ಮಹಾದೇವ ಅವರ ಮೆಚ್ಚಿನ ಒಂದು ಜಾನಪದ ಗೀತೆ
ಶಿವನೇ ನಿನ್ನಾಟ ಬಲ್ಲವರ್ಯಾರ್ಯಾರೋ
ಗುರುವೇ ನಿನ್ನಾಟ ಬಲ್ಲವರ್ಯಾರ್ಯಾರೋ
ಮಡಿವಾಳ್ ಮಾಚಯ್ಯನ ಮನೆಯ
ಮಡಿವಾಳ್ ಮಾಚಯ್ಯನ ಮನೆಯ
ಮುಡಿಯ ಶೃಂಗಾರವ ನೋಡಿ ಶಿವನು ಕೈಲಾಸದಲ್ಲಿ
ಥೈಥೈಥೈಥೋ ಎಂದು ಕುಣಿದು //ಶಿವನೇ//
ಕುರುಬರ ಬೀರಪ್ಪನ ಮನೆಯ
ಕುರುಬರ ಬೀರಪ್ಪನ ಮನೆಯ
ಕಂಬಳಿ ಗದ್ದುಗೆಯ ನೋಡಿ ಶಿವನು ಕೈಲಾಸದಲ್ಲಿ
ಥೈಥೈಥೈಥೋ ಎಂದು ಕುಣಿದು //ಶಿವನೇ//
ಕುಂಬಾರ್ ಗುಂಡಯ್ಯನ ಮನೆಯ
ಕುಂಬಾರ್ ಗುಂಡಯ್ಯನ ಮನೆಯ
ಮಡಿಕೆಯ ಶಬುದಕ್ಕೆ ಶಿವನು ಕೈಲಾಸದಲ್ಲಿ
ಥೈಥೋಂ ಎಂದು ಕುಣಿದು //ಶಿವನೇ//
ಒಕ್ಕಲಿಗರ ಮುದ್ದಪ್ಪನ ಮನೆಯ
ಒಕ್ಕಲಿಗರ ಮುದ್ದಪ್ಪನ ಮನೆಯ
ಒಕ್ಕಣಿ ಶೃಂಗಾರವ ನೋಡಿ ಶಿವನು ಕೈಲಾಸದಲ್ಲಿ
ಥೈಥೋಂ ಎಂದು ಕುಣಿದು //ಶಿವನೇ//
ಹೊಲೇರ್ ಹೊನ್ನಯ್ಯನ ಮನೆಯ
ಹೊಲೇರ್ ಹೊನ್ನಯ್ಯನ ಮನೆಯ
ಅಂಬಲಿಯ ಕುಡಿದು ನೋಡಿ ಶಿವನು ಕೈಲಾಸದಲ್ಲಿ
ಸೊರ್ ಸೊರ್ ಸೊರ್ ಸೊರ್ ಎಂದು ಕುಡಿದು //ಶಿವನೇ//
[ಭರತ ಭೂಮಿಯ ಅತಿ ದೊಡ್ಡ ಸಾಂಸ್ಕøತಿಕ ಸಮುದಾಯ ನಾಯಕ, ಶಿವ ಒಮ್ಮೆ ಪಾರ್ವತಿಯು ಮುನಿಸಿಕೊಂಡಿದ್ದಾಗ ಆಕೆಯನ್ನು ಸಮಾಧಾನ ಪಡಿಸಲು ತಲೆ ಮೇಲೊಂದು ಕರಡಿ ಗುಂಜೊಂದನ್ನ ಇಟ್ಟು, ಕೈಯಲ್ಲಿ ಢಮರುಘ ಹಿಡಿದು ದುಪ್ಪಟ್ಟಿಯ ಹೊದ್ದು ಕವಡೆ ಸರ, ಕಾಲಿಗೆ ಗೆಜ್ಜೆ ಕಟ್ಟಿ ಪಿಳ್ಳಂಗೋವಿಯ ಊದುತ್ತಾ ಮುನಿಸಿಕೊಂಡಿದ್ದ ತನ್ನ ಹೆಂಡತಿಯನ್ನು ನಗಿಸುತ್ತಾನೆಂಬ ಕಥೆಯಿದೆ. ಈ ಶಿವನ ವೇಷ ಭೂಷಣಗಳು ಒಂದು ಆರಾಧನಾ ಸಂಪ್ರದಾಯವಾಗಿ ಕರ್ನಾಟಕದಲ್ಲಿ ಬೆಳೆದು ಈ ಪಂಗಡವನ್ನು ಗೊರವರೆಂದು ಗುರುತಿಸಲಾಗುತ್ತದೆ.]