ಮುಖ್ಯಮಂತ್ರಿ ಮಾದೇವ ಮತ್ತು ತಲೆಯೊಳಗೆ ಕೆಲವು ನವಿಲು -ಅಬ್ದುಲ್ ರಶೀದ್
[ಅಭಿನವ ಪ್ರಕಾಶನದಿಂದ 2013ರಲ್ಲಿ ಪ್ರಕಟವಾಗಿರುವ ದೇವನೂರ ಮಹಾದೇವ ಅವರ ಸಾಹಿತ್ಯ ಕುರಿತ ‘ಯಾರ ಜಪ್ತಿಗೂ ಸಿಗದ ನವಿಲುಗಳು’ ಪರಿಷ್ಕೃತ ಕೃತಿಯಿಂದ ಆಯ್ದ ಅಬ್ದುಲ್ ರಶೀದ್ ಅವರ ಒಂದು ಬರಹ. ನಮ್ಮ ಮರು ಓದಿಗಾಗಿ]
ಸರ್ವೋದಯ ಪಕ್ಷದ ಅಧ್ಯಕ್ಷರಾದ ದೇವನೂರು ಮಹಾದೇವರಿಗೆ ಕೆ.ರಾಮದಾಸ್ ಕಾಲು ಎಳೆಯುತ್ತ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದರು. ‘ನಿಮ್ಮ ಅಭಿಮಾನ ಬೇಡಿ ಗುರುಗಳೇ ಆಶೀರ್ವದಿಸಿ’ ಎಂದು ಮಹಾದೇವ ಅವರ ಕಾಲು ಎಳೆಯಲು ನೋಡುತ್ತಿದ್ದರು. ನಾನಾದರೋ ಕನ್ನಡನಾಡಿನ ಮುಖ್ಯಮಂತ್ರಿಗಳ ಜಾಗದಲ್ಲಿ ಮಹಾದೇವರ ರೂಪವನ್ನು ಕಲ್ಪಿಸಿಕೊಳ್ಳುತ್ತ ಆಗಾಗ ಕಣ್ಣು ಮುಚ್ಚಿಕೊಳ್ಳುತ್ತಿದ್ದೆ.
ಮುಖ್ಯಮಂತ್ರಿ ಮಹಾದೇವರ ಮೋಟಾರ್ ಕೇಡ್ ಬರೆಂದು ಬರುತ್ತಿರುವಾಗ ಊರ ಮುಂದೆ ಬಯಲಲ್ಲಿ ಕುಳಿತಿದ್ದ ಜೋತಮ್ಮಂದಿರು ಸರಕ್ಕನೆ ಎದ್ದು ನಿಂತು ಏನು ಮಾತಾಡಿಕೊಳ್ಳಬಹುದು? ಮೈಮೇಲೆ ಬರಿಸಿಕೊಳ್ಳಲೂ ಶಕ್ತಿಯಿಲ್ಲದೆ ನಿತ್ರಾಣವಾಗಿರುವ ಕುರಿಯಯ್ಯ ಮೈಮೇಲೆ ಬರುವಂತಾಗಲು ಮುಖ್ಯಮಂತ್ರಿಗಳಲ್ಲಿ ಏನು ಅರ್ಜಿ ಕೊಡಬಹುದು? ಕದ್ದು ತಂದಿರುವ ಎಳನೀರನ್ನು ಸಿ.ಎಂ. ಮಹಾದೇವರಿಗೆ ಹೇಗೆ ಕೊಡಲಿ ಎಂದು ಗಾರೆಸಿದ್ಮಾವ ಏನು ಐಡಿಯಾ ಮಾಡಬಹುದು? ಹಳೆಯ ಲಠಾರಿ ಲೂನಾ ಹತ್ತಿ ತಾಲ್ಲೂಕಾಫೀಸಿಗೆ ಹೊರಟಿರುವ ಅಮಾಸ ಬ್ರೇಕು ಹಾಕಲು ನೋಡುತ್ತಾ ಏನು ಯೋಚಿಸುತ್ತಿರಬಹುದು? ಆವುದೋ ರೂಪದಲ್ಲಿ ಬಂದಿರುವ ಚನ್ನ ಕುಸುಮ ಬಾಲೆಯ ಸೂಟ್ಕೇಸು ಎತ್ತಿಕೊಂಡು ಹೊರಲಾಗದೆ ಕುಂಟುತ್ತ ಕುಂಟುತ್ತ ಅವಳ ಹಿಂದೆ ನಡೆಯುತ್ತಿದ್ದವನು ಮುಖ್ಯಮಂತ್ರಿಗಳ ಕಾರನ್ನು ಕಂಡು ಹೇಗೆ ಬೆರಗಾಗಬಹುದು?
ನಾನಾದರೋ ನನ್ನ ಹೆಂಡತಿಯ ಟ್ರಾನ್ಸ್‌ಫರ್‌ಗಾಗಿ ಅರ್ಜಿ ಸಲ್ಲಿಸಲು ಮುಖ್ಯಮಂತ್ರಿಗಳ ಬಳಿ ಹೋದಾಗ ಅವರೂ ಎದ್ದು ನಿಂತು ನನ್ನನ್ನು ಹೇಗೆ ಸ್ವಾಗತಿಸಬಹುದು? ಕುಡಿಯಲು ಏನು ತರಿಸಬಹುದು? ತುಂಬ ಖುಷಿಯಾಗುತ್ತಿತ್ತು, ಹಾಗೆಯೇ ಕಣ್ತೆರೆದು ನಿಸ್ಸಂಶಯವಾಗಿ ಜಗತ್ತಿನ ಅತ್ಯುನ್ನತ ಕತೆಗಾರರಲ್ಲಿ ಒಬ್ಬರೂ ಕನ್ನಡ ನಾಡಿನ ಅಪರಿಮಿತ ಸುಂದರ ಪುರುಷರಲ್ಲಿ ಒಬ್ಬರೂ ಆಗಿರುವ ದೇವನೂರರ ಮುಖವನ್ನು ಇನ್ನೊಮ್ಮೆ ಪರಿಶೀಲಿಸಿದೆ. ಅವರು ಒಳಗೊಳಗೆ ನಾಚಿಕೊಂಡಿದ್ದರೂ, ಎಲ್ಲರಿಂದ ಕಾಲೆಳೆಸಿಕೊಂಡು ಒಳಗೊಳಗೆ ರೇಗಿಕೊಂಡಿದ್ದರೂ ಹೊರಗೆ ಎಲ್ಲರ ಸಂಕಟಗಳನ್ನು ಒಡಲೊಳಗೆ ತುಂಬಿಕೊಂಡ ಸಾಕವ್ವನಂತೆ ಕುಳಿತಿದ್ದರು. ನನಗಾದರೋ ನವಿಲುಗಳು ಆಗಲೇ ತಲೆಯೊಳಗೆ ಕುಣಿಯಲು ಶುರು ಮಾಡಿದ್ದವು.
‘ಮಾದೇವ ನೀವು ಪಕ್ಷದ ಅಧ್ಯಕ್ಷರಾಗಿ ನಿಮ್ಮ ಪಕ್ಷವನ್ನು ಗಂಭೀರವಾಗಿ ತೆಗೆದುಕೊಂಡಿದ್ದೀರಾ?’ ಎಂದು ಕೇಳಿದೆ. ಎಲ್ಲರೂ ಇದೇನು ತಲೆ ಕೆಟ್ಟ ಪ್ರಶ್ನೆ ಎಂಬಂತೆ ನೋಡಿದರು. ಮಾದೇವ ಕೂಡಾ ಅವರೆಲ್ಲರ ಅನಿಸಿಕೆಗೆ ಸಮ್ಮತಿ ಸೂಚಿಸಿ ತಲೆ ತೂಗಿದರು. ‘ಹಾಗಾದರೆ ನಿಮ್ಮ ಕುಸುಮ ಬಾಲೆ ಕಾದಂಬರಿಯನ್ನು ನಿಮ್ಮ ಪಾರ್ಟಿಯ ಮ್ಯಾನಿಫೆಸ್ಟೋ ಮಾಡಿದರೆ ನಿಮ್ಮ ಪಾರ್ಟಿಗೂ ನಿಮ್ಮ ಮ್ಯಾನಿಫೆಸ್ಟೋಗೂ ಕಾಂಟ್ರಾಡಿಕ್ಷನ್ ಆಗುತ್ತಲ್ಲ ಏನು ಮಾಡುತ್ತೀರಿ?’ ಎಂದು ಕೇಳಿದೆ.
‘ಹಾಗೇನಿಲ್ಲ ಸಂಕಟಗಳು ಒಂದೇ ತರ, ದಲಿತರಿಗೂ ರೈತರಿಗೂ ಸಂಕಟಗಳು ಒಂದೇ ತರ. ನಾನು ಸಂಕಟಗಳ ಪರ, ರೈತ ಎಷ್ಟು ದೊಡ್ಡ ರೈತನಾದರೂ ತಾಲ್ಲೂಕಾಫೀಸಲ್ಲಿ ಅವಮಾನ ಅನುಭವಿಸ್ತಾನಲ್ಲ. ಅದೂ ಅವಮಾನ. ಅಸ್ಪೃಶ್ಯತೆಗಿಂತ ಸ್ವಲ್ಪ ಸಣ್ಣ ಅವಮಾನ ಅಷ್ಟೆ’ ಎಂದೆಲ್ಲ ಮಹಾದೇವ ರಾಜಕೀಯ ಸಾಮಾಜಿಕ ಒಳನೋಟಗಳನ್ನ ಕೊಡುತ್ತ ಗೌರವ ಮೂಡಿಸುತ್ತಿದ್ದರು, ಇವರ ಜೊತೆ ಸೇರಿಕೊಳ್ಳಲು ನನಗೆ ಏನೆಲ್ಲ ಅವಮಾನಗಳಿವೆ ಎಂದು ಯೋಚಿಸುತ್ತಿದ್ದೆ. ಹಿಂದೆ ಬಹಳ ಹಿಂದೆ ಬಹು ಸುಂದರಿಯಾಗಿದ್ದವಳೊಬ್ಬಳು ‘ಆಗುವುದಿಲ್ಲ ಹೋಗು’ ಎಂದು ಅವಮಾನಿಸಿದ್ದನ್ನ ಬಿಟ್ಟರೆ ಬೇರೆ ಏನೂ ಅನುಮಾನಗಳು ನೆನಪಾಗಲಿಲ್ಲ. ಅವಳು ಬೇರೆ ಇತ್ತೀಚೆಗೆ ಎಲ್ಲೋ ಬಸ್ಟೇಂಡಲ್ಲಿ ಕಂಡು ಅವಳು ಡುಮ್ಮಿಯಾಗಿ ಇನ್ನಷ್ಟು ಕುಳ್ಳಿಯಾಗಿ ಕಂಡುಬಂದು, ಆಗ ಅವಳು ಅವಮಾನಿಸಿದ್ದು ಒಳ್ಳೆಯದೇ ಆಯಿತು. ಆದದ್ದೆಲ್ಲಾ ಒಳಿತೇ ಆಯಿತು ಎಂದು ಪುರಂದರದಾಸರಂತೆ ಹಾಡುತ್ತಾ ಬಂದಿದ್ದೆ. ಹಾಗಾಗಿ ಹೇಳಿಕೊಳ್ಳೋಣವೆಂದರೆ ಆ ಅಪಮಾನವು ಮಾಯವಾಗಿತ್ತು.
ಏನೂ ಅವಮಾನಗಳಿಲದ್ದ ನನ್ನಂತಹವರಿಗೆ ನಿಮ್ಮ ಪಾರ್ಟಿಯಲ್ಲಿ ಏನು ಪೋಸ್ಟ್ ಕೋಡುತ್ತೀರಿ ಎಂದು ಕೇಳಬೇಕೆನಿಸುತ್ತಿತ್ತು. ‘ಎಲ್ಲರಿಗೂ ಅವರವರ ಉಪಯೋಗಕ್ಕೆ ತಕ್ಕಂತಹ ಜಾಗ ಕೊಡಲಾಗುವುದು. ಎಲ್ಲರಲ್ಲೂ ಒಂದೊಂದು ಉಪಯೋಗಕರವಾದ ಉಪಯೋಗಗಳಿವೆ. ಅವರನ್ನು ಅದರಂತೆ ಉಪಯೋಗಿಸಿಕೊಳ್ಳಲಾಗುವುದು’ ಮಹಾದೇವ ಚೆನ್ನಾಗಿ ಹುರಿದಿದ್ದ ಮೀನೊಂದನ್ನು ಬಾಯಿಗಿಡುತ್ತಾ ಹೇಳಿದರು. ಮಂಗಳೂರಿನ ಕಡಲಿಂದ ಬಂದಿದ್ದ ಅಂಜಲ್ ಮೀನು ಯಾಕೋ ನವಿರಾಗಿರಲಿಲ್ಲ.
ಸುನಾಮಿ ಬಂದ ಮೇಲೆ ಕಡಲಿನ ಬದಿಯಲ್ಲಿರುವವರು ಹೆಚ್ಚು ಕಡಲು ಮೀನು ತಿನ್ನದೆ ಒಳನಾಡಿಗೆ ಕಡಲು ಮೀನು ಹೆಚ್ಚಾಗಿ ಬಂದು ಇಲ್ಲೂ ಹಾಳಾಗಲು ತೊಡಗಿತ್ತು.
‘ಮೀನು ತಿನ್ನುವಾಗ ಯಾವಾಗಲೂ ಹತ್ತಿರದಲ್ಲಿರುವ ಮೀನುಗಳನ್ನೇ ತಿನ್ನಬೇಕು, ದೂರದ ಮೀನುಗಳು ರುಚಿಯಾಗಿದ್ದರೂ ಕೆಟ್ಟುಹೋಗಿರುತ್ತವೆ’ ನಾನು ಹೊಸತಾದ ಸಾಮಾಜಿಕ ಸಿದ್ಧಾಂತವನ್ನು ಕಂಡುಹಿಡಿದವನಂತೆ ಇನ್ನೊಂದು ಮೀನಿಗೆ ಕೈ ಹಾಕಿದೆ.
ರಾಮದಾಸ್ ಆಗಲೇ ಅತ್ಯುತ್ತಮ ಆರಾಜಕವಾದಿಯಾಗಿ ಹೊರಹೊಮ್ಮುತ್ತಿದ್ದರು. ಯಾವುದು ಸ್ವಾತಂತ್ರ್ಯ? ಯಾವುದು ಬಂಧನ ಎಂದು ವಿಶ್ಲೇಷಿಸುತ್ತಾ ಎಲ್ಲದರಿಂದ ಹೇಗೆ ಎದ್ದು ಹೊರಬರಬೇಕು ಎನ್ನುವುದನ್ನು ಸುಂದರವಾಗಿ ವಿವರಿಸುತ್ತಿದ್ದರು.
‘ಅಲ್ಲ ಕಣ್ರಿ ಸ್ವಾತಂತ್ರ್ಯ, ಸಮಾನತೆ, ಸಹೋದರತೆಗಾಗಿ ಜೀವಮಾನ ಪೂರ್ತಿ ಹೊಡೆದಾಡಿದ ನಾವು, ಜೀವಮಾನ ಪೂರ್ತಿ ಒಬ್ಬಳೇ ಹೆಂಡತಿಯ ಕೈಯಲ್ಲಿ ಒಬ್ಬನೇ ಗಂಡನ ಕೈಯಲ್ಲಿ ಸಿಕ್ಕಿಬಿಟ್ಟಿದೆವಲ್ಲಾ ಏನು. ಸಮಾಜವಾದಿಗಳು ಕಣಿ ನಾವು’ ಎಂದು ಅವರು ಹೇಳುತ್ತಿದ್ದಂತೆ, ‘ಅಲ್ಲ ಸಾರ್ 2೦ ವರ್ಷಗಳ ಹಿಂದೆ ಇದನ್ನೆಲ್ಲ ನೀವು ಹೇಳಿದ್ರೆ ನಾವೆಲ್ಲ ಏಕೆ ಪರಿಶುದ್ಧ ಪತಿವ್ರತೆಯರಂತೆ ಇರಬೇಕಾಗಿತ್ತು. ಆಗ ಆಗಲಿಲ್ಲ. ಇನ್ನು ಕೂಡೋದಿಲ್ಲ. ಸಾರ್ ಏನ್ಸಾರ್ ನೀವು’ ಎಂದು ಪರಿತಪಿಸತೊಡಗಿದೆ.
ದೇವನೂರು ಮಾತ್ರ ತಮ್ಮ ಪಕ್ಷದ ಆಂತರಿಕ ವಿಷಯಗಳನ್ನು ತಲೆಯೊಳಗೆ ಮೌನವಾಗಿ ನಿರ್ವಹಿಸುತ್ತ, ರಾಜಕೀಯ ಅನಿವಾರ್ಯತೆಗಳು ಬಂದಾಗ ಮಾತ್ರ ಬಾಯಿ ಬಿಡುತ್ತಾ ಕೂತಿರಲು ನೋಡುತ್ತಿದ್ದರು. ಆದರೆ ಅವರ ತುಂಬು ಕಣ್ಣುಗಳು ಎಲ್ಲ ಕಡೆ ಓಡಾಡುತ್ತ, ಹೀಗೆ ಓಡಾಡುತ್ತಿರುವುದು ಪಕ್ಷದ ತಳಮಟ್ಟದ ಕಾರ್ಯಕರ್ತರಲ್ಲಿ ಅಶಿಸ್ತು ಹುಟ್ಟಿಸಬಹುದು ಎಂಬ ಕಾರಣಕ್ಕಾಗಿ ಅವರು ಕಣ್ಣಿನ ಓಡಾಟವನ್ನು ಹಿಡಿದಿಡಲು ನೋಡುತ್ತಿದ್ದುರು.
‘ಮಾದೇವ ನಿಮ್ಮ ಮಂತ್ರಿಮಂಡಲದಲ್ಲಿ ಜಾಗ ಸಿಗಬಹುದಾ?’ ಅಂತ ಕೇಳಬೇಕೆನ್ನಿಸುತ್ತಿತ್ತು.
ಸುಮಾರು 2೦ ವರ್ಷಗಳ ಹಿಂದೆ ಈ ಮಾದೇವರನ್ನ ಕ್ಲೋಸ್ ಫ್ರೆಂಡ್ ಮಾಡಿಕೊಳ್ಳಬೇಕು ಅಂತ ಏನು ಕೆಲಸವಿರದಿದ್ದರೂ ಅವರ ಜೊತೆ ಬಸ್ಸು ಹತ್ತಿ ಬೆಂಗಳೂರಿಗೆ ಹೊರಟಿದ್ದೆ. ಬೆಂಗಳೂರಿನಲ್ಲಿ ಏನೋ ಗಹನ ಕೆಲಸವಿದೆ ಅಂತ ಹೇಳಿದ್ದೆ. ನಿಮಗೆ ತುಂಬಾ ಕ್ಲೋಸ್ ಫ್ರೆಂಡ್ ಯಾರು ಅಂತ ಕೇಳಿದ್ದೆ, ಇಬ್ಬರ ಹೆಸರು ಹೇಳಿದ್ದರು. ಅವರಿಬ್ಬರ ಹೆಸರು ಅಷ್ಟೇನೂ ಆಸಕ್ತಿದಾಯಕವಾಗಿ ಕಾಣಿಸಲಿಲ್ಲ. ಇನ್ನು ಯಾರು ಅಂತ ಕೇಳಿದ್ದೆ. ನಾನು ಆಗಬಹುದಾ ಅಂತ ಕೇಳಬೇಕೆಂದಿದ್ದೆ. ಬೆಂಗಳೂರಲ್ಲಿ ಇಳಿದಾಗ ಕತ್ತಲಾಗಿತ್ತು. ನನಗೆ ಹೋಗಲು ಅಲ್ಲಿ ಯಾರೂ ಇರಲಿಲ್ಲ. ನಿಮ್ಮ ಜೊತೆಗೇ ಬರುತ್ತೇನೆ ಅಂದಿದ್ದೆ. ಹೀಗೆ ಬಾಲ ಹಿಡಕೊಂಡು ಬರುತ್ತಿರುವ ನನ್ನನ್ನು ಕಂಡು ಮಹಾದೇವ ಕಕ್ಕಾವಿಕ್ಕಿಯಾಗಿರಬೇಕು. ನಾನು ಎಲ್‌ಎಚ್‌ಗೆ ಹೋಗ್ಬೇಕು ಅಂದ್ರು, ನಾನು ಕಕ್ಕಾವಿಕ್ಕಿಯಾದೆ.
ಎಲ್‌ಎಚ್ ಅಂದ್ರೆ ನಾನು ಲೇಡಿಸ್ ಹಾಸ್ಟೆಲ್ ಅಂತ ತಿಳ್ಕೊಂಡಿದ್ದೆ. ಶಾಸಕರ ಭವನ ಅಂತ ಗೊತ್ತಿರ್ಲಿಲ್ಲ. ಅವರ ಜೊತೆ ಹೋದ ಮೇಲೆ ಗೊತ್ತಾಯಿತು.
ಬೆಳಿಗ್ಗೆ ಶಾಸಕರೊಬ್ಬರ 2ನೇ ಹೆಂಡತಿಯ ತುಂಟ ಮಗನೊಬ್ಬ ಆಟದ ಸಾಮಾನುಗಳನ್ನು ಶಾಸಕರ ಭವನದ 4ನೇ ಮಹಡಿಯಿಂದ ಕೆಳಕ್ಕೆ ಬಿಸಾಡಿ ಅಳುತ್ತಿದ್ದ. ಶಾಸಕರ ಡ್ರೈವರ್ ಕೆಳಗಿಳಿದು ತಂದು ಕೊಡದಿದ್ದರೆ ಜೋರಾಗಿ ಅಳುತ್ತಿದ್ದ. ಕೊಟ್ಟರೆ ಪುನಃ ಕೆಳಕ್ಕೆ ಬಿಸಾಕುತ್ತಿದ್ದ. ನಾನು ಪ್ರಜಾಪ್ರಭುತ್ವದ ಈ ಆಟವನ್ನು ಬೆಳಗಿನ ಎಳೆಬಿಸಿಲಲ್ಲಿ ನೋಡುತ್ತಾ ನಿಂತಿದ್ದೆ.
ಶಾಸಕರ ಹೆಂಡತಿ ಟಾಲ್‌ಸ್ಟಾಯ್ ಅಭಿಮಾನಿ, ಅನ್ನಾ ಕರೆನಿನಾ ಕುರಿತು ಮಾತನಾಡುತ್ತಿದ್ದರು. ಗಂಡನ ಕಿವಿ ಯಾರೋ ಕೊಂಚ ವಕ್ರವಾಗಿದೆ ಅಂತ ಅನ್ನಾಳಿಗೆ ಅನಿಸಿದ್ದು. ಆ ದಿನವೇ ಇನ್ನೊಬ್ಬಾತನ ಜೊತೆ ವ್ಯಭಿಚಾರ ಮಾಡಬೇಕಂತ ಆಕೆಗೆ ಅನಿಸಿದ್ದು… ಹೀಗೆ ನಡು ನಡುವಲ್ಲಿ ಗದ್ಗದಿತವಾಗಿ ಆಕೆ ಹೇಳುತ್ತಿದ್ದರು.
ನಾನು ಹೇಳಿ ಹೋಗಲು ಮಹಾದೇವ ನಿದ್ದೆಯಿಂದ ಏಳುವುದನ್ನೇ ಕಾಯುತ್ತಿದ್ದೆ. ಜಗದ ಸಂಕಟವನ್ನೆಲ್ಲ ಮುಖದಲ್ಲಿ ಹೊತ್ತು ಅವರು ನಿದ್ದೆ ಮಾಡುತ್ತಿದ್ದರು.