ಬನವಾಸಿ ದೇಶದ ಜಾಲತಾಣದೊಳ್… -ವಿಜಯಶ್ರೀ ಹಾಲಾಡಿ
[ದೇವನೂರ ಮಹಾದೇವ ಅವರ ಕುರಿತ ‘ನಮ್ಮ ಬನವಾಸಿ’ ಅಂತರ್ಜಾಲ ತಾಣಕ್ಕೆ ಐದು ವರ್ಷ ತುಂಬಿದ[29.12.2019] ಸಂದರ್ಭದಲ್ಲಿ ಪ್ರಜಾವಾಣಿ ಭಾನುವಾರದ ಪುರವಣಿಗಾಗಿ ಲೇಖಕಿ, ಕವಯಿತ್ರಿ ವಿಜಯಶ್ರೀ ಹಾಲಾಡಿಯವರು ಬರೆದ ಲೇಖನದ ಪೂರ್ಣ ಪಠ್ಯ ನಮ್ಮ ಬನವಾಸಿ ಓದುಗರಿಗಾಗಿ ಇಲ್ಲಿದೆ. ತಾಣದ ಕುರಿತು ಆಪ್ತ ಚಿತ್ರಣವನ್ನು ಕಟ್ಟಿಕೊಟ್ಟ ಲೇಖಕಿಗೆ ಹಾಗೂ ಲೇಖನವನ್ನು ಪ್ರಕಟಿಸಿ ಬೆಂಬಲಿಸಿದ ಪ್ರಜಾವಾಣಿಗೆ ಹೃದಯಪೂರ್ವಕ ವಂದನೆಗಳು.
-ಬನವಾಸಿಗರು]
‘ಯಾರ ಜಪ್ತಿಗೂ ಸಿಗದ ನವಿಲು’ – ದೇವನೂರ ಮಹಾದೇವ ಅವರು ಕನ್ನಡ ಸಾಹಿತ್ಯಕ್ಕೆ, ದಲಿತ ಸಂವೇದನೆಗೆ, ನಾಡಿನ ಬದುಕಿಗೆ ಹೊಸ ಜೀವಕಳೆ ತುಂಬಿದ ಚೇತನ. ಇವತ್ತಿಗೂ ವರ್ತಮಾನದ ತಲ್ಲಣ, ದುರಿತಗಳಿಗೆ ಸಮರ್ಥ ನೈತಿಕ ದನಿಯಾಗಿ ಸ್ಪಂದಿಸುತ್ತಿರುವುದು, ಮುಕ್ಕಿಲ್ಲದಂತೆ ಅವರು ಕಾಯ್ದುಕೊಂಡು ಬಂದ ಘನ ವ್ಯಕ್ತಿತ್ವಕ್ಕೆ ಸಾಕ್ಷಿ. ಅಧಿಕಾರ, ಪ್ರತಿಷ್ಠೆ, ಪ್ರಚಾರ ಬಯಸದೇ, ತನಗೆ ಸರಿಯೆನಿಸಿದಂತೆ ತನ್ನಷ್ಟಕ್ಕೆ ಬದುಕುತ್ತಿರುವ, ಬರೆಯುತ್ತಿರುವ ದೇವನೂರ ಮಹಾದೇವ ಅವರಂತಹ ಅನನ್ಯ ವ್ಯಕ್ತಿತ್ವದ ಕಾಲಘಟ್ಟದಲ್ಲಿ ನಾವು ಬದುಕಿರುವುದೇ ಒಂದು ಧನ್ಯತೆ. ಅಂತಹ ಅಪರೂಪದ ಬಹುಮುಖಿ ಚಿಂತನೆಯ ವ್ಯಕ್ತಿತ್ವದ ಕುರಿತು ಅಷ್ಟೇ ಸೂಕ್ಷ್ಮವಾಗಿ ಮತ್ತು ಸಾಧ್ಯವಿರುವ ಎಲ್ಲ ವಿವರಗಳನ್ನು ಕಲೆಹಾಕಿ ದಾಖಲಿಸುವ ಹೊಣೆಯನ್ನು ಸದ್ದಿಲ್ಲದೇ ನಿರ್ವಹಿಸುತ್ತಿರುವ ಜಾಲತಾಣವೇ ‘ನಮ್ಮ ಬನವಾಸಿ’ [www.nammabanavasi.com ]
ಹೆಸರು ಹೇಳಲಿಚ್ಛಿಸದ, ‘ಬನವಾಸಿಗರು’ ಎಂದು ತಮ್ಮನ್ನು ಕರೆದುಕೊಳ್ಳುವ ಮೈಸೂರಿನ ಗೆಳೆಯರ ಬಳಗವೊಂದು ತೆರೆಮರೆಯಲ್ಲಿದ್ದು ಈ ಕೆಲಸವನ್ನು ಮಾಡುತ್ತಾ ಬಂದಿದೆ. ಡಿಸೆಂಬರ್ 29, 2014 ರಂದು ಆರಂಭವಾದ ‘ನಮ್ಮ ಬನವಾಸಿ’ಗೆ ಈಗ ಐದು ವರ್ಷಗಳು! ಕುವೆಂಪು ಜನ್ಮದಿನದಂದು ಆರಂಭವಾಗಿರುವ ಈ ಜಾಲತಾಣ, ರಸಋಷಿ ಕುವೆಂಪು ಅವರ ಚೇತನದ ಮುಂದುವರಿಕೆಯಾಗಿ ದೇವನೂರರನ್ನು ಕಾಣುತ್ತದೆ ಎಂದರೂ ತಪ್ಪಿಲ್ಲ.
ದೇವನೂರ ಮಹಾದೇವ ಅವರ ಬಲು ಮೆಚ್ಚಿನ ಕವಿ ಪಂಪ. ‘ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್’ ಎಂದು ಆಶಿಸಿದ ಪಂಪನ ‘ಬನವಾಸಿ’ಯೆಂಬುದು ಮುಪ್ಪುರಿಗೊಂಡ ನಮ್ಮ ಇಡೀ ನಾಡಿನ ಸಂಕೇತವೂ ಹೌದು. ಮಹಾದೇವ ಅವರ ತೋಟದ ಹೆಸರೂ ಹೌದು. ಬಹುಶಃ ಈ ಕಾರಣಕ್ಕೇ ಇರಬಹುದು ಸಾಂಕೇತಿಕವಾಗಿ ಈ ಜಾಲತಾಣಕ್ಕೆ ‘ನಮ್ಮ ಬನವಾಸಿ’ ಎಂದು ಹೆಸರಿಡಲಾಗಿದೆ! ಜಾಲತಾಣವು ವ್ಯಕ್ತಿ ಕೇಂದ್ರಿತವಾಗದೆ ಸಮಷ್ಟಿಯ ಗುರಿಯನ್ನಿಟ್ಟುಕೊಂಡು ದೇವನೂರರ ವ್ಯಕ್ತಿತ್ವಕ್ಕೆ ಯಾವ ವೈಭವೀಕರಣವನ್ನೂ ಆರೋಪಿಸದೇ ಅವರ ಅಪರೂಪದ ಸಾಹಿತ್ಯ ಕಲಾಕೃತಿಗಳನ್ನು, ಅವರು ನಿಜ ಮನಸ್ಸಿನಿಂದ ನಾಡಿನ ಹಿತಕ್ಕಾಗಿ ತುಡಿಯುವ ಚಿಂತನೆಗಳನ್ನು, ಯಥಾವತ್ತಾಗಿ ದಾಖಲಿಸುತ್ತಾ ಬಂದಿದೆ. ಅಂತೆಯೇ ವ್ಯಕ್ತಿ ಆರಾಧನೆ ಅಥವಾ ಆಡಂಬರಗಳಿಂದ ದೂರವುಳಿದು ಈ ಜಾಲವನ್ನು ಬನವಾಸಿಗರು ರೂಪಿಸಿದ್ದಾರೆಂಬುದು ಈ ಅಬ್ಬರದ ತೋರ್ಪಡಿಕೆಯ ಜಗತ್ತಿನಲ್ಲಿ ವಿಶೇಷವಾಗಿ ಕಾಣುತ್ತದೆ. ಹೀಗೆಂದೇ ಈ ದಾಖಲಿಕೆಯ ನೆವದಲ್ಲಿ ಇದನ್ನು ಹಿಂದೆ ನಿಂತು ಅಚ್ಚುಕಟ್ಟಾಗಿ ರೂಪಿಸುತ್ತಿರುವವರು ಒಂದಿಷ್ಟೂ ಪ್ರಚಾರ ಪಡೆಯದೇ ದುಡಿಯುತ್ತಿರುವ ನಿಲುವು ಅಚ್ಚರಿಗೆ, ಮೆಚ್ಚುಗೆಗೆ ಕಾರಣವಾಗುತ್ತದೆ. ವಿಷಯ ನಿಷ್ಠುರತೆ, ನಿಷ್ಠತೆಯೊಂದಿಗೆ ದೇವನೂರರ ಬದುಕಿನೊಂದಿಗೆ ಬೇರ್ಪಡಿಸದಂತೆ ಬೆರೆತು ಹೋದ ಆಳವಾದ ಅಂತಃಕರಣ, ಜಗತ್ತಿನ ಜೀವಿಗಳ ಬಗೆಗೆಲ್ಲ ಸಮಾನವಾಗಿ ಮಿಡಿವ ಕಾರುಣ್ಯ, ಸಮಾನತೆಗಾಗಿ, ಶೋಷಣೆರಹಿತ ಬದುಕಿಗಾಗಿ ಅವಿರತ ದನಿಯೆತ್ತುವ ಅವರ ಹೋರಾಟದ ಬನಿಯನ್ನು ನಮ್ಮ ಬನವಾಸಿಯ ಪುಟಪುಟವೂ ಅರಿವಿಲ್ಲದಂತೆ ನಮ್ಮೊಳಗೆ ಇಳಿಸುತ್ತಾ ಹೋಗುತ್ತದೆ. ತಾಣವು ಎಲ್ಲಿಯೂ ಜಾಳಾಗದಂತೆ, ಅಸೂಕ್ಷ್ಮವಾಗದಂತೆ ಆದಷ್ಟೂ ಎಚ್ಚರಿಕೆಯಿಂದ ಘನವಾಗಿ ಕಟ್ಟಿಕೊಂಡು ಬರುತ್ತಿರುವ ಕುರುಹು ಪ್ರತಿ ಪುಟದಲ್ಲೂ ಕಾಣುತ್ತದೆ. ಈ ಜಾಲತಾಣವನ್ನು ಹೊಕ್ಕರೆ ಹೂದೋಟವೊಂದಕ್ಕೆ ಪ್ರವೇಶಿಸಿದ ಅನುಭವವಾಗಿ ಅಲ್ಲಿನ ಸುಗಂಧದ ಒಂದು ತುಣುಕಾದರೂ ಬೇರ್ಪಡಿಸಲಾಗದಂತೆ ನಮ್ಮ ಜೀವವನ್ನು ಅಂಟಿಕೊಂಡು ಬಿಡುತ್ತದೆ!
‘ನಮ್ಮ ಬನವಾಸಿ’ ಜಾಲತಾಣದಲ್ಲಿ ಅಂಗಳ, ಹೆಜ್ಜೆಗುರುತು, ಜೀವತಂತು, ಒಡಲಾಳ, ಭಾವಪರದೆ, ಮರುರೂಪಗಳು, ಕುಸುಮಬಾಲೆ ಕಂಡವರು, ಜೊತೆಜೊತೆಗೆ, ಸಹಪಯಣ ಎಂಬ ವಿಭಾಗಗಳಿವೆ. ಎಲ್ಲವೂ ನಮ್ಮನ್ನು ವಿಭಿನ್ನ ಲೋಕಕ್ಕೆ ಕರೆದೊಯ್ದುಬಿಡುತ್ತವೆ. ‘ಅಂಗಳ’ದಲ್ಲಿ ಜಾಲತಾಣದ ಉದ್ದೇಶವನ್ನು ಮನೋಜ್ಞವಾಗಿ ಮತ್ತು ನವುರಾಗಿ ಕಟ್ಟಿಕೊಡಲಾಗಿದೆ. ಅಲ್ಲಿನ ನಿವೇದನೆಯ ಧಾಟಿಯೇ ಈ ಜಾಲತಾಣ ಪ್ರತಿಯೊಬ್ಬರದೂ, ನಮ್ಮದೂ ಕೂಡ ಎಂಬ ಭಾವನೆ ಮೂಡಿಸಿಬಿಡುತ್ತದೆ! ‘ಹೆಜ್ಜೆಗುರುತು’ ಪುಟವು ದೇವನೂರ ಅವರ ಬದುಕು, ಸಾಹಿತ್ಯ, ಪ್ರಶಸ್ತಿ, ಗೌರವಗಳ ಕುರಿತ ಸಂಕ್ಷಿಪ್ತ ಪರಿಚಯವನ್ನು ಒಳಗೊಂಡಿದೆ. ‘ಜೀವತಂತು’ ವಿಭಾಗವಂತೂ ನಿಜಕ್ಕೂ ಜಾಲತಾಣದ ಅತ್ಯಂತ ಮಹತ್ವದ ವಿಭಾಗವಾಗಿದೆ. ಕುಸುಮಬಾಲೆ, ದ್ಯಾವನೂರು, ಒಡಲಾಳ, ಎದೆಗೆ ಬಿದ್ದ ಅಕ್ಷರ ಹೀಗೆ ಅವರ ನಾಲ್ಕು ಕೃತಿಗಳ ಪೂರ್ಣಪಠ್ಯದ ಪಿಡಿಎಫ್ ಪ್ರತಿ ಮತ್ತು ಇತರ ಬಿಡಿಬರಹಗಳು ಇಲ್ಲಿವೆ. ಇಂಗ್ಲೀಷಿಗೆ ಅನುವಾದವಾದ ಅವರ ಕೆಲ ಬರಹಗಳೂ ಇಲ್ಲಿವೆ. ಹೀಗೆಂದೇ ದೇವನೂರರ ಚಿಂತನೆಗಳನ್ನು ಅರಿಯಲು ಬಯಸುವ ಕನ್ನಡ ಅರಿಯದ ಆಸಕ್ತರೂ ಇದರೊಳ ಹೊಕ್ಕು ಸಿಕ್ಕಿದ್ದನ್ನು ಹೆಕ್ಕುತ್ತಾರೆ! ಬನವಾಸಿಗರು ಈ ವಿಭಾಗದ ಶೀರ್ಷಿಕೆಯಾಗಿ ಅವರ ಪ್ರತಿ ಬರಹವನ್ನೂ ‘ಕನ್ನಡ ಸಾಹಿತ್ಯ ಚರಿತ್ರೆಯ ಜೀವತಂತು’ಗಳು ಎಂದಿರುವುದು ಅತ್ಯಂತ ಸಮಂಜಸವಾಗಿದೆ! ಏಕೆಂದರೆ ದೇವನೂರರು ಚಿನ್ನದಂತೆ ಅಳೆದು ತೂಗಿ ಪ್ರತಿ ಪದ ಮತ್ತು ವಾಕ್ಯ ರಚನೆಗೆ ನೀಡುವ ಮಹತ್ವವು ಅವರ ಬರಹಗಳನ್ನು ಆಳವಾಗಿ ಅಭ್ಯಸಿಸುವವರಿಗಷ್ಟೇ ಅಲ್ಲ ಸಾಮಾನ್ಯ ಓದುಗರಿಗೂ ಎದೆಗೆ ಮುಟ್ಟಿಬಿಡುತ್ತದೆ. ಪ್ರತಿ ಬರಹದ ಹಿಂದೆಯೂ ಇರುವ ಅವರ ಮನಸಿನ ಒದ್ದಾಟ, ಅನುಭವಿಸಿ ಬರೆಯುವ ತಾಧ್ಯಾತ್ಮತೆ ಮತ್ತು ಓದುಗನೆದೆಗೂ ಅರಿವೇ ಆಗದಂತೆ ಅದನ್ನು ದಾಟಿಸಿ ಬಿಡುವ ಸಾಧ್ಯತೆ, ಎಲ್ಲ ಘನ ಬರಹಗಾರರಿಗೂ ಸುಲಭವಾಗಿ ಸಾಧ್ಯವಾಗುವಂತಹುದಲ್ಲ.
‘ಒಡಲಾಳ’ ವಿಭಾಗದಲ್ಲಿ ದೇವನೂರ ಅವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿಗಳನ್ನು ಹೆಕ್ಕಿ ಕಟ್ಟಿಕೊಡಲಾಗಿದೆ. ಅವರ ಹಲ ವಿಶೇಷ ಸಂದರ್ಶನಗಳೂ ಈ ವಿಭಾಗದಲ್ಲಿದೆ. ‘ಭಾವಪರದೆ’ ವಿಭಾಗದಲ್ಲಿ ಅವರ ಭಾಷಣಗಳ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ವಿವಿಧ ಸಂದರ್ಭದ ಸ್ಥಿರಚಿತ್ರಗಳ ಸಮ್ಮಿಲನವಿದೆ. ನಿಜಕ್ಕೂ ಇದೊಂದು ನೋಡುಗರ ಬಹು ಮೆಚ್ಚಿನ ತಾಣ. ಏಕೆಂದರೆ ಇದರಲ್ಲಿ ಮಹಾದೇವರ ಅಪರೂಪದ ಸಂದರ್ಭದ ಫೋಟೋಗಳು ದಾಖಲಾಗಿವೆ. ‘ಮರುರೂಪಗಳು’ ವಿಭಾಗದಲ್ಲಿ ಇತರರು ಅವರ ಕೃತಿಗಳನ್ನು ಹೊಸ ರೂಪದಲ್ಲಿ ಕಂಡುಕೊಂಡ ವಿವರಗಳಿವೆ. ವಿಮರ್ಶೆಗಳಿವೆ. ಕಟು ವಿಮರ್ಶೆಗಳೂ ಇವೆಯೆಂಬುದು ಇನ್ನೂ ವಿಶೇಷ! ಬಹುಶಃ ‘ಕುಸುಮಬಾಲೆ’ಯೆಂಬ ಕನ್ನಡ ಸಾಹಿತ್ಯಕ್ಕೆ ಹೊಸ ದಿಕ್ಕನ್ನು ತೋರಿದ ಅವರ ಕೃತಿ ಎಷ್ಟು ಜನರಿಗೆ ಅದರ ಪರಿಪೂರ್ಣ ಒಳ ರೂಪಗಳಲ್ಲಿ ಅರ್ಥವಾಗಿದೆಯೋ ತಿಳಿಯದು. ಹೀಗೆಂದೇ ‘ಕುಸುಮಬಾಲೆ ಕಂಡವರು’ ಪುಟದಲ್ಲಿ ಈ ಕೃತಿಯ ಕುರಿತು ಕಂಡವರಿಗೆ ಕಂಡಷ್ಟರ ವಿವರಗಳು, ವಿಮರ್ಶೆಗಳು, ಓದುಗರ ಅಭಿಪ್ರಾಯಗಳಿವೆ. ಅದನ್ನು ಅಡಿಪಾಯವಾಗಿ ಇಟ್ಟುಕೊಂಡು ಕಟ್ಟಿದ ನಾಟಕ, ಸಿನೆಮಾ, ದೃಶ್ಯ ರೂಪಕ… ಎಲ್ಲ ವಿವರವೂ ಕುಸುಮಬಾಲೆಯನ್ನು ವಿಸ್ತರಿಸುವ ಪ್ರಯತ್ನಗಳಂತೆ ಕಾಣುತ್ತವೆ. ‘ಜೊತೆಜೊತೆಗೆ’ ವಿಭಾಗದಲ್ಲಿ ದೇವನೂರ ಮಹಾದೇವ ಅವರನ್ನು ಸಮಕಾಲೀನರು ಬಗೆ ಬಗೆಯಲ್ಲಿ ಕಂಡ ದಾಖಲೀಕರಣವಿದೆ. ನಾಡಿನ ತವಕ ತಲ್ಲಣ ಕನಸುಗಳನ್ನು ಸಮಸಂವೇದನೆಯ ಬರಹಗಾರರು ಕಟ್ಟಿಕೊಟ್ಟಿರುವ ದಾಖಲೀಕರಣವಾಗಿ ‘ಸಹಪಯಣ’ ವಿಭಾಗ ನಮ್ಮನ್ನು ಆಕರ್ಷಿಸುತ್ತದೆ. ಸಮಕಾಲಿನ ಕಾಲಘಟ್ಟದ ಸಮಸ್ಯೆಗಳಿಗೆ ತುಡಿಯುವ ಲೇಖನಗಳನ್ನಿಲ್ಲಿ ಸಂಗ್ರಹಿಸಲಾಗಿದೆ.
ಈ ಜಾಲತಾಣವನ್ನು ದೇಶ ವಿದೇಶದ ಕನ್ನಡಿಗರು ಪ್ರೀತಿಯಿಂದ ಸಂದರ್ಶಿಸುತ್ತಿದ್ದು ಇದುವರೆಗೆ ಎರಡು ಲಕ್ಷಕ್ಕೂ ಅಧಿಕ ನೋಡುಗರು ಇದರ ಒಳಹೊಕ್ಕಿರುವ ದಾಖಲೆ, ನಮ್ಮ ಬನವಾಸಿಯ ಗರಿಮೆಯನ್ನು ಹೆಚ್ಚಿಸಿದೆ. ಅಮೇರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ಆಫ್ರಿಕಾ, ನೆದರ್‍ಲ್ಯಾಂಡ್, ಕುವೈತ್, ದುಬೈ ಹೀಗೆ 20 ದೇಶಗಳ ನೋಡುಗರಷ್ಟೇ ಅಲ್ಲ ಪುಟ್ಟ ಪಟ್ಟಣ, ಹಳ್ಳಿಗಾಡಿನ ಯುವಕರೂ ನಮ್ಮ ಬನವಾಸಿಯ ಪ್ರಯೋಜನ ಪಡೆಯುತ್ತಿರುವುದು ವಿಶೇಷ. ನಿಜಕ್ಕೂ ಇದೊಂದು ಅಪರೂಪದ ದಾಖಲೀಕರಣವಷ್ಟೇ ಅಲ್ಲ, ವಿಶಿಷ್ಟ ಕನ್ನಡದ ಕೆಲಸವೂ ಹೌದು. ಅನನ್ಯ ಬರಹಗಾರ ಮತ್ತು ಚಿಂತಕರೊಬ್ಬರ ಸಮಕಾಲೀನ ಚರಿತ್ರೆಯ ಕಟ್ಟುವಿಕೆಯೂ ಹೌದು.
‘ನಮ್ಮ ಬನವಾಸಿ’ ಜಾಲತಾಣವನ್ನು ಸಂದರ್ಶಿಸಿದ ಬಳಿಕ ಕನ್ನಡದ ಕುವೆಂಪು, ಕಾರಂತರು, ಪು.ತಿ.ನ., ಪಿ.ಲಂಕೇಶ್, ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಅನುಪಮಾ ನಿರಂಜನ,… ಹೀಗೆ ಕನ್ನಡದ ಇನ್ನೂ ಹಲವು ಮಹತ್ವದ ಬರಹಗಾರರ ಕುರಿತೂ ಈ ತರಹದ ಜಾಲತಾಣಗಳಿದ್ದಿದ್ದರೆ… ಎಷ್ಟು ಚೆನ್ನಾಗಿರುತ್ತಿತ್ತು? ಎಂಬ ಆಸೆ ಮೂಡಿಬಿಡುತ್ತದೆ. ಕನ್ನಡದ ಮಹತ್ವದ ಚಿಂತಕರ, ಒಳನೋಟ ಮತ್ತು ದೂರದೃಷ್ಟಿಯುಳ್ಳ ಬರಹಗಾರರ ಬದುಕಿನ ಮುಖ್ಯ ಆಗುಹೋಗುಗಳು ದಾಖಲೀಕರಣಗೊಂಡು ಬೇಕೆಂದಾಕ್ಷಣ ಕೈಗೆ ಸಿಗುವಂತೆ ಹೀಗೆ ‘‘ಮ್ಯೂಸಿಯಂ” ರೂಪದಲ್ಲಿ ಸಿಕ್ಕರೆ…..? ನಿಜಕ್ಕೂ ನಾಡಿನ ಹಿತಕ್ಕಾಗಿ ತುಡಿಯುತ್ತಿರುವವರಿಗೆ, ಸಾಹಿತ್ಯದ ವಿದ್ಯಾರ್ಥಿಗಳಿಗೆ, ಒಂದು ಅಪರೂಪದ ಚೇತನವನ್ನು ಅದು ಇರುವಂತೆ ಅರಿಯಲು ಬಯಸುವ ಆಸಕ್ತರಿಗೆ….. ರಸದೌತಣವೇ ಸರಿ.
‘ನಮ್ಮ ಬನವಾಸಿಯಲ್ಲಿ’ ಸದ್ಯದ ವರ್ತಮಾನದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬಿಕ್ಕಟ್ಟುಗಳಿಗೆ ಮಹಾದೇವ ಅವರು ಪ್ರತಿಕ್ರಿಯಿಸಿರುವ ಹೆಚ್ಚಿನ ಹೇಳಿಕೆಗಳು, ಲೇಖನಗಳು, ಧ್ವನಿಮುದ್ರಿಕೆಗಳು ಸಂಬಂಧಿಸಿದ ಫೋಟೋಗಳು ಇದ್ದು ಒಮ್ಮೆ ಭೇಟಿ ನೀಡಿದವರು ಮತ್ತೆ ಮತ್ತೆ ಈ ಜಾಲತಾಣದ ಒಳಹೊಕ್ಕುವ ಗೀಳಿಗೆ ಬಿದ್ದುಬಿಡುತ್ತಾರೆ! ದೇವನೂರ ಅವರು ಕುಟುಂಬದೊಂದಿಗೆ, ಮೊಮ್ಮಕ್ಕಳೊಂದಿಗೆ ಇರುವ ಆಪ್ತ ಛಾಯಾಚಿತ್ರಗಳು ಮನಸೆಳೆಯುತ್ತವೆ. ಮಹಾದೇವ ಅವರ ಪತ್ನಿ ಪ್ರೊ.ಕೆ.ಸುಮಿತ್ರಬಾಯಿ ಅವರ ಆತ್ಮಕತೆ ‘ಸೂಲಾಡಿ ಬಂದೋ ತಿರುತಿರುಗಿ’ಯ ಕೆಲ ಪುಟಗಳನ್ನು ಇಲ್ಲಿ ದಾಖಲಿಸಲಾಗಿದ್ದು, ಇವುಗಳಲ್ಲಿ ದೇವನೂರರ ವ್ಯಕ್ತಿತ್ವದ ಆಕರ್ಷಕ ಎಳೆಗಳು ಆಪ್ತವಾಗಿ ನೇಯ್ಗೆಯಾಗಿವೆ. ಪ್ರಶಸ್ತಿ, ಗೌರವಗಳನ್ನು ಹಿಂದಿರುಗಿಸಿದ ಸಂದರ್ಭದಲ್ಲಿ ದೇವನೂರರು ಸರ್ಕಾರಕ್ಕೆ ಬರೆದ ಪತ್ರಗಳು, ಪತ್ರಿಕಾಗೋಷ್ಠಿಯ ವಿವರಗಳು ಮುಂತಾದ ಮಹತ್ವದ ದಾಖಲೆಗಳಿದ್ದು, ಸೂಕ್ಷ್ಮ ಸಂವೇದನೆಯ ಬರಹಗಾರರೊಬ್ಬರು ಕಾಲದ ಕರೆಗೆ ಸ್ಪಂದಿಸುವ ದಿಟ್ಟ ನಿಲುವನ್ನು ಅರ್ಥೈಸಿಕೊಳ್ಳುವ ಸಾಧ್ಯತೆಯಾಗಿ ಇದು ನಮಗೆ ಗೋಚರಿಸುತ್ತದೆ.
“ಎಷ್ಟು ತುಂಬಿದರೂ ಇನ್ನೂ ಮಿಕ್ಕಿಯೇ ಇರುತ್ತದೆ ಈ ಜಾಲ ಮತ್ತು ಎಷ್ಟು ಮೊಗೆದರೂ ಖಾಲಿಯೇ ಆಗದು ಈ ಜೀವ. ಇದೊಂದು ನೆರಳು ಹಿಡಿಯುವ ಆಟ” ಎನ್ನುವ ‘ಬನವಾಸಿಗರದ್ದು’ ತಾವಿನ್ನೂ ದಾಖಲೀಕರಣ ಪ್ರಕ್ರಿಯೆಯಲ್ಲಿ ಅರ್ಧದಷ್ಟೂ ಯಶಸ್ವಿಯಾಗಿಲ್ಲವೆಂಬ ವಿನಮ್ರ ನಂಬಿಕೆ. ಆರೋಗ್ಯಕರ ದಾರಿಯಲ್ಲಿ ಹೆಜ್ಜೆಗಳನ್ನಿಡಲು ಸಾಧ್ಯವಾದಷ್ಟು ಓದುಗರ ಸಲಹೆ, ಸೂಚನೆಗಳನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆಯೆಂಬುದಕ್ಕೂ ಪುರಾವೆಗಳು ದಕ್ಕುತ್ತವೆ. ‘ಮಹಾದೇವರ ಕುರಿತು ಓದುಗರಲ್ಲಿ ಇರಬಹುದಾದ ವಿಶೇಷವಾದುದನ್ನು ಪ್ರೀತಿಯಿಂದ ನೀಡಿದರೆ [nammabanavasi@gmail.com] ನಮ್ಮ ಬನವಾಸಿಯ ಮೌಲ್ಯ ಹೆಚ್ಚುತ್ತದೆ” ಎಂಬುದು ಬನವಾಸಿಗರ ಮನವಿ.
ದೇವನೂರ ಮಹಾದೇವ ಅವರದೇ ಸಾಲುಗಳು….
‘ಭೂಮಿಗೆ ಬಿದ್ದ ಬೀಜ
ಎದೆಗೆ ಬಿದ್ದ ಅಕ್ಷರ
ಇಂದಲ್ಲ ನಾಳೆ ಫಲಕೊಡುವುದು’
ದೇವನೂರರ ನಿಷ್ಠುರ, ನಿಖರ ಅಭಿಪ್ರಾಯಗಳು, ಚಿಂತನೆಗಳು, ಬದುಕು ಬರಹಗಳ ಬದ್ಧತೆ… ಎದೆಯೊಳಗೆ ಇಳಿದು, ಗಾಢ ಪ್ರತಿರೂಪವೊಂದನ್ನು ನಮ್ಮಲ್ಲಿ ಮರುಸೃಷ್ಟಿಸಬಲ್ಲ ಶಕ್ತಿ ಈ ‘ನಮ್ಮಬನವಾಸಿ’ ಜಾಲತಾಣಕ್ಕಿದೆಯೆಂಬುದೇ ಈ ಜಾಲತಾಣದ ವಿಶೇಷತೆ!