ಭೂಮಿ, ಆಹಾರ ಹಕ್ಕು ರಕ್ಷಣೆಗೆ ಹೋರಾಟ-ಪ್ರಜಾವಾಣಿ

[ದಲಿತರಿಗೆ ಭೂಮಿ ನೀಡಬೇಕು ಹಾಗೂ ಪ್ರತಿಯೊಬ್ಬರ ಆಹಾರ ಹಕ್ಕನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ದಲಿತರ, ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ‘ಉಡುಪಿ ಚಲೋ’ ಜಾಥಾಕ್ಕೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ 4.10.2016 ಮಂಗಳವಾರ ಚಾಲನೆ ನೀಡಲಾಯಿತು. ಅದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ದೇವನೂರ ಮಹಾದೇವ ಅವರ ಮಾತುಗಳ ಪ್ರಜಾವಾಣಿ ವರದಿ]                                               

ಬೆಂಗಳೂರು: ದಲಿತರಿಗೆ ಭೂಮಿ  ನೀಡಬೇಕು ಹಾಗೂ ಪ್ರತಿಯೊಬ್ಬರ ಆಹಾರ ಹಕ್ಕನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ದಲಿತರ, ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ‘ಉಡುಪಿ ಚಲೋ’ ಜಾಥಾಕ್ಕೆ ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು. ದಲಿತರ ಮೇಲಿನ ದೌರ್ಜನ್ಯ, ಗೋಸಂರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಕ್ರೌರ್ಯ ಹಾಗೂ ಆಹಾರದ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನಗಳ ಕರಾಳ ಮುಖಗಳನ್ನು ಅನಾವರಣಗೊಳಿಸುವ ಚಿತ್ರಕಲೆ, ಬೀದಿ ನಾಟಕ, ಜಂಬೆ ವಾದನ, ನಗಾರಿ ಬಡಿತ, ಹಾಡು, ಕುಣಿತಗಳ ಮೂಲಕ ಉತ್ಸಾಹ  ತುಂಬಿಕೊಂಡ  ಹೋರಾಟಗಾರರು  ಉಡುಪಿಯತ್ತ  ಪ್ರಯಾಣ ಬೆಳೆಸಿದರು. ಪಂಜು ಬೆಳಗಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದ, ಬಿಬಿಎಂಪಿಯ ಗುತ್ತಿಗೆ ಪೌರ ಕಾರ್ಮಿಕರಾದ ಆಂಜನಮ್ಮ, ‘ದಲಿತರ, ಹೆಣ್ಣುಮಕ್ಕಳ ಉದ್ಧಾರ ಮಾಡುತ್ತೇವೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಈ ಭರವಸೆಗಳು ಒಂದೂ ಈಡೇರಿಲ್ಲ. ದಲಿತರ ಮೇಲಿನ ಅನ್ಯಾಯ ಈಗಲೂ ಮುಂದುವರಿದಿದೆ. ಈ ಹೋರಾಟದ ಮೂಲಕವಾದರೂ ದಲಿತರ ಬವಣೆಗಳಿಗೆ ಮುಕ್ತಿ ಸಿಗಲಿ’ ಎಂದರು.

‘ಗೋ ಭಯೋತ್ಪಾದನೆಯನ್ನು ಜಗತ್ತಿಗೆ ನೀಡುತ್ತಿರುವ ಭಾರತ
‘ಸಮಾಜದಲ್ಲಿ ಅನೇಕ ರೀತಿಯ ಭಯೋತ್ಪಾದನೆಗಳಿವೆ. ಜಗತ್ತಿಗೆ ಭಾರತ ಮತ್ತೊಂದು ಭಯೋತ್ಪಾದನೆಯನ್ನು ಸೇರಿಸಿದೆ. ಅದು ಗೋ ಭಯೋತ್ಪಾದನೆ’ ಎಂದು ಸಾಹಿತಿ ದೇವನೂರ ಮಹಾದೇವ  ಅಭಿಪ್ರಾಯಪಟ್ಟರು. ‘ಗೋ ರಫ್ತು ಮಾಡುವ ದೇಶ ಗೋಮಾಂಸ ನಿಷೇಧ ಮಾಡುವುದರ  ಹಿಂದಿನ ಉದ್ದೇಶ ಏನೆಂದೇ ಅರ್ಥ ಆಗುತ್ತಿಲ್ಲ. ನಮ್ಮ ದೇಶದಲ್ಲಿ ಸತ್ತ ಪ್ರೇತಾತ್ಮಗಳು ಹೆಚ್ಚು ಕ್ರಿಯಾಶೀಲವಾಗಿವೆ.  ಮನುಷ್ಯನ ಮೈದುಂಬಿ ಚೇಷ್ಟೆ ಮಾಡುತ್ತಿವೆ. ಬದುಕಿರುವವರು ಪ್ರಜ್ಞೆ ಪಡೆದುಕೊಳ್ಳದಿದ್ದರೆ  ಯಾರು ಸತ್ತಿದ್ದಾರೆ, ಯಾರು ಬದುಕಿದ್ದಾರೆ ಎಂದು ಗೊತ್ತಾಗುವುದಿಲ್ಲ’ ಎಂದು  ಹೇಳಿದರು.
***
ಬಲಿ ಚಕ್ರವರ್ತಿಯ ರಾಜ್ಯದಲ್ಲಿ  ಸಮಾನತೆ ಇತ್ತು.  ಆತನನ್ನು ಭಾರತ ತುಳಿದುಹಾಕಿದೆ. ಇವತ್ತು ವಾಮನನ ಆರಾಧಿಸುವ ಬದಲು ಬಲಿ ಚಕ್ರವರ್ತಿ ಸಾರಿದ ಮೌಲ್ಯಗಳನ್ನು   ಆರಾಧಿಸಬೇಕಿದೆ
-ದೇವನೂರ ಮಹಾದೇವ, ಸಾಹಿತಿ