ಬಹುಮುಖಿ ಕನ್ನಡ- ನಂಜನಗೂಡು ಸೀಮೆಯ ಮಾತಿನ ಆಳ: ದೇವನೂರರ ‘ಕುಸುಮಬಾಲೆ’ಗೆ ಜೀವಾಳ

( ಐದು ನವೆಂಬರ್ 2024ರ “ಆಂದೋಲನ” ಪತ್ರಿಕಾ ವಿಶೇಷ)
(‘ಆಂದೋಲನ’ದ ವತಿಯಿಂದ ನಡೆಸುತ್ತಿರುವ ಕನ್ನಡ ಉಪ ಭಾಷೆಗಳ ಪರಿಚಯಿಸುವ ಅಭಿಯಾನದ ಮೊದಲ ಹೆಜ್ಜೆಯಾಗಿ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ರಚಿಸಿರುವ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಾದಂಬರಿ ‘ಕುಸುಮಬಾಲೆ’ಯ ೧೬ನೇ ಅಧ್ಯಾಯವಾದ ‘ಇತ್ತಗ ಚನ್ನನ ಅಪ್ಪನ ಕಣ್ಗಳಲ್ಲಿ’ ಎಂಬುದರ ಭಾಗವೊಂದನ್ನು ಇಲ್ಲಿ ಪ್ರಕಟಿಸಲಾಗಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರು ಗ್ರಾಮದವರಾದ ಮಹಾದೇವ ಅವರು, ಸ್ಥಳೀಯವಾದ ಗ್ರಾಮ್ಯ ಭಾಷೆಯಲ್ಲಿಯೇ ಶೋಷಿತ ಜನಾಂಗದ ಜೀವದ ಒಳಸುಳಿಗಳನ್ನು ಅಕ್ಷರ ರೂಪಕ್ಕೆ ಇಳಿಸುವ ಮೂಲಕ ಸಾಹಿತ್ಯ ಲೋಕದಲ್ಲಿ ಒಂದು ವಿಶಿಷ್ಟ ಆಯಾಮದ ಆವಿರ್ಭವಕ್ಕೆ ಕಾರಣವಾದರು. ಈ ಕಾದಂಬರಿಯು ಆಡುಮಾತಿನ ಕಾವ್ಯ ಧಾಟಿಯ ಗದ್ಯರೂಪ ಎನ್ನಬಹುದು. ದೇವನೂರರ ಈ ಕಾದಂಬರಿಯಲ್ಲಿ ಇರುವ ‘ಸಂಬಂಜ ಅನ್ನದು ದೊಡ್ಡು ಕನಾ’ ಎಂಬ ವಾಕ್ಯ ಜನಜನಿತವಾಗಿದೆ.)
ಈತ್ತಗ ಚನ್ನನ ಅಪ್ಪನ ಕಣ್ಣಳಲ್ಲಿ
ಮಗನ ರೂಪವು ಎದ್ದು ಬಿದ್ದಾಡುತ ಮುಂದಿದ್ದ ಬೀಡ್ಗಳು ಹೊಗೆಯಾದವು.
ಆಗ ತಲಹುಳಾ ಪತರಗುಟ್ಟಲು ಬೀಡಿಯಾಚ್ನೆಗೆ
ಶಿವಾಚಾರದ ಅಂಗಡಿ ಮುಂದಕ ಚನ್ನನ ಅಪ್ಪ ಬಂದು ನಿಲ್ಲುತ್ತಲೆ
ಅಲ್ಲಿ ಕುಂತು ನಿಂತ ಶಿವಾಚಾರದವರು
‘ಬನ್ನಿ ಬುದ್ದ್ಯೋ’ ‘ಬನ್ ಬನ್ನಿ ಸೋಮೋ’ ಅಂತಂತ ತಲಗೊಂದು ಮಾತು ಎಸೀತಾ ನಗಾಡತೊಡಗಿದರು.
ಚೆನ್ನನ ಅಪ್ಪ ಬೆಚ್ಚಂಡು
“ಇದ್ಯಾಕ ಧಣಿಗಳ ಈ ಥರವಾದ ಮಾತಳೂ…” ಅಂತ್ಲೆ ಆಗ “ಇನ್ಯಾನ ಮಾಡೋದು ಬುದ್ದ್ಯೋ.
ನಿಂ ಜಾತ್ಯವರೆಲ್ಲಾ ನಾಳಕಿಂದ್ಲಿಯ ಜೀತ ಬುಟ್ ಬುಟ್ಟರಂತಲ್ಲಾ…”
ಅಂತ ಒಬ್ಬ ಅಂದು ನಿಲ್ಲುಸುದ್ರ
ಇನ್ನೊಬ್ಬ “ಜೀತ ಬುಟ್‌ಮ್ಯಾಲ
ಹೊಲ್ಯಾರ್ನೇನ ಮಾತಾಡ್ಸಕ ಆದ್ದಯ್ಯ!
ಯಾನಾರೂ ನೋಡಕ್ಕ ಆದ್ದಯ್ಯ!
ಆಗ ಹೊಲಾರು
ಅನ್ನತುಪ್ಪನಿಯಕಯ್ಯೋ ಉಣ್ಣಾದು…” ಅಂದನು.
ಆ ಮಾತ್ಗ ಬಿದ್ದೂಬಿದ್ದು
ಚನ್ನನ ಅಪ್ಪ ನೆಗಾಡ್ತ
ಈ ನಗೂಗ ಯಾರೂ ಮುಂದ್ಕ ಮಾತಾಡಕ ಆಗದಂತೆ ನಗಾಡಕ ತೊಡಗಿದನು.
ಆಗ ಅವರು ಬಾಯ್ತೆಗೆದರೂ
ಅವ ನಿಲ್ಸದೆ ನಗೂವ,
ಅಲ್ಲಿ ಕುಂತಿದ್ದ ಮೆಡರುಗಣ್ಣಿನ ಹೆಳವನೂ ವದುರಾಡ್ತ ವಾಲಿ ನಿಂತ್ಕಂಡು “ನಿಲ್ಸುಡ ಸಿದ್ದಿಮಗ್ನ ನಿನ್ ನಗೂವ
ಚಂದ ಅಂತ ನಗ್ತಾನ ನಗೂವ
ಈಗ್ಲಾರೂ ತಿಳ್ಕ ಬಡ್ಡೇದ್ನೇ…
ಇಲ್ಲಿಂದ ಓಟ್ ತಕ್ಕಂಡು ಗೆದ್ಕಂಡು ಹೋಯ್ತರಲ್ಲಾ…
ಆ ನಿಮ್ ಜ್ಯಾತವರ
ಇಲ್ಲಿಂದ ಓಟ್ ತಕ್ಕಂಡು ಗೆದ್ದಂಡು ಹೋಯ್ತರಲ್ಲಾ…
ಆ ನಿಮ್ ಜ್ಯಾತವರ
ಆ ಇಂದ್ರಾಗಾಂದಿ ಅಂಬವ್ಳೇ ಜೀತ್ಕ ಇರ್ಸಿಗಂಡಿದ್ದಾಳಂತ!
ಆ ಥರವಾಗಿ ಅವ್ಳೆ ಇರಬೇಕಾರ ಇನ್ನು ನಿಂಮ್ಗಳ ಜೀತಬುಡ್ರೋ ಅಂದಾಳ?
ಇಲ್ಲಿ ನಾಕ್ ಐಕ ಕೂಕಂಡ್ರ
ದಿಳ್ಳಿಗ ಕೇಳ್ಸ ಮಾತುಡ ಅದೂ?” ಅಂದನು.
ಆಗ್ಲೂವ ಚನ್ನನ ಅಪ್ಪ ನಗ್ತಾಲೇ ನಗೂವ “ಬುದೈ, ಇದು ಯಾವ್ ಥರ್ವಪ್ಪಾ ಅಂದ್ರ-
ಗುಳ್ಳನರಿ ಲಿಂಗ ಕಟ್ಟಿಸಂಡ ಥರಾ…ಕೇಳೀ,
ಒಂದ್ಸಲ ಸರಣರೆಲ್ಲ ಲಿಂಗಧಾರಣ ಮಾಡ್ಸಕಳ್ತಾ ಇರ್ವಾಗ
ಅದ್ನೀಗ ಒಂದು ಗುಳ್ಳನರಿ ನೋಡ್ಕಬುಡ್ತಂತ
ಆ ನೋಡ್ಡ ಗುಳ್ಳನರಿ
ನೋಡ್ಕಂಡು ಸುಮ್ನಾರೂ ಇತ್ತ?
ತಾಡೂ, ನಾನೂವಿ ವಸಿ ಲಿಂಗ ಕಟ್ಟುಸ್ಥಳವು
ಅಂದ್ಕಂಡ್ ಬಂದು “ನಂಗೂವಿ ಲಿಂಗಕಟ್ಟಿ ಸೋಮೈ” ಅಂತ ಕೇಳ್ತಂತ…
ಆ ಲಿಂಗ ಕಟ್ಟವರು
ಅದ್ರ ಮಾತನಿಗ ಕೇಳ್ಸಕಂಡು
ಗುಲ್ಲಂತ ನೆಗಾಡ್ತ
“ನೀನು ಬಾಡುಬಳ್ಳನಳ್ಳಿಗಳ್ಳಿ ತಿಂನವ್ನು, ನಿಂಗ ಬ್ಯಾಡ” ಅಂದ್ರಂತ.
ಅದ್ಕಾರೂ ಸುಮ್ನಾಯ್ತ ಅದೂ?
ಸುಮ್ನಿರಲಾರ್ದೆ
“ಅದ್ನೆಲ್ಲಾ ತಿಂಬುದ ಬುಟ್‌ ಬುಡ್ತಿನಿಕನ
ಕಟ್ಟಿ ಲಿಂಗಾ” ಅಂತ
ಆಣೆ ಬಾಸ ಮಾಡಿ
ಗೋಗರ್ಕಂಡು
ಲಿಂಗಧಾರಣ ಮಾಡ್ಸಗಳ್ತದಂತ ಕೊನಗೂ! ಮ್ಯಾಲ ಇದ್ನೆಲ್ಲಾ ನೋಡ್ತಾ ಇರೋ ಆ ದೇವೇಂದ್ರಾಯ ಅವ್ನಾರೂ ಸುಮ್ಗಿದ್ನಾ?
ಸುಮ್ನಿರ್ಲಾರ್ದೆ ಏನ್ಮಾಡ್ದ?
“ನೋಡೌ, ಇದರ ದುಡ ಪರೀಕ್ಸ್‌ವು” ಅಂದ್ಕಂಡು ಮಳ ಬರ್ಸಿದನಂತ ಮಳ್ವ.
ಆ ಮಳ್ಗಾ ನಳ್ಳಿಗಳು ಎದ್ದೂ
ಪಿತಪಿತ್ನಾ ಓಡಾಡ ಥರವಾಗಿ ಓಡಾಡ್ತ
ಇದ ಕಣ್ಣಾರ ನೋಡ್ಕಂಡೂ
ಲಿಂಗ ಕಟ್ಸಗಂಡಿರೋ ಈ ಗುಳ್ಳನರಿ
ಎಸ್ಟ್‌ ಕಾಲ ಅಂತ ತಡ್ಕಂಡಿದ್ದುದೂ?
ಆಗ ಆ ಗುಳ್ಳನರಿ ಏನ್ಮಾಡ್ತು… ಕೇಳೀ… ತನ್ನ ಕುತ್ತಿಗೇಲಿ ಕಟ್ಟಿದ್ದ ಲಿಂಗ್ವ ತಗ್ದು
ಕಳ್ಳಿ ಬೇಲಿಗ ನ್ಯಾತಾಕ್‌ಬುಟ್ಟೂ…
ಆ ಓಡಾಡೋ ನಳ್ಳಿಗಳ ಓಡಾಡ್ಸಕಂಡೂ ಅವುಗಳ ಮ್ಯಾಲ ದಬ್ಬಾಕಂಡು ಬಿದ್ಕಂಡೂ ಸಿಕ್‌ಸಿಕ್ಕಿದ್ನೆಲ್ಲಾ ತತರಪಿತರ್ನ ಹಿಡ್ಕಂಡೂ
ಸಂಪತ್ತಾಗಿ ತಿಂತಾ ಇತ್ತಂತ. ಆಗ ಇದು…” ಆಗ, ಅವೇ ಬಂದು
ಮುಂದ್ಧ ಬಿದ್ದ ಬೀಡ್ಗಳ ಆಯ್ಕಂಡೂ
ಆ ಆಯ್ಕಂಡ ಚನ್ನನ ಅಪ್ಪ
ತನ್ನ ತಳಕೆ ಬಂದು ಕೂತನು.
——–
ಗ್ರಾಮ್ಯ ಭಾಷೆಯ ಪದಗಳ ಅರ್ಥ:
ಬೀಡ್ಗಳು- ಬೀಡಿಗಳು
ತಲಹುಳಾ- ತಲೆಯ ಹುಳ
ಬುದ್ದ್ಯೋ – ಬುದ್ಧಿ
ನಾಳಕಿಂದ್ಲಿಯ- ನಾಳೆಯಿಂದಲೇ
ಮೆಡರುಗಣ್ಣಿನ- ಮೆಳ್ಳಗಣ್ಣಿನ
ಅಂಬವ್ಳೇ- ಎನ್ನುವವಳೇ
ಜೀತ್ಕ- ಜೀತಕ್ಕೆ
ಇರ್ಸಿಗಂಡಿದ್ದಾಳಂತ- ಇರಿಸಿಕೊಂಡಿದ್ದಾಳಂತೆ
ಐಕ- ಹೈಕಳು
ಕೂಕ್ಕಂಡ್ರ- ಕೂಗಿಕೊಂಡರೆ
ದಿಳ್ಳಿಗ- ದಿಲ್ಲಿಗೆ
ತಿಂಬುದ-ತಿನ್ನುವುದ
ಮಳ- ಮಳೆ
ತಳಕ- ಸ್ಥಳಕ್ಕೆ