‘ಮಹಾ’ ಎಂಬ ಪದದ ಚೋದ್ಯ!-ದೇವನೂರ ಮಹಾದೇವ

[ಮಹಾ’ ಎಂಬ ಒಂದೇ ಪದವಿಟ್ಟು ತೂಗಿದರೂ ಸಮಾಜದಲ್ಲಿರುವ ಶ್ರೇಣಿಗೆ ತಕ್ಕಂತೆ ತಕ್ಕಡಿ ಏಳುತ್ತದೆ, ಬೀಳುತ್ತದೆ, ತೂಗುತ್ತದೆ! ತಳಕ್ಕೆ ಹೋಗುತ್ತಾ ಕಳೆದುಕೊಳ್ಳುತ್ತದೆ. ಮೇಲಕ್ಕೆ ಹೋಗುತ್ತಾ ಪಡೆದುಕೊಳ್ಳುತ್ತದೆ. ಇದು ಭಾರತದ ಆಂತರ್ಯವನ್ನು ಅರ್ಥ ಮಾಡಿಕೊಳ್ಳಲು ‘ಮಹಾ’ ಎಂಬ ಈ ಪದ- ಈ ಅನ್ನದ ಅಗಳೂ ಕಣ್ಸನ್ನೆ ಮಾಡುತ್ತದೆಯಲ್ಲಾ ಎಂಬ ಸಂಕಟಾಶ್ಚರ್ಯ ದೇವನೂರ ಮಹಾದೇವ ಅವರದು.]

 

ಒಂದು ದಿನ ಸುಮ್ಮನೆ ಒಂದು ಪದದೊಡನೆ ಆಟವಾಡಿದೆ. ಒಂದೇ ಪದವನ್ನು ಭಾರತದ ಬೇರೆ ಬೇರೆ ಸಾಮಾಜಿಕ ಸ್ತರಗಳ ಜೊತೆ ಇಟ್ಟು ಏನರ್ಥ ಹುಟ್ಟಿಸುತ್ತದೆ ಎಂದು ನೋಡಿದೆ. ನೋಡಿದರೆ, ಅದು ಭಾರತದ ಗರ್ಭದೊಳಗಿರುವ ನರಕದರ್ಶನ ಮಾಡಿಸಿಬಿಟ್ಟಿತು.

ಉತ್ತರಭಾರತದಿಂದ ‘ಮಹಾದಲಿತ’ ಎಂಬ ಪದ ದಕ್ಷಿಣಕ್ಕೆ ರಫ್ತಾಗಿದೆ. ‘ಮಹಾದಲಿತ’ ಎಂದರೆ ದಲಿತರೊಳಗೇನೆ ಹೆಚ್ಚು ದಲಿತ, ಹೆಚ್ಚು ದಮನಿತ ಎಂಬರ್ಥದಲ್ಲಿ ಬಳಕೆಯಾಗಿದೆ. ಇದೇ ಜಾಡನ್ನು ಹಿಡಿದು ಮುಂದುವರೆದರೆ ‘ಮಹಾಹಿಂದುಳಿದ’ ಎಂದರೆ ಹಿಂದುಳಿದವರಲ್ಲೇ ಅತಿ ಹಿಂದುಳಿದವರು ಎಂಬರ್ಥ ಬಿಟ್ಟುಕೊಡುತ್ತದೆ. ಮತ್ತೆ ‘ಮಹಾಹೆಣ್ಣು’ ಎಂದರೆ ಘಾಟಿ ಹೆಣ್ಣು ಅಂತಾಗಿಬಿಡುತ್ತದೆ. ಅದೇ ‘ಮಹಾಮಹಿಳೆ’ ಎಂದರೆ? ಸಾಧನೆ ಮಾಡಿದ ಮಹಿಳೆ ಎಂದಾಗುತ್ತದೆ. ‘ಮಹಾತಾಯಿ’ ಎಂದರೆ- ಹೆಚ್ಚು ಮಕ್ಕಳನ್ನು ಹೆತ್ತವಳು (ಹೆತ್ತಳಾ ಮಹಾತಾಯಿ) ಎಂಬರ್ಥ ಚಾಲ್ತಿಯಲ್ಲಿದೆ! ಮಹಾಸತಿ ಎಂದರೆ- ಗಂಡ ಸತ್ತಾಗ ಪತಿ ಜೊತೆಗೆ ಚಿತೆಗೆ ಹಾರಿದವಳು ಎಂದರ್ಥವಿದೆ. ಯಾಕೋ ಹೆಣ್ಣು ಭಾರತದಲ್ಲಿ ನಾನಾರ್ಥಕ್ಕೆ ಸಿಕ್ಕಿ ಗೋಜಲಾಗಿದ್ದಾಳೆ. ನೋಡಿ, ಅದೇ ಪುರುಷ, ‘ಮಹಾಪುರುಷ’ ಎಂದಾದರೆ- ಪುರುಷರಲ್ಲೇ ಅತ್ಯಂತ ಶ್ರೇಷ್ಠ ಎಂಬರ್ಥ ಪಡೆದುಕೊಂಡುಬಿಡುತ್ತಾನೆ!

ಈ ಸಂದಿಗ್ಧ ಪರಿಸ್ಥಿತಿಯಲ್ಲಿ, ಸದ್ಯಕ್ಕೆ ಮಹಿಳೆಯನ್ನು ಕೈಬಿಟ್ಟು ಮುಂದಕ್ಕೆ ಹೋದರೆ- ‘ಮಹಾವೈಶ್ಯ’ ಎಂದರೆ ವೈಶ್ಯರಲ್ಲೇ ಅತ್ಯಂತ ಶ್ರೀಮಂತ ಎಂಬರ್ಥ ಬಂದು ಕೂಡಿಕೊಳ್ಳುತ್ತದೆ. ಅದೇ ‘ಮಹಾಕ್ಷತ್ರಿಯ’ ಎಂದರೂ ಕ್ಷತ್ರಿಯರಲ್ಲೇ ಅತ್ಯಂತ ಬಲಿಷ್ಠ ಎಂಬರ್ಥ ಕೂಡಿಕೊಳ್ಳುತ್ತದೆ. ಮುಂದೆ ‘ಮಹಾಬ್ರಾಹ್ಮಣ’ ಎಂದರೆ? ಬ್ರಾಹ್ಮಣರಲ್ಲೇ ಅತ್ಯಂತ ಶ್ರೇಷ್ಠ ಎಂಬರ್ಥ ಕೂಡಿಕೊಳ್ಳುತ್ತದೆ. ಇದೇನು ವೈಚಿತ್ರ್ಯ? ಒಂದೇ ಪದವಿಟ್ಟು ತೂಗಿದರೂ ಸಮಾಜದಲ್ಲಿರುವ ಶ್ರೇಣಿಗೆ ತಕ್ಕಂತೆ ತಕ್ಕಡಿ ಏಳುತ್ತದೆ, ಬೀಳುತ್ತದೆ, ತೂಗುತ್ತದೆ! ತಳಕ್ಕೆ ಹೋಗುತ್ತಾ ಕಳೆದುಕೊಳ್ಳುತ್ತದೆ. ಮೇಲಕ್ಕೆ ಹೋಗುತ್ತಾ ಪಡೆದುಕೊಳ್ಳುತ್ತದೆ. ಇದು, ಭಾರತದ ಆಂತರ್ಯವನ್ನು ಅರ್ಥ ಮಾಡಿಕೊಳ್ಳಲು ‘ಮಹಾ’ ಎಂಬ ಈ ಪದ- ಈ ಅನ್ನದ ಅಗಳೂ ಕಣ್ಸನ್ನೆ ಮಾಡುತ್ತದೆ.