ಮಾರುಕಟ್ಟೆ ಆರ್ಥಿಕ ವಿಜ್ಞಾನ : ಶಾಲಾ ಶಿಕ್ಷಣ ಮತ್ತು ಭಾಷೆ- ಡಾ.ಎಚ್.ಡಿ.ಪ್ರಶಾಂತ್ ಲೇಖನ

                                                                                                                                            ಡಾ.ಎಚ್.ಡಿ.ಪ್ರಶಾಂತ್
                                   ಮಾರುಕಟ್ಟೆ ಆರ್ಥಿಕ ವಿಜ್ಞಾನ : ಶಾಲಾ ಶಿಕ್ಷಣ ಮತ್ತು ಭಾಷೆ
ಪ್ರಸ್ತಾವನೆ:
ಪ್ರಸ್ತುತ ಲೇಖನದ ಆಶಯ ಜಾಗತಿಕ ಮುಕ್ತ ಮಾರುಕಟ್ಟೆಯು ಕಲಿಕಾ ಮಾಧ್ಯಮವನ್ನು ಮತ್ತು ದೇಶಿಯ ಭಾಷೆಗಳನ್ನು ಹೇಗೆ ಪ್ರಭಾವಿಸಿ ನಿಯಂತ್ರಿಸುತ್ತಿದೆ ಎಂಬುದನ್ನು ಕುರಿತು ಒಂದಿಷ್ಟು ಚರ್ಚಿಸುವುದು. ಶಾಲಾ ಶಿಕ್ಷಣ ಹೇಗಿರಬೇಕು. ಅಲ್ಲಿನ ಪಠ್ಯಕ್ರಮದಲ್ಲಿ ಯಾವ ವಿಷಯವನ್ನು ಆದ್ಯತೆಯ ಮೇಲೆ ಕಲಿಸಬೇಕು. ಮುಕ್ತ ಮಾರುಕಟ್ಟೆಗೆ ಪೂರಕವಾಗಿ ಕಲಿಕಾ ಮಾಧ್ಯಮ ಅಥವಾ ಭಾಷಾ ಮಾಧ್ಯಮ ಯಾವುದಾಗಿರಬೇಕು, ಎಂಬುದನ್ನು ಜಾಗತಿಕ ಮಾರುಕಟ್ಟೆಯ ‘ಜ್ಞಾನ’ ಆಧಾರಿತ ಆರ್ಥಿಕ ವಿಜ್ಞಾನದ ನೆಲೆಯಲ್ಲಿ ವಿಶ್ಲೇಷಣೆ ಮಾಡಲು ಪ್ರಸ್ತುತ ಲೇಖನ ಪ್ರಯತ್ನಿಸುತ್ತದೆ.

ಮಾರುಕಟ್ಟೆ, ಶಿಕ್ಷಣ ಮತ್ತು ಭಾಷೆ ಕುರಿತಂತೆ ಅನೇಕ ಬಗೆಯ ಚರ್ಚೆಗಳು ಸಂಶೋಧನೆಗಳು, ಬರವಣಿಗೆಗಳು ನಡೆದಿವೆ. ಹಲವಾರು ವರ್ಷಗಳಿಂದ, ಶಿಕ್ಷಣ ಕ್ಷೇತ್ರ ಸರಿಪಡಿಸಲಾಗದಷ್ಟು ಹದಗೆಟ್ಟಿದೆ, ಶಿಕ್ಷಣದ ಕ್ರಮಗಳು ಮಕ್ಕಳ ಕಲಿಕೆಯನ್ನು ಕೆಟ್ಟದಾಗಿಸಿವೆ, ದೇಶಿಯ ಭಾಷಾ ಕಲಿಕೆಯಿಂದ ಭವಿಷ್ಯದಲ್ಲಿ ಬದುಕಿಗೆ ಯಾವುದೇ ಪ್ರಯೋಜನವಿಲ್ಲ, ಹೀಗಾಗಿ ಶಾಲಾ ಶಿಕ್ಷಣದ ವ್ಯವಸ್ಥೆಗೆ ಬಂದಿರುವ ಗಂಡಾಂತರವನ್ನು ಸುಧಾರಿಸಬೇಕಾಗಿದೆ…. ಹೀಗೆ ಇನ್ನೂ ಅನೇಕ ವಿಷಯ ಕುರಿತು ಹಲವು ಸಾಹಿತಿಗಳು, ಶಿಕ್ಷಣ ತಜ್ಞರು ಮತ್ತು ಸಮಾಜ ವಿಜ್ಞಾನಿಗಳು ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ/ ದಾಖಲಿಸುತ್ತಿದ್ದಾರೆ.
ಮಾರುಕಟ್ಟೆಯ ಪ್ರಭಾವ ಪರಿಣಾಮಗಳನ್ನು ಕುರಿತು ಅನೇಕ ಸಂಶೋಧನೆಗಳು ಮತ್ತು ಬರಹಗಳು ಹೊರಬಂದಿವೆ. ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ‘ಜ್ಞಾನ’ ಆಧಾರಿತ ಆರ್ಥಿಕ ವಿಜ್ಞಾನವು ಪ್ರಾಕೃತಿಕ ಪರಿಸರ ಸೇರಿದಂತೆ ಸಾಮಾಜಿಕ ಸಂಬಂಧಗಳನ್ನು ಕೂಡ ವಸ್ತು ವ್ಯಾಪಾರೀಕರಣ ಮಾಡಿದೆ. ‘ಕೈಗಾರಿಕ ಕ್ರಾಂತಿಯ ತರುವಾಯ’ದ ಸಮಾಜದಲ್ಲಿ ಬಂಡವಾಳಶಾಹಿ ಆರ್ಥಿಕತೆಯು ಉತ್ಪಾದನಾ ಸಂಘಟನೆಯಲ್ಲಿ ಹಲವು ಬಗೆಯ ಬದಲಾವಣೆಗಳನ್ನು ತಂದಿದೆ. ಈ ಬದಲಾವಣೆಗಳು ಉತ್ಪಾದನೆಯನ್ನು ಹೇಗೆ ಮಾಡಬೇಕು ಎನ್ನುವುದಕ್ಕೆ ಮಾತ್ರ ಸೀಮಿತವಾಗದೆ, ಎಂಥ ವಸ್ತುಗಳನ್ನು ಯಾವ ರೀತಿಯಲ್ಲಿ ಉತ್ಪಾದಿಸಬೇಕು ಎನ್ನುವುದು ಉತ್ಪಾದನಾ ಸ್ವರೂಪವಾಗಿದೆ. ಈ ಪ್ರಕ್ರಿಯೆಯು ನಿರ್ಧಿಷ್ಟವಾಗಿ ‘ಜ್ಞಾನ’ದ ಆರ್ಥಿಕ ಪಾತ್ರವನ್ನು ವಿಸ್ತರಿಸಿದೆ. ಇದರಿಂದ ದುಡಿಮೆಯ ಪ್ರಕ್ರಿಯೆಯಲ್ಲಿ; ಉತ್ಪಾದನಾ ಅವ-ಯವಗಳಲ್ಲಿ ಮತ್ತು ವಸ್ತು ಪದಾರ್ಥಗಳ ಅನುಭೋಗದಲ್ಲಿ ‘ಜ್ಞಾನ’ ಮತ್ತು ಮಾಹಿತಿಯ ಚಿನ್ಹೆ/ಚಹರೆಗಳು ಹೆಚ್ಚಾಗಿ ಕಾಣತೊಡಗಿದೆ. ಇದು ‘ಉಳ್ಳವರು ಮತ್ತು ಇಲ್ಲದವರ ನಡುವೆ ಅಸಮಾನತೆ’ಯನ್ನು ಮಾತ್ರ ಹೆಚ್ಚಿಸದೆ, ಸಾಮಾನ್ಯ ಬದುಕನ್ನು ಅಪಾಯದ ಅಂಚಿಗೆ ತಂದು ನಿಲ್ಲಿಸಿದೆ ಎನ್ನುವ ಅಪಾಯಕಾರಿ ಸಂಗತಿಗಳನ್ನು ಕಳೆದ ಇಪ್ಪತ್ತು ವರ್ಷಗಳಲ್ಲಿ ಸಮಾಜವಿಜ್ಞಾನ ಕ್ಷೇತ್ರದಲ್ಲಿ ನಡೆದಿರುವ ಸಂಶೋಧನೆಗಳು ಸ್ಪಷ್ಟಪಡಿಸುತ್ತವೆ.
ದುಡಿಮೆ ಆಧಾರಿತ ವಸ್ತುಪದಾರ್ಥಗಳ ಉತ್ಪಾದನೆಯಿಂದ ಸೇವಾ ಕ್ಷೇತ್ರಕ್ಕೆ ಉಂಟಾದ ಪರಿವರ್ತನೆ; ವೃತ್ತಿ ಆಧಾರಿತ ತಾಂತ್ರಿಕ ದುಡಿಮೆಗಾರರ ಬೆಳವಣಿಗೆ; ದುಡಿಮೆಯ ಪ್ರಪಂಚದಲ್ಲಿ ‘ಜ್ಞಾನ’ಕ್ಕೆ ದೊರೆತ ಮಹತ್ವ; ಸಂಶೋಧನೆ ಮಾಡಿದ ಹೊಸ ಹೊಸ ಆವಿಷ್ಕಾರಗಳು; ಯೋಜನೆಗಳನ್ನು ರೂಪಿಸುವಲ್ಲಿ ವ್ಯವಸ್ಥಾಪಕ ಮಾದರಿಯ ನಿಯಂತ್ರಿತ ಸರ್ಕಾರ; ಇನ್ನೂ ಮುಂತಾದ ಆರ್ಥಿಕ ಒಲವುಗಳು ಒಟ್ಟುಗೂಡಿ ಸಾಮಾಜಿಕ ಅಧಿಕಾರದಲ್ಲಿ ಉಂಟಾದ ಮಹತ್ವದ ಸ್ಥಿತ್ಯಂತರಗಳು ‘ನಾಲೆಡ್ಜ್ ಎಲೀಟ್’(knowledge Elite)ಗಳಿಗೆ ಮಹತ್ವದ ಸ್ಥಾನ ನೀಡುವ ಒತ್ತಡವನ್ನು ಉಂಟುಮಾಡಿತ್ತು. ‘ಜ್ಞಾನ’ಕ್ಕೆ ಸಾಮಾಜಿಕ ಪಾತ್ರಧಾರಿಗಳನ್ನು ರೂಪಿಸುವ ಸಾಮಥ್ರ್ಯ ಹಾಗೂ ಮಾನವ ಸಂಪನ್ಮೂಲಕ್ಕೆ ಇರುವ ವಿಶೇಷಾಧಿಕಾರವು ವಿಶಾಲವಾದ ‘ಕೈಗಾರಿಕ ತರುವಾಯ’ದ ಸಂಸ್ಕøತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿತ್ತು.
ಮಾಹಿತಿ ಸಮಾಜ ಕುರಿತ ಅಧ್ಯಯನಗಳನ್ನು ಮತ್ತು ಸಿದ್ಧಾಂತಗಳು ಆರ್ಥಿಕತೆಯ ಮೇಲೆ ಜ್ಞಾನದ ಹಿಡಿತವನ್ನು ಕುರಿತು ಪ್ರಮುಖವಾಗಿ ಎರಡು ರೀತಿಯ ಚರ್ಚೆಗಳನ್ನು ನಡೆಸುತ್ತವೆ. ಒಂದು, ಸಮಾಜೋ-ಆರ್ಥಿಕ ಜೀವನದಲ್ಲಿ ಮಾಹಿತಿ ತಂತ್ರಜ್ಞಾನದ ಪ್ರಾಮುಖ್ಯತೆಯ ಹೆಚ್ಚಳ ಮತ್ತು ಅದರ ಪ್ರಭಾವಗಳನ್ನು ಕುರಿತದ್ದಾದರೆ, ಮತ್ತೊಂದು ಮಾಹಿತಿ ಸ್ವರೂಪವೇ ಮಾರುಕಟ್ಟೆಯ ಸರಕಾಗಿರುವ ಬಗೆಯನ್ನು ವಿಶ್ಲೇಷಣೆ ಮಾಡುತ್ತದೆ. ಹೀಗಾಗಿ ‘ಜ್ಞಾನ’ ಎಂಬುದು ಸಮಕಾಲೀನ ಜಾಗತಿಕ ಮುಕ್ತ ಸಮಾಜದಲ್ಲಿ ಕೇವಲ ಒಬ್ಬ ವ್ಯಕ್ತಿಯ ಅಥವಾ ಸಂಸ್ಥೆಯ ಸ್ವತ್ತು ಅಥವಾ ಆಸ್ತಿಯಾಗದೆ, ಹೊಸ ಹೊಸ ಉತ್ಪಾದನಾ ತಾಂತ್ರಿಕತೆಯ ಮುಖ್ಯ ಕೀಲಿ ಕೈ ಆಗಿದೆ. ಇದು ತನಗೆ ಸರಿ ಎಂದು ಕಾಣುವ ಆರ್ಥಿಕ ಉತ್ಪಾದನೆಯನ್ನು ಮಾಡುವುದು ಸ್ಪಷ್ಟವಾಗಿ ತಿಳಿಯುತ್ತದೆ.
ಈ ಆರ್ಥಿಕ ಚಹರೆಯ ವಸ್ತುಪದಾರ್ಥವೇ ಸಮಕಾಲೀನ ‘ರಿಪ್ಲಕ್ಸ್‍ಟೀವ್ ಅಕ್ಯೂಮ್ಯುಲೇಷನ್ಸ್’ನ (Reflexive Accumulation) ಕೇಂದ್ರಬಿಂದು. ಇದರ ಪ್ರಮುಖ ಲಕ್ಷಣ ‘ಜ್ಞಾನ’ ಮತ್ತು ಸಂಕೇತ ಆಧಾರಿತ ಕೆಲಸವನ್ನು ಉತ್ಪಾದಕರು ಮತ್ತು ಗ್ರಾಹಕರ ಎರಡೂ ನೆಲೆಗಳಲ್ಲಿ ಹೆಚ್ಚು ಮಾಡುವುದು. ಅಮೂರ್ತ ವಸ್ತುಪದಾರ್ಥಗಳ ಮೇಲಿನ ಭಾವನೆಯು ಸ್ವತಂತ್ರ ಕಣಗಳಾಗಿ ಮಾರ್ಪಡುವ ರೀತಿಯಲ್ಲಿ ಸಮಕಾಲೀನ ಆರ್ಥಿಕ ಜೀವನವು, ಯಾವುದೂ ಇಲ್ಲದ ಸ್ಥಿತಿಯನ್ನು ಪ್ರತಿಪಾದಿಸುತ್ತಿದೆ. ಈ ಮಾದರಿಯಲ್ಲಿಯೇ ಜಾಗತಿಕ ವಲಯಗಳಲ್ಲಿ ಆರ್ಥಿಕ ವಿನಿಮಯ ಮತ್ತು ವ್ಯಾಪಾರ ನಡೆಯುತ್ತಿದೆ. ಈ ತೆರೆನಾದ ಪ್ರಕ್ರಿಯೆಯಿಂದ ಶಾಲಾ ಶಿಕ್ಷಣ ಮತ್ತು ದೇಶಿಯ ಭಾಷೆಗಳು ಹೊರತಾಗಿಲ್ಲ.
ಸ್ಥಿತ್ಯಂತರ ಕಾಲ:
1990ರ ದಶಕದ ಮೊದಲ ಭಾಗವು ಶಾಲಾ ಶಿಕ್ಷಣದ ಕ್ಷೇತ್ರದಲ್ಲಿ ಅತ್ಯಂತ ಪ್ರಮುಖವಾದ ಬದಲಾವಣೆಗಳನ್ನು ತಂದ ಪರ್ವಕಾಲ. ಅವೆಂದರೆ: ಒಂದು, ಥೈಲ್ಯಾಂಡ್‍ನ ಜಾಮ್‍ಟೈನ್‍ನಲ್ಲಿ 5 ರಿಂದ 9ನೇ ಮಾರ್ಚ್, 1990ರಲ್ಲಿ ನಡೆದ ‘ಎಜ್ಯುಕೇಷನ್ ಫಾರ್ ಆಲ್’’ ಎನ್ನುವ ಜಾಗತಿಕ ಸಮಾವೇಶದಲ್ಲಿ ಭಾಗವಹಿಸಿದ ಭಾರತ ಈ ಡಿಕ್ಲರೇಷನ್ಸ್‍ಗಳನ್ನು ಒಪ್ಪಿ ಸಹಿ ಮಾಡಿತು. ಎರಡು, 1991ರಲ್ಲಿ ಹೊಸ ಆರ್ಥಿಕ ನೀತಿಯ ಜಾರಿ. ಮೂರು, 1992ರಲ್ಲಿ ಆಚಾರ್ಯ ರಾಮಮೂರ್ತಿಯವರ ನೇತೃತ್ವದಲ್ಲಿ ಪುನರ್‍ಪರಿಷ್ಕರಣೆಗೊಂಡ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಸತ್ತಿನ ಅಂಗೀಕಾರ. ನಾಲ್ಕು, ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆಯಡಿಯಲ್ಲಿ ರಾಷ್ಟ್ರದ (ಡಿ.ಪಿ.ಇ.ಪಿ.) ಏಳು ರಾಜ್ಯಗಳ 42 ಜಿಲ್ಲೆಗಳಲ್ಲಿ ಆಚರಣೆಗೆ ತರಲು 1993ರಲ್ಲಿ ನೀತಿ-ನಿಯಮಗಳನ್ನು ರೂಪಿಸಲಾಯಿತು.

ಈ ನಾಲ್ಕು ವಿಷಯಗಳು ಒಂದಕ್ಕೂಂದು ಪೂರಕವಾದ ಮತ್ತು ಪ್ರಭಾವಿಸುವ ನೇರವಾದ ಸಹಸಂಬಂಧವನ್ನು ಹೊಂದಿವೆ.

ಜಾಮ್‍ಟೈನ್‍ನಲ್ಲಿ ನಡೆದ ಜಾಗತಿಕ ಸಮಾವೇಶವನ್ನು ಯು.ಎನ್. ಸಂಸ್ಥೆಯ ಪ್ರಮುಖ ನಿಯೋಗ(ಏಜೆಂಟ್)ಗಳಾದ ಯು.ಎನ್.ಡಿ.ಪಿ., ವಿಶ್ವಬ್ಯಾಂಕ್, ಯುನೆಸ್ಕೊ ಮತ್ತು ಯುನಿಸೆಫ್ ಜಂಟಿ ಸಹಯೋಗದಲ್ಲಿ ಸಂಘಟಿಸಲಾಗಿತ್ತು. ಈ ಸಮಾವೇಶದ ಚೌಕಟ್ಟಿನ ಪ್ರಮುಖ ಆಶಯ ‘ಮೂಲಕಲಿಕಾ ಅಗತ್ಯಗಳನ್ನು’ ಗುರುತಿಸಿ (Framework For Action to Meet Basic Learning Needs) ಅಳವಡಿಸಿ ಕೊಳ್ಳುವುದು. ಈ ಸಮ್ಮೇಳನದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣದ ಸ್ವರೂಪವನ್ನು ವಿಶ್ಲೇಷಣೆಗೆ ಒಳಪಡಿಸಿ 10 ಪ್ರಮುಖ ಕಲಂ/ಶೀರ್ಷಿಕೆಗಳಲ್ಲ್ಲಿ ಮತ್ತು 26 ಉಪ-ಶೀರ್ಷಿಕೆಗಳಲ್ಲ್ಲಿ ಸಮಾವೇಶದ ಡಿಕ್ಲರೇಷನ್ಸ್‍ಗಳನ್ನು ಪ್ರಚಾರಪಡಿಸಲಾಗಿದೆ. ಭಾರತವು ಈ ಸಮಾವೇಶದಲ್ಲಿ ಭಾಗವಹಿಸಿ ‘ಎಲ್ಲರಿಗೂ ಶಿಕ್ಷಣ ನೀಡುತ್ತೇವೆ’ ಎಂದು ಹೇಳಿ ಅದಕ್ಕೆ ಸಹಿ ಮಾಡಿತು. ಇದನ್ನು ‘ಜಾಮ್‍ಟೈನ್ ಡಿಕ್ಲರೇಷನ್ಸ್’ ಎಂದು ಪ್ರಪಂಚದಾದ್ಯಂತ ಪ್ರಚಾರ ಮಾಡಲಾಯಿತು. ಈ ಸಮಾವೇಶದ ದಾಖಲೆಗಳು ನವ-ಉದಾರವಾದಿ ಶಕ್ತಿಗಳಿಗೆ ಶಾಲಾ ಶಿಕ್ಷಣದಲ್ಲಿ ಪ್ರವೇಶ ಪಡೆಯುವ ತಂತ್ರಗಳನ್ನು ರೂಪಿಸುವ ಸಾಧನವಾಯಿತು. ಇದು ವಿಶ್ವಬ್ಯಾಂಕ್, ಸೇರಿದಂತೆ ಹಲವು ಅಂತರರಾಷ್ಟ್ರೀಯ ನೆರವಿನ ಮೂಲಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಪ್ರಾಥಮಿಕ(ಎಲಿಮೆಂಟರಿ ಶಿಕ್ಷಣವಲ್ಲ) ಶಿಕ್ಷಣದ ಅಭಿವೃದ್ಧಿಯಲ್ಲಿ ಮಧ್ಯಪ್ರವೇಶಿಕೆಗೆ ಬುನಾದಿ ಹಾಕಿತು. ಈ ಪ್ರಕ್ರಿಯೆಯು ರಾಷ್ಟ್ರದ ಆರ್ಥಿಕತೆ ಮೂಲಕ ಈ ಮುಂಚೆ ಕ್ರೋಢೀಕರಿಸುತ್ತಿದ್ದ ಸಂಪನ್ಮೂಲಗಳು ಅನಗತ್ಯ ಎನ್ನುವಂತೆ ಮಾಡಿತು. ಅಲ್ಲದೇ ಪ್ರಾಥಮಿಕ ಶಿಕ್ಷಣದ ಅಭಿವೃದ್ಧಿಗೆ ಹೊರಗಿನ ಸಂಪನ್ಮೂಲಗಳಿಗೆ (ಹಣಕಾಸಿನ ಮೂಲಗಳಿಗೆ) ನೆರವು ಕೋರಿ ಕರೆ ನೀಡಲಾಯಿತು. ಇದು ಐ.ಎಂ.ಎಫ್. ಮತ್ತು ವಿಶ್ವ ಬ್ಯಾಂಕ್‍ನ ಸ್ಟ್ರಕ್ಚರಲ್ ಅಡ್ಜೆಸ್ಟಮೆಂಟ್ ಪ್ರೋಗ್ರಾಂನ (Structeral Adjustment Programme-SAP) ಮತ್ತು ‘ಸಾಮಾಜಿಕ ಭದ್ರತಾ ಜಾಲ’(Social Safety Net) ಭಾಗವಾಗಿಯೇ ಈ ಪ್ರಕ್ರಿಯೆಯನ್ನು ಯು.ಎನ್.,ನ ನಿಯೋಗಗಳು ಮಾಡಿವೆ. ‘ಸಾಮಾಜಿಕ ಭದ್ರತಾ ಜಾಲ’, ಸಾಲ ಹೊಂದಾಣಿಕೆಯ ಕಾರ್ಯಕ್ರಮದ ಮೂಲಕ ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಸರ್ಕಾರಗಳ ಭಾಗವಹಿಸುವಿಕೆಯನ್ನು ಮತ್ತು ಸಾರ್ವಜನಿಕ ಬಂಡವಾಳ ಹೂಡಿಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವುದು ಇದರ ಪ್ರಮುಖ ಉದ್ದೇಶ.

ಭಾರತಕ್ಕೆ ಸಂಬಂಧಿಸಿದಂತೆ ವಿಶ್ವ ಬ್ಯಾಂಕ್‍ನ ಸ್ಟ್ರಕ್ಚರಲ್ ಅಡ್ಜೆಸ್ಟಮೆಂಟ್ ಪ್ರೋಗ್ರಾಂನ ಪೂರ್ವ ಷರತ್ತು ಸಭೆಯ ಆಶಯ, ಸಾಮಾಜಿಕ ಸೇವಾ ವಲಯಗಳಲ್ಲಿ ಅದರಲ್ಲಿಯೂ ನಿರ್ದಿಷ್ಟವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರ ತೊಡಗಿಸುವ ಸಾರ್ವಜನಿಕ ವೆಚ್ಚವನ್ನು ಹಂತ ಹಂತವಾಗಿ ಕಡಿತಗೊಳಿಸುವುದಾಗಿತ್ತು. ಬಹು ಪ್ರಮಾಣದ ಜನರಿಗೆ ಗುಣ್ಣಮಟ್ಟದ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳು ದೊರಕದೇ ಇರುವ ರಾಷ್ಟ್ರಗಳಿಗೆ ಎಸ್.ಎ.ಪಿ.,ನ ಪ್ರಿ-ಕಂಡಿಶನ್ಸ್‍ಗಳು ನಿಗೂಢವಾದ ಮತ್ತು ಅರ್ಥವಾಗದ ಪ್ರಶ್ನೆಗಳಾಗಿದ್ದವು. ಇವುಗಳನ್ನು ಉಪಕಾರ ಭಾವನೆಯಿಂದ ಜಗತ್ತಿಗೆ ಹೇರಲು ಮೊದಲು ಪ್ರಾರಂಭಿಸಿದ ಯು.ಎಸ್.ಎ. ಮತ್ತು ಶಕ್ತಿಯುತ ಬಂಡವಾಳಶಾಹಿ ಆರ್ಥಿಕತೆಗೆ ಶಿಕ್ಷಣ ಕ್ಷೇತ್ರದ ಬಗ್ಗೆ ಕನಿಷ್ಠ ಮಟ್ಟದ ಸಂವೇದನೆಯು ಇಲ್ಲ. ‘ಜ್ಞಾನ ಆರ್ಥಿಕತೆ’ಯ ಕಡೆಗೆ ಚಲಿಸಲು ಯಾರು ಒತ್ತಾಸೆಯಾಗಿ ನಿಂತರೂ ಅವರೇ ‘ಎಜ್ಯುಕೇಷನ್ ಫಾರ್ ಆಲ್/ ಎಲ್ಲರಿಗೂ ಶಿಕ್ಷಣ’ ಎನ್ನುವ ಕಾರ್ಯಕ್ರಮದ ಮೂಲಕ ಮೇಲಿಂದ ಮೇಲೆ ತೋರಿಕೆಯ ವಕೀಲಿಕೆಯನ್ನು ಅದರ ಪರವಹಿಸಿದರು. ಇಲ್ಲಿ ನಿಗೂಢವಾಗಿ ಮುಚ್ಚಿಟ್ಟ ಕಾರ್ಯಸೂಚಿಗಳು (ಹಿಡನ್ ಅಜೆಂಡಾ) ಯಾವುವು? ಎಂಬ ಪ್ರಶ್ನೆಯನ್ನು ಒಬ್ಬರಿಂದ ಕೇಳಲು ಸಾಧ್ಯವಿಲ್ಲ.

ಜಾಮ್‍ಟೀನ್ ಸಮಾವೇಶದ ನಂತರದ ಅವಧಿಯಲ್ಲಿ ಅಂತರಾಷ್ಟ್ರೀಯ ದಾನಿ ಸಂಸ್ಥೆಗಳು ಹೆಚ್ಚು ಸಂಖ್ಯೆಯಲ್ಲಿ ನಮ್ಮ ದೇಶದ ಮೂಲಶಿಕ್ಷಣವನ್ನು ಪ್ರೋತ್ಸಾಹಿಸಲು ನೀಲಿ ನಕ್ಷೆಗಳು, ಮಾದರಿಗಳು ಮತ್ತು ಹೊಸದೃಷ್ಟಿಗಳನ್ನು ನೀಡಲು ಕಾತರರಾಗಿರುವುದನ್ನು ಕಾಣುತ್ತೇವೆ. ಸ್ವದೇಶಿ, ಕ್ರಿಯಾತ್ಮಕ ಹಾಗೂ ಪರ್ಯಾಯ ಶಿಕ್ಷಣ ಕಾರ್ಯಕ್ರಮಗಳು ಸಾಕಷ್ಟು ಇದ್ದರೂ, ದಾನಿ ಸಂಸ್ಥೆಗಳು ರೂಪಿಸಿರುವ ಕಾರ್ಯಕ್ರಮಗಳ ಹಾಗೂ ಪ್ರಭಾವ ನೆಲೆಯೂರುತ್ತಿದೆ. ಇದರ ಪರಿಣಾಮವೆಂದರೆ- ಶಿಕ್ಷಣ ದೊರಕಿಸಿಕೊಳ್ಳುವುದೆಂದರೆ ‘ಮಾನವ ಬಂಡವಾಳ’ವನ್ನು ಹೆಚ್ಚಿಸುವ ಒಂದು ವಿಧಾನ ಎಂಬ ನಂಬಿಕೆಯನ್ನು ಹೊತ್ತ ಹಲವಾರು ಮೂಲಶಿಕ್ಷಣದ ಯೋಜನೆಗಳು ದೇಶದಲ್ಲಿ ಪ್ರೋತ್ಸಾಹಿಸಲ್ಪಟ್ಟಿವೆ. ನವ ಉದಾರ ನೀತಿಯ ಆರ್ಥಿಕ ಕಾರ್ಯಕ್ರಮ ಸಹ ಇದಕ್ಕೆ ಒತ್ತುಕೊಟ್ಟಿದೆ. ಭಾರತದಲ್ಲಿ ಈಗ ಎಲ್ಲರಿಗಿಂತ ಮುಂದಿರುವ ದಾನಿ ಸಂಸ್ಥೆ ವಿಶ್ವಬ್ಯಾಂಕು. ಸಾಮಾಜಿಕ ಅಭಿವೃದ್ಧಿ, ಸಮಾಜ ಕಲ್ಯಾಣ, ಬಡತನದ ನಿರ್ಮೂಲನೆ ಮತ್ತಿತರ ದೊಡ್ಡ ಗುರಿಗಳಿಗೆ ಮೂಲ ಶಿಕ್ಷಣವನ್ನು ಜೊತೆಗೂಡಿಸಿರುವುದಾಗಿ ಹೇಳಿಕೊಂಡಿದೆಯಾದರೂ ಅದರ ಪ್ರಮುಖ ಕಾಳಜಿ ಎಂದರೆ ವಿಶ್ವಾಸಾರ್ಹ ಹಾಗೂ ಪರಿಣತಿ ಪಡೆದ ಕಾರ್ಮಿಕರÀಪಡೆಯನ್ನು ಭಾರತದಲ್ಲಿ ಬೆಳೆಸಲು ಅಡಿಪಾಯ ಹಾಕುವುದು. ಅಂತಹ ನೀತಿ ಹಾಗೂ ತಂತ್ರಗಳು, ಒಂದು ಪದ್ಧತಿಯು ಕಾರ್ಯನಿರ್ವಹಿಸುವುದನ್ನು ಖಾತರಿಗೊಳಿಸಿಕೊಳ್ಳಲು ಬೇಕಾಗುವ ಕನಿಷ್ಠ ಅಂಶಗಳನ್ನು ರಾಷ್ಟ್ರಾಡಳಿತ ದೊರಕಿಸಿ ಕೊಡಲಿ ಎಂದು ಹೆಚ್ಚು ಹೆಚ್ಚಾಗಿ ಒತ್ತಡ ಹೇರಿ, ಸಾರ್ವತ್ರಿಕ ಅವಕಾಶ, ಸಮಾನತೆ, ನಿರ್ವಹಣೆ ಮತ್ತು ನಿರಂತರ ಅಭಿವೃದ್ಧಿ ಇವುಗಳನ್ನು ಸಮಾಜದ ಬೇಕಾಬಿಟ್ಟಿ ಇಚ್ಛೆಗೆ ಬಿಡಲಾಗುತ್ತದೆ. ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಅಂಚಿನಲ್ಲಿ ಬದುಕುತ್ತಿರುವ ನಮ್ಮ ಎಷ್ಟೋ ಜನಸಮುದಾಯಗಳು ಶಿಕ್ಷಣಕ್ಕಾಗಿ ಹಣವನ್ನು ವ್ಯಯಿಸುವುದು ಸಾಧ್ಯವಿಲ್ಲ ಎಂಬುದನ್ನು ಮೇಲಿನ ಮನೋಧರ್ಮ ನಿರ್ಲಕ್ಷಿಸುವುದರಿಂದ ಅದು ವಿಶೇಷವಾಗಿ ಸಮಸ್ಯಾತ್ಮಕವಾಗಿದೆ. ಮೂಲಶಿಕ್ಷಣದ ಬಗ್ಗೆ ಸಮುದಾಯಗಳು ಹೊಣೆಯನ್ನು ಹೊತ್ತು, ನೆರವು ನೀಡಬೇಕೆಂದು ಒತ್ತುಕೊಡುವ ತಂತ್ರಗಳು, ಮೂಲ ಶಿಕ್ಷಣದ ಕಾರ್ಯಕ್ರಮಗಳ ಸ್ಥಾಪನೆ ಮತ್ತು ನಿರ್ವಹಣೆ ಪರವಾಗಿ ಭಾಗವಹಿಸುವ ಸಾಮಥ್ರ್ಯವನ್ನು ಬಡ ಹಾಗೂ ಅಂಚಿನಲ್ಲಿರುವ ಸಮುದಾಯಗಳು ಪಡೆದಿಲ್ಲ ಎಂಬುದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಇದೇ ಕಾರಣಕ್ಕೆ, ಈ ಸಮುದಾಯಗಳ ಶಾಲೆಗಳು, ಸಾರ್ವಜನಿಕ ಶಿಕ್ಷಣ ವ್ಯವಸ್ಥೆ, ದೇಶೀಯ ಭಾಷೆಯ ಕಲಿಕಾ ಮಾಧ್ಯಮ ವಿಷಾದಕರ ಪರಿಸ್ಥಿತಿಯನ್ನು ತಲುಪಿವೆ.

ಸರ್ಕಾರಿ ಶಾಲೆಗಳಲ್ಲಿ ಅಸಹಾಯಕ ಬಡವರ ಮಕ್ಕಳು ಮಾತ್ರ ಉಳಿಯುತ್ತಾರೆ:
ಜಿಲ್ಲಾ ಶಿಕ್ಷಣ ಮಾಹಿತಿ ವ್ಯವಸ್ಥೆಯು (District Information System of Education –DISE) 2012ರಲ್ಲಿ ಪ್ರಕಟಿಸಿರುವ ಅಂಕಿ-ಸಂಖ್ಯೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದರೆ, 2005 ರಿಂದ ನಡೆಯುತ್ತಿರುವ ಗುಣಮಟ್ಟದ ಕಲಿಕಾ ವಿಶ್ಲೇಷಣೆಯು ತಕ್ಷಣಕ್ಕೆ ಮಕ್ಕಳ ದಾಖಲಾತಿಯ ಮೇಲೆ ಹೆಚ್ಚು ಪರಿಣಾಮವನ್ನು ಉಂಟು ಮಾಡಿರುವುದು ತಿಳಿಯುತ್ತದೆ. ಆರ್.ಟಿ.ಇ. 2009ರ ತತ್ವದಂತೆ ಸರ್ಕಾರ ಬಹುದೊಡ್ಡ ಪ್ರಮಾಣದಲ್ಲಿ ಎಲ್ಲಾ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಒದಗಿಸಬೇಕು. ಆದರೆ ಡಿ.ಐ.ಎಸ್.ಇ.(ಶಿಕ್ಷಣ ವಲಯದಲ್ಲಿ ಡೈಸ್ ಎಂದೇ ಗುರುತಿಸಲ್ಪಟ್ಟಿದೆ) ಮಾಹಿತಿ ಪ್ರಕಾರವೇ ನಿರಂತರವಾಗಿ ದೇಶದಲ್ಲಿ ಖಾಸಗಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ. ಇದು ಸರ್ಕಾರಗಳೇ ಎಲ್ಲರಿಗೂ ಶಿಕ್ಷಣ ನೀಡಬೇಕು ಎಂಬುದನ್ನು ಹುಸಿಗೊಳಿಸುತ್ತಿದೆ. ಡಿ.ಐ.ಎಸ್.ಇ. ನ 2012ರ ಅಂಕಿ-ಸಂಖ್ಯೆಯ ಪ್ರಕಾರ 1-5ನೇ ತರಗತಿಯಲ್ಲಿ ಕಲಿಯುತ್ತಿರುವ ಒಟ್ಟು ಮಕ್ಕಳಲ್ಲಿ (ಗ್ರಾಮೀಣ ಮತ್ತು ನಗರ ಪ್ರದೇಶಗಳು ಸೇರಿದಂತೆ) ಶೇಕಡಾ 29.8ರಷ್ಟು ಮಕ್ಕಳು ಖಾಸಗಿ ಶಾಲೆಗಳಿಗೆ ಹಾಜರಾಗುತ್ತಿದ್ದಾರೆ. ಈ ಪ್ರಮಾಣವು 2010ರಲ್ಲಿ ಶೇಕಡಾ 22.56ರಷ್ಟು ಇದ್ದದ್ದು, ಕೇವಲ ಎರಡು ವರ್ಷಗಳಲ್ಲಿ ಅಂದರೆ 2012ರಲ್ಲಿ ಶೇಕಡ 5.8ರಷ್ಟು ಹೆಚ್ಚಳ ಕಂಡಿದೆ. ಇದೇ ರೀತಿಯ ಬೆಳವಣಿಗೆ ಪ್ರವೃತ್ತಿ ಮುಂದುವರಿದರೆ 2012ರಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳು ಸೇರಿದಂತೆ ಶೇಕಡಾ 35ರಷ್ಟು ಅಥವಾ ಅದಕ್ಕಿಂತಲೂ ಹೆಚ್ಚು ಮಕ್ಕಳು ಖಾಸಗಿ ಶಾಲೆಗೆ ಹಾಜರಾಗುತ್ತಿದ್ದಾರೆ ಎಂಬುದನ್ನು ಊಹಿಸಿಕೊಳ್ಳಬಹುದು. ಕರ್ನಾಟಕದಲ್ಲಿ 2010-11ನೇ ಶೈಕ್ಷಣಿಕ ವರ್ಷದಲ್ಲಿಯೇ ಖಾಸಗಿ ಶಾಲೆಗಳಿಗೆ ಮಕ್ಕಳ ಹಾಜರಾತಿ ಪ್ರಮಾಣವು ಶೇಕಡಾ 40ಕ್ಕಿಂತಲೂ ಹೆಚ್ಚಾಗಿದೆ.

ಗ್ರಾಮೀಣ ಮತ್ತು ನಗರ ಎರಡು ಪ್ರದೇಶಗಳು ಸೇರಿದಂತೆ ಖಾಸಗಿ ಶಾಲೆಗಳಿಗೆ ಮಕ್ಕಳ ಹಾಜರಾತಿ ಬೆಳವಣಿಗೆ ಪ್ರಮಾಣವು ಪ್ರತಿ ವರ್ಷ ಶೇಕಡಾ 10ರಷ್ಟು ಹೆಚ್ಚಳವಾಗುತ್ತಿದೆ. ಇದನ್ನು 2014ರ ಲೋಕಸಭಾ ಚುನಾವಣೆ ವೇಳೆಗೆ ಲೆಕ್ಕ ಹಾಕಿದರೆ, ಇಂಡಿಯಾದಲ್ಲ್ಲಿ ಶೇಕಡಾ 41ರಷ್ಟು ಮಕ್ಕಳು ಖಾಸಗಿ ಶಾಲೆಗಳಲ್ಲಿ ಇರುತ್ತಾರೆ. ನಂತರದ ಐದು ವರ್ಷಕ್ಕೆ ಅಂದರೆ 2019ರ ಲೋಕಸಭಾ ಚುನಾವಣೆ ಬರುವ ವೇಳೆಗೆ ಖಾಸಗಿ ವಲಯವೇ ಭಾರತದಲ್ಲಿ ಶಿಕ್ಷಣ ಒದಗಿಸುವ ಔಪಚಾರಿಕ ಕ್ಷೇತ್ರವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಇದಕ್ಕೂ ಕೂಡ ಆರ್.ಟಿ.ಇ. 2009ರ ಬೆಂಬಲವಿದೆ. ಅದು ಹೇಗೆಂದರೆ, ಆರ್.ಟಿ.ಇ. 2009ರಲ್ಲಿ ತಿಳಿಸಿರುವಂತೆ ಹಿಂದುಳಿದ ವರ್ಗದ ಮಕ್ಕಳಿಗೆ ಶೇಕಡಾ 25ರಷ್ಟು ಮೀಸಲಾತಿಯನ್ನು ಖಾಸಗಿ ಶಾಲೆಗಳಲ್ಲಿ ಸರ್ಕಾರಿ ಕೋಟಾದಲ್ಲಿ ನೀಡಿದರೆ ಆ ಕೋಟಾದಲ್ಲಿಯೂ ಮೀಸಲಾತಿ ಸಿಗದ ಅತ್ಯಂತ ಕಡುಬಡವರ ಮಕ್ಕಳು ಮಾತ್ರ ಸರ್ಕಾರಿ ಶಾಲೆಗಳಲ್ಲಿ ಉಳಿಯುತ್ತಾರೆ. ಇದು ಜಾಗತಿಕ ಮಾರುಕಟ್ಟೆಯ ಖಾಸಗೀಕರಣದ ತಂತ್ರಗಾರಿಕೆ.

ಶಾಲಾ ಭಾಗವಹಿಸುವಿಕೆಯಲ್ಲಿ ಮಾತ್ರ ಅಸಮಾನತೆ ಹೆಚ್ಚುತ್ತಿಲ್ಲ:
ಈ ಪ್ರಕ್ರಿಯೆಯು ಕೇವಲ ಖಾಸಗಿ ಶಾಲೆಗಳಲ್ಲಿ ಮಕ್ಕಳ ಶಾಲಾ ಭಾಗವಹಿಸುವಿಕೆಯ ಪ್ರಮಾಣವನ್ನು ಮತ್ತು ಶಾಲಾ ವ್ಯವಸ್ಥೆಯಲ್ಲಿ ಮಾತ್ರ ಅಸಮಾನತೆಯನ್ನು ಹೆಚ್ಚಿಸುವುದಿಲ್ಲ. ಈ ಅಸಮಾನತೆಯು ಶಾಲೆಯ ಹೊರಗೆ ಲಿಂಗ ಹಾಗೂ ವರ್ಗ, ಜಾತಿ ವ್ಯತ್ಯಾಸಗಳನ್ನು ಹೆಚ್ಚಿಸುತ್ತದೆ. ಈ ಬೆಳವಣಿಗೆಯ ಅರ್ಥ, ಶಾಲೆಗಳ ಭಿನ್ನತೆ, ಭಾಷೆಯಲ್ಲಿನ ಬಹುತ್ವ ಮತ್ತು ಸಮಾಜದ ಅನೇಕತ್ವವನ್ನು ಪ್ರತಿಬಿಂಬಿಸುತ್ತದೆ ಎಂದಲ್ಲ. ಆದರೆ, ಶಿಕ್ಷಣದ ವ್ಯಾಪಾರೀಕರಣ ಹಾಗೂ ಕೋಮುವಾದಗಳು ತಮ್ಮ ಕಾರ್ಯಕ್ರಮಗಳಿಗೆ ಶೈಕ್ಷಣಿಕ ಸಂಸ್ಥೆಗಳನ್ನು ತಮ್ಮ ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡಿರುವುದು ಕಂಡು ಬರುತ್ತಿದೆ. ಸರ್ಕಾರಗಳು ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಬೆಂಬಲ ಮತ್ತು ಸಾಕಷ್ಟು ಅನುದಾನವನ್ನು ನೀಡದೆ, ಅವುಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದರಿಂದ ಶಾಲಾ ಶಿಕ್ಷಣದಲ್ಲಿಯೇ ಒಂದು ದೊಡ್ಡ ಖಾಸಗಿ ಮಾರುಕಟ್ಟೆ ಬೆಳೆಯಲು ಅವಕಾಶ ನೀಡಿದೆ. ಇದು ಸಾಮಾಜಿಕ ಮತ್ತು ಆರ್ಥಿಕವಾಗಿ ಭಿನ್ನವಾಗಿರುವ ವಿದ್ಯಾರ್ಥಿ ಸಮುದಾಯದ ನಡುವೆ ಅಸಮಾನತೆಯನ್ನು ಹೆಚ್ಚಿಸುತ್ತಿದೆ. ಪಠ್ಯಕ್ರಮ, ಶಾಲಾ ವ್ಯವಸ್ಥೆ, ಬೋಧನಾವಿಧಾನ, ಮತ್ತು ಭಾಷಾ ಮಾಧ್ಯಮದ ಜೊತೆಗೆ ಬಂದಿರುವ ಅನೌಪಚಾರಿಕ ಶಾಲಾ ಶಿಕ್ಷಣ ವ್ಯವಸ್ಥೆಯು ಶಾಲೆಗಳ ನಡುವೆ ಪ್ರಬೇಧೀಕರಣವನ್ನು ಹುಟ್ಟುಹಾಕುತ್ತಿದೆ. ಅನೇಕ ಭಿನ್ನತೆಗಳನ್ನು ತರುತ್ತಿದೆ. ಇದರ ತಕ್ಷಣದ ಪರಿಣಾಮಗಳಿಗೆ ಒಳಪಡುವವರು ಗ್ರಾಮೀಣ ಪ್ರದೇಶದ ಮಕ್ಕಳು. ಅದರಲ್ಲಿಯೂ ಹೆಣ್ಣು ಮಕ್ಕಳು ಪ್ರಮುಖರು. ಮುಖ್ಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಭಿನ್ನವಾಗಿರುವ ವಿದ್ಯಾರ್ಥಿಗಳ ನಡುವೆ, ಸಮುದಾಯಗಳ ನಡುವೆ ಹೋಲಿಕೆಯನ್ನು ಎತ್ತಿ ತೋರಿಸುತ್ತಿದೆ. ಅಲ್ಲದೇ ಎಲ್ಲರೂ ಒಂದೇ ಎಂದು ನಮ್ಮ ಸಂವಿಧಾನ ಸಾರುವ ಪೌರತ್ವ ಒಂದು ಎನ್ನುವ ಕಲ್ಪನೆಯನ್ನು ಬೆಳೆಸುವುದು ಶಿಕ್ಷಣದ ಕಾರ್ಯವೇ ಅಲ್ಲ ಎಂದು ಸಾರುವಂತಿದೆ ಶಾಲಾ ಶ್ರೇಣೀಕರಣ.

ಈ ಪ್ರಕ್ರಿಯೆಯು ಸಮಾಜದಲ್ಲಿ ಲಿಂಗಾಧಾರಿತ, ಜಾತಿ ಆಧಾರಿತ ಮತ್ತು ವರ್ಗ ಆಧಾರಿತ ಅಸಮಾನತೆಗಳನ್ನು ಹೆಚ್ಚಿಸುತ್ತಿದೆ. ಅಲ್ಲದೇ ವಿಭಿನ್ನ ಶಾಲೆಗಳಿಗೆ ಒಂದೇ ಕುಟುಂಬದ ಮಕ್ಕಳನ್ನು ಶಾಲೆಗೆ ಕಳುಹಿಸುವಾಗಲೂ ಹೆಣ್ಣು ಮಕ್ಕಳನ್ನು ಹತ್ತಿರದ ಸರ್ಕಾರಿ(ಕನ್ನಡ ಶಾಲೆ) ಶಾಲೆಗೂ, ಗಂಡು ಮಕ್ಕಳನ್ನು ಹೆಚ್ಚು ಹಣ ಸುಲಿಗೆ ಮಾಡುವ ಖಾಸಗಿ(ಇಂಗ್ಲೀಷ್ ಶಾಲೆ) ಶಾಲೆಗಳಿಗೂ ಕಳುಹಿಸುತ್ತಾರೆ ಎಂಬುದನ್ನು ಅನೇಕ ಅಧ್ಯಯನಗಳು ಗುರುತಿಸಿವೆ. ಇದು ಕೇವಲ ಅಸಮಾನತೆಯನ್ನು ಪೋಷಿಸುವ ಬೆಳೆಸುವ ಪ್ರಕ್ರಿಯೆಯಾಗದೆ. ಶ್ರೇಣೀಕೃತ ಶಾಲಾ ವ್ಯವಸ್ಥೆಯು ಮಕ್ಕಳಿಗೆ ಸಮಾನತೆಯ ಆಶಯಗಳನ್ನು ಕಲಿಸದೆ ಅಸಮಾನತೆಯನ್ನು ಕಲಿಕೆಯಿಂದ ಆಟವಾಡುವವರೆಗೆ ಹೇಳಿಕೊಡುತ್ತಿದೆ. ಇದು ನಮ್ಮ ಶೈಕ್ಷಣಿಕ ವಲಯಕ್ಕೆ ಮಾತ್ರ ಸೀಮಿತವಾದ ಸವಾಲಲ್ಲ. ಇದು ನಮ್ಮ ಪ್ರಜಾತಾಂತ್ರಿಕ ವ್ಯವಸ್ಥೆಗೆ, ಶಾಂತಿ-ಸಹಬಾಳ್ವೆ-ಸಂರಕ್ಷಣೆ ಮತ್ತು ಸಾಮಾಜಿಕ ಬದಲಾವಣೆಯನ್ನು ತರುವ ಮನೋಭಾವಗಳ ಬೆಳವಣೆಗೆಗೆ ಬಹುದೊಡ್ಡ ಸವಾಲಾಗಿದೆ. ಇದು ಸಂವಿಧಾನದ ಆಶಯಗಳಾದ ಪ್ರಜಾಸತ್ತೆ, ಸಮಾಜವಾದ, ಸಮತಾವಾದ, ಸಾರ್ವಭೌಮ, ಜಾತ್ಯತೀತ, ಪ್ರಜಾತಂತ್ರ ಗಣರಾಜ್ಯ ಸಮಾಜದ ನಿರ್ಮಾಣಕ್ಕೆ ಸವಾಲಾಗಿದೆ. ಇಂದು ಶಿಕ್ಷಣದ ಗುರಿ ಸಾಕ್ಷರತೆಗೆ ಸಮಾನವಾದ ಲೆಕ್ಕ ಮತ್ತು ಜೀವನ ಕೌಶಲ್ಯಕ್ಕೆ ಆದ್ಯತೆ ನೀಡಿ, ಜಾಣ್ಮೆ ಮತ್ತು ಶಿಸ್ತಿನಿಂದ ಸಾಮಾಜಿಕ ಸಂದರ್ಭಗಳನ್ನು ವ್ಯವಹರಿಸುವ ಮತ್ತು ಮಾರುಕಟ್ಟೆಯ ಆರ್ಥಿಕತೆ “Knowledge Economy”ಗೆ ಪೂರಕವಾಗಿ ಅಭಿವೃದ್ಧಿಪಡಿಸುವ ನಿಯಂತ್ರಿತ ‘ಬುದ್ಧಿವಂತ’ರನ್ನು ತಯಾರು ಮಾಡುವುದಾಗಿದೆ. ಆ ಮೂಲಕ ಸಂವಿಧಾನದ ಆಶಯಕ್ಕೆ ಎಳ್ಳು ನೀರು ಬಿಡಲಾಗುತ್ತಿದೆ! ಜಾಗತಿಕ ಬಂಡವಾಳಶಾಹಿಗಳು, ಮುಕ್ತಮಾರುಕಟ್ಟೆಯಲ್ಲಿ ತಕ್ಷಣ ಹಣ ಮಾಡಿದವರೂ ಸೇರಿದಂತೆ ಭೂಗಳ್ಳರು ಮತ್ತು ಭೂಮಾಫಿಯಾದಲ್ಲಿ ಇರುವವರು, ಶೈಕ್ಷಣಿಕ ವ್ಯವಸ್ಥೆಯ ನಿಯಂತ್ರಣ ಮಾಡುವ ಮೂಲಕ ಅಸಮಾನತೆಯನ್ನು ಹಣದ ಮೂಲಕ ಅಸಾಧಾರಣ ನೆಲೆಯಲ್ಲಿ ರೂಪಿಸುತ್ತಿದ್ದಾರೆ. ಈ ಬೆಳವಣಿಗೆಯು ಹಣ ಇರುವವರಿಗೆ ಮಾತ್ರ ಎಲ್ಲ. ಹಣವಿಲ್ಲದವರಿಗೆ ಇಲ್ಲಿ ಅವಕಾಶವೇ ಇಲ್ಲ ಎನ್ನುವ ಬಹಳ ಅಪಾಯಕಾರಿಯಾದ ಪ್ರವೃತ್ತಿಯ ಬೆಳವಣಿಗೆಗೆ ಕಾರಣವಾಗಿದೆ.
ಮಾರುಕಟ್ಟೆಯ ಭಾಷೆ:
ಜಾಗತಿಕ ಮಾರುಕಟ್ಟೆಯ ಆರ್ಥಿಕ ವಿಜ್ಞಾನದ ನೀತಿಯಿಂದ ಉತ್ಪಾದನೆ, ಭೂಮಿ ಒಳಗೊಂಡಂತೆ ಎಲ್ಲಾ ಸ್ಥಳೀಯ ಸಂಪನ್ಮೂಲಗಳು ಸ್ಥಳೀಯ ಮಾರುಕಟ್ಟೆಯ ನಿಯಂತ್ರಣದಿಂದ ಜಾಗತಿಕ ಮಾರುಕಟ್ಟೆಯ ವ್ಯವಹಾರವಾಗಿ ರೂಪಾಂತರಗೊಂಡಿದೆ. ಈ ರೂಪಾಂತರವು ಪ್ರಕ್ರಿಯೆಯು ಸಾಮಾಜಿಕ ಮತ್ತು ಸಾಂಸ್ಕøತಿಕ ಕ್ಷೇತ್ರದಿಂದ ಪ್ರಾರಂಭವಾಗಿ ಎಲ್ಲವನ್ನು ಕಾರ್ಪೋರೆಟ್  ಆಡಳಿತದ ನಿಯಂತ್ರಣಕ್ಕೆ ಒಳಪಡುತ್ತಿರುವುದು. ಆ ಮೂಲಕ ನಿಯಂತ್ರಿತ ಸರ್ಕಾರವನ್ನು ಸ್ಥಾಪಿಸುವುದು. ಇತ್ತೀಚಿನ ಬೆಳವಣಿಗೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ ಶಿಕ್ಷಣ ಕೇವಲ ಶಿಕ್ಷಣದ ಪ್ರಶ್ನೆಯಾಗದೆ ಅದು ಜಾಗತಿಕ ಮಾರುಕಟ್ಟೆಯಾಗುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಶಿಕ್ಷಣದಲ್ಲಿ ಜಾಗತಿಕ ಬದಲಾವಣೆಯನ್ನು ತರಬೇಕು, ಅಜ್ಞಾನವನ್ನು ಅಳಿಸಬೇಕು ಎಂಬ ಆಶಯದಲ್ಲಿ ಜಾರಿಗೆ ತರಲಾದ ಶಾಲಾ ಶಿಕ್ಷಣ ಅಭಿವೃದ್ಧಿ ಕಾರ್ಯಕ್ರಮಗಳು ಸರ್ಕಾರಿ ಶಾಲೆಗಳನ್ನು, ಅಲ್ಲಿ ಕಲಿಯುತ್ತಿರುವ ಮಕ್ಕಳನ್ನು, ಅಲ್ಲಿನ ಕಲಿಕಾ ಮಾಧ್ಯಮವನ್ನು ಮತ್ತು ದೇಶಭಾಷೆಗಳನ್ನು ಬಂಜರು ಮಾಡುವುದಲ್ಲದೆ, ಸಾರ್ವಜನಿಕ ಶೈಕ್ಷಣಿಕ ಚಟುವಟಿಕೆಯೇ ಅಪ್ರಯೋಜಕವಾದುದ್ದು ಎಂದು ಬಿಂಬಿಸಲಾಗುತ್ತಿದೆ. ಇಂಗ್ಲೀಷ್ ಭಾಷಾ ಮಾಧ್ಯಮದ ಕಲಿಕಾ ವಿಧಾನ ಮತ್ತು ಕ್ರಮಗಳಿಂದ ಹೊರಬರಲು ಸಾಧ್ಯವಿಲ್ಲದೇ ಇರುವ ಸ್ಥಿತಿಯತ್ತ ನಮ್ಮ ಶಾಲಾ ಕಲಿಕಾ ಚಟುವಟಿಕೆಗಳು ಬಂದು ನಿಂತಿವೆ. ಇದು ಬಹು ಆಯಾಮಗಳ ಸಂಕೀರ್ಣತೆಗಳನ್ನು ಮಕ್ಕಳ ಕಲಿಕಾ ಚಟುವಟಿಕೆಯಲ್ಲಿ ತಂದಿದೆ. ಅಲ್ಲದೇ ಬದುಕಿಗೆ ದೇಶೀಯ ಭಾಷೆಯನ್ನು ಅವಲಂಬಿಸಿದ ಜನಸಮುದಾಯಗಳ ಮೇಲೆ ತನ್ನದೇ ಆದ ಪರಿಣಾಮವನ್ನು ಬೀರುತ್ತಿದೆ.
ಜಾಗತಿಕ ಮಾರುಕಟ್ಟೆಯು ಕೇವಲ ಆರ್ಥಿಕ ಸಂಸ್ಥೆಗಳನ್ನು ಮಾತ್ರ ನಿಯಂತ್ರಣಕ್ಕೆ ಒಳಪಡಿಸದೆ, ಸ್ಥಳೀಯ ಸಾಮಾಜಿಕ, ಸಾಂಸ್ಕøತಿಕ ಅಂಶಗಳನ್ನು ತನ್ನ ತೆಕ್ಕೆಗೆ ತೆಗಿದುಕೊಳ್ಳುತ್ತಿದೆ. ಆರ್ಥಿಕ ವಿಜ್ಞಾನವು ಅಮೂರ್ತವಾಗಿ ರೂಪಿಸುತ್ತಿರುವ ಸಾಂಸ್ಕøತಿಕ ಸಂಬಂಧಿ ವಿಷಯಗಳು ಊಹಿಸಲಾಗದಷ್ಟು ಸ್ಥಿತ್ಯಾಂತರಗಳನ್ನು ತಂದಿದೆ. ಇಂತಹ ಅಮೂರ್ತ ಸ್ಥಿತ್ಯಾಂತರಗಳಲ್ಲಿ ಇಂಗ್ಲೀಷ್ ವ್ಯಾಮೋಹವು ಒಂದು. ಈ ಇಂಗ್ಲಿಷ್ ವ್ಯಾಮೋಹ ಕೇವಲ ವ್ಯಕ್ತಿ ನೆಲೆಯ ವ್ಯಾಮೋಹವೆಂದು ಅರ್ಥ ಮಾಡಿಕೊಳ್ಳುವುದು ಸರಿಯಲ್ಲ. ಯಾಕಂದರೆ ಇಂಗ್ಲಿಷ್ ಯಾವತ್ತು ಸಹ ನಮಗೆ ಕಾಣುವುದು ಒಂದು ಯಜಮಾನಿಯಾಗಿ. ಅದಕ್ಕೆ ಇರುವ ಸಾರ್ವತ್ರಿಕ ಬೇಡಿಕೆಯ ಲಕ್ಷಣದಿಂದ ದೇಶೀಯ ಭಾಷೆಗಳ ಮೇಲೆ ಯಜಮಾನಿಕೆಯನ್ನು ಪ್ರತಿಪಾದಿಸುತ್ತಾ ಬಂದಿದೆ. ಈ ಯಜಮಾನಿಕೆಯು ನವ-ಸಾಮ್ರಾಜ್ಯಶಾಹಿ ವ್ಯವಸ್ಥೆಯ ಸಂದರ್ಭದಲ್ಲಿ ಕಾರ್ಪೋರೇಟ್ ಸಂಸ್ಥೆಗಳ ಯಜಮಾನಿಕೆಯನ್ನು ಪ್ರತಿಷ್ಠಾಪಿಸುವ ಭಾಷೆಯಾಗಿದೆ. ನಮಗೆಲ್ಲಾ ತಿಳಿದಿರುವಂತೆ ಕಾರ್ಪೋರೇಟ್ ಸಂಸ್ಥೆಗಳ ಮೂಲ ಉದ್ದೇಶ ಲಾಭದ ಮೂಲಕ ತನ್ನ ಷೇರುದಾರರನ್ನು ಮತ್ತು ತನಗೆ ಬೆಂಬಲಿಸುವ ಮೇಲ್ ಮಧ್ಯಮ ವರ್ಗವನ್ನು ಮತ್ತು ಆಳುವ ವರ್ಗವನ್ನು ಪೋಷಿಸುವುದು. ಅಷ್ಟು ಮಾತ್ರವಲ್ಲದೆ ತಾನು ವ್ಯವಹರಿಸುವ ಪರಿಸರದಲ್ಲಿ ತನ್ನದೇ ಮಾದರಿಗಳನ್ನು ಸೃಷ್ಟಿಸುವುದು. ಆ ಮಾದರಿಗಳು ಊಟ ಉಪಚಾರದಿಂದ ಪ್ರಾರಂಭಗೊಂಡು, ಎಲ್ಲವನ್ನು ಆಧುನಿಕತೆಯ ಹೆಸರಿನಲ್ಲಿ, ಬದಲಾವಣೆಯಾಗಬೇಕು ಎನ್ನುವ ಹೆಸರಿನಲ್ಲಿ ಸ್ಥಳೀಯ ದೇಶೀಯ ಭಾಷೆ ಮತ್ತು ಸ್ಥಳೀಯ ಸಾಂಸ್ಕøತಿಕ ಬದುಕನ್ನು ಅವಹೇಳನ ಮಾಡುವುದು. ಈ ಅವಹೇಳನ ಮಾಡುವ ಮೂಲಕ ಶ್ರೇಷ್ಠ ಕನಿಷ್ಠ, ಉಚ್ಛ ನೀಚ, ಇದು ಬದುಕು, ಅದು ಬದುಕು ಅಲ್ಲ ಎನ್ನುವ ‘ಅಮೂರ್ತ’ ಮಾದರಿಯ ಸಾಂಸ್ಕøತಿಕ ಸ್ಥಿತ್ಯಾಂತರದ ಬದುಕನ್ನು ಎಲ್ಲಾ ರಂಗಗಳಲ್ಲಿಯೂ ರೂಪಿಸುವುದು.
ಇಂತಹ ಸ್ಥಿತ್ಯಾಂತರಗಳು ಅನೇಕ ಸಂಕೀರ್ಣ ಸವಾಲುಗಳನ್ನು ಸ್ಥಳೀಯ ಸಾಮಾಜಿಕ ಸಂರಚನೆಯಲ್ಲಿ ಹುಟ್ಟು ಹಾಕಿದೆ. ಇದರಿಂದ ದೇಶೀಯ ಭಾಷೆಗಳು ಹೊರತಾಗಿಲ್ಲ. ಅಂದರೆ ಮಕ್ಕಳು, ಜನರು, ಯಾವ ಭಾಷೆಯನ್ನು ಕಲಿತರೆ ಒಳ್ಳೆಯದು ಅಥವಾ ಉತ್ತಮ ಎಂಬುದನ್ನು ಮಾರುಕಟ್ಟೆ ನಿರ್ಧರಿಸುತ್ತದೆ. ಈ ಹಿನ್ನೆಲೆಯಲ್ಲಿಯೇ ನಾವು ಶಾಲಾ ಶಿಕ್ಷಣದಲ್ಲಿ ಕಲಿಕಾ ಮಾಧ್ಯಮ ಯಾವುದಾಗಿರಬೇಕೆಂದು ಚರ್ಚಿಸಬೇಕಾಗಿದೆ. ಇಂತಹ ಚರ್ಚೆಗಳನ್ನೂ ಸಹ ಮೇಲ್‍ಮಧ್ಯಮ ವರ್ಗ ಅದರಲ್ಲಿಯೂ ಆಧುನಿಕತೆ ಮತ್ತು ಆಧುನಿಕ ಸಂಸ್ಥೆಗಳಿಂದ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡ ಜನವರ್ಗ ಬದುಕಿಗೆ ಹಾಗೂ ಬದುಕಲು ಇಂಗ್ಲಿಷ್ ಬೇಕೆ ಬೇಕು ಎನ್ನುವ ಮನೋಸ್ಥಿತಿಗೆ ಬಂದಿದೆ. ಇದು ಅಸಹಜವಲ್ಲ. ಮುಕ್ತ ಮಾರುಕಟ್ಟೆಯ ಅತ್ಯಂತ ವೇಗವಾದ ಓಟದಲ್ಲಿ ನಮಗೆ ತಿಳಿದೋ ಅಥವಾ ತಿಳಿಯದೆಯೊ ನಮ್ಮನ್ನು ಶೋಷಿಸುವ ಮುಕ್ತ ಮಾರುಕಟ್ಟೆಯ ಭಾಷೆಯನ್ನು ನಮ್ಮದಾಗಿಸಿಕೊಳ್ಳಲು ಹೋರಾಡುತ್ತಿದ್ದೇವೆ. ಇದರ ಅರ್ಥ ಇಂಗ್ಲಿಷ್ ಬೇಡ, ಇದರಿಂದ ಪ್ರಯೋಜನವಿಲ್ಲವೆಂದಲ್ಲ. ಆದರೆ ಅದು ಎಷ್ಟರ ಮಟ್ಟಿಗೆ ಬೇಕು ಎಂಬುದು ಬಹಳ ಮುಖ್ಯ. ಯಾಕೆಂದರೆ ಜಗತ್ತಿನಾದ್ಯಂತ ನೆಡೆದಿರುವ ಸಂಶೋಧನೆಗಳು ಬೇರೆ ಬೇರೆ ನೆಲೆಯಿಂದ ಮಕ್ಕಳ ಭಾಷಾ ಕಲಿಕಾ ಪ್ರತಿಭೆಗಳನ್ನು ಗುರುತಿಸಲು ಪ್ರಯತ್ನಿಸುತ್ತಿವೆ. ಈ ವಿಷಯ ಕುರಿತು ಬೆಸಿಲ್ ಬರ್ನ್‍ಸ್ಟೈನ್ ಎಂಬ ಸಾಮಾಜಿಕ ಭಾಷಾತಜ್ಞ ತನ್ನ ಸಂಶೋಧನೆಯಾದ (ಕೋಡ್-ಕ್ಲಾಸ್ ಆ್ಯಂಡ್ ಕಂಟ್ರೋಲ್) ಎಂಬ ಹೆಸರಿನಲ್ಲಿ ಪ್ರಕಟಿಸಿರುವ ಪುಸ್ತಕದಲ್ಲಿ ಏಕೆ ಶಿಕ್ಷಣದಲ್ಲಿ ತಳವರ್ಗದ ಮಕ್ಕಳು ಮೇಲ್ವಾರ್ಗದ ಮಕ್ಕಳಿಗಿಂತ ಹಿಂದುಳಿದಿದ್ದಾರೆ ಎಂಬುದನ್ನು ಅವರಿಗಿರುವ ಬೇರೆ ಬೇರೆ ಭಾಷಾ ಪ್ರಬೇಧದ ನೆಲೆಯಲ್ಲಿ ವಿಶ್ಲೇಷಿಸಿರುತ್ತಾರೆ. ಅವರು ಈ ಕುರಿತು ಎರಡು ಪರಿಕಲ್ಪನೆಗಳನ್ನು ಬಳಸುತ್ತಾರೆ. 1] Restricated Code. 2).Elaborate Code. ಇದನ್ನು ಕರ್ನಾಟಕದ ಹೆಸರಾಂತ ಭಾಷಾತಜ್ಞ ಕೆ. ವಿ. ನಾರಾಯಣ ಅವರು ಹೀಗೆ ವಿವರಿಸುತ್ತಾರೆ.
ಮೊದಲನೆಯದು ಒಂದು ಸಮುದಾಯ ಒಳಗಡೆ ಅದರ ಅನುಭವಗಳಿಗೆ ತೆರೆದುಕೊಂಡಿರುವ ಭಾಷೆ. ಇದು ಯಾರ ಜೊತೆಯಲ್ಲಿ ಮಾತಾನಾಡುತ್ತಾರೊ ಅವರನ್ನು ಒಳಗೊಂಡಿರುವ ಭಾಷೆ. ಮತ್ತೊಂದು, ವ್ಯಕ್ತಿ ಮಾತನಾಡುವಾಗ ತನಗೆ ಗೊತ್ತಿರುವ ಬೇರೆ ಬೇರೆ ವಿಚಾರಗಳನ್ನು ಮತ್ತು ಅನುಭವಗಳನ್ನು ಮತ್ತೊಬ್ಬರಿಗೆ ರವಾನಿಸುತ್ತಿದ್ದಾನೆ ಎಂದು ಮಾತನಾಡುವ ಭಾಷೆ. ಇದು ಒಂದು ಶಿಷ್ಠ ಭಾಷೆಯಲ್ಲಿರುತ್ತದೆ. ಈ ರಿಸ್ಟಿಕ್‍ಟೆಡ್ ಕೋಡ್ ತಳ ಸಾಮಾಜಿಕ ವರ್ಗದ ಮಕ್ಕಳು ಬಳಸುವ ಭಾಷೆಯಾಗಿರುತ್ತದೆ.
ಈ ಪ್ರಕ್ರಿಯೆ ಉದ್ದೇಶ ನಮ್ಮ ಜ್ಞಾನವನ್ನು ಅಥವಾ ನಮ್ಮ ಕ್ರಿಯಾಶೀಲತೆಯನ್ನು ಹೆಚ್ಚು ಮಾಡುವುದೊ ಅಥವಾ ಜಾಗತಿಕ ಮಾರುಕಟ್ಟೆಗೆ ಬಿಳಿಕಾಲರಿನ ಕೂಲಿಕಾರರನ್ನು ಹೆಚ್ಚು ಮಾಡುವುದೊ ಎನ್ನುವ ಪ್ರಶ್ನೆ ಬಹಳ ಮುಖ್ಯ. ಇದರ ಅರ್ಥ ಇಷ್ಟೆ. ಜಾಗತಿಕ ಮಾರುಕಟ್ಟೆಯು ತಾನು ಹೂಡುವ ಬಂಡವಾಳವನ್ನು ದುಪ್ಪಟ್ಟು ಮಾಡಿಕೊಳ್ಳಲು ಅದು ಮಾಡುವ ಮೊದಲ ಕೆಲಸವೆಂದರೆ, ತನಗೆ ಬೇಕಾಗುವ ಕುಶಲತೆ ಇರುವ ಮಾನವ ಸಂಪನ್ಮೂಲ ಎಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತದೆ ಎನ್ನುವುದನ್ನು ಹುಡುಕುವುದು. ಅಷ್ಟು ಮಾತ್ರವಲ್ಲದೆ ತನಗೆ ಅಗತ್ಯವಾಗಿ ಬೇಕಾಗಿರುವ ಮಾನವ ಸಂಪನ್ಮೂಲ ರೂಪಿಸುವ ಶೈಕ್ಷಣಿಕ ಸಂಸ್ಥೆಗಳನ್ನು ಹುಟ್ಟು ಹಾಕುವುದು. ಆ ನೆಲೆಯಲ್ಲಿ ತನಗೆ ಅಗತ್ಯವಿರುವ ಕೂಲಿಕಾರರ ಕುಶಲತೆ ಹೇಗಿರಬೇಕು, ಎಷ್ಟಿರಬೇಕು, ಯಾವ ಭಾಷೆಯಲ್ಲಿರಬೇಕು ಎನ್ನುವುದನ್ನು ಅಲ್ಲಿನ ಆಳುವ ವರ್ಗದ ಜೊತೆ ಸೇರಿ ರೂಪಿಸುತ್ತಿರುತ್ತದೆ. ಇದನ್ನು ಮಾರುಕಟ್ಟೆಯ ಜಗತ್ತಿನ ಕಾರ್ಪೋರೇಟ್ ಧಣಿಗಳ ನಿಯಂತ್ರಣದಲ್ಲಿರುವ ನಿಯಂತ್ರಣ ಸರ್ಕಾರಗಳು ಮತ್ತು ಆಡಳಿತಶಾಹಿಯ ಮೂಲಕ ಮಾಡಲಾಗುತ್ತಿರುತ್ತದೆ. ಇದನ್ನು ತಮ್ಮದೇ ಮಾಧ್ಯಮಗಳ ಮೂಲಕ ಸಾರ್ವಜನಿಕ ಒಪ್ಪಿಗೆಗಳನ್ನು ರೂಪಿಸಲಾಗುತ್ತಿರುತ್ತದೆ. ಇದರಲ್ಲಿ ಯಾವುದೆ ಅನುಮಾನವಿಲ್ಲ.
ಸ್ವಲ್ಪ ಹೆಚ್ಚು ಕಡಿಮೆ ಇದೆ ಬಗೆಯಾದ ಅಭಿಪ್ರಾಯವನ್ನು ಭಾಷಾ ಕಲಿಕಾ ವಿಷಯಕ್ಕೆ ಸಂಬಂಧಿಸಿದಂತೆಯೂ ಮಾರುಕಟ್ಟೆಯು ರೂಪಿಸುತ್ತ್ತಿದೆ. ಅಂದರೆ ಕಲಿಕಾ ಮಾಧ್ಯಮ ಯಾವುದಾಗಿರಬೇಕು ಎನ್ನುವುದಕ್ಕೆ ಸಂಬಂಧಿಸಿದಂತೆ ಜಾಗತಿಕ ಮಾರುಕಟ್ಟೆಯೇ ನಿರ್ಧರಿಸುತ್ತಿದೆ. ನಿರ್ದಿಷ್ಟವಾಗಿ ಮಕ್ಕಳ ಕಲಿಕಾ ಮಾಧ್ಯಮ ಇಂಗ್ಲೀಷ್‍ದಾಗಿರಬೇಕೋ ಅಥವಾ ಮಾತೃಭಾಷೆಯದಾಗಿರಬೇಕೋ ಎಂಬುದಕ್ಕೆ ಸಂಬಂಧಿಸಿದಂತೆ ಸಾಮಾನ್ಯರಿಂದ ಹಿಡಿದು ದೇಶದ ಸರ್ವೋಚ್ಛ ನ್ಯಾಯಲಯದವರೆಗೆ ಅನೇಕ ಚರ್ಚೆ ವಿವಾದಗಳು ನಡೆದ ರಾಷ್ಟ್ರದ ಸವೋಚ್ಛ ನ್ಯಾಯಲಯವು ಕರ್ನಾಟಕ ಸರ್ಕಾರ 1994ರಲ್ಲಿ ಹೊರಡಿಸಿದ ಕನ್ನಡವನ್ನು ಕಡ್ಡಾಯ ಮಾಧ್ಯಮವನ್ನಾಗಿ ಮಾಡುವ ಆದೇಶವನ್ನು 20 ವರ್ಷಗಳ ವಾದ ಪ್ರತಿವಾದಗಳ ನಂತರ ರದ್ದುಗೊಳಿಸಿ ಕಲಿಕಾ ಮಾಧ್ಯಮದ ಆಯ್ಕೆಯು ಮಕ್ಕಳಿಗೆ ಮತ್ತು ಪೋಷಕರಿಗೆ ಸಂಬಂಧಿಸಿದ್ದು, ಇದರಲ್ಲಿ ಸರ್ಕಾರದ ಮಧ್ಯಪ್ರವೇಶ ಸಲ್ಲ ಎಂಬ ಆದೇಶ ನೀಡಿದೆ.
ಈ ಆದೇಶದ ನಂತರ ರಾಜ್ಯದಲ್ಲಿರುವ ಬೇರೆ ಬೇರೆ ಸಾಮಾಜಿಕ ವರ್ಗ ಮತ್ತು ಗುಂಪುಗಳು ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸಿದೆ. ಈ ನಿಲುವುಗಳನ್ನು ಸ್ಪಷ್ಟಪಡಿಸಲು ಅವರಿಗೆ ಸಂವಿಧಾನಿಕ ಹಕ್ಕು ಇದೆ. ಆದರೆ ಈ ನಿಲುವುಗಳು ರೂಪುಗೊಳ್ಳುವುದು ಶಿಕ್ಷಣಕ್ಕೆ ಇರುವ ಉಪಯೋಗಾತ್ಮಕ ಹಾಗೂ ಉಪಕರಣಾತ್ಮಕ ನೆಲೆಗೆ ಹೆಚ್ಚು ಆಧ್ಯತೆ ನೀಡಿದೆ. ಇದು ಸಮಕಾಲೀನ ಸಂದರ್ಭದ ಜಾಗತಿಕ ರಾಜಕೀಯ ಆರ್ಥಿಕತೆ ಕೂಡ. ಹೀಗಾಗಿ ಇದನ್ನು ಪ್ರತಿಪಾದಿಸುವಾಗ ಶಾಲಾ ಶಿಕ್ಷಣದಲ್ಲಿ ಭಾಷೆಗೆ ಇರುವ ಉಪಕರಣವಾದಿ ನೆಲೆಯನ್ನು ಪ್ರಯೋಜನಾತ್ಮಕವಾಗಿ ಮುಕ್ತ ಮಾರುಕಟ್ಟೆ ಪ್ರತಿಪಾದಿಸುತ್ತಿದೆ. ಇದಕ್ಕೆ ಮುಕ್ತ ಮಾರುಕಟ್ಟೆಯೇ ಕಳೆದ 20 ವರ್ಷಗಳಲ್ಲಿ ಪೋಷಿಸಿ ಬೆಳೆಸಿರುವ ವiಧ್ಯಮ ವರ್ಗದ ಬೆಂಬಲ ಸಹ ಪಡೆದುಕೊಂಡಿದೆ. ಹೀಗಾಗಿಯೇ ಕರ್ನಾಟಕದ ಭಾಷಾ ನೀತಿ ಸುಪ್ರಿಂಕೋರ್ಟ್ ಹಂತದಲ್ಲಿ ಮಾರುಕಟ್ಟೆಯಲ್ಲಿ ವ್ಯವಹರಿಸವ ಶಕ್ತಿ ಇರುವವರ ಪಾಲಾದದ್ದು.
ಈ ಕುರಿತು ದೇವನೂರು ಮಹದೇವ ಅವರು ತಮ್ಮ ನಿಲುವನ್ನು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಜಾಗತಿಕ ಮುಕ್ತ ಮಾರುಕಟ್ಟೆಗಳಿಗೆ ಪರ್ಯಾಯಗಳನ್ನು ಕಂಡುಕೊಳ್ಳಲು ಸಾಧ್ಯವಿರುವುದು ದೇಶೀಯ ಭಾಷೆಯಲ್ಲಿ ಎನ್ನುವುದು ಜಗತ್ತಿನ ಅನುಭವ ಮತ್ತು ವಾಸ್ತವ. ಹಾಗಾಗಿಯೇ ಮಹದೇವ ಅವರ ನಿಲುವು ಅತ್ಯಂತ ಪ್ರಮುಖ. ಜಾಗತಿಕ ಮಾರುಕಟ್ಟೆಯು ಪ್ರತಿಪಾದಿಸುವ ಅಥವಾ ಜಾಗತಿಕ ಮುಕ್ತ ಮಾರುಕಟ್ಟೆಯು ಕಳೆದ ಎರಡು ದಶಕದಲ್ಲಿ ಹುಟ್ಟುಹಾಕಿರುವ ಮೇಲ್ ಮಧ್ಯಮ ವರ್ಗದ ಮನೊಪ್ರವೃತ್ತಿಗೆ ಪೂರಕವಾದ ನಿಲುವಲ್ಲ. ಅಷ್ಟು ಮಾತ್ರವಲ್ಲ, ಸಾಮಾಜಿಕ ನ್ಯಾಯದ ಗುಣಶಕ್ತಿಯ ಮೌಲ್ಯವಿದೆ ಅವರ ನಿಲುವಿಗೆ.
ಕನಿಷ್ಠ ಮಟ್ಟದ ಸಾಮಾಜಿಕ ಮೌಲ್ಯಗಳನ್ನು ಹೇಳಿಕೊಡುವ ಗುಣಶಕ್ತಿ ಯಾವುದೇ ದೇಶೀಯ ಭಾಷೆಗೆ ಸಹಜವಾಗಿರುತ್ತದೆ. ಈ ಕುರಿತು ಅನೇಕ ಸಂಶೋಧನೆಗಳು ನೆಡೆದಿವೆ. ಯಾವ ಮಗು ತನ್ನ ಮಾತೃಭಾಷೆಯಲ್ಲಿ ಚೆನ್ನಾಗಿ ಮಾತನಾಡಿ ಬರೆಯುವುದನ್ನು ಕಲಿಯುತ್ತದೆಯೊ ಆ ಮಗುವು ಮುಂದಿನ ಹಂತದ ಶಾಲೆಗಳಲ್ಲಿ ಗಣಿತ ಮತ್ತು ವಿಜ್ಞಾನಗಳನ್ನು ಕಲಿಯುವಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತದೆ. ಮಾತೃ ಭಾಷೆ ಕಲಿಯಲಾಗದ ಹಾಗೂ ಬರೆಯಲಾಗದ ಮಗು ಮುಂದೆ ಗಣಿತ ಮತ್ತು ವಿಜ್ಞಾನಗಳಲ್ಲಿ ಆಸಕ್ತಿ ಇಲ್ಲದೆ ಹಿಂದುಳಿದಿರುವುದನ್ನು ಈಗಾಗಲೇ ನಡೆದಿರುವ ಅಧ್ಯಯನಗಳು ಗುರುತಿಸಿವೆ. ಇದನ್ನು ಅರಗಿಸಿಕೊಳ್ಳಲಾಗದ ಮಾರುಕಟ್ಟೆ ಆಧಾರಿತ ಆರ್ಥಿಕ ವಿಜ್ಞಾನವು ಭಾರತದ ಸಂದರ್ಭದಲ್ಲಿ ಭಾಷೆಯ ಮೂಲಕ ಖಾಸಗಿ ಮತ್ತು ಸರ್ಕಾರಿ ಶಾಲೆಯ ವ್ಯವಸ್ಥೆಯನ್ನು ಸೃಷ್ಠಿಸಿದೆ. ಈ ಕುರಿತು ನಡೆದಿರುವ ಸಂಶೋಧನೆಗಳು ಸರ್ಕಾರಿ ಶಾಲಾ ಕಲಿಕಾ ಪರಿಸರವನ್ನು ಖಾಸಗಿ ಶಾಲಾ ಕಲಿಕಾ ಪರಿಸರದ ಜೊತೆ ತುಲಾನಾತ್ಮಕವಾಗಿ ನೋಡಿ, ಖಾಸಗಿ ಶಾಲೆ ವ್ಯವಸ್ಥೆಯಲ್ಲಿನ ಕಲಿಕಾ ಪರಿಸರ ಮಕ್ಕಳ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳಿಗೆ ಯಾವುದೇ ಮೌಲ್ಯಗಳನ್ನು ನೀಡದಿರುವುದು ಸಂಶೋಧನೆಗಳಿಂದ ತಿಳಿದುಬಂದಿದೆ.
ಹಾಗಾದರೆ ಯಾಕೆ ಪೋಷಕರು ತಮ್ಮ ಮಕ್ಕಳನ್ನು ಸಂಕೀರ್ಣದಂತಹ ಕಲಿಕಾ ಪರಿಸರವಿರುವ ಖಾಸಗಿ ಶಾಲೆಗಳಿಗೆ ಕಲಿಸಲು ಹೆಚ್ಚಿನ ಆಸಕ್ತಿ ಪಡುತ್ತಿದ್ದಾರೆ? ಅದಕ್ಕೆ ಮಾರುಕಟ್ಟೆ ಸೂಚಿಯು ಇಂಗ್ಲೀಷ್‍ಅನ್ನು ಕಲಿಕಾ ಮಾಧ್ಯವiವಾಗಿ ಬಳಸುತ್ತಿರುವುದು ಮುಖ್ಯ ಕಾರಣವಾದರೆ, ಮತ್ತೊಂದು ಸ್ಮಾರ್ಟ ಆದ ಯುನಿಫಾರ್ಮ್, ಮತ್ತೊಂದು ಸಿರಿವಂತ (ಅಫೋಲೆಂಟ್) ವರ್ಗದ ಮಕ್ಕಳ ಜೊತೆ ಬೆರೆಯುವುದು, ಹೆಚ್ಚು ಮನೆ ಪಾಠ, ಹೆಚ್ಚು ಅವಧಿ ಶಾಲೆ, ಭೌತಿಕ ಪರಿಸರ, ಇನ್ನೂ ಮುಂತಾದ ಹಲವು ಕಾರಣಗಳು ಎದ್ದು ಕಾಣುತ್ತವೆ.
ಆದರೆ ಈ ಬಗೆಯ ಅಭಿಪ್ರಾಯಗಳನ್ನು ಯಾರು ಏಕೆ? ರೂಪಿಸುತ್ತಿದ್ದಾರೆ ಎಂಬುದು ನಮ್ಮಗೆ ಪ್ರಮುಖವಾದ ಪ್ರಶ್ನೆಯಾಗಬೇಕು. ನಾಡಿನ ಚಿಂತಕರಾದ ನಾಡೋಜ ದೇವನೂರ ಮಹಾದೇವ ಅವರು ಪ್ರಾಥಮಿಕ ಹಂತದಲ್ಲಿ ಕಲಿಕಾ ಮಾಧ್ಯಮ ದೇಶೀಯ ಭಾಷೆಯಲ್ಲಿಯೇ ಇರಬೇಕು ಎಂದು ದೇವನೂರು ಅವರು ತಾಳಿದ ನಿಲುವು ಮಾರುಕಟ್ಟೆಯು ಪೋಷಿಸಿದ ಅಥವಾ ಮಾರುಕಟ್ಟೆಯನ್ನು ಪೋಷಿಸುವ ನಿಲುವಲ್ಲ. ಅವರು ತಾಳಿದ ನಿಲುವು ಜಾಗತಿಕ ಮುಕ್ತ ಮಾರುಕಟ್ಟೆಯ ಯಾವುದೇ ಬೆಂಬಲವು ಅಥವಾ ಆಧುನಿಕ ಸಂಸ್ಥೆಯ ಯಾವುದೇ ಸೌಲಭ್ಯಗಳು ಅಥವಾ ಸಂವಿಧಾನಾತ್ಮಕ ಹಕ್ಕಿನ ಯಾವುದೇ ಬೆಂಬಲ ಸಿಗದ ಬಹುಜನರ ಅಭಿಪ್ರಾಯದಿಂದ ತುಂಬಿರುವ ನಿಲುವು. ಹೀಗಾಗಿ ಮಹಾದೇವ ಅವರ ನಿಲುವುಗಳು ಅತಿರೇಖವಾಗಿ ಕಾಣುತ್ತದೆ. ದೇವನೂರು ಪ್ರತಿಪಾದಿಸುತ್ತಿರುವ ಮಾತೃಭಾಷೆ ಶಿಕ್ಷಣ ಎಂಬುವುದು ಜಾಗತಿಕ ಮಾರುಕಟ್ಟೆಯನ್ನು ಮೆಟ್ಟಿ ನಿಲ್ಲಲು ಮತ್ತು ಅನೇಕ ಸಾಮಾಜಿಕ, ಸಾಂಸ್ಕøತಿಕ, ರಾಜಕೀಯ ಮತ್ತಿತರ ಅಭಿವೃದ್ಧಿ ಪರ್ಯಾಯ ಚಿಂತನೆಗಳನ್ನು ಕಂಡುಕೊಳ್ಳಲು ಇರುವ ಮಾರ್ಗದ ನಿಲುವು.
ಈ ಮಾರ್ಗದ ನಿಲುವನ್ನು ವ್ಯಕ್ತಿ ನಲೆಯಲ್ಲಿ ನೋಡದೆ, ಸಮಷ್ಠಿಯ ನೆಲೆಯಲ್ಲಿ ಮಾರುಕಟ್ಟೆ ಸೃಷ್ಠಿಸುತ್ತಿರುವ ಅಸಮಾನತೆಯ ಅಪಾಯಗಳನ್ನು ದೂರದೃಷ್ಠಿ ನೆಲೆಯಲ್ಲಿ ವಿಶ್ಲೇಷಣೆಗೆ ಒಳಪಡಿಸಬೇಕು. ಆರ್ಥಿಕ-ಸಾಂಸ್ಕøತಿಕ ಅಸಮಾನತೆಗಳು ಮತ್ತು ಅದರ ಪೂರ್ವಗ್ರಹಗಳು ಕಳೆದ ಇಪ್ಪತ್ತು (1991-2010) ವರ್ಷಗಳಿಂದ ಭಾರತದ ಸಾರ್ವಜನಿಕ ವಲಯಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಿರುವುದನ್ನು ನಾವು ಗಮನಿಸಬಹುದು. ಇದರ ಜೊತೆ ಶಾಲಾ ಶಿಕ್ಷಣ ವ್ಯವಸ್ಥೆಯು ಸಾರ್ವಜನಿಕ-ಖಾಸಗಿ ನೆಲೆಯಲ್ಲಿ ಒಂದು ರೀತಿಯ ಅಸಮಾನತೆಯನ್ನು ಹುಟ್ಟು ಹಾಕುತ್ತಿದ್ದರೆ, ಭಾಷಾ ಮಾಧ್ಯಮದ ನೆಲೆಯಲ್ಲಿ ಅರ್ಮೂತವಾದ ಅಸಮಾನತೆಯನ್ನು ಸೃಷ್ಟಿಸುತ್ತಿದೆ. ಒಂದು ಪಕ್ಷ ಇದೇ ಮುಂದುವರೆದರೆ ಸಾಮಾಜಿಕ ಅಸಮಾನತೆ, ಆರ್ಥಿಕ ಅಸಮಾನತೆಗಳು ಹೆಚ್ಚುತ್ತವೆ. ಮಾರುಕಟ್ಟೆಯೊಂದಿಗೆ ಸಂಬಂದಿsಸಿದ ಬಂಡವಾಳ ಇರುವವರಿಗೆ ಶಾಲೆಗಳು ಮಾರುಕಟ್ಟೆಗಳಾಗಿ ರೂಪುಗೊಳ್ಳುತ್ತಿವೆ. ಅಷ್ಟು ಮಾತ್ರವಲ್ಲದೆ ಅಲ್ಲಿ ಹಣದ ಮೂಲಕ ಎಲ್ಲವೂ ಸಾಧ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ಶಾಲೆಯಿಂದ ವಂಚಿತರಾದ ಬಡಮಕ್ಕಳು ಲೇವಡಿಗೆ ಒಳಗಾಗಿ, ವರ್ಗ ಮತ್ತು ಸಾಂಸ್ಕøತಿಕ ಬಿರುಕುಗಳು ದೊಡ್ಡದಾಗುತ್ತವೆ. ಈ ಅಂತರ ಹೆಚ್ಚುತ್ತಾ ಹೋದಂತೆ ನಾವೊಂದು ಪ್ರಜಾಪ್ರಭುತ್ವ ಗಣರಾಜ್ಯ ವ್ಯವಸ್ಥೆಗೆ ಸೇರಿದವರು ಎನ್ನುವ ಉದ್ದೇಶ ಕೇವಲ ಭ್ರಮೆಯಾಗುತ್ತದೆ. ಇದಕ್ಕೂ ಮುಖ್ಯವಾಗಿ ಅನೂಚಾನವಾಗಿ ಬಂದ ಅಸಮಾನತೆಗಳಿಗೆ ಸವಾಲೊಡ್ಡಲು ಸಾಧ್ಯವಾಗದೇ ಹೋಗುತ್ತದೆ. ಒಬ್ಬ ವ್ಯಕ್ತಿಯ ಆತ್ಮಗೌರವ ಮತ್ತು ಸ್ವಾಭಿಮಾನಕ್ಕೆ ಸಂಬಂದಿsಸಿದ ಎಲ್ಲಾ ಹಕ್ಕುಗಳನ್ನು ನನಸಾಗಿಸುವ ಶಿಕ್ಷಣವು ಸಭ್ಯ ನಾಗರಿಕ ಸಮಾಜವನ್ನು ರೂಪಿಸುವುದು ಕೇವಲ ಕನಸಾಗುತ್ತದೆ.
ಇಂದು ನಮ್ಮ ಶಾಲೆಗಳ ಕಲಿಕಾ ಮಾಧ್ಯಮವು ಸಾಮಾಜಿಕ ವಿಮೋಚನೆಯನ್ನು ಹೇಳಿ ಕೊಡುವ ಕೇಂದ್ರವಾಗದೆ, ಅಸಮಾನತೆಯ ಪುನರ್ ನಿರ್ಮಾಣಕ್ಕೆ ಆಧಾರಗಳನ್ನು ಒದಗಿಸುವ ಕೇಂದ್ರಗಳಾಗಿವೆ. ನಮ್ಮ ಶಾಲೆಗಳು ಪೌರತ್ವದ ಆಶಯ ಮತ್ತು ಉದ್ದೇಶಗಳನ್ನು ಮಕ್ಕಳಿಗೆ ಕಲಿಸುವ ಪ್ರಜಾಪ್ರಭುತ್ವವಾದಿ ಸಾರ್ವಜನಿಕ ಕೇಂದ್ರಗಳಾಗದೆ ಮುಂದುವರೆಯುತ್ತಿವೆ. ಆದ್ದರಿಂದ ತಕ್ಷಣವೇ ನಮ್ಮ ಸಂವಿಧಾನವು ಶಾಲಾ ಶಿಕ್ಷಣವನ್ನು ಕುರಿತು ಇಟ್ಟುಕೊಂಡಿರುವ ಆಶಯಗಳ ನೆಲೆಯಲ್ಲಿ ಅರ್ಥಮಾಡಿಕೊಂಡು ಸರ್ಕಾರಗಳು ಶೈಕ್ಷಣಿಕ ಅಭಿವೃದ್ಧಿ ಯೋಜನೆಗಳು-ನೀತಿ-ಕಾರ್ಯಕ್ರಮಗಳನ್ನು ದೇಶಿಯ ಭಾಷೆಯಲ್ಲಿ ರೂಪಿಸುವ ರಾಜಕೀಯ ಇಚ್ಫಾಶಕ್ತಿ ತುಂಬಾ ಅಗತ್ಯ. ಬದಲಾಗುತ್ತಿರುವ ಜ್ಞಾನದ ಪರಿಕಲ್ಪನೆ ಭವಿಷ್ಯದ ಜಾಗತಿಕ ಪ್ರಪಂಚದಲ್ಲಿ ಶಿಕ್ಷಣವು ಜೀವನದ ಮೇಲೆ ಭಾರಿ ಪರಿಣಾಮಗಳನ್ನು ಉಂಟು ಮಾಡುವುದರಿಂದ ಪ್ರಾಥಮಿಕ ಶಿಕ್ಷಣದಲ್ಲಿ ಮೂಲಭೂತ ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಒದಗಿಸಬೇಕಾಗಿದೆ. ಶಿಕ್ಷಣವು ಮಾನವ ಸಾಮಥ್ರ್ಯವನ್ನು ಶಕ್ತಗೊಳಿಸಲು ಹೊಂದಿರುವ ಶಕ್ತಿಯನ್ನು ಸರಿಯಾಗಿ ಗ್ರಹಿಸದೆ, ಇಂದಿನ ಜಾಗತಿಕ ಪ್ರಪಂಚದಲ್ಲಿ ಕಲಿಕಾ ಮಾಧ್ಯಮದ ಕೊರತೆಯು ಸಮಾಜದೊಳಗಿನ ಅಸಮಾನತೆಯನ್ನು ಇನ್ನೂ ಹೆಚ್ಚಿಸುತ್ತದೆ. ಆದ್ದರಿಂದ ಎಲ್ಲಾ ಮಕ್ಕಳ ಕಲಿಕ ಮಾಧ್ಯಮವು ತುಂಬಾ ಗಂಬಿsೀರವಾದ ವಿಚಾರವಾಗಿದೆ.
ಆ ಕುರಿತು ಹೆಚ್ಚಿನ ಚರ್ಚೆಗಳು, ಅಧ್ಯಯನಗಳು ಸಮಾನ ಅವಕಾಶ ಮತ್ತು ಸಮಾನತೆಯ ನೆಲೆಯಲ್ಲಿ ನಡೆಯಬೇಕಾಗಿದೆ. ನಮ್ಮ ಸಮಾಜದಲ್ಲಿ ಉತ್ಸಾಹದಿಂದ ನಗುತ್ತಿರುವವರು ಮತ್ತು ಸಂಕಷ್ಟದಲ್ಲಿ ನರಳುವವರ ನಡುವಿನ ಅಂತರವನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ಸಮಾನ ಗುಣಮಟ್ಟದ ‘ಸಮಾನ ಶಾಲಾ ಶಿಕ್ಷಣ ವ್ಯವಸ್ಥೆ’ಯನ್ನು ದೇಶೀಯ ಭಾಷೆಯಲ್ಲಿ ರೂಪಿಸಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ. ಈ ದಿಕ್ಕಿನಲ್ಲಿಯೇ ದೇವನೂರ ಮಹದೇವ ಅವರು ಪ್ರತಿಪಾದಿಸುತ್ತಿರುವ ದೇಶೀಯ ಭಾಷಾ ಕಲಿಕಾ ಮಾಧ್ಯಮದ ನಿಲುವನ್ನು ನಾವು ನೋಡಬೇಕಾಗಿದೆ. ಇಲ್ಲದೇ ಹೋದಲ್ಲಿ ಮುಕ್ತ ಮಾರುಕಟ್ಟೆಯ ಆರ್ಥಿಕ ವಿಜ್ಞಾನವು ಬಳಸುತ್ತಿರುವ ಯಾಜಮಾನ್ಯ ಭಾಷೆಗೆ ನಾವು ಜೀತದಾಳುಗಳಾಗುವ ಸಾಧ್ಯತೆ ಇದೆ.

ಡಾ.ಎಚ್.ಡಿ.ಪ್ರಶಾಂತ್
ಪ್ರಾಧ್ಯಾಪಕರು
ಅಭಿವೃದ್ಧಿ ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ-583 276