ಮರೀಚಿಕೆಯ ಕೂಪದಲ್ಲಿ ‘ಕಬ್ಬಿಣದ ತ್ರಿಕೋನ’-ನಾಗೇಶ್ ಹೆಗಡೆಯವರ ಪ್ರಜಾವಾಣಿ ಅಂಕಣ ಬರಹ
ನಾಗೇಶ್ ಹೆಗಡೆ
ಮರೀಚಿಕೆಯ ಕೂಪದಲ್ಲಿ ‘ಕಬ್ಬಿಣದ ತ್ರಿಕೋನ’
ನಾವೆಲ್ಲ ಬೆರಗಾಗಿ ನೋಡುತ್ತಿದ್ದೆವು. ದಟ್ಟ ಅರಣ್ಯದ ನಡುವಣ ಆ ಕಣಿವೆಯಲ್ಲಿ ಭೀಮಗಾತ್ರದ ಕಬ್ಬಿಣದ ಪೈಪುಗಳು ಸಾಲಾಗಿ ಮಲಗಿದ್ದವು. ಒಂದೊಂದು ಪೈಪಿನಲ್ಲೂ ಒಂದು ಕಾರನ್ನು ಸಲೀಸಾಗಿ ನುಗ್ಗಿಸಬಹುದಿತ್ತು. ಹಾಗೆ ನುಗ್ಗಿದ ಕಾರಿನ ಚಾವಣಿಯ ಮೇಲೆ ಯಾರೇ ನಿಂತಿದ್ದರೂ ತಲೆ ಬಾಗಿಸದೆ ಸಾಗಿ ಹೋಗಬಹುದಿತ್ತು. ಹನ್ನೆರಡು ಅಡಿ ವ್ಯಾಸದ, ಹೆಬ್ಬೆರಳ ದಪ್ಪದ ಅಷ್ಟೊಂದು ಪೈಪುಗಳನ್ನು ಹೇಗೆ ಅಲ್ಲಿಗೆ ಸಾಗಿಸಿ ತಂದಿರಬಹುದು? ಈ ಪ್ರಶ್ನೆಗೆ ಉತ್ತರವೂ ಅಲ್ಲೇ ಇತ್ತು: ಪೈಪ್‌ಗಳ ಸಾಲಿನ ಮಧ್ಯದ ಒಂದಿಷ್ಟು ಖಾಲಿ ಜಾಗದಲ್ಲಿ ಕಬ್ಬಿಣದ ದಪ್ಪದಪ್ಪ ಹಾಳೆಗಳನ್ನು ಒಂದರ ಮೇಲೊಂದರ ಹಾಗೆ ಆಳೆತ್ತರ ಪೇರಿಸಿ ಇಡಲಾಗಿತ್ತು. ಒಂದೊಂದೂ ಕಬಡ್ಡಿ ಮೈದಾನದಷ್ಟು ವಿಶಾಲವಾದ ಹಾಳೆಯನ್ನು ಎತ್ತಿ ಪೈಪಿನಂತೆ ಸುರುಳಿಸುತ್ತಿ ಬೆಸುಗೆ ಹಾಕಬಲ್ಲ ಬೃಹದಾಕಾರ ಯಂತ್ರವೂ ಅಲ್ಲೇ ಇತ್ತು. ತುಕ್ಕಿನ ಪುಡಿ ಉದುರಿಸುತ್ತ, ಮಳೆಯಲ್ಲಿ ನೆನೆಯುತ್ತ ಬಿದ್ದಿದ್ದ ಆ ಸರಂಜಾಮುಗಳ ರಕ್ಷಣೆಗೆ ಅಲ್ಲಿ ಯಾವ ಕಾವಲೂ ಇರಲಿಲ್ಲ. ಕಾವಲು ಬೇಕಾಗಿಯೂ ಇರಲಿಲ್ಲ. ಯಾರು ತಾನೆ ಅವನ್ನೆಲ್ಲ ಹೊತ್ತೊಯ್ಯಲು ಸಾಧ್ಯ? ಅದು ಸಕಲೇಶಪುರದಿಂದ ಏಳೆಂಟು ಕಿ.ಮೀ. ಆಚೆಗಿನ ಹೆಬ್ಬಸಾಲೆ ಕಣಿವೆಯ ದೃಶ್ಯ. ತುಸು ದೂರದಲ್ಲಿ ಅಂಥ ನಾಲ್ಕು ನಾಲ್ಕು ಪೈಪ್‌ಗಳನ್ನು ಒಂದರ ಪಕ್ಕ ಒಂದರಂತೆ ಸಾಲಾಗಿ ಜೋಡಿಸಿ ಹೊಲ, ಗದ್ದೆ, ತೋಟಗಳ ಮೂಲಕ ಹೇಮಾವತಿ ದಂಡೆಯವರೆಗೆ ಒಯ್ಯಲಾಗಿತ್ತು. ಹಳ್ಳವನ್ನು ದಾಟಿ ಪೈಪ್‌ಲೈನ್ ಹೆದ್ದಾರಿ ಮುಂದುವರೆಯಬೇಕು. ಹಳ್ಳದ ಮೇಲಿನಿಂದ ಸೇತುವೆಯ ಹಾಗೆ ಪೈಪುಗಳನ್ನು ಒಯ್ಯುವುದೊ ಅಥವಾ ನದಿಯ ತಳಕ್ಕೆ ಸುರಂಗ ಹಾಕಿ ಈ ಪೈಪುಗಳನ್ನು ದಾಟಿಸುವುದೊ ಎಂಬ ದ್ವಂದ್ವ ಎದುರಾದಂತಿತ್ತು. ಸಕಲೇಶಪುರದಲ್ಲೇ ರೋಟರಿ ಶಾಲೆಯ ಹತ್ತಿರ ನಿಂತು, ಆಳ ಕಣಿವೆಯತ್ತ ನೋಡಿದರೆ ದೂರದ ಸತ್ತಿಗಾಲದಲ್ಲಿ ಐವತ್ತು ಎಕರೆಗೂ ವಿಸ್ತಾರದ ಭತ್ತಗದ್ದೆಯ ತುಂಬೆಲ್ಲ ಪೈಪ್‌ಗಳ ಅಕ್ಷೋಹಿಣಿಯೇ ಕಾಣುತ್ತದೆ. ನಿಸರ್ಗದ ಮೇಲೆ ಯುದ್ಧ ಸಾರಲೆಂದು ಕಾದ ಸೈನಿಕರ ಹಾಗೆ. ಬೆಂಗಳೂರಿನಿಂದ ಸಿಗ್ನಲ್ ಬಂದರೆ ಸಾಕು, ಅವೆಲ್ಲ ಮೈ ಕೊಡವಿ ಎದ್ದು ಸಾಲುಗಟ್ಟಿ ಅರಣ್ಯದೊಳಕ್ಕೆ ಹೆದ್ದಾರಿ ನಿರ್ಮಿಸಿಕೊಂಡು ಹೊಕ್ಕು ಹಾಯುತ್ತ, ಕತ್ತಲಂತಿರುವ ಕಾಡಿನಲ್ಲಿ ಕೀರಿಹೊಳೆ, ಹಂಗಡಹಳ್ಳಗಳ ಮೂಲಕ ಉದ್ದಕ್ಕೂ ಹೆಮ್ಮರಗಳನ್ನು ಬೀಳಿಸುತ್ತ, ಡೈನಮೈಟ್ ಸಿಡಿಸುತ್ತ, ಪರಸ್ಪರ ಬೆಸುಗೆ ಹಾಕಿಸಿಕೊಳ್ಳುತ್ತ, ಅಲ್ಲಲ್ಲಿ ಪಂಪಿಂಗ್ ಸ್ಟೇಶನ್, ವಿದ್ಯುತ್ ಕಂಬ-ಕಂಬಿಗಳ ಜಾಲ ನಿರ್ಮಿಸಿಕೊಂಡು ನಂತರ ದಟ್ಟ ಘಟ್ಟ ಏರುತ್ತವೆ. ಅಭಿವೃದ್ಧಿಯ ಆ ರಣವೈಖರಿಯನ್ನು ನೋಡುತ್ತ ಅಕ್ಟೋಬರ್ 14ರಂದು ಎತ್ತಿನಹಳ್ಳದಲ್ಲಿ ನಿಂತಿದ್ದವರಿಗೆ ಪಾದ ಮುಳುಗುವಷ್ಟೂ ನೀರಿರಲಿಲ್ಲ. ಆದರೆ ದುಡ್ಡಿನ ಹೊಳೆ ಮಾತ್ರ ಕಣಿವೆಯುದ್ದಕ್ಕೂ ಭೋರ್ಗರೆಯುತ್ತಿತ್ತು. ಅದು ಅಲ್ಲಿಂದ ಪೈಪ್‌ಗಳ ಮೇಲೆ ಸವಾರಿ ಮಾಡಿ 300 ಮೀಟರ್ ಎತ್ತರದ ಘಟ್ಟಸಾಲಿನ ಮೂಲಕ ಮೇಲೇರಲು ಹವಣಿಸುತ್ತಿತ್ತು. ಹಳ್ಳದ ಪಕ್ಕದಲ್ಲೇ ಗಗನಚುಂಬಿಯಂತೆ ನಿಂತಿದ್ದ ಧೂಪದ ಮರದ ತುದಿಯತ್ತ ಬೊಟ್ಟು ಮಾಡಿ ‘ಮಲೆನಾಡು ಜನಪರ ಹೋರಾಟ ಸಮಿತಿ’ಯ ಕಾರ್ಯಕರ್ತ ಕಿಶೋರ್ ತೋರಿಸುತ್ತಿದ್ದರು. ಧೂಪದ ಮರಕ್ಕಿಂತ ಹತ್ತು ಪಟ್ಟು ಎತ್ತರಕ್ಕೆ ಮರೀಚಿಕೆಯನ್ನು ಪಂಪ್ ಮಾಡುವ ಯೋಜನೆಯನ್ನು ವಿವರಿಸುತ್ತಿದ್ದರು. ನೀರಂಚಿನಲ್ಲಿ ನಿಂತವರಿಗೂ ಅದು ಚಳಿ ಹುಟ್ಟಿಸುವಂತಿತ್ತು. ‘ಉದ್ಯಮಿಗಳಿಂದ ಹಣವನ್ನೂ ಬಡವರಿಂದ ಮತಗಳನ್ನೂ ಪಡೆದು ರಾಜಕಾರಣಿಗಳು ಅಧಿಕಾರಕ್ಕೆ ಬರುತ್ತಾರೆ’ ಎಂದು ಆಸ್ಕರ್ ಅಮೆರಿಂಗರ್ ತುಂಬ ಹಿಂದೆಯೇ ಹೇಳಿದ್ದ. ಗೆದ್ದಮೇಲೆ ಉದ್ಯಮಿಗಳ ಆಶೋತ್ತರಗಳನ್ನೂ ಈಡೇರಿಸುತ್ತ, ಮತದಾರರ ಕನಸುಗಳಿಗೂ ನೀರೆರೆಯುತ್ತ ಹೋಗಬಲ್ಲ ರಾಜಕಾರಣಿಗಳಿಗೆ ಬೃಹತ್ ನೀರಾವರಿ ಯೋಜನೆಗಳು ಬಹುದೊಡ್ಡ ವರವಾಗುತ್ತವೆ. ಎಲ್ಲ ದೇಶಗಳಲ್ಲೂ ನೀರಾವರಿಯ ದೊಡ್ಡ ಯೋಜನೆಗಳಲ್ಲಿ ಈ ಕಣ್ಕಟ್ಟು ನಡೆಯುತ್ತಲೇ ಇರುತ್ತವೆ. ಅಣೆಕಟ್ಟು, ಸುರಂಗ, ಕಾಲುವೆಗಳ ನಿರ್ಮಾಣಕ್ಕೆ ದೊಡ್ಡವರು ಸಾಲುಗಟ್ಟಿ ನಿಲ್ಲುತ್ತಾರೆ. ಬೃಹತ್ ಯಂತ್ರೋಪಕರಣಗಳ ನಿರ್ಮಾಪಕರು, ಪೂರೈಕೆದಾರರು, ಸಿಡಿಮದ್ದು ತಯಾರಕರು, ಕಲ್ಲುಬಂಡೆ ಗಣಿಗಾರರು, ಕ್ರಷರ್ ಮತ್ತು ಲಾರಿ ಮಾಲಿಕರು, ಸಿಮೆಂಟ್ ಉತ್ಪಾದಕರು, ಮರಳು ಮತ್ತು ಕಬ್ಬಿಣ ಪೂರೈಕೆದಾರರು, ಮರಮುಟ್ಟು ಸಾಗಣೆದಾರರು, ಲೇಬರ್ ಗುತ್ತಿಗೆದಾರರು ಎಲ್ಲರಿಗೂ ದುಡ್ಡಿನ ಹೊಳೆ ಹರಿಯುತ್ತದೆ. ಮುಂದಿನ ಮೂರು ಚುನಾವಣೆಗಳವರೆಗೆ ಮತದಾರರಿಗೆ ಮರೀಚಿಕೆಯನ್ನು ಹರಿಸುತ್ತ, ಧನಧಾರೆಯನ್ನು ಗಟ್ಟಿಕುಳಗಳತ್ತ ತಿರುಗಿಸುತ್ತ ಮುಂದಾಳುಗಳ ವಿಜಯರಥ ಸಾಗುತ್ತಿರುತ್ತದೆ. ಆಡಳಿತ ಯಂತ್ರಕ್ಕಂತೂ ಯಾರೇ ಗೆದ್ದರೂ ಸೋತರೂ ಯೋಜನೆಯ ಅವಧಿಯಲ್ಲಿ ಹಬ್ಬವೇ ಹಬ್ಬ. ಹಣಕಾಸು ಇಲಾಖೆಯಿಂದ ಹಿಡಿದು, ಎಂಜಿನಿಯರಿಂಗ್ ವಿಭಾಗ ದಾಟಿ, ತೀರ ಕೆಳಮಟ್ಟದಲ್ಲಿ ಭೂಮಾಪನ ಗುಮಾಸ್ತರೂ ತುಂಡರಸರಾಗುತ್ತಾರೆ. ಯೋಜನೆ ಪೂರ್ತಿಗೊಂಡು, ಮಂತ್ರಿಗಳ ಎದುರು ನೇಗಿಲಯೋಗಿಯ ಗೀತೆಯನ್ನು ರಾಗವಾಗಿ ಹಾಡಿ ಕೊನೆಗೂ ನಾಲೆಗೆ ನೀರು ಹರಿದೇ ಬಿಟ್ಟಿತು ಎಂದುಕೊಳ್ಳಿ. ಆಗಲೂ ಕೃಷಿಕರಿಗೆ ಅದು ತೋರಿಕೆಯ ಹಬ್ಬ ಮಾತ್ರ. ಅತ್ತ ವಾಸ್ತವವಾಗಿ ಇನ್ನೊಂದು ಬಗೆಯ ಹಬ್ಬ ಆರಂಭವಾಗಿರುತ್ತದೆ. ಅಲ್ಲಿ ಟ್ರ್ಯಾಕ್ಟರ್, ಟಿಲ್ಲರ್, ಡೋಝರ್ ಪೂರೈಕೆದಾರರು ಸಾಲುಗಟ್ಟಿ ಬರುತ್ತಾರೆ. ಅವರ ಹಿಂದೆ ಕೃಷಿ ಪಂಪ್‌ಸೆಟ್, ಬೀಜ- ಗೊಬ್ಬರ ಕಂಪನಿಗಳು, ಕೃಷಿವಿಷಗಳ ಉತ್ಪಾದಕರು, ಬ್ಯಾಂಕುಗಳು ಎಲ್ಲರ ಸಹಕಾರದಿಂದ ರೈತನ ಸಾಲದ ಕುಣಿಕೆ ಸಿದ್ಧವಾಗುತ್ತದೆ. ನೇತ್ರಾವತಿ ಕೊಳ್ಳದಿಂದ ಪಾವಗಡದವರೆಗೂ ಹುಸಿಮಾಹಿತಿಗಳ ಸರಮಾಲೆಗಳನ್ನೇ ಜೋಡಿಸಿ, ಅರಣ್ಯ ಮತ್ತು ಪರಿಸರ ರಕ್ಷಣೆಯ ಎಲ್ಲ ಕಾನೂನುಗಳನ್ನು ನಿರ್ಲಕ್ಷಿಸಿ, ಯೋಜನೆಯ ನೀಲನಕ್ಷೆಯನ್ನು ಮತ್ತೆ ಮತ್ತೆ ಬದಲಾಯಿಸುತ್ತ, ಸಂತ್ರಸ್ತರಿಗೆ ಯಾವ ಮಾಹಿತಿಯನ್ನೂ ನೀಡದೆ ಸತಾಯಿಸುತ್ತ, ಬಾಯಾರಿದವರ ಆಕ್ರಂದನಗಳಿಗೆ ಮೈಕ್ ಹಿಡಿಯುತ್ತ, ಅವರ ಸಂಕಟವನ್ನೇ ಮುಂದಿಟ್ಟುಕೊಂಡು ಹಣಕಾಸು ಇಲಾಖೆಯಿಂದ ಹೆಚ್ಚು ಹೆಚ್ಚು ಅನುದಾನವನ್ನು ಯೋಜನೆಗಾಗಿ ಬಿಡುಗಡೆ ಮಾಡಿಸಿ ಗುತ್ತಿಗೆದಾರರಿಗೆ ರವಾನಿಸುತ್ತ, ತಜ್ಞರ ಎಚ್ಚರಿಕೆಯನ್ನು ಧಿಕ್ಕರಿಸುತ್ತ ಒಂಟಿ ಸಲಗದಂತೆ ಸಾಗುತ್ತಿರುವ ದುಡ್ಡಿನ ಹೊಳೆ ಯೋಜನೆಯನ್ನು ಈ ದೃಷ್ಟಿಯಿಂದ ನೋಡಬೇಕು. ರಾಜಕಾರಣಿ, ಅಧಿಕಾರಿ ಮತ್ತು ಗುತ್ತಿಗೆದಾರ ಈ ಮೂವರ ಗಟ್ಟಿಬಂಧಕ್ಕೆ ‘ಕಬ್ಬಿಣದ ತ್ರಿಕೋನ’ ಎಂತಲೇ ಹೆಸರು. ನಮ್ಮಲ್ಲಷ್ಟೇ ಅಲ್ಲ, ಅಮೆರಿಕ, ಯುರೋಪ್, ಜಪಾನ್‌ನಲ್ಲಿ ಈ ತ್ರಿಕೋನ ನೀತಿಸೂತ್ರ ಜಾರಿಯಲ್ಲಿದೆ. ರಾಜಕೀಯ ಅರ್ಥಶಾಸ್ತ್ರದಲ್ಲಿ ಈ ‘ಐರನ್ ಟ್ರಯಾಂಗಲ್’ ಕುರಿತು ಬಗೆಬಗೆಯ ವಿಶ್ಲೇಷಣೆಗಳಿವೆ. ಅಭಿವೃದ್ಧಿ ಯೋಜನೆಗಳ ಜಾರಿಗೆ ಈ ತ್ರಿಕೋನ ಅದೆಷ್ಟು ಅನಿವಾರ್ಯ ಎಂಬುದನ್ನೂ ಪ್ರತಿಪಾದಿಸಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಜಾಲ, ಬಂದರು, ವಿಮಾನ ನಿಲ್ದಾಣದಂಥ ಮೂಲ ಸೌಕರ್ಯಗಳ ವಿಷಯದಲ್ಲಿ ಈ ತ್ರಿಕೋನದಿಂದ ಅಭಿವೃದ್ಧಿಯ ಭ್ರಮೆಯನ್ನು ನಿರ್ಮಿಸುತ್ತ ಹೋಗಬಹುದು. ಆದರೆ ನಿಸರ್ಗವನ್ನು ಮಣಿಸಲು ಹೋದ ಬಹುತೇಕ ಎಲ್ಲ ಕಡೆ ಅದು ದುರಂತಗಳಿಗೆ ಕಾರಣವಾಗಿದೆ. ಮೆಕ್ಸಿಕೊದಲ್ಲಿ ಕೊಲರಾಡೊ ನದಿ ಮತ್ತು ರಿಯೊ ಗ್ರ್ಯಾಂಡಿ, ಸಿರಿಯಾದಲ್ಲಿ ಜೋರ್ಡಾನ್ ನದಿ, ವಿಭಜನೆ ಪೂರ್ವ ರಷ್ಯಾದಲ್ಲಿ ಅಮುದರಿಯಾ ಮತ್ತು ಸಿರ್‌ದರಿಯಾ, ಚೀನಾದಲ್ಲಿ ಯಾಂಗ್‌ತ್ಸೆ ಮತ್ತು ಮೆಕಾಂಗ್, ಪಾಕಿಸ್ತಾನದಲ್ಲಿ ಸಿಂಧೂ, ಈಜಿಪ್ತಿನಲ್ಲಿ ನೈಲ್ ಎಲ್ಲವೂ ದುಃಖ- ದಂದುಗಗಳನ್ನೇ ತಂದೊಡ್ಡಿವೆ. ಕೆಲವಂತೂ ಸಮುದ್ರಕ್ಕೂ ಸೇರುತ್ತಿಲ್ಲ. ಭಾರತದಲ್ಲೇ ಕೃಷಿ ಇಲಾಖೆಯ ಅಧಿಕೃತ ಅಂಕಿ ಅಂಶಗಳ ಪ್ರಕಾರ 1992ರಿಂದ 2007ರ ನಡುವಣ ಅವಧಿಯಲ್ಲಿ ದೊಡ್ಡ ಮತ್ತು ಮಧ್ಯಮ ನೀರಾವರಿ ಯೋಜನೆಗಳಿಗೆಂದು ₹ 142 ಸಾವಿರ ಕೋಟಿಗಳ ವೆಚ್ಚವಾಗಿದೆ. ಆದರೆ ಒಂದೇ ಒಂದು ಹೆಕ್ಟೇರ್ ಭೂಮಿಗೂ ನೀರು ಹರಿದಿಲ್ಲ. ಅದಕ್ಕಿಂತ ಮೊದಲು ಕೈಗೊಂಡ ಯೋಜನೆಗಳಲ್ಲೂ 24.2 ಲಕ್ಷ ಹೆಕ್ಟೇರ್ ಭೂಮಿಗೆ ನೀರು ಖೋತಾ ಆಗಿದೆ. ಕರಾವಳಿ ಮತ್ತು ಬಯಲು ಜಿಲ್ಲೆಗಳ ನಡುವೆ ಜಗಳವನ್ನು ತಂದಿಟ್ಟ ಈ ನದಿತಿರುವು ಯೋಜನೆ ಪೂರ್ತಿಗೊಂಡು ಅಷ್ಟಿಷ್ಟು ನೀರು ಬಂದರೂ ಸಹ ಅದು ತಾಲ್ಲೂಕು ಮಟ್ಟದಲ್ಲಿ ಹೊಸ ಜಗಳಗಳ ಸರಮಾಲೆಯನ್ನೇ ಸೃಷ್ಟಿಸಲಿದೆ. ಕೊರಟಗೆರೆಯಿಂದ ಹಿಡಿದು ಗೌರಿಬಿದನೂರಿನವರೆಗೆ ಊರೂರಲ್ಲಿ ಅದೇ ನೀರಿಗಾಗಿ ಹಣಾಹಣಿ ನಡೆದೀತು. ಕೃಷಿಕರ ನಡುವೆ, ಕೃಷಿ ಮತ್ತು ಉದ್ಯಮಿಗಳ ನಡುವೆ, ಕೃಷಿ-ಉದ್ಯಮಿ ಮತ್ತು ನಗರವಾಸಿಗಳ ನಡುವೆ ನೀರಿಗಾಗಿ ಹೋರಾಟ ನಡೆಯಬಹುದು. ಇದರಿಂದ ರಾಜಕಾರಣಿಗಳು ಸಂಪ್ರೀತರಾಗಿ ಇನ್ನೂ ದೊಡ್ಡ ನದಿತಿರುವು ಯೋಜನೆಗಳ ನೀಲನಕ್ಷೆಯನ್ನು ಸಿದ್ಧಪಡಿಸಲು ಎಂಜಿನಿಯರ್‌ಗಳಿಗೆ ಹೇಳಬಹುದು.
ನಾವೀಗ ತಿರುಗಿಸಬೇಕಾದದ್ದು ನದಿಯನ್ನಲ್ಲ: ನಮ್ಮ ಮನಸ್ಸನ್ನು, ನಮ್ಮ ಆದ್ಯತೆಗಳನ್ನು ಮತ್ತು ನಮ್ಮ ತಂತ್ರಜ್ಞಾನವನ್ನು ತಿರುಗಿಸಬೇಕಿದೆ. ಕೋಲಾರದ ಅರ್ಧದಷ್ಟೂ ಮಳೆ ಬೀಳದ ಇಸ್ರೇಲ್ ದೇಶ ಬಹುದೊಡ್ಡ ಪ್ರಮಾಣದಲ್ಲಿ ಹೂ-ಹಣ್ಣು, ತರಕಾರಿ, ಗಡ್ಡೆಗೆಣಸುಗಳನ್ನು ರಫ್ತು ಮಾಡುತ್ತಿದೆ. ಕೇವಲ 30 ಮಿಲಿಮೀಟರ್ ಮಳೆ ಬೀಳುವ ಭಾಗಗಳಲ್ಲಿ ನೆಲದಡಿಯಲ್ಲಿ ಅಣೆಕಟ್ಟು ನಿರ್ಮಿಸಿ, ನೀರು ತುಸುವೂ ಆವಿಯಾಗದಂತೆ ಮೇಲೆ ಟಾರ್ಪಾಲಿನ್ ಹೊದಿಕೆ ಹಾಕಿ ಜನರಿಗೆ, ಉದ್ಯಮಗಳಿಗೆ ವರ್ಷವಿಡೀ ನೀರು ಪೂರೈಸಲಾಗುತ್ತಿದೆ. ಬಳಸಿದ ನೀರನ್ನು ಸಂಸ್ಕರಿಸಿ, ಶುದ್ಧೀಕರಿಸಿ ಕೃಷಿ ಭೂಮಿಗೆ ಹರಿಬಿಡುವ ಮಾರ್ಗದುದ್ದಕ್ಕೂ ಹಂತ ಹಂತದಲ್ಲಿ ತೊಟ್ಟಿಗಳನ್ನು ನಿರ್ಮಿಸಿ ಅಲ್ಲಿ ಪ್ರತಿ ಘನ ಮೀಟರಿಗೂ ತಿಂಗಳಿಗೆ ಸಾವಿರ ಕಿಲೊ ಮೀನು ಉತ್ಪಾದನೆ ಮಾಡುತ್ತಾರೆ. ಕಳೆದ ಮೂರು ದಶಕಗಳಲ್ಲಿ ಅಲ್ಲಿನ ಕೃಷಿ ಉತ್ಪಾದನೆ ಏಳು ಪಟ್ಟು ಹೆಚ್ಚಾಗಿದೆ. ಹಾಲಿನ ಉತ್ಪಾದನೆಯಲ್ಲಿ ಜಗತ್ತಿಗೇ ಮೊದಲ ಸ್ಥಾನ ಪಡೆದ ಇಸ್ರೇಲಿನಲ್ಲಿ ಕೃಷಿಗೆ ಬಳಸುವ ನೀರಿನ ಮುಕ್ಕಾಲು ಭಾಗವೆಲ್ಲ ನಗರವಾಸಿಗಳು ಬಳಸಿ ಬಿಟ್ಟ, ಶುದ್ಧೀಕೃತ ನೀರೇ ಆಗಿದೆ. ಸಾವಯವ ಕೃಷಿ, ಹೈಡ್ರೊಪೋನಿಕ್ಸ್, ಏರೊಪೋನಿಕ್ಸ್, ಮೀನುಗಾರಿಕೆ, ಡೇರಿ, ಹೂಕೃಷಿ ಎಲ್ಲಕ್ಕೂ ಮಾದರಿ ಎನಿಸಿದ ಅಲ್ಲಿ ವರ್ಷ ಕಳೆದಂತೆಲ್ಲ ಕಡಿಮೆ ನೀರು ಬಳಸಿ ಹೆಚ್ಚು ಹೆಚ್ಚು ಉತ್ಪಾದನೆ ಸಾಧ್ಯವಾಗಿದೆ. ಅದರಿಂದಾಗಿಯೇ ಅಲ್ಲಿ ಪ್ರವಾಸೋದ್ಯಮ ವಿಜೃಂಭಿಸಿದೆ; ನಗರಗಳತ್ತ ವಲಸೆ ತಪ್ಪಿದೆ; ಸಮಾನತೆ ಸಾಧ್ಯವಾಗಿದೆ; ಮುಷ್ಕರ, ಪ್ರತಿಭಟನೆಗಳ ಸೊಲ್ಲಿಲ್ಲವಾಗಿದೆ. ಇಸ್ರೇಲಿಗಿಂತ ದುಪ್ಪಟ್ಟು, ಮೂರು ಪಟ್ಟು ಮಳೆ ಬೀಳುವ ಕೋಲಾರದತ್ತ ಪಶ್ಚಿಮ ಘಟ್ಟಗಳ ನದಿಗಳನ್ನು ತಿರುಗಿಸಿ ಕೆಲವರತ್ತ ಮಾತ್ರ ದುಡ್ಡಿನ ಹೊಳೆ ಹರಿಸುವ ಬದಲು ಇಸ್ರೇಲೀ ತಂತ್ರಜ್ಞಾನವನ್ನು ತಿರುಗಿಸಿ ಸಕಲರಿಗೆ ಸಮೃದ್ಧಿಯ ಹೊಳೆ ಹರಿಸಲು ಸಾಧ್ಯವಿಲ್ಲವೆ? ಈಗೀಗ ಬರದ ಆಕ್ರಂದನ ಹೊಮ್ಮಿಸುವವರ ಸಮಾವೇಶಗಳು ಪದೇಪದೇ ನಡೆಯುತ್ತಿವೆ. ಅದರ ಬದಲು ಇದುವರೆಗೆ ನಮ್ಮೆಲ್ಲರ ವೆಚ್ಚದಲ್ಲಿ ಇಸ್ರೇಲಿಗೆ ಹೋಗಿ ಬಂದವರ ಒಂದು ಸಮಾವೇಶ ಏರ್ಪಡಿಸಿ ಬದಲೀ ಸಾಧ್ಯತೆಗಳ ಕ್ಷೀಣ ಸ್ವರವನ್ನಾದರೂ ಅವರಿಂದ ಹೊಮ್ಮಿಸಬಹುದೆ? ಹದಿಮೂರೊ ಇಪ್ಪತ್ತೊ ಸಾವಿರ ಕೋಟಿಗಳ ‘ಕಬ್ಬಿಣದ ತ್ರಿಕೋನ’ದ ಶಾಪ ನಮ್ಮ ಪಾಲಿಗೆ ಬ್ರಹ್ಮಕಪಾಲವೇ ಹೌದಾದರೆ, ಪಶ್ಚಿಮಘಟ್ಟಗಳ ಸಮೃದ್ಧ ನಿಸರ್ಗವನ್ನು ಅದರ ಪಾಲಿಗೆ ಬಿಟ್ಟು, ಬೆಂಗಳೂರಿನ ಸಮೀಪವೇ ಇರುವ ಒಣಜಿಲ್ಲೆಗಳತ್ತ ಆ ತ್ರಿಕೋನವನ್ನು ತಿರುಗಿಸಿ, ಇಡೀ ಏಷ್ಯಕ್ಕೇ ಒಂದು ಮಾದರಿಯನ್ನು ಕಟ್ಟಿ ಕೊಡಬಹುದಲ್ಲವೆ? ಬರಲಿರುವ ಬಿಸಿ ಪ್ರಳಯವನ್ನೂ ನಿಭಾಯಿಸಬಲ್ಲ ಅಂಥ ಬರನಿರೋಧಕ ತಂತ್ರಜ್ಞಾನದಲ್ಲೂ ಭಾರೀ ಹಣವಿದೆ, ಯಂತ್ರೋಪಕರಣಗಳಿವೆ, ಭೂಗತ ಅಣೆಕಟ್ಟೆಗಳಿವೆ-ಅವೆಲ್ಲವುಗಳ ಜೊತೆಗೆ ಮುಂದಿನ ಪೀಳಿಗೆಗೆ ಒಂದು ಸುಸ್ಥಿರ ಭವಿಷ್ಯವಿದೆ ಎಂಬುದನ್ನು ಬಿಂಬಿಸೋಣವೆ? ಬರ ಎಂದರೆ ಕಬ್ಬಿಣದ ತ್ರಿಕೋನದ ಮೂರು ಮೂಲೆಗಳಿಗೂ ಹಬ್ಬ ಹೌದು. ಆದರೆ ಬರನಿರೋಧಕ ತಂತ್ರದಿಂದ ತ್ರಿಕೋನದಾಚಿನ ಜನಸಾಮಾನ್ಯರಿಗೂ ಹಬ್ಬ ಸಾಧ್ಯವಿದೆ. ಶಾಂತಿ, ಸಮಾನತೆ, ಸಹಬಾಳ್ವೆಯ ಮನೋಭಾವ ಹಬ್ಬಲೂ ಅವಕಾಶವಿದೆ. ಬೇಕಲ್ಲವೆ ಅವೆಲ್ಲ ನಮಗೆ?