ಮಹಾನ್ ರಾಷ್ಟ್ರವಾಗುವ ಕನಸು ಹೊತ್ತು ಹೊರಟಿದ್ದೆಲ್ಲಿಗೆ?-ಆಕಾರ್ ಪಟೇಲ್
ಆರ್ಥಿಕವಾಗಿ ಭಾರತದ ಪಾಲಿನ ಸುವರ್ಣ ಯುಗವೊಂದು ಇತ್ತು ಎಂದು ನಮ್ಮಲ್ಲಿ ಮತ್ತೆ ಮತ್ತೆ ಹೇಳಲಾಗುತ್ತದೆ. ಆ ಯುಗದಲ್ಲಿ ವಿಶ್ವದ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ದೊಡ್ಡ ಪಾಲು ಭಾರತ ಉಪಖಂಡದ್ದೇ ಆಗಿತ್ತು ಎನ್ನಲಾಗುತ್ತಿದೆ. ವಿಶ್ವದ ಇಂದಿನ ಜಿಡಿಪಿಯಲ್ಲಿ ಭಾರತದ ಪಾಲು ಶೇಕಡ 3ರಷ್ಟಿದ್ದರೆ, ಆ ಸುವರ್ಣ ಕಾಲಘಟ್ಟದಲ್ಲಿ ಉಪಖಂಡದ ಪಾಲು ಶೇಕಡ 20 ಅಥವಾ 25ರಷ್ಟು ಆಗಿತ್ತು ಎಂಬ ಹೇಳಿಕೆಗಳಿವೆ. ಈ ಹಂತವನ್ನು ನಾವು ಮತ್ತೆ ತಲುಪಬಲ್ಲೆವೇ? ನಮ್ಮಿಂದ ಇದು ಸಾಧ್ಯ ಎಂದಾದರೆ, ನಾವು ಮಾಡಬೇಕಿರುವುದು ಏನು?
ಕಾಲಾನುಕ್ರಮದಲ್ಲಿ ‘ಮಹಾನ್’ ಆದ ರಾಷ್ಟ್ರಗಳು ಯಾವವು ಎಂಬುದನ್ನು ಒಮ್ಮೆ ನೋಡೋಣ. ಭಾರತ ಮಾಡಬೇಕಿರುವುದು ಏನು ಎಂಬುದು ಆಗ ಅರ್ಥವಾಗುತ್ತದೆ. 2,500 ವರ್ಷಗಳ ಹಿಂದೆ ವಿಶ್ವದ ಬೃಹತ್ ಶಕ್ತಿ ಪರ್ಷಿಯಾ ಆಗಿತ್ತು.ವಿಶ್ವದಾದ್ಯಂತ ತನ್ನ ಪ್ರಭಾವ ಬೀರಲು ಪ್ರಯತ್ನಿಸುವ ತಾಕತ್ತು ಅದಕ್ಕೆ ಇತ್ತು. ವಿಶ್ವದ ಬಲಾಢ್ಯ ರಾಷ್ಟ್ರವೆಂದರೆ ಹಾಗಿರಬೇಕು. ಪರ್ಷಿಯಾದ ಪಾರ್ಸಿ ರಾಜರು, ಆಫ್ಘಾನಿಸ್ತಾನದ ಕಂದಹಾರ್ನಿಂದ ಟರ್ಕಿವರೆಗೆ ವ್ಯಾಪಿಸಿದ್ದ ಸಾಮ್ರಾಜ್ಯವನ್ನು ಆಳುತ್ತಿದ್ದರು.
ಕ್ರಿಸ್ತ ಪೂರ್ವ 479ರಲ್ಲಿ ನಡೆದ ಪ್ಲಟೀಯಾ ಕದನದಲ್ಲಿ ಪಾರ್ಸಿ ರಾಜ ಜೆಕ್ಸಸ್, ಗ್ರೀಸ್ ಕಡೆ ನುಗ್ಗಿಸಿದ ಸೇನೆಯಲ್ಲಿ ಭಾರತದ ಸಿಪಾಯಿಗಳೂ ಇದ್ದರು ಎಂಬುದನ್ನು ಇತಿಹಾಸಕಾರ ಹೆರಾಡೊಟಸ್ ದಾಖಲಿಸಿದ್ದಾನೆ. ಈ ಸಿಪಾಯಿಗಳು ಪಂಜಾಬಿನಿಂದ ಹೋಗಿರುವ ಸಾಧ್ಯತೆ ಇದೆ.
ಗ್ರೀಕರು ಹಿಂದೆ ತಮ್ಮ ಸಾಹಿತ್ಯದಲ್ಲಿ ಪರ್ಷಿಯಾದ ರಾಜರನ್ನು ‘ಮಹಾನ್’ ಎಂದೇ ಸಂಬೋಧಿಸಿದ್ದಾರೆ. ವಿಶ್ವ ಕಂಡ ಎರಡನೆಯ ಮಹಾನ್ ಶಕ್ತಿ ಅಲೆಕ್ಸಾಂಡರ್. ಇವನ ಸಾಧನೆಗಳನ್ನು ಪರಿಗಣಿಸಿ ‘ಮಹಾನ್’ ಎಂದು ಕರೆದಿದ್ದಲ್ಲ. ಡೇರಿಯಸ್ನನ್ನು ಸೋಲಿಸಿದ ಅಲೆಕ್ಸಾಂಡರ್, ಅವನಿಂದ ‘ಮಹಾನ್’ ಎಂಬ ಪಟ್ಟ ಕಿತ್ತುಕೊಂಡ.ಮೂರನೆಯ ಮಹಾನ್ ಶಕ್ತಿ ರೋಮನ್ ಸಾಮ್ರಾಜ್ಯ. ಮೊದಲು ಇಡೀ ಇಟಲಿಯನ್ನು ವ್ಯಾಪಿಸಿದ ರೋಮನ್ ಸಾಮ್ರಾಜ್ಯ, ನಂತರ ಫ್ರಾನ್ಸ್ ಹಾಗೂ ಸ್ಪೇನ್ ದೇಶಗಳನ್ನೂ ಒಳಗೊಂಡಿತು. ಇದಾದ ನಂತರದ ಕಾಲಘಟ್ಟದಲ್ಲಿ ಯುರೋಪಿನ ಬಹುಪಾಲನ್ನು ಆಳಿತು.
ಪೂರ್ವದ ಪ್ಯಾಲಿಸ್ಟೀನ್ವರೆಗೂ ಈ ಸಾಮ್ರಾಜ್ಯ ವ್ಯಾಪಿಸಿತ್ತು. ಜೂಲಿಯಸ್ ಸೀಸರ್ ರೋಮನ್ ಸೈನ್ಯವನ್ನು ಬ್ರಿಟನ್ವರೆಗೂ ಕೊಂಡೊಯ್ದ. ಆದರೆ ಆ ಸಂದರ್ಭದಲ್ಲಿ ರೋಮನ್ ಸಾಮ್ರಾಜ್ಯದ ನೌಕಾದಳ ಶಕ್ತಿಯುತವಾಗಿರಲಿಲ್ಲ. ಜಗತ್ತಿನ ನಾಲ್ಕನೆಯ ಅತಿದೊಡ್ಡ ಶಕ್ತಿಯಾಗಿದ್ದ ಮುಸ್ಲಿಂ ಸಾಮ್ರಾಜ್ಯ, ಹಲವು ದೇಶಗಳನ್ನು ಒಳಗೊಂಡಿತ್ತು. ಅರಬರು ಉತ್ತರ ಆಫ್ರಿಕಾವನ್ನು ವಶಪಡಿಸಿಕೊಂಡರು (ಈ ಕಾರಣಕ್ಕೇ ಈಜಿಪ್ಟ್ ಜನ ಅರೇಬಿಕ್ ಮಾತನಾಡುತ್ತಾರೆ). ಸ್ಪೇನಿನ ಕೆಲವು ಭೂಪ್ರದೇಶಗಳನ್ನೂ ಗೆದ್ದುಕೊಂಡರು. ಆದರೆ ನಿಜ ಅರ್ಥದಲ್ಲಿ ಮುಸ್ಲಿಂ ಸಾಮ್ರಾಜ್ಯಗಳು ಶಕ್ತಿಯುತವಾಗಿ ನೆಲೆನಿಂತಿದ್ದು ಟರ್ಕಿ, ಪರ್ಷಿಯಾ, ಮಧ್ಯ ಏಷ್ಯಾ ಮತ್ತು ಆಫ್ಘಾನಿಸ್ತಾನದಲ್ಲಿ.
ಅಂದಿನ ಮುಸ್ಲಿಂ ರಾಷ್ಟ್ರಗಳಲ್ಲೂ ನೌಕಾಪಡೆ ಶಕ್ತಿಯುತವಾಗಿರಲಿಲ್ಲ. ಉತ್ತರ ಭಾರತದ ಅಷ್ಟೂ ಪ್ರದೇಶಗಳು ಔರಂಗಜೇಬನ ಆಳ್ವಿಕೆಗೆ ಒಳಪಟ್ಟಿದ್ದ ಕಾಲದಲ್ಲೇ ಯುರೋಪಿನ ಬಲಾಢ್ಯ ರಾಷ್ಟ್ರಗಳ ಪ್ರಭಾವ ಜೋರಾಗಿ ಇತ್ತು. ಇದಕ್ಕೆ ಕಾರಣ, ಮುಸ್ಲಿಂ ಪ್ರತಿಷ್ಠಿತರು ಹಜ್ ಯಾತ್ರೆಗೆ ಮೆಕ್ಕಾಗೆ ಸಮುದ್ರ ಮಾರ್ಗದ ಮೂಲಕ ಹೋಗಬೇಕಿತ್ತು. ಸಮುದ್ರ ಮಾರ್ಗದ ಮೇಲೆ ಯುರೋಪಿಯನ್ನರಿಗೆ ನಿಯಂತ್ರಣ ಇತ್ತು.ವಸಾಹತು ಶಕ್ತಿಗಳಾದ ಸ್ಪೇನ್, ಪೋರ್ಚುಗಲ್, ಇಂಗ್ಲೆಂಡ್, ಫ್ರಾನ್ಸ್ ಮತ್ತು ಡಚ್ಚರು ಹದಿನೈದನೆಯ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದರು. ಈ ಎಲ್ಲ ದೇಶಗಳಲ್ಲಿ ಸಾಮಾನ್ಯವಾಗಿದ್ದ ಎಳೆಯೊಂದು ಇತ್ತು.
ಅಬ್ಬರ ಹೆಚ್ಚಿರುವ ಅಟ್ಲಾಂಟಿಕ್ ಸಮುದ್ರಕ್ಕೆ ಹೊಂದಿಕೊಂಡಿವೆ ಈ ದೇಶಗಳು. ಈ ಸಮುದ್ರ ದಾಟಿಹೋಗಲು ಶಕ್ತಿಯುತವಾದ, ದೊಡ್ಡ ಗಾತ್ರದ ಹಡಗುಗಳು ಬೇಕು. ಆ ಹಡಗುಗಳಿಗೆ ಉತ್ತಮ ಗುಣಮಟ್ಟದ ಹಾಯಿಯೂ ಇರಬೇಕು. ಅಟ್ಲಾಂಟಿಕ್ ಸಮುದ್ರದ ತಟದಲ್ಲಿನ ದೇಶಗಳು ಮಾತ್ರ ಇವೆಲ್ಲವನ್ನೂ ಅಭಿವೃದ್ಧಿಪಡಿಸಿದವು. ಹಡಗುಗಳು ದೊಡ್ಡದಾಗಿದ್ದ ಕಾರಣ, ಅದರಲ್ಲಿ ದೊಡ್ಡ ಗಾತ್ರದ ಫಿರಂಗಿಗಳನ್ನು, ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಲು ಸಾಧ್ಯವಾಯಿತು. ಈ ಕಾರಣದಿಂದಾಗಿ, ಅಟ್ಲಾಂಟಿಕ್ ತೀರದ ಈ ದೇಶಗಳು ದೂರ ದೂರ ಸಾಗಿ ಅಮೆರಿಕದಂತಹ ಖಂಡಗಳನ್ನೂ ಗೆದ್ದುಕೊಂಡವು, ವಸಾಹತು ಶಕ್ತಿಗಳಾದವು. ಆದರೆ ಜರ್ಮನಿ, ರಷ್ಯಾ, ಇಟಲಿ ಅಥವಾ ಯುರೋಪಿನ ಇತರ ಯಾವುದೇ ಪ್ರಮುಖ ದೇಶಕ್ಕೆ ಹೀಗೆ ವಸಾಹತು ಶಕ್ತಿಯಾಗಿ ಬೆಳೆಯಲು ಸಾಧ್ಯವಾಗಲಿಲ್ಲ.
ಇದಕ್ಕಿಂತ ಮೊದಲು ಯಾವುದಾದರೂ ಸಂದರ್ಭದಲ್ಲಿ ಭಾರತ ಮಹಾನ್ ಶಕ್ತಿ ಆಗಿತ್ತಾ? ಒಂದು ಕಾಲದಲ್ಲಿ ವಿಶ್ವದ ಒಟ್ಟು ಜಿಡಿಪಿಯ ಐದನೆಯ ಒಂದು ಪಾಲನ್ನು ಭಾರತ ಉಪಖಂಡ ಹೊಂದಿತ್ತು. ಏಕೆಂದರೆ, ಆಗ ಜಗತ್ತಿನ ಒಟ್ಟು ಜನಸಂಖ್ಯೆಯ ಐದನೆಯ ಒಂದು ಭಾಗ ಉಪಖಂಡದಲ್ಲೇ ಇತ್ತು.ಆ ಕಾಲದಲ್ಲಿ ಬಹುತೇಕ ಜನ ಕೃಷಿಕರು, ರೈತರು ಆಗಿದ್ದರು. ಮಣ್ಣಿನ ಮಡಿಕೆ ಮಾಡುವುದು, ಬಟ್ಟೆ ಸಿದ್ಧಪಡಿಸುವುದು ಮುಂತಾದ ಸಣ್ಣ ಮಟ್ಟದ ತಯಾರಿಕಾ ಚಟುವಟಿಕೆಗಳು ಆಗ ಇದ್ದವಾದರೂ, ಆರ್ಥಿಕತೆ ನಿಂತಿದ್ದು ಮನುಷ್ಯನ ದೈಹಿಕ ಶ್ರಮದ ಮೇಲೆ.
ಆದರೆ ಹದಿನೈದನೆಯ ಶತಮಾನದ ನಂತರ, ಅದರಲ್ಲೂ ಮುಖ್ಯವಾಗಿ ನ್ಯೂಟನ್, ಹೂಕ್, ಬಾಯಲ್ ನೇತೃತ್ವದಲ್ಲಿ ಯುರೋಪಿನಲ್ಲಿ ನಡೆದ ವೈಜ್ಞಾನಿಕ ಕ್ರಾಂತಿಯ ನಂತರ ನಾವು ಹಿಂದೆ ಬಿದ್ದೆವು. ಯುರೋಪಿನ ದೇಶಗಳು ಆರ್ಥಿಕವಾಗಿ ನಮಗಿಂತ ಮುಂದೆ ಸಾಗಿದವು. ನಾವು ಹಿಂದೆ ಎಲ್ಲಿದ್ದೆವೋ ಅಲ್ಲಿಯೇ ಉಳಿದೆವು. ಈ ಕಾಲಘಟ್ಟದ ನಂತರ ಆರ್ಥಿಕವಾಗಿ ಹೆಚ್ಚು ಶಕ್ತಿ ಹೊಂದಿರುವ ದೇಶಗಳು ವಿಶ್ವದಲ್ಲಿ ಹೆಚ್ಚು ಪ್ರಭಾವಿಯೂ ಆಗಿವೆ. ಈಗ ಅಮೆರಿಕ ಅಂಥದ್ದೊಂದು ಸ್ಥಾನ ಹೊಂದಿದೆ. ಇಂದಿನ ಕಾಲದಲ್ಲಿ ಅಣ್ವಸ್ತ್ರಗಳನ್ನು ಹೊಂದಿರುವುದರಿಂದ, ದೊಡ್ಡ ಸೈನ್ಯವನ್ನು ಕಟ್ಟುವುದರಿಂದ ದೇಶಗಳು ಮಹಾನ್ ಆಗುವುದಿಲ್ಲ. ಹಾಗೆ ಆಗುವುದಿದ್ದರೆ ಪಾಕಿಸ್ತಾನ, ಉತ್ತರ ಕೊರಿಯಾ ಕೂಡ ಜಗತ್ತಿನ ಮಹಾನ್ ಶಕ್ತಿಗಳೇ ಆಗಿರುತ್ತಿದ್ದವು.
ಆಧುನಿಕ ಕಾಲದಲ್ಲಿ ಆರೋಗ್ಯಕರ ಹಾಗೂ ಸುಶಿಕ್ಷಿತ ಪ್ರಜೆಗಳನ್ನು ಹೊಂದಿರುವ, ಉತ್ತಮ ಆಡಳಿತ ರೂಪಿಸಿಕೊಂಡ ದೇಶ ಜಾಗತಿಕ ಶಕ್ತಿಯಾಗಿ ರೂಪುಗೊಳ್ಳಲು ಸಾಧ್ಯ. ಜಪಾನ್, ದಕ್ಷಿಣ ಕೊರಿಯಾ ಮತ್ತು ತೀರಾ ಈಚೆಗೆ ಚೀನಾ ಇಂಥದ್ದೊಂದು ಸ್ಥಿತಿ ತಲುಪಿವೆ. ಈ ಕ್ಷೇತ್ರಗಳ ಬಗ್ಗೆ ಭಾರತ ಗಮನ ಕೇಂದ್ರೀಕರಿಸಿ ಕೆಲಸ ಮಾಡಿಲ್ಲ ಎಂಬುದು ನನ್ನ ಅನಿಸಿಕೆ. ನಮ್ಮಲ್ಲಿನ ಆಡಳಿತ ಕೂಡ ಹೆಚ್ಚಿನ ಸಂದರ್ಭಗಳಲ್ಲಿ ಪರಿಣಾಮಕಾರಿ ಆಗಿಲ್ಲ. 2016ರಲ್ಲಿ ಕೂಡ ನಮ್ಮ ದೇಶ ರಾಷ್ಟ್ರ ವಿರೋಧಿ ಹೇಳಿಕೆಗಳಿಂದ, ನೆರೆ ದೇಶಗಳ ಜೊತೆಗಿನ ತಿಕ್ಕಾಟದಿಂದ, ಸಂಸ್ಕೃತಿ ಹಾಗೂ ಅಸ್ಮಿತೆಯ ಹೆಸರಿನಲ್ಲಿ ಗಲಿಬಿಲಿಗೆ ಒಳಗಾಗಿದೆ. ಆರೋಗ್ಯ ಹಾಗೂ ಶಿಕ್ಷಣದ ಬಗ್ಗೆ ನೀಡಬೇಕಿದ್ದ ಖಚಿತ, ಏಕರೂಪಿ ಗಮನ ಇಲ್ಲವಾಗಿದೆ.
ಕಾನೂನುಗಳ ಸಮರ್ಪಕ ಅನುಷ್ಠಾನ ಹಾಗೂ ನ್ಯಾಯದಾನ ಕೂಡ ಸರಿಯಾಗಿ ಆಗುತ್ತಿಲ್ಲ. ಹಿಂಸೆ ಇಲ್ಲದಂತೆ ಮಾಡುವ ಪ್ರಾಥಮಿಕ ಕೆಲಸವನ್ನೂ ದೇಶದ ಪ್ರಭುತ್ವಕ್ಕೆ ಮಾಡಲು ಆಗುತ್ತಿಲ್ಲ. ವ್ಯಕ್ತಿಯನ್ನು ಬಡಿದು ಸಾಯಿಸುವುದು, ಸಾಮೂಹಿಕ ಹಿಂಸಾಚಾರಗಳು ಎಲ್ಲ ಸರ್ಕಾರಗಳ ಅವಧಿಯಲ್ಲೂ ನಡೆದುಬಂದಿವೆ. ಈ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುವವರೆಗೆ, ಮಹಾನ್ ರಾಷ್ಟ್ರ ಆಗುವ ಕಡೆಗಿನ ನಮ್ಮ ನಡಿಗೆ ನಿಧಾನವಾಗಿಯೇ ಇರುತ್ತದೆ.
(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)