ಮತ್ತೆ ಮರುಹುಟ್ಟು ಪಡೆಯಬೇಕಾಗಿತ್ತು -ದೇವನೂರ ಮಹಾದೇವ

[ಹೈದ್ರಾಬಾದ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ 17.1.2016ರಂದು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ, ಆ ಕುರಿತು ದೇವನೂರ ಮಹಾದೇವ ಅವರು ಆಡಿದ ಒಡಲಾಳದ ಮಾತುಗಳ ಬರಹ ರೂಪ…. ನಮ್ಮ ಮರು ಓದಿಗಾಗಿ]
ರೋಹಿತ್ ವೇಮುಲನ ಬಗ್ಗೆ ಒಂದು ಸಣ್ಣ ಟಿಪ್ಪಣಿ ಬರೆಯಲು ಕೂತಾಗಲೆಲ್ಲಾ ರೋಹಿತನ ಮುಖ, ಆತನು ಬರೆದ ಡೆತ್‍ನೋಟ್ ಕಲೆಸಿಕೊಂಡು ಕಣ್ಮುಂದೆ ನಿಲ್ಲುತ್ತದೆ. ಇದಕ್ಕೆ ಪದಗಳು ಸಿಗುತ್ತಿಲ್ಲ.
…ಸಾಯುವ ಕ್ಷಣಗಳಲ್ಲಿ ಬರೆದ ಆ ಡೆತ್‍ನೋಟ್‍ಅನ್ನು ರೋಹಿತ್ ಯಾರಿಗೆ ಬರೆದ? ಓದಿದರೆ ಈ ಭೂಮಿ ಉದ್ದೇಶಿಸಿ ಮಾತಾಡುತ್ತಿದ್ದಾನೆ ಅನ್ನಿಸುತ್ತದೆ. ಅವನು ಸತ್ತು, ಆ ಸಾವಿಗೆ ಯಾರೂ ಕಾರಣರಲ್ಲ ಎಂದು ಹೇಳುವ ರೋಹಿತ್ ಈಗ ಬದುಕುತ್ತಿರುವವರಿಗೆ ಅಂದರೆ ನಾಳೆ ಸಾಯುವವರಿಗೆ ಅಣುಕಿಸುತ್ತಿದ್ದಾನೊ ಅಥವಾ ಸಾಂತ್ವನ ಹೇಳುತ್ತಿದ್ದಾನೊ?
ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದ ರೋಹಿತನು ಡಿಸೆಂಬರ್ 18, 2015ರಲ್ಲಿ ಉಪಕುಲಪತಿಗೆ ಬರೆದ ಪತ್ರದಲ್ಲಿ- 1) “ಎಲ್ಲಾ ದಲಿತ ವಿದ್ಯಾರ್ಥಿಗಳಿಗೂ ಅವರ ಪ್ರವೇಶಾತಿಯ ಸಮಯದಲ್ಲಿ 10 ಮಿಲಿಗ್ರಾಂ ಸೋಡಿಯಂ ಆಕ್ಸೈಡ್ ಕೊಡಿ. ಅಂಬೇಡ್ಕರ್‍ಅನ್ನು ಓದಬೇಕು ಅನ್ನಿಸಿದಾಗ ಅವರಿಗೆ ಅದನ್ನು ತಿನ್ನಲು ಸೂಚನೆ ನೀಡಿ”, 2) “ಒಂದು ಒಳ್ಳೆಯ ಹಗ್ಗವನ್ನು ಎಲ್ಲಾ ದಲಿತ ವಿದ್ಯಾರ್ಥಿಗಳ ಕೊಠಡಿಗೆ ನಿಮ್ಮ ಗೆಳೆಯರಾದ ಮಹಾನ್ ವಾರ್ಡನ್ ಅವರಿಗೆ ಹೇಳಿ ಸರಬರಾಜು ಮಾಡಿಸಿ.” ಈ ಮಾತುಗಳಲ್ಲಿ ರೋಹಿತನ ಅಗ್ನಿಪರ್ವತದಿಂದ ಹೊಮ್ಮುವ ಲಾವರಸದಂಥ ಮಾತುಗಳಲ್ಲಿ ಆತನ ಸಾವಿನ ಕಾರಣ ಅಡಗಿ ಕೂತಿದೆ.
ಆದರೂ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದು ನೇಣಿಗೆ ಜೀವ ಕೊಡುವ ರೋಹಿತನ ಪ್ರಜ್ಞೆ ಹೇಗಿರಬಹುದು? ತನ್ನ ಸುತ್ತಲ ಜಗತ್ತು ಹೇಗೆ ಕಂಡಿರಬಹುದು? ಈ ಜಾತಿ ಈ ಮತ ಈ ಸುಳ್ಳು, ಈ ತಾರತಮ್ಯ ವಂಚನೆಗಳಲ್ಲಿ ಬದುಕು ಸವೆಸುತ್ತಿರುವ ತನ್ನ ಸುತ್ತಲ ಸಮೂಹವು ಕ್ಷುದ್ರಜೀವಿಗಳು, ಹುಳುಗಳು ಎಂದು ಅನ್ನಿಸದಿದ್ದರೆ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆಯಲು ರೋಹಿತನಿಗೆ ಸಾಧ್ಯವಾಗುತ್ತಿತ್ತೇ? ಅದಕ್ಕೇ ಆತನಿಗೆ ಈ ಬದುಕು ಅಸಹ್ಯ ಅನ್ನಿಸಿರಬೇಕು. ಸಹ್ಯ ಮಾಡಿಕೊಳ್ಳಲು ಆತ ಆಕಾಶಕ್ಕೆ ನೆಗೆದು ಬಿಡುತ್ತಾನೇನೊ?
ಹೀಗಿದ್ದೂ, ಭಾರತವನ್ನಾಳುವ ಸಂಸತ್‍ನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃ ತಿ ಇರಾನಿಯವರು “ರೋಹಿತ್ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದ್ದಾನೆ” ಎಂದು ಹೇಳಿ ಅದು ಸಾಲದೆ ಸುಳ್ಳಿನ ಹೂಮಾಲೆ ಕಟ್ಟಿ ಸಂಸತ್‍ಅನ್ನೆ ಕುಬ್ಜಗೊಳಿಸಿಬಿಟ್ಟರು. ನಾಚಿಕೆಯನ್ನೇ ಕೊಂದುಬಿಟ್ಟರು. ಸಂಸತ್‍ಅನ್ನು ಸಂವೇದನಾಹೀನ ಕುಷ್ಠ ಜೀವಿಗಳ ಸಂತೆ ಮಾಡಿಬಿಟ್ಟರು. ಇರಲಿ,
ವಿದೇಶಗಳಲ್ಲಿ ಉನ್ನತ ವ್ಯಾಸಂಗ ಪೂರೈಸಿ ಅಂಬೇಡ್ಕರ್, 1917ರಲ್ಲಿ ಭಾರತದ ಬರೋಡಾಕ್ಕೆ ಬಂದು ಎಲ್ಲೂ ಮನೆ ಸಿಗದೆ ಕೊನೆಗೆ ಪಾರ್ಸಿ ಹೋಟೆಲಿನಲ್ಲಿ ಸುಳ್ಳು ಜಾತಿ ಹೇಳಿ ಉಳಿದುಕೊಂಡಿದ್ದಾಗ ಮಹರ್ ಎಂದು ಗೊತ್ತಾಗಿ ಹೋಟೆಲ್‍ನಿಂದ ಅಂಬೇಡ್ಕರ್‍ನನ್ನು ಅವಮಾನಕರವಾಗಿ ಹೊರ ಹಾಕಲ್ಪಟ್ಟ ಆ ದಿಕ್ಕೆಟ್ಟ ಸಂದರ್ಭದ ಬಗ್ಗೆ ಅಂಬೇಡ್ಕರ್ ಬರೆಯುತ್ತಾ “ನನ್ನ ತಲೆ ಖಾಲಿಯಾಗಿತ್ತು” ಎನ್ನುತ್ತಾರೆ. ವೇಮುಲನು ತನ್ನ ಡೆತ್‍ನೋಟ್‍ನಲ್ಲಿ “ಈ ನಿಮಿಷದಲ್ಲಿ ನಾನು… ಖಾಲಿಯಾಗಿದ್ದೇನೆ” ಎಂದು ಬರೆದಿದ್ದಾನೆ. ಜರ್ಝರಿತ ಆ ಅಮಾನವೀಯ ಆ ಖಾಲಿಯಾದ ಸ್ಥಿತಿಯಲ್ಲಿ ಸಂಭಾಳಿಸಿಕೊಂಡು ಅಂಬೇಡ್ಕರ್ ಮರುಹುಟ್ಟು ಪಡೆಯುತ್ತಾರೆ. ಧಾರಣಾಶಕ್ತಿಯನ್ನು ಕೂಡಿಸಿಕೊಂಡು ವಿಷಕಂಠನಂತಾಗುತ್ತಾರೆ. ಆದರೆ ವೇಮುಲ, ಅಂಬೇಡ್ಕರ್‍ರ ಶೇಕಡ ಹತ್ತರಷ್ಟು ಅವಮಾನ, ತಾರತಮ್ಯಗಳನ್ನು ಅನುಭವಿಸದ ವೇಮುಲ, ತನ್ನ ಅಸಹಾಯಕ ಸಮುದಾಯಕ್ಕೆ ಬೆಳಕಾಗಬೇಕಿದ್ದ ವೇಮುಲ, ಆ ಖಾಲಿಯಾದ ಸ್ಥಿತಿಯೊಳಗಿಂದಲೇ ಅಂಬೇಡ್ಕರ್‍ರಂತೆ ಮರುಹುಟ್ಟು ಪಡೆಯಬೇಕಾಗಿತ್ತು, ಪಡೆಯಬೇಕಾಗಿತ್ತು ಅಂತ ಅವನ ಮುಖ ನೆನಪಾದಾಗಲೆಲ್ಲಾ ಅನ್ನಿಸುತ್ತದೆ.