ಮಾತು ಕಳೆದುಹೋಗುತ್ತಿರುವ ಈ ಕಷ್ಟಕಾಲದಲ್ಲಿ.. -ಆರ್.ಸುಧೀಂದ್ರಕುಮಾರ್

[ಮಾರ್ಚ್ 2013 ರ ‘ಸಂವಾದ’ ಮಾಸಪತ್ರಿಕೆ ‘ಎದೆಗೆ ಬಿದ್ದ ಅಕ್ಷರ’ ಕುರಿತು ಸಂಕಲಿಸಿದ ಒಂದಷ್ಟು ಟಿಪ್ಪಣಿಗಳಲ್ಲಿ ಪ್ರಕಟವಾದ ಕವಿ, ವಿಮರ್ಶಕ ಆರ್.ಸುಧೀಂದ್ರಕುಮಾರ್ ಅವರ ಕಿರು ಟಿಪ್ಪಣಿ.]

edege

 

ಹಾಡು ಯಾರದು? ಈ ಪ್ರಶ್ನೆ ಒಮ್ಮೆ ಹುಟ್ಟಿತು. ಆಗ ಹಾಡು ಹಾಡುವವರದು ಅರ್ಧ, ಕೇಳುವವರದೂ ಅರ್ಧ ಎಂದರಂತೆ ಗಂಗೂಬಾಯಿ ಹಾನಗಲ್ಲರು. ಎಂದೋ ಕಿವಿಗೆ ಬಿದ್ದಿದ್ದ ಈ ಮಾತು ಅನುಭವದಲ್ಲಿ ನಿಜವೆನಿಸಿದ್ದು ದೇವನೂರ ಮಹಾದೇವರ ‘ಎದೆಗೆ ಬಿದ್ದ ಅಕ್ಷರ’ ಕೃತಿಯನ್ನು ಓದಿದಾಗ. ಇದಕ್ಕೆ ಕಾರಣ ಏನಿರಬಹುದೆಂದು ಹುಡುಕಿದೆ. ಎರಡು ಅಂಶಗಳನ್ನು ಈ ಕೃತಿ ಬಿಟ್ಟುಕೊಟ್ಟಿತು. ಒಂದು; ಓದುಗರನ್ನು ತನ್ನ ತೆಕ್ಕೆಗೆ ಕರೆದು ಆಡಿಸುವ ಇಲ್ಲಿನ ಕಾವ್ಯಗುಣ. ಎರಡು; ಸುಡುವ ವಾಸ್ತವಕ್ಕೆ ತೆತ್ತುಕೊಂಡು ಕಾವ್ಯದ ಜೀವಾಳವೇ ಆಗಿ ಕರಗಿರುವ ಇಲ್ಲಿನ ತಾಣ. ಹೀಗೆ ಹೇಳಿದಾಗ ಇಲ್ಲೊಂದು ಕುತೂಹಲದ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ತಾನು ಆಡಿದ ಮಾತನ್ನು ಕೇಳಿಸಿಕೊಳ್ಳುವವರು ಇರುವಾಗ, ಇದರ ನಡುವೆ ಸಂವಾದವೂ ಸಾಧ್ಯವೆಂದು ತಿಳಿದಿರುವಾಗ, ಓರ್ವ ಜನಮಾನಸದಲ್ಲಿ ನೆಲೆಸಿರುವ ಲೇಖಕ ಅದರಲ್ಲಿಯೂ ಗದ್ಯದಲ್ಲಿ ಬರೆಯುವಾಗ ಯಾಕೆ ಇಲ್ಲಿ ರೂಪಕದ ಆಸರೆಗೆ ಹೋಗಬೇಕಾಗಿದೆ? ಈ ಪ್ರಶ್ನೆಯೊಂದಿಗೆ ಈ ಕೃತಿಯನ್ನು ಓದಬೇಕಾಗುತ್ತದೆ. ಭಾಷೆಯೊಂದು ಕ್ಲೀಷೆಗೆ ಒಳಗಾದಾಗ, ತನ್ನ ಅಭಿವ್ಯಕ್ತಿಗೆ ಇರುವ ಭಾಷೆ ಸಾಲದು ಎನ್ನಿಸಿದಾಗ, ವಿವರಗಳಿಗಿಂತಲೂ ತಿರುಳು ಬೇಕೆನಿಸಿದಾಗ, ತಾನು ಬಳಸುತ್ತಿರುವ ಭಾಷೆಯಲ್ಲಿ ಏರ್ಪಡುವ ಮೂಲಭೂತ ನಿಟ್ಟನ್ನು ಮುರಿಯಲೋಸುಗ ಕವಿ ರೂಪಕದತ್ತ ಕೈ ಚಾಚುವುದುಂಟು. ಈ ಇರಾದೆ ದೇವನೂರರ ಎದೆಗೆ ಬಿದ್ದ ಅಕ್ಷರ ಕೃತಿಗೆ ಇದೆ. ಗದ್ಯದಲ್ಲಿ ಬಳಕೆಯಾಗಿರುವ ಇಲ್ಲಿನ ರೂಪಕ ಗುಣವೇ ಡೆಮಾಕ್ರಸಿಯ ಗುಣವಾಗಿರುವ ಚರ್ಚೆಗೆ ಅವಕಾಶ ಮಾಡಿಕೊಡುತ್ತದೆ. ಮುಖ್ಯವಾಗಿ ಮಾತು ಕಳೆದು ಹೋಗುತ್ತಿರುವ ಈ ಕಷ್ಟಕಾಲದಲ್ಲಿ, ಮಾತಿಗೆ ಇರುವ ಬೆಲೆಯನ್ನು ಸಮುದಾಯದ ನೆಲೆಯಿಂದ ತುಂಬಿಕೊಡುವ ಧೀರಯತ್ನ ಇಲ್ಲಿಯದು. ಮಾತನಾಡುವಂತೆ ಮಾಡಿರುವ ಈ ಹೊತ್ತಿನ ಸಂಕಟಗಳೇ ನಮಗಿಲ್ಲಿ ಹೆಜ್ಜೆಹೆಜ್ಜೆಗೂ ಎಡತಾಕುವುವು. ನಮ್ಮ ಬದುಕನ್ನು ಹಸನು ಮಾಡುವುದು ಯಾವುದು? ಬಿಕ್ಕಟ್ಟಿನ ಅಲುಗಿನ ಮೇಲೆ ನಡೆಯಬೇಕಾದರೆ ನಮ್ಮ ಪಾತ್ರ ಏನು? ಎನ್ನುವ ಒದ್ದಾಟವೇ ಇಲ್ಲಿ ಏಳು ಭಾಗಗಳಲ್ಲಿ ಹರಡಿಕೊಂಡಿವೆ. ಇವು ಜಾತಿ, ಧರ್ಮ, ರಾಜಕೀಯ ಮತ್ತು ಸಾಹಿತ್ಯದ ಆಯಾಮದಲ್ಲಿ ಒಂದು ಆಕಾರಕ್ಕೆ ಒಳಗಾಗಿವೆ. ಈ ಎಲ್ಲದರ ತಳ ಅಂದರೆ ಆಶಯವು ಚಿಂದಿಯಾಗಿಬಿಟ್ಟಿರುವ ಮನುಷ್ಯನನ್ನು ಘನತೆಯಲ್ಲಿ ನೋಡುವುದಾಗಿದೆ.