ಭೂಗತ ಜಗತ್ತಾಗಿ ಮಾರ್ಪಟ್ಟ ರಾಜಕಾರಣ: ದೇವನೂರ ಮಹಾದೇವ
[ಚಿತ್ರದುರ್ಗದಲ್ಲಿ 6.4.2018ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ, ಸಾಹಿತಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಪ್ರಜಾವಾಣಿ ಪತ್ರಿಕಾ ವರದಿ.]
ಚಿತ್ರದುರ್ಗ: ಪ್ರಸ್ತುತ ರಾಜಕಾರಣ ಭೂಗತ ಜಗತ್ತಾಗಿ, ಅಪರಾಧೀಕರಣವಾಗಿ, ವ್ಯಾಪಾರೀಕರಣವಾಗಿ ಮಾರ್ಪಟ್ಟಿದೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ, ಸಾಹಿತಿ ದೇವನೂರ ಮಹಾದೇವ ಹೇಳಿದರು.
‘ದೇಶದೊಳಗಿನ ಪ್ರಮುಖ ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರ ಚಲನ ವಲನ, ಅವರಾಡುವ ಮಾತು, ನೋಡುವ ನೋಟ ಗಮನಿಸಿದರೆ, ಭೂಗತ ಜಗತ್ತಿನ ಡಾನ್‍ಗಳನ್ನು ನೋಡಿದಂತಾಗುತ್ತಿದೆ. ಅಲ್ಲದೆ, ಆ ಪಕ್ಷಗಳ ರಾಜ್ಯ ಘಟಕದ ಅಧ್ಯಕ್ಷರು, ನಾಯಕರು ಸಹ ಅವರನ್ನು ಕಂಡು ಕೊಬ್ಬಿದ ಬೆಕ್ಕನ್ನು ನೋಡಿದ ಇಲಿಮರಿಗಳಂತೆ ತರತರ ನಡುಗುವ ರೀತಿಯಲ್ಲಿ ಕಾಣಿಸುತ್ತಾರೆ’ ಎಂದು ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.
‘ಶಿಕ್ಷಣ, ಆರೋಗ್ಯ ಸೇರಿದಂತೆ ದೇವರನ್ನೂ ವ್ಯಾಪಾರೀಕರಣಗೊಳಿಸಲಾಗಿದೆ. ಇದಕ್ಕೆ ರಾಜಕಾರಣವೂ ಹೊರತಾಗಿಲ್ಲ. ಇದು ಪ್ರಜಾಪ್ರಭುತ್ವವೋ, ರಾಜಕಾರಣವೋ ಅಥವಾ ಭೂಗತ ಜಗತ್ತಿನ ವಿದ್ಯಮಾನವೋ ತಿಳಿಯದಾಗಿದೆ’ ಎಂದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್– ಈ ಮೂರೂ ಪಕ್ಷಗಳು ಜಾತಿ, ಧರ್ಮದ ಲೆಕ್ಕಾಚಾರದಲ್ಲಿ ಮತ ಪಡೆಯಲು ಮುಂದಾಗಿದ್ದು, ಮನುಷ್ಯರ ನಡುವಿನ ಭಾವನಾತ್ಮಕ ಸಂಬಂಧ ಛಿದ್ರಗೊಳಿಸುತ್ತಿವೆ. ದೇಶ ಇಂಥ ಅಧಃಪತನದ ಸ್ಥಿತಿ ತಲುಪಿರುವುದು ದುರಂತದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.