ಜಿ.ಮಾದೇಗೌಡ ಎಂಬ ಹೆಸರು ಮಂಡ್ಯ ಜಿಲ್ಲೆಗೆ ಮಾತ್ರವಲ್ಲ, ಇಡೀ ಕರ್ನಾಟಕ ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಚಿರಪರಿಚಿತವಾದ ಹೆಸರು. ಆರು ಬಾರಿ ಶಾಸಕರಾಗಿ, ಮೂರು ಬಾರಿ ಮಂಡ್ಯ ಜಿಲ್ಲೆಯನ್ನು ಸಂಸದರಾಗಿ ಪ್ರತಿನಿಧಿಸಿದ ಗೌಡರು ಗುಂಡೂರಾವ್ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದರು. ನೇರ ಮತ್ತು  ನಿಷ್ಟರ ನುಡಿಗಳಿಗೆ ಹಾಗೂ ತಮ್ಮ ಪಾರದರ್ಶಕ ವ್ಯಕ್ತಿತ್ವದಿಂದ ಎಲ್ಲರಿಂದಲೂ ಗೌರವ ಮತ್ತು ಪ್ರೀತಿಗೆ ಪಾತ್ರರಾದವರು. ಹುಟ್ಟಿದೂರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಬೇಕು ಎನಿಸಿದಾಗ, ತಾಯಿಯ ಹೆಸರಿನಲ್ಲಿ ಹುಟ್ಟಿ, ಆಡಿ, ಬೆಳೆದ ತೊಟ್ಟಿ ಮನೆಯನ್ನು ಸರ್ಕಾರಕ್ಕೆ ದಾನ ನೀಡಿ, ಆಸತ್ರೆಯನ್ನು ತಂದು ಎಲ್ಲಾ ರಾಜಕಾರಣಿಗಳಿಗೆ ಮಾದರಿಯಾದವರು.
ಸಾಯುವತನಕ ತಮ್ಮ ಅಂಡುಗಳು ಅಧಿಕಾರದ ಕುರ್ಚಿಗೆ ಅಂಟಿಕೊಂಡಿರಬೇಕು ಎನ್ನುವ ಈ ಕಾಲದ ರಾಜಕಾರಣಿಗಳಿಗಿಂತ ಭಿನ್ನವಾಗಿ, “ ನಾನು ಚುನಾವಣೆಯಲ್ಲಿ ಮತದಾರರಿಗೆ ಹಣ ಮತ್ತು ಹೆಂಡ ಹಂಚಲಾರೆ” ಎಂದು ಘೋಷಿಸಿ ಇಪ್ಪತ್ತು ವರ್ಷಗಳ ಹಿಂದೆ ತಮ್ಮ ರಾಜಕೀಯ ಬದುಕಿಗೆ ವಿದಾಯ ಹೇಳಿದರು. ಮಂಡ್ಯ ಅಥವಾ ಕರ್ನಾಟಕದ ನೆಲ-ಜಲದ ವಿಚಾರ ಬಂದಾಗ ಈಗಿನ ಎಂಬತ್ತರ ಇಳಿ ವಯಸ್ಸಿನಲ್ಲು ಸಹ ತಮ್ಮ ಹೆಗಲ ಮೇಲಿನ ಟವಲ್ ಕೊಡವಿಕೊಂಡು, ಪಂಚೆಯನ್ನು ಎತ್ತಿಕಟ್ಟಿಕೊಂಡು, ಬೀದಿಗೆ ಇಳಿಯಬಲ್ಲ ನೈತಿಕ ಸಿಟ್ಟನ್ನು ಕಾಪಾಡಿಕೊಂಡು ಬಂದವರು. ಕಾವೇರಿ ನೀರು ಹಂಚಿಕೆ ವಿವಾದ ಭುಗಿಲೆದ್ದಾಗಲೆಲ್ಲಾ ಮಂಡ್ಯ, ಮೈಸೂರು ಮತ್ತು ಕೊಡಗು ಜಿಲ್ಲೆಯ ರೈತರ ಚಳುವಳಿಯನ್ನು ಮುನ್ನೆಡಿಸಿದವರು. ಒಬ್ಬ ರಾಜಕಾರಣಿಯಾಗಿದ್ದುಕೊಂಡು, ಅಂತರಂಗದಲ್ಲಿ ಗಾಂಧೀಜಿಯವರ ಪರಮ ಆರಾಧಕರಾಗಿರುವ ಮಾದೇಗೌಡರು ಬಾಲ್ಯದಿಂದಲೂ ಗಾಂಧೀಜಿಯವರ ತತ್ವ ಮತ್ತು ಚಿಂತನೆಗಳನ್ನು ಮೈಗೂಡಿಸಿಕೊಂಡು ಬೆಳದವರು. ಈ ಕಾರಣಕ್ಕಾಗಿ ತಮ್ಮ ರಾಜಕೀಯ ನಿವೃತ್ತಿಯ ನಂತರ ಮಂಡ್ಯ ನಗರದ ಹೃದಯ ಭಾಗದಲ್ಲಿ ಹತ್ತು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಎಲ್ಲಿಯೂ ಕಾಣದ ಅಪರೂಪದ ಗಾಂಧಿಭವನವನ್ನು ಒಂದು ಕೋಟಿ, ಎಪ್ಪತ್ತೈದು ಲಕ್ಷ ರೂಪಾಯಿ ಹಣದಲ್ಲಿ ನಿರ್ಮಿಸಿ, ಅದನ್ನು ಗಾಂಧೀಜಿಯವರು ಕನಸಿದ ಮತ್ತು ಗ್ರಾಮಭಾರತದ ಪರಿಕಲ್ಪನೆಯ ತಳಹದಿಯ ಮೇಲೆ ನಡೆಸಿಕೊಂಡು ಹೋಗುತ್ತಿದ್ದಾರೆ. ಕಳೆದ ಮಾರ್ಚ್ 13 ರಂದು ಮಂಡ್ಯದ ಗಾಂಧಿ ಭವನದ ವತಿಯಿಂದ ಬಿಡುಗಡೆಯಾದ  ದಿ.ಎಸ್. ವಿಶ್ವನಾಥ್ ರವರ “ ಮಹಾತ್ಮನ ಮಾತು ಮತ್ತು ಮಾರ್ಗ” ಕೃತಿಯ ಬಿಡುಗಡೆಯ ಸಂದರ್ಭದಲ್ಲಿ ಜಿ.ಮಾದೇಗೌಡರು ನನ್ನೊಂದಿಗೆ  ತಮ್ಮ ಕನಸುಗಳನ್ನು ಹಂಚಿಕೊಂಡರು. ನನ್ನದು ಹಾಗೂ ಅವರದು ಕಳೆದ ಮುವತ್ತು ವರ್ಷಗಳಿಂದ ತಂದೆ- ಮಗನ ರೀತಿಯ ಭಾಂಧವ್ಯ. ಹಾಗಾಗಿ ಸಂದರ್ಶನದ ಮಾತುಕತೆ ಕೂಡ ಅಪ್ಪಟ ಮಂಡ್ಯ ಭಾಷೆಯಲ್ಲಿ ನಡೆಯಿತು.

 

ಪ್ರಶ್ನೆ- ಅಪ್ಪಾ, ನೀವು ರಾಜಕಾರಣಿಯಾಗಿದ್ದವರು ಗಾಂಧೀಜಿಯವರ ಪ್ರಭಾವ ನಿಮ್ಮಮೇಲೆ ಹೇಗೆ ಉಂಟಾಯಿತು?

ನಾನು ಬಾಲಕನಾಗಿ ವಿದ್ಯಾರ್ಥಿಯಾಗಿದ್ದಾಗಲೇ ಗಾಂಧೀಜಿಯ ಹೆಸರು ಕೇಳಿದ್ದೆ. 1942 ಅಂತ ಕಾಣ್ತದೆ. ಮಂಡ್ಯ ಮುನ್ಸಿಪಲ್ ಹೈಸ್ಕೂಲ್ ನಲ್ಲಿ ಓದ್ತಾ ಇದ್ದೆ. ಆವಾಗ ಕಂದಾಯ ಕೊಡಬೇಡಿ, ಸ್ಕೂಲ್ ಫೀಜ್ ಕಟ್ಟಬೇಡಿ, ಸರ್ಕಾರದ ಯಾವುದೇ ಬಾಕಿ ಕಟ್ಟಬೇಡಿ ಅಂತಾ ನಮ್ಮ ಜಿಲ್ಲೇಲಿ ದೊಡ್ಡ ಚಳುವಳಿ ನಡೀತು. ಆವಾಗ ನಾವು ಹುಡುಗ್ರು ಸ್ಕೂಲ್ ಗೆ ಹೋಗದೆ, ಹೋರಾಟಗಾರರ ಜೊತೆ ಬೀದಿಯಲ್ಲಿ ಘೋಷಣೆ ಕೂಗ್ತಾ ಹೋಗ್ತಾ ಇದ್ವಿ. ಆವಾಗ ನನಗೆ ಗಾಂಧಿ ಹೆಸರು ಮೊದಲ್ನೇ ಸಲ ಪರಿಚಯವಾಯ್ತು.
ಪ್ರಶ್ನೆ- ನೀವು ಹೈಸ್ಕೂಲು ಮಂಡ್ಯ ನಗರದಲ್ಲಿ ಓದಿದಿರಾ?

ನಮ್ಮವ್ವ ಮಂಡ್ಯದ ಹೊಸಳ್ಳಿಯವಳು ಅಲ್ವಾ? ನಮ್ಮೂರು ಗುರುದೇವರಹಳ್ಳೀಲಿ ಆ ಕಾಲದಲ್ಲಿ ಯಾವ್ ಸ್ಕೂಲ್ ಇದ್ದೊ? ಪ್ರೈಮರಿ ಸ್ಕೂಲ್, ಹೈಸ್ಕೂಲ್, ಮಂಡ್ಯದಲ್ಲಿ ಓದಿದೆ. ಆ ಮೇಲೆ ಮೈಸೂರಿಗೆ ಹೋಗಿ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಮಾಡ್ದೆ. ಬೆಂಗಳೂರಿಗೆ ಹೋಗಿ ಲಾ ಮಾಡ್ದೆ. ಮೈಸೂರಿಗೆ ಡಿಗ್ರಿ ಓದಕೆ ಹೋದ ಮೇಲೆ ಗಾಂಧೀಜಿಯವರನ್ನು ಓದಕೆ ಶುರು ಮಾಡ್ದೆ. ಆ ಮೇಲೆ ಕೆ.ವಿ. ಶಂಕರೇಗೌಡ್ರು ಮುಖಾಂತರ ಗಾಂಧಿ ಪ್ರಭಾವಕ್ಕೆ ಒಳಗಾದೆ.

 

ಪ್ರಶ್ನೆ- ನೀವು ವಿದ್ಯಾಭ್ಯಾಸ ಮುಗಿಸಿ, ಮಂಡ್ಯದಲ್ಲಿ ವಕೀಲಿ ವೃತ್ತಿ ಮಾಡ್ತಾ ಇದ್ರಿ. ರಾಜಕೀಯಕ್ಕೆ ಎಂಗೆ ಪ್ರವೇಶ ಮಾಡಿದ್ರಿ?

ಮಗಾ, ನಿನ್ನ ಜೊತೆ ಸುಳ್ಳು ಯಾಕೆ ಹೇಳ್ಲಿ? ನಾನೇನು ಬುದ್ಧಿವಂತ ವಿದ್ಯಾರ್ಥಿಯಲ್ಲ. ಮಹಾರಾಜ ಕಾಲೇಜಲ್ಲಿ ನಮಗಿಂತ ಸೀನಿಯರ್ ಆಗಿದ್ದ ಎಸ್.ಎಂ.ಕೃಷ್ಣ ಬುದ್ಧಿವಂತ ಆಗಿದ್ರು. ನಾನು ಫೇಲಾಗಿ, ಪೇಲಾಗಿ ಅಂಗೊ ಇಂಗೋ ಎಲ್ಲಾನೂ ಪಾಸ್ ಮಾಡಿಕೊಂಡ್ ಬಂದೆ. ಆ ಮೇಲೆ ಊರಿಗೆ ಹೋಗಿ ಏನು ಮಾಡ್ಲಿ? ನಾನು ಒಂದು ಕರೀಕೋಟ್ ತಗ್ಲಾಕ್ಕೊಂಡು ಮಂಡ್ಯದಲ್ಲಿ ಲಾಯರ್ ಗಿರಿ ಮಾಡ್ತಾ, ಗೆಳೆಯರ ಜೊತೆ  ಇಸ್ಪೀಟ್ ಆಡ್ಕೊಂಡು ಕಾಲ ಕಳೀತಾ ಇದ್ದೆ. 1962 ಅಂತಾ ಕಾಣ್ತದೆ ಆಗ ತಾನೆ ತಾಲ್ಲೂಕು ಬೋರ್ಡ್ ಗಳು ಬಂದಿದ್ವು. ಒಂದಿನ  ಶಂಕರೇಗೌಡ್ರು ನನ್ನನ್ನ ಮತ್ತು ಮಂಚೇಗೌಡನ್ನ ಕರೆಸಿ ನೀವಿಬ್ರು ಮದ್ದೂರು ತಾಲ್ಲೂಕಿನಲ್ಲಿ ಎಲೆಕ್ಷನ್ ಗೆ ನಿಂತ್ ಕಳ್ರಲಾ ಅಂದ್ ಬುಟ್ರು. ನಾವು ಅವರೆದ್ರು ಮಾತಾಡಕೆ ಆದದೆ? ಹೂ ಅಂದೊ, ಚುನಾವಣೆಗೆ ನಿಂತು ಇಬ್ಬರೂ ಗೆದ್ದವು. ಆಮೇಲೆ ನಾನು ಕಿರಿಗಾವಲು ಕ್ರೇತ್ರಕ್ಕೆ,  ಮಂಚೇಗೌಡ ಮದ್ದೂರು ಕ್ರೇತ್ರಕ್ಕೆ ಎಂ.ಎಲ್.ಎ. ಚುನಾವಣೆಗೆ ನಿಂತ್ಕಂಡ್ವು. ಅದರಲ್ಲೂ ಇಬ್ಬರು ಗೆದ್ದುಬಿಟ್ಟೊ ಇಂಗೆ ನನ್ನ ರಾಜಕೀಯ ಆರಂಭ ಆಯ್ತು ನೋಡು.

 

ಪ್ರಶ್ನೆ- ಅಪ್ಪಾ ಇವೊತ್ತಿಗೂ ನನಗೆ ನಿಮ್ಮ ಬಗ್ಗೆ ಒಂದು ವಿಸ್ಮಯ ಅಂದ್ರೆ, ನನಗೆ ರಾಜಕೀಯ ಬೇಡ, ನಾನು ಚುನಾವಣೇಲಿ ಹಣ, ಹೆಂಡ, ಸಾರಾಯಿ ಹಂಚುವುದಿಲ್ಲ ಎಂದು ಘಂಟಾಘೋಷವಾಗಿ ಸಾರ್ವಜನಿಕವಾಗಿ ಹೇಳಿಕೊಂಡ್ರಿ. ಬಹುಷಃ ಕರ್ನಾಟಕದಲ್ಲಿ ಇಂತಹ ಮಾತನ್ನು ಆಡಿದ ರಾಜಕಾರಣಿ ನೀವೊಬ್ಬರೇ ಅಂತಾ ಕಾಣ್ತದೆ. ಇದರ ಹಿಂದಿನ ಪ್ರೇರಣೆ ಏನು?

ಮಗಾ, ನೀನು 35-40 ವರ್ಷದಿಂದ ನನ್ನನ್ನ ಹತ್ತಿರದಿಂದ ನೋಡಿದ್ದಿ. ಶ್ರೀರಂಗಪಟ್ಟಣದ ನನ್ನ ಅತ್ತೆ-ಮಾವ, ಭಾವಮೈದ ಹಾಗೂ ಅವರ ಮನೆ ಎಲ್ಲಾ ನಿನಗೆ ಗೊತ್ತು. ನಾನು ಮೊದಲ್ನೇ ಸಲ ಎಲೆಕ್ಷನ್ ಗೆ ನಿಂತಾಗ  ಮೂರು ಸಾವಿರನೋ, ನಾಲ್ಕು ಸಾವಿರನೋ ಖರ್ಚಾಗಿತ್ತು. ನಮ್ಮ ಮಾವನ ಮನೇಲಿ ಅಂಬಾಸಿಡರ್ ಕಾರಿತ್ತು. ಭಾವಮೈದ ಅದಕ್ಕೆ ಡ್ರೈವರ್. ಅಷ್ಟೇಯಾ. ಹಳ್ಳಿ ಹಳ್ಳೀಲಿ ಅವರೇ ನಿಂತು ಚಪ್ಪರ ಹಾಕ್ಸಿ ನಾನು ಹೋದ್ರೆ ನನ್ನ ಕೈಲಿ ಭಾಷಣ ಮಾಡ್ಸೋರು. ಅಣ್ಣೂರು ಸಿದ್ಧೇಗೌಡನಂತಹ ಅನೇಕ ಸ್ನಹಿತರಿದ್ರು.ನಾನು ಐದಾರ್ ಬಾರಿ ಎಂ.ಎಲ್.ಎ. ಆದೆ. ಒಂದ್ಸಾರಿ ಮಿನಿಸ್ಟ್ತು ಆದೆ. ಆಗೆಲ್ಲಾ ನನ್ನ ಎಲೆಕ್ಷನ್ ಖರ್ಚು ಹತ್ತೋಂಬತ್ತು ಸಾವ್ರ ಮೀರ್ತೀರಲಿಲ್ಲ ನೋಡು? ನಾನು ಎಂ.ಪಿ. ಎಲೆಕ್ಷನ್ ಗೆ ಅಂತಾ ಖರ್ಚು ಮಾಡಿರದು ಎರಡ್ ಮೂರು ಲಕ್ಷ ದಾಟ್ತಿರಲಿಲ್ಲ. ಅದೆಲ್ಲಾ ಕಾರ್ ಬಾಡಿಗೆ, ಪೆಟ್ರೋಲ್ , ಊಟ ತಿಂಡಿಗೆ ಖರ್ಚಾಗದು. ನಮ್ಮ ಕಾಲೇಜು ಮೇಸ್ಟ್ರು, ಆಡಳಿತ ಮಂಡಳಿ ಸದಸ್ಯರು ಕೈಲಿ ಹಾಕ್ಕಂಡ್ ಮಾಡೋರು. ಆ ಮೇಲೆ ಬಂತು ನೋಡಪ್ಪಾ, ಯಪ್ಪಾ ಈಗಿನ  ಎಲೆಕ್ಸನ್ ನೋಡುದ್ರೆ ಯಾರಾದ್ರು, ಉದ್ಧಾರ ಆಗೊ ಲಕ್ಷಣ ಕಾಣ್ತದ? ದುಡ್ ಹಾಕಿ ದುಡ್ ತೆಗಿಯೋ ಆಟ ಆಗ್ ಬುಟ್ಟದೆ. ಅದಕೆ ಯೋಚ್ನೆ ಮಾಡಿ, ಈ ಎಲೆಕ್ಸನ್ನೂ ಬೇಡ, ರಾಜಕೀಯನೂ ಬೇಡ ಅಂತಾ ತೀರ್ಮಾನಿಸಿಬಿಟ್ಟೆ.

 

ಪ್ರಶ್ನೆ-ನೀವು ಗುಂಡೂರಾವ್ ಸರ್ಕಾರದಲ್ಲಿ ಸಚಿವರಾಗಿದ್ರಿ. ನಿಮ್ಮ ಭಾರತಿ ವಿದ್ಯಾಸಂಸ್ಥೆಗೆ ಮೆಡಿಕಲ್ ಕಾಲೇಜು ಕೊಡ್ತೀನಿ ಅಂದರೆ, ನೀವು ವೇದಿಕೆಯಲ್ಲೇ ನನಗೆ ಮೆಡಿಕಲ್ ಕಾಲೇಜು ಬೇಡ  ಅಂದ್ರಂತೆ?

ನಾನು ಶಾಸಕನಾದಾಗ ನನ್ನೂರು ಸುತ್ತ ಮುತ್ತ ಒಂದು ಒಳ್ಳೆಯ ಸ್ಕೂಲು ಕಾಲೇಜು ಇರಲಿಲ್ಲ. ಅದಕ್ಕಾಗಿ ಕಾಳಮದ್ದನದೊಡ್ಡಿಯಲ್ಲಿ ನನ್ನ ಸ್ನೆಹಿತರನ್ನ ಸೇರಿಸ್ಕಂಡು  ಭಾರತಿ ವಿದ್ಯಾಸಂಸ್ಥೆ ಶುರು ಮಾಡ್ದೆ. ಆ ಮೇಲೆ ತಮಿಳುನಾಡಿನ ಮಹಾಲಿಂಗಂ ಗೆ ಹೇಳಿ ಒಂದು ಸಕ್ಕರೆ ಪ್ಯಾಕ್ಟರಿ ತಂದೆ. ಈಗ ಕಾಳಮದ್ದನದೊಡ್ಡಿ ಭಾರತೀನಗರ ಅಂತ ಫೇಮಸ್ ಆಯ್ತು. ನನ್ನ ಕಾಲೇಜಿನಲ್ಲಿ ಈಗ ಎಂಟು ಸಾವಿರ ಮಕ್ಕಳು ಓದ್ತಾ ಅವ್ರೆ. ಎಲ್ಲಾ ತರಹದ ಕೋರ್ಸುಗಳು ಅವೆ. ನಾನು ಮೆಡಿಕಲ್ ಕಾಲೇಜು ಯಾಕೆ ಬೇಡ ಅಂದೆ ಗೊತ್ತಾ? ನಾನು ಸ್ಕೂಲು, ಕಾಲೇಜು ಆರಂಭ ಮಾಡಿದ್ದು ನಮ್ಮ ಹಳ್ಳಿಗಳ ಬಡಹುಡುಗ್ರು, ಹುಡುಗೀರು ಮಂಡ್ಯ, ಮೈಸೂರು ಹೋಗೋದು ತಪ್ಪಲಿ, ಇಲ್ಲೇ ಮನೆ ಹತ್ತಿರ ಇದ್ದ್ಕಂಡ್ ಓದ್ಲಿ ಅಂತ ಮಾಡ್ದೆ. ಮೆಡಿಕಲ್ ಕಾಲೇಜ್ ಮಾಡುದ್ರೆ ಅದರಲ್ಲಿ ನಮ್ಮುಡ್ರುಗ್ರು ಓದ್ತಾರಾ? ಬೇರೇ ರಾಜ್ಯಗಳಿಂದ ಬತ್ತಾರೆ. ಮೆಡಿಕಲ್ ಕಾಲೇಜು ಮಾಡೋದು ಒಂದೇ,  ದುಡ್ಡು ಮಾಡಕೆ ವ್ಯಾಪಾರ ಮಾಡೋದು ಒಂದೇ ಅದ್ಕೆ ಬೇಡ ಅಂದ್ಬುಟ್ಟೆ. ಕೈಗೆಟಕುವ ಫೀಜಲ್ಲಿ ನಮ್ಮಡುಗ್ರುಗೆ ಒಳ್ಳೇ ವಿದ್ಯಾಭ್ಯಾಸ ಸಿಗಬೇಕು ಅಷ್ಟೆ. ಈಗ ನಿನ್ನಂತಹವರು ಒತ್ತಾಯಿಸಿದ ಮೇಲೆ ಇಂಜಿನಿಯರಿಂಗ್ ಕಾಲೇಜು ಆರಂಭವಾಗಿದೆ. ಆದರೆ ಅದರಲ್ಲಿ ಫೀಜು ಮಾತ್ರ ಯಾವ ಕಾರಣಕ್ಕೂ ಸರ್ಕಾರದ  ನಿಗದಿ ಮಾಡಿರೊದನ್ನು ದಾಟಬಾರದು ಅಂತ ಕಟ್ಟಪ್ಪಣೆ ಮಾಡಿದಿನಿ. ಡೊನೇಶನ್ ಇಲ್ಲ. ಮೊದಲು ನಮ್ಮೂರಿನ ಸುತ್ತ ಮುತ್ತಲಿನ ಹುಡುಗರಿಗೆ,  ಆಮೇಲೆ ಮದ್ದೂರು ತಾಲ್ಲೂಕು, ಆ ಮೇಲೆ ಮಂಡ್ಯ ಜಿಲ್ಲೆ ಹುಡುಗ್ರು ಗೆ ಸೀಟು ಕೊಡೊ ವ್ಯವಸ್ಥೆ ಮಾಡೀವ್ನಿ.

 

ಪ್ರಶ್ನೆ- ಮಂಡ್ಯನಗರದಲ್ಲಿ ಗಾಂಧಿ ಭವನಕ್ಕೆ ಯಾವ ಧೈರ್ಯದ ಮೇಲೆ ಕೈ ಹಾಕಿದ್ರಿ? ಅದೂ ಒಂದು ಮುಕ್ಕಾಲು ಕೋಟಿ ರೂಪಾಯಿ ಬಿಲ್ಡಿಂಗ್?

ನೀನು ಶಂಕರೇಗೌಡ್ರುನ್ನ ನೋಡಿರಲಿಲ್ಲವೆ? ಒಂದು ಕಾಲೇಜು ಮಾಡಬೇಕು, ಒಂದು ಬಿಲ್ಡಿಂಗ್ ಕಟ್ಟಬೇಕು ಅಂದ್ರೆ ಒಂದು ನಾಟಕ ಆಡಿಸಿ ದುಡ್ಡು ಹೊಂದಿಸಿಬಿಡ್ತಿದ್ದರು. ನಾನು ಎಂ.ಪಿ.ಯಾಗಿದ್ದಾಗ  ಐದು ಲಕ್ಷ, ಹತ್ತು ಲಕ್ಷ ಅಂತಾ ಅನುದಾನದ ಹಣ ಬರೋದು. ಅದನ್ನು ನಂಬಿಕೊಂಡು ಶುರು ಮಾಡ್ದೆ. ಎಲ್ಲಾ ಶಾಸಕರು, ಎಂ.ಪಿ. ಗಳು ಕೈ ಜೊಡಿಸಿದ್ರು. ಅಂಬರೀಷು ಒಂದ್ಸಾರಿ ನನ್ನನ್ನು ಎಂ.ಪಿ. ಎಲೆಕ್ಷನ್ ನಲ್ಲಿ ಸೋಲಿಸಿಬಿಟ್ಟ, ಆದರೆ ಗಾಂಧಿ ಭವನಕ್ಕೆ ಸಂಸದರ  ನಿಧಿಯಿಂದ ಹಣ ಕೊಟ್ಟ ಹೀಗೆ ಎಲ್ಲಾರೂ ಕೊಟ್ರು. ಆ ಪುಣ್ಯಾತ್ಮನ ( ಗಾಂಧೀಜಿ) ಹೆಸರು ಹೇಳುದ್ರೆ ಯಾರು ಇಲ್ಲಾ ಅಂದಾರು ಹೇಳು?

 

ಪ್ರಶ್ನೆ- ಗಾಂಧಿ ಭವನದ ಚಟುವಟಿಕೆ ಬಗ್ಗೆ ಹೇಳಿ?

ಬೆಳಿಗ್ಗೆ 6 ಗಂಟೆಗೆ  ಪ್ರಾರ್ಥನೆ ಜೊತೆಗೆ ಯೋಗ, ಧ್ಯಾನ ಶಿಬಿರಗಳು ನಡಿತವೆ.( ಫ್ರೀಯಾಗಿ ಹೇಳ್ ಕೊಡ್ತಾರೆ) 10 ಗಂಟೆಯಿಂದ ಸಂಜೆ 5 ಗಂಟೆಯವರಿಗೆ ಯಾರು ಬೇಕಾದ್ರು ಸಬೆ- ಸಮಾರಂಭಗಳಿಗೆ ಪುಕ್ಕಟೆಯಾಗಿ  ಭವನ ಬಳಸ್ಕೊಬಹುದು. ( ಈಗ ಕರೆಂಟ್ ಚಾರ್ಜು, ಜನರೇಟರ್ ಡೀಸಲ್ ಗೆ ಮತ್ತು ಕಸ ಗುಡಿಸೋರಿಗೆ ಅಂತಾ 250 ರೂಪಾಯಿ ಚಾರ್ಜ್ ಮಾಡ್ತಾ ಅವ್ರೆ. ಸಂಜೆ 5-30 ಕ್ಕೆ ಸರಿಯಾಗಿ  ತಲೆ ಮೇಲೆ ತಲೆ ಬೀಳ್ಲಿ , ಗಾಂಧಿ ಭಜನೆ ಶುರು ಆಗಬೇಕು. ಮೇಲಗಡೆ( ಮೊದಲ ಹಂತಸ್ತಿನಲ್ಲಿ) ಲೈಬ್ರರಿ ಮಾಡಿದ್ದೀವಿ. ಸಾವಿರಾರು ಪುಸ್ತಕಗಳಿವೆ. ಪ್ರತಿ ದಿನ ನೂರಾರು ಜನ ಬಂದು ಓದ್ತಾರೆ. ಹೆಣ್ಣು ಮಕ್ಕಳಿಗೆ ಉಚಿತವಾಗಿ ಟೈಲರಿಂಗ್, ಮೇಣದ ಬತ್ತಿ ತಯಾರಿಕೆ, ಸೀಮೆ ಸುಣ್ಣ ತಯಾರಿಕೆ, ಕಸೂತಿ ಕಲೆ , ಸೋಪು, ಫಿನಾಯಿಲ್ ತಯಾರಿಕೆ ಹೀಗೆ ತರಬೇತಿ ನಡಿತಾ ಅದೆ. ಬಿರ್ಲಾ ಪೌಂಢೇಶನ್ ಸಂಸ್ಥೆಯವರು ಹತ್ತನ್ನೆರೆಡು ಲಕ್ಷ ರೂಪಾಯಿನ ವ್ಯಾನ್ ಕೊಟ್ಟವ್ರೆ, ಅದರಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಗಾಂಧೀಜಿಯವರ ಜೀವನ ಕುರಿತಂತೆ ಸಾಕ್ಷ್ಯ ಚಿತ್ರ ತೋರಿಸ್ತಾ ಇದ್ದೀವಿ. ಹೀಗೆ ನಡಿತಾ ಇದೆ. ಬಿಲ್ಡಿಂಗ್ ಗೆ ಹೊಂದ್ ಕಂಡಂತೆ ಎಂಟೆತ್ತು ಅಂಗಡಿಗಳು ಅವೆ. ಎಪ್ಪತ್ತೊ, ಎಂಬತ್ತೊ ಸಾವ್ರ ಬಾಡಿಗೆ ಬರ್ತಾ ಇದೆ. ಗಾಂಧಿಭವನದ ನೌಕರರ ಸಂಬಳ, ಕರೆಂಟ್ ಬಿಲ್ಲು ನೀರಿನ ಬಿಲ್ಲು, ಪೇಪರ್ ಬಿಲ್ಲು, ಜೊತೆಗೆ ಗಾಂಧಿಭವನ ವಾರ್ತಾ ಪತ್ರಿಕೆ ಖರ್ಚು ಎಲ್ಲಾ ನಡೆದುಕೊಂಡು ಹೋಗ್ತಾ ಇದೆ.

 

ಪ್ರಶ್ನೆ- ಮುಂದಿನ ಯೋಜನೆಗಳು ಏನಾದ್ರು ಇದೆಯಾ?

ಇಲ್ಲಿ ಮಂಡ್ಯದ ಸುತ್ತ ಮುತ್ತ ಇಪ್ಪತ್ತು ಎಕರೆ ಭೂಮಿ ತಗಂಡು, ಅದ್ರಲ್ಲಿ ಗಾಂಧಿ ಗ್ರಾಮ ಮಾಡಬೇಕು ಅಂತಾ ಆಸೆ ಇದೆ. ಅದಕ್ಕಾಗಿ ನಮ್ಮ ಗಾಂಧಿ ಭವನದ ಎಲ್ಲಾ ಸದಸ್ಯರು ತಮಿಳುನಾಡಿಗೆ ಹೋಗಿ ದಿಂಡಿಗಲ್ ಹತ್ರ ಇರೋ ಗಾಂಧಿ ಗ್ರಾಮ ನೋಡ್ಕಂಡು ಬಂದ್ರು. ಸರ್ಕಾರಕ್ಕೆ ಪತ್ರ ಬರೆದು, ನಾನೇ ಸಿದ್ಧರಾಮಯ್ಯನಿಗೆ ಕೊಟ್ಟು, ಸರ್ಕಾರಿ ಜಮೀನು ಎಲ್ಲಿದೆ ಹುಡುಕು ಅಂತಾ ಡಿ.ಸಿ. ಗೆ ಪತ್ರ ಬರೆಸಿಕೊಂಡು ಬಂದೆ. ಆದ್ರೆ ಈ ಡಿ.ಸಿ. ಪತ್ರ ನಾ ತಿಕದ ಅಂಡಿಗೆ ಹಾಕ್ಕೋಂಡು ಕುಂತವ್ನೆ.

 

ಪ್ರಶ್ನೆ- ಓಹೊ ಅದಕ್ಕೆ ನೀವು ಮಂಡ್ಯಕ್ಕೆ ಸಿದ್ಧರಾಮಯ್ಯ ಬಂದಿದ್ದಾಗ, ಡಿ.ಸಿ. ಮತ್ತು ಸಿ.ಎಂ. ಇಬ್ಬರನ್ನೂ  ಕೊಂದುಬುಟ್ಟು ಜೈಲಿಗೆ ಹೋಯ್ತಿನಿ ಅಂತಾ ರೋಫ್ ಹಾಕಿದ್ರಿ ಅನ್ನಿ?

ಥೂ ನಿನ್ನ.( ನಗು)  ಇಲ್ಲ ಕಣ್ಲಾ, ಮುಖ್ಯಮಂತ್ರಿ ಬರೆದುಕೊಟ್ಟ ಮೇಲೆ ವರದಿ ಸಲ್ಲಿಸದೆ ಕುಳಿತುಕೊಂಡ್ರೆ ಕ್ವಾಪ ಬರೋದಿಲ್ಲವೆ? ಅದಕ್ಕೆ ಅಂಗ್ ಇಬ್ಬರಿಗೂ ಬೈದೆ. ಈಗ ಸರ್ಕಾರದಿಂದ ಹತ್ತು ಎಕರೆ ಕೊಟ್ಟರಂತೆ. ಮುವತ್ತು ವರ್ಷ ಮಾತ್ರ ಲೀಸ್ ಅಂತೆ. ಅದಕ್ಕೂ ಹತ್ತು ಲಕ್ಷ ರೂಪಾಯ್ ಕಟ್ಟ ಬೇಕಂತೆ. ಮಾದೇಗೌಡ ಆ ಜಮೀನಲ್ಲಿ ಪ್ಯಾಕ್ಟ್ರಿ ಮಾಡಕೆ ಹೊಂಟಿದನಾ? ಅಥ್ವಾ ನೋಟ್ ಪ್ರಿಂಟ್ ಮಾಡೊ ಮಿಷನ್ ಇಡಲಿಕ್ಕೆ ಹೋಯ್ತಾ ಇದ್ದಾನಾ? ಇವರಿಗೇನು ಮಾನ ಮರ್ಯಾದೆ ಬೇಡ್ವಾ ಮಗಾ?

 

ಪ್ರಶ್ನೆ- ಈಗೇನು ಮಾಡ್ತೀರಾ?

ಯೋಚ್ನೆ ಮಾಡ್ತಾ ಇವ್ನಿ. ನಮ್ಮು ಹುಡುಗರು ದುಡ್ಡು ಕೊಟ್ಟು ಲೀಸ್ ಗೆ ಜಮೀನ್ ತಗಳದು ಬೇಡ ಅಂತ ಹೇಳ್ತಾ ಅವ್ರೆ. ಆ ಮೇಲೆ ಅಲ್ಲಿ ಏನೂ ಶಾಸ್ವತವಾಗಿ ಇರುವಂತೆ ಕೆಲಸ ಮಾಡಕೆ ಆಗೋದಿಲ್ಲ. ಅದರ ಬದ್ಲು ಜಮೀನು ಖರೀದಿ ಮಾಡೋಣ ಅಂತಾ ಇವ್ನಿ. ನೋಡೋಣ.

 

ಪ್ರಶ್ನೆ- ಅಪ್ಪಾ ನಿಮಗೊಂದು ಕೊನೆಯ ಪ್ರಶ್ನೆ, ನೀವು ಇಷ್ಟೊಂದು ಪ್ರಭಾವಶಾಲಿಯಾಗಿದ್ದು ಏಕೆ ಮಕ್ಕಳನ್ನು ರಾಜಕೀಯದಲ್ಲಿ ಬೆಳಸಲಿಲ್ಲ? ಡಾ,ಪ್ರಕಾಶ್ ರವರನ್ನು ಮಂಡ್ಯದ ಜನ ನೋಡೇ ಇಲ್ಲ, ಇನ್ನೂ ಮಧು, ಇತ್ತೀಚೆಗೆ ವಿದ್ಯಾಸಂಸ್ಥೆ ಜವಬ್ದಾರಿ ವಹಿಸಿಕೊಂಡು, ರಾಜಕೀಯಕ್ಕೆ ಬಂದ ಮೇಲೆ ಪರಿಚಯವಾದ್ರು. ಆದರೂ ಕೂಡ ಎಂದೂ ನೀವು ಅವರ ಪರ ಪ್ರಚಾರಕ್ಕೂ ಹೋಗದೆ ತಟಸ್ಥರಾಗಿ ಉಳಿದು ಬಿಟ್ರಿ?

ಮಗಾ, ನಾನು ರಾಜಕೀಯಕ್ಕೆ ಬಂದಾಗ .ನಮ್ಮಪ್ಪ, ನಮ್ಮವ್ವ ಏನಾಗಿದ್ರು? ಗುರುದೇವರ ಹಳ್ಳೀಲಿ ಗದ್ದೆ ಉತ್ಕಂಡು, ಗೇಯ್ ಕಂಡು ಇದ್ರು. ಕೆ.ವಿ.ಶಂಕರೇಗೌಡ್ರಂತಹ ಮಾರ್ಗದರ್ಶಕರು ಸಿಕ್ಕಿದ್ರು. ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ. ರಾಜಕೀಯ ಅನ್ನೊದು ವಂಶಪಾರಂಪರ್ಯವಾಗಿ ಬರಬೇಕು ಅಂತಾ ರೂಲ್ಸ್ ಇದ್ದದಾ?  ಜನರ ಪ್ರೀತಿ. ವಿಶ್ವಾಸ ಗಳಿಸಿಕೊಂಡು ಅವರ ಪಾಡಿಗೆ ಅವರು ಮುಂದೆ ಬರಬೇಕು. ಅವಾಗ್ಲೆ ಜನರ ಕಷ್ಟ ಸುಖ ಗೊತ್ತಾಗಿ ನಿಜವಾದ ನಾಯಕ ಹುಟ್ಟಿ ಬರ್ತಾನೆ. ಅದೇ ತರ ನಮ್ಮ ಮಕ್ಕಳು ಬೆಳೀಲಿ ಅಂತಾ ನಿರ್ಧಾರ ತಂಗಂಡಿವ್ನಿ.