ಮರಗಟ್ಟಿದ ವ್ಯವಸ್ಥೆಯಡಿ ಅಮರರಾದರು -ವಿ.ನಟರಾಜ್
ಸಿಯಾಚಿನ್ ನಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿ ಸುದೀರ್ಘ ಕಾಲ ಸಾವು ಬದುಕಿನ ನಡುವೆ ಹೋರಾಡಿ ಕಡೆಗೆ ನಮ್ಮನ್ನಗಲಿದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಅವರ ಸಾವು ದೇಶಾದ್ಯಂತ ಎಬ್ಬಿಸಿದ ಅನುರಣನ ಬಹುಕಾಲದವರೆಗೆ ನೆನಪಿನಲ್ಲಿ ಉಳಿಯುವಂಥದ್ದು. ಅದೇ ವೇಳೆ ಇಂಥ ಘಟನೆಗಳು ಜನರಲ್ಲಿ ಉಕ್ಕಿಸುವ ಭಾವತರಂಗಗಳನ್ನು ಹೇಗೆ ಒಂದು ಸೀಮಿತ ನೋಟಕ್ರಮಕ್ಕೆ ಮಾತ್ರವೇ ಒಗ್ಗಿಸಲಾಗುತ್ತದೆ ಎನ್ನುವುದೂ ಸಹ ಚರ್ಚಿಸಬೇಕಾದ ವಿಷಯ.
ನಮ್ಮ ಗ್ರಹಿಕೆಗಳನ್ನು ರೂಪಿಸಿರುವ ಚಿಂತನೆಗಳಲ್ಲಿ ದೇಶಪ್ರೇಮಕ್ಕೂ ಶೌರ್ಯಕ್ಕೂ ನೇರವಾದ ಸಂಬಂಧವಿರುವುದನ್ನು ಗಮನಿಸಬಹುದು. ದೇಶಪ್ರೇಮವೆನ್ನುವುದನ್ನು ವೈರಿ ರಾಷ್ಟ್ರಗಳೊಂದಿಗಿನ ಸೆಣಸಾಟಕ್ಕೆ, ಗಡಿಯಲ್ಲಿ ಜೀವವನ್ನು ಲೆಕ್ಕಿಸದೆ ನಡೆಸುವ ಕಾದಾಟಕ್ಕೆ, ಕ್ರೀಡೆಯೂ ಸೇರಿದಂತೆ ವಿವಿಧ ವಲಯಗಳಲ್ಲಿ ದೇಶ ಮಾಡಿದ ಸಾಧನೆಯ ಬಗ್ಗೆ ಅಪಾರ ಅಭಿಮಾನ ವ್ಯಕ್ತಪಡಿಸುವುದಕ್ಕೆ, ದೇಶದ ಸಾಂಸ್ಕೃತಿಕ ಹಿರಿಮೆಯನ್ನು ಸದಾಕಾಲ ಎತ್ತಿಹಿಡಿಯುವುದಕ್ಕೆ ಬಳಕೆಯಾಗುತ್ತಿರುತ್ತದೆ. ಇದರೊಟ್ಟಿಗೆ ವ್ಯವಸ್ಥೆಯ ಬಗ್ಗೆ ಕೇಳಲೇಬೇಕಾದ ಪ್ರಶ್ನೆಗಳನ್ನು ಕೇಳದಂತೆ ಸುಮ್ಮನಿರಿಸಲು, ಅಸಮರ್ಥನೀಯವೆನಿಸುವ ನಡೆಗಳನ್ನು ಸಮರ್ಥಿಸಿಕೊಳ್ಳುವುದಕ್ಕೂ ಸಹ ರಾಜಕಾರಣದ ಭಾಗವಾಗಿ ದೇಶಪ್ರೇಮದ ಬಳಕೆ ಕಂಡುಬರುತ್ತದೆ. ಇದಕ್ಕೆ ಯಾವುದೇ ರಾಜಕೀಯ ಪಕ್ಷಗಳು ಹೊರತಲ್ಲ. ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ತಾವು ಇತರರಿಗಿಂತಲೂ ಮಿಗಿಲಾದ ದೇಶಭಕ್ತಿ ಉಳ್ಳವರು ಎಂದು ನಿರೂಪಿಸಲು ಸದಾಕಾಲ ಹೆಣಗುತ್ತಿರುತ್ತವೆ. ಇದೇ ಮಾತು ಜನಸಾಮಾನ್ಯರ ವರ್ತನೆಗಳಲ್ಲಿಯೂ ಸಾಕಷ್ಟು ಬಾರಿ ಪ್ರತಿಫಲಿತವಾಗುತ್ತಿರುತ್ತದೆ. ಅದರಲ್ಲಿಯೂ ಯುವಸಮೂಹ ತನ್ನ ದೇಶಭಕ್ತಿಯನ್ನು ಸ್ಪರ್ಧಾತ್ಮಕ ರೀತಿಯಲ್ಲಿ ಅಭಿವ್ಯಕ್ತಿಸುವುದು ಹೆಚ್ಚಾಗಿ ಕಂಡುಬರುತ್ತದೆ. ಇನ್ನು ನಮ್ಮ ಜನಪ್ರಿಯ ಮಾಧ್ಯಮಗಳಾದ ಹಿರಿತೆರೆ, ಕಿರಿತೆರೆಗಳು ದೇಶಭಕ್ತಿಯನ್ನು ಯಾವತ್ತೂ ಜನರಿಗೆ ಒಪ್ಪಿಸಬಹುದಾದ ‘ಸಬ್ಜೆಕ್ಟ್’ ಗಳಾಗಿಯೇ ಬಿಂಬಿಸುತ್ತವೆ.
ಕೆಲ ವರ್ಷಗಳ ಹಿಂದೆ ಮುಂಬೈ ದಾಳಿ ನಡೆದ ನಂತರ ಹೇಗೆ ಒಂದೆರಡು ದಿನದ ಅವಧಿಯಲ್ಲಿಯೇ ಇಡೀ ನಗರ ತನ್ನ ಸಹಜತೆಗೆ ಮರಳಿತು ಎನ್ನುವ ಬಗ್ಗೆ ವಿಶೇಷ ಒತ್ತು ನೀಡಿ ಚರ್ಚಿಸಲಾಯಿತು. ಮುಂಬೈ ನಗರಿಯ ಆಂತರ್ಯದಲ್ಲಿರುವ ಹೋರಾಟದ ಕೆಚ್ಚು, ಎಂದಿಗೂ ಕುಸಿಯದ ಅದರ ಸ್ಥೈರ್ಯದ ಬಗ್ಗೆ ಪ್ರಶಂಸಿಸಲಾಯಿತು. ಇದು ಭಾಗಶಃ ಸತ್ಯವಿರಬಹುದು. ಘಟನಾವಳಿಗಳನ್ನು ಸಕಾರಾತ್ಮಕವಾಗಿ ನೋಡುವ ಒಂದು ಪ್ರಯತ್ನವಿರಬಹುದು. ರೈಲ್ವೇ ಹಳಿಗಳ ಮೇಲಿನ ಓಟದಲ್ಲಿಯೇ ಬದುಕನ್ನು ಕಟ್ಟಿಕೊಂಡಿರುವ ಮುಂಬೈ ನಗರಿಯ ಸಾಮಾನ್ಯ ಜನತೆಗೆ ತಮ್ಮ ದೈನಂದಿನ ಬದುಕಿಗೆ ಮರಳದೆ ಬೇರಿನ್ನಾವ ದಾರಿ ತಾನೆ ಇತ್ತು? ಕೋಮು ಗಲಭೆ, ಉಗ್ರರ ದಾಳಿಯಂಥ ಘಟನೆಗಳಿಗೆ ಪದೇಪದೇ ತುತ್ತಾಗುವ ನಗರದಲ್ಲಿ ಇವೆಲ್ಲವೂ ಸಹ ಬದುಕು ಕಟ್ಟಿಕೊಳ್ಳಲು ಅನಿವಾರ್ಯವಾಗಿ ಎದುರುಗೊಳ್ಳಲೇಬೇಕಾದ ಸವಾಲುಗಳಾಗಿವೆ. ಹಾಗಾಗಿ ಇದನ್ನು ನಾವು ‘ಅನಿವಾರ್ಯತೆ’ ಎಂದು ಕರೆಯುವುದು ಹೆಚ್ಚು ಸೂಕ್ತ.
ಲ್ಯಾನ್ಸ್ ನಾಯಕ್ ಹನುಮಂತಪ್ಪನವರ ಮರಣವನ್ನು ಉನ್ನತ ದೇಶಪ್ರೇಮದ ಪ್ರತೀಕವೆಂದು ನೋಡುವುದಕ್ಕೆ ಸೀಮಿತವಾಗಿರುವ ಮನಸ್ಸುಗಳು ಅದನ್ನು ವೃತ್ತಿ ಸಂಬಂಧಿತ ಅವಘಡ ಎಂದು ಕರೆಯಲು ಹಿಂದೇಟು ಹಾಕುತ್ತವೆ. ಬಹುಶಃ ಹಾಗೆ ನೋಡುವುದು ಆತನ ತ್ಯಾಗ, ಬಲಿದಾನಕ್ಕೆ ಮಾಡುವ ಅಪಮಾನ ಎಂದು ನಮ್ಮ ಗ್ರಹಿಕೆಗಳನ್ನು ಮತ್ತೆ ಮತ್ತೆ ತಿದ್ದಿ ರೂಪಿಸಲಾಗಿರುತ್ತದೆ. ವ್ಯವಸ್ಥೆಯೊಂದು ತಾನು ಬಲಗೊಳ್ಳಲು ಪಡೆಯುವ ಬಲಿಗಳನ್ನು ‘ಬಲಿದಾನ’ ಎಂದು ಸುಲಭವಾಗಿ ಕರೆದು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತದೆ. ವೃತ್ತಿ ಸಂಬಂಧಿತ ಅವಘಡಗಳನ್ನು ಲೆಕ್ಕ ಹಾಕುವಾಗ ನಾವು ಸಾಮಾನ್ಯವಾಗಿ ‘ಆಕ್ಯುಪೇಷನಲ್ ಹೆಜಾರ್ಡ್ಸ್’ ಎನ್ನುವ ಪದ ಬಳಸುತ್ತಿರುತ್ತೇವೆ. ಯಾವ ಕೆಲಸಗಳಲ್ಲಿ ಜೀವಕ್ಕೆ ಎರವಾಗುವ ಸವಾಲುಗಳು ಹೆಚ್ಚಿರುತ್ತವೆ ಎನ್ನುವ ಆಧಾರದಲ್ಲಿ ಇದನ್ನು ವಿಂಗಡಿಸಿಕೊಳ್ಳುತ್ತೇವೆ. ಯಾವಾಗ ಬೇಕಾದರೂ ಹಿಮಬಂಡೆಗಳು ಜಾರಿ ಹಿಮಪಾತದಡಿ ಸಿಲುಕಬಹುದಾದ ಸಿಯಾಚಿನ್ ನಂಥ ಕಠಿಣ ಭೌಗೋಳಿಕ ಪ್ರದೇಶದಲ್ಲಿ ಕಾವಲು ಕಾಯುವುದು; ಯಾವುದೇ ಆಕ್ಸಿಜನ್ ಸಿಲಿಂಡರುಗಳನ್ನಾಗಲಿ, ಮಾಸ್ಕ್ ಗಳನ್ನಾಗಲಿ ನೀಡದೆ ಕೇವಲ ಬುಡ್ಡಿದೀಪವನ್ನು, ಒಂದಿಷ್ಟು ಬಿದಿರಿನ ಬೊಂಬುಗಳನ್ನೂ ಕೈಗಿತ್ತು ಮ್ಯಾನ್ ಹೋಲ್ ಗಳೆಂಬ ಸಾವಿನ ಕೂಪಗಳಿಗೆ ಪೌರಕಾರ್ಮಿಕರನ್ನು ದೂಡುವುದು, ಅಗ್ನಿ ರಕ್ಷಕ ಕವಚಗಳೇ ಇಲ್ಲದೆ ಕೈಯಲ್ಲೊಂದು ನೀರಿನ ಜೆಟ್ ಅಥವಾ ಅಗ್ನಿ ನಂದಿಸುವ ಸಿಲಿಂಡರ್ ನೀಡಿ ಹೊಗೆ ತುಂಬಿ ಧಗಧಗಿಸುತ್ತಿರುವ ಕಟ್ಟಡವೊಂದಕ್ಕೆ ಬೆಂಕಿ ನಂದಿಸಲು ಕಳುಹಿಸುವುದು, ಇಪ್ಪತ್ತು ಮೂವತ್ತು ವರ್ಷ ಹಳೆಯ ತುಪಾಕಿಗಳನ್ನೂ, ಬೆತ್ತಗಳನ್ನೂ ನೀಡಿ ಉಗ್ರರ ವಿರುದ್ಧ ಕಾರ್ಯಾಚರಣೆ ಮಾಡಿ ಎಂದು ಹೇಳುವುದು, ಅಷ್ಟೇ ಏಕೆ ಬೆಳೆದ ಬೆಳೆಗೆ ಬೆಲೆ ಸಿಗದಂತ ವ್ಯವಸ್ಥೆಯನ್ನು ನಿರ್ಮಿಸಿ ಬಡ ರೈತ ಕೀಟನಾಶಕ ಸೇವಿಸುವಂತೆ ಮಾಡುವುದು – ಇವುಗಳನ್ನೆಲ್ಲ ‘ಆಕ್ಯುಪೇಷನಲ್ ಹೆಜಾರ್ಡ್ಸ್’ ಎಂದು ಸತ್ಯಕ್ಕೆ ಹತ್ತಿರವಾಗಿ ನೋಡುವುದನ್ನು ಕಲಿತರೆ ಇವುಗಳಿಗೆ ಹೇಗೆ ಪರಿಹಾರ ಹುಡುಕಬಹುದು ಎನ್ನುವ ಬಗ್ಗೆ ನಾವು ಒಂದು ಸಮಾಜವಾಗಿ ಗಂಭೀರವಾಗಿ ಪ್ರತಿಕ್ರಿಯಿಸುವುದು ಸಾಧ್ಯವಾಗುತ್ತದೆ. ನಮ್ಮನ್ನಾಳುವ ಸರ್ಕಾರಗಳ ಬೇಜವಾಬ್ದಾರಿ ನಡೆಗಳನ್ನು ಗುರುತಿಸಿ ತಕ್ಕ ಪಾಠ ಕಲಿಸುವುದಕ್ಕೆ ದಾರಿಯಾಗುತ್ತದೆ.
35 ಅಡಿ ಹಿಮದ ರಾಶಿಯಡಿ ಹನುಮಂತಪ್ಪ ಮತ್ತವನ ಸಂಗಡಿಗರು ಸಿಲುಕಿದಾಗ ಅವರ ದೇಹ, ಧಮನಿಗಳು ಮರಗಟ್ಟಿದ್ದು ಸಹಜವೇ, ಆದರೆ ಹೀಗಾಗಲು ಕಾರಣವಾಗಿದ್ದು ಮಾತ್ರ ಎಂದೋ ಮರಗಟ್ಟಿ ಹೃದಯಹೀನವಾಗಿರುವ ನಮ್ಮ ವ್ಯವಸ್ಥೆ. ನಮ್ಮ ಸೈನಿಕರ ಸಾವಿನಲ್ಲಿ ದೇಶಪ್ರೇಮ, ದೇಶಭಕ್ತಿಯನ್ನು ವಿಜೃಂಭಿಸುತ್ತಿರುವ ನಾವುಗಳು ಸದಾಕಾಲ ಬದುಕಿನ ಅಸ್ತಿತ್ವವನ್ನೇ ಅನಿಶ್ಚಿತತೆಯೆಡೆಗೆ ದೂಡುವ ಪರಿಸ್ಥಿತಿಯಲ್ಲಿ ಅವರನ್ನಿರಿಸಿರುವ ಬಗ್ಗೆ ಸೊಲ್ಲೆತ್ತದವರಾಗುತ್ತೇವೆ. ಈ ಎಲ್ಲದರ ಬಗ್ಗೆ ಅರಿವಿದ್ದೂ ಅವರು ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ದೇಶಪ್ರೇಮವೊಂದೇ ಕಾರಣವೆಂದು ಬಲವಾಗಿ ನಂಬಿಕೊಳ್ಳುತ್ತೇವೆ. ಹಾಗೊಂದು ವೇಳೆ ದೇಶಪ್ರೇಮವೊಂದೇ ಕಾರಣವಾಗಿದ್ದರೆ ನಮ್ಮಲ್ಲಿ ದೈಹಿಕ ಅರ್ಹತೆಯುಳ್ಳ ಎಷ್ಟೆಲ್ಲ ಮಂದಿ ಏಕೆ ಸೈನ್ಯವನ್ನು ಸೇರುತ್ತಿಲ್ಲ ಎನ್ನುವ ಬಗ್ಗೆ ವಿಮರ್ಶಿಸಿಕೊಳ್ಳದೆ ಹೋಗುತ್ತೇವೆ. ಸಾವನ್ನು ಯಾರೂ ಗೆದ್ದವರಿಲ್ಲ, ಸಾವಿನಿಂದ ಮುಕ್ತವಾದ ಜೀವವಿಲ್ಲ, ಹಾಗೆಂದು ಸಾವಿನೆದುರಿಗೆ ಯಾರನ್ನೇ ಆಗಲಿ ದಿನಂಪ್ರತಿ ಜೂಜಿಗೆ ದೂಕುವುದಿದೆಯಲ್ಲ ಅದು ಅಕ್ಷಮ್ಯ. ವಿಪರ್ಯಾಸವೆಂದರೆ ಹೀಗೆ ಮಾಡುವುದು ಎಲ್ಲ ಪ್ರಭುತ್ವಗಳ ಚಹರೆಯಾಗಿದೆ. ನಾವಿಲ್ಲಿ ಸುಖವಾಗಿರಲು ಕಾರಣ ಗಡಿಯಲ್ಲಿ ತಮ್ಮ ಪ್ರಾಣವನ್ನು ಒತ್ತೆಯಿಟ್ಟಿರುವ ಸೈನಿಕರು ಎಂದು ಹೇಳಿಕೊಳ್ಳುವ ಪ್ರಭುತ್ವಗಳು, ತಾವು ಸೃಷ್ಟಿಸಿರುವ ಸನ್ನಿವೇಶ ಹಾಗೂ ಜಟಿಲತೆಗಳು ಹೇಗೆ ಈ ಮುಗ್ಧರ ಜೀವದೊಂದಿಗೆ ದಿನಂಪ್ರತಿ ಚೆಲ್ಲಾಟವಾಡುತ್ತಿವೆ ಎನ್ನುವುದನ್ನು ವಿವರಿಸಲು ಪ್ರಜ್ಞಾಪೂರ್ವಕವಾಗಿ ಮರೆಯುತ್ತವೆ.
‘ಸಾಯುವುದೇ ಆದರೆ ದೇಶವೇ ಅಭಿಮಾನಪಡುವಂಥ ಸಾವು ನಮ್ಮದಾಗಬೇಕು’, ಎಂದು ನಂಬಿಕೊಂಡಿರುವ, ನಂಬಿಸಲಾಗಿರುವ ಸಮಾಜ ನಮ್ಮದು. ಇಂಥ ‘ಅಭಿಮಾನ’ವನ್ನು ತರದ ಸಾವುಗಳು ‘ಮಲದ ಗುಂಡಿ’ಯಲ್ಲಿಯೇ ಸಮಾಧಿಯಾಗುತ್ತವೆ. ಸಾವಿನಲ್ಲಿಯೂ ಹೇಗೆ ಅನ್ಯಾಯವನ್ನು ಎಸಗುವುದು ಎನ್ನುವುದನ್ನು ನಮ್ಮ ಪ್ರಭುತ್ವ ಹಾಗೂ ಸಮಾಜ ಪ್ರತ್ಯಕ್ಷ ತೋರಿಸಿಕೊಡುತ್ತಿದ್ದರೂ ನಮ್ಮ ‘ಗ್ರಹಿಕೆಗಳು’ ಅದನ್ನು ಮರೆಮಾಚುತ್ತವೆ! ಇಷ್ಟು ಮಾತ್ರವೇ ಅಲ್ಲ, ಬಡ ರೈತ ಬದುಕಿನ ದಾರಿ ಕಾಣದೆ ನೇಣು ಹಾಕಿಕೊಳ್ಳುವಾಗ ‘ರೈತರು ಕೃಷಿಯನ್ನೇ ನೆಚ್ಚಿಕೊಳ್ಳದೆ ಬೇರೆ ಪೂರಕ ವಾಣಿಜ್ಯ ಚಟುವಟಿಕೆಗಳತ್ತ ತೊಡಗಿಕೊಳ್ಳಬೇಕು’, ಎಂದು ಪುಕ್ಕಟೆ ಸಲಹೆ ಕೊಡುತ್ತೇವೆ. ‘ಕೃಷಿಯನ್ನು ಬಿಟ್ಟು, ಕೌಶಲವನ್ನು ಕಲಿಯಿರಿ’, ಎಂದು ಹೇಳುವ ವಿತ್ತೀಯ ಚಿಂತಕರೂ ನಮ್ಮ ನಡುವೆ ಇದ್ದಾರೆ. ಆದರೆ, ಯಾರಾದರೂ ‘ಸೇನೆಯನ್ನು ಸೇರಿ ನಿಮ್ಮ ಯೌವನವನ್ನು, ಕೌಟುಂಬಿಕ ಜೀವನವನ್ನು ಹಾಳುಮಾಡಿಕೊಳ್ಳಬೇಡಿ, ಗಡಿ ಕಾಯವುದು ಬಿಡಿ, ಕೌಶಲ ರೂಢಿಸಿಕೊಳ್ಳಿ’, ಎಂದು ಹೇಳಿದ್ದನ್ನು ಕೇಳಿದ್ದೀರಾ?! ಹಾಗೆ ಹೇಳಿದರೆ ಅದು ದೇಶದ್ರೋಹವಾಗುತ್ತದೆ. ಅದೇ ರೈತನನ್ನು ಕೃಷಿ ಮಾಡುವುದನ್ನು ಬಿಡಲು ಹೇಳಿದಾಗ ಅದು ‘ದೇಶದ್ರೋಹ’ ಎನಿಸದು! ಪೌರ ಕಾರ್ಮಿಕರ ಸಾವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದೆ ಹೋದಾಗ ಅದು ‘ಮಾನವೀಯತೆಗೆ ಬಗೆದ ದ್ರೋಹ’ ಎನಿಸದು!
ಯಾವುದೇ ಸಾವನ್ನು ವಿವರಿಸಲು ಪ್ರಭುತ್ವ ಹಾಗೂ ಸಮಾಜಗಳು ಯಾವ ಭಾಷೆಯನ್ನು ಬಳಸುತ್ತವೆ ಎನ್ನುವುದರ ಮೇಲೆ ಅವುಗಳು ಯಾವ ಅಂಶಗಳಿಗೆ ಒತ್ತು ನೀಡುತ್ತಿವೆ ಎನ್ನುವುದನ್ನು ಅರಿಯುವ ಪ್ರಯತ್ನ ಮಾಡಬಹುದು. ಗಣ್ಯಮಾನ್ಯರು ಅಗಲಿದಾಗ ‘ಭರಿಸಲಾಗದ ನಷ್ಟ’, ‘ತುಂಬಲಾರದ ನಷ್ಟ’, ಉಂಟಾದರೆ, ಸೈನಿಕರು ಅಗಲಿದಾಗ ‘ಅಮರ ತ್ಯಾಗ, ಬಲಿದಾನ’ಗಳ ಪ್ರಸ್ತಾಪವಾಗುತ್ತದೆ. ಉಳಿದ ಸಾವುಗಳು, ‘ಅಗಲಿದವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ’, ಎನ್ನುವಲ್ಲಿಗೆ ಸೀಮಿತಗೊಳ್ಳುತ್ತವೆ. ಸೈನಿಕರನ್ನು ‘ಅಮರ’ರನ್ನಾಗಿಸುವ ಉದ್ದೇಶದ ಹಿಂದೆ ಏನಿರಬಹುದು? ತುಂಬಿದ ಜೀವನವನ್ನು ಬಾಳಿ ಬದುಕಬಹುದಾದ ಸಾಧ್ಯತೆಯನ್ನು ಅವರಿಂದ ಕಿತ್ತುಕೊಂಡು, ಅವರ ಆಯಸ್ಸನ್ನು ಮುರಿದ ಕಾರಣಕ್ಕೆ ‘ಅಮರ’ರೆಂದು ಕರೆದು ನಮ್ಮ ಜವಾಬ್ದಾರಿಗಳಿಂದ ವಿಮುಖರಾಗಬಹುದೇ? ಇನ್ನು, ಪ್ರಭುತ್ವಗಳು ನಿರ್ಮಿಸಿರುವ ನಿರ್ಲಜ್ಜ, ನಿಷ್ಕರುಣೆಯ ವ್ಯವಸ್ಥೆಯಡಿ ಸಿಲುಕಿ ಆಯಸ್ಸಿಗೂ ಮುನ್ನವೇ ಬದುಕಿಗೆ ವಿದಾಯ ಹೇಳುವಂಥ ಕಾರ್ಮಿಕ, ಶ್ರಮಿಕ ವರ್ಗಗಳ ಜೀವ ‘ಅಮರ’ವಾಗುವುದಿಲ್ಲ ಏಕೆ?
ಯಾವುದೇ ಪ್ರಭುತ್ವವಾದರೂ ನೇರವಾಗಿ ತನ್ನ ಉಳಿವಿಗೆ ಸಹಕರಿಸುವಂಥ ಜೀವಗಳನ್ನು, ಭಾವಾವೇಶಕ್ಕೆ ಕಾರಣವಾಗುವಂಥ ಸಾವುಗಳನ್ನು ‘ಅಮರವಾಗಿಸುವ’ ಮೂಲಕ, ‘ತ್ಯಾಗ, ಬಲಿದಾನಗಳ’ ಹೆಸರಿಗೆ ಅರ್ಪಿಸುವ ಮೂಲಕ ಪರೋಕ್ಷವಾಗಿ ಅಂಥ ಸಾವುಗಳು ಶ್ರೇಷ್ಠ ಎನ್ನುವ ಭಾವನೆಯನ್ನು, ನಂಬಿಕೆಗಳನ್ನು ಗಟ್ಟಿಯಾಗಿ ಸಮಾಜದಲ್ಲಿ ಪ್ರತಿಷ್ಠಾಪಿಸುತ್ತಿರುತ್ತವೆ. ಆ ಮೂಲಕ ತಮ್ಮ ತಪ್ಪುಗಳೆಲ್ಲವನ್ನೂ ಒಂದೇ ಏಟಿಗೆ ‘ಸರಿ’ ಮಾಡಿಕೊಳ್ಳುತ್ತವೆ. ‘ದೇಶಭಕ್ತಿ’ ಎನ್ನುವ ವಿವರಣೆಯೊಂದು ಇವುಗಳ ಬತ್ತಳಿಕೆಯಲ್ಲಿ ಇಲ್ಲದೆ ಹೋಗಿದ್ದರೆ ಬಹುತೇಕ ಜಗತ್ತಿನ ಎಲ್ಲ ಪ್ರಭುತ್ವಗಳೂ ಬಕ್ಕಲು ಬೋರಲಾಗಿ ಮಲಗಿರುತ್ತಿದ್ದವು.
ಅಂದಹಾಗೆ, ಯಾರಾದರೂ ಪೌರಕಾರ್ಮಿಕ ‘ಅಮರನಾದ’ ಬಗ್ಗೆ ನಿಮಗೆ ಮಾಹಿತಿ ಇದೆಯೇ?