ಮಹಾದೇವರ ಕುರಿತು ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರು ಬರೆದ ಒಂದು ಸುನೀತ- ಧ್ಯಾನಕ್ಕೆ ಕೂತ ಸೊಡರ ನಾಲಗೆ ದೇವನೂರು
ಚಿತ್ರ-ರಘುಪತಿ ಶೃಂಗೇರಿ
ಕೆಲವರನ್ನು ಕಂಡ ಕೂಡಲೇ ಇವ ನಮ್ಮವ ಅನ್ನಿಸುವುದು. ನಿಮ್ಮನ್ನು
ಮೊನ್ನೆ ಕಂಡಾಗ ಹಾಗನ್ನಿಸಿತು. ಮಾತು ಎಷ್ಟು ನೇರ; ಎಷ್ಟು ಕ್ಲುಪ್ತ;
ಎಷ್ಟು ಸಮಾಹಿತ. ನಾನು ನಗುತ್ತಾ ಹೇಳಿದೆ. ನನಗೂ ಮಹಾದೇವ
ನಂತೆ ಮಾತಾಡಲಿಷ್ಟ; ಅದಕ್ಕೊಂದೇ ಉಪಾಯ ನಾಲಗೆಯನ್ನ ಮೌನ
ದಲ್ಲದ್ದುವುದು. ಆಡುವ ಮುನ್ನ ಮೌನ; ಆಡಿದ್ದಾದಮೇಲೂ ಮೌನ.
ಅದೇ ವೈನ. ಆಕಾಶದಲ್ಲಿ ನಿಶ್ಶಬ್ದವಾಗುರಿಯುವ ಕೆಂಗದಿರ ನಾಲಗೆ.
ನೆಲದ ಮೇಲೆ ಲಾಲಿ ಉಲಿಯುವ ನದಿಯ ನಾಲಗೆ. ಧ್ಯಾನಕ್ಕೆ ಕೂತ
ಸೊಡರ ನಾಲಗೆ. ಕಣ್ಕುಕ್ಕುವ ಬೆಳಕಿಗೆ ನೆರಳ ತಣ್ಣನೆಯ ನಾಲಗೆ. ನಾ
ಲಗೆ ನಾಚಲಿನ್ನು ನಾಚಿಗೆ. ಶಬ್ದಕ್ಕಿರಲಿ ನಿಶ್ಶಬ್ದದಾಧಾರ ಕಕ್ಷೆ. ಇದು
ಆಶಯ. ಆಗಬೇಕಲ್ಲ ಅನಿಸಿದ್ದು? ಇರುಳ ಬಯಲಲ್ಲಿ ಪಟ್ಟು ಹಿಡಿದು
ನಡೆಯದೆ ಮೂಡಿಯಾವೆ ಮಿನುಗು ಚುಕ್ಕಿ? ನಡೆಯೊಂದೇ ನುಡಿಯ
ತಾಲೀಮು. ಮಾಗಿಕಾಲದ ಈ ಮೂಡಲಗಿರಿಗೆ ಮಂಜಿನ ಕುಲಾವಿ.
ಇಬ್ಬನಿ ಹೊದಿಕೆ. ಕುಲಾವಿ ಮೇಲೆ ತಾಮ್ರಗೆಂಪಿನ ಸೂರ್ಯ ಕುಚ್ಚು.
ಇರಲಿ ನಿಮಗಿರುವಂತೆ ಹೊರನುಡಿಗೆ ಒಳನುಡಿಯ ನಿಷ್ಕಂಪ ನಚ್ಚು.