ಬೆಳಕ ಬಿಟ್ಟು ಕತ್ತಲಲ್ಲಿ ಕರಿ ಬೆಕ್ಕು ಹುಡುಕುವ ಆಟ-ಪಿ.ಓಂಕಾರ್
ಎಂಜಿನಿಯರಿಂಗ್ ಮುಗಿಸಿ,ತುಮಕೂರಿನಲ್ಲಿ ಕಂಪ್ಯೂಟರ್ ಕೇಂದ್ರ ನಡೆಸುತ್ತಿದ್ದ ಸತೀಶ್ ಕೌಟುಂಬಿಕ ಕಾರಣಕ್ಕೆ ಹುಟ್ಟೂರು ಗುಬ್ಬಿ ತಾಲೂಕು ಕಾಡಶೆಟ್ಟಿಹಳ್ಳಿಗೆ ಮರಳಿ,ಅಲ್ಲೆ ನೆಲೆ ನಿಂತರು. ಕೃಷಿ ಕಸುಬಿನ ಏಕತಾನತೆ ತಪ್ಪಿಸಿಕೊಳ್ಳಲು ಊರೊಳಿತನ ಕೆಲಸದಲ್ಲಿ ತೊಡಗಿಸಿಕೊಂಡರು.ಗೆಳೆಯರೊಂದಿಗೆ ಮಕ್ಕಳಮನೆ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಕಟ್ಟಿ,ಅದರ ಮೂಲಕ ಗ್ರಾಮದ ಶಾಲೆಯನ್ನು ದತ್ತು ಪಡೆದು ಹಳ್ಳಿ ಮಕ್ಕಳಲ್ಲಿ ಪಠ್ಯೇತರ;ಸಾಂಸ್ಕೃತಿಕ ಆಸಕ್ತಿ ಮೂಡಿಸತೊಡಗಿದರು. ಇದೇ ವೇಳೆ ಗ್ರಾಮ ಪಂಚಾಯಿತಿ ಚುನಾವಣೆ ಪ್ರಕಟವಾಯಿತು.ಸರ್ಧಿಸಿ ಗೆದ್ದರು.
ರಂಗಭೂಮಿ ಸಂಪರ್ಕದ ಮೂಲಕ ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ ಅವರನ್ನು ಭೇಟಿಯಾಗಿ ದೊಡ್ಡ ಮೊತ್ತದ ಅನುದಾನ ತಂದು ಶಾಲೆಗೆ ಕೊಠಡಿ,ಮಿನಿ ರಂಗಮಂದಿರ,ಗ್ರಂಥಾಲಯ ಕಟ್ಟಿಸಿದರು.ಇದರಿಂದ ಕಾಡಶೆಟ್ಟಿ ಹಳ್ಳಿ ಸರಕಾರಿ ಶಾಲೆ ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ಮಾದರಿಯಾಗಿ
ರೂಪುಗೊಂಡು ಸುತ್ತಲ ಇಪ್ಪತ್ತಕ್ಕೂ ಹೆಚ್ಚು ಹಳ್ಳಿ ಮಕ್ಕಳನ್ನು ಸೆಳೆದಿದೆ. ತುಮಕೂರಿನ ರೋಟರಿ ಪೂರ್ವ ಸಂಸ್ಥೆ ಹಳ್ಳಿ ಮಕ್ಕಳಿಗೆ ಬಸ್ ವ್ಯವಸ್ಥೆ ಮಾಡಿದ್ದು, ಹಾಜರಾತಿ 170ಕ್ಕಿಂತ ಹೆಚ್ಚಿದೆ. ಐದು 5 ಜನ ಶಿಕ್ಷಕರ ಜತೆಗೆ ಇನ್ನಿಬ್ಬರನ್ನು ಎಸ್‌ಡಿಎಂಸಿಯೇ ನೇಮಿಸಿಕೊಂಡಿದೆ.‘ಮಕ್ಕಳೊಂದಿಗೆ ಮಾತುಕತೆ’ಯಂತ ಕ್ರಿಯಾಶೀಲ ಚಟುವಟಿಕೆಗಳು ಜಾರಿಯಲ್ಲಿವೆ.
ಮಾತ್ರವಲ್ಲ,ಉದ್ಯೋಗ ಖಾತ್ರಿ ಮತ್ತಿತರ ಸರ್ಕಾರಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಗ್ರಾಮಕ್ಕೆ ರಸ್ತೆ,ಕುಡಿಯುವ ನೀರು ಇತ್ಯಾದಿ ಮೂಲ ಸೌಲಭ್ಯ
ಕಲ್ಪಿಸಿದ್ದಾರೆ.ಬಹುತೇಕ ಮನೆಗಳು ಶೌಚಾಲಯವನ್ನು ಹೊಂದಿವೆ. ಕಳೆದ ಗ್ರಾಪಂ ಚುನಾವಣೆಯಲ್ಲಿ ಊರಿನ ಜನ ಸತೀಶ್ ಮೇಲಿನ ವಿಶ್ವಾಸವನ್ನು
ನವೀಕರಿಸಿದ್ದಾರೆ. ತಾತನ ಕಾಲದ ರಾಜಕೀಯ ಸಾಂಗತ್ಯ ಇದ್ದರೂ, ಕೈಬಾಯಿ ಶುದ್ಧ ಉಳಿಸಿಕೊಂಡಿರುವುದರಿಂದ ಹೆಚ್ಚಿನ ರಾಜಕೀಯ ತಂಟೆಗಳು ತಟ್ಟಿಲ್ಲ.‘ನಾನು ಪ್ರಾಮಾಣಿಕವಾಗಿದ್ದೇನೆ.ನನ್ನ ಜತೆ ವ್ಯವಹರಿಸುವವರು ಕೂಡ ಏನನ್ನೂ ನಿರೀಕ್ಷಿಸುವುದಿಲ್ಲ. ಮೊದ ಮೊದಲು ಕೆಲವರು ತುಸು ಭಿನ್ನಾಭಿಪ್ರಾಯ ಎತ್ತಿದ್ದಿದೆ. ನಿಸ್ವಾರ್ಥ ಕೆಲಸ ಅದನ್ನೆಲ್ಲ ಮರೆಸಿದೆ’ ಎನ್ನುವ ಸತೀಶ್,ರಾಜ್ಯಾದ್ಯಂತದ ಗ್ರಾಪಂ ಸದಸ್ಯರ ಒಕ್ಕೂಟ ರಚನೆ ಮತ್ತು ಸದಸ್ಯರಲ್ಲಿ ಗುಣಾತ್ಮಕ ಅರಿವು ಮೂಡಿಸುವ ನಿಟ್ಟಿನ ಪ್ರಯತ್ನಗಳಲ್ಲಿ ಸಕ್ರೀಯರಾಗಿದ್ದಾರೆ.
**
ಗ್ರಾಮಸ್ವರಾಜ್ಯದ ಕನಸು ಸಾಕಾರದ ವಿಷಯದಲ್ಲಿ ಇನ್ನೊಂದು ಯಶೋಗಾಥೆ ಹುಟ್ಟೂರನ್ನು ಮಾದರಿಯನ್ನಾಗಿ ರೂಪಿಸಿದ ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯ ಕೂತಂಬಾಕಂ ಗ್ರಾಮದ ಇಳಂಗೋ ರಂಗಸ್ವಾಮಿ ಅವರದ್ದು. ಒಟ್ಟು ಜನಸಂಖ್ಯೆಯ ಅರ್ಧದಷ್ಟು ದಲಿತರಿರುವ;ಚೆನ್ನೈಗೆ ಕೇವಲ 35 ಕಿಮೀ ದೂರದ ಈ ಹಳ್ಳಿ ಒಂದು ಕಾಲಕ್ಕೆ ಜಾತಿ ಕಲಹ,ಅಕ್ರಮ ಮದ್ಯದ ಹಾವಳಿ ವಿಪರೀತವಿತ್ತು. ಬಡವರ ಹಣ, ನೆಮ್ಮದಿ, ಆರೋಗ್ಯ, ಕುಟುಂಬ ಸಂಬಂಧ ಎಲ್ಲವನ್ನೂ ಈ ಪಿಡುಗುಗಳು ನೊಣೆದು ಹಾಕಿದ್ದವು. ಇಂಥ ಸಾಮಾಜಿಕ ಸಂದರ್ಭದಲ್ಲಿ ಬೆಳೆದ ರಂಗಸ್ವಾಮಿ ಉನ್ನತ ವ್ಯಾಸಂಗ ನಂತರ ಕಂಪನಿಯೊಂದರಲ್ಲಿ ಉದ್ಯೋಗ ಹಿಡಿದರು;ಸಿಎಸ್‌ಐಆರ್ ವಿಜ್ಞಾನಿಯಾದರು. ದೊಡ್ಡ ಮೊತ್ತದ ಸಂಬಳ ಬ್ಯಾಂಕ್ ಖಾತೆ ಸೇರುತ್ತಿತ್ತು. ಆದರೆ, ಬಾಲ್ಯಕಾಲದ ನೋವು ಕೊರೆಯುತ್ತಲೇ ಇತ್ತು. ಬಿಡುವಿನಲ್ಲಿ ಊರಿಗೆ,ಬೇರಿಗೆ ಮರಳಿ ಯುವಕರು,ಮಹಿಳೆಯರು ಮತ್ತು ರೈತರ ಗುಂಪು ಕಟ್ಟಿ,ಅವುಗಳ ಮೂಲಕ ಗ್ರಾಮವನ್ನು ಪುನರ್ ಕಟ್ಟುವ ಪ್ರಯತ್ನ ಆರಂಭಿಸಿದರು.ಈ ನಡೆಯಲ್ಲಿ ಸಣ್ಣ ಬೆಳಕು ಗೋಚರಿಸುತ್ತಿದ್ದಂತೆ 1994ರಲ್ಲಿ ಹುದ್ದೆಗೆ ರಾಜೀನಾಮೆ ನೀಡಿ ಗ್ರಾಮದಲ್ಲೇ ನೆಲೆ ನಿಂತರು. ಕಂಪನಿಯೊಂದರಲ್ಲಿ ಉದ್ಯೋಗ ಪಡೆದ ಪತ್ನಿ ಸುಮತಿ ಬೆಂಬಲಿಸಿದರು.ತಮ್ಮ ನಿರ್ವಹಣಾ ಜ್ಞಾನವನ್ನು ಬಳಸಿಕೊಂಡ ಇಳಂಗೋ ಸರ್ಕಾರಿ ಯೋಜನೆ,ರಾಷ್ಟ್ರೀಕೃತ ಬ್ಯಾಂಕ್ ಮತ್ತು ಕಾಳಜಿಯುಳ್ಳ ಸಂಸ್ಥೆಗಳ ನೆರವಿನಲ್ಲಿ ಹಲವು ಕಾರ‌್ಯಕ್ರಮ ಅನುಷ್ಠಾನಗೊಳಿಸಿದರು. ಅದಾದ ಎರಡು ವರ್ಷದಲ್ಲಿ, ಪಂಚಾಯತ್‌ರಾಜ್ ಆಶಯ ರಾಜ್ಯದಲ್ಲಿ ಚಿಗುರೊಡೆಯಿತು.ಗ್ರಾಮ ಪಂಚಾಯತಿ ಸದಸ್ಯರಾಗಿ; ಅಧ್ಯಕ್ಷರೂ ಆದ ಇಳಂಗೋ, ಪಂಚಾಯತ್ ಕಾಯಿದೆಯನ್ವಯ ಗ್ರಾಮದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿದರು. ಅಕ್ರಮ ಮದ್ಯ ತಡೆದದ್ದು, ಗ್ರಾಮಾಡಳಿತದಲ್ಲಿ ಪಾರದರ್ಶಕತೆ ತಂದದ್ದು ಕೆಲವು ಅಧಿಕಾರಿ, ಗುತ್ತಿಗೆದಾರರಿಗೆ ಅಪತ್ಯವಾಯಿತು.ಇವರ ಷಡ್ಯಂತ್ರದಿಂದ 1998ರಲ್ಲಿ ಇಳಂಗೋ ಅಮಾನತಾದರು. ಆದರೆ, ಕಲೆಕ್ಟರ್ ಆದೇಶವನ್ನು ತಿರಸ್ಕರಿಸಿದ ಗ್ರಾಮಸ್ಥರು ಇಳಂಗೋ ಬೆನ್ನಿಗೆ ನಿಂತರು.ಸರಕಾರ ಅವರನ್ನೇ ಅಧ್ಯಕ್ಷರನ್ನಾಗಿ ಮರು ನೇಮಕ ಮಾಡುವುದು ಅನಿವಾರ‌್ಯವಾಯಿತು.
ನಂತರ, ಗ್ರಾಮ ಹುಬ್ಬೇರಿಸುವ ರೀತಿಯಲ್ಲಿ ಚಹರೆ ಬದಲಿಸಿಕೊಂಡಿತು.ದೇಶದಲ್ಲಿಯೇ ಮೊದಲ ಬಾರಿಗೆ ಒಂದೇ ಕಾಲನಿಯಲ್ಲಿ 50 ಜೋಡಿ ಮನೆ ನಿರ್ಮಿಸಿ, ಒಂದೊಂದನ್ನು ದಲಿತರು ಮತ್ತು ದಲಿತೇತರ ಕುಟುಂಬಗಳಿಗೆ ಸಮವಾಗಿ ಹಂಚಿ,‘ಸಮತ್ವಪುರಂ’ಎಂದು ಹೆಸರಿಟ್ಟರು. ಸಮಾನತೆಯ ಆಶಯ ಸಾರಿದ ಈ ಪ್ರಯೋಗವನ್ನು ನಂತರದ ವರ್ಷಗಳಲ್ಲಿ ತಮಿಳುನಾಡು ಸರಕಾರ ಇಡೀ ರಾಜ್ಯಕ್ಕೆ ಅನ್ವಯಿಸಿಕೊಂಡಿತು. 2001ರಲ್ಲಿ ಇಳಂಗೋ ಅವಿರೋಧವಾಗಿ ಮರು ಆಯ್ಕೆಯಾಗಿ,ಹಿಡಿದ ಕೆಲಸಗಳನ್ನು ಪೂರ್ಣಗೊಳಿಸಿದರು.ಮೂಲಸೌಲಭ್ಯ,ಆರ್ಥಿ
**
ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ನಡೆದ ಚುನಾವಣೆ ಸಂದರ್ಭ ನಡೆದ ಕೋಟಿ ಕೋಟಿಗಳ ಮೇಲಾಟ,ಬಹುಸಂಖ್ಯಾತ ಮತದಾರರಾಗಿದ್ದ ಗ್ರಾಪಂ ಸದಸ್ಯರು ‘ಬಳಕೆ’ಯಾದ ಪರಿಯ ನಡುವೆ ‘ಮನಸ್ಸಿದ್ದರೆ ಮಾರ್ಗ’ ಎನ್ನುವ ಮಾತನ್ನು ನಿರೂಪಿಸಿದ ಈ ಇಬ್ಬರು ಗ್ರಾ.ಪಂ.ಸದಸ್ಯರು ಕಾಡತೊಡಗಿದರು. ಬದ್ಧತೆಯ ಕೆಲಸದಿಂದ ಯಶಸ್ಸು ಸಾಧ್ಯ;ಎಂಥದೇ ಸ್ಥಾಪಿತ ಹಿತಾಸಕ್ತಿಗಳೂ ಮಣಿಯುತ್ತವೆ ಮತ್ತು ಒಳ್ಳೆಯದರ ಜತೆ ನಿಲ್ಲುವವರು ಇದ್ದೇ ಇರುತ್ತಾರೆ ಎನ್ನುವುದಕ್ಕೆ ಎರಡು ಉದಾಹರಣೆಯಂತೆ ತೋರಿದರು. ಮೇಲ್ಮನೆಗೆ ಏರಲಿಕ್ಕಾಗಿ ಕೋಟಿಗಳನ್ನು ಚೆಲ್ಲಿದವರಷ್ಟೆ ಕೊಟ್ಟ ಎಲ್ಲರಿಂದಲೂ ಬಾಚಿಕೊಂಡ ಪಂಚಾಯಿತಿ ಸದಸ್ಯರೂ ತೀವ್ರ ಟೀಕೆಗೆ ಗುರಿಯಾದರು.‘ಇದು ಅಧಿಕಾರ ವಿಕೇಂದ್ರೀಕರಣವಲ್ಲ; ಭ್ರಷ್ಟಾಚಾರದ ವಿಕೇಂದ್ರೀಕರಣ’ಎಂಬ ಆಕ್ಷೇಪ ಮರುಕಳಿಸಿತು. ರಾಜ್ಯಸಭೆ ಚುನಾವಣೆಯಲ್ಲಿ ಶಾಸಕರೇ ಮತವನ್ನು ಮಾರಿಕೊಳ್ಳುವಾಗ ಆರ್ಥಿಕವಾಗಿ ದುರ್ಬಲ ಪಂಚಾಯತಿ ಸದಸ್ಯರು ಪಡೆದರೆ ತಪ್ಪೇನು ಎಂಬ ವಾದ ಮಂಡನೆಯೂ ನಡೆಯಿತು. ಹಾಗಾದರೆ ತಪ್ಪು ಯಾರದ್ದು? ಉತ್ತರ ಸಲೀಸಲ್ಲ. ಸ್ಥಳೀಯ ರಾಜಕೀಯವನ್ನು ಬೆಳೆಸಿ ತಾವು ಬೆಳೆಯಬೇಕಾದ ಮೇಲ್‌ಸ್ತರದ ರಾಜಕಾರಣಿಗಳು ಈಗ ‘ಬಳಸಿಕೊಂಡು’ ಬೆಳೆಯುತ್ತಿದ್ದಾರೆ. ಮೇ
***
ಈ ಹಿನ್ನೆಲೆಯಲ್ಲಿಯೇ, ಪಂಚಾಯತ್ ರಾಜ್ ಸಂಸ್ಥೆ ಬಲವರ್ಧನೆಗೆ ತನ್ನ ವರದಿಯಲ್ಲಿ ಹಲವು ಮಾರ್ಗೋಪಾಯ ಸೂಚಿಸಿರುವ ಮಾಜಿ ಸ್ಪೀಕರ್ ಎಸ್.ರಮೇಶ್ ಕುಮಾರ್ ಸಮಿತಿ ,ಪಂಚಾಯಿತಿ ಮಟ್ಟದಲ್ಲಿ ‘ಸ್ಟೇಟ್‌ಫಂಡೆಡ್’ಚುನಾವಣಾ ವಿಧಾನ ಅಳವಡಿಕೆ ಪ್ರಸ್ತಾಪ ಮುಂದಿಟ್ಟಿದೆ.’ಚುನಾವಣೆ ಘೋಷಣೆ ನಂತರ ಹತ್ತು ದಿನದಲ್ಲಿ ಪ್ರಕ್ರಿಯೆ ಮುಗಿಯಬೇಕು; ಚುನಾವಣಾ ಆಯೋಗವೇ ಅಭ್ಯರ್ಥಿಗಳ ಪರವಾಗಿ ಪಂಚಾಯಿತಿ ಪ್ರಮುಖ ಕೇಂದ್ರಗಳಲ್ಲಿ ಪ್ರಚಾರ ಸಭೆ ವ್ಯವಸ್ಥೆ ಮಾಡಿ,ಮತಯಾಚನೆಗೆ ಅವಕಾಶ ಕಲ್ಪಿಸಬೇಕು. ಅದರ ಹೊರತು ಹಣ ಹಂಚಿದ್ದು, ಪ್ರಚಾರ ಮಾಡಿದ್ದು ಕಂಡಲ್ಲಿ ಕೇಸು ದಾಖಲಿಸಬೇಕು.ಇಂಥ ಪ್ರಕರಣಗಳನ್ನು ಕಾಲಮಿತಿಯಲ್ಲಿ ಇತ್ಯರ್ಥ ಪಡಿಸಬೇಕು’ಎಂಬಿತ್ಯಾದಿ ಶಿಫಾರಸು ಮಾಡಿದೆ. ಮೊದಲಾಗಿ ಪಂಚಾಯಿತಿ ಮಟ್ಟದಲ್ಲಿ ಹಣ,ತೋಳ್ಬಲ ಬಳಕೆಯನ್ನು ತಪ್ಪಿಸಿದರೆ ಭವಿಷ್ಯದಲ್ಲಿ ವಿಧಾನಸಭೆ,ಲೋಕಸಭೆಗಳಿಗೂ ವಿಸ್ತರಿಸಬಹುದೆನ್ನುವುದು ಆಶಯ.ಆದರೆ,ಈಚೆಗೆ ‘ಕರ್ನಾಟಕ ಗ್ರಾಮ ಸ್ವರಾಜ್-
ಪಂಚಾಯತ್ ರಾಜ್’ ಮಸೂದೆ ಅಂಗೀಕರಿಸಿದ ಸರಕಾರ ಈ ಸಂಗತಿಯನ್ನು ಅದರಿಂದ ಹೊರಗಿಟ್ಟಿದೆ.ಇದೇ ಹೊತ್ತಿನಲ್ಲಿ ಮತ್ತೊಂದು ಸುತ್ತಿನ ಹಣ ಮೇಲಾಟಕ್ಕೆ ಜಿಪಂ,ತಾಪಂ ಚುನಾವಣಾ ಅಖಾಡ ಸಜ್ಜಾಗುತ್ತಿದೆ. ಚುನಾವಣೆಗಳಲ್ಲಿ ಹಣ ಸುರಿದು ಸುಸ್ತೆದ್ದು ಹೋದ ರಾಜಕೀಯ ಮುಖಂಡರೊಬ್ಬರು,‘ಇಂಥ ಸ್ಥಿತಿಯಲ್ಲಿ ಪ್ರಾಮಾಣಿಕತೆಯ ಮಾತು ಕತ್ತಲಲ್ಲಿ ಕರಿ ಬೆಕ್ಕು ಹುಡುಕುವ ಆಟದಂತಾಗಿದೆ’ ಎಂದು ಬಹಿರಂಗವಾಗಿ ಹೇಳಿದರು. ನಿಜ,ಭ್ರಷ್ಟತೆಯ ವಿಷಯದಲ್ಲಿ ಅಂತರಂಗ ಶುದ್ಧಿ ಮಾಡಿಕೊಳ್ಳದೆ ಬಹಿರಂಗದಲ್ಲಿ ಬಾಯುಪಚಾರದ ಮಾತಿಗೆ ಸೀಮಿತ ರಾಜಕೀಯ ಪಕ್ಷಗಳು ಕತ್ತಲಲ್ಲಿ ಕರಿ ಬೆಕ್ಕು ಹುಡುಕುವ ಆಟವನ್ನೇ ಆಡುತ್ತಿವೆ.
ಇಂಥ ಸ್ಥಿತಿಯಲ್ಲೂ,ದೇಶದ 6 ಲಕ್ಷಕ್ಕೂ ಹೆಚ್ಚು ಹಳ್ಳಿಗಳನ್ನು ಬೆಸೆದಿರುವ 2.70 ಲಕ್ಷಕ್ಕೂ ಹೆಚ್ಚು ಪಂಚಾಯಿತಿಗಳಲ್ಲಿ ಕೂತಂಬಾಕಂನಂತಹ ಸಾವಿರ ಮಾದರಿಗಳು ಸಿಗಬಹುದು. ರಾಜ್ಯದ ಆರು ಸಾವಿರಕ್ಕೂ ಹೆಚ್ಚು ಗ್ರಾಪಂಗಳ ಲಕ್ಷಕ್ಕೂ ಹೆಚ್ಚು ಸದಸ್ಯರಲ್ಲಿ ಸತೀಶ್ ಅವರಂತವರು ಕೆಲವು ನೂರು ಸಿಕ್ಕಾರು.
ಕಾನೂನು,ಕಾಯ್ದೆ,ಕಟ್ಟಪ್ಪಣೆಗಳಿಗೆ ಕಾಯ್ದು ಕೂರದೆ ಇರುವ ವ್ಯವಸ್ಥೆಯಲ್ಲೇ ಸದಾಶಯದ ಬೆಳಕನ್ನು ಹಬ್ಬಿಸುವ ಇಂಥವರ ಸಂತತಿ ಲಕ್ಷವಾಗಲಿ ಎಂದು ಹಾರೈಸೋಣ.