“ಮಹಾಸಂಗ್ರಾಮಿ” ಎಸ್.ಆರ್.ಹಿರೇಮಠ ಅವರ ರಚನಾತ್ಮಕ ಪ್ರಯೋಗಗಳ ಬಾಳ್ಕಥನ ಕುರಿತು… ದೇವನೂರ ಮಹಾದೇವ
[ಲೇಖಕಿ ರೂಪ ಹಾಸನ ರಚಿತ “ಮಹಾಸಂಗ್ರಾಮಿ” ಎಸ್.ಆರ್.ಹಿರೇಮಠ ಅವರ ರಚನಾತ್ಮಕ ಪ್ರಯೋಗಗಳ ಬಾಳ್ಕಥನ ಕುರಿತು… ದೇವನೂರ ಮಹಾದೇವ ಅವರ ಕಿರು ಟಿಪ್ಪಣಿ…]
‘ಸಮಾಜದ ಋಣ ತೀರಿಸಿದರೆ ಉಳಿದೆಲ್ಲಾ ಋಣಗಳನ್ನೂ ತೀರಿಸಿದಂತಾಗುತ್ತದೆ’- ಡಾ.ಶಿವರಾಮ ಕಾರಂತರ ಈ ನುಡಿಗಳು, ಬೀಜರೂಪದಲ್ಲಿ- ಬೆಳವಣಿಕೆ ಎಂಬ ಗ್ರಾಮದಲ್ಲಿ ಹುಟ್ಟಿದ ಎಸ್.ಆರ್.ಹಿರೇಮಠ ಎಂಬ ಎಳೆಯ ಬಾಲಕನ ಒಡಲು ಸೇರಿ, ಆತ ಬೆಳೆದಂತೆ ಆ ನುಡಿಗಳೂ ಬೆಳೆಯುತ್ತಾ ಬೃಹತ್ ವೃಕ್ಷವಾಗುವ ಪಯಣವನ್ನು ಮಹಾ ಸಂಗ್ರಾಮಿ ಬಣ್ಣಿಸುತ್ತದೆ.
ಮುಂದೆ, ಹಿರೇಮಠರು ಹೆಚ್ಚಿನ ಓದಿಗಾಗಿ ಅಮೇರಿಕಾಗೆ ಬಂದಾಗ, ಅಲ್ಲಿಂದ ಅವರ ಸಮಾಜಮುಖಿ ಪಯಣ ಒಂದೊಂದೇ ಹೆಜ್ಜೆ ಇಡತೊಡಗುತ್ತದೆ. ಜ್ಞಾನದಾಹಕ್ಕೆ ಸಿಲುಕಿದಂತೆ ಅಧ್ಯಯನ ಮಾಡುತ್ತಾರೆ; ರಕ್ತಗತ ಮಾಡಿಕೊಳ್ಳುತ್ತಾರೆ. ಅವರ ಅರಿವು ಹೆಚ್ಚಾದಂತೆ, ಅವರು ಒಡನಾಡಿದ ಸಂಘಟನೆಗಳೂ ವಿಶಾಲವಾಗಿ ರೂಪಾಂತರಗೊಳ್ಳತೊಡಗುತ್ತಾ, ಭಾರತದೊಡನೆ ಬಾಂಧವ್ಯಕ್ಕಾಗಿ ಅಮೇರಿಕಾದಲ್ಲಿ ‘ಇಂಡಿಯಾ ಡೆವಲಪ್ಮೆಂಟ್ ಸರ್ವಿಸ್’[ಐಡಿಎಸ್] ಸ್ಥಾಪನೆಯಾಗುವಾಗ, ಒಂದು ಸ್ಥೂಲ ಸಮಾಜಮುಖಿ ನೋಟ ಅವರಿಗೆ ದಕ್ಕುತ್ತದೆ. ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಅದನ್ನು ಪ್ರತಿಭಟಿಸಿ, ಅಮೇರಿಕಾದಲ್ಲಿ ‘ಇಂಡಿಯನ್ಸ್ ಫಾರ್ ಡೆಮಾಕ್ರೆಸಿ’[ಐಎಫ್ಡಿ] ಕಾರ್ಯಚಟುವಟಿಕೆ ಆರಂಭವಾದಾಗ, ಹಿರೇಮಠರು ಮುಂಚೂಣಿ ನಾಯಕರಾಗಿ ಹೊರಹೊಮ್ಮುತ್ತಾರೆ. ಜೊತೆಗೆ ಶೂಮಾಕರ್ ಅವರ ‘ಸ್ಮಾಲ್ ಈಸ್ ಬ್ಯೂಟಿಫುಲ್’, ಅಂಬೇಡ್ಕರ್ ಅವರ ‘ಜಾತಿವಿನಾಶ’, ಸಂವಿಧಾನದ ಪ್ರಾಮುಖ್ಯತೆ ಹಾಗೂ ಗಾಂಧೀಜಿಯ ನಡಿಗೆಯ ಹೆಜ್ಜೆಗುರುತುಗಳು… ಹಿರೇಮಠರ ವ್ಯಕ್ತಿತ್ವದ ಕಣಕಣಗಳನ್ನೂ ಆವರಿಸಿಕೊಂಡು ಸೈದ್ಧಾಂತಿಕವಾಗಿ ನಡೆಸುತ್ತಿರುತ್ತದೆ. ಹಾಗಾಗೇ ಅವರ ನೋಟ, ಹೆಜ್ಜೆಗಳು- ಕಟ್ಟ ಕಡೆಯ ಜೀವಗಳ ಕಡೆಗೆ.
ಈ ನೋಟದೊಡನೆ, ಹಿರೇಮಠರು ಹಾಗೂ ಅವರ ಪತ್ನಿ ಶ್ಯಾಮಲಾ ಭಾರತಕ್ಕೆ ಬಂದು ಸಹಮನಸ್ಕರೊಡಗೂಡಿ ‘ಇಂಡಿಯಾ ಡೆವಲಪ್ಮೆಂಟ್ ಸರ್ವಿಸ್’[ಐಡಿಎಸ್] ಸ್ಥಾಪಿಸಿ ನಡೆಸಿದ ರಚನಾತ್ಮಕ ಕಾರ್ಯ ಚಟುವಟಿಕೆಗಳು, ಬರಡು ಭೂಮಿಯನ್ನೂ ಬರಡು ಜನರನ್ನೂ ಚಿಗುರಿಸುತ್ತದೆ. ಸಮಾಜ ಪರಿವರ್ತನಾ ಸಮುದಾಯ ಸ್ಥಾಪಿಸಿ, ಪ್ರಕೃತಿ-ಪರಿಸರ ರಕ್ಷಿಸಲು ಬಂಡವಾಳಶಾಹಿಗಳ ಎದುರು ನಡೆಸಿದ ಐತಿಹಾಸಿಕ ದೀರ್ಘ ಹೋರಾಟ, ಹಾಗೆ ಗಣಿಗಾರಿಕೆಯ ಭೂಧ್ವಂಸವನ್ನು ತಹಬಂದಿಗೆ ತರಲು ಬಲಾಢ್ಯರ ಎದುರಿಸಲು ಹುಟ್ಟಿಕೊಂಡ ಜನಸಂಗ್ರಾಮ ಪರಿಷತ್ನ ವೀರೋಚಿತ ಹೋರಾಟಗಳು ತಮ್ಮ ಹೆಜ್ಜೆ ಗುರುತನ್ನು ಆಳವಾಗಿ ಉಳಿಸಿವೆ. ಈ ಹೆಜ್ಜೆಗುರುತುಗಳ ಜಾಡುಹಿಡಿದು, ನೀರ ಹನಿಯೊಂದು ಹರಳುಗಟ್ಟಿ ಮುತ್ತಾಗುವ ಪರಿಯಲ್ಲಿ ರೂಪ ಹಾಸನ ಅವರು ರಚಿಸಿರುವ ಮಹಾ ಸಂಗ್ರಾಮಿ ಕೃತಿ -ಸಮಾಜವನ್ನು ಮುನ್ನಡೆಗೆ ಕೊಂಡೊಯ್ಯಬೇಕೆನ್ನುವ ಪೀಳಿಗೆಗಳಿಗೆ ಕೈದೀವಿಗೆಯಂತಿದೆ.
-ದೇವನೂರ ಮಹಾದೇವ