ಭಾರತ ಸಂವಿಧಾನ ಮತ್ತು ‘ಎದೆಗೆ ಬಿದ್ದ ಅಕ್ಷರ’ -ನಾಗರಾಜು ತಲಕಾಡು
[ದೇವನೂರರ ‘ಎದೆಗೆ ಬಿದ್ದ ಅಕ್ಷರ’ ಕುರಿತು ನಾಗರಾಜು ತಲಕಾಡು ಅವರು ಬರೆದ ವಿಮರ್ಶೆ, ಅವರ ‘ಸೌಹಾರ್ದ ವಿಮರ್ಶೆ’ ಸಂಕಲನದಲ್ಲಿ ದಾಖಲಾಗಿದೆ. ನಮ್ಮ ಮರು ಓದಿಗಾಗಿ ಆ ಲೇಖನ ….]
ದೇವನೂರ ಮಹಾದೇವ ಮತ್ತು ಅವರ ಬರಹಗಳೆಂದರೆ, ಓದುಗರ ಗ್ರಹಿಕೆಯಲ್ಲಿ ಗೊಂದಲ, ಅನುಮಾನ, ಬಿಕ್ಕಟ್ಟುಗಳು ಇಲ್ಲದಿರುವ ಸಂದರ್ಭಗಳು ಕಡಿಮೆಯೇ. ಆದರೆ, ಮಾನವೀಯಪರ ಕಾಳಜಿ ಹೊತ್ತು ತಮ್ಮ ಬದುಕಿನುದ್ದಕ್ಕೂ ಸದಾ ಮಿಡಿಯುತ್ತಾ ಬಂದ ದೇವನೂರರ ಸಮಾಜ ಪರವಾದ ಈವರೆಗಿನ ಬರವಣಿಗೆ ರೂಪದ ಅಂತಃಕರಣದ ಸಾಕ್ಷಾತ್ಕಾರವೇ ‘ಎದೆಗೆ ಬಿದ್ದ ಅಕ್ಷರ’.
‘ಕುಸುಮಬಾಲೆ’ಯಂಥ ಅವರ ಶ್ರೇಷ್ಠ ಕಾದಂಬರಿಯಲ್ಲಿ ಅಂಬೇಡ್ಕರ್‍ರನ್ನು ಹುಡುಕಲು ಹೊರಟು ಹತಾಶರಾಗಿದ್ದ ನಮ್ಮಂಥವರಿಗೆ ದೇವನೂರರ ಸೃಜನಶೀಲ ಸಾಹಿತ್ಯದಲ್ಲಿ ಬಹುವಾಗಿ ಕಾಣಲಾಗದ ಅಪ್ಪಟ ಸ್ವಾಭಿಮಾನ, ಧೈರ್ಯ, ಅಂಬೇಡ್ಕರ್ ಆಶಯದ ಸೃಜನಶೀಲ ಬದುಕು ದಲಿತರಿಗೆ ‘ಎದೆಗೆ ಬಿದ್ದ ಅಕ್ಷರ’ದಲ್ಲಿ ಕಾಣಬಹುದಾಗಿದೆ. ಇವತ್ತೂ ಸಾಹಿತ್ಯಕವಾಗಿ ದೇವನೂರರ ಸೃಜನಶೀಲತೆ ಒಂದು ಲೆಜೆಂಡ್; ಅದ್ಭುತವೆ! ಆದರೆ, ವೈಚಾರಿಕವಾಗಿ ಅವರ ಕಥಾ ಸಾಹಿತ್ಯ ಕುರಿತು ಅಸಮಾಧಾನ ಅತೃಪ್ತಿ ನನಗೆ ಕಾಡ್ತಾನೆ ಇತ್ತು.
ಪ್ರಸ್ತುತ ಮತ್ತು ಭವಿಷ್ಯದ ದಲಿತ ಸಮೂಹಕ್ಕೆ ಸಮಕಾಲೀನ ಜಗತ್ತಿನಲ್ಲಿ ದುಷ್ಪರಿಣಾಮ ಬೀರುವಂಥ ಎಷ್ಟೋ ಸಂಗತಿಗಳು (ವಸ್ತು ವಿಷಯಗಳು) 1970 ರಿಂದ 2000 ವರೆಗಿನ ದಲಿತ ಸಾಹಿತ್ಯದಲ್ಲಿ ಅಪಾರ ಪ್ರಮಾಣದಲ್ಲೆ ಅಡಗಿವೆ. ಆದರೆ, ‘ಎದೆಗೆ ಬಿದ್ದ ಅಕ್ಷರ’ ಕೃತಿಯ ಸಂದರ್ಭ ಹಾಗಲ್ಲ. “ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು” ಸಾಲು ಹೊರಡಿಸುವ ಅರ್ಥ, ಹೊಂದಿರುವ ಆಶಯವೇ ಅದ್ಭುತ. ಪ್ರಸ್ತುತ ದಲಿತ ಚಳುವಳಿ; ಹೋರಾಟಗಾರರು ಹೊಂದಿರುವ ಹತಾಶೆ, ಅಸಮಾಧಾನ, ಯುವದಲಿತರಿಗಿರುವ ಚಳವಳಿ ಬಗೆಗಿನ ಅನುಮಾನ- ಉದಾಸೀನತೆ ಹಾಗೂ ಸಮಾಜ ಮತ್ತು ಬದುಕಿನ ಬಗ್ಗೆ ಅವರು ಇಟ್ಟುಕೊಂಡಿರುವ ಆತಂಕಗಳು ಎಲ್ಲದಕ್ಕೂ ಮದ್ದು ‘ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು’ ಎಂಬ ನುಡಿ.
ಇತಿಹಾಸ ವಿಷಯದ ಸಹಪ್ರಾದ್ಯಾಪಕರೊಬ್ಬರ ಜೊತೆ ಸಹಜವಾಗಿ ಮಾತನಾಡುವಾಗ ಸಾಂದರ್ಭಿಕವಾಗಿ, ಅವರು ಆಡಿದ ಮಾತನ್ನುಇಲ್ಲಿ ನೆನಪಿಸಿಕೊಳ್ಳಲು ಇಷ್ಟಪಡುತ್ತೇನೆ: “ಎದೆಗೆ ಬಿದ್ದ ಅಕ್ಷರ’ ಪುಸ್ತಕ, ಸಾಯಬೇಕೆಂದು ಹೊರಟವರನ್ನು ಬದುಕಿಸಿ ಬಿಡುತ್ತದೆ.”
‘ಎದೆಗೆ ಬಿದ್ದ ಅಕ್ಷರ’ ಈಗಿನ ಹೊಸ ಬರಹಗಳಲ್ಲ; ‘ಹಳೆಯದೆಲ್ಲದರ ಪ್ರಕಟಿತ ಬಿಡಿ ಬಿಡಿರೂಪ’ದವು. ಹಾಗಾಗಿ ‘ಎದೆಗೆ ಬಿದ್ದ ಅಕ್ಷರ’ದ ಪರವಾಗಿ ಬಂದ ವಿಮರ್ಶೆಗಳು ‘ಹುಸಿ ಪ್ರಚಾರ’ ಎಂದು ಆರೋಪಗಳು ಬಂದವು. ಆದರೆ, ಅವು ನನಗೆ ಮುಖ್ಯ ಅನಿಸುವುದಿಲ್ಲ. ಇಂದಿನ ವಾಲ್ಮೀಕಿ ರಾಮಾಯಣ, ವ್ಯಾಸಭಾರತಗಳೂ ಅಂದು ವಾಲ್ಮೀಕಿ ವ್ಯಾಸರಿಂದ ಏಕಕಾಲಕ್ಕೇ ಸಂಪೂರ್ಣ ಪೂರೈಸಿಕೊಂಡವಲ್ಲ; ಹಲವು ಶತಮಾನಗಳಲ್ಲಿ ಹಲವರಿಂದ ಬೆಳೆದಂಥವು. ಹಾಗಿರುವಾಗ ‘ಎದೆಗೆ ಬಿದ್ದ ಅಕ್ಷರ’ 40 ವರ್ಷಗಳಿಂದ ಅಲ್ಲಲ್ಲಿ ಪ್ರಕಟಗೊಂಡಿದ್ದ ಲೇಖನಗಳ ಸಂಗ್ರಹವಾದರೇನಂತೆ? ಈವರೆಗಿನ ದೇವನೂರರ ವಿಚಾರಗಳಿಗೆ ವಿಶಿಷ್ಟ ಬಗೆಯ ಒಂದು ಫ್ರೇಮು ನಿಲುಕಿರುವುದೇ ಅಪರೂಪದ ಸಂಗತಿಯಲ್ಲವೆ? ಹಲವು ಶತಮಾನಗಳಲ್ಲಿ ಬೆಳೆದಂಥ ಆ ಕೆಟ್ಟ ‘ಮನುಸ್ಮೃತಿ’ಗೆ ಇನ್ನೂ ಮಾನ್ಯತೆ, ಗೌರವ ಜೀವಂತವಿದೆ. ಅಲ್ಲಿ ಅಮಾನವೀಯ ವಿಚಾರಗಳ ದರ್ಬಾರೇ ಹೆಚ್ಚು ‘ಎದೆಗೆ ಬಿದ್ದ ಅಕ್ಷರ’ ದಲ್ಲೋ ಜೀವಸೆಲೆಯಾದ ಮಾನವೀಯತೆಯೇ ಹೂರಣ, ಚೌಕಟ್ಟು ಪ್ರತಿಯೊಂದೂ.
ನಮ್ಮಲ್ಲೇ ಹಲವು ದಲಿತ ಲೇಖಕರು‘ಎದೆಗೆ ಬಿದ್ದ ಅಕ್ಷರ’ ಪುಸ್ತಕ ಕುರಿತು ಹಗುರ ಮತ್ತು ಉದಾಸೀನದ ಮಾತುಗಳನ್ನಾಡುತ್ತಲೇ ಇದ್ದಾರೆ. ಆದರೆ, ಅವು ಕರುಬಲುಕಾರರ ಟೀಕೆಗಳೇ ವಿನಃ ನೈಜ ವಿಮರ್ಶೆ ಆಗಲಾರದು.
ನಮ್ಮ ‘ಭಾರತ ಸಂವಿಧಾನ’ ಬೇರೆ ಅಲ್ಲ ‘ಎದೆಗೆ ಬಿದ್ದ ಅಕ್ಷರ’ ಬೇರೆ ಅಲ್ಲ. ಎರಡರ ಆಶಯ ಒಂದೇ. ಒಂದು ಪ್ರಭುಸಂಹಿತೆಯ ಸ್ವರೂಪದಲ್ಲಿದ್ದರೆ ಮತ್ತೊಂದು ಮಿತ್ರ ಸಂಹಿತೆ ಮತ್ತು ಕಾಂತಾ ಸಂಮಿತಗಳಲ್ಲಿದೆ. ಸಂವಿಧಾನದ ಆಶಯವನ್ನು ಆಧರಿಸಿ ನಮ್ಮ ನಾಡಿನ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವಲ್ಲಿ ದೇವನೂರು ಅಂತಃಕರಣ ಎರಕ ಹೊಯ್ದಿದ್ದಾರೆ.
‘ಭಾರತ ಸಂವಿಧಾನ’ ಎಷ್ಟು ಮುಖ್ಯವೋ ‘ಎದೆಗೆ ಬಿದ್ದ ಅಕ್ಷರ’ದ ಓದು ಮತ್ತು ಗ್ರಹಿಕೆ ಕೂಡ ಅಷ್ಟೇ ಗಂಭೀರ. ಆ ಕಾರಣ‘ಎದೆಗೆ ಬಿದ್ದ ಅಕ್ಷರ’ದ ಪ್ರತಿಗಳು ಇಂದು ನಾಡಿನ ಪ್ರತಿಯೊಬ್ಬಓದುಗ ಮತ್ತು ಪ್ರತಿ ದಲಿತ ಕುಟುಂಬದಲ್ಲಿಯೂ ಇರಬೇಕಾಗಿರುವಂಥ ಕೃತಿ.
ಋಗ್ವೇದ, ಯರ್ಜುರ್ವೇದ, ಅಥರ್ವಣವೇದ, ಸಾಮವೇದ ಇವುಗಳ ಒಳವಿಚಾರಗಳೆಲ್ಲವನ್ನು ಪರಿಗಣಿಸದೆ ‘ವೇದ’ ಎಂಬ ಪದವನ್ನಷ್ಟೇ ಸ್ವೀಕರಿಸಿ ಜೀವನಕ್ಕೆಅಗತ್ಯವಾದ ಮೌಲು, ನೀತಿ, ದಾರಿ, ಬೆಳಕು, ಸಂಗಾತಿ ಎಂಬರ್ಥಗಳನ್ನು ಅದರಲ್ಲಿ ಗ್ರಹಿಸಿ ಹೇಳುವುದಾದರೆ, ಮಾನವೀಯತೆಯೆ ಮೂಲ ಅಥವಾ ಪ್ರಪ್ರಥಮ ವೇದ. ಭಾರತ ಸಂವಿಧಾನಕ್ಕೆ ವೇದವೆಂಬ ವಿಶೇಷಣವನ್ನು ಇಡುವುದಾದರೆ ನಮ್ಮ ಸಂವಿಧಾನವೇ ಪರಮ ವೇದ. ಬಿ.ಎಸ್.ಪಿ.ಯ ಚಿಂತಕರು ಗುರುತಿಸುವಂತೆ ‘ಎದೆಗೆ ಬಿದ್ದ ಅಕ್ಷರ’ ಕೃತಿಯಲ್ಲಿ ‘ಗಾಂಧಿಯ ಪ್ರತಿ ಹೆಜ್ಜೆಗಳೂ ಅತ್ಮಸಾಕ್ಷಾತ್ಕಾರ…’ ಈ ಮುಂತಾದ ಕೆಲ ಮಿತಿಗಳಿದ್ದಾಗಿಯೂ ಈಗಾಗಲೇ ‘ಎದೆಗೆ ಬಿದ್ದ ಅಕ್ಷರ’ ದಲಿತೇತರರ ಮೇಲೆ ಬೀರಿರುವ ಪರಿಣಾಮದ ದೃಷ್ಟಿಯಲ್ಲಿ ಪ್ರಗತಿಪರರಿಗೆ, ದಲಿತರಿಗೆ ‘ಎದೆಗೆ ಬಿದ್ದ ಅಕ್ಷರ’ ಸಾಂಸ್ಕೃತಿಕ ಸಂವಿಧಾನ ಯಾಕಾಗಬಾರದು?
ದಲಿತರಿಗೆ ಇಂದು ಪರಿಪೂರ್ಣ ಸ್ವರೂಪದಲ್ಲಿ ಸಾಂಸ್ಕೃತಿಕ ನಾಯಕರು ಅಂತ ಒಬ್ಬರಿಲ್ಲ; ರಾಜಕೀಯ ನಾಯಕರು ಹಲವರಿದ್ದಾರೆ. ಆದರೆ, ಎಲ್ಲರಲ್ಲೂ ಅವರದೇ ಆದ ಇತಿಮಿತಿಗಳು ಇರುವುದರಿಂದ ಎಲ್ಲರೂ ಒಪ್ಪಬಹುದಾದ, ಸರ್ವಶೇಷ್ಠ ರಾಜಕೀಯ ನಾಯಕ ಅಂತ ಸ್ವೀಕರಿಸುವಾಗ ಕರ್ನಾಟಕದ ದಲಿತ ಸಮೂಹದಲ್ಲಿ ಗೊಂದಲ ಗಟ್ಟಿ ಭಿನ್ನಾಭಿಪ್ರಾಯಗಳು ಇವೆ. ಕಾರಣ, ಉನ್ನತ ವರ್ಗದ ರಾಜಕೀಯ ನಾಯಕರು ಅವರ ಸಮೂಹಗಳಲ್ಲಿ ಸುಲಭವಾಗಿ ಸ್ವೀಕೃತರಾಗುವಂತೆ ದಲಿತ ಪರಿಸರಇಲ್ಲ. ಇಲ್ಲಿ ವ್ಯಕ್ತಿತ್ವ ಮತ್ತು ಅವರು ಪಾಲಿಸಿಕೊಂಡು ಬಂದ ಮೌಲ್ಯಗಳು ಪ್ರಧಾನ ಪಾತ್ರ ನಿರ್ವಹಿಸುತ್ತವೆ. ಆದರೆ ದಲಿತ ಮತ್ತು ಉನ್ನತವರ್ಗದ ಸಾಂಸ್ಕೃತಿಕ ಸಂದರ್ಭದಲ್ಲಿ ಇಂಥ ಬಿಕ್ಕಟ್ಟುಗಳನ್ನು ಸಾಧ್ಯಂತ ನಿವಾರಿಸಬಹುದು; ಸಾಂಸ್ಕೃತಿಕ ಲೋಕದಲ್ಲಿ ಆದರ್ಶ ವ್ಯಕ್ತಿಗಳು ಇನ್ನೂ ಹಲವರಿರುವುದು ಸಮಾಧಾನಕರ. ಕೆಲವು ಇತಿಮಿತಿಗಳ ನಡುವೆಯೂ ದಲಿತರಿಗಾಗಿ ಒಬ್ಬ ಸಮರ್ಥ ಸಾಂಸ್ಕೃತಿಕ ನಾಯಕರಾಗಿ ಮುಂದುವರಿಯಬಹುದಾದ ಎಲ್ಲಾ ಗುಣಗಳು ದೇವನೂರರಲ್ಲಿ ಇವತ್ತೂ ಜತನವಾಗಿ ಉಳಿದುಕೊಂಡಿವೆ. ಆದರೆ, ಇಂಥ ದಿನಗಳಲ್ಲಿ ದೇವನೂರು ಕೂಡ ಜನರಿಂದ ದೂರವಿರದೆ (ದೈಹಿಕವಾಗಿ), ಕದ್ದಾಡದೆ ದಿನದ ಹೆಚ್ಚು ಸಮಯ ಸಮಾಜದ ನೇರ ಒಡನಾಟದಲ್ಲಿ ಇದ್ದುಕೊಂಡು ಸಾಮಾಜಿಕ, ಸಾಹಿತ್ಯಕ, ಧಾರ್ಮಿಕ ಸಲಹೆಗಳನ್ನು ದಲಿತರಿಗೆ ನೀಡುವುದು ಅವಶ್ಯಕ.
ಕರ್ನಾಟಕ ಸರ್ವೋದಯದ ಪಕ್ಷದ ಅವಶ್ಯಕತೆ ದೇವನೂರರಿಗೆ ಇತ್ತೆ? ಕರ್ನಾಟಕ ರಾಜಕಾರಣದ ಸಂದರ್ಭದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂಥ ಪರಿಸ್ಥಿತಿ ಕರ್ನಾಟಕ ಸರ್ವೋದಯ ಪಕ್ಷದ್ದು. ಹೀಗಿರುವಾಗ ಪ್ರಸ್ತುತದಲ್ಲಿ ನೇರ ರಾಜಕೀಯ ಹೊಣೆಗಾರಿಕೆಗಿಂತ ಸಾಂಸ್ಕೃತಿಕ ಹೊಣೆ ಹೊರುವುದೇ ಮುಖ್ಯ ಅಂತ ದೇವನೂರರಿಗೆ ಅನ್ನಿಸಬೇಕು. ಅಲ್ಲದೆ, ದಲಿತ, ಸಕಲ ತಳಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸುವ ಜರೂರರತ್ತನ್ನು ತಮ್ಮ ಹೆಗಲಿಗೇರಿಸಿಕೊಂಡು ಈ ತನಕ ಪಾಲಿಸಿಕೊಂಡು ಬಂದಿರುವ ಲೌಕಿಕ ವಿದೂರತ್ವವನ್ನು ಇಳಿಸಿದರೆ ಸಾಂಸ್ಕೃತಿಕ ಮಹತ್ವವನ್ನು ಪಡೆದುಕೊಳ್ಳುತ್ತದೆ.