ಬದುಕಬೇಕು ಎಲ್ಲರೂ ಇವರಂತೆ… ಹಣತೆಗಳಂತೆ-ಸುದೇಶ್ ದೊಡ್ಡಪಾಳ್ಯ

ಮಹಾದೇವಿ ನಂದಿಕೋಲ, ಯಲ್ಲಮ್ಮ, ರಮೇಶ್‌ ಬಲ್ಲಿದ್‌ ಎನ್ನುವ ಈ ಮೂರು ವ್ಯಕ್ತಿತ್ವಗಳು ಬಹಳ ದಿನಗಳಿಂದ ನನ್ನೊಳಗೆ ಬೆಳೆಯುತ್ತಿದ್ದವು. ಇವರೆಲ್ಲರೂ ಸಾಮಾನ್ಯರು. ಆದರೆ ತಮ್ಮ ಉದಾತ್ತ ಕೆಲಸ ಮತ್ತು ಮಾದರಿ ವ್ಯಕ್ತಿತ್ವದಿಂದಾಗಿ ಸಮಾಜದಲ್ಲಿ ಗುರುತಿಸಿಕೊಂಡವರು.

ಮಹಾದೇವಿ ನಂದಿಕೋಲ ಆತ್ಮಬಲಕ್ಕೂ, ಯಲ್ಲಮ್ಮ ಮತ್ತು ಸಂಗಡಿಗರು ಕೂಡಿಬಾಳುವುದಕ್ಕೂ, ರಮೇಶ್‌ ಬಲ್ಲಿದ್‌ ಎಲ್ಲರ ಒಳಿತನ್ನು ಬಯಸುವುದರ ಸಂಕೇತವಾಗಿ ಕಾಣಿಸುತ್ತಾರೆ. ಕಲಬುರ್ಗಿಯ ಮಹಾದೇವಿ ನಂದಿಕೋಲ ಬಹುಬೇಗನೆ ಗಂಡನನ್ನು ಕಳೆದುಕೊಂಡರು. ಇಬ್ಬರು ಮಕ್ಕಳನ್ನು ಸಾಕುವುದು ಕಷ್ಟವಾಯಿತು. ಜಂಗಮರಲ್ಲಿ ಕಂತಿಭಿಕ್ಷೆ ಸಂಪ್ರದಾಯವಿದೆ.

ಮಹಾದೇವಿ ಹೆಗಲಿಗೆ ಜೋಳಿಗೆ ಹಾಕಿಕೊಂಡು ಮನೆ ಮನೆಗೆ ಕಂತಿಭಿಕ್ಷೆಗೆ ಹೊರಟರು. ಅಲ್ಲಿ ಸಿಗುವ ಜೋಳದ ಹಿಟ್ಟು ತಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಕೆಲವೊಮ್ಮೆ ಹಿಟ್ಟು ಉಳಿಯುತ್ತಿತ್ತು. ಅದೇ ಹಿಟ್ಟಿನಿಂದ ರೊಟ್ಟಿ ಮಾಡಿ ಮಾರುವುದನ್ನು ಕಲಿತರು. ಇದು ಅವರ ಕೈ ಹಿಡಿಯಿತು. ಕಂತಿಭಿಕ್ಷೆಗೆ ಹೋಗುವುದನ್ನು ನಿಲ್ಲಿಸಿದರು.

ತಾವೇ ಜೋಳ ತಂದು ರೊಟ್ಟಿ ಮಾಡುವ ಮೂಲಕ ಸ್ವಾವಲಂಬಿಯಾದರು. ಕೆಲವೇ ದಿನಗಳಲ್ಲಿ ಸಹಾಯಕ್ಕೆ ಒಬ್ಬರನ್ನು ನೇಮಿಸಿಕೊಂಡರು. ರೊಟ್ಟಿಗೆ ದಿನೇ ದಿನೇ ಬೇಡಿಕೆ ಹೆಚ್ಚಾಯಿತು. ಕೆಲಸ ಮಾಡುವ ಕೈಗಳೂ ಕೂಡ. ಈಗ ದಿನಕ್ಕೆ ಐದು ಸಾವಿರ ರೊಟ್ಟಿ ತವ ಮೇಲೆ ಅರಳುತ್ತವೆ! ಇವರ ಬಳಿ ನೂರ ಐವತ್ತು ಮಂದಿ ಮಹಿಳೆಯರು ಕೆಲಸ ಮಾಡುತ್ತಾರೆ.

ಇಪ್ಪತ್ತೈದು ವರ್ಷಗಳ ಹಿಂದೆ ಕಂತಿಭಿಕ್ಷೆ ಬೇಡುತ್ತಿದ್ದ ಮಹಾದೇವಿ ‘ಫುಡ್‌ ಸಪ್ಲೈ’ ಮೂಲಕ ಉದ್ಯಮಿಯಾಗಿದ್ದಾರೆ. ಖಾಲಿ ಕೈಗಳಿಗೆ ಕೆಲಸ ಕೊಟ್ಟು, ತಮ್ಮಂತೆ ಹಸಿದವರ ಹೊಟ್ಟೆ ತುಂಬಿಸಿದ್ದಾರೆ. ಈಗ ಕಲಬುರ್ಗಿಯ ಪ್ರತಿ ಬಡಾವಣೆಯಲ್ಲೂ ಮಹಿಳೆಯರು ಮನೆಯಲ್ಲಿ ರೊಟ್ಟಿ ಬಡಿದು ಮಾರಾಟ ಮಾಡಿ ಆದಾಯ ಗಳಿಸುತ್ತಾರೆ. ಇದನ್ನು ಕಲಿಸಿಕೊಟ್ಟಿದ್ದು ಇದೇ ಮಹಾದೇವಿ.

ರಾಮಜೀ ನಗರ ಕಲಬುರ್ಗಿಯಲ್ಲಿರುವ ಕೊಳೆಗೇರಿ. ಅಲ್ಲಿ ದಲಿತರು ವಾಸಿಸುತ್ತಾರೆ. ಹೆಚ್ಚಿನ ಮಹಿಳೆಯರು ಕಟ್ಟಡ ನಿರ್ಮಾಣ ಕೆಲಸಕ್ಕೆ ಹೋಗುತ್ತಾರೆ. ಈ ಕೆಲಸ ವರ್ಷ ಪೂರ್ತಿ ಸಿಗುವುದಿಲ್ಲ. ಆಗ ಬರಿಗೈಯಲ್ಲಿ ಕೂರಬೇಕು. ಬದುಕು ದುಸ್ತರವಾಗುತ್ತದೆ. ಯಲ್ಲಮ್ಮ, ಅಂಬಾಬಾಯಿ, ರತ್ನಾಬಾಯಿ ಅವರಿಗೆ ತಮ್ಮ ಕೇರಿಯ ಜನರ ಸಂಕಷ್ಟ ಏನು ಎನ್ನುವುದು ಗೊತ್ತಿತ್ತು. ಅವರು ಈ ಸಮಸ್ಯೆಗೆ ಏನಾದರೂ ಪರಿಹಾರ ಕಂಡುಕೊಳ್ಳಬೇಕು ಎಂದು ಚಿಂತಿಸುತ್ತಿದ್ದರು. ಅದು ಚಳಿಗಾಲ. ಹೊಲದಲ್ಲಿ ಸೊಪ್ಪಿನ ಕಡಲೆ (ಸುಲಗಾಯಿ) ಬರುವ ಕಾಲ. ರಾಮಜೀ ನಗರದ ಮಹಿಳೆಯರು ಹೊಲದಲ್ಲಿ ಹಸಿರು ಹುಲ್ಲು ಕೊಯ್ದು ಬಜಾರ್‌ನಲ್ಲಿ ಮಾರಾಟ ಮಾಡಿ ಬದುಕುತ್ತಿದ್ದರು. ಅದರಿಂದ ಬದುಕು ಆರಕ್ಕೇ ಏರಿಲ್ಲ.

‘ನೀವು ಏಕೆ ಸೊಪ್ಪಿನ ಕಡಲೆ ಹೊಲವನ್ನು ಗುತ್ತಿಗೆಗೆ ಹಿಡಿಯಬಾರದು’ ಎಂದು ಹೊಲದ ಮಾಲೀಕ ಕೇಳಿದರು. ಇವರಿಗೆ ‘ಹೌದಲ್ಲ’ ಎನಿಸಿತು. ಕೇರಿಯ ಮಹಿಳೆಯರನ್ನು ಸೇರಿಸಿ ‘ಕೂಡಿ ಗಳಿಸುವ’ ತಮ್ಮ ಸದುದ್ದೇಶವನ್ನು ತಿಳಿಸಿದರು. ಅವರಿಗೂ ಸರಿ ಅನಿಸಿತು. ಇಪ್ಪತ್ತು ಮಹಿಳೆಯರು ಒಟ್ಟಾಗಿ ಹೊಲವನ್ನು ಗುತ್ತಿಗೆಗೆ ಪಡೆದರು. ಮೊದಲ ವರ್ಷವೇ ಇಪ್ಪತ್ತು ಮಂದಿಗೂ ಕೈತುಂಬಾ ಹಣ ಸಿಕ್ಕಿತು. ಕೆಲವು ವರ್ಷಗಳು ಕಳೆಯುವಷ್ಟರಲ್ಲಿ ಇವರ ಬದುಕು ಆರಕ್ಕೆ ಏರಿತು. ಇದೇ ರೀತಿ ಕಲಬುರ್ಗಿಯಲ್ಲಿ ಐದು ಗುಂಪುಗಳು ಹುಟ್ಟಿಕೊಂಡವು.

ಮಹಿಳೆಯರಿಗೆ ‘ನೂರು ದಿನಗಳ ಉದ್ಯೋಗ ಖಾತರಿ’ ಆಯಿತು. ಈ ಅವಧಿಯಲ್ಲಿ ಯಲ್ಲಮ್ಮ ಮತ್ತು ಸಂಗಡಿಗರು ತಲಾ ಐವತ್ತು ಸಾವಿರದಷ್ಟು ಗಳಿಸುತ್ತಾರೆ. ‘ನಾನು ಯಲ್ಲಮ್ಮನ ಗುಂಪಿನಲ್ಲಿದ್ದೇನೆ. ಸುಲಗಾಯಿ ಮಾರಿ ಗಳಿಸಿದ ಹಣವನ್ನು ಜೋಪಾನ ಮಾಡಿದೆ. ಜೋಪಡಿ ತೆಗೆದು ಈಗ ಚೆಂದ ಮನೆ ಕಟ್ಟಿಸಿದ್ದೇನೆ’ ಎಂದು ಚಂದಮ್ಮ ಹೆಮ್ಮೆಯಿಂದ ಹೇಳುತ್ತಾರೆ.

ರಮೇಶ್‌ ಬಲ್ಲಿದ್ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕು ಕೋತಿಗುಡ್ಡದವರು. ಇವರು ಊರಿನಲ್ಲಿ ಎಮ್ಮೆ ಕಾಯುತ್ತಿದ್ದರು. ಬೆಂಗಳೂರಿನ ‘ಹೆಡ್‌ ಹೆಲ್ಡ್‌ ಹೈ’ ಸಂಸ್ಥೆಯವರ ಕಣ್ಣಿಗೆ ಬಿದ್ದರು. ಅವರು ಇವರನ್ನು ತಮ್ಮೊಂದಿಗೆ ಬೆಂಗಳೂರಿಗೆ ಕರೆದುಕೊಂಡು ಹೋದರು. ಅಲ್ಲಿ ಇಂಗ್ಲಿಷ್ ತರಬೇತಿ ನೀಡಿದರು. ಚುರುಕಾಗಿದ್ದ ರಮೇಶ್‌ ಆರು ತಿಂಗಳಲ್ಲಿ ಇಂಗ್ಲಿಷ್‌ ಕಲಿತರು. ಬಿಪಿಒ ಕಂಪೆನಿಯಲ್ಲಿ ‘ಟೀಮ್‌ ಲೀಡರ್‌’ ಆಗಿ ಅನುಭವ ಗಳಿಸಿದರು. ಈಗ ‘ಹೆಡ್‌ ಹೆಲ್ಡ್‌ ಹೈ’ನ ರಾಯಭಾರಿಯಾಗಿದ್ದಾರೆ.

ರಮೇಶ್‌ ಶ್ರದ್ಧೆ ಮತ್ತು ಪರಿಶ್ರಮದಿಂದ ಬದುಕು ಬದಲಿಸಿಕೊಂಡರು. ಆದರೆ, ತಮ್ಮಂಥ ಹುಡುಗರ ಕತೆ ಏನು ಎಂದು ಯೋಚಿಸಿದರು. ತಮ್ಮಂಥ ಹುಡುಗರಿಗೆ ಇಂಗ್ಲಿಷ್‌ ಕಲಿಸಿಕೊಟ್ಟರು. ಅವರು ವಿವಿಧ ಕಡೆ  ಉದ್ಯೋಗ ಕಂಡುಕೊಳ್ಳುವಂತೆ ಮಾಡಿದರು. ಈಗ ಆ ಹುಡುಗರು ಮತ್ತು ಕುಟುಂಬದವರು ನೆಮ್ಮದಿಯಾಗಿದ್ದಾರೆ. ‘ನಾನು ಚೆನ್ನಾಗಿರಬೇಕು ಎನ್ನುವುದೇ ಮುಖ್ಯವಾಗಿದ್ದರೆ, ಬೆಂಗಳೂರಿನಲ್ಲಿ ಬಿಪಿಒ ಕಂಪೆನಿ ತೆರೆಯುತ್ತಿದ್ದೆ. ಆದರೆ ನನಗೆ ದೊಡ್ಡ ಕನಸಿದೆ. ಹೈದರಾಬಾದ್‌ ಕರ್ನಾಟಕದಲ್ಲಿ ಸಾವಿರಾರು ಯುವಕರು, ವಿದ್ಯಾರ್ಥಿಗಳು ಇದ್ದಾರೆ. ಅವರಿಗೆ ಪ್ರೇರಣೆ ನೀಡಬೇಕು. ಪ್ರತಿಯೊಬ್ಬರೂ ಸ್ವಂತ ಶಕ್ತಿಯಿಂದ ಮೇಲೇರುವಂತೆ ಮಾಡುತ್ತೇನೆ’ ಎಂದು ರಮೇಶ್‌ ಬಲ್ಲಿದ್‌ ಹೇಳುತ್ತಾರೆ.

ಹೈದರಾಬಾದ್‌ ಕರ್ನಾಟಕದಲ್ಲಿ ಸಾವಿರಾರು ಕುಟುಂಬಗಳು ಇಂದಿಗೂ ದಿನಗೂಲಿಯನ್ನು ನಂಬಿ ಜೀವನ ಸಾಗಿಸುತ್ತಿವೆ. ಈ ವರ್ಗಕ್ಕೆ ಸರ್ಕಾರದ ಯೋಜನೆಗಳು ಗೊತ್ತಿಲ್ಲ. ತಳ ಸಮುದಾಯ ಮತ್ತು ಹಿಂದುಳಿದ ವರ್ಗಗಳ ಹೆಚ್ಚಿನ ಪುರುಷರು ಚಟಗಳಿಗೆ ಬಲಿಯಾಗಿದ್ದಾರೆ.

ಕುಟುಂಬವನ್ನು ಮಹಿಳೆಯರೇ ನಿರ್ವಹಿಸುತ್ತಾರೆ. ದಿನದ ಬದುಕು ಕಳೆದು ಒಂದಿಷ್ಟು ಹಣ ಉಳಿದರೆ ಅದು ದೊಡ್ಡ ಖುಷಿ. ದುಡಿಯುವ ಕೈಗೆ ಉದ್ಯೋಗ, ಉದ್ಯೋಗಕ್ಕೆ ತಕ್ಕ ಕೂಲಿ ಸಿಕ್ಕರೆ ಯಾರು ತಾನೇ ಆರ್ಥಿಕವಾಗಿ ಸಬಲರಾಗುವುದಿಲ್ಲ?  ಆದರೆ ಈಗ ಉದ್ಯೋಗದ್ದೇ ದೊಡ್ಡ ಸಮಸ್ಯೆ. ಆದ್ದರಿಂದ ಹಿಂದುಳಿದ ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ ಆತ್ಮಬಲ, ಕೂಡಿಬಾಳುವ ಮನಸ್ಸು ಮತ್ತು ನಾನಲ್ಲ, ನಾವು ಎನ್ನುವ ಗುಣಗಳು ಮುಖ್ಯವಾಗುತ್ತವೆ. ಮಹಾದೇವಿ ನಂದಿಕೋಲ, ಯಲ್ಲಮ್ಮ ಮತ್ತು ಸಂಗಡಿಗರು, ರಮೇಶ್‌ ಬಲ್ಲಿದ್ ಅವರು ಸೂರ್ಯ, ಚಂದ್ರರಂತೆ ಪ್ರಖರವಾಗಿ ಬೆಳಗುವವರಲ್ಲ; ಪುಟ್ಟ ಪುಟ್ಟ ಹಣತೆಗಳಂಥವರು. ತಮ್ಮ ಸುತ್ತಲು ಇರುವ ಕತ್ತಲನ್ನು ಹೊರಕ್ಕೆ ದೂಡುವ ಶಕ್ತಿ ಉಳ್ಳವರು.

ಇಲ್ಲೊಂದು ಕತೆ ನೆನಪಾಗುತ್ತದೆ ಶಾಲೆಯಲ್ಲಿ ಪುಟ್ಟ ಮಕ್ಕಳಿಗೆ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿರುತ್ತದೆ. ಪೋಷಕರು ತಮ್ಮ ಮಕ್ಕಳ ಗೆಲುವನ್ನು ನೋಡಿ ಸಂಭ್ರಮಿಸಲು ಬಂದಿರುತ್ತಾರೆ. ಸ್ಪರ್ಧೆ ಶುರುವಾಗುತ್ತದೆ. ಪೋಷಕರು ತಮ್ಮ ಮಕ್ಕಳೇ ಗೆಲ್ಲಬೇಕು ಎನ್ನುವ ಧಾವಂತದಲ್ಲಿ ಕೂಗುತ್ತಿರುತ್ತಾರೆ. ಓಟದಲ್ಲಿ ಇಬ್ಬರು ಮುಂದೆ ಇರುತ್ತಾರೆ. ಉಳಿದವರು ಹಿಂದೆ ಇರುತ್ತಾರೆ. ಹಿಂದೆ ಇರುವವರು ಅರಿವಿಲ್ಲದೆ ಪರಸ್ಪರ ಕಾಲಿಗೆ ಸಿಕ್ಕಿ ನೆಲಕ್ಕೆ ಬೀಳುತ್ತಾರೆ. ಮುಂದೆ ಇರುವ ಹುಡುಗ ಇದನ್ನು ಗಮನಿಸುತ್ತಾನೆ. ಈತನ ಪೋಷಕರು ‘ಓಡು ಓಡು’ ಎನ್ನುತ್ತಾ ಕೂಗುತ್ತಾರೆ. ಆದರೆ ಈ ಹುಡುಗ ಬಿದ್ದವರ ಬಳಿಗೆ ಧಾವಿಸುತ್ತಾನೆ. ಎರಡನೆಯವನೂ ಹಿಂಬಾಲಿಸುತ್ತಾನೆ. ಇಬ್ಬರೂ ಸೇರಿ ಬಿದ್ದವರನ್ನು ಮೇಲೆಕ್ಕೆತ್ತಿ ಎಲ್ಲರೂ ಕೈ ಕೈ ಹಿಡಿದು ಒಟ್ಟಾಗಿ ಗುರಿ ಮುಟ್ಟುತ್ತಾರೆ; ಎಲ್ಲರೂ ಗೆಲ್ಲುತ್ತಾರೆ.

ಈ ಕತೆ ನನಗೆ ಒಂದು ‘ರೂಪಕ’ದಂತೆ ಕಾಣಿಸುತ್ತದೆ. ಹೈದರಾಬಾದ್‌ ಕರ್ನಾಟಕಕ್ಕೆ ಬಿದ್ದವರನ್ನು ಎಬ್ಬಿಸಿ ಜೊತೆಯಲ್ಲಿ ಕರೆದೊಯ್ಯುವ ಮಹಾದೇವಿ ನಂದಿಕೋಲ, ಯಲ್ಲಮ್ಮ ಮತ್ತು ಸಂಗಡಿಗರು, ರಮೇಶ್‌ ಬಲ್ಲಿದ್‌ ಅವರಂಥವರು ಬೇಕು. ಹೀಗಾದರೆ ಮಾತ್ರ ಎಲ್ಲರೂ ಗೆಲ್ಲಲು ಮತ್ತು ಬದುಕಲು ಸಾಧ್ಯವಾಗುತ್ತದೆ.