ಬ್ಯಾಂಕ್ ಗಳ ಪ್ರಮಾದ ಮರೆಮಾಚುವ ಪ್ರಹಸನ -ಅಜಿತ್ ಪಿಳ್ಳೈ
ನರೇಂದ್ರ ಮೋದಿಯವರ ಸರ್ಕಾರದ ನಾಟಕೀಯ ನೋಟು ರದ್ದತಿ ಕ್ರಮವನ್ನು ಹೇಗೆ ಅರ್ಥಮಾಡಿಕೊಳ್ಳುವುದು? ಇದು ನಿಜಕ್ಕೂ ಕಪ್ಪುಹಣದ ವಿರುದ್ಧದ ಸರ್ಜಿಕಲ್ ದಾಳಿಯೇ? ಅಥವಾ ಇದನ್ನು ಎನ್‍ಪಿಎ(ವಸೂಲಾಗದ ಸಾಲ) ಬಿಕ್ಕಟ್ಟಿನಲ್ಲಿರುವ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕುಸಿತದಿಂದ ಪಾರು ಮಾಡಲು ಇಡೀ ದೇಶ ತನಗೆ ಗೊತ್ತಿಲ್ಲದೆ ತೆರುತ್ತಿರುವ ಬೆಲೆ ಎಂದು ಕರೆಯಬೇಕೆ?
ರಾತ್ರೋರಾತ್ರಿ ಐದುನೂರು ಮತ್ತು ಸಾವಿರ ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದು ಮಾಡುವ ಮೂಲಕ ಸರ್ಕಾರ ಒಂದೇ ಏಟಿಗೆ ಬ್ಯಾಂಕುಗಳ ಖಜಾನೆ ತುಂಬಿಸಿದೆ. ಬಂಡವಾಳದ ಕೊರತೆಯಿಂದ ನೆಲಕಚ್ಚಿದ್ದ ಅವುಗಳಿಗೆ ದಿಢೀರ್ ಬಂಡವಾಳ ಹರಿದುಬರುವಂತೆ ಮಾಡಿದೆ. ಈಗ ಬ್ಯಾಂಕ್ ದಾಖಲೆಗಳಲ್ಲಿ ಹಣದ ಹರಿವು ಪ್ರವಾಹದಂತೆ ಉಕ್ಕೇರುತ್ತಿದೆ. ದೇಶದಲ್ಲಿ ಚಲಾವಣೆಯಲ್ಲಿದ್ದ ಹಣದ ಒಟ್ಟು ಪ್ರಮಾಣದಲ್ಲಿ ಸರ್ಕಾರದ ರದ್ದು ಮಾಡಿದ ಈ ಉನ್ನತ ಮೌಲ್ಯದ ನೋಟುಗಳ ಪ್ರಮಾಣ ಶೇ.86ರಷ್ಟಿತ್ತು ಎಂಬುದನ್ನು ಮರೆಯಬಾರದು. ಈ ಶೇ.86ರಷ್ಟು ಪ್ರಮಾಣದ ಹಣದಲ್ಲೇ ಒಂದು ಭಾಗ ಹಣದ ಮಾರುಕಟ್ಟೆಯಿಂದ ಸೋರಿ ಹೋಗಿ ಸುರಕ್ಷತಾ ನಿಧಿಯಾಗಿ ಬ್ಯಾಂಕುಗಳ ಖಜಾನೆ ಸೇರಿತ್ತು. ಈಗ ನೋಟು ರದ್ದತಿ ಕ್ರಮದಿಂದ ಡಿಸೆಂಬರ್ 31ರ ವೇಳೆಗೆ ಜನತೆ ರು. 10 ಲಕ್ಷ ಕೋಟಿ ಮೌಲ್ಯದ ಹಳೆಯ ನೋಟುಗಳನ್ನು ಬ್ಯಾಂಕುಗಳಿಗೆ ವಾಪಸು ಮಾಡುತ್ತಾರೆ ಎಂದು ಸರ್ಕಾರ ಅಂದಾಜಿಸಿದೆ.
ಆದರೆ, ಚಲಾವಣೆಯಲ್ಲಿದ್ದ ಐದುನೂರು ಮತ್ತು ಸಾವಿರ ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯ ರು. 16 ಲಕ್ಷ ಕೋಟಿ. ಅಂದರೆ, ಕಾಂಗ್ರೆಸ್ ನಾಯಕ ಮತ್ತು ವಕೀಲ ಕಪಿಲ್ ಸಿಬಲ್ ಆರೋಪಿಸಿದಂತೆ, ಚಲಾವಣೆಯಲ್ಲಿದ್ದ ನೋಟುಗಳ ಒಟ್ಟು ಮೌಲ್ಯ ಮತ್ತು ಜನ ಹಿಂತಿರುಗಿಸುವ ನೋಟುಗಳ ಮೌಲ್ಯದ ನಡುವೆ ಇರುವ ಈ ರು. 6 ಲಕ್ಷ ಕೋಟಿ ಹಣದ ವ್ಯತ್ಯಾಸವನ್ನು ಸರಿದೂಗಿಸಲು ಆರ್‍ಬಿಐ ಅಷ್ಟು ಮೊತ್ತದ ಹೊಸ ನೋಟುಗಳನ್ನು ಮುದ್ರಿಸುತ್ತದೆಯೇ ಮತ್ತು ಆ ಹೆಚ್ಚುವರಿ ಮೊತ್ತವನ್ನು ಬ್ಯಾಂಕುಗಳು ತಮ್ಮ ವಸೂಲಾಗದ ಸಾಲವನ್ನು ಮನ್ನಾ ಮಾಡಲು ಬಳಸಿಕೊಳ್ಳುತ್ತವೆಯೇ ಎಂಬುದು ಈಗಿನ ಪ್ರಶ್ನೆ. ಸರ್ಕಾರ ಮತ್ತು ಬ್ಯಾಂಕುಗಳಿಗೆ ಇಂತಹ ಯೋಜನೆಗಳು ಇರಬಹುದು ಎಂಬುದು ಸದ್ಯದ ಊಹೆ. ಆದರೆ, ಜನಸಾಮಾನ್ಯರು ಬೆವರಿನ ಹಣದಲ್ಲಿ ಬ್ಯಾಂಕುಗಳು ತಮ್ಮ ಪ್ರಮಾದಗಳನ್ನು ಮುಚ್ಚಿಕೊಂಡು ಕೊಬ್ಬಲಿವೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.
ಹಾಗೆ ನೋಡಿದರೆ, ನೋಟು ರದ್ದತಿಯ ಸಮರೋಪಾದಿಯ ಕ್ರಮದಿಂದಾಗಿ ನಿಜಕ್ಕೂ ಲಾಭವಾಗುವುದು ಬ್ಯಾಂಕುಗಳಿಗೆ ಮತ್ತು ರು. 6.30 ಲಕ್ಷ ಕೋಟಿಯಷ್ಟು ಅಗಾಧ ಪ್ರಮಾಣದ ವಸೂಲಿಯಾಗದ ಸಾಲ ಮತ್ತು ನಿಷ್ಕ್ರಿಯ ಆಸ್ತಿಗೆ ಕಾರಣವಾಗಿರುವ ದೇಶದ ಕಾರ್ಪೊರೇಟ್ ವಲಯಕ್ಕೆ ಮಾತ್ರ. ಆರ್‍ಬಿಐ 2016ರ ಜೂನ್‍ನಲ್ಲಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಈ ವಸೂಲಿಯಾಗದ ಸಾಲದ ಪೈಕಿ ಸಾರ್ವಜನಿಕ ವಲಯದ ಬ್ಯಾಂಕುಗಳ ಪಾಲು ರು.5,71,443 ಕೋಟಿಯಷ್ಟಾದರೆ, ಖಾಸಗಿ ವಲಯದ ಬ್ಯಾಂಕುಗಳ ರು.58,331 ಕೋಟಿ. ಕಳೆದ ವರ್ಷ ಸಾರ್ವಜನಿಕ ವಲಯದ ಬ್ಯಾಂಕುಗಳ ವಸೂಲಿಯಾಗದ ಸಾಲದ ಮೊತ್ತ ರು.2,85,748 ಕೋಟಿ ಮತ್ತು ಖಾಸಗಿ ವಲಯದಲ್ಲಿ ಆ ಪ್ರಮಾಣ ರು.34,805 ಕೋಟಿ ಇತ್ತು.
ವಸೂಲಿಯಾಗದ ಸಾಲ ಮತ್ತು ನಿಷ್ಕ್ಟಿಯ ಆಸ್ತಿಯ ಪ್ರಮಾಣದಲ್ಲಿ ಆದ ಈ ಅಪಾಯಕಾರಿ ಏರಿಕೆಯೇ ಆರ್‍ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಅವರು ‘ಸುಸ್ತಿದಾರರ ಆಸ್ತಿ ವಶಪಡಿಸಿಕೊಳ್ಳುವ ಮೂಲಕವಾದರೂ ಸರಿ ಎಲ್ಲಾ ರೀತಿಯ ವಸೂಲಾಗದ ಸಾಲಗಳ ವಸೂಲಾತಿ ಮಾಡುವ ಮೂಲಕ ಬ್ಯಾಂಕುಗಳನ್ನು ಸ್ವಚ್ಛಗೊಳಿಸಬೇಕು’ ಎಂದು ಸಲಹೆ ನೀಡಲು ಕಾರಣವಾಗಿತ್ತು. ಆದರೆ ಅಂತಹ ಒಂದು ಕ್ರಮ ಸರ್ಕಾರದ ಆಪ್ತ ವಲಯದಲ್ಲಿರುವವರೂ ಸೇರಿದಂತೆ ಹಲವು ಬೃಹತ್ ಕಾರ್ಪೊರೇಟ್ ಕಂಪನಿಗಳ ಪಾಲಿಗೆ ದುಬಾರಿಯಾಗಿ ಪರಿಣಮಿಸುತ್ತಿತ್ತು. ಆದರೆ, ಇದೀಗ ಬ್ಯಾಂಕುಗಳು ನೋಟು ರದ್ದತಿ ಕ್ರಮದಿಂದಾಗಿ ಹರಿದು ಬರುತ್ತಿರುವ ಹಣದಲ್ಲಿ ತಮ್ಮ ವಸೂಲಿಯಾಗದ ಸಾಲಗಳನ್ನು ಮನ್ನಾ ಮಾಡುವ ಮೂಲಕ ತಮ್ಮ ಬ್ಯಾಲೆನ್ಸ್ ಶೀಟ್‍ನ್ನು ಸ್ವಚ್ಛಮಾಡಿಕೊಳ್ಳುತ್ತಿವೆ.
ಈಗಾಗಲೇ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆದ ಎಸ್‍ಬಿಐ ತನ್ನ ಬ್ಯಾಲೆನ್ಸ್‍ಶೀಟ್ ಸ್ವಚ್ಚತೆ ಆರಂಭಿಸಿಬಿಟ್ಟಿದೆ. ನೋಟು ರದ್ದತಿ ಜಾರಿಗೆ ಬಂದ ಒಂದೇ ವಾರದಲ್ಲಿ ಅದು ತನ್ನ 100 ಮಂದಿ ಸ್ವಯಂಕೃತ ಸುಸ್ತಿದಾರರ ಪೈಕಿ 60 ಮಂದಿಗೆ ಸೇರಿದ ಬರೋಬ್ಬರಿ ರು.7,016 ಕೋಟಿ ಮೊತ್ತದ ಸಾಲವನ್ನು ರದ್ದು ಮಾಡಿದೆ. ಆ ಪೈಕಿ ವಿಜಯ ಮಲ್ಯಗೆ ಸೇರಿದ ರು. 1200 ಕೋಟಿ ಬಾಕಿ ಸಾಲವೂ ಸೇರಿದೆ. ಹಾಗೆ ನೋಡಿದರೆ, ಸಾಲ ಮನ್ನಾ ಅಥವಾ ರದ್ದತಿ ನಡುವೆ ಅಂತಹ ವ್ಯತ್ಯಾಸವೇನೂ ಇಲ್ಲ ಮತ್ತು ಇಂತಹ ಪ್ರಕ್ರಿಯೆ ಈಗಾಗಲೇ ಜಾರಿಯಾಗಿಬಿಟ್ಟಿದೆ. 2016ರ ಜೂನ್ 30ರಂದೇ ಎಸ್‍ಬಿಐ ರು.48,000 ಕೋಟಿ ಮೊತ್ತದ ವಸೂಲಿಯಾಗದ ಸಾಲವನ್ನು ಮನ್ನಾ ಮಾಡಿತ್ತು. ಇದೀಗ ನೋಟು ರದ್ದತಿಯ ಬಳಿಕ ಬ್ಯಾಂಕುಗಳಿಗೆ ಕಾರ್ಪೊರೇಟ್ ಸಾಲ ಮನ್ನಾ ನಿಟ್ಟಿನಲ್ಲಿ ಹೊಸ ಹುಮ್ಮಸ್ಸು ಬಂದಿದ್ದು, ಇನ್ನೂ ಹಲವು ಬ್ಯಾಂಕುಗಳು ಎಸ್‍ಬಿಐ ಮಾದರಿಯನ್ನು ಅನುಸರಿಸಲಿವೆ ಎಂಬುದು ತಜ್ಞರ ಅಭಿಪ್ರಾಯ.
ಬ್ಯಾಂಕುಗಳು ವಸೂಲಾತಿ ಬಾಕಿ ಇರುವ ಮುಂಗಡ(ಎಯುಸಿಎ) ಎಂಬ ಖಾತೆಗೆ ಜಮಾ ಮಾಡುವ ಮೂಲಕ ಬ್ಯಾಂಕುಗಳು ವಸೂಲಿಯಾಗದ ಸಾಲವನ್ನು ರದ್ದು ಮಾಡುತ್ತವೆ. ಒಮ್ಮೆ ಹೀಗೆ ಮಾಡಿದರೆ, ವಸೂಲಿಯಾಗದ ಬಾಕಿ ಸಾಲಗಳು ಬ್ಯಾಂಕಿನ ಬ್ಯಾಲೆನ್ಸ್ ಶೀಟ್‍ನಲ್ಲಿ ಆ ಸಾಲ ಕಾಣಿಸಿಕೊಳ್ಳುವುದಿಲ್ಲ ಮತ್ತು ಆ ಮೂಲಕ ಅವು ತಮ್ಮ ವಸೂಲಿಯಾಗದ ಸಾಲದ ಪ್ರಮಾಣವನ್ನು ಮರೆಮಾಚುತ್ತವೆ. ಹಾಗಾಗಿ ಬ್ಯಾಂಕಿನ ಎನ್‍ಪಿಎ ಗಣನೀಯವಾಗಿ ತಗ್ಗಿದಂತೆ ಭಾಸವಾಗುತ್ತದೆ. ಸುಸ್ತಿಯಾಗಿರುವ ಸಾಲದ ವಸೂಲಾತಿಯ ಎಲ್ಲಾ ಪ್ರಯತ್ನಗಳೂ ಕೊನೆಗೊಂಡ ಬಳಿಕ ಬ್ಯಾಂಕುಗಳು ಹೀಗೆ ಎಯುಸಿಎ ಖಾತೆಗೆ ಸಾಲವನ್ನು ವರ್ಗಾಯಿಸಿ ಕೈತೊಳೆದುಕೊಳ್ಳುತ್ತವೆ. ಆದರೆ, ಎಸ್‍ಬಿಐ ಈ ನಡುವೆ ನೀಡುವ ತನ್ನ ಹೇಳಿಕೆಯಲ್ಲಿ ಮಲ್ಯ ಸೇರಿದಂತೆ ಹಲವರು ಉಳಿಸಿಕೊಂಡಿರುವ ಬಾಕಿ ಸಾಲವನ್ನು ವಸೂಲಿ ಮಾಡಲು ತಾನು ಎಲ್ಲ ಪ್ರಯತ್ನ ಮುಂದುವರಿಸುವುದಾಗಿ ಹೇಳಿದೆ.
ಹೀಗೆ ಭಾರತೀಯ ಬ್ಯಾಂಕುಗಳನ್ನು ಅಪಾಯದಿಂದ ಪಾರು ಮಾಡಲು ಹೆಚ್ಚುವರಿ ಹಣಕಾಸಿನ ಸರಬರಾಜು ಅಗತ್ಯವಿದೆ ಎಂಬ ಅಂಶ ಈಗ್ಗೆ ಕೆಲವು ತಿಂಗಳುಗಳ ಹಿಂದೆಯೇ ಗೊತ್ತಾಗಿತ್ತು. ಕಳೆದ ಮೇ ತಿಂಗಳಿನಲ್ಲಿ ಐಎಂಎಫ್ ನೀಡಿದ ವರದಿಯೊಂದರಲ್ಲಿ ಈ ಬಗ್ಗೆ ಗಮನ ಸೆಳೆಯಲಾಗಿತ್ತು. ಇಡೀ ಏಷ್ಯಾ-ಫೆಸಿಪಿಕ್ ವಲಯದ ಪ್ರಮುಖ ರಾಷ್ಟ್ರಗಳ ಪೈಕಿ ಭಾರತೀಯ ಬ್ಯಾಂಕುಗಳಲ್ಲಿ ಸುರಕ್ಷತಾ ನಿಧಿಯಾಗಿ ಇಡಬೇಕಾದ ‘ಟೈಯರ್-1 ಕ್ಯಾಪಿಟಲ್’ ಅಥವಾ ಹಣಕಾಸಿನ ತುರ್ತುಪರಿಸ್ಥಿತಿಯಲ್ಲಿ ಬಳಕೆಗೆ ಮೀಸಲಿಡುವ ಹಣದ ಮೊತ್ತ ಅತ್ಯಂತ ಕನಿಷ್ಠ ಪ್ರಮಾಣದಲ್ಲಿದೆ ಎಂದು ಆ ವರದಿ ಎಚ್ಚರಿಸಿತ್ತು. ಅಂದರೆ, ದೊಡ್ಡ ಮಟ್ಟದ ಆರ್ಥಿಕ ಮತ್ತು ಹಣಕಾಸಿನ ಹೊಡೆತಗಳನ್ನು ತಾಳಿಕೊಳ್ಳುವಂತಹ ಸುರಕ್ಷತಾ ಕ್ರಮಗಳನ್ನು ಭಾರತೀಯ ಬ್ಯಾಂಕುಗಳು ಹೊಂದಿಲ್ಲ ಎಂಬುದು ಆಗಲೇ ಜಗಜ್ಜಾಹೀರಾಗಿತ್ತು.
ಆರ್‍ಬಿಐ ಪ್ರಕಾರ, ಎನ್‍ಪಿಎ ಮತ್ತು ಕೆಟ್ಟ ಸಾಲಗಳ ಪ್ರಮಾಣ ರಾಷ್ಟ್ರೀಯ ಜಿಡಿಪಿಯ ಶೇ.7ರಷ್ಟು ಇದೆ. ಅಂದರೆ, ಸುಮಾರು 146 ಬಿಲಿಯನ್ ಡಾಲರ್ (ಸುಮಾರು ರು. 9.8 ಲಕ್ಷ ಕೋಟಿ) ನಷ್ಟು ಅಗಾಧ ಪ್ರಮಾಣದ ಸಾಲ ವಸೂಲಿಯಾಗದೆ ಉಳಿದಿದೆ. ಆ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟದಲ್ಲಿರುವ ಬ್ಯಾಂಕುಗಳನ್ನು ಉಳಿಸುವ ಯತ್ನವಾಗಿ ಸರ್ಕಾರ ಇಂದ್ರಧನುಷ್ ಯೋಜನೆ ಮೂಲಕ 2015ರ ಆಗಷ್ಟ್ ನಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ಪುನರ್ ಹಣ ಸರಬರಾಜು ಮಾಡಿತು. ಆ ಯೋಜನೆಯಡಿ ದೇಶದ 13 ಬ್ಯಾಂಕುಗಳಿಗೆ ರು.20,058 ಕೋಟಿ ಹಣ ನೀಡಲಾಯಿತು. ಆದರೆ, ಅಷ್ಟು ದೊಡ್ಡ ಪ್ರಮಾಣದ ಹಣ ನೀಡಿಯೂ ಹೆಚ್ಚುತ್ತಲೇ ಇದ್ದ ಎನ್‍ಪಿಎ ಪ್ರಮಾಣಕ್ಕೆ ಕಡಿವಾಣ ಹಾಕುವುದು ಸಾಧ್ಯವಾಗಲಿಲ್ಲ.
ಹಾಗಾಗಿ, ಬ್ಯಾಂಕುಗಳನ್ನು ರಕ್ಷಿಸಲು ಏನಾದರೂ ಮಹತ್ವದ ಕ್ರಮ ಕೈಗೊಳ್ಳಲೇಬೇಕಾಗಿತ್ತು. ಆಗ ಸರ್ಕಾರಕ್ಕೆ ಹೊಳೆದ ಉಪಾಯವೇ ನೋಟು ರದ್ದತಿ ಕ್ರಮ. ಆದರೆ, ಹಣಕಾಸಿನ ಜಗತ್ತಿನಲ್ಲಿ ಭಾರೀ ವ್ಯತಿರಿಕ್ತ ಪರಿಣಾಮ ಉಂಟುಮಾಡುವ ಮತ್ತು ಬೃಹತ್ ಮೊತ್ತದ ಹಣ ಜಮಾ ಮಾಡುವವರು ಹಿಂಜರಿಯುವಂತೆ ಮಾಡುವ ಅಂತಹ ದಿಢೀರ್ ಕ್ರಮದ ಹಿಂದಿನ ತನ್ನ ನಿಜವಾದ ಉದ್ದೇಶವನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುವುದು ಒಳಿತಲ್ಲ ಎಂದು ಅರಿತ ಸರ್ಕಾರ, ಅದಕ್ಕಾಗಿ ಕಪ್ಪುಹಣದ ಮೇಲಿನ ಸರ್ಜಿಕಲ್ ದಾಳಿ ಎಂದು ಘೋಷಿಸಿ ಜನರ ಕಣ್ಣಿಗೆ ಮಣ್ಣೆರಚಲಾಯಿತು.
ಜೆಎನ್‍ಯು ಸೆಂಟರ್ ಫಾರ್ ಎಕನಾಮಿಕ್ ಸ್ಟಡೀಸ್ ಅಂಡ್ ಪ್ಲಾನಿಂಗ್ ವಿಭಾಗದ ಮಾಜಿ ಮುಖ್ಯಸ್ಥರಾದ ಪ್ರೊ. ರಾಮ್ ಕುಮಾರ್ ಅವರಂಥ ಕಪ್ಪುಹಣದ ಕುರಿತ ತಜ್ಞರ ಪ್ರಕಾರ, ಈ ವರ್ಷ ಗುರುತಿಸಲಾದ ರು.90 ಲಕ್ಷ ಕೋಟಿ ಮೊತ್ತದ ಕಪ್ಪುಹಣದ ಪೈಕಿ ನಗದು ಪ್ರಮಾಣ ಕೇವಲ ಶೇ.3ರಷ್ಟು ಮಾತ್ರ. ಹಾಗಾಗಿ ಕೆಲವು ಮಾಧ್ಯಮಗಳು ಬಿಂಬಿಸುತ್ತಿರುವಂತೆ ಈಗ ಬ್ಯಾಂಕುಗಳನ್ನು ಜಮಾ ಆಗಿರುವ ಹಣದಲ್ಲಿ ಬಹುಪಾಲು ಕಪ್ಪುಹಣವಲ್ಲ ಎಂದು ಯಾರು ಬೇಕಾದರೂ ಊಹಿಸಬಹುದು.
ಬ್ಯಾಂಕುಗಳ ಖಜಾನೆ ತುಂಬುತ್ತಿರುವ ಈ ಹಣ ಬರುತ್ತಿರುವುದು ಭೂಗತ ದೊರೆಗಳಿಂದಲೂ ಅಲ್ಲ, ಭ್ರಷ್ಟ ಉದ್ಯಮಿಗಳಿಂದಲೂ ಅಲ್ಲ, ಸಿನಿಮಾ ತಾರೆಗಳಾಗಲೀ ಅಥವಾ ರಾಜಕಾರಣಿಗಳಿಂದಲೂ ಅಲ್ಲ. ಬದಲಾಗಿ ಬ್ಯಾಂಕಿನ ಮುಂದೆ ಸರದಿಸಾಲಿನಲ್ಲಿ ನಿಂತಿರುವವರು ಗೃಹಿಣಿಯರು, ಆಟೋಚಾಲಕರು, ಸಾಮಾನ್ಯ ವೃತ್ತಿನಿರತರು ಮತ್ತು ದಿನಗೂಲಿ ಕಾರ್ಮಿಕರು. ಅವರು ಪ್ರಾಮಾಣಿಕ ಜನ ಮತ್ತು ಆ ಕಾರಣಕ್ಕಾಗೇ ಶೋಷಣೆಯ ಆತಂಕಕ್ಕೆ ಒಳಗಾದವರು. ತಮ್ಮ ಬೆವರಿನ ಫಲವಾದ ಹಣವನ್ನು ಉಳಿಸಿಕೊಳ್ಳಲು ಬೇರೆ ದಾರಿ ಇಲ್ಲದೆ ಹೀಗೆ ಬ್ಯಾಂಕುಗಳ ಮುಂದೆ ಊಟ, ನಿದ್ರೆ ಬಿಟ್ಟು ಕಾಯುತ್ತಿರುವವರು.
ಆದರೆ, ಅವರಿಗೆ ಗೊತ್ತಿಲ್ಲದ ಸಂಗತಿಯೆಂದರೆ, ಅವರು ಹಾಗೆ ಮಾಡುವ ಮೂಲಕ ಕಪ್ಪುಹಣದ ವಿರುದ್ಧ ಹೋರಾಡುತ್ತಿಲ್ಲ ಬದಲಾಗಿ ಲೂಟಿಯಾಗಿರುವ ಬ್ಯಾಂಕಿಂಗ್ ವ್ಯವಸ್ಥೆಯನ್ನು ಉಳಿಸುವ ಮೂಲಕ ಪರೋಕ್ಷವಾಗಿ ಸಾಲಗಳ್ಳರು ಮತ್ತು ಕಾರ್ಪೊರೇಟ್ ಕುಳಗಳ ಬಾಕಿಯನ್ನು ತೀರಿಸುತ್ತಿದ್ದೇವೆ ಎಂಬುದು!
—