ಮಹಿಳೆಯರೇ ಸಂಘಟಿತರಾಗಿ ನಾಯಕತ್ವ ಪಡೆಯುವುದು ದಾರಿಯಾಗಬಹುದು. -ದೇವನೂರ ಮಹಾದೇವ
[ದು.ಸರಸ್ವತಿಯವರು ಸಂಪಾದಿಸಿರುವ ‘ನೀರ ದಾರಿ’ ದಲಿತ ಮಹಿಳಾ ಪ್ರಜ್ಞೆ-ವಿಭಿನ್ನ ನೆಲೆಗಳಿಂದ- ಕೃತಿಗಾಗಿ ದಲಿತ ಸಂಘಟಕರ ನೆಲೆಯಿಂದ ದೇವನೂರ ಮಹಾದೇವ ಅವರಿಗೆ ಕೇಳಲಾದ ಪ್ರಶ್ನೆಗಳಿಗೆ ಅವರು ನೀಡಿದ ಉತ್ತರಗಳು.]
• ದಲಿತ ಸಮುದಾಯದಲ್ಲಿನ ಪಿತೃ ಪ್ರಧಾನತೆ ಭಿನ್ನವಾಗಿದೆಯೇ? ಹೇಗೆ? ಏಕೆ?
ದಲಿತ ಸಮುದಾಯದಲ್ಲಿ ಗಂಡು ಹೆಣ್ಣು ಅನ್ನದೆ, ಹೆಣ್ಣೂ ಸಹ ತನ್ನ ಅನ್ನವನ್ನು ತಾನೇ ದುಡಿದು ತಿನ್ನುವ ಪರಿಸ್ಥಿತಿ ಇರುವುದರಿಂದ, ಬಡತನ ಇರಬಹುದು. ಆದರೆ ಹೆಣ್ಣು ತನ್ನ ಅನ್ನಕ್ಕಾಗಿ ಗಂಡನ್ನು ಅವಲಂಬಿಸಿರುವುದು ಅಪರೂಪ. ಜೊತೆಗೆ ಅಡಿಗೆ ಕೆಲಸ, ಮಕ್ಕಳ ಪಾಲನೆ ಇತ್ಯಾದಿ ಹೆಚ್ಚುವರಿ ಕೆಲಸವೂ ಹೆಣ್ಣಿನ ಮೇಲೆಯೇ ಬಿದ್ದು ಹೆಣ್ಣನ್ನೇ ಅವಲಂಬಿಸಿರುವ ಪರಿಸ್ಥಿತಿ ಹೆಚ್ಚಿದೆ. ಪಿತೃಪ್ರಧಾನತೆ ಇದ್ದರೂ ಈ ಪರಿಸ್ಥಿತಿ ಇರುವುದರಿಂದ ಪಿತೃಪ್ರಧಾನತೆ ತೆಳುವಾಗಿದೆ, ಔಪಚಾರಿಕವಾಗಿದೆ. ಹೀಗಿದ್ದೂ ಪುರುಷ ಅಹಂ ಕಮ್ಮಿಯೇನಿಲ್ಲ. ಜೊತೆಗೆ ಮಧ್ಯಮವರ್ಗದ, ಮಧ್ಯಮ ಜಾತಿಗಳ ಅನುಕರಣೆ ಹೆಚ್ಚುತ್ತಿದೆ.
‘ಕುಸುಮಬಾಲೆ’ಯಲ್ಲಿ ಚೆನ್ನನ ಅಪ್ಪನಿಗೆ ಹೆಸರಿಲ್ಲ. ಹೊಸ ತಲೆಮಾರು ಚೆನ್ನನನ್ನು ಗುರುತಿಸಿ ‘ಚೆನ್ನನ ಅಪ್ಪ’ ಎಂದು ಕರೆಯುತ್ತಾರೆ. ಹಳೆ ತಲೆಮಾರು ಚೆನ್ನನ ಅಪ್ಪನ ತಾಯಿಯನ್ನು ಗುರುತಿಸಿ ‘ಸಿದ್ದಿ ಮಗನೆ’ ಎಂದು ಕರೆಯುತ್ತಾರೆ. ಇದು, ದಲಿತ ಸಮುದಾಯದಲ್ಲಿ ಹಿಂದೆ ಮಾತೃಪ್ರಧಾನತೆ ಇತ್ತೇನೋ, ಹೀಗೆ ತಾಯಿಯಿಂದ ಗುರುತಿಸುವುದು ಅದರ ಪಳೆಯುಳಿಕೆಯೇನೋ ಎಂಬ ವಾಸನೆ ಸುಳಿಯುತ್ತದೆ.
• ದಲಿತ ಸಮುದಾಯದ ಮಹಿಳೆಯರ ಅರಿವು, ವಿವೇಕ, ಜಾಣ್ಮೆ -ಒಟ್ಟಾರೆ ದಲಿತ ರಾಜಕಾರಣಕ್ಕೆ ದಿಕ್ಕಾಗಬಲ್ಲುದೇ?
ಒಂದು ಉದಾಹರಣೆ- ನನ್ನ ಸ್ನೇಹಿತರು ಹೇಳಿದ್ದನ್ನು ಹೇಳುತ್ತಿರುವೆ: ಒಂದು ದಲಿತ ಸಮಾವೇಶದಲ್ಲಿ ಊಟದ ವ್ಯವಸ್ಥೆಯ ಸ್ಥಳ ತುಂಬಾ ಇಕ್ಕಟ್ಟಾಗಿದ್ದು ಗಂಡಸರು ಒಂದು ಕಡೆ ಹೆಂಗಸರು ಒಂದು ಕಡೆ ಒತ್ತರಿಸಿಕೊಂಡು ಕೂತು, ಊಟದ ಬಾಳೆ ಎಲೆಗಳು ಒಬ್ಬರದು ಇನ್ನೊಬ್ಬರದರ ಮೇಲೆ ಬಿದ್ದಿರುವಂಥ ಇಕ್ಕಟ್ಟು ಇರುತ್ತದೆ. ಯಾವುದೋ ಒಂದು ಘಳಿಗೆಯಲ್ಲಿ ಹೆಂಗಸರ ಸಾಲಿನ ಎಲೆಗಳು ಅಡ್ಡಡ್ಡ ಇದ್ದದ್ದು ಉದ್ದುದ್ದ ಆಗುತ್ತದೆ. ಆಗ ಒಬ್ಬರ ಎಲೆ ಇನ್ನೊಬ್ಬರ ಎಲೆಗೆ ಸೋಕದಂಥ ವ್ಯವಸ್ಥೆ ಏರ್ಷಡುತ್ತದೆ. ಅನನುಕೂಲತೆಯನ್ನು ಹೆಣ್ಣು ತನ್ನ ಜಾಣ್ಮೆ, ವಿವೇಕದಿಂದ ಸಂಭಾಳಿಸುತ್ತಾಳೆ. ಈ ಹುಟ್ಟುಗುಣ ಎಲ್ಲಾ ಕ್ಷೇತ್ರಗಳಿಗೂ ತುರ್ತಾಗಿ ಬೇಕಾಗಿದೆ.
• ದಲಿತ ಚಳವಳಿಗೆ ಪ್ರಾರಂಭದಲ್ಲಿದ್ದ ಲಿಂಗ ಸೂಕ್ಷ್ಮತೆ ಈಗಲೂ ಅದೇ ಸ್ವರೂಪದಲ್ಲಿ ಉಳಿದುಕೊಂಡಿದೆಯೇ?
ಈ ಲಿಂಗಸೂಕ್ಷ್ಮತೆ ಪದದ ಅರ್ಥವೇನೋ ಸರಿಯಾಗಿ ತಿಳಿಯುತ್ತಿಲ್ಲ. ಸಮಾನತೆ, ಒಳಗೊಳ್ಳುವಿಕೆ ಎಂಬ ಅರ್ಥದಲ್ಲಿ ಭಾವಿಸಿದ್ದೇನೆ. ಈ ಅರ್ಥದಲ್ಲಿ ದಲಿತ ಚಳವಳಿಗೂ ಪ್ರಾರಂಭದಲ್ಲಿ ಎಲ್ಲಿ ತಾನೆ ಲಿಂಗಸೂಕ್ಷ್ಮತೆ ಇತ್ತು? ಹೆಣ್ಣು ನಿರ್ಣಯಿಸುವ, ನೀತಿ ನಿರೂಪಿಸುವ ಹಂತದಲ್ಲಿ ತಾನೂ ಇಲ್ಲದಿದ್ದರೆ ಅದನ್ನು ಅಪೂರ್ಣ ಎಂದೇ ಭಾವಿಸಬೇಕಾಗುತ್ತದೆ.
• ದಲಿತ ಪುರುಷರ ಬರಹದಲ್ಲಿನ ಸ್ತ್ರೀ ಸಂವೇದನೆ ದಲಿತರ ಬದುಕಿನ ಭಾಗವಾಗಿದೆಯೇ?
ಸ್ತ್ರೀಪರ ಸಂವೇದನೆಯಲ್ಲಿ-ಪರ ಎಂದರೆ ಅದು ವೈಚಾರಿಕತೆ. ಕಾವ್ಯ ಕಥನದಲ್ಲಿ ಸ್ತ್ರೀ ಸಂವೇದನೆಯನ್ನೇ ಸಂವೇದಿಸಬೇಕಾಗುತ್ತದೆ. ಸಂವೇದಿಸದಿದ್ದರೆ ಹೆಣ್ಣು ಬರೆದಿದ್ದರೂ ಅಲ್ಲಿ ಹೆಣ್ಣು ಮೂಡುವುದಿಲ್ಲ. ಬರೆಯುವವರ ಬುದ್ಧಿಭಾವಗಳ ತರಂಗದಲ್ಲಿ ಹೆಣ್ಣೋ, ಗಂಡೋ ಮತ್ತೇನೋ ಅವು ವಾಸಮಾಡಬೇಕಾಗಿರುತ್ತದೆ.
ಎನ್.ಕೆ.ಹನುಮಂತಯ್ಯನವರ ‘ಅವ್ವ ಕಾಯುತ್ತಿದ್ದಾಳೆ’ ಪದ್ಯದಲ್ಲಿ ಒಬ್ಬ ತಾಯಿ ಮೇಣದ ಬತ್ತಿಯಂತೆ ತನ್ನನ್ನೇ ಸುಟ್ಟುಕೊಂಡು ಉರಿಯುತ್ತಿರುವಂತೆ ಕಾಣಿಸುತ್ತದೆ. ಇಲ್ಲಿ ಕವಿ ಹೆಣ್ಣಾಗದೆ ಇದನ್ನು ಮೂಡಿಸಲಾಗದು. ಯಾರೋ ಒಬ್ಬರು, ತನ್ನ ಅವ್ವನ ಬಗ್ಗೆ ಎನ್ಕೆ ಹೀಗೆ ಕೆಟ್ಟದಾಗಿ ಬರೆಯಬಹುದೇ ಎಂದು ಕೇಳಿದರು. ಅದಕ್ಕೆ ನಾನು ‘ಎನ್ಕೆ ತನ್ನ ಅವ್ವನ ಬಗ್ಗೆ ಎಲ್ಲಿ ಬರೆದಿದ್ದಾರೆ? ಅದು ಭಾರತಾಂಬೆಯ ಬಗ್ಗೆ ಬರೆದಿರುವ ಅತ್ಯುತ್ತಮ ಕಾವ್ಯ’ ಎಂದೆ.
• ಇಂದಿನ ಕೊಳ್ಳುಬಾಕ, ಮಾರುಕಟ್ಟೆ ಸಂಸ್ಕೃತಿಯ ಹಾಗೂ ಕೋಮುವಾದಿ ರಾಜಕಾರಣದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಕಲ್ಪನೆಯ ಸಮಾನತೆಯನ್ನು ಸಾಕಾರಗೊಳಿಸುವ ದಾರಿಗಳೇನು?
ವಚನಕಾರರು, ಫುಲೆ ದಂಪತಿಗಳು, ಅಂಬೇಡ್ಕರ್, ಲೋಹಿಯಾರಲ್ಲಿ ಮಹಿಳಾ ತುಡಿತದ ಘನತೆ ಮಿಗಿಲಾಗಿದೆ. ಮಹಿಳಾ ಸಂವೇದನೆಯ ಈ ತಾತ್ವಿಕತೆಯಲ್ಲಿ ಮಹಿಳೆಯರೇ ಸಂಘಟಿತರಾಗಿ ನಾಯಕತ್ವ ಪಡೆಯುವುದು ದಾರಿಯಾಗಬಹುದು.
• ಅಧಿಕಾರ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ದಲಿತ ಸಂಘಟನೆಯು ಮಹಿಳೆಯ ಪಾಲ್ಗೊಳ್ಳುವಿಕೆಗೆ ಎಂತಹ ಕ್ರಮ ಕೈಗೊಳ್ಳಬೇಕು? ಡಿ.ಎಸ್.ಎಸ್. ಹಲವು ಕವಲುಗಳಾಗಿರುವ ಸಂದರ್ಭದಲ್ಲಿ ದಲಿತ ಮಹಿಳಾ ಪ್ರಶ್ನೆ, ಹೋರಾಟ ತಲೆಯೆತ್ತುತ್ತಿರುವುದನ್ನು ಹೊಸ ಭರವಸೆಯಾಗಿ ನೋಡುತ್ತೀರಾ?
ಅಧಿಕಾರ ರಾಜಕಾರಣ ಎಂದರೆ ಒಬ್ಬರ ತಲೆಮೇಲೆ ಕಾಲಿಟ್ಟು ಅಥವಾ ಇನ್ನೊಬ್ಬರ ಕಾಲೆಳೆದು ಅಧಿಕಾರಕ್ಕೆ ಬರುವುದು ಸಾಮಾನ್ಯ. ಈ ಸ್ವಭಾವ ಇರುವ ರಾಜಕಾರಣದಲ್ಲಿ ನೀವು ಹೇಗೆ ತಾನೆ ಮಹಿಳಾ ಪಾಲ್ಗೊಳ್ಳುವಿಕೆ, ಮಹಿಳಾ ನಿಜನಾಯಕತ್ವ ನಿರೀಕ್ಷಿಸುತ್ತೀರಿ? ದಲಿತ ಸಂಘಟನೆ ಹಲವು ಕವಲುಗಳಾಗಿವೆ. ಇದರಲ್ಲಿ ಒಂದು ಕವಲಿನಲ್ಲಾದರೂ ಮಹಿಳಾ ಸಂಚಾಲಕತ್ವ ಇಲ್ಲ. ಜೊತೆಗೆ ‘ದಲಿತ ಮಹಿಳಾ ಪ್ರಶ್ನೆ, ಆ ಹೋರಾಟ ತಲೆ ಎತ್ತುತ್ತಿರುವುದು’ ಅದೆಲ್ಲಿದೆ? ಕಾಣುತ್ತಿಲ್ಲವಲ್ಲ? ದಲಿತ ಮಹಿಳಾ ಹೋರಾಟ ತಲೆ ಎತ್ತಿದರೆ ಇಡೀ ಮಹಿಳಾ ಸಮುದಾಯವನ್ನು ಒಳಗೊಂಡು ಮಹಿಳಾ ನಾಯಕತ್ವ ಪಡೆದರೆ ವಚನಕಾರರು, ಫುಲೆ ದಂಪತಿಗಳು, ಅಂಬೇಡ್ಕರ್, ಲೋಹಿಯಾ ತಾತ್ವಿಕತೆಯಲ್ಲಿ ಸಮಾನತೆ, ಘನತೆಗಾಗಿ ನಡೆದರೆ ಅದನ್ನು ನಾನು, ನನ್ನಂಥ ಪುರುಷರು ಹಿಂಬಾಲಿಸುವ ನಂಬಿಕೆ ನನಗಿದೆ.