ಬಾಳೆ ಬೆಳೆದು ಹಣ್ಣಾದವರಿಗೆ ಸಿಗಬೇಕಾದ್ದೇನು?-ಆನಂದತೀರ್ಥ ಪ್ಯಾಟಿ
ಅತ್ಯಧಿಕ ಪ್ರಮಾಣದ ಉತ್ಪನ್ನ ಒಮ್ಮೆಲೇ ಮಾರುಕಟ್ಟೆಗೆ ಬಂದಾಗ ಇಂಥ ಘಟನೆಗಳು ನಡೆದುಬಿಡುತ್ತವೆ. ‘ಅಧಿಕ ಉತ್ಪಾದನೆ’ಯನ್ನೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡುವ ಕೃಷಿ– ತೋಟಗಾರಿಕೆ ಇಲಾಖೆಗಳು, ‘ಇನ್ನಷ್ಟು ಮತ್ತಷ್ಟು ಬೆಳೆಯಿರಿ’ ಎಂದು ರೈತರನ್ನು ಪ್ರಚೋದಿಸುವ ಕೃಷಿ ವಿಜ್ಞಾನಿಗಳು ಮಾತ್ರ ನಾಪತ್ತೆಯಾಗಿ ಬಿಡುತ್ತಾರೆ. ಕೃಷಿ ತಜ್ಞರ ಮಾತು ಕೇಳಿ ಅಧಿಕ ಖರ್ಚು ಮಾಡಿ, ಅತ್ಯಧಿಕ ಇಳುವರಿ ಪಡೆಯುವ ರೈತರು ಮುಂದಿನ ಅಪಾಯ ಎದುರಿಸಲು ಸಜ್ಜಾಗಬೇಕು. ಅದಕ್ಕೆ ದಾರಿ ತೋರುವವರು ಎಲ್ಲಿದ್ದಾರೆ? ಇದೊಂದು ಯಕ್ಷ ಪ್ರಶ್ನೆ!
ಅವತ್ತು ರಸ್ತೆಗೆ ಸುರಿದ ಟೊಮ್ಯಾಟೊ ಆಗಲೀ; ಮೊನ್ನೆಯಷ್ಟೇ ಟ್ರಾಕ್ಟರ್‌ನ ಗಾಲಿಗಳ ಅಡಿಯಲ್ಲಿ ಸಿಲುಕಿ ನುಜ್ಜುಗುಜ್ಜಾದ ಬಾಳೆಯಾಗಲೀ ಜನರ ದೈನಂದಿನ ಉಪಯೋಗಕ್ಕೆ ಬರುವ ಉತ್ಪನ್ನಗಳೇ ಆಗಿವೆ. ಆದರೆ, ಹೆಚ್ಚೆಚ್ಚು ಇಳುವರಿ ಪಡೆಯಲು ಏನು ಮಾಡಬೇಕು ಎಂದು ಪುಕ್ಕಟೆ ಸಲಹೆ ಕೊಡುವವರಿಗೆ ಮಾರುಕಟ್ಟೆ ಜಾಣ್ಮೆ ಕಲಿಸಿಕೊಡುವ ಹಾಗೂ ಪೂರಕ ಅವಕಾಶ ಹೇಳಿಕೊಡುವ ಕನಿಷ್ಠ ಪ್ರಜ್ಞೆಯೂ ಇಲ್ಲ. ಹೀಗಾಗಿ ಹೆಚ್ಚು ಬೆಳೆಯುವ ರೈತರು ಬೀದಿಗೆ ಬೀಳುವಂತಾಗಿದೆ.
‘ದಿನಕ್ಕೊಂದು ಸೇಬು ತಿಂದರೆ ಡಾಕ್ಟರನ್ನು ದೂರವಿಡಬಹುದು’ ಎಂಬ ಮಾತೊಂದಿದೆ. ಸೇಬು ನಮ್ಮ ನಾಡಿನದ್ದಲ್ಲ. ಹೀಗಾಗಿ ಅದಕ್ಕೆ ಪರ್ಯಾಯವಾಗಿ ಬಾಳೆಹಣ್ಣು ಪರಿಗಣಿಸಬಹುದು. ಪೌಷ್ಟಿಕಾಂಶಭರಿತ ಬಾಳೆ, ಸಾವಿರಾರು ವರ್ಷಗಳಿಂದಲೂ ಭಾರತದ ಕೃಷಿ ವ್ಯವಸ್ಥೆಯೊಂದಿಗೆ ಬೆಳೆದುಕೊಂಡು ಬಂದಿದೆ. ಆದರೆ ಯಾವಾಗ ಬಾಳೆಹಣ್ಣಿಗೆ ಮಾರುಕಟ್ಟೆ ಸಿಗುತ್ತದೆ? ಯಾವ ಸಮಯದಲ್ಲಿ ಬೇಡಿಕೆ ಇರುವುದಿಲ್ಲ ಎಂಬುದನ್ನು ಪರಿಗಣಿಸಿದರೆ ಗಂಭೀರ ಸಮಸ್ಯೆ ಎದುರಾಗುವುದಿಲ್ಲ. ಇಳುವರಿ ಕೊಡಲು ಸುಮಾರು 13 ತಿಂಗಳ ಕಾಲ ತೆಗೆದುಕೊಳ್ಳುವ ಬಾಳೆಯನ್ನು ವರ್ಷವಿಡೀ ಬೆಳೆಯಬಹುದು ಎಂಬುದೇ ಅದರ ಹೆಗ್ಗಳಿಕೆ. ಒಂಚೂರು ಲೆಕ್ಕಾಚಾರದೊಂದಿಗೆ ಮಾಡುವ ಬಾಳೆ ಕೃಷಿ, ಖಂಡಿತ ಆದಾಯ ತರಬಲ್ಲದು.
ನವೆಂಬರ್, ಡಿಸೆಂಬರ್ ಹಾಗೂ ಜನವರಿ ಮೊದಲ ಎರಡು ವಾರಗಳ ಕಾಲ ನಮ್ಮ ನಾಡಿನಲ್ಲಿ ಚಳಿ ಹೆಚ್ಚು. ಚಳಿಗಾಲದಲ್ಲಿ ಬಾಳೆಹಣ್ಣು ಸೇವಿಸಿದರೆ ಅನಾರೋಗ್ಯ ಕಾಡುತ್ತದೆ. ಇದಕ್ಕಾಗಿ ಈ ಸಮಯದಲ್ಲಿ ಬೇಡಿಕೆಯೂ ಕಡಿಮೆಯಾಗಿ ಬಿಡುತ್ತದೆ. ಇಬ್ಬನಿ ಬೀಳುವುದರಿಂದ ಗೊನೆಯಲ್ಲಿ ಕಾಯಿ ಕಪ್ಪಾಗುವ ಸಾಧ್ಯತೆಯೂ ಅಧಿಕ. ಇತ್ತೀಚಿನ ದಿನಗಳಲ್ಲಿ ಬಾಳೆಯನ್ನು ಸಹಜವಾಗಿ ಹಣ್ಣು ಮಾಡದೆ ರಾಸಾಯನಿಕಗಳ ಮೂಲಕ ಮಾಗುವಂತೆ ಮಾಡಲಾಗುತ್ತದೆ. ಹೀಗೆ ಹಣ್ಣಾಗುವ ಬಾಳೆ, ನಾಲ್ಕೈದು ದಿನಗಳ ಬಳಿಕ ಕೊಳೆಯುತ್ತದೆ.
ಸಹಜವಾಗಿ ಮಾಗಿಸಲಾದ ಬಾಳೆಹಣ್ಣು, ಒಂದೆರಡು ವಾರದವರೆಗೂ ಕೆಡದಂತೆ ಉಳಿಯಬಲ್ಲದು ಎಂಬುದನ್ನು ಗಮನಿಸಬೇಕು. ಬಾಳೆ ಕೃಷಿ ಮಾಡುವವರು ಅದು ಇಳುವರಿ ನೀಡುವ ಸಮಯವನ್ನು ಲೆಕ್ಕ ಮಾಡಿ, ನಾಟಿ ಮಾಡಿದರೆ ಸಾಕು. ಬೇಸಿಗೆಯಲ್ಲಿ ಬೇಡಿಕೆ ಹೆಚ್ಚಾಗುವ ಸಂಭವ ಇರುವುದರಿಂದ, ಜನವರಿಯಲ್ಲಿ ನಾಟಿ ಮಾಡಿದರೆ ಆಯಿತು! ಅದು ಫೆಬ್ರುವರಿಯಲ್ಲಿ ಇಳುವರಿ ಕೊಡುತ್ತದೆ. ಆಗ ಬೇಡಿಕೆಯೂ ಸಾಕಷ್ಟಿದ್ದು, ರೈತರಿಗೆ ಖಚಿತ ಆದಾಯ ಸಿಗುತ್ತದೆ.
ಬೆಲೆ ಕುಸಿದಾಗ ಬೇರೇನೂ ತೋಚದೆ ಆ ಉತ್ಪನ್ನವನ್ನು ಹಾಳು ಮಾಡುವ ರೈತರಿಗೆ ಮೌಲ್ಯವರ್ಧನೆಯ ಪರಿಹಾರೋಪಾಯ ಕಲಿಸಿಕೊಡುವ ಕೆಲಸವೇ ನಡೆದಿಲ್ಲ. ತಮಿಳುನಾಡಿನಲ್ಲಿ ಬಾಳೆಹಣ್ಣಿನಿಂದ ಚಾಕಲೆಟ್ ಮಾಡುವ ಉದ್ಯಮಗಳು ದೊಡ್ಡ ಪ್ರಮಾಣದಲ್ಲಿವೆ. ಶಿರಸಿ ಸಮೀಪದ ಸೋಂದಾದ ಮನೋರಮಾ ಜೋಷಿ ಮಾಡುವ ಬಾಳೆಹಣ್ಣಿನ ಮೌಲ್ಯವರ್ಧಿತ ಉತ್ಪನ್ನ ‘ಸುಕೇಳಿ’ ಜನಪ್ರಿಯ. ಬಾಳೆ ಹಣ್ಣಿನ ನಿರ್ಜಲೀಕೃತ ರೂಪವಾಗಿರುವ ಸುಕೇಳಿಯನ್ನು ಡ್ರೈಫ್ರುಟ್ಸ್‌ನಂತೆ ಸೇವಿಸಬಹುದು. ಇದಲ್ಲದೇ ಬಾಳೆಕಾಯಿ ಪುಡಿ, ಜಾಮ್, ಜ್ಯೂಸ್, ಚಿಪ್ಸ್, ವೈನ್ ತಯಾರಿಕೆಗೂ ಬಾಳೆ ಬಳಕೆಯಾಗುತ್ತದೆ.
ಪ್ಲಾಸ್ಟಿಕ್ ಭೂತದ ಎದುರು ಪರಿಸರಸ್ನೇಹಿ ಉತ್ಪನ್ನವಾಗಿ ಬಾಳೆ ನಾರು ಹೊಸ ಬೆಳಕು ಮೂಡಿಸುತ್ತಿದೆ. ಹಲವು ಬಗೆಯ ಕರಕುಶಲ ಕಲಾಕೃತಿಗಳಿಗೆ ಬಾಳೆ ನಾರು ಮೂಲಪದಾರ್ಥ. ಕರೆನ್ಸಿಗೆ ಬಾಳೆ ನಾರನ್ನು ಬಳಸಲು ಕೆಲವು ದೇಶಗಳು ನಿರ್ಧರಿಸಿವೆ. ಇನ್ನು ಇಳುವರಿ ಪಡೆದ ಬಳಿಕ ರಸ್ತೆಗೆ ತಂದು ಸುರಿಯುವ ಬಾಳೆದಿಂಡಿನಿಂದ ಉತ್ಕೃಷ್ಟ ಸಾವಯವ ಗೊಬ್ಬರ ಮಾಡಬಹುದು. ಸಸಿ ಬೆಳೆಸಲು ಪ್ಲಾಸ್ಟಿಕ್ ಬದಲಿಗೆ ದಿಂಡನ್ನು ಬಳಸಿ ಯಶಸ್ವಿಯಾದ ಉದಾಹರಣೆಗಳು ಇವೆ. ಹುಡುಕಿದರೆ ಇನ್ನಷ್ಟು ಇಂಥ ಯಶೋಗಾಥೆಗಳು ಸಿಕ್ಕಾವು. ತೋಟಗಾರಿಕೆ ಇಲಾಖೆಯು ತನ್ನ ನಿದ್ರಾಸ್ಥಿತಿಯಿಂದ ಮೇಲೆದ್ದು ಇಂಥ ಮಾರ್ಗಗಳನ್ನು ಹುಡುಕೀತೇ?
ಸ್ಥಳೀಯ ತಳಿಯ ಬಾಳೆಗೆ ಪ್ರೋತ್ಸಾಹ ನೀಡುವುದು ಹಾಗೂ ಅದರ ಮಾರಾಟಕ್ಕೆ ಬಾಳೆ ಮೇಳದ ಮೂಲಕ ಮಾರುಕಟ್ಟೆ ಕಲ್ಪಿಸುವುದು ರೈತರಿಗೆ ತೋರಬಹುದಾದ ಇನ್ನೊಂದು ಮಾರ್ಗ. ಅಂಗಾಂಶ ವಿಧಾನದ ಜಿ–9 ಬಾಳೆ ಬೆಳೆಗೆ ಅನಗತ್ಯ ಒತ್ತು ಕೊಟ್ಟ ದೆಸೆಯಿಂದ ದೇಸಿ ಬಾಳೆ ಕೃಷಿ ಪ್ರಮಾಣ ಕಡಿಮೆಯಾಗಿದೆ. ‘ನಂಜನಗೂಡು, ನೇಂದ್ರ ಬಾಳೆ ಬೆಳೆಯಲು ಹೆಚ್ಚು ಖರ್ಚು. ಆದರೆ ಇಳುವರಿ ಕಡಿಮೆ.
ಸದ್ಯಕ್ಕೆ ಏಲಕ್ಕಿ ಬಾಳೆಗೆ ಒಂದಷ್ಟು ಬೇಡಿಕೆಯಿದೆ. ಇವಕ್ಕೆಲ್ಲ ಹೋಲಿಕೆ ಮಾಡಿದರೆ ಸುಗಂಧಿ ಬಾಳೆ ಇಳುವರಿ ಚೆನ್ನಾಗಿದೆ. ಅದರ ಪರಿಮಳ ಹಾಗೂ ರುಚಿಯಂತೂ ಅದ್ಭುತ. ಸಾವಯವ ವಿಧಾನದಲ್ಲಿ ಬೆಳೆದರೆ ಖರ್ಚು ಕಡಿಮೆ. ಈ ಬಗ್ಗೆ ತೋಟಗಾರಿಕೆ ಇಲಾಖೆಯು ಗಮನ ಹರಿಸಬೇಕು’ ಎನ್ನುತ್ತಾರೆ ದೇವನಹಳ್ಳಿಯ ಸಾವಯವ ಕೃಷಿಕ ಶಿವನಾಪುರ ರಮೇಶ್. ಕಳೆದ 27 ವರ್ಷಗಳಿಂದಲೂ ಬಾಳೆ ಬೆಳೆಯುತ್ತಿರುವ ಅವರು, ಇಳುವರಿ ಲೆಕ್ಕಾಚಾರದೊಂದಿಗೆ ನಾಟಿ ಮಾಡುತ್ತಾರೆ; ಕರಾರುವಾಕ್ ಲಾಭ ಪಡೆಯುತ್ತಿದ್ದಾರೆ. ‘ಇಳುವರಿ ಪಡೆಯುವ ಸಮಯವನ್ನು ಗಮನಿಸಿ ನಾನು ಬಾಳೆ ಬೆಳೆಯುತ್ತಿದ್ದೇನೆ. ಒಂದು ವರ್ಷ ಹೊರತುಪಡಿಸಿದರೆ ಇಷ್ಟು ದಿನಗಳ ಅವಧಿಯಲ್ಲಿ ಒಮ್ಮೆಯೂ ನಷ್ಟ ಅನುಭವಿಸಿಲ್ಲ’ ಎನ್ನುತ್ತಾರೆ ರಮೇಶ್.
ನಾಟಿ ಮಾಡುವ ವಿಧಾನ, ನೀರಾವರಿ ವ್ಯವಸ್ಥೆ, ಕೀಟ– ರೋಗ ನಿರ್ವಹಣೆ ಹಾಗೂ ಕೊಯ್ಲೋತ್ತರ ತಾಂತ್ರಿಕತೆ ಎಂಬೆಲ್ಲ ಕ್ಲೀಷೆಗಳ ಮಾಹಿತಿ ಕೊಡುವ ತೋಟಗಾರಿಕೆ ಇಲಾಖೆಯಾಗಲೀ ಸಂಶೋಧನಾ ಕೇಂದ್ರಗಳಾಗಲೀ ಮಾರುಕಟ್ಟೆ ವಿಷಯಕ್ಕೆ ಬಂದಾಗ ಕೈಯೆತ್ತಿ ಬಿಡುತ್ತವೆ! ಎಷ್ಟು ಪ್ರಮಾಣದಲ್ಲಿ ಯಾವಾಗ ಉತ್ಪನ್ನ ಮಾರುಕಟ್ಟೆಗೆ ಬರುತ್ತದೆ ಎಂಬ ಖಚಿತ ಮಾಹಿತಿ ಇಲ್ಲದೇ ಇರುವುದರಿಂದ, ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಹೇಳಿದ್ದೇ ದರ; ಆಡಿದ್ದೇ ಆಟ ಎಂಬಂತಾಗುತ್ತದೆ. ಉತ್ಪನ್ನ ಪಡೆದ ನಂತರವೂ ಅದನ್ನು ಹೇಗೆ ಲಾಭದಾಯಕವಾಗಿ ಮಾಡಿಕೊಳ್ಳಬಹುದು ಎಂಬ ದಾರಿ ಗೊತ್ತಾಗದೆ ರೈತ ತಲೆ ಮೇಲೆ ಕೈ ಹೊತ್ತು ಕೂರುತ್ತಾನೆ. ಅದಾವುದನ್ನೂ ಗಮನಿಸದೇ, ‘ಅತ್ಯಧಿಕ ಇಳುವರಿಗೆ ಅಂಗಾಂಶ ಬಾಳೆ ಬೆಳೆಯಿರಿ’ ಎಂದು ತೋಟಗಾರಿಕೆ ಅಧಿಕಾರಿಗಳು ಮತ್ತು ವಿಜ್ಞಾನಿಗಳು ತುತ್ತೂರಿ ಊದುತ್ತಲೇ ಇರುತ್ತಾರೆ.