‘ಮಾರಿಕೊಂಡವರು’ – ದೇವನೂರ ಮಹಾದೇವ

(1970ರ ಸುಮಾರಿಗೆ ಬರೆದಿದ್ದ ಸಣ್ಣ ಕಥೆ, ನಮ್ಮ ಮರು ಓದಿಗೆ…)
ಸಂಜೆಯ ಕೆಂಪಿಗೆ ಮೊಖಹಾಕಿ ಕುಂತ ಬೀರನ ತಲೆ ಒಳಗೆ ಕಿಟ್ಟಪ್ಪ ಥರಾವರಿ ಮೂಡತೊಡಗಿದನು. ಕಿಟ್ಟಪ್ಪ ಮದುವೆಗೆ ಒಪ್ಪಿ ಸಾಯುವ ಅಪ್ಪನಿಗೆ ನೆಮ್ಮದಿ ತರಲಿಲ್ಲ. ಅವನಿಗೆ ಅವನ ಹಠವೇ ದೊಡ್ಡದಾಯ್ತು. ಕಾಲೇಜಿಗೆ ಮಣ್ಣಾಕುವಾಗ ಆದ ಗೆಣಕಾತಿ ಹಿಂದೆ ಸುತ್ತಿ ಫೇಲಾಗಿ ಹಟ್ಟಿಗೆ ಬಂದರೂ ಅವಳ ಹುಚ್ಚು ಬಿಡಲಿಲ್ಲ. ವಾರ ಹದಿನೈದು ದಿನಕ್ಕೆ ಮೈಸೂರಿಗೆ ಹೋಗುವುದೂ ತಪ್ಪಲಿಲ್ಲ. ಗೌಡರು ಹೇಳುವವರೆಗೂ ಹೇಳಿದರು, ಬೈದರು ಕೇಳಲಿಲ್ಲ. ವಯಸ್ಸಿಗೆ ಬಂದ ಮಗ, ಈಗೀಗಂತು ಗೌಡರು ಕಿಟ್ಟಪ್ಪ ಏನು ಮಾಡಿದರೂ ಕೇಳುವುದೇ ಇಲ್ಲ. ‘ನಾ ಸಾಯೊವರ್ಗಾದ್ರೂ, ಸುಮ್ಗಿರೂ ಬಡ್ಡೀಮಗ್ನೆ ಅಂದ್ರೂ ಕೇಳೊಲ್ಲ. ಇನ್ನು ನಾನೇನು ಮಾಡ್ಲಿ? ಮನೆ ಮಾರಿದ್ರೂ ಚಿಂತಿಲ್ಲ, ಎಂದೋ ಹಾಳಾಯ್ತು’ ಈ ಖದೀಮ ಬೊಡ್ಡೆದ್ನ ಪಳ್ಳಿಗೆ ಕಳಿಸ್ದೆ ನೇಗಿಲು ಹಿಡಿಸಬೇಕಿತ್ತು. ನಾನೆ ತಪ್ಪು ಮಾಡಿ ಅವ್ನ ಅನ್ನೋದು ಅಂದರೆ… ಪೂರ್ತಿ ಹೇಳದೆ ಉಳಿದುದ ನುಂಗಿ ಒಂದು ಸಲ ಕಹಿ ಮೋರೆ ಮಾಡಿ ನಕ್ಕುಬಿಡುವರು. ಕೂತು ಉಂಡರೂ ಮುಗಿಯದಂಥ ಆಸ್ತೀಲಿ ಕಿಟ್ಟಪ್ಪ ಹೆಂಗಿರಬೇಕು? ಅದುಬಿಟ್ಟು ಈ ಗುಳ್ಳಲ್ಲೆ ಎಷ್ಟು ದಿನ ಕುಡಿದು ಬಿದ್ದಿಲ್ಲ? ವಾರ ಹದಿನೈದು ದಿನಕ್ಕೆ ಇದನ್ನೆ ಪಟ್ಟಾಗಿ ಹಿಡಿದುಬಿಟ್ಟವನೆ. ಎಷ್ಟು ಹೇಳಿದರೂ ವಸಕಿಬಿಡುತ್ತಾನೆ, ಹೆಚ್ಚಿಗೆ ಮಾತಾಡೋಕೆ ಅನ್ನ ಹಾಕುವ ದಣಿ…
ಬರುವ ಯುಗಾದಿಗೆ ಇಲ್ಲಿಗೆ ಬಂದು, ವರ್ಷ ಸಂದುತ್ತದೆ. ದಿಕ್ಕುದೆಸೆ ಕಾಣದೆ ಗಂಟು ಮೂಟೆ ಕಟ್ಟಿ ಲಕ್ಷ್ಮಿಯೊಡನೆ ಹೊರಟಾಗ ಕೈಲಿ ಬಿಡುಗಾಸಿಲ್ಲ. ರಾತ್ರಿ ರೈಲು ಹತ್ತಿ ಹಿಂದಲ ಡಬ್ಬಿಲಿ ಕೂತು ಮೈಸೂರು ತಲುಪಿದಾಗ ಹೊತ್ತು ಮೀರಿತ್ತು. ಸ್ಟೇಷನ್ನಿನಲ್ಲೆ ಮಲಗಿದ್ದು ನಲ್ಲೀಲಿ ಮೊಖ ತೊಳೆದು ಏನೂ ಮಾಡಲು ತೋಚದೆ ತಲೆ ಮೇಲೆ ಕೈ ಹೊತ್ತು ಕೂತಾಗ ಲಕ್ಷ್ಮಿಯೇ ನಂಜನಗೂಡು ಕಡೆಗೆ ಹೋಗುವ ಅಂದದ್ದು. ಆಗಲಿ ಎಂದು ಹೊರಟಿದ್ದ ರೈಲುಹತ್ತಿ ಕೂತು ಟಿಕೇಟು ಕೇಳಲು ಬಂದವರ ಕೈಲಿ ಸಿಕ್ಕಿ ಫಜೀತಿ ಪಡುವಾಗಲೇ ಗೌಡರು ಅವರಿಗೆ ಸಮಾಧಾನ ಮಾಡಿ ಕಳಿಸಿ ಯಾರು ಎಂತು ಎತ್ತ ಅಂತ ವಿಚಾರಿಸಿ, ಕೆಲಸಕ್ಕಾಗಿ ಊರು ಬಿಟ್ಟು ಬಂದಿದ್ದೀವಿ ಹಾಲು ಮತ ಅನ್ನುತ್ತಲೆ ವಸಿ ಹೊತ್ತು ಯೋಚಿಸಿ, ‘ನಮ್ಮ ತೋಟದಲ್ಲೆ ಕೆಲ್ಸ ಮಾಡಾಕೆ ತಳವಾಗಿ ಇರೊ ಎರಡಾಳು ಬೇಕು. ಅಲ್ಲೆ ಮನೆಮಠವಿದೆ, ನೀವು ಇರೋದಾದ್ರೆ…’ ಅಂದರು. ಗೌಡರು ದೇವರಂತೆ ಕಂಡರು.
ಊರ ಕಡೆ ಬೀರ ತಿರುಗಿ ನೋಡಿದನು. ಆಗಲೇ ಹೊತ್ತು ಮುಳುಗಿ ಕತ್ತಲಾಗಿತ್ತು. ಇಷ್ಟಕ್ಕಾಗಲೆ ಕಿಟ್ಟಪ್ಪ ಬರಬೇಕಿತ್ತಲ್ಲ ಎಂದು ಯೋಚಿಸುತ್ತ ಬೀಡಿ ಹತ್ತಿಸಿದನು. ದೂರದಲ್ಲಿ ಒಂದು ಬ್ಯಾಟರಿ ಬೆಳಕು ಹತ್ತಿರವಾಗುತ್ತಿತ್ತು. ಕತ್ತಲ ಸೀಳಿ ಹತ್ತಿರವಾಗುತ್ತಿದ್ದ ಬ್ಯಾಟರಿ ಬೆಳಕನ್ನೇ ನೋಡುತ್ತ ಅದು ಓಡಿದ ಕಡೆ ಕಣ್ಣಾಡಿಸುತ್ತ ಹತ್ತಿರ ಬರುತ್ತಲೆ ಅಂತು ನೋಡಿದಾಗ ಮಿಲ್ಲಿನ ಹುಡುಗ ಪಾಷ ಬಂದು ನಿಂತನು. ಬಂದವನೆ ‘ಮೋಟರ್ನ ಕಾಯಲ್ಲು ಕೆಟ್ಟೋಯ್ತಲೆ ಕಿಟ್ಟಪ್ಪನೋರು ಮೈಸೂರ್ಗೆ ತಕ್ಕಂಡೋದ್ರು ಬರಕಿಲ್ವಂತೆ’ ಅಂದ. ‘ಅಂಗಾ’ ಅಂದಾಗ ಪಾಷ ತಲೆಯಾಡಿಸಿ ‘ಹೋಗ್ತೀನಿ ಕನಣ್ಣೋ’ ಎಂದವನೆ ಪಕ್ಕಕ್ಕೆ ತಿರುಗಿದಾಗ ಬೀರ ‘ಬಾರೋ ಸಾಬು ಉಂಡ್ಕಂಡು ಹೋಗುವಂತೆ’ ಅಂದನು. ‘ಆಗಲ್ಲ ಕನಣ್ಣಾ ಜನ ಜಾಸ್ತಿ ಕಾದವ್ರೆ ಮಿಲ್ನಲ್ಲಿ, ಈಗ ಸಣ್ಣ ಮಿಲ್ಲ ಓಡಿಸ್ತ ಆವ್ನಿ ಹೇಳು ಅಂದ್ರು ಹೇಳಾಕೆ ಬಂದಿ ಅಷ್ಟೆ’ ಎಂದು ಸರಸರನೆ ಹೆಜ್ಜೆ ಇಟ್ಟನು. ಬೀರ ಕೆಮ್ಮಿ ಹತ್ತಿಸಿದ ಬೀಡಿ ಕೈಗೆ ಸುಡಲು ಮತ್ತೊಂದು ತೆಗೆದು ಅದಕ್ಕೆ ಮುತ್ತಿಕ್ಕಿಸಿ ಗುಡಿಸಲು ಒಳಕ್ಕೆ ನುಗ್ಗಿದನು.
ಲಕ್ಷ್ಮಿ ಅಂದುಕೊಂಡಳು: ಈಗೀಗ ತುಂಬ ಚಳಿ ಹಿಡಿಯುತ್ತೆ. ಒಳಗಿದ್ದರೂ ಇಷ್ಟು ಚಳಿ, ಇನ್ನು ಹೊರಗೆ? ಅಪ್ಪನ ಆಸ್ತಿ ಅಂತ ಬೀರ ಯಾವಾಗಲೂ ಆ ಕಲ್ಲಿನ ಮೇಲೆ ಕೂತಿರುತ್ತಾನೆ. ಹೊರಕ್ಕೆ ಹೋಗಿದ್ದಾಗ ಬೇಕು ಅಂತ ಕೆಮ್ಮಿದರೂ ತಿರುಗಿ ನೋಡಲಿಲ್ಲ. ಕೂತಕೂತನೆ ಮರಳುತ್ತಿದ್ದೆ ಸಾರಿಗೆ ಉಪ್ಪು ಹಾಕಿದಳು. ಗಮ್ಮನೆ ವಾಸನೆ ಗುಡಿಸಲಿನ ಪೂರ್ತ ಹರಡಿತು. ನೆರಕೆ ಸದ್ದಾಗಲು ಬಗ್ಗಿ ನೋಡಿದಾಗ ಬೀರ ಬರುತ್ತಿದ್ದು ಕಿಟ್ಟಪ್ಪ ಇರಲಿಲ್ಲ. ‘ಈವತ್ತು ಕಿಟ್ಟಪ್ಪ ಬರಕಿಲ್ವಂತೆಕಮ್ಮಿ… ಮೈಸೂರ್ಗೆ ಹೋಗುವನಂತೆ ಪಾಷ ಹೇಳೋದ’ ಎಂದವನೆ ಇಟ್ಟಿದ್ದ ಸರಾಪು ಬಾಟಲಿ ಕಡೆ ನಡೆದನು. ಇಂದು ಕಿಟ್ಟಪ್ಪ ಬರದಿದ್ದರೆ ಎಲ್ಲವನ್ನು ಈ ದೈತ್ಯ ಕುಡಿದು ಏನು ಅವಾಂತರ ಮಾಡುವನೊ ಎಂದು ಲಕ್ಷ್ಮಿಗೆ ಅಳುಕೆನಿಸಿದರೂ ಅವ ಹೇಗೆ ಆಡಿದರೂ ತನಗೆ ಪಾಠವಾಗಿದೆಯಲ್ಲಾ ಎಂದು ಸಮಾಧಾನವೂ ಆಯ್ತು. ಅದರೊಡನೆ ನಗೂನೂ ಬಂತು.
ಅತ್ತ, ಬೀರ ಹರಿವಾಣದ ಮುಂದೆ ಕೂತು ಸರಾಪಿನ ಎರಡು ಬಾಟಲಿಯ ಬಿರಡೆಗಳನ್ನೂ ಕಳೆದು ಪಕ್ಕದಲ್ಲಿ ಇಟ್ಟುಕೊಂಡನು. ಹಿಟ್ಟಿನೊಡನೆ ಬಂದ ಲಕ್ಷ್ಮಿಗೆ ನಗು ಬಂತು. ‘ಐ ನಿನ್ನ ದರಿದ್ರ ಆಸೆಗೆ ಮಣ್ಣಾಕ-ವಸಿಕುಡಿ’ ಅಂದಳು. ಬೀರ ಕಕಕ ನಕ್ಕು ‘ಈವೊತ್ತು ಹೊಟ್ಟೆ ಇರೊ ಅಷ್ಟು ಕುಡುದು ತಿಂದು ನಿನ್ನ ಸುಲಿದು ಬಿಡಬೇಕು ಅಂತ’ ಅಂದನು. ಈಗ ಸುಮ್ಮನೆ ಅಂದರೂ ಕುಡಿದ ಮೇಲೆ ಹೇಳಿದ ಹಾಗೆ ಮಾಡುತ್ತಿದ್ದ ಅವ, ಚಳಿ ಅನಿಸಲು ಲಕ್ಷ್ಮಿಯ ಒಳಕ್ಕೆ ಬಂದು ಬೂದಿ ಮುಚ್ಚಿದ ಕೆಂಡ ಕೆದಕಿ ಕೈ ಕಾಯಿಸತೊಡಗಿದಳು. ಬೀರ, ಒಂದೆ ಸಮ ಗಟಗಟ ಕುಡಿಯೋದು ಕೇಳಿಸುತ್ತಿತ್ತು. ‘ಇನ್ನೊಸಿ ತಕ್ಕಂದು ಬಾಮ್ಮಿ’ ಅಂದಾಗ ಲಕ್ಷ್ಮಿಗೆ ಅಚ್ಚರಿಯಾಗಿ ಅರೆ ಇವ್ನ ಎಷ್ಟು ತಿಂತಾನಪ್ಪ ದಯ್ಯ ಹಿಡಕಂಡವರಂತೆ ಅಂದುಕೊಂಡು ಮುಚ್ಚಲು ತುಂಬ ಮಾಂಸ ತುಂಬಿ ಕೋಣೆಯಿಂದ ಬಂದಳು. ಬೀರನ ಸುತ್ತ ಮೂಳೆಗಳು ಬಗೆಬಗೆಯಾಗಿ ಬಿದ್ದಿದ್ದವು. ಸರಾಪು ಒಂದೂವರೆ ಬಾಟಲಿನಷ್ಟು ಖಾಲಿಯಾಗಿತ್ತು. ‘ಅವ್ವೀ… ಇದ್ಯಾನ ಮಾರಾಯ ದಯ್ಯದಂಗೆ ತಿನ್ತಿ’ ಅನ್ನಲು ಬಾಯಿಗೆ ಬಂದರೂ, ಕುಡಿದಿರುವನೆಂದು ಸುಮ್ಮನಾಗಿ ಮುಚ್ಚಲಲ್ಲಿ ಇದ್ದುದನ್ನು ಹರಿವಾಣಕ್ಕೆ ಬಗ್ಗಿಸಿದಳು. ಬೀರನ ಸುತ್ತ ಗಬ್ಬು ವಾಸನೆ ಹರಡಿತ್ತು. ಲಕ್ಷ್ಮಿಗೆ ತಲೆ ತಿರುಗಿ ವಾಕರಿಕೆ ಬರುವಂತಾಗಲು ಬಾಯಿಗೆ ಸೆರಗಿನ ಬಟ್ಟೆ ತುರುಕಿ ಕೋಣೆಗೆ ಓಡಿ ಬಂದು ಕುಂತಳು. ಬೀರ ಈಗೀಗ ಬದಲಾಯಿಸಿ ಹೋಗವನೆ. ಕುಡಿಯೋದು ಆಮೇಲ ಉಸಿರು ತೆಗೆದರೂ ಬೀಡಿ ಬೀಡಿ ಅಂತ ಇಳಿದುಹೋಗವನೆ, ಮೊದಲ ಕಳೆಯೇ ಇಲ್ಲ. ಎಷ್ಟು ಹೇಳಿದರೂ ತಳ್ಳಿ ಬಿಡುತ್ತಾನೆ. ಮಲ್ಲಿಪುರದ ಸಾವ್ಕಾರ್ರು ಕುಡುದು ಎದೆಯೊಡೆದು ಸತ್ತೋದ ವಿಷ್ಯ ಹೇಳ್ತಲೆ ವಸಿ ಹೊತ್ತು ಸುಮ್ಮನಿದ್ದು ‘ಯಾರು ಸಾಸ್ವತ ಹೇಳು’ ಅಂದು ಒಂಥರಾ ನಕ್ಕ. ಅದಕ್ಕೆ ‘ಕುಡಿಯೋದು ಬಿಟ್ಟರೆ ಮುಳುಗಿಹೋಗದು ಏನ? ‘ ಅಂದುದಕ್ಕೆ ಒಂದು ರೀತಿ ನನ್ನನ್ನೆ ನೋಡಿ ‘ನಾನು’ ಅಂದು ನುಂಗಿಕೊಂಡನು.
ಬಗ್ಗಿ ನೋಡಿದರೆ ಬೀರ ಕಾಲುಚಾಚಿ ಆರಾಮ ಬಿದ್ದುಕೊಂಡಿದ್ದನು. ಒಂದು ತೊಟ್ಟು ಸರಾಪೂ ಇರಲಿಲ್ಲ. ಹರಿವಾಣದಲ್ಲಿ ಎರಡು ತುಕಡ ಮಾಂಸ ಉಳಿದಿತ್ತು. ‘ಥೂ ಇವ್ನ ಗೋಳೆ ಇಷ್ಟು’ ಎಂದು ಗೊಣಗಿ ಹೊರಕ್ಕೆ ಬಂದು ಸುತ್ತ ಇದ್ದ ಮೂಳೆ ಗೋರಿ ಹರಿವಾಣಕ್ಕೆ ಹಾಕಿದಳು. ಅರೆಗಣ್ಣು ಬಿಟ್ಟಿದ್ದ ಬೀರ ಅಗಲವಾಗಿ ಕಣ್ಣು ತೆಗೆದರೆ ಕೆಂಡ ಕಂಡಾಂತಾಯ್ತು. ಅವನು ಒಂದೆರಡು ಸಲ ಹಾಹೊ ಅಂದು ‘ಯಾವನೋ ಅವ್ನು ನನ್ನ ತವಕ ಬಂದಿರೋ ಧೀರ? ‘ ಅಂದನು. ಲಕ್ಷ್ಮಿ ಕ್ಯಾಣಸಾರದಿಂದ ‘ಸುಮ್ನೆ ಬಿದ್ಕೊ ಇನ್ನು’ ಅಂದಾಗ ‘ಓಯ್ ನನ್ನ ಲಚಮಿ… ಬಾ ಚಿನ್ನ ಬಾ, ನಾ ಯಾರೂ ಅಂತೀನಿ’ ತೆವೆಯಲು ಯತ್ನಿಸಿ ಆಗದೆ ನೆಲಕ್ಕೆ ಒರಗಿ ಕಣ್ಣು ಮುಚ್ಚಿ ಲಚಮಿ ಲಚಮಿ ಎಂದು ಗೊರಗುಟ್ಟುತೊಡಗಿದನು. ಲಕ್ಷ್ಮಿ ಕೋಣೆಯ ಮೂಲೆಯಲ್ಲಿ ಚಾಪೆ ಹಾಸಿ ಗೋಡೆಕಡೆಗೆ ತಿರುಗಿ ಬಿದ್ದುಕೊಂಡಳು. ರಗ್ಗನ್ನು ಮೊಖತುಂಬಿ ಹೊದ್ದು ದೀಪವಾರಿಸಿದಳು.
ಕತ್ತಲು ಕವಚುತ್ತಲೆ ‘ನಮ್ಮ ಸೂರ್ಯಪ್ನ ಕಿತ್ಕೊಂಡವ ಯಾರ್ಲ’ ಬೀರ ನಿಧಾನವಾಗಿ ಕೇಳಿದನು. ಲಕ್ಷ್ಮಿಗೆ ತಡೆಯಲಾಗಲಿಲ್ಲ. ನಗುಬಂತು, ಗಟ್ಟಿಯಾಗಿ ನಕ್ಕು ಬಿಟ್ಟಳು. ‘ನಕ್ತಿಯಾ? ನಗು ನಗು, ನೀನೆಲ್ಲೊ ರಾವುಗೀವು ಇರ್ಬೇಕು. ‘ ಅದಕ್ಕೂ ಲಕ್ಷ್ಮಿ ಕಿಸಕಿಸ ನಕ್ಕಳು. ‘ನೀ ಎಲ್ಲೋದ್ರೂ ಬುಡಕಿಲ್ಲ ನೋಡು. ಒಳ್ಳೆ ಮಾತ್ನಲ್ಲಿ ಬುಡು. ಇಲ್ದಿದ್ರೆ… ‘ ಗಟ್ಟಿಯಾಗಿ ಕೂಗಿದ್ದಕ್ಕೆ ಲಕ್ಷ್ಮಿಗೆ ತಲೆ ಚಿಟ್ಟೆನಿಸಿತು. ‘ಸುಮ್ನೆ ಬಿದ್ಕೊಳ್ಳದ ಕಲ್ತಗೊ, ಇನ್ನು ನನ್ನ ಗೋಳುಹುಯ್ಕೋಬೇಡ’ ಅಂದಳು. ಬೀರ ಸ್ವಲ್ಪ ಹೊತ್ತು ಸುಮ್ಮನಿದ್ದನು. ದನಿ ಗುರುತು ಹಿಡಿದವನಂತೆ ನಕ್ಕು ‘ಹೊಯ್ ಈಗ ಗೊತ್ತಾಯ್ತು, ನನ ಲಚಮಿ, ಚಂದುಳ್ಳಿ ಲಚಮಿ’ ಅಂದನು. ಲಕ್ಷ್ಮಿ ಮಾತಾಡಲಿಲ್ಲ. ‘ಇನ್ನೂ ನಾಚ್ಕೆಯಾ ನಿಂಗೆ? ಈಟು ದಿನ ಆದ್ರೂ! ಬಾ ಅಂದರೆ ಬರ್ಬೇಕು.’ ಲಕ್ಷ್ಮಿ ಈಗಲೂ ಮಾತಾಡಲಿಲ್ಲ. ಎಳೆ ಕೂಸಂತೆ ನಕ್ಕಳು. ಬೀರನಿಗೆ ಕೋಪ ನೆತ್ತಿಗೇರಿತು ‘ನಾ ಕರೀದ್ರೂ ನೀ ಬರಾಕಿಲ್ವಮ್ಮಿ’ ಅಂತಲೆ ಲಕ್ಷ್ಮಿ ‘ಸುಮ್ನೆ ಬಿದ್ಕೊ ಇನ್ನು’ ಗಡುಸಿನಿಂದ ಹೇಳಿದಳು. ‘ಏನಮ್ಮಿ ನಿನ್ನ ಧಿಮಾಕು ! ಇಷ್ಟಕೂ ಬಂದು ಬುಟ್ಯಾ’ ಚೀರಿದ. ಲಕ್ಷ್ಮಿ ಏನನ್ನೊ ಗೊಣಗಿದಳು. ‘ನೀ ಮಾತಾಡದಿಲ್ವ? ನನ್ನೊಂದ್ಗ ಯಾಕೆ ಮಾತಾಡ್ತಿ ಹೇಳು-ಕಿಟ್ಟಪ್ಪನೊಂದಿಗೆ ಮಾತಾಡೋದು ಬಿಟ್ಟು. ಎಷ್ಟಾದ್ರೂ ಅವ ನಿನ್ನ ಮಿಂಡಾ ಅಲ್ವಾ?’ ಎಂದನು. ಲಕ್ಷ್ಮಿಗೆ ಬಾನೇ ಬಂದು ಮೊಗಚಿಕೊಂಡಂತಾಯ್ತು. ಮೈಕೈ ಸಣ್ಣಗೆ ನಡುಗಿದವು. ತುಂಬಾ ಧೈರ್ಯ ತಂದು ‘ನೀ ಯ್ಯಾನ್ನ ಅನ್ನೋದು?’ ಅಂದು ಕಿವಿ ನಿಮಿರಿಸಿ ಕೂತುಕೊಂಡಳು. ‘ನಾ ಯ್ಯಾನ್ನ ಅನ್ನೋದು ಅಂತೀಯೆನಮ್ಮಿ, ಕೊತ್ತಿ ಕಣ್ಮುಚ್ಕಂಡು ಹಾಲ್ಕುಡಿದ್ರ ಗೊತ್ತಾಗಲ್ವಂತೆ! ಹೆಹ್ಹೆಹ್ಹೆ ಗತಿ ಕಾಣಸ್ತೀನಿ ಕಂದಾ… ಬೆಳ್ಗಾಗಲಿ. ನೀನೂ ಇಲ್ಲ, ಅವ್ನೂ ಇಲ್ಲ. ಬಾವ್ಗ ತರದ್ ತರದ್ ಹಾಕ್ತೀನಿ. ನನ್ನನ್ನ ಅಷ್ಟಕ್ಕು ತಪರ ಅಂತ ತಿಳ್ಕೊಂಡಿವಿರಿ! ಈಗ ಏನಾಯ್ತು ತಕ್ಕೊ… ಬೆಳಗಾಗೋದೆ ಇಲ್ವಾ? ನಾಳೆ ಅವ್ನು ಬರೋದೆ ಇಲ್ವಾ? ಬಂದೇ ಬತ್ತಾನೆ. ಮಿಂಡಗಾತಿ ಮೊಖ ನೋಡಕೆ… ‘ ಹಹಾ ನಕ್ಕು ಸ್ವಲ್ಪ ಹೊತ್ತು ಎಡಬಿಡದೆ ಕೆಮ್ಮಿ ಕ್ಯಾಕರಿಸಿ ಅಲ್ಲೆ ಉಗುದು ‘ಉಸ್ಸಪ್ಪೊ’ ಅಂದು ಉಗುಳು ನುಂಗಿದನು. ‘ಮಚ್ಚು ಮಡಗಿವನಿ ತೊಲೆಮ್ಯಾಗ… ರಡಿ, ರಡಿಯಾಗೈತೆ’ ಅಂದದ್ದು ಗಟ್ಟಿಯಾಗಿತ್ತು. ನೆಲಕ್ಕೆ ಕೈಯೂರಿ ಕೂತಳು. ಅವ ನಕ್ಕ, ಕೆಮ್ಮಿದ, ‘ಉಸ್ಸಪ್ಪೊ’ ಅಂದ, ಕ್ಯಾಕರಿಸಿ ಉಗಿದ. ಚಣ ಹೊತ್ತು ಸದ್ದಿಲ್ಲ. ಲಕ್ಷ್ಮಿ ಕುಳಿತೇ ಇದ್ದಳು. ತಲೆ ಗಿರ್ ಅನ್ನುತ್ತಿತ್ತು. ತೊಡೆಗಳು ನಡುಗುತ್ತಿದ್ದವು. ಎದೆ ಡವ ಡವ ಹೊಡೆದುಕೊಳ್ಳುತ್ತಿತ್ತು. ವಸಿ ಹೊತ್ತಾದ ಮೇಲೆ ಗೊರಕೆ, ಯಮದ ಗೊರಕೆ ಕೇಳಿಸಿತು.
ಲಕ್ಷ್ಮಿಗೆ ಗರ ಹಿಡಿದಂತಾಯ್ತು. ಕುಡುದು ಮಾತಾಡಿದ ಅಂತ ತಳ್ಳಿಹಾಕುವಂತಿಲ್ಲ. ಸುಳಿವು ಹತ್ತದೆ ಮಾತು ಹೇಗೆ ಬರುತ್ತದೆ? ಕುಡುದು ಮಾತಾಡಿದರೂ…? ಬೀರನಿಗೆ ಎಲ್ಲವೂ ಗೊತ್ತಾಗಿದೆ. ಏನು ಮಾಡುವನೊ ದೇವರೆ. ಅವನ ಆಟವ ಈಗೇನು ನೋಡುತ್ತಿಲ್ಲ. ಎರಡು ಬೆಳೆ ಪೈರಿನಿಂದಲೂ ಚೆಂದಾಗಿ ಗೊತ್ತು. ಹಾಸ್ಟಲಿನ ಊಟದ ಬೆಲ್ಲು ಹೊಡೆದು ಸುಮಾರೆ ಹೊತ್ತಾಗಿತ್ತು. ಈಗೀತ ಸಮರಾತ್ರಿ ಹತ್ತಿರವಾಗಿರಬೇಕು. ಗುಡಿಸಲ ಪೂರ್ತ ಗೊರಕೆ. ಸರಾಪಿನ ನಾತ ಗಬ್ಬೊ ಅನ್ನಿಸುತ್ತಿತ್ತು. ಬೀರ ಹೊರಳಾಡಿದ. ಸ್ವಲ್ಪ ಹೊತ್ತು ಸಮಾ ಕೆಮ್ಮಿದ. ಆಮೇಲೆ ಪುನಃ ಗೊರಕೆ. ಲಕ್ಷ್ಮಿಗೆ ಮಲಗಬೇಕೆನಿಸಿತು. ಆಕಳಿಸಿದಳು. ತಲೆಯನ್ನು ಮಂಡಿಗೆ ಅದುಮಿ ಕುಂತು ಕಣ್ಣು ಮುಚ್ಚಿದಳು. ತೋಟಕ್ಕೆ ಕಾಲಿರಿಸಿದ ಮಾರನೆ ದಿನವೆ ಕಿಟ್ಟಪ್ಪ ಬಂದದ್ದು. ಬೀರ ‘ನಮ್ಮ ಸವ್ಕಾರ್ರ ಮಗನೋರು’ ಅಂದ. ಕಿಟ್ಟಪ್ಪ ನನ್ನನ್ನೆ ಒಂಥರಾ ನೋಡಿದರು. ಬೀರ ಕೆಮ್ಮಿದ. ನಾನು ಕತ್ತನ್ನು ಬಾವಿ ಕಡೆ ತಿರುಗಿಸಿ ನೆಲ ನೋಡುತ್ತಿದ್ದು, ಬೆವತು ನಿಲ್ಲಲೂ ಆಗದೆ ಕಸಗುಡಿಸಬೇಕೆಂದು ಒಳಕ್ಕೆ ನುಗ್ಗಿದೆ. ಕಿಟ್ಟಪ್ಪ ಹೊರಗೆ ಇದ್ದರೂ ಇನ್ನೂ ನನ್ನನ್ನೇ ನೋಡುತ್ತಿರುವನೇನೋ ಅನ್ನಿಸುತ್ತಿತ್ತು. ಹೋಗುವವರೆಗೂ, ಹೋದ ನಂತರವೂ….
ಒಂದು ದಿನ ಸರಾಪಿನ ಬಾಟಲಿಗಳನ್ನು ಬೀರನೆ ಹಲ್ಲು ಕಿರಿಯುತ್ತ ತಂದನು. ಅವತ್ತಿನ ಮಾಂಸವೂ ಹೆಚ್ಚಾಗಿಯೆ ಇತ್ತು. ಇಂದು ಕಿಟ್ಟಪ್ ಬರುವರು ಅಂದ. ಅದಕ್ಕೇನೂ ಮಾತಾಡಲಿಲ್ಲ. ಮಾಡಿಕೊಟ್ಟೆ. ಕತ್ತಲಾಗಿ ಚಣಹೊತ್ತು ಕಳೆಯಲು ಕಿಟ್ಟಪ್ಪ ಬಂದರು. ತುಂಬವೆ ಶಿಸ್ತು ಮಾಡಿಕೊಂಡಿದ್ದರು. ‘ಏನಾರ ಮದ್ವೆ, ಹೆಣ್ಣ ನೋಡಾಕೆ ಬಂದಿದಿರಾ ಕಿಟ್ಟಪ್ಪ?’ ಬೀರ ನಗುನಗುತ್ತ ಅಂದಾಗ ಕಿಟ್ಟಪ್ಪನೂ ನಕ್ಕನು. ಹುಟ್ಟುತ್ತಲೆ ನಗುತ್ತ ಹುಟ್ಟಿದನೇನೊ ಅವ. ತಿಂದರು, ಇಬ್ಬರು ತಿಂದರು. ಕುಡಿದರು. ಬೀರನೆ ಹೆಚ್ಚು ಬಗ್ಗಿಸಿಕೊಂಡನು. ಆಮೇಲೆ ಕಣ್ಣು ತೇಲಿಸಿ ಕಾಲು ಚಾಚಿ ಬಿದ್ದುಕೊಂಡನು. ಕಿಟ್ಟಪ್ಪ ಎಷ್ಟು ಹೊತ್ತಾದರೂ ಹೋಗಲಿಲ್ಲ. ನಾನು ಕೋಣೆ ಒಳಕ್ಕೆ ಹೋದೆ. ಕಿಟ್ಟಪ್ಪ ಕೆಮ್ಮಿ ನಾವು ಬರುವುದಕ್ಕೆ ಮುಂಚಿನಿಂದಲೂ ಇದ್ದ ಹಗ್ಗದ ಹುರಿ ಮಂಚದ ಮೇಲೆ ಕುಂತು ಹಾಗೆ ಇದ್ದು ಆಮೇಲ ನಿಧಾನಕ್ಕೆ ಅಲ್ಲಿ ಒರಗಿದನು. ಜೀವ ಕೈಲಿಡಿದು ಕೋಣೆ ಒಳಗೆ ಕಂಬಳಿ ಹಾಸಿ ಮಲಗಿ ರಗ್ಗು ಹೊದ್ದು ದೀಪವಾರಿಸಿದೆ. ಕತ್ತಲಾಯಿತು. ಕಣ್ಣು ಮುಚ್ಚಿದರೂ ನಿದ್ದೆ ಸುಳಿಯಲಿಲ್ಲ. ಏನೇನೊ ಊರ ಕಡೆಯ ನೆನಪುಗಳು…
ಸ್ವಲ್ಪ ನಿದ್ದೆಯ ಮಂಕು. ಹಜಾರದಿಂದ ಬೀರನ ಗೊರಕೆ ಚೆನ್ನಾಗಿ ಕೇಳಿಸುತ್ತಿತ್ತು. ಕಿಟ್ಟಪ್ಪನ ಆಗಾಗಲ ಕೆಮ್ಮು. ಹೊರಳಿದಾಗ ಸರಸರ ಸದ್ದು. ಬೀಡಿ ಎಳದಾಗಿನ ಕೆಂಪು ಬೆಳಕು. ಪುನಃ ಬೀರನ ಗೊರಕೆ. ಎಲ್ಲವನ್ನೂ ಕಾಣದ ಹಾಗೆ ಕರಗಿಸಿ ಕೊಂಡಿರುವ ಗವಗತ್ತಲು. ಬಿಗಿಯಾಗಿ ಕಣ್ಣು ಮುಚ್ಚಿದರೂ ನಿದ್ದೆಯ ಸುಳಿವೇ ಇಲ್ಲ. ಕೆಮ್ಮುವುದೂ ಕಷ್ಟ. ಉಗುಳು ನುಂಗಲೂ ಆಗದು. ನುಂಗಿದರೆ ಗೊಳಕ್ ಅಂತ ಸದ್ದಾಗುತ್ತದೆ. ಸುತ್ತಲೂ ಎಂಥದೂ ಸದ್ದಿಲ್ಲ. ಅದೇ ದೊಡ್ಡದಾಗಿ ಕೇಳಿಸುತ್ತದೆ. ಬೀರನೇನೊ ಗೊರಕೆ ಹೊಡೆಯುತ್ತಿದ್ದಾನೆ. ಕಿಟ್ಟಪ್ಪನಂತೂ ಕಣ್ಣು ಮುಚ್ಚಿಲ್ಲ ಅಂತ ಕಾಣುತ್ತೆ. ಬೀಡಿ ಸೇದೋದು ಕೆಮ್ಮುವುದು ಮಾಡುತ್ತವನೆ. ಕಳೆ ಕೀಳಲು ಬಂದಿದ್ದ ಪುಟ್ಟಿ ಕಿಟ್ಟಪ್ಪನ ಚರಿತ್ರಾನ ಒದರಿ ಹೋಗವಳೆ. ನಂಗೂ ನಿದ್ದೆ ಇಲ್ಲ. ಗೊತ್ತಾಗಿ ಬಿಟ್ಟರೆ? ಥೂ.
‘ಲಕ್ಷ್ಮಿ’ ಮೆಲ್ಲನೆ ಕರೆದು ಮೈ ಮುಟ್ಟಿ ಅಲ್ಲಾಡಿಸಿದಾಗ ತಟ್ಟನೆ ಎಚ್ಚರವಾಗಿ ಬೆಚ್ಚಿಬಿದ್ದಳು. ಯೋಚನೆ ದಿಗಿಲಿನ ಮಧ್ಯೆ ಯಾವಾಗ ನಿದ್ದೆ ಬಂತೊ ಗೊತ್ತಿರಲಿಲ್ಲ. ಜೋಪಡಿ ಹಾರಿಹೋಗುವಂತೆ ಎದೆ ಬಡಿದುಕೊಳ್ಳತೊಡಗಿತು. ಮೆಲ್ಲನೆ ಮೈಸವರಿದ. ಉಸಿರ ಹಿಡಿತ ತಪ್ಪಿತು. ಒಂದು ಕಯ್ಯ ತೊಡೆಯ ಮೇಲೆ ಇಟ್ಟು ಇನ್ನೊಂದು ಕಯ್ಯಿಂದ ಗಲ್ಲ ಹಿಡಿದು ಅಲ್ಲಾಡಿಸಿದನು. ಇನ್ನು ಸರಿಯಲ್ಲ ಅಂದುಕೊಂಡು ಬೆಚ್ಚೆತ್ತವಳಂತೆ ‘ಯಾರು?’ ಅಂದಾಗ ‘ನಾನು ಕಿಟ್ಟಪ್ಪ’ ಅಂದನು. ಬೀರನ ಗೊರಕೆ ಕೇಳಿಸಿದಾಗ ಮೈ ನಡುಗಿತು. ಕಿಟ್ಟಪ್ಪನ ಕೈ ತೊಡೆ ಸವರುತ್ತಿತ್ತು. ತೋಚದೆ ಬೆಬಗುಟ್ಟುತ್ತ ‘ಬೀರ ಮಲಗವನೆ’ ಅನ್ನಲು ಕಿಟ್ಟಪ್ಪ ಅಂದದ್ದು-‘ಹ್ಹಿ ಕುಡಿದು ಬಿದ್ದೈತೆ.
ಹೊತ್ತು ಮೂಡಲು ಎಚ್ಚರವಾಗಿ ಮೈ ಮಾಲು ಮುರಿಯಲು ಬೀರನಿಗೆ ಹಗೂರವಾದಂತೆ ತೋರಿತು. ಹಾಗೂ ಬೀರನಿಗೆ ವಸಿ ರಾತ್ರಿ ನಿಶ ಉಳಿದಿತ್ತು. ಎರಡೂ ಕೈಯನ್ನು ಗಸಗಸನೆ ತೀಡಿ ಮೊಖಕ್ಕೆ ಎದುರು ನಿಂತ ಅಂಗೈ ನೋಡಿಕೊಂಡು ಮೆಲ್ಲನೆ ‘ಲಚಮಿ’ ಎಂದಾಗ ಉತ್ತರ ಬರಲಿಲ್ಲ. ಇಷ್ಟು ಹೊತ್ತಾದರೂ ಹೆಂಗಸಿಗೆ ಅಷ್ಟು ನಿದ್ದೆಯ ಅಂದುಕೊಂಡು ಬಲ ಮೊಗ್ಗಲಿಗೆ ಹೊರಳಿ ಕಂಬಳಿ ಸರಿಸಿ ಕೋಣೆಕಡೆ ನೋಡಿದಾಗ ಲಕ್ಷ್ಮಿ ಮೊಖದ ತುಂಬಾ ಹೊದ್ದು ಕೊಕ್ಕರಿಸಿಕೊಂಡು ಮಲಗಿದ್ದಳು. ಅವಳು ಹೊದ್ದಿದ್ದ ಪಟ್ಟೆ ಪಟ್ಟೆ ರಗ್ಗಿಗೆ ದಿಟ್ಟಿ ನೆಟ್ಟಿತು. ಕಳೆದ ಸೋಮವಾರ ಕಿಟ್ಟಪ್ಪ ರಗ್ಗು ಚಾಚಿ ತಕ್ಕೋ ಬೀರ ಬರೋದು ಚಳಿಗಾಲ ಅಂದು, ಕೊಟ್ಟರು, ರಾತ್ರಿ ಮಲಗುವಾಗ ಚಲುವಿ ಒಳಗೊಳಗೆ ನಗುತ್ತ ಅದನ್ನು ತನ್ನ ಕಡೆ ಎಳೆದುಕೊಂಡು ‘ಇದು ನಂಗೇ ಬೇಕು ಎಂದು ಬಿಮ್ಮನೆ ಬೀರಿ ಹಿಡಿದುಕೊಂಡಳು. ಅವಳನ್ನೆ ಬಾಚಿ ತಬ್ಬಿಕೊಂಡು ಎದೆಗೆ ಅಮುಕಿ ‘ಹೋಗ್ಲಿ ಅದನ್ನ ನೀನೇ ತಕ್ಕೊ… ನಿನ್ನನ್ನ ನಂಕೊಡು ಅದ್ಕಿಂತ ನೀನೆ ಬೆಚ್ಚಗೆ’ ಅಂದಾಗ ಕಿಸಕಿಸ ನಕ್ಳು. ಈಗ ಅವಳಿಗೆ ಬೆಚ್ಚಗಾಗುತ್ತಿರಬೇಕು… ‘
ಕಿಟ್ಟಪ್ಪ ಕೊಟ್ಟಿರುವ ರಗ್ಗು ಲಚಮೀನ ಕವಿಚಿಕೊಂಡಿದೆ. ಕಿಟ್ಟಪ್ಪ ಕಟ್ಟಿಸಿರುವ ಮನೆ ಇಬ್ಬರನ್ನೂ ಕವಿಚಿಕೊಂಡಿದೆ. ನನ್ನನ್ನ ಆದರೆ ಚಿಂತಿಲ್ಲ. ಲಚಮಿಯನ್ನಾದರೆ… ಪಟೇಲರ ಹಟ್ಟಿಗೆ ಚಲ್ಲಣ ಸಿಕ್ಕಿಸಿಕೊಂಡು ಬಂದಿದ್ದವ ಲಚಮೀನ ಕೆಣಕಿದನಂತೆ ಅಂತ ಕಿವಿಗೆ ಬಿದ್ದುದೆ ತಡ ಜಗಲಿಮ್ಯಾಗ ಕಾಲಮ್ಯಾಲ ಕಾಲಮ್ಯಾಲ ಕಾಲ ಹಾಕಿ ಕುಳಿತಿದ್ದವನ ಕತ್ತಿನ ಪಟ್ಟಿ ಹಿಡಿದು ಎಳೆದು, ‘ನಿನ್ನ ಸಾವ್ಕಾರಿಕೆ ಇದ್ರೆ ನಿನ್ನ ಹಟ್ಟಿಗೆ ಕನ್ಲ. ನಂಗೂ ವಸಿ ತೋರಿಸೋಕೆ ಬತ್ತೀಯಾ?’ ಎಂದು ಬಿಗೀಬೇಕು. ಅಷ್ಟಕ್ಕೆ ಪಟೇಲರು ಮಧ್ಯಕ್ಕೆ ಬಂದು ಕೈ ಮುಗಿದು ‘ಬೇರೆ ಊರ್ನ ಹೈದ ಏನೂ ತಿಳಿದೇ’ ಅಂತ ಸುಮ್ಮನಾಗಿಸಿದರು. ಹಟ್ಟಿಗೆ ಬಂದಾಗ ಲಚಮಿ ಎದೆಗೆ ಆತುಬಿದ್ದಳು.
ಎಡಗೈಯಿಂದ ಹೊಟ್ಟೆ ಸವರಿ ಮೇಲಕ್ಕೆ ತಂದು ಎದೆಯ ಮೇಲಿಟ್ಟನು. ಎದೆಯೊಳಗೆ ಸಣ್ಣಕ್ಕೆ ನೋವು ಹರಿಯಿತು. ‘ಕುಡಿಬೇಡಿ ಅಂತ ಎಷ್ಟು ಬಡ್ಕಂಡ್ರೂ ಕೇಳೊಲ್ಲ. ಮಲ್ಲಿಪುರ್ದ ಸವ್ಕಾರ್ರು ಕುಡ್ದು ಎದೆ ಒಡೆದು ಸತ್ತೋದ್ರಂತೆ. ಕುಡ್ದರೆ ಕಳ್ಳನ್ನೆಲ್ಲ ಕೊರೆದು ಹಾಕ್ಬಿಡ್ತದಂತೆ,’ ಏನಾರು ಸಾವ್ಕಾರರಿಗೆ ಆದಂಗೆ ನಂಗೂ ಆಗಿಬಿಟ್ಟರೆ? ಲಚಮಿಗೆ ದಿಕ್ಕು? ಯಾಕೆ? ಹೆಂಗೆಂಗೊ ಆಗತೊಡಗಿತು. ಬೀಡಿ ಸೇದಬೇಕೆನಿಸಿ ದಿಂಬು ಸರಿಸಿ ನೋಡಿದಾಗ ಇರಲಿಲ್ಲ. ಹೊರಗೆ ಇಬ್ಬನಿ ಬೀಳುತ್ತಿತ್ತು. ಮೊದಲೆ ಚಳಿ, ಬೀಡೀನೂ ಇಲ್ಲ. ಬಿಸಲು ಬರುವವರೆಗೂ ಹಿಂಗೇ ಇರಬೇಕು.‘ಇನ್ನೂ ಬೆಳೆಯೊ ಹೊತ್ತು. ಮಲ್ಗವನೆ ಎಳೆಕೂಸಂಗೆ. ನಾಚ್ಕೆ ಆಗಾಕಿಲ್ವ ನಿನ್ನ ಘಟಕ್ಕೆ’ ಇಷ್ಟು ಮೊಬ್ಬಿಗೆ ಕಿಟ್ಟಪ್ಪ? ಚಳಿ ಬಿಟ್ಟವನಂತೆ ಕಂಬಳಿ ಹೊದ್ದು ಮೇಲಕ್ಕೆ ಎದ್ದು ಕೋಣೆ ಕಡೆ ನೋಡಲು ಲಚಮಿ ಇನ್ನು ಮಲಗವಳೆ. ಏಳಿಸಬೇಕೆನಿಸಿದರೂ ಮನಸಾಗಲಿಲ್ಲ. ಬಲಗಡೆ ನೇತುಹಾಕಿದ್ದ ಚಾಮುಂಡವ್ವನ ಪೋಟೊಗೆ ಕೈ ಮುಗಿದು ತಡಿಕೆ ಬಿಚ್ಚಲು ಮೂಡಣ ದಿಕ್ಕಿಗೆ ಎದುರಾಗಿದ್ದ ಜೋಪಡಿ ಒಳಕ್ಕೆ ಬೆಳಕು ಚಲ್ಲಿತು. ನೋಡಿದರೆ ಕಿಟ್ಟಪ್ಪ ನಿಂತಿದ್ದರು.
ಲಕ್ಷ್ಮಿ ಎದ್ದು ಚಣಹೊತ್ತು ಸುಧಾರಿಸಿಕೊಂಡರೂ ಮಂಕು ಆರಿರಲಿಲ್ಲ. ರಾತ್ರಿಯ ನೆಪ್ಪು ಮೈಚುರುಗುಟ್ಟಿಸಲು ತೊಲೆಕಡೆ ಕಣ್ಣೋಡಿದಾಗ ಮಚ್ಚು ಅಲ್ಲೆ ಇತ್ತು. ಹೇಗೇಗೋ ಆಗಿ ಹೊರಕ್ಕೆ ಬಗ್ಗಿ ನೋಡಿದಳು. ಬೀರ ಆಗಲೆ ಎದ್ದು ಹೊರಗೆ ಯಾರ ಜೊತೆಯಲ್ಲೊ ಮಾತಾಡುತ್ತಿದ್ದನು. ಸದ್ದು ಮಾಡದೆ ಬಾಗಿಲ ಬಳಿ ಬಂದು ನೆರಕೆ ಕಿಂಡಿಗೆ ಕಣ್ಣು ಹಾಕಿದಾಗ ಅಚ್ಚರಿ ಆಯ್ತು. ಕಿಟ್ಟಪ್ಪ ನಿಂತಿದ್ದನು. ಯಾತಕ್ಕೊ ಕಿಟ್ಟಪ್ಪ ನಕ್ಕ, ಬೀರನೂ ನಕ್ಕನು.