾಗರ
——————
*ಪತ್ರ-9
ಮಾನ್ಯ ಸಿದ್ದರಾಮಯ್ಯ ಅವರೇ,
ನೀವು ಸಮಾಜವಾದಿ ಎಂಬ ‘ಮೂಢ ನಂಬಿಕೆ’ ಅನೇಕರಲಿತ್ತು. ಅಹಿಂದ ಮಾಡಿದಾಗಲೂ ನಿಮ್ಮದೊಂದು ಸಮುದಾಯದ ಹೊರತು ಉಳಿದ ಅಹಿಂದ ವರ್ಗಗಳು ನಿಮ್ಮ ಜೊತೆಗಿರಲೇ ಇಲ್ಲ. ವೇದಿಕೆಯಲ್ಲಿ ಕೆಲವು ಬೇರೆ ಬೇರೆ ಸಮುದಾಯಗಳ ಮುಖಂಡರು ಇರುತ್ತಿದ್ದರಷ್ಟೆ. ಎಲ್ಲ ಅಹಿಂದ ವರ್ಗಗಳನ್ನು ಒಳಗೊಂಡು ಹೋಗಬೇಕೆನ್ನುವ ಪ್ರಯತ್ನವನ್ನು ನೀವೂ ಮಾಡಲಿಲ್ಲ. ಸಿಎಂ ಆದ ಮೇಲಾದರೂ,ಎಲ್ಲರ ಅಭಿವೃದ್ಧಿಯ ಕಾಳಜಿಯನ್ನು ಮೆರೆಯಬಹುದೆಂಬ ನಿರೀಕ್ಷೆಯೂ ನಿಜವಾಗಲಿಲ್ಲ. ಅಹಿಂದ ಎಂದರೆ,ಅಲ್ಪಸಂಖ್ಯಾತರು,ಹಿಂದುಳಿದ ಸಮುದಾಯಗಳ ನೂರಾರು ಸಣ್ಣಪುಟ್ಟ ಜಾತಿಗಳು, ದಲಿತರು ಎಲ್ಲರೂ ಇದ್ದಾರೆ. ಆದರೆ, ನೀವು ನಿಮ್ಮ ಸುತ್ತ ಕಟ್ಟಲ್ಪಟ್ಟಿರುವ ಸ್ವಜಾತಿಯ ಕೋಟೆಯ ಆಚೆಗೆ ಇಣುಕಿ ನೋಡುತ್ತಲೇ ಇಲ್ಲ. ಸುತ್ತಲಿರುವ ನಿಮ್ಮ ಜಾತಿಯವರಾದರೂ ಯಾರು?ಅವರ ಪೂರ್ವ ಚರಿತ್ರೆಗಳೇನು? ಭ್ರಷ್ಟರು,ಕೊಳಕರು ಸುತ್ತುವರಿದಿದ್ದಾರೆ.ಎಲ್ಲ ಹಂತದ ಆಯಕಟ್ಟಿನ ಜಾಗಗಳಲ್ಲಿ ನಿಮ್ಮವರೆ ಕುಳಿತಿದ್ದಾರೆ. ಹಿಂದುಳಿದ ವರ್ಗಗಳಲ್ಲಿಯೇ ತುಳಿತಕ್ಕೊಳಗಾದವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿಲ್ಲ.
ಕ್ಷೌರಿಕರು ತಮಗೊಂದು ಅಭಿವೃದ್ಧಿ ನಿಗಮ ಕೊಡಿ; ಹಜಾಮ ಪದವನ್ನು ತೆಗೆದು ಹಾಕಿ ಎಂದು ಕೇಳುತ್ತಲೇ ಇದ್ದಾರೆ. ಮನಸ್ಸು ಮಾಡಿದರೆ ಅದನ್ನು ಸಾಧ್ಯಮಾಡುವುದು 30 ನಿಮಿಷದ ಕೆಲಸ. ಆದರೂ ಮನಸ್ಸು ಮಾಡುತ್ತಿಲ್ಲ ಯಾಕೆ? ನಿಮ್ಮ ಕಾಲದಲ್ಲೂ ಇಂಥ ಅನೇಕ ಸಾಮಾಜಿಕ ಅನ್ಯಾಯಗಳು ಮುಂದುವರಿಯುತ್ತಲೆ ಇವೆ. ಖಂಡಿತಕ್ಕೂ ಇದು ಬೇಸರದ ಸಂಗತಿ.
ದೇವರಾಜ ಅರಸು ಭೂ ಸುಧಾರಣೆ ಕಾಯಿದೆ ಮೊದಲಾದ ಶಾಸನಗಳನ್ನು ತಂದರು. ಆ ಕಾರಣಕ್ಕೆ ಅವರ ಹೆಸರೂ ಇವತ್ತಿಗೂ ಇದೆ. ಸಣ್ಣಪುಟ್ಟ ಅಸಹಾಯಕ ಸಮುದಾಯಗಳಿಗೆ ಧ್ವನಿ ತುಂಬುವಂತ ಕೆಲಸವನ್ನು ನಿಮ್ಮಿಂದಲ್ಲದೆ ಯಾರಿಂದ ತಾನೆ ನಿರೀಕ್ಷಿಸಲು ಸಾಧ್ಯ?   ನೀವು ಸಹಾಯ ಮಾಡದಿದ್ದರೆ ದೊಡ್ಡ ದುರಂತವೇ ಆಗುತ್ತದೆ. ಕರ್ನಾಟಕದ ಈಗಿನ ಸಾಮಾಜಿಕ ಸ್ಥಿತಿ ಹಿಂದಿಗಿಂತ ಭಿನ್ನವೇನಿಲ್ಲ. ಮಂಗಳೂರಿನಲ್ಲಿ ಈಗಲೂ ಕೋಮುವಾದಿಗಳು ಮೆರೆಯುತ್ತಿದ್ದಾರೆ. ನಿಮ್ಮ ಸರಕಾರ ಬಂದು ಪ್ರಯೋಜನವಾದರೂ ಏನು?
-ಸಿ.ಎಸ್.ದ್ವಾರಕಾನಾಥ್, ಹಿರಿಯ ನ್ಯಾಯವಾದಿ

ಪತ್ರ-10
ನೀವು ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುತ್ತಿರುವುದು; ನಿರ್ನಾಮ ಮಾಡಲು ಹೊರಟಿರುವುದು ಮಹಾಪರಾಧ. ನಿಮಗೆ ಜವಾಬ್ದಾರಿ ಇದ್ದಿದ್ದರೆ, ಇಡೀ ಲೋಕಾಯುಕ್ತ ಸಂಸ್ಥೆಯ ಘನತೆಯನ್ನು ಬೀದಿಗೆ ಚೆಲ್ಲಿದ ವೈ.ಭಾಸ್ಕರ್ ರಾವ್ ವಿರುದ್ಧ ಕ್ರಿಮಿನಲ್ ಕೇಸು ಹೂಡಲು; ಅವರನ್ನು ಸಮಗ್ರ ವಿಚಾರಣೆಗೆ ಗುರಿಪಡಿಸಲು ವಿಶೇಷ ತನಿಖಾ ತಂಡಕ್ಕೆ ಮುಕ್ತ ಸ್ವಾತಂತ್ರ್ಯ ನೀಡಬೇಕಿತ್ತು. ಎಲ್ಲಾ ಸಾಕ್ಷ್ಯಗಳಿದ್ದರೂ ಕಠಿಣ ನಿಲುವು ತಳೆಯದಿರುವುದು ಬೇಜಾವಾಬ್ದಾರಿತನ ಮಾತ್ರವಲ್ಲ ಅವರನ್ನು ಬಚಾವು ಮಾಡುಲೆಂದೆ ಹೀಗೆ ಮಾಡಿದಿರಿ ಎನ್ನುವ ಅನುಮಾನಗಳೂ ಮೂಡಿದವು.
ನಿಮ್ಮ ಮೇಲೆ ಹಲವು ಗುರುತರ ಆರೋಪಗಳಿವೆ. ನಿಮ್ಮ ಮಂತ್ರಿಮಂಡಲದ ಅನೇಕ ಸಚಿವರ ಮೇಲೂ ಭೂಮಿ ಒತ್ತುವರಿ, ಸಾರ್ವಜನಿಕ ಆಸ್ತಿ ದುರ್ಬಳಕೆಯಂತ ಗಂಭೀರ ದೂರುಗಳಿವೆ. ಅವೆಲ್ಲವನ್ನು ಮುಚ್ಚಿಹಾಕಲು ಹೀಗೆ ಮಾಡಿದಿರೆನ್ನಿಸುತ್ತೆ.ಈಗ ,ಎಸಿಬಿ ರಚನೆ ಮಾಡುವ ಮೂಲಕ ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿ ಹಾಕಲು ಸಂಚು ಮಾಡಿದ್ದೀರಿ. ಇದೆಲ್ಲ ಒಳ್ಳೆಯದಲ್ಲ, ನಿಮಗೆ ಸತ್ಯ ಮತ್ತು ಸಂವಿಧಾನದ ಬಗ್ಗೆ ಗೌರವ ಇದ್ದದ್ದೆ ಆದಲ್ಲಿ, ವಿಕ್ರಂಜಿತ್ ಸೇನ್ ಅವರಂತವರನ್ನು ಲೋಕಾಯುಕ್ತಕ್ಕೆ ತಂದು ,ಸಂಸ್ಥೆಯನ್ನು ಶಕ್ತಿಯುತಗೊಳಿಸಲು ಪ್ರಯತ್ನಿಸಿ.
ನಿಮ್ಮ ಮಗ ಮತ್ತು ನಿಮ್ಮ ಸಂಪುಟದ ಮಂತ್ರಿಯೊಬ್ಬರ ಮಗ ಸೇರಿ ಮರಳು ದಂಧೆ ನಡೆಸಿದ್ದಾರೆ ಎಂಬ ಆಕ್ಷೇಪಗಳಿವೆ. ಅದು ಹೌದಾಗಿದ್ದರೆ ಅಕ್ಷಮ್ಯ. ಇಂಥದನ್ನೆಲ್ಲ ಹತೋಟಿಗೆ ತರದಿದ್ದರೆ ಮುಂದಿನ ಪೀಳಿಗೆಯ ವಿಷಯದಲ್ಲಿ ಅಕ್ಷಮ್ಯ ಅಪರಾಧವಾಗುತ್ತದೆ. ರಾಜಕಾರಣಿಗಳು,ಅಧಿಕಾರಸ್ಥರ ಕೃಪೆಯಿಂದಾಗಿ ಬಲಾಢ್ಯರು ರಾಜ್ಯದಲ್ಲಿ 15ಲಕ್ಷಕ್ಕೂ ಹೆಚ್ಚು  ಎಕರೆ ಭೂಮಿಯನ್ನು ಕಬಳಿಸಿದ್ದಾರೆನ್ನುವುದನ್ನು ಎ.ಟಿ.ರಾಮಸ್ವಾಮಿ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಈ ಪೈಕಿ 13 ಲಕ್ಷ ಎಕರೆ ರೆವಿನ್ಯೂ ಭೂಮಿ, 2ಲಕ್ಷಕ್ಕೂ ಹೆಚ್ಚು ಎಕರೆ ಅರಣ್ಯ ಭೂಮಿ.  ಅಲ್ಲಲ್ಲಿ ತೆರವುಗೊಳಿಸಿದ ಪ್ರಯತ್ನಗಳು ನಡೆದಿವೆಯಾದರೂ ಅದೆ ಎಷ್ಟರದ್ದೂ ಅಲ್ಲ.
ಜೀವನೋಪಾಯಕ್ಕೆ ಒತ್ತುವರಿ ಮಾಡಿಕೊಂಡ ಸಣ್ಣ -ಪುಟ್ಟವರನ್ನು ಬಿಟ್ಟು ದುರಾಸೆಯಿಂದ ಒತ್ತುವರಿ ಮಾಡಿಕೊಂಡವರನ್ನೆಲ್ಲ ತೆರವು ಮಾಡಿಸಬೇಕು.
ಗಣಿ ಹಗರಣ ಸಂಬಂಧ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದವರು ನೀವೇ. ಆಗ ನೀವೇ ಸಂತೋಷ ಹೆಗ್ಡೆಯವರ ವರದಿ ಅನುಷ್ಠಾನಕ್ಕೆ ಒತ್ತಾಯಿಸಿದ್ದಿರಿ. 2008 ಮತ್ತು 2011ರಲ್ಲಿ ಹೆಗ್ಡೆಯವರು ನೀಡಿದ ಎರಡು ವರದಿಗಳಲ್ಲಿ, 2011ರ ವರದಿಯ ಆಯ್ದ ಪ್ರಕರಣಗಳ ಮೇಲೆಷ್ಟೆ ಕ್ರಮಕ್ಕೆ ಮುಂದಾದಿರಿ. ನಿಮಗೆ ಈ ವಿಷಯದಲ್ಲಿ ಕಾಳಜಿ ಇದ್ದದ್ದೇ ಹೌದಾದರೆ, ಎಲ್ಲ ಪಕ್ಷದವರು,ಅಧಿಕಾರಿಗಳು ಸಹಿತ  ಹಲವು ಹೆಸರುಗಳಿರುವ  ಎರಡೂ ವರದಿಗಳ ಮೇಲೆ ಕ್ರಮಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿ.
ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವವನ್ನು ಸರಕಾರ ಆಚರಿಸುತ್ತಿದೆ. ಅವರಿಗೆ ನಿಜವಾದ ಗೌರವ ಸಲ್ಲಿಸಬೇಕೆಂದರೆ, ಕೃಷಿ ಭೂಮಿಯನ್ನು ಕೃಷಿಯೇತರ  ಉದ್ದೇಶಕ್ಕೆ ಬಳಸುವುದಕ್ಕೆ ತಡೆ ಹಾಕಬೇಕು.ಕೃಷಿಯೇತರ ಆದಾಯ 25ಲಕ್ಷಕ್ಕಿಂತ ಹೆಚ್ಚಿರುವವರಿಗೆ ಕೃಷಿ ಭೂಮಿ ಖರೀದಿ ಅವಕಾಶ ಕಲ್ಪಿಸಿರುವುದನ್ನು ವಾಪಸ್ ಪಡೆದು, ಮೊತ್ತವನ್ನು ಕಡಿಮೆಗೆ ನಿಗದಿ ಮಾಡಬೇಕು.
ಪ್ರತಿ ಮನುಷ್ಯನಿಗೂ ಘನತೆ; ಗೌರವ ಇದೆ. ಆತನ ಶಾರೀರಿಕ ಶ್ರಮಕ್ಕೆ ಬೆಲೆ ಸಿಗಬೇಕು; ಆತ ಉತ್ಪಾದಕನೆನಿಸಿಕೊಳ್ಳಬೇಕು. ಇದಕ್ಕೂ ಪರಿಸರಕ್ಕೂ ಸಂಬಂಧವಿದೆ. ಭೌತಿಕ ಖರ್ಚು  ಸರಿಯಲ್ಲ.  ಎಲ್ಲರನ್ನೂ ದೇಶದ ನಿರ್ಮಾಣದಲ್ಲಿ ಸಂಪನ್ಮೂಲವನ್ನಾಗಿ ತೊಡಗಿಸಿಕೊಳ್ಳಬೇಕು. ಈ ದಿಸೆಯಲ್ಲಿ ಉದ್ಯೋಗ ಖಾತ್ರಿ  ಅತ್ಯಂತ ಉತ್ತಮ. ಅದನ್ನು ವಿವೇಚನಾಯುಕ್ತವಾಗಿ ಬಳಸಿಕೊಳ್ಳಬೇಕು. ಬಡವರು, ಆದಿವಾಸಿಗಳು,ದಲಿತರು ಎಲ್ಲರಿಗೂ ನಿಮ್ಮ ಕಾಲದಲ್ಲಿ ನ್ಯಾಯ ಸಿಗಬೇಕು.
ಸ್ವಾಭಿಮಾನಿ ದೇಶ ನಿರ್ಮಾಣ ಎಂದರೆ ಆಹಾರದಲ್ಲಿ ಸ್ವಾವಲಂಭನೆ ಬೆಳೆಸುವುದು. ಅಂದರೆ, ಆಹಾರವೇನೂ ಆಕಾಶದಿಂದ ಉದುರುವುದಿಲ್ಲ. ಜಮೀನಿನಲ್ಲಿಯೇ ಬೆಳೆಯಬೇಕು. ವಿಮಾನ ನಿಲ್ದಾಣ, ರಿಯಲ್ ಎಸ್ಟೇಟ್, ಗಣಿ ಇತ್ಯಾದಿಗೆಂದು ಅನ್ನ ಬೆಳೆಯುವ ಭೂಮಿಯನ್ನು ಕಬಳಿಸುತ್ತಾ ಹೋದರೆ ಆಹಾರ ಭದ್ರತೆ ಹೇಗೆ ತಾನೆ ಸಾಧ್ಯ?  ಅಗತ್ಯವೇ ಇಲ್ಲದ ಕಡೆಗೆಲ್ಲ ವಿಮಾನ ನಿಲ್ದಾಣದ ಹೆಸರಿನಲ್ಲಿ  ಸಾವಿರಾರು ಎಕರೆ ಭೂಮಿ ವಶಪಡಿಸಿಕೊಂಡು ರೈತರನ್ನು ಬೀದಿಗೆ ತಳ್ಳಲಾಗುತ್ತಿದೆ.  ಕೈಗಾರಿಕಾಭಿವೃದ್ಧಿಯ ಹೆಸರಿನಲ್ಲಿಯೂ ಕೃಷಿ ಭೂಮಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಭೂ ಬಳಕೆ ಆಯೋಗವೊಂದನ್ನು ರಚಿಸಬೇಕು. ಉಳುವವನೇ ಹೊಲದೊಡೆಯ ಎನ್ನುವ ನೀತಿಯನ್ನು ಮತ್ತೆ ತರಬೇಕು. ಭೂ ರಹಿತ ಕೃಷಿ ಕಾರ್ಮಿಕರ ಸರ್ವಾಂಗೀಣ ಅಭಿವೃದ್ಧಿಯ ದೂರ ದೃಷ್ಟಿಯನ್ನಿಟ್ಟುಕೊಂಡು ಅವರ ಹೆಸರಿನಲ್ಲೇ ಪ್ರತ್ಯೇಕ ಸಹಕಾರ ಸೊಸೈಟಿಗಳನ್ನು ಆರಂಭಿಸಿ.
ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಸಂದರ್ಭ ಮಾಡಿಕೊಂಡ ಒಪ್ಪಂದಗಳಂತೆ  ಸಾವಿರಾರು ಎಕರೆ ಭೂಮಿ ಪಡೆದ ಬಂಡವಾಳಶಾಹಿಗಳು ನಿಗದಿತ ಅವಧಿಯಲ್ಲಿ  ಸದ್ಬಳಕೆ ಮಾಡಿದಿದ್ದರೆ,ಅದನ್ನೆಲ್ಲ ಮುಲಾಜಿಲ್ಲದೆ ವಾಪಸ್ ಪಡೆದು ರೈತರಿಗೆ ಹಿಂತಿರುಗಿಸಿ. ಕೈಗಾರಿಕೆ ಹೆಸರಿನಲ್ಲಿ ಭೂಮಿ ಪಡೆದು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಬಳಸುವ ಸಂಚನ್ನು ವಿಫಲಗೊಳಿಸಿ.
ಇದನ್ನೆಲ್ಲ ಮಾಡಬೇಕೆಂದರೆ ನೀವು ರಾಜಕೀಯ ಚಾಣಾಕ್ಷತನ,ಮುತ್ಸದ್ಧಿತನ ಮತ್ತು ದೃಢ ಸಂಕಲ್ಪವನ್ನು ಮೆರೆಯಬೇಕು.  ಅರಸು ಅವರು ಮೆರೆದಂತೆ ‘ಸಾಮಾಜಿಕ ನ್ಯಾಯ’ವನ್ನು ಪರಿಪಾಲಿಸುವ ಬದ್ಧತೆ ತೋರಬೇಕು.ಐಎಎಸ್, ಐಪಿಎಸ್, ಐಎಫ್ಎಸ್‌ಗಳು, ಮಂತ್ರಿಗಳು…… ಕಾನೂನಿನ ಚಾಪೆಯ ಕೆಳಗೆ ನುಸುಳಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇವರಿಗೆ ಬಡಜನರ ಬಗ್ಗೆ ಕಾಳಜಿ ಇಲ್ಲ; ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಆಸ್ಥೆ ಇಲ್ಲ; ಮುಂದಿನ ತಲೆಮಾರಿನ ಬಗ್ಗೆ ಕಳಕಳಿ ಇಲ್ಲ. ಇಂಥವರನ್ನು ಹತೋಟಿಯಲ್ಲಿಡಿ. ದಕ್ಕಿದ ಅಧಿಕಾರವನ್ನು ಜನಸಾಮಾನ್ಯರ ಕಲ್ಯಾಣಕ್ಕಾಗಿ; ನಿಸರ್ಗದ  ಉಳಿವಿಗಾಗಿ ಸದ್ಬಳಕೆ ಮಾಡಿಕೊಳ್ಳಿ.
– ಎಸ್.ಆರ್.ಹಿರೇಮಠ, ಹಿರಿಯ ಸಾಮಾಜಿಕ ಹೋರಾಟಗಾರ
—–
*ಪತ್ರ-11
ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ,
ನಿಮ್ಮ ಸರ್ಕಾರದಿಂದ ಈ ಮೂರು ವರ್ಷಗಳಲ್ಲಿ ಆಗಲೇಬೇಕಿದ್ದ, ಆಗಬಹುದೆಂದು ನಿರೀಕ್ಷಿಸಿದ್ದ ಮುಖ್ಯ ಕೆಲಸಗಳು ಆಗದೇ ಉಳಿದಿವೆ. ಉಳಿದ ಇನ್ನೂ ಎರಡು ವರ್ಷಗಳಲ್ಲಿಯಾದರೂ ದಯಮಾಡಿ ಅದನ್ನು ಮಾಡಿ ಮಹಿಳೆ, ಮಕ್ಕಳ ವಿಶ್ವಾಸಕ್ಕೆ ಪಾತ್ರರಾಗುವಿರೆಂಬ ನಂಬಿಕೆಯಿಂದ ಈ ಪತ್ರ.
ಸಮಾನ ಶಿಕ್ಷಣಕ್ಕೆ ಬುನಾದಿಯಾಗುವ 3-6 ವರ್ಷದ ಎಲ್ಲಾ ಮಕ್ಕಳ ಕಡ್ಡಾಯ, ಉಚಿತ, ಸಮಾನ ಮತ್ತು ಮಾತೃಭಾಷಾ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರವೇ ತೆಗೆದುಕೊಳ್ಳುವ ದೃಢ ನಿರ್ಧಾರವನ್ನು ಮಾಡಿ ತಕ್ಷಣವೇ ಜಾರಿಗೊಳಿಸಬೇಕು. ಹೀಗಾದಾಗ ಮಾತ್ರ ನಿಮ್ಮ ಅಹಿಂದ ಕನಸು ಮೂಲಮಟ್ಟದಿಂದ ಸಾಕಾರಗೊಳ್ಳುತ್ತದೆ. ರಾಜ್ಯಾದ್ಯಂತ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಅಂದಾಜು 5000ಕ್ಕೂ ಹೆಚ್ಚು ಅನಕೃತ ಖಾಸಗಿ ಶಾಲೆಗಳನ್ನು ಈ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲೇ ಮಟ್ಟುಗೋಲು ಹಾಕಿಕೊಂಡು ದಯಮಾಡಿ ಇನ್ನಾದರೂ ಆ ಮಕ್ಕಳಿಗೆ ಮೋಸವಿಲ್ಲದ ಶಿಕ್ಷಣ ನೀಡಿ. ಸರ್ಕಾರ ಕನ್ನಡದ ಪರ ಎಂಬ ಮಾತುಗಳನ್ನು ಪ್ರಾರಂಭದಿಂದಲೂ ಆಡುತ್ತಲೇ ಇದ್ದೀರಿ. ಆದರೆ ಸರ್ವೋಚ್ಛ ನ್ಯಾಯಾಲಯದಿಂದ ಭಾಷಾ ನೀತಿಯ ವ್ಯತಿರಿಕ್ತ ತೀರ್ಪು ಬಂದು ವರ್ಷವೇ ಕಳೆಯಿತು. ಶಿಕ್ಷಣದಲ್ಲಿ ಕನ್ನಡದ ಉಳಿವಿಗೆ ಮುಂದೆ ಏನು ಮಾಡಬೇಕೆಂದು ಸರ್ಕಾರ ತುರ್ತಾಗಿ ಯೋಚಿಸಿ, ಈಗಲಾದರೂ ಕ್ರಮ ತೆಗೆದುಕೊಳ್ಳಬೇಕೆಂದು ಕೇಳಿಕೊಳ್ಳುವೆ. ಮುಚ್ಚುವ ಹಂತ ತಲುಪುತ್ತಿರುವ ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಮತ್ತು ಖಾಸಗಿ ಶಿಕ್ಷಣಕ್ಕೆ ಕಡಿವಾಣ ಹಾಕಲು ಬೇಕಾದ ಮೂಲಮಟ್ಟದ ರಚನಾತ್ಮಕ ಕಾರ್ಯಯೋಜನೆಯನ್ನು ತಜ್ಞರ ಸಲಹೆ ಪಡೆದು ಇನ್ನಾದರೂ ಮಾಡಿ. ಬಡಮಕ್ಕಳ ಭವಿಷ್ಯ ಉಳಿಸಿ. ಗ್ರಾಮೀಣ ಹೆಣ್ಣುಮಕ್ಕಳು ತಮ್ಮ ಹಳ್ಳಿಗಳಲ್ಲಿ ಮುಂದಿನ ಶೈಕ್ಷಣಿಕ ವ್ಯವಸ್ಥೆ ಇಲ್ಲದೆ, ದೂರದ ಊರುಗಳಿಗೆ ನಿತ್ಯ ಹೋಗಿ ಬರಲಾಗದೇ ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸುತ್ತಿದ್ದಾರೆ. ಆದ್ದರಿಂದ  ಹೋಬಳಿಗೊಂದರಂತೆಯಾದರೂ ಅವರಿಗೆ ತುರ್ತಾಗಿ ವಸತಿ ಶಾಲೆಗಳನ್ನು ಪ್ರಾರಂಭಿಸಿದರೆ, ನಿರ್ವಿಘ್ನವಾಗಿ ಶಿಕ್ಷಣ ಪಡೆಯುವ ಅವರು, ಬದುಕಿನುದ್ದಕ್ಕೂ ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ.
ಪ್ರತಿ ವರ್ಷ ಜಿಲ್ಲೆಯೊಂದರಿಂದ 200-300 ಹೆಣ್ಣುಮಕ್ಕಳು ಕಾಣೆಯಾಗುತ್ತಾರೆಂದು ಅಧ್ಯಯನ ವರದಿ ಹೇಳುತ್ತಿದೆ. ಅದರಲ್ಲಿ ಅರ್ಧದಷ್ಟು ಹೆಣ್ಣುಮಕ್ಕಳು ಮಾತ್ರ ಪತ್ತೆಯಾಗುತ್ತಿದ್ದಾರೆ. ಇನ್ನುಳಿದವರು ವೇಶ್ಯಾವಾಟಿಕೆಯ ವ್ಯವಸ್ಥಿತ ಜಾಲಕ್ಕೆ ಬೀಳುತ್ತಿರುವರೆಂಬ ಗುಮಾನಿ ನಮ್ಮದು. ಏಕೆಂದರೆ ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡ ಹೆಚ್ಚಿನ ಹೆಣ್ಣುಮಕ್ಕಳಲ್ಲಿ ಕರ್ನಾಟಕದವರು ಮೂರನೆಯ ಸ್ಥಾನದಲ್ಲಿದ್ದಾರೆ. ಸರ್ಕಾರದ ಅಂಗ ಸಂಸ್ಥೆಯಿಂದಲೇ ದಾಖಲಿಸಿರುವ ಪ್ರಕಾರ ವೇಶ್ಯಾವೃತ್ತಿಯಲ್ಲಿ ತೊಡಗಿಕೊಂಡಿರುವ ಇದುವರೆಗೆ 2.50 ಲಕ್ಷ ಹೆಣ್ಣುಮಕ್ಕಳಿದ್ದಾರೆ. ಇದರಲ್ಲಿ ಶೇ40ರಷ್ಟು ಅಪ್ರಾಪ್ತರು! ಇವರೆಲ್ಲಾ ಆಕಸ್ಮಿಕವಾಗಿ ಇಲ್ಲಿಗೆ ಬಂದವರು ಮತ್ತು ಹೊಟ್ಟೆ ಹೊರೆಯಲು ಬೇರೆ ಕೆಲಸ ಸಿಕ್ಕರೆ ಈ ದಂಧೆಯಿಂದ ಹೊರಬರಲು ದೃಢವಾಗಿ ನಿಶ್ಚಯಿಸಿರುವವರು. ದಯಮಾಡಿ ಇವರ ಪುನರ್ವಸತಿಗಾಗಿ ಮತ್ತು ಕೆಲಸದ ಅವಶ್ಯಕತೆಯಿರುವ ಇತರ ಮಹಿಳೆಯರಿಗಾಗಿ ಪ್ರತಿ ಹೋಬಳಿಯಲ್ಲೂ ಸರ್ಕಾರದವತಿಯಿಂದಲೇ ತುರ್ತಾಗಿ ವ್ಯವಸ್ಥಿತವಾದ ಗೃಹ-ಗುಡಿ ಕೈಗಾರಿಕೆಗಳನ್ನು ಪ್ರಾರಂಭಿಸಿ ಆ ಹೆಣ್ಣುಮಕ್ಕಳನ್ನು ರಕ್ಷಿಸುವ ಪುಣ್ಯಕಟ್ಟಿಕೊಳ್ಳಿ. ದಯಮಾಡಿ ಈ ಜಾಲಕ್ಕೆ ಬಿದ್ದಿರುವ ಅಪ್ರಾಪ್ತ ಹೆಣ್ಣುಮಕ್ಕಳನ್ನು ಮೊದಲು ಕಾಪಾಡುವ ಕೆಲಸ ಮಾಡಿ. ನಿಮ್ಮದೇ ಮನೆಯ ಹೆಣ್ಣುಮಕ್ಕಳು ಅನಿವಾರ್ಯವಾಗಿ ಈ ದಂಧೆಗೆ ಬಿದ್ದಿದ್ದರೆ ಹೇಗೆ ಕಾಪಾಡುತ್ತಿದ್ದಿರೋ ಅದೇ ಕರುಣೆ ಈ ಹೆಣ್ಣುಮಕ್ಕಳ ಬಗೆಗೂ ನಿಮ್ಮಲ್ಲಿ ಮೂಡಲೆಂದು ಪ್ರಾರ್ಥಿಸುವೆ. ಎಗ್ಗಿಲ್ಲದೇ ನಡೆಯುತ್ತಿರುವ ವೇಶ್ಯಾವಾಟಿಕೆಯ ದಂಧೆಯನ್ನು ಮೊದಲು ನಿಯಂತ್ರಿಸಿ.
ಯಾವ ವೈದ್ಯಕೀಯ ನೀತಿ ನಿಯಮಗಳನ್ನೂ ಪಾಲಿಸದೇ ರಾಜ್ಯಾದ್ಯಂತ ಅನಗತ್ಯವಾಗಿ ಹೆಣ್ಣುಮಕ್ಕಳ ಗರ್ಭಕೋಶ ತೆಗೆಯುವ ಕೆಲಸ ವೈದ್ಯರಿಂದ ನಡೆಯುತ್ತಿದ್ದು ಇದಕ್ಕೆ ತುರ್ತಾಗಿ ಕಡಿವಾಣ ಹಾಕಿ ವೈದ್ಯಕೀಯ ಕಾನೂನನ್ನು ಬಿಗಿಗೊಳಿಸಬೇಕಿದೆ. ಬೀರೂರಿನ ವೈದ್ಯರೋರ್ವರು ಮೂರು ವರ್ಷಗಳಲ್ಲಿ 1428 ಮಳೆಯರ ಗರ್ಭಕೋಶವನ್ನು ಅನಗತ್ಯವಾಗಿ ತೆಗೆದಿದ್ದಾರೆ. ಈ ಕುರಿತು ಸಿಐಡಿ ತನಿಖೆಗೆ ಆದೇಶಿಸಿದ್ದ ಅಧ್ಯಯನ ವರದಿಯು ವರ್ಷದ  ಹಿಂದೆಯೇ ಆರೋಗ್ಯ ಇಲಾಖೆಗೆ ಸಲ್ಲಿಕೆಯಾಗಿದ್ದು, ಅದನ್ನು ಗೋಪ್ಯವಾಗಿ ಇಡಲಾಗಿದೆ ಮತ್ತು ಈ ಬಗ್ಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಗೊಲ್ಲರಹಟ್ಟಿಯ ಹೆಣ್ಣುಮಕ್ಕಳೂ, ಆದಿವಾಸಿ ಹೆಣ್ಣುಮಕ್ಕಳೂ ಹೀಗೆ ಗರ್ಭಕೋಶ ಕಳೆದುಕೊಳ್ಳುತ್ತಿರುವ ಬಹುಸಂಖ್ಯೆಯ ಹೆಣ್ಣುಮಕ್ಕಳು ಎಲ್ಲೆಡೆಯೂ ಕಾಣುತ್ತಿದ್ದಾರೆ. ದಯಮಾಡಿ ತಕ್ಷಣವೇ ಈ ಕುರಿತು ಗಮನ ಹರಿಸಿ ಸಾವಿರಾರು ಹೆಣ್ಣುಮಕ್ಕಳ ಗರ್ಭಕೋಶ ಉಳಿಸಿ.
ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಕ್ಕಳ ಪುನರ್ವಸತಿಯಂತೂ ಎಲ್ಲಿಯೂ ಸರಿಯಾಗಿ ಆಗುತ್ತಿಲ್ಲ. ಮತ್ತು ಪರಿಹಾರಧನ ವರ್ಷಗಟ್ಟಲೆಯಾದರೂ ಅವರನ್ನು ತಲುಪುತ್ತಿಲ್ಲ. ದಯಮಾಡಿ ಮೊದಲೇ ಮುದುರಿ ಹೋಗಿರುವ ಅವರ ಬದುಕನ್ನು ಮತ್ತೆ ಅರಳಿಸಲು ಸರ್ಕಾರ ಮತ್ತು ಆಡಳಿತ ಯಂತ್ರ ಮಾನವೀಯವಾಗಿ ಕಾರ್ಯತತ್ಪರವಾಗಬೇಕೆಂದು ಕೇಳಿಕೊಳ್ಳುತ್ತೇವೆ.
ರಾಜ್ಯದಲ್ಲಿ ನಿತ್ಯ ಸರಾಸರಿ ಐವತ್ತರಿಂದ ಅರವತ್ತು ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿದೆ ಎಂದು ವರದಿ ಹೇಳುತ್ತದೆ. ಅದನ್ನು ತಡೆಯಲು ರಾಜ್ಯಾದ್ಯಂತ ಪ್ರಬಲ ಸಮಿತಿಗಳನ್ನು ಇನ್ನಾದರೂ ರೂಪಿಸಿ ಹೆಣ್ಣು ಭ್ರೂಣ ಹತ್ಯೆ ತಡೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು
-ರೂಪ ಹಾಸನ, ಬರಹಗಾರ್ತಿ, ಸಾಮಾಜಿಕ ಕಾರ್ಯಕರ್ತೆ 
——————
*ಪತ್ರ-12
ನಮಸ್ಕಾರ
ತಾವು ಮುಖ್ಯ ಮಂತ್ರಿಗಳಾಗಿ ನಾಲ್ಕನೆಯ ಬಜೆಟ್ ಮಂಡಿಸಿದ್ದೀರಿ.ಇದರ ಆಕರ್ಷಕ ಹಾಗೂ ಅನಾಕರ್ಷಕ ಅಂಶಗಳು ಅಪಾರವಾಗಿವೆ. ಈ ವರ್ಷದ ಬಜೆಟ್ ಗಾತ್ರವು 1.4 ಲಕ್ಷ ಕೋಟಿಗಳಿಂದ 1.63 ಲಕ್ಷ ಕೋಟಿಗೆ ಏರಿರುವುದು ಪ್ರಮುಖ ಅಂಶವಾಗಿ ನನಗೆ ಕಂಡು ಬಂದಿದೆ. ಈ ನಿಟ್ಟಿನಲ್ಲಿ ವಿತ್ತೀಯ ಕೊರತೆ 25 ಸಾವಿರ ಕೋಟಿಗೆ ತಲುಪಿರುವುದು ಮತ್ತು ಸರ್ಕಾರದ ಒಟ್ಟು ಸಾಲದ ಪ್ರಮಾಣವು 2.98 ಲಕ್ಷ ಕೋಟಿಗೆ ತಲುಪಿರುವುದು ಆತಂಕದ ವಿಷಯವೇ ಸರಿ.ಅಂದರೆ ಬಜೆಟ್ ಗಾತ್ರಕ್ಕಿಂತ ಸಾಲದ ಹೊರೆಯೇ ಹೆಚ್ಚಾಗಿರುವುದು ನೆಮ್ಮದಿ ತರುವ ವಿಷಯವಂತೂ ಅಲ್ಲ. ನಾನು ಆರ್ಥಿಕ ತಜ್ಞೆಯಲ್ಲವಾದರೂ ಮನೆಯ ಜವಾಬುದಾರಿಗಳನ್ನು ಹೊರುತ್ತಾ ನಿರ್ವಹಿಸುತ್ತಾ ಕಂಡುಕೊಂಡ ವಾಸ್ತವವೆಂದರೆ ಕೊರತೆ ಬಜೆಟ್ ಅಂದರೆ ಅಂಗೈಯಲ್ಲಿ ಆಕಾಶ ತೋರಿದಂತೆ ಎಂದು.
2011ರ ಜನಗಣತಿಯ ಪ್ರಕಾರ ಕರ್ನಾಟಕದ ಒಟ್ಟು ಜನಸಂಖ್ಯೆಯ ಶೇ.61.43 (3,75,52,529)ಜನರು ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದಾರೆ. ರೈತರು ಮತ್ತು ಕೃಷಿ ಕಾರ್ಮಿಕರಾಗಿರುವ ಈ ಜನರಿಗಾಗಿ ಕೃಷಿ,ಕೃಷಿಯಾಧಾರಿತ ಕೈಗಾರಿಕೆಗಳು ಮತ್ತು ಮಾರುಕಟ್ಟೆ ವ್ಯವಸ್ಥೆಯ ನಡುವೆ ಸಮನ್ವಯತೆಯನ್ನು ಸಾಧಿಸುವ ಸಮರ್ಥ ಯೋಜನೆಯೊಂದನ್ನು ಈ ಆಯ- ವ್ಯಯ ಒಳಗೊಳ್ಳ ಬೇಕಾಗಿತ್ತು. ಬಹು ದೊಡ್ಡ ಸಂಖ್ಯೆಯ ಗ್ರಾಮೀಣ ಅವಿದ್ಯಾವಂತ ಯುವ ಜನತೆಯ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಕೃಷಿ,ಪಶುಸಂಗೋಪನೆ, ಮೀನುಗಾರಿಕೆ , ಹೈನುಗಾರಿಕೆ ಕ್ಷೇತ್ರಗಳಲ್ಲಿ ಕೌಶಲ್ಯ ತರಬೇತಿ ಕೇಂದ್ರಗಳನ್ನು ಗ್ರಾಮೀಣ ಭಾಗದಲ್ಲಿಯೇ ಸ್ಥಾಪಿಸುವ ಮೂಲಕ ಅವರಿಗೆ ಗ್ರಾಮೀಣ ಅಭಿವೃದ್ಧಿಯಲ್ಲಿ ಸಹಭಾಗಿತ್ವ ನೀಡುವ ಯೋಜನೆಯೊಂದು ಆಯವ್ಯಯದಲ್ಲಿ ಆದ್ಯತೆಯ ಮೇರೆಗೆ ಒಳಗೊಳ್ಳಬೇಕಿತ್ತು. ಕೌಶಲ್ಯಯೋಜನೆಯ ಪ್ರಸ್ತಾಪ ಮಾತ್ರ ಈ ಬಜೆಟ್‌ನಲ್ಲಿ ಆಗಿದ್ದು , ಅದರ ಕಾರ್ಯ ವೈಖರಿಯ ಬಗ್ಗೆ ಸ್ಪಷ್ಟತೆ ಮೂಡಬೇಕಿತ್ತು. ಇಲ್ಲವಾದಲ್ಲಿ ಜಾರಿಯಾಗುವಾಗ ಫಲಾನುಭವಿಗಳು ಬಸವಳಿದಿರುತ್ತಾರೆ.
2011ರ ಜನಸಂಖ್ಯಾ ವರದಿಯ ಪ್ರಕಾರ ರಾಜ್ಯದ ಅರ್ಧದಷ್ಟು ಅಂದರೆ 3,00,72962 ಜನಸಂಖ್ಯೆಯಷ್ಟು ಮಹಿಳೆಯರಿದ್ದಾರೆ.ಈ  ಮಹಿಳಾ ಜನ ಸಂಖ್ಯೆಯನ್ನು ಮಹಿಳಾ ಸಂಪನ್ಮೂಲವನ್ನಾಗಿಸುವ ನಿಟ್ಟಿನಲ್ಲಿ ಮಹಿಳಾ ಅಭಿವೃದ್ಧಿ ಮತ್ತು ಸಬಲೀಕರಣದ ದೃಷ್ಟಿಯಿಂದ ಸಮರ್ಥ ಯೋಜನೆಯೊಂದನ್ನು ರೂಪಿಸಬಹುದಿತ್ತು;ಆದರೆ ಆ ಕೆಲಸ ಆಗಿಲ್ಲ. ರಾಜ್ಯದ ಜನಸಂಖ್ಯೆಯ ಶೇ. 14ರಷ್ಟು ಇರುವ ಅಲ್ಪ ಸಂಖ್ಯಾತ ಸಮುದಾಯಗಳ ಯುವ ಜನತೆಯ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸುವ ಯೋಜನೆಯನ್ನು ಈ ಆಯ ವ್ಯಯ ಒಳಗೊಳ್ಳಬಹುದಿತ್ತು. ಆದರೆ  ಸಮರ್ಪಕ ಯೋಜನೆಗಳ ಪ್ರಸ್ತಾಪ ಆಗಿಲ್ಲ.
ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾನಿಲಯ ಸ್ಥಾಪನೆ, ಗ್ರಾಮೀಣ ಆಸ್ಪತ್ರೆ, ಮತ್ತು ರಸ್ತೆಗಳ ಉನ್ನತೀಕರಣಕ್ಕೆ ಕ್ರಮ, ಮೀನುಗಾರರು ಮತ್ತು ನೇಕಾರರ ಸಾಲ ಮನ್ನಾ ಪ್ರಸ್ತಾಪ – ಇವು ಈ ಬಾರಿಯ ಆಯ ವ್ಯಯದ ಮೆಚ್ಚ ಬೇಕಾದ ಅಂಶಗಳು. ಈ ಬಜೆಟ್ ಸಂದರ್ಭದಲ್ಲಿ ಮೆಚ್ಚಿಗೆಯಾದ ಇನ್ನೊಂದು ಅಂಶವೆಂದರೆ ರಾಹು ಕಾಲದಲ್ಲಿ ಬಜೆಟ್ ಮಂಡಿಸಿ, ಅಪಶಕುನವೆಂಬ ವ್ಯಾಖ್ಯೆಯ ಮುಳ್ಳಿನ ಮೊನೆಯನ್ನು ಮುರಿದದ್ದಕ್ಕಾಗಿ.
-ಬಾನು ಮುಷ್ತಾಕ್, ಹಿರಿಯ ಸಾಹಿತಿ