ಬಹುಮಾನ ನೀಡುತ್ತ ಹಿಂದೆ ಇಂದು ಮುಂದೆ ನೋಡಿದಾಗ- ದೇವನೂರ ಮಹಾದೇವ

[ಪ್ರಜಾವಾಣಿ ದೀಪಾವಳಿ ವಿಶೇಷಾಂಕ-2019ರ ಕಥೆ/ಕವನ ಸ್ಪರ್ಧೆಯ ವಿಜೇತರಿಗೆ ದಿನಾಂಕ 12.11.2019ರಂದು ಮೈಸೂರಿನ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಬಹುಮಾನ ವಿತರಿಸಿದ ದೇವನೂರ ಮಹಾದೇವ ಅವರು, ಆಡಿದ ಮಾತುಗಳ ಅಕ್ಷರ ರೂಪ ಇಲ್ಲಿದೆ…]

 

 

ಪ್ರಜಾವಾಣಿ ದೀಪಾವಳಿ ಸಂಚಿಕೆಯ ಕಥಾ ಕವನ ಸ್ಪರ್ಧಾ ವಿಜೇತರಿಗೆ ನಾನೀಗ ಬಹುಮಾನ ವಿತರಣೆ ಮಾಡಬೇಕಾಗಿ ಬಂದಿದೆ. ಇಲ್ಲೊಂದು ಗುಟ್ಟು ಹೇಳುವೆ. ಆದರೆ ಒಂದು ಕಂಡೀಷನ್ನು. ಕೇಳಿದ ಮೇಲೆ ಬಹುಮಾನಿತರಾದ ನೀವು- ಎಂಥವನ ಕೈಯಲ್ಲಿ ಪ್ರೈಜ್ ಪಡೆಯಬೇಕಾಗಿ ಬಂತು ಎಂದು ಪರಿತಪಿಸಬಾರದು! ಆ ಗುಟ್ಟು ಏನೆಂದರೆ- ನಾನೂ ಈ ಹಿಂದೆ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಗೆ ಎರಡು ಸಲ ಕತೆ ಕಳಿಸಿದ್ದೆ. ಪ್ರೈಜ್ ಇರಲಿ, ಮೆಚ್ಚಿಗೇನೂ ಬರಲಿಲ್ಲ. ಆದರೆ ಒಂದು ಕತೆ ಸ್ವಲ್ಪ ದಿನಗಳಾದ ಮೇಲೆ ವಾರದ ಪುರವಣಿಯಲ್ಲಿ ಪ್ರಕಟವಾಯ್ತು. ತಲೆಬರಹವೇನೋ- ‘ವೃತ್ತದಾಚೆ’ ಎಂದು ಇರಬೇಕು. ಆ ಕತೆ ಹೆಚ್ಚೂ ಕಮ್ಮಿ ದ್ಯಾವನೂರು ಸಂಕಲನದಲ್ಲಿನ ‘ಒಂದು ದಹನದ ಕತೆ’ ಇದೆಯಲ್ಲಾ, ಅಂಥದು.

ಅದಿರಲಿ, ಕನ್ನಡದ ಕಥಾ ಕ್ಷೇತ್ರದಲ್ಲಿನ ಸೂಕ್ಷ್ಮತೆ ಮತ್ತು ಸಂವೇದನಾಶೀಲತೆಯ ಸ್ತರ ಹೆಚ್ಚಾಗುವಂತಾಗಲು ಪ್ರಜಾವಾಣಿಯ ಕಥಾ ಸ್ಪರ್ಧೆಯ ಪಾತ್ರ ದೊಡ್ಡದು ಎಂದೆನಿಸುತ್ತದೆ. ಇದಕ್ಕೊಂದು ಉದಾಹರಣೆ ನೀಡುವೆ- ಪ್ರಜಾವಾಣಿ ಕಥಾ ಸ್ಪರ್ಧೆಗೆ ಸಾಮಾನ್ಯವಾಗಿ ನೂರಾರು ಕತೆಗಳು ಬರುತ್ತವೆ. 1ನೇ ರೌಂಡ್‍ನಲ್ಲಿ ಉಪಸಂಪಾದಕರೊಬ್ಬರು, ಪರಿಗಣಿಸಬಹುದಾದ ಕಥೆಗಳನ್ನು ಆಯ್ಕೆ ಮಾಡಿ ಸಂಪಾದಕರಿಗೆ ನೀಡುವುದು ಮಾಮೂಲಿ. ಯಾವ ಕತೆಗಳನ್ನು ಪರಿಗಣಿಸುವುದಿಲ್ಲವೊ ಅದಕ್ಕೆ ಒಂದು ವಾಕ್ಯದ ನಿರಾಕರಣೆಗೆ ಕಾರಣ ನೀಡಿರುತ್ತಾರೆ. ಹೀಗೊಂದು ಸಲ, ಉಪಸಂಪಾದಕರು ‘ಪೋಲಿಕತೆ’ ಎಂದು ಕಾಮೆಂಟ್ ಮಾಡಿ ಕತೆಯೊಂದನ್ನು ರಿಜೆಕ್ಟ್ ಮಾಡಿರುವುದು ಸಂಪಾದಕರ ಕಣ್ಣಿಗೆ ಬೀಳುತ್ತದೆ. ಏನೋ ಪೋಲಿ ಕತೆ, ಓದೇ ಬಿಡುವ ಎಂಬ ಕುತೂಹಲಕ್ಕೋ ಏನೋ ಸಂಪಾದಕರು ಆ ಕತೆ ತರಿಸಿಕೊಂಡು ಓದುತ್ತಾರೆ. ಓದಿ ಬೆರಗಾಗುತ್ತಾರೆ. ಅದೊಂದು ಅತ್ಯುತ್ತಮ ಕತೆಯಾಗಿರುತ್ತದೆ. ಎಂಥಾ ಅನ್ಯಾಯವಾಗಿ ಬಿಡ್ತು ಎಂದು ಹಣೆ ಚಚ್ಚಿಕೊಳ್ಳುತ್ತಾರೆ. ಯಾಕೆಂದರೆ ಪರಿಗಣಿಸಲ್ಪಟ್ಟ ಕತೆಗಳನ್ನು ಆಯ್ಕೆ ಸಮಿತಿಗೆ ಆಗಲೇ ಕಳಿಸಿ ಆಗಿಬಿಟ್ಟಿರುತ್ತದೆ. ಆದರೂ ಆ ಕತೆಯನ್ನು ಆಯ್ಕೆ ಸಮಿತಿಯ ಗಮನಕ್ಕೆ ಕಳಿಸಿ ಕೊಡುತ್ತಾರೆ.

ಆ ‘ಪೋಲಿ’ ಕತೆಗೆ ಬಹುಮಾನ ಬರುತ್ತದೆ. ಕತೆ ಹೆಸರು- ‘ಹಾಲು ಕುಡಿದ ಹುಡುಗ’, ಬರೆದವರು- ಅಬ್ದುಲ್‍ರಷೀದ್. ಈ ಕತೆ ಹೇಗಿದೆ ಅಂದರೆ- ಒಂದು ಬೆಂಕಿಪೊಟ್ಟಣದಲ್ಲಿ ಇಡಬಹುದಾಗಿದ್ದಂತಹ ಸೂಕ್ಷ್ಮ ನೇಯ್ಗೆಯ ಢಾಕಾದ ನವಿರು ಮಸ್ಲಿನ್ ಸೀರೆಯಂತೆ. ಮುಷ್ಟಿಗೆ ಸಿಗದ ಈ ಕತೆಯನ್ನು ಗುರುತಿಸುವುದು ಸಾಮಾನ್ಯ ವಿಷಯವಲ್ಲ. ಆದರೆ ಸೂಕ್ಷ್ಮಜ್ಞತೆ, ಸಂವೇದನಾಶೀಲತೆ ಇಲ್ಲದ ವಾತಾವರಣ? ಅದು ಕಣ್ಣು ಕಾಣದ ಕುರುಡು ಮತ್ತು ಸಂವೇದನಾಹೀನ ಕುಷ್ಠರೋಗದ ಆಳ್ವಿಕೆಯಲ್ಲಿ ಪ್ರಜೆಗಳೂ ಕಣ್ಣು ಕಾಣದ ಕುರುಡು ಮತ್ತು ಸಂವೇದನಾಹೀನ ಕುಷ್ಠರೋಗಿಗಳು ತುಂಬಿರುವಂತೆ. ಇದಕ್ಕೊಂದು ಉದಾಹರಣೆ ಬೇಕೆ? ನವೆಂಬರ್ 11 ರಂದು ವಾರ್ತಾಭಾರತಿ ಪತ್ರಿಕೆಯಲ್ಲಿ ಒಂದು ಸಣ್ಣಸುದ್ದಿ ಒಳಪುಟದಲ್ಲಾದರೂ ಪ್ರಕಟವಾಗಿದೆ. ಅದು ತುಷಾರ್ ಗಾಂಧಿ ಹೇಳಿಕೆ. ಅವರು ಹೇಳುತ್ತಾರೆ: “ಗಾಂಧಿ ಕೊಲೆ ಪ್ರಕರಣವನ್ನು ಇಂದು ಸರ್ವೋಚ್ಛ ನ್ಯಾಯಾಲಯವು ಮರು ವಿಚಾರಣೆ ನಡೆಸಿದ್ದರೆ `ಗೋಡ್ಸೆ ಕೊಲೆಗಾರ, ಆದರೆ ದೇಶಭಕ್ತ’ ಎಂದು ತೀರ್ಪು ಬರುತ್ತಿತ್ತು” ಎನ್ನುತ್ತಾರೆ. ಮುಂದೆ, “ಈ ತೀರ್ಪಿನಿಂದ ನ್ಯಾಯಾಂಗ ವ್ಯವಸ್ಥೆಗೆ ‘ನಂಬಿಕೆಯ ಅಪರಾಧ’ (crime of belief) ಎಂಬ ಹೊಸ ಕೆಟಗರಿ ಸೇರ್ಪಡೆಯಾದಂತಾಯಿತು” ಎನ್ನುತ್ತಾರೆ. ಜೊತೆಗೆ, “ತೀರ್ಪನ್ನು ಒಪ್ಪದಿದ್ದರೂ ಅದನ್ನು ಸ್ವೀಕರಿಸಬೇಕು ಹಾಗೂ ಅದಕ್ಕೆ ವಿಧೇಯರಾಗಿರಬೇಕು” ಎನ್ನುತ್ತಾರೆ. ಕನಿಷ್ಠ ನಮ್ಮ ಮಾಧ್ಯಮಗಳಾದರೂ ಸಂವೇದನಾಶೀಲತೆ ಉಳಿಸಿಕೊಂಡಿದ್ದಲ್ಲಿ ಇದು ಪತ್ರಿಕೆಗಳಲ್ಲಿ ಮುಖಪುಟದ ಸುದ್ದಿಯಾಗುತ್ತಿತ್ತು. ದೃಶ್ಯ ಮಾಧ್ಯಮಗಳಲ್ಲಿ ಗಂಭೀರ ಚರ್ಚೆಯ ವಿಷಯವಾಗುತ್ತಿತ್ತು.

ಇಂತಹ ವಿಷಮ ವಾತಾವರಣದಲ್ಲಿ ಒಂದು ಕುತೂಹಲ ನನಗೆ. ಆ ನವಿರು ಕತೆ ಬರೆದ ರಷೀದ್ ಈ ಕಾಲದ ಇಪ್ಪತ್ತು ವರ್ಷದ ಯುವಕನಾಗಿದ್ದರೆ, ಇಂದಿನ ವಾಟ್ಸಪ್, ಫೇಸ್‍ಬುಕ್ ಗೀಳಿನ ನಡುವೆ ಅಂಥ ಕತೆ ಬರೆಯುತ್ತಿದ್ದನೆ? ರಷೀದ್‍ನಂತಹ ಪ್ರತಿಭಾವಂತರು ಈ ಕಾಲದಲ್ಲಿ ವಾಟ್ಸಪ್, ಫೇಸ್‍ಬುಕ್‍ನಲ್ಲಿ ಮುಳುಗೇಳುತ್ತ ಕಳೆದು ಹೋಗುತ್ತಿರಬಹುದೆ? ನಾನು ಹೇಳುತ್ತಿರುವುದು ಇರಬಹುದು ಅಥವಾ ಇಲ್ಲದೇನೂ ಇರಬಹುದು. ಇಂದಿನ ವಾಟ್ಸಪ್, ಫೇಸ್‍ಬುಕ್‍ಗಳ ಕಡೆ ಕಣ್ಣಾಡಿಸಿದರೆ ಬಹುತೇಕ ಸ್ವಯ ಇಲ್ಲದ ಬಯಲು ಶೌಚಾಲಯದಂತೆ ಕಂಡು ಬರುತ್ತದೆ. ಇದು ಸ್ನಾನಗೃಹವಾಗಿದ್ದರೆ ಚೆನ್ನಾಗಿತ್ತು ಅನಿಸುತ್ತದೆ. ಇದನ್ನು ಯಾಕೆ ಹೇಳಿದೆನೆಂದರೆ- ಸೂಕ್ಷ್ಮಜ್ಞತೆ, ಸಂವೇದನಾಶೀಲತೆಯ ಅಭಿರುಚಿ ಉಂಟಾಗಲು ತನ್ನ ಕಾಣ್ಕೆ ನೀಡುತ್ತಿರುವ ಪ್ರಜಾವಾಣಿಗೆ ಒಂದು ಸಾಧ್ಯತೆಯ ಬಗ್ಗೆ ಗಮನ ಸೆಳೆಯುವುದಕ್ಕಾಗಿ. ಏನೆಂದರೆ, ಹೇಗೂ Web Portal ಇದೆ. ಅದರಲ್ಲಿ ವಾಟ್ಸಪ್, ಫೇಸ್‍ಬುಕ್‍ನಲ್ಲಿ ಪ್ರಕಟವಾಗುವ ಕಥೆ, ಕವನ, ಚುಟುಕು, ಚಿತ್ರ, ಪ್ರಬಂಧ, ವರದಿ, ಇತ್ಯಾದಿಗಳಲ್ಲಿ ಉತ್ತಮ ಗುಣಮಟ್ಟದವುಗಳನ್ನು ಆಯ್ಕೆ ಮಾಡಿ ಪ್ರಕಟಿಸುವುದಾದರೆ ಇದರಿಂದಾಗಿ ವಾಟ್ಸಪ್, ಫೇಸ್‍ಬುಕ್‍ಗಳ ಅಭಿರುಚಿ ಹೆಚ್ಚುವಂತಾಗಬಹುದೆ? ಈ ಆಸೆ ನನ್ನದು.

ಯಾಕೆಂದರೆ, ಇಂದು ನಮ್ಮ ಯವಜನತೆ ಅಭಿವ್ಯಕ್ತಗೊಳ್ಳಬೇಕಾಗಿದೆ. ಸಮುದಾಯದ ಧ್ವನಿಯಾಗಬೇಕಾಗಿದೆ. ಭಾರತದಲ್ಲಿ ಸುಮಾರು 137 ಕೋಟಿ ಬಾಯಿಗಳಿವೆ. 137 ಕೋಟಿ ಹೊಟ್ಟೆಗಳು ಇವೆ. 274 ಕೋಟಿ ಕೈಗಳಿವೆ. ಈ ಕೈಗಳಿಗೆ ಕೆಲಸ ಸಿಗುವಂತಾಗಿ ಅವುಗಳ ಹೊಟ್ಟೆ ತುಂಬಿಸಬೇಕಾಗಿದೆ. ಇಂದು ಉದ್ಯೋಗ ಕುಸಿತವಾಗುತ್ತ ಜನರು ಉದುರಿ ಹೋಗುತ್ತಿದ್ದಾರೆ. ಇಂಥಲ್ಲಿ ಜೀವಗಳನ್ನು ಉಳಿಸುವ ಯೋಜನೆ ರೂಪಿಸಬೇಕಾಗಿದೆ. ಆದರೆ ಹೊಟ್ಟೆಗೆ ಹೊಡೆಯುವುದನ್ನೆ ಆಳ್ವಿಕೆಯು ಅಭಿವೃದ್ಧಿ ಎಂದುಕೊಂಡಿದೆ. ಇದಕ್ಕೆ ಉದಾಹರಣೆ- ಇಂದು ಇಲ್ಲಿ ಚರ್ಚಿತವಾಗುತ್ತಿರುವ ಮುಕ್ತ ವ್ಯಾಪಾರ ಒಪ್ಪಂದ- ಇಂಥವು. ಎಷ್ಟಂತ ಹೇಳುವುದು? ಭಾರತದಲ್ಲೀಗ ಆಳ್ವಿಕೆ ಮತ್ತು ಪೂತನಿ (crony) ಬಂಡವಾಳಶಾಹಿ   ಜೊತೆಗೂಡಿಕೊಂಡು ಉದ್ಯೋಗ ನಾಶ ಯಜ್ಞ ಮಾಡುತ್ತಿವೆ. ಉದ್ಯೋಗದ ಸ್ಥಿತಿಗತಿ ಸ್ವ್ವಾತಂತ್ರ್ಯ್ರ ಪೂರ್ವಕಾಲದ ದಯಾನೀಯ ಸ್ಥಿತಿಗೆ ತಲುಪಲು ಧಾವಿಸುತ್ತಿದೆ. ಜನ ಸಮುದಾಯಕ್ಕೆ ಬೀದಿಗೆ ಬೀಳುವುದರ ಅರಿವು ಬಾರದಿರಲೆಂದು ಆ ಅಮಾಯಕರಿಗೆ ಭಾವನಾತ್ಮಕ ಅಫೀಮು ಕುಡಿಸಲಾಗುತ್ತಿದೆ. ಟಿಪ್ಪು ಅಂತಾರೆ, ಅಂಬೇಡ್ಕರ್ ಸಂವಿಧಾನ ಬರೆದಿಲ್ಲ ಅನ್ನುತ್ತಾರೆ, ಗೋಮಾತೆ ಅನ್ನುತ್ತಾರೆ, ಮೈಸೂರು ಪಾಕು ನಮ್ಮದು ಅನ್ನುತ್ತಾರೆ, ಪಾಕಿಸ್ತಾನದ ಭೀತಿ ತೋರಿಸುತ್ತಾರೆ, ದೇವರಿಗೆ ಹೆಡಮುರಿ ಕಟ್ಟಿ ಬೀದಿಗೆ ಎಸೆಯುತ್ತಾರೆ. ಹೀಗೆ ಹೀಗೇ ನೂರೆಂಟು ಭಾವಯಮಪಾಶಗಳನ್ನು ಕಟ್ಟಿ ಎಸೆಯುತ್ತಾರೆ. ಮಾದಕ ಲೋಕ ಸೃಷ್ಟಿಸುತ್ತಾರೆ. ಇಂದು ವ್ಯಾಘ್ರನ ಗೋಮುಖವನ್ನು ಬಯಲಿಗೆ ಎಳೆಯಬೇಕಾಗಿದೆ.  ಸರ್ಕಾರಕ್ಕೆ ನಾವು ಕೇಳಬೇಕಾಗಿದೆ-“ಒಂದು ಗ್ಯಾರಂಟಿ ಉದ್ಯೋಗ ನೀಡು, ಆಮೇಲೆ ಮಾತಾಡು” ಎಂದು ಮೊದಲು ಕೇಳಿ ಆಮೇಲೆ ಉಳಿದುದೆಲ್ಲ.

ಕೊನೆಗೊಂದು ಮಾತು. ಆಸೆಯೇ ದುಃಖಕ್ಕೆ ಕಾರಣ ಎಂಬ ಪ್ರಸಿದ್ಧ ಮಾತಿದೆ. ಇದು ಬುದ್ಧನ ನುಡಿಗಳು. ಪಾಳಿಯಲ್ಲಿ ಆಸೆ ಎನ್ನುವುದಕ್ಕೆ ‘ತನ್ಹಾ’ ಎಂದಿದೆ. ಸಂಸ್ಕೃತದಲ್ಲಿ ‘ತೃಷ್ಣೆ’ ಎಂದಿದೆ. ಇಂಗ್ಲೀಷ್‍ನಲ್ಲಿ craving ಎಂದಿದೆ. ಇದನ್ನು ನೋಡಿದಾಗ ‘ಆಸೆ’ ಪದ ಸಾಲದು ಅನ್ನಿಸುತ್ತದೆ. ಸಿಗರೇಟ್ ಇಲ್ಲದಿದ್ದಾಗ ನಾನು ತಹತಹಿಸುವುದು ಆಸೆ ಅಲ್ಲ, ಅದು craving. ಇದಕ್ಕೆ ಹತ್ತಿರದ ಪದ ಹುಡುಕುತ್ತ ಕಂಡದ್ದು- ‘ದಾಹ’. ‘ದಾಹ’ ಅಂದರೆ ‘ದಹಿಸುವುದು’ ಎಂದೂ ಅರ್ಥವಂತೆ. ಸದ್ಯಕ್ಕೆ ದಾಹವೇ ದುಃಖಕ್ಕೆ ಕಾರಣ- ಎಂದಿಟ್ಟುಕೊಳ್ಳಬಹುದೇನೊ.

ಇಂದು ಭೂಮಿಯೇ ಮನುಷ್ಯನ ದಾಹಕ್ಕೆ ಸಿಲುಕಿ ದಹಿಸುತ್ತಿದೆ. ಭೂಮಿ ಬಾಯಾರಿಕೆಯನ್ನು ನೀಗಿಸಬಹುದು, ದಾಹವನ್ನಲ್ಲ. ಇಂದಿನ ಮನುಷ್ಯನ ದಾಹದಿಂದಾಗಿ ತಾಪಮಾನ ಹೆಚ್ಚಾಗಿ- ಹಿಮಗಡ್ಡೆ ಕರಗುತ್ತಿವೆ. ಸಮುದ್ರದ ಮಟ್ಟ ಏರುತ್ತಿದೆ. ಸೈಕ್ಲೋನ್‍ಗಳು ಅಪ್ಪಳಿಸುತ್ತಿವೆ. ಹುಚ್ಚು ಮಳೆ ಬರುತ್ತಿದೆ. ಭೂಮಿ ಕುಸಿಯುತ್ತಿದೆ. ಎಲ್ಲವೂ ಕೊಚ್ಚಿಹೋಗುತ್ತಿದೆ. ವಿಪರ್ಯಾಸವೆಂದರೆ ಒಂದು ಕಡೆ ಪ್ರವಾಹ. ಅದರ ಪಕ್ಕದಲ್ಲೆ ನೀರಿಲ್ಲದ ಬರ. ಬದುಕುವುದೆಂತು?

ಪುಣ್ಯಕ್ಕೆ, ಭೂಮಿತಾಯಿಯೇ ಸ್ವೀಡನ್‍ನ ಹದಿನಾರು ವರ್ಷದ ಬಾಲೆ ಗ್ರೇಟಾ ಟುನ್ಬರ್ಗ್‍ಳ ಮೈಮೇಲೆ ಬಂದು ನುಡಿಸಿದಂತೆ ಗ್ರೇಟಾ ನುಡಿಯುತ್ತಿದ್ದಾಳೆ. ಈ ಅನಾಹುತಗಳಿಗೆಲ್ಲಾ ಕಾರಣರಾದ ಜಗತ್ತಿನ ನಾಯಕರಿಗೆ “how dare you?” ಎಂದು ಕೇಳುತ್ತಿದ್ದಾಳೆ. ಹೀಗೆ ಕೇಳಬಹುದಾದ ಬಾಲಕ-ಬಾಲಕಿಯರು ಇಲ್ಲೂ ಇರಬಹುದು. ಎಲ್ಲೆಲ್ಲೂ ಇರಬಹುದು. ಅವರೀಗ ಮಾತಾಡಬೇಕಾಗಿದೆ. ಯಾಕೆಂದರೆ ಅವರು ಉಳಿಯಬೇಕಾಗಿದೆ.