ಮಾನವೀಯ ಸ್ಪರ್ಶ ಇರಲಿ – ದೇವನೂರ ಮಹಾದೇವ
[ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಕುರಿತು ಪ್ರಜಾವಾಣಿ ಪತ್ರಿಕೆಯು 23.5.2024ರಂದು ಮಾಡಿದ ವಿಶೇಷ ಸುದ್ದಿಗಾಗಿ ದೇವನೂರ ಮಹಾದೇವ ಅವರ ಹೇಳಿಕೆಯನ್ನು ಪಡೆದು ಪ್ರಕಟಿಸಿದ್ದು ಹಾಗೂ 30.5.2024ರಂದು ಹಾಸನದಲ್ಲಿ ಈ ಪ್ರಕರಣವನ್ನು ವಿರೋಧಿಸಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶದ ಪೋಸ್ಟರ್ ಗಾಗಿ ನೀಡಿದ ಹೇಳಿಕೆ. ]
ಮಾನವೀಯ ಸ್ಪರ್ಶ ಇರಲಿ
– ದೇವನೂರ ಮಹಾದೇವ
ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ದಿನಕ್ಕೊಂದು ತಿರುವುಗಳನ್ನು ಪಡೆದುಕೊಳ್ಳುತ್ತಾ, ಆ ಪೆನ್ ಡ್ರೈವ್ ಹುಟ್ಟು ಪಡೆದ ಜಾಗದಿಂದಲೇ ದೂರ ದೂರ ಹೋಗುತ್ತ ದಿಕ್ಕು ತಪ್ಪುತ್ತಿದೆ. ಇದಾಗಬಾರದಿತ್ತು.
ಈಗ ಎಲ್ಲಕ್ಕಿಂತ ಮೊದಲು ಪ್ರಜ್ವಲ್ ಭಾರತಕ್ಕೆ ಬರಬೇಕು. ಆತನ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಹಾಗೂ ರೆಡ್ ಕಾರ್ನರ್ ನೋಟಿಸ್ ನೀಡುವುದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕಿದೆ. ಕೇಂದ್ರ ಸರ್ಕಾರ ಇನ್ನೂ ವಿಳಂಬಿಸಿದರೆ, ಅದರ ನಡೆ ಅನುಮಾನಕ್ಕೆಡೆಗೊಡುತ್ತದೆ.
ಮನೋವಿಕಾರದ ಚಟಕಾಮದ ದೌರ್ಜನ್ಯಕ್ಕೆ ಬಲಿಪಶುಗಳಾದ ಕುಟುಂಬಗಳಲ್ಲಿ ಅಲ್ಲೋಲಕಲ್ಲೋಲ ಆಗುತ್ತಿರುವಾಗ, ಇದಕ್ಕೆಲ್ಲ ಮೂಲ ಕಾರಣನಾದವನು ಸಂಸದ ಪ್ರಜ್ವಲ್ ಎನ್ನುವುದನ್ನು ಗೌಣ ಮಾಡಿ, ಆತನ ಕುಟುಂಬದವರು- ‘ಇದೆಲ್ಲಾ ತಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ’ ಎಂದು ಗೋಳಾಡುವುದು ಕ್ರೂರ ನಡೆ.
ನಾವು ಈ ಕ್ಷಣದಲ್ಲಿ ಬಲಿಪಶುಗಳಾದ, ಬೇಯುತ್ತಿರುವ ನೊಂದ ಜೀವಿಗಳು ಯಾರೇ ಆಗಿರಲಿ, ಅವರು ನಮ್ಮ ಕುಟುಂಬದಲ್ಲೇ ಒಬ್ಬರು ಎಂದು ಭಾವಿಸಿ, ನಮ್ಮ ನೋಟ, ನುಡಿ, ನಡೆಗಳಲ್ಲಿ ಮಾನವೀಯತೆ, ಅಂತಃಕರಣವನ್ನು ಪಳಗಿಸಿಕೊಳ್ಳಬೇಕಾಗಿದೆ.
– ದೇವನೂರ ಮಹಾದೇವ
ಹಾಸನದ ಸಂಸದ ಪ್ರಜ್ವಲ್ ದು ಎನ್ನಲಾದ ಲೈಂಗಿಕ ಕೃತ್ಯಗಳ ಹಾಗೂ ಅವುಗಳನ್ನು ತಾನೇ ವಿಡಿಯೋ ಮಾಡಿಕೊಂಡಿರುವುದು ಹೇಗಿದೆ ಎಂದರೆ- ಯುದ್ಧದಲ್ಲಿ ಗೆದ್ದ ಸೇನಾಧಿಪತಿಯೊಬ್ಬ ರಣೋನ್ಮಾದದಲ್ಲಿ ತನ್ನ ಬಂದೂಕು, ಬಲಿಷ್ಠತೆಗಳಿಂದ ಹೆಣ್ಣುಗಳ ಮೇಲೆ ಎರಗಿದಂತಿದೆ. ಇಂದು ನಮ್ಮ ಪೊಲೀಸ್/ನ್ಯಾಯಾಂಗ ವ್ಯವಸ್ಥೆ ಹಾಗೂ ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಅಗ್ನಿಪರೀಕ್ಷೆ ಎದುರಾಗಿದೆ. ಇವು ತ್ವರಿತವಾಗಿ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಮ್ಮ ಮರ್ಯಾದೆ ಕಾಪಾಡಿಕೊಳ್ಳಬೇಕಾಗಿದೆ.
– ದೇವನೂರ ಮಹಾದೇವ