ಬಡವರು ಬೇಕಾಗಿದ್ದಾರೆ…ಕೋಡಿಬೆಟ್ಟು ರಾಜಲಕ್ಷ್ಮಿ

ಶಿಕ್ಷಕರು ಬೇಕಾಗಿದ್ದಾರೆ, ವಧುವರರು ಬೇಕಾಗಿದ್ದಾರೆ, ಕಚೇರಿ ಕೆಲಸಕ್ಕೆ ಹುಡುಗರು ಬೇಕಾಗಿದ್ದಾರೆ, ಮಾರಾಟದ ಪ್ರತಿನಿಧಿಗಳು ಬೇಕಾಗಿದ್ದಾರೆ… ಹೀಗೆ, ‘ಬೇಕಾದವರ’ ಪಟ್ಟಿಗೆ ಕೊನೆಮೊದಲೆಂಬುದು ಇಲ್ಲ. ಆದರೆ, ಈ ಪಟ್ಟಿಯಲ್ಲಿ ‘ಬಡವರು ಬೇಕಾಗಿದ್ದಾರೆ’ ಎನ್ನುವ ಪ್ರಕಟಣೆ ಸೇರಿಕೊಂಡರೆ ಹೇಗೆ? ಕುಗ್ರಾಮಕ್ಕೋ ಕೊಳೆಗೇರಿಗೋ ಹೋಗಿ ಕಲ್ಲು ಎಸೆದರೆ ಅದು ಬಡವರ ಮನೆಯ ಮೇಲೆಯೇ ಬೀಳುತ್ತದೆ ಎಂದು ಹೇಳುವುದು ಸುಲಭ. ಆದರೆ, ಬಡವರನ್ನು ಹುಡುಕಲು ಸರ್ಕಾರದ ಯೋಜನೆಗಳು ಹಾಗೂ ಸಂಘಸಂಸ್ಥೆಗಳು ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ!

ಬುಶ್ಯಪ್ಪ ಸದಾನಂದನ ಗೂಡಂಗಡಿಯ ಬೆಂಚಿನಲ್ಲಿ ಪೇಪರ್‌ ಓದುತ್ತಾ ಕುಳಿತಿದ್ದ. ಯಾರೀ ಬುಶ್ಯಪ್ಪ ಎಂದಿರಾ? ನಿಮ್ಮ ಊರಿನಲ್ಲೂ ಇರಬಹುದಾದ, ಈ ಬರಹದುದ್ದಕ್ಕೂ ಬರುವ ಬುಶ್ಶಪ್ಪನನ್ನು ಒಂದು ರೂಪಕ ಎಂದುಕೊಳ್ಳಿ.

ಆ ಗೂಡಂಗಡಿಯ ಬದಿಯಲ್ಲಿಯೇ ನ್ಯಾಯಬೆಲೆ ಅಂಗಡಿಯೂ ಇದೆ. ಹಾಗಾಗಿ ಊರಿನ ಜನರೆಲ್ಲ ಅಲ್ಲಿಗೆ ಬಂದು ಹೋಗುತ್ತಿದ್ದರು. ಅಲ್ಲಿರುವ ಒಂದು ಪೇಪರನ್ನು ನೂರಾರು ಜನರು ಓದಿ, ಸಂಜೆಯ ಹೊತ್ತಿಗೆ ಆ ಪೇಪರು ವರ್ಷದ ಕೊನೆಯಲ್ಲಿ ಮಕ್ಕಳ ಕೈಲಿರುವ ಪಾಠ ಪುಸ್ತಕದಂತೆ ಕಿವಿಮಡಚಿಕೊಂಡಿರುತ್ತಿತ್ತು. ಅದರಲ್ಲಿ ಎಲೆ ಅಡಿಕೆಯ ಕೆಂಪು ರಸವೂ ಅಲ್ಲಲ್ಲಿ ಮೆತ್ತಿಕೊಂಡಿರುತ್ತಿತ್ತು. ಬುಶ್ಯಪ್ಪ ಅದೇ ಊರಿನವನಾದರೂ ಪೇಟೆಯ ಟಚ್ಚು ಇರುವವನು.

ಆ ಕಾರಣದಿಂದಾಗಿ ಅವನಿಗೆ ಗಲೀಜಾದ ಪೇಪರ್‌ ಓದ್ಲಿಕ್ಕೆ ಬುರ್ನಾಸು ಅನಿಸುತ್ತಿತ್ತು. ಅದಕ್ಕೇ ಅವನು ಬೆಳಿಗ್ಗೆಯೇ ಪೇಪರ್‌ ಓದಲಿಕ್ಕೆ ಬರುವುದು. ಹಾಗೆ ಅವನೊಂದು ಬೆಳಿಗ್ಗೆ ಪೇಪರ್‌ ಓದುತ್ತಿದ್ದಾಗ ಒಂದು ಜೀಪ್‌ ಬಂದು ಅಂಗಡಿ ಮುಂದೆ ನಿಂತಿತು. ಅದರಲ್ಲಿದ್ದ ಜನರು ಹೊಸಬರಂತೆ ಕಂಡರು. ಡ್ರೈವರನ ಹಾಗೆ ಇರುವವನು ಬಾಯಲ್ಲಿದ್ದ ರಸವನ್ನು ಪಚಕ್ಕಂತ ಅಲ್ಲಿ ಉಗಿದು, ಬುಶ್ಯಪ್ಪನನ್ನು ಉದ್ದೇಶಿಸಿ ಕೇಳಿದ: ‘‘ಇಲ್ಲಿ ಕೆಲಸಕ್ಕೆ ಸ್ವಲ್ಪ ಜನ ಸಿಗಬಹುದಾ…’’.

‘‘ಕೆಲಸಕ್ಕಾ.. ಎಂತ ಕೆಲಸಕ್ಕೆ..’’ ಅಂತ ಬುಶ್ಯಪ್ಪ ಪ್ರಶ್ನಿಸಿದ್ದೇ, ಅವನಿಗೆ ಸ್ವಲ್ಪ ಇಂಟರೆಸ್ಟ್‌ ಉಂಟು ಅಂತ ಜೀಪಿನಲ್ಲಿದ್ದವರಿಗೆ ಗೊತ್ತಾಗಿ, ‘ಸಿಗರೇಟ್‌ ಉಂಟಾ’ ಅಂತ ಸದಾನಂದನನ್ನು ಕೇಳುತ್ತಾ ಅವರು ಕೆಳಗಿಳಿದರು.

ನಾಲ್ಕು ಜನರು ಜೀಪಿನಿಂದ ಇಳಿದರು. ಸಿಗರೇಟು, ಸೋಡಾ ಶರಬತ್ತು, ಎರಡು ಪ್ಯಾಕೆಟ್‌ ಲೇಸ್‌ ಚಿಪ್ಸು ಕಿತ್ತುಕೊಂಡು ತಿನ್ನತೊಡಗಿದರು. ಡ್ರೈವರ್‌ ಬುಶ್ಯಪ್ಪನಿಗೆ ಕೇಳಿದ.

‘‘ಇಲ್ಲಿ ಗದ್ದೆ ಕೆಲಸ ಮಾಡುವ ಜನರೆಲ್ಲ ಎಲ್ಲಿ ಸಿಗ್ತಾರೆ…’’

ಬುಶ್ಯಪ್ಪ ವಿಚಾರಿಸಿದಾಗ, ವಿಷ್ಯ ನಿಧಾನವಾಗಿ ಅವನಿಗೆ ಸ್ಪಷ್ಟವಾಯಿತು. ಅವರಿಗೆ ಗದ್ದೆ ಕೆಲಸ ಮಾಡುವ ಜನರು ಬೇಕು. ಆದರೆ ಗದ್ದೆ ಕೆಲಸಕ್ಕೆ ಅಲ್ಲ. ಜನ ಬೇಕಿರುವುದು ಒಂದು ಹೊಸ ರಾಜಕೀಯ ಪಕ್ಷದ ರ್‍ಯಾಲಿಗೆ. ‘ಗದ್ದೆ ಕೆಲಸಕ್ಕೆ ಹೋದರೆ ಮೈ ಕೈ ತುರಿಕೆ ಬರುತ್ತದೆ. ರ್‍ಯಾಲಿಗೆ ಬನ್ನಿ. ಅಷ್ಟೇ ಹಣ ಕೊಡ್ತೇವೆ… ಜಿಲ್ಲೆಯ ಎಲ್ಲ ಕಡೆಯಲ್ಲಿಯೂ ರ್‍ಯಾಲಿ, ಭಾಷಣಕ್ಕೆ ಜನ ಬೇಕು. ಆದ್ದರಿಂದ ಸ್ವಲ್ಪ ದಿನ ನಿರಂತರ ಕೆಲಸ ಸಿಕ್ತದೆ’.

ಎಲ್ಲ ವಿವರಣೆ ಕೊಡುವಷ್ಟರಲ್ಲಿ ಬುಶ್ಯಪ್ಪನ ಪರಿಚಯವೂ ಜೀಪ್‌ನಲ್ಲಿದ್ದ ಮುಖಂಡ ರಾಜಪ್ಪನಿಗೆ ಆಯಿತು. ಹಾಗಾಗಿ ಕೊನೆಯ ವಾಕ್ಯ ಎಂಬಂತೆ– ‘ನೀವು ವ್ಯವಸ್ಥೆ ಮಾಡುವುದಾದರೆ ನಾವು ನಾಳೆ ಬರ್ತೇವೆ. ನಿಮ್ಮನ್ನೂ ನೋಡಿಕೊಳ್ಳುವ’ ಎಂದು ರಾಜಪ್ಪ ಹೇಳಿದ. ಜೀಪ್‌ ಹೊರಟು ಹೋಯಿತು. ಕುಳಿತಲ್ಲೇ ಹೀಗೊಂದು ಕತೆ ಆಗುತ್ತದೆ ಎಂದು ಬುಶ್ಯಪ್ಪ ಭಾವಿಸಿಯೇ ಇರಲಿಲ್ಲ. ಮೈ ಕೈ ತುರಿಸುವ ಭತ್ತದ ಕೆಲಸ ಬಿಟ್ಟು ಸುಮ್ಮನೇ ಕುಳಿತುಕೊಳ್ಳುವ ಕೆಲಸ ಎಂದರೆ ಯಾರು ಬೇಕಾದರೂ ಬರುತ್ತಾರೆ. ಬುಶ್ಯಪ್ಪ ಕಾರ್ಯಪ್ರವೃತ್ತನಾದ.

‘ಶ್ರೀಮಂತರಾಗುವುದು ಹೇಗೆ?’, ‘ದುಡ್ಡು ಸಂಪಾದಿಸುವುದು ಹೇಗೆ?’ ಎನ್ನುವ ವಿಷಯಗಳ ಬಗ್ಗೆ ಸಾಕಷ್ಟು ಪುಸ್ತಕಗಳು, ಸಂಶೋಧನೆಗಳಿವೆ. ಆದರೆ, ಬುಶ್ಯಪ್ಪನಿಗೆ ‘ಶ್ರೀಮಂತರಾಗುವುದು ಹೇಗೆ?’ ಎಂಬುದು ಹೊಳೆದದ್ದು ಸದಾನಂದನ ಗೂಡಂಗಡಿಯ ಜಗಲಿಯಲ್ಲಿ. ಅಂದಿನಿಂದ ಅವನ ದೆಸೆಯೇ ತಿರುಗಿತು. ಅವನು ಶ್ರೀಮಂತಿಕೆಯ ದಾರಿಯಲ್ಲಿ ಬೆಳೆಯತೊಡಗಿದ.
* * *
ಒಂದು ಕಾಲವಿತ್ತು.
ಬಡವರನ್ನು ಇನ್ನಷ್ಟು ಮತ್ತಷ್ಟು ದುಡಿಸಿ ಜಮೀನುದಾರರು ಶ್ರೀಮಂತರಾಗುತ್ತಿದ್ದರು. ಸಂಬಳ, ಬೋನಸ್ಸು ಸರಿಯಾಗಿ ಕೊಡದೆ ಕಾರ್ಮಿಕರನ್ನು ಶೋಷಿಸುವ ಕಾರ್ಖಾನೆಗಳ ಮಾಲೀಕರು ಅನೇಕರಿದ್ದರು. ಹಾಗೆ ಸಂಬಳ ಸರಿಯಾಗಿ ಕೊಡದೆ ಅವರು ಶ್ರೀಮಂತರಾಗುವ ಲೆಕ್ಕಾಚಾರ ಯಾರಿಗೇ ಆದರೂ ಅರ್ಥವಾಗುತ್ತಿತ್ತು. ಈಗ ಕಾಲ ಬದಲಾಗಿದೆ. ಶ್ರೀಮಂತರಾಗಬೇಕು ಎನ್ನುವ ಆಶಯ ಅಂದಿನಂತೆಯೇ ಇಂದೂ ಇದೆ. ಆದರೆ ಶ್ರೀಮಂತಿಕೆಯೆಡೆಗೆ ಸಾಗುವ ದಾರಿ ತಂಬಾ ನಾಜೂಕಾಗಿದೆ.

ಈ ಮೊದಲು ನಮ್ಮ ಮನೆಗಳ ಟೆರೇಸ್‌ ಮೆಟ್ಟಿಲುಗಳಂತೆ ಅಥವಾ ಬೆಟ್ಟಗಳನ್ನು ಏರಲು ರೂಪಿಸಿದ ಕಲ್ಲಿನ ಮೆಟ್ಟಿಲುಗಳಂತೆ ಇದ್ದ ಆ ದಾರಿ, ಈಗ  ಮಾಲ್‌ಗಳಲ್ಲಿರುವ ಎಸ್ಕಲೇಟರ್‌ ಮಾದರಿಯಲ್ಲಿ ಬಹಳ ನಾಜೂಕಾಗಿದೆ. ಎಸ್ಕಲೇಟರ್‌ವರೆಗೆ ತಲುಪಿ ಸಮತೋಲನ ಕಾಪಾಡಿಕೊಂಡು ನಿಲ್ಲುವ ಕಲೆ ಗೊತ್ತಿದ್ದರಾಯಿತು. ಬಳಿಕ ಎಲ್ಲವೂ ತಾನಾಗಿಯೇ ಘಟಿಸುತ್ತದೆ. ರಾಜಪ್ಪನ ತಂಡಕ್ಕೆ ಕೃಷಿ ಕಾರ್ಮಿಕರನ್ನು ಹೊಂದಿಸಿ ಕೊಡುವ ಆ ಒಂದು ಬೇಸಿಗೆಯಲ್ಲಿಯೇ, ಈ ಸಮಾಜದಲ್ಲಿ ಬಡವರಿಗೆ ಎಷ್ಟು ಬೇಡಿಕೆ ಇದೆ ಎಂಬುದು ಬುಶ್ಯಪ್ಪನಿಗೆ ಅರ್ಥವಾಗಿ ಹೋಯಿತು. ಅವನದೀಗ ಬಡವರ ಹುಡುಕುವ ಬಿಜಿನೆಸ್ಸು!

ಮೊನ್ನೆ ಹಾಗೆಯೇ ಮತ್ತೊಂದು ಕತೆ ಆಯಿತು. ‘ಸಂಗಡಿ’ ಅಂತೊಂದು ಭಾಷೆ ಇದೆ. ಲಿಪಿಗಿಪಿ ಇಲ್ಲದ ಆಡುಮಾತು ಅದು. ಅಳಿವಿನಂಚಿನಲ್ಲಿರುವ ಆ ಭಾಷೆಗೆ ಪುನರುಜ್ಜೀವನ ಕಲ್ಪಿಸಲು ಸರ್ಕಾರ ಒಂದು ಅಕಾಡೆಮಿ ಸ್ಥಾಪಿಸಿತು. ಅಕಾಡೆಮಿ ಎಂದ ಮೇಲೆ ಅನುದಾನಗಳ ಬಿಡುಗಡೆ, ಯೋಜನೆಗಳನ್ನು ಹಮ್ಮಿಕೊಳ್ಳುವುದು ಅನಿವಾರ್ಯ ತಾನೆ. ಅಳಿವಿನಂಚಿನಲ್ಲಿರುವ ಭಾಷೆಯನ್ನು ಪುನರುಜ್ಜೀವನಗೊಳಿಸುವ ಯೋಜನೆಯಲ್ಲಿ ಶಾಲೆಗಳಲ್ಲಿ ಆ ಭಾಷೆಯನ್ನು ಕಲಿಸಲು ಅಕಾಡೆಮಿ ನಿರ್ಧರಿಸಿತು.

ಪಠ್ಯ ರಚನೆ, ಜನಪದ ಹಾಡುಗಳ ದಾಖಲೀಕರಣಗಳನ್ನು ಮಾಡಿದ ಬಳಿಕ ಶಾಲೆಗಳಲ್ಲಿ ಅವುಗಳನ್ನು ಕಲಿಸುವ ಪ್ರಕ್ರಿಯೆ ಆರಂಭವಾಯಿತು. ಆದರೆ ಯಾವ ಪೋಷಕರು ತಾನೇ ಅಳಿವಿನಂಚಿನ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಮಕ್ಕಳಿಗೆ ಹೇಳುತ್ತಾರೆ. ಇಷ್ಟಕ್ಕೂ ಈಗಿನ ಕಾಲದಲ್ಲಿ ಮಕ್ಕಳ ಆಯ್ಕೆ ಎನ್ನುವುದು ಪೋಷಕರ ಆಜ್ಞೆ ಅಲ್ಲವೇ? ವ್ಯವಹಾರ ಚತುರ ಬುಶ್ಯಪ್ಪ ಕೂಡ ಆ ಸಮಿತಿಯಲ್ಲಿದ್ದ. ಆಯ್ದ ಕೆಲವು ಪ್ರಾಥಮಿಕ ಶಾಲೆಗಳ ಮೇಷ್ಟ್ರ ಕರೆದು ಮಾತನಾಡಿದ. ಅವನು ಅನುಕೂಲಕರ ಸಂದರ್ಭವೊಂದನ್ನು ಗುರುತಿಸಿದ್ದ.

ಸರ್ಕಾರ ಗುಳೆ ಹೋಗುವ ಜನರಿಗೆ, ಅಲೆಮಾರಿ ಜನರ ಮಕ್ಕಳಿಗೆ ಶಿಕ್ಷಣ ಕಲ್ಪಿಸಲು ಟೆಂಟ್‌ ಶಾಲೆಗಳನ್ನು ಆರಂಭಿಸಲು ಆದೇಶ ಹೊರಡಿಸಿತ್ತು. ಜೋಪಡಿಗಳಲ್ಲಿ, ಅಲ್ಲಲ್ಲಿ ಹಾಕಿದ ಟೆಂಟ್‌ಗಳಲ್ಲಿ ವಾಸಿಸುವ ಕುಟುಂಬಗಳಲ್ಲಿನ ಶಾಲೆಗೆ ಹೋಗದೆ ಉಳಿದ ಮಕ್ಕಳನ್ನು ಗುರುತಿಸಿ ಅವರನ್ನು ಟೆಂಟ್‌ ಶಾಲೆಗಳಿಗೆ ಸೇರಿಸುವ ಅಭಿಯಾನ ನಡೆದಿತ್ತು. ಮೇಷ್ಟ್ರ ಬಳಿ ಮಾತನಾಡಿದ ಬುಶ್ಯಪ್ಪ ಇಂತಹ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡು, ಅವರಿಗೆ ಸಂಗಡಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ಪ್ರೇರೇಪಿಸಲು ಸೂಚಿಸಿದ.

ಶಾಲೆಯಲ್ಲಿ ಯಾವ ಆಯ್ಕೆಯಿಂದ ಮುಂದೇನು ಲಾಭ ಎನ್ನುವ ಯೋಚನೆ ಮಾಡದ, ಅಷ್ಟೇಕೆ ಶಾಲೆಗೆ ಹೋಗದೇ ಇದ್ದರೆ ಒಂದಿಷ್ಟು ಹೊಟ್ಟೆ ಹೊರೆಯುವುದು ಸುಲಭವಾದೀತು ಎಂದು ಯೋಚನೆ ಮಾಡುವ ಕುಟುಂಬಗಳಿಂದ ಬಂದ ಮಕ್ಕಳವರು. ಹಾಗಾಗಿ ಬುಶ್ಯಪ್ಪನ ಐಡಿಯಾ ಕ್ಲಿಕ್ಕಾಯಿತು. ಟೆಂಟ್‌ ಶಾಲೆಯ ಮಕ್ಕಳ ಕೈಗೆ ಸಂಗಡಿ ಭಾಷಾ ಪುಸ್ತಕಗಳು ಬಂದವು. ಅಳಿವಿನಂಚಿನಲ್ಲಿರುವ ‘ಸಂಗಡಿ’ ಭಾಷೆ ಟೆಂಟ್‌ ಶಾಲೆಗಳಲ್ಲಿ ಅರಳುತ್ತಿವೆ ಎಂದು ಪತ್ರಿಕೆಗಳು ಬರೆದವು. ಟೀವಿಗಳು ಬೊಬ್ಬೆ ಹೊಡೆದವು. ಅಕಾಡೆಮಿ ಅಧ್ಯಕ್ಷರ ಸಂದರ್ಶನ, ಟೆಂಟ್‌ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಚಿತ್ರಗಳು ಪ್ರಕಟಗೊಂಡವು.

ಒಂದೇ ಕಲ್ಲಿಗೆ ಎರಡು ಹಕ್ಕಿ ಎಂಬಂತೆ ಶಿಕ್ಷಣ ಇಲಾಖೆಯ ವತಿಯಿಂದ ನಡೆಯಬೇಕಾದ ಕ್ಷೇತ್ರ ಕಾರ್ಯವನ್ನೂ ಅಕಾಡೆಮಿಯ ವತಿಯಿಂದ ನಡೆಯಬೇಕಾದ ಕ್ಷೇತ್ರ ಕಾರ್ಯವನ್ನೂ ಬುಶ್ಯಪ್ಪನ ಜನರೇ ವಹಿಸಿಕೊಂಡಿದ್ದರು. ಈ ರೂಪದಲ್ಲಿ ಅನುದಾನ ಯಶಸ್ವಿಯಾಗಿ ಖರ್ಚಾಯಿತು. ಎಲ್ಲಿಂದಲೋ ಬಂದ ಅರಿವಿಲ್ಲದ ಪುಟಾಣಿ ಮಕ್ಕಳು ಸಂಗಡಿ ಭಾಷೆ ಕಲಿತರೇ… ಅವರು ಪಾಸಾದರೇ… ಭಾಷೆ ಉದ್ಧಾರವಾಯಿತೇ, ಮಕ್ಕಳು ಉದ್ಧಾರವಾದರೇ… ಎಂಬುದೆಲ್ಲ ಮೌಲ್ಯಮಾಪನ ಮಾಡಲು ಬುಶ್ಯಪ್ಪನಿಗೆ ಪುರುಸೊತ್ತೇ ಇಲ್ಲ. ಯಾಕೆಂದರೆ  ಆ ಶಾಲೆಗಳ ವಾರ್ಷಿಕ ಫಲಿತಾಂಶ ಬರುವಾಗ ಬುಶ್ಯಪ್ಪನಿಗೆ ಮತ್ತೊಂದು ಪ್ರಾಜೆಕ್ಟ್‌ ಸಿಕ್ಕಿತ್ತು.

ಬಡವರ ಕ್ಷೇತ್ರದಲ್ಲಿ ಬುಶ್ಯಪ್ಪ ಇಷ್ಟೊಂದು ಕೆಲಸ ಮಾಡುವುದನ್ನು ಗಮನಿಸಿದ ಎರಡು ಎನ್‌ಜಿಒಗಳು ಶಾಲೆಗಳಲ್ಲಿ ಬಡ ಮಕ್ಕಳನ್ನು ಗುರುತಿಸುವಂತೆ ಮನವಿ ಮಾಡಿಕೊಂಡಿದ್ದವು. ಟೆಂಟ್‌ ಶಾಲೆಗಳ ವಿಚಾರವಾಗಿ ಕೆಲಸ ಮಾಡುತ್ತಿದ್ದ ಬುಶ್ಯಪ್ಪನಿಗೆ ಅಲ್ಲಿರುವ ಅವಕಾಶಗಳ ಪರಿಚಯ ಇತ್ತು. ಮಕ್ಕಳಿಗೆ ಕೊಡೆ ವಿತರಿಸುವ ಮೂಲಕ ಪ್ರತೀ ವರ್ಷ ಪೇಪರ್‌ನಲ್ಲಿ ಫೋಟೋ ಹಾಕಿಸಿಕೊಳ್ಳಲು ‘ಫ್ರೆಂಡ್ಸ್‌ ಕ್ಲಬ್‌’ಗಳಿಗೆ ಬಡ ಮಕ್ಕಳು ಬೇಕು. ಪ್ರಶಸ್ತಿಗಾಗಿ ತುರ್ತಿನಲ್ಲಿರುವವರಿಗೆ, ಮುಂದಿನ ವರ್ಷ ಚುನಾವಣೆಗೆ ಸ್ಪರ್ಧಿಸುವವರಿಗೆ, ಫೆಲೋಶಿಪ್‌ಗಳನ್ನು ಪಡೆದುಕೊಳ್ಳುವವರಿಗೆ– ಏನೆಲ್ಲ ಕಾರಣಗಳಿಗೆ ಎಷ್ಟೆಲ್ಲ ಜನರಿಗೆ ಬಡ ಮಕ್ಕಳು ಬೇಕು! ಅಂತಹ ವ್ಯವಸ್ಥೆಯನ್ನು ಮಾಡುವ ಭರಾಟೆಯಲ್ಲಿ ಬುಶ್ಯಪ್ಪನಿದ್ದ.
* * *
ಕೆಲವೊಮ್ಮೆ ಬುಶ್ಯಪ್ಪನ ಮನಸಿನಲ್ಲಿ ತಾನು ಹೀಗೆಲ್ಲ ಮಾಡುತ್ತಿರುವುದು ಸರಿಯೇ ಎಂಬ ಯೋಚನೆ ಸಳಕ್ಕನೆ ಹಾದು ಹೋಗುತ್ತದೆ. ಆದರೆ ತಾನು ಯಾವುದೇ ಅಪರಾಧ ಮಾಡುತ್ತಿಲ್ಲ ಎಂದು ಸಮಾಧಾನ ಮಾಡಿಕೊಳ್ಳುತ್ತಾನೆ. ಬಡ ಮಕ್ಕಳನ್ನು ಮಾರಾಟ ಮಾಡುವ ಅಪರಾಧವಾಗಲೀ, ಕಾರ್ಮಿಕರನ್ನು ದರೋಡೆಗೆ ಕರೆದೊಯ್ಯುವ ಅಪರಾಧವಾಗಲೀ ತಾನು ಮಾಡಿದನೇ? ಇಲ್ಲವಲ್ಲ. ಪಕ್ಷದವರಿಗೆ ಜನರು ಬೇಕಿತ್ತು. ಒದಗಿಸಿಕೊಡುವುದು ತಪ್ಪಾ? ಅಕಾಡೆಮಿಯ ಯೋಜನೆಗೆ ನೆರವಾಗುವುದು ತಪ್ಪಾ? ಬಡ ಮಕ್ಕಳ ಗುರುತಿಸಿ ಹಣ ಕೊಡುವುದು ತಪ್ಪಾ? ಏನೋ ಒಂದಿಷ್ಟು ಮಾರ್ಜಿನ್‌ ಅಂತ ಇಟ್ಟುಕೊಳ್ಳದೇ ಇದ್ದರೆ ಮಾಡಿದ ಕೆಲಸಕ್ಕೆ ಮರ್ಯಾದೆ ಬೇಡವೇ? ಇಷ್ಟಕ್ಕೂ ಈ ಮಾದರಿಯ ಕೆಲಸ ಈ ಕಾಲದ ಅಗತ್ಯ!

ಎಲ್ಲರಿಗೂ ಇಷ್ಟೊಂದು ಪ್ರಮಾಣದಲ್ಲಿ ಬಡವರ ಅಗತ್ಯವಿದೆ ಎಂಬುದು ಬುಶ್ಯಪ್ಪನಿಗೆ ಬಹಳ ತಡವಾಗಿ ಅರ್ಥವಾಗಿತ್ತು. ಅರ್ಥವಾದ ಮೇಲೆ ಅಂತಹ ಸಂದರ್ಭಗಳನ್ನು ಬಳಸಿಕೊಂಡು ಕೆಲಸ ಮಾಡುವುದರಲ್ಲಿ ಏನು ತಪ್ಪಿದೆ ಎಂದವನು ಸಮಾಧಾನ ಮಾಡಿಕೊಳ್ಳುತ್ತಾನೆ. ಅಲ್ಲ… ನೀವೇ ಯೋಚಿಸಿನೋಡಿ… ಈ ಲೋಕದ ಜನರಿಗೆ ಎಷ್ಟು ಬಡವರಿದ್ದರೂ ಸಾಲದು…

ಮಗಳು ಗರ್ಭಿಣಿ– ಬಾಣಂತನಕ್ಕೆ ಬಡ ಹೆಂಗಸು ಇದ್ದಾಳೆಯೇ… ಅದು ಐಷಾರಾಮಿ ಫ್ಲ್ಯಾಟು– ಚೆಂದವಾಗಿಡಲು ಬಡ ಕುಟುಂಬಗಳು ಇವೆಯೇ… ಜಮೀನ್ದಾರಿ ಕುಟುಂಬದಲ್ಲೊಬ್ಬ ಸಿರಿವಂತ ಮಗ– ಅವನ ಮದುವೆಯಾಗಲು ಬಡ ಹುಡುಗಿಯೊಬ್ಬಳು ಬೇಕು, ಮಗಳು ಎಂಬಿಬಿಎಸ್ಸು– ಅವಳ ಹೊಟ್ಟೆಯ ತಂಪಾಗಿಸಲು ಅಡುಗೆಗೆ ಬಡವಳೊಬ್ಬಳು ಬೇಕಲ್ಲ! ಅಮೆರಿಕಕ್ಕೆ ಹೋದ ಮಕ್ಕಳಿಗೆ ಊರಲ್ಲಿರುವ ತಂದೆ ತಾಯಿಯ ಚಿಂತೆ– ಅವರ ಆರೈಕೆ ಮಾಡಲು ಬಡವರಿದ್ದರೆ ದಯವಿಟ್ಟು ಹುಡುಕಿ ಕೊಡಿ. ಹೆಂಡತಿ ಪಿಎಚ್‌.ಡಿ ಓದಬೇಕು– ಮನೆಯ ಕೆಲಸಕ್ಕೊಬ್ಬಳು ಬಡವಿಯನ್ನು ಹುಡುಕಿಕೊಟ್ಟು ಪುಣ್ಯ ಕಟ್ಟಿಕೊಳ್ಳಿ…
* * *
‘ಬಡವರು ಬೇಕಾಗಿದ್ದಾರೆ’ ಅಂತ ಪತ್ರಿಕೆಯಲ್ಲಿ ಒಂದು ಜಾಹೀರಾತು ಕೊಟ್ಟರೆ ಹೇಗೆ ಎಂಬ ಐಡಿಯಾ ಬುಶ್ಯಪ್ಪನಿಗೆ ಹೊಳೆಯಿತು. ಆದರೆ ಈ ವಹಿವಾಟಿನಲ್ಲಿರುವ ಸೂಕ್ಷ್ಮವಾದ ಗೆರೆಯೊಂದನ್ನು ದಾಟಿಬಿಟ್ಟರೆ ತನ್ನ ವ್ಯವಹಾರಕ್ಕೆ ಕ್ರೌರ್ಯದ ಮುಖ ಬಂದುಬಿಡುತ್ತದೆ ಎಂಬುದನ್ನು ಬುಶ್ಯಪ್ಪ ಚೆನ್ನಾಗಿ ಅರಿತಿದ್ದ.

ಸದ್ಯಕ್ಕೆ ಬುಶ್ಯಪ್ಪ ಬಡ ವಿದ್ಯಾರ್ಥಿಗಳ ಹುಡುಕಾಟದಲ್ಲಿದ್ದ. ಮೇಷ್ಟ್ರುಗಳ ಸಹಾಯದಿಂದ ಅಂಥ ಮಕ್ಕಳನ್ನು ಗುರುತಿಸಿ ಪಟ್ಟಿ ಮಾಡಿದ್ದ. ಆ ಮಕ್ಕಳ ಪೈಕಿ ಹಳ್ಳಿಗಾಡಿನ ಒಬ್ಬಳು ಹುಡುಗಿ ಸುನೀತಾ. ಅವಳು ಎಸ್ಸೆಸ್ಸೆಲ್ಸಿಯಲ್ಲಿ ಶೇ 98 ಅಂಕಗಳನ್ನು ಗಳಿಸಿದ್ದಳು. ಲೆಕ್ಕದಲ್ಲಿ, ವಿಜ್ಞಾನದಲ್ಲಿ ನೂರಕ್ಕೆ ನೂರು ಪಡೆದ ಹುಡುಗಿ, ಇಂಗ್ಲಿಷ್‌ನಲ್ಲಿ ಮಾತ್ರ ಸ್ವಲ್ಪ ಕಡಿಮೆ ಅಂಕ ಪಡೆದಿದ್ದಳು. ಮನೆಯಲ್ಲಿ ತುಂಬಾ ಬಡತನ. ದುಡಿಯುವುದು ಸುನೀತಾಗೆ ಅನಿವಾರ್ಯವಾಗಿತ್ತು. ಅವಳ ಶಿಕ್ಷಣದ ಹೊಣೆಯನ್ನು ಸಂಪೂರ್ಣ ಹೊರುವುದಕ್ಕೆ ಬುಶ್ಯಪ್ಪ ವ್ಯವಸ್ಥೆ ಮಾಡಬಲ್ಲವನಾಗಿದ್ದ. ಜಾಣೆ ಹುಡುಗಿಯ ಜೋಪಡಿ ಮನೆಯ ಜಗಲಿಯಲ್ಲಿ ಕುಳಿತು ಬುಶ್ಯಪ್ಪ ಮತ್ತು ಮೇಷ್ಟ್ರು ಮಾತು ಶುರು ಮಾಡಿದರು. ಕೇಳಿದ ಪ್ರಶ್ನೆಗೆಲ್ಲ ‘ಹುಂ ಉಹುಂ’ ಎಂದು ಉತ್ತರಿಸುತ್ತಿದ್ದಳು ಸುನೀತಾ. ಒಳ್ಳೆ ಹಾಸ್ಟೆಲ್‌, ಒಳ್ಳೆ ಕಾಲೇಜು, ಉತ್ತಮ ವಿದ್ಯಾಭ್ಯಾಸ, ಎಂದೆಲ್ಲ ಮಾತುಗಳು ಮುಗಿದು ಬುಶ್ಯಪ್ಪ ಸುಮ್ಮನೇ ಕುಳಿತ.

ಸುನೀತಾ ಹೇಳಿದಳು: ‘ನಾನು ಅಮ್ಮನನ್ನು ಬಿಟ್ಟು ಬರುವುದಿಲ್ಲ’. ಅಷ್ಟೆಲ್ಲ ವ್ಯವಹಾರ ಚತುರನಾದ ಬುಶ್ಯಪ್ಪನ ಕಣ್ಣುಗಳು ಮಂಜಾದವು. ಬಡವರನ್ನು ಹುಡುಕಬಹುದು. ಕೃಷ್ಣ ಸುಧಾಮನಿಗೆ ಕೊಟ್ಟಂತೆ ಅಚ್ಚರಿಯ ಐಶ್ವರ್ಯವನ್ನೇ ಅವರಿಗೆ ಕೊಡಬಹುದು. ಆದರೆ ಅಮ್ಮನ ಪ್ರೀತಿಯನ್ನು ಕೊಡುವುದು ಸಾಧ್ಯವಿಲ್ಲ! ಈ ಭಾವ ಸೂಕ್ಷ್ಮವನ್ನು ಯಾವ ವ್ಯವಹಾರ ಚತುರತೆಯೂ ಕಲಿಸಲಾರದು. ‘ಆರ್ಥಿಕತೆಗೂ  ಜನರ ಮಾನಸಿಕ ಸಂತೋಷಕ್ಕೂ ಸಂಬಂಧವಿಲ್ಲ’ ಎಂಬ ಪರಿಕಲ್ಪನೆಯನ್ನು ಅಮರ್ತ್ಯ ಸೇನ್‌ ಹೇಳಿದ್ದರೆಂದು ಅವನು ಕೇಳಿದ್ದ. ಆದರೆ ಊರು ಕೇರಿಗಳಲ್ಲಿ ಓಡಾಡದ, ಸೀಮೆ ಎಣ್ಣೆಗೆ ಮತ್ತು ನೀರಿಗೆ ಕ್ಯೂ ನಿಲ್ಲದ ಈ ದೊಡ್ಡ ಜನರು ಬರೆವ ಸಿದ್ಧಾಂತಗಳೇನೇ ಇರಲಿ, ನಿಜದ ಜಗತ್ತು ನಡೆಯುವುದೇ ಬೇರೆ ರೀತಿಯಲ್ಲಿ ಎಂಬುದು ಅವನ ನಂಬಿಕೆಯಾಗಿತ್ತು.

ಅಂಗೈಗಿಂತಲೂ ಅಗಲದ ಮೊಬೈಲ್‌ಗಳನ್ನು ಬಳಸುವುದು ಬುಶ್ಯಪ್ಪನಿಗೆ ಗೊತ್ತಾಗದು. ಮಾಸಿದ ನೋಟ್‌ಪುಸ್ತಕಗಳಲ್ಲಿ ಸಾವಿರಾರು ಫೋನ್‌ ನಂಬರ್‌ಗಳು ಮತ್ತು ವಿಳಾಸಗಳು ಬಿಟ್ಟರೆ ಅವನ ಬಳಿ ಮತ್ತೇನೂ ಇಲ್ಲ. ಅವನಿಗೆ ಬರುವ ಆದಾಯಕ್ಕೆ ಲೆಕ್ಕವಿಲ್ಲ. ಯಾವ ವಹಿವಾಟಿಗೆ ಎಷ್ಟು ಮಾರ್ಜಿನ್‌ ಹಣ ದೊರಕಿತೋ ಅಷ್ಟೂ ಅವನದ್ದೇ. ಕಾರೊಂದರಲ್ಲಿ ಓಡಾಡುವ ಅವನ ಜೊತೆಗೆ ಐದಾರು ಜನರಿದ್ದಾರೆ. ಅವರೂ ನೌಕರರಲ್ಲ. ಆದರೆ ಬಡವರನ್ನು ಗುರುತಿಸಲು ಸಹಾಯ ಮಾಡುತ್ತಾ ತಾವೂ ಮಾರ್ಜಿನ್‌ ಹಣದ ಪಾಲು ಪಡೆಯುತ್ತಾರಷ್ಟೆ.

ಯಾಕೋ ಗೊತ್ತಿಲ್ಲ. ಇತ್ತೀಚೆಗೆ ಬುಶ್ಯಪ್ಪನಿಗೆ ಹೆಚ್ಚು ಹೆಚ್ಚು ಸಂದಿಗ್ಧಗಳು ಎದುರಾಗುತ್ತಿದ್ದವು. ಪಕ್ಕದೂರಿಗೆ ಒಂದು ಸ್ಟೀಲ್‌ ಫ್ಯಾಕ್ಟರಿ ಬರುವ ಸಂದರ್ಭದಲ್ಲಿ ಆ ಊರಿನಲ್ಲಿ ಫ್ಯಾಕ್ಟರಿಯ ಪರವಾಗಿ ಧ್ವನಿ ಎತ್ತಲು ಒಂದಷ್ಟು ಮಂದಿಯನ್ನು  ಹೊಂದಿಸಿಕೊಡುವ ಕೆಲಸ ಅವನ ಪಾಲಿಗೆ ಬಂತು. ಮಹಾನಗರ ಪಾಲಿಕೆಗೆ ಪೌರ ಕಾರ್ಮಿಕರನ್ನು ಒದಗಿಸುವ ಕೆಲಸವನ್ನೂ ನಿಭಾಯಿಸಬೇಕಾಯಿತು. ಅಲ್ಲಲ್ಲಿ ಹೊಸದಾಗಿ ಹುಟ್ಟುವ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಿಗೆ ದೆಹಲಿಯಿಂದ ಪರಿಶೀಲಕರು ಬರುವಾಗ, ಭಿಕ್ಷುಕರ ಪುನರ್‌ ವಸತಿ ಕೇಂದ್ರದಿಂದ ನಕಲಿ ರೋಗಿಗಳನ್ನು ಕರೆತಂದು ಒದಗಿಸುವ ಕೆಲಸಗಳನ್ನೆಲ್ಲ ಹೆಚ್ಚಾಗಿ ಬುಶ್ಯಪ್ಪನ ಸಹಾಯಕರೇ ಮಾಡುತ್ತಿದ್ದರು. ಇವೆಲ್ಲ ಸ್ವಲ್ಪ ಕಷ್ಟದ ಕೆಲಸಗಳೇ.

ಮೊನ್ನೆಯಂತೂ ಬುಶ್ಯಪ್ಪನ ಕತೆ ಕೈಲಾಸವಾಗಿತ್ತು. ಈ ಸಾರಿ ಬಡವರು ಬೇಕಾಗಿದ್ದುದು ಆಸ್ಪತ್ರೆಗಳಿಗೆ! ಹೊಸ ಆಸ್ಪತ್ರೆಯೊಂದು ರೋಗಿಗಳ ಕಲರವ ಇಲ್ಲದೇ ಬಿಕೋ ಎನ್ನುತ್ತಿತ್ತು. ಹಾಗಾಗಿ ಆಸ್ಪತ್ರೆಯವರು ‘ತಾಯಂದಿರ ದಿನ’ಕ್ಕೆ, ‘ಹೃದಯದ ದಿನ’ಕ್ಕೆ, ‘ಸ್ತನ್ಯಪಾನ ವಾರ’ಕ್ಕೆ ಅಂತ ಒಂದೊಂದೇ ಅಭಿಯಾನಗಳನ್ನು ಹಮ್ಮಿಕೊಳ್ಳತೊಡಗಿದರು. ಬಿಪಿಎಲ್‌ ಕಾರ್ಡ್ ಹೊಂದಿರುವ ಬಡವರಿಗೆ ಕೆಲವು ಶಸ್ತ್ರಚಿಕಿತ್ಸೆಗಳಿಗೆ ಸರ್ಕಾರವೇ ಹಣ ಒದಗಿಸುತ್ತಿರುವುದರಿಂದ ರೋಗಿಗಳನ್ನು ಗುರುತಿಸುವ ಕೆಲಸವನ್ನು ಆಸ್ಪತ್ರೆಯವರು ಮುತುವರ್ಜಿಯಿಂದ ಮಾಡುತ್ತಿದ್ದರು.

ಬುಶ್ಯಪ್ಪನಿಂದಲೂ ಸಲಹೆ ಕೇಳಿ ಹಳ್ಳಿ ಹಳ್ಳಿಗಳಿಗೆ ತೆರಳಿ ಬಡವರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿದರು. ಹಾಗೆ ಒಂದು ಹಳ್ಳಿಯಲ್ಲಿ ಜನರ ಹೃದಯ ತಪಾಸಣೆಯನ್ನೂ ಮಾಡಿದರು. ಬೀಡಿ ಎಳೆಯುವವರು, ಸಾರಾಯಿ ಕುಡಿಯುವವರು, ನಿದ್ದೆ ಮಾಡುವಾಗಲೂ ಹೊಗೆಸೊಪ್ಪು ಜಗಿಯುತ್ತಲೇ ಇರುವವರನ್ನೆಲ್ಲ ತಪಾಸಣೆಗೆ ಒಳಪಡಿಸಲಾಯಿತು. ಆಸ್ಪತ್ರೆ ಆಡಳಿತಾಧಿಕಾರಿಗಳು ವೈದ್ಯರಿಗೆ ಟಾರ್ಗೆಟ್‌ ನೀಡಿದ್ದರಿಂದ ಸುಮಾರು 32 ಹೃದಯ ಶಸ್ತ್ರಚಿಕಿತ್ಸೆಗಳಿಗೆ ಜನರನ್ನು ಗುರುತಿಸಿ, ಅವರ ಬಿಪಿಎಲ್‌ ಪಡಿತರ ಚೀಟಿ ವಶಪಡಿಸಿಕೊಳ್ಳಲಾಯಿತು. ಆಸ್ಪತ್ರೆಯಲ್ಲಿ ಹೃದಯದ ಆಪರೇಷನ್‌ ಆದಮೇಲೆ ಕಾರ್ಡ್‌ ಕೊಡುವುದಾಗಿ ಹೇಳಲಾಯಿತು.

ಕಾರ್ಡ್‌ ಇಲ್ಲದೇ ಅಕ್ಕಿ – ಸೀಮೆಎಣ್ಣೆ ಸಿಗದಲ್ಲ ? ಕೆಲವರು ಆರೋಗ್ಯಕ್ಕೆ ಹೆದರಿ ಆಸ್ಪತ್ರೆ ಹುಡುಕಿ ನಗರಕ್ಕೆ ಬಂದರು. 12 ಮಂದಿಗೆ ಶಸ್ತ್ರಚಿಕಿತ್ಸೆ ನಡೆಯಿತು. ಆದರೆ ನಾಲ್ವರು ತೀರಿಕೊಂಡರು. ಇಡೀ ಹಳ್ಳಿಗೆ ಹಳ್ಳಿಯೇ ‘ವೈದ್ಯರ ತಪಾಸಣೆ ಸರಿಯಿಲ್ಲ’ ಎಂದು ದೊಂಬಿ ಮಾಡಿತು. ಶಿಬಿರಕ್ಕೆ ಮುನ್ನ ಸ್ಥಳೀಯ ವೈದ್ಯರನ್ನು ಕಂಡು ಬಂದವರಿದ್ದರು. ‘ಎಲ್ಲವೂ ಸರಿಯಾಗಿದೆ’ ಎಂದು ಸ್ಥಳೀಯ ವೈದ್ಯರು ಹೇಳಿದ್ದರು. ಆದರೂ ನಗರದ ವೈದ್ಯರು ‘ಹೃದಯದಲ್ಲಿ ತೂತು ಇದೆ’ ಎಂದು ಹೇಳುವುದು ಹೇಗೆ?– ಹೀಗೆ ತಗಾದೆ ಪ್ರತಿಭಟನೆಗಳು ನಡೆದವು. ರಾಜಕಾರಣಿಗಳು ಬಂದರು… ಸಾವಿನ ಬಳಿಕ ಸಾಗಿದೆ ಸಂಗ್ರಾಮ.
* * *
ಈಗ ಬುಶ್ಯಪ್ಪನಿಗೆ ಬೇರೆ ರೀತಿಯ ಫೋನ್‌ ಕರೆಗಳು ಬರುತ್ತಿವೆ. ಭತ್ತದ ಗದ್ದೆಯಲ್ಲಿ ಕೆಲಸ ಮಾಡಲು ಒಂದಿಬ್ಬರು ಸಿಗಬಹುದಾ? ಕೆಲಸ ಗೊತ್ತಿಲ್ಲದೇ ಇದ್ದರೂ ಪರವಾಗಿಲ್ಲ ನಿಧಾನಕ್ಕೆ ಕಲಿತುಕೊಳ್ಳಲಿ… ಬಡವರು ಯಾರಾದರೂ ಇದ್ದರೆ, ಮಾಗಿದ ಪೈರಿನ ಕೊಯ್ಲು ಮಾಡಿಸಲು ಸಹಾಯ ಮಾಡುತ್ತಾರಾ… ಬುಶ್ಯಪ್ಪನಿಗೆ ಬಡವರನ್ನು ಹುಡುಕುವುದು ಈಗ ನಿಜಕ್ಕೂ ಕಷ್ಟ ಎನ್ನಿಸುತ್ತಿದೆ.